'ಲಂಡ ಚೊಣ್ಣದ ಹುಡುಗ' ಸಣ್ಣಕಥೆ

ನಾಗೇಶ್ ತಳವಾರ

ಇದು ನನ್ನೂರ ಹಾದಿ. ಇಪ್ಪತ್ತು ವರ್ಷಗಳ ಹಿಂದ ಈ ಹಾದಿ ನನಗೆ ಎಷ್ಟು ಆಪ್ತವಾಗಿತ್ತು. ದಿನಕ್ಕ ಇಪ್ಪತ್ತು ಸಾರಿ ಇದ ಹಾದಿ ಹಿಡ್ದು ತಿರಾಗಾಡತ್ತಿದ್ದೆ. ವಾರಗಿಯವರೊಂದಿಗೆ ಗಾಲಿ ಆಡ್ತಾ ಹೊಲಕ್ಕ ಹೋಗಿ ಬರತ್ತಿದ್ದೆ. ಮನ್ಯಾಗ ಶಾಲಿಗಿ ಹೋಗಂದ್ರ ಕಟಗಿ ತರಕ್ಕಂತ ಹೋಗತ್ತಿದಿದ್ದು ಇದ ಹಾದಿ ಹಿಡ್ದು. ಶುಕ್ರವಾರ ಬಂತಂದ್ರ ದೊಸ್ತರೆಲ್ಲ ಸೇರಿ ರಣರಣ ಬಿಸಲಾಗ ನಡಕೊಂಡು ಲಕ್ಷ್ಮೀ ಗುಡಿಗಿ ಹೋಗಿವಿ. ಟಂಟಂದೊಳಗ ಕುಂತು ಯಂಕಂಚಿ ದಾವಲ್ ಮಲಿಕ್ ಜಾತ್ರಿಗಿ ಹೋಗಿನಿ. ಇವತ್ತು ಅದ ಹಾದಿ ನನ್ನ ಕಾಲ ಹಿಡ್ದು ಎಳಿಯಾಕತ್ತೈತಿ ಎಂದು ಹಾದಿಯ ಬಗ್ಗೆ ಯೋಚಿಸುವಷ್ಟರಲ್ಲಿ ನನ್ನ ಓಣಿ ಸೇರಿದ್ದೆ.
ನಮ್ಮ ಓಣಿಗೆ ಯಾರೇ ಬರಲಿ ಅವರನ್ನ ಮೊದ್ಲ ಸ್ವಾಗತಿಸುವುದು ಹಿರೊಡೇಶ್ವರ ಗುಡಿ ಮತ್ತು ಹುಸೇನ್ ಕಟ್ಟಿ. ಆ ಕಟ್ಟಿಗೆ ಯಾಕ ಆ ಹೆಸರು ಬಂತು, ಯಾರು ಇಟ್ರು ಅಂತ ಗೊತ್ತಿಲ್ಲ. ನನಗ ತಿಳುವಳಿಕೆ ಬಂದಾಗಿನಿಂದ ಅದ ಹೆಸರಿಂದ ಕರಿತ್ತಿದಿದ್ದು ಕೇಳಿನಿ. ಮೊಹರಂ ಹಬ್ಬದ ರಾತ್ರಿ ಪಂಜಿ ಹಿಡಕೊಂಡು ಬರತ್ತಿದ್ದ ಅಲೈದೇವರ ಹೆಸರಿನ ಮುಸ್ಲಿಂ ದೇವರು ಬರುವಾಗ ಸಾಲ ಸಾಲಾಗಿ ಮಲಗತ್ತಿದ್ದ ಮಂದಿನೆಲ್ಲ ದಾಟಿ ಹೋಗತ್ತಿದ್ದ. ಆಗ ನಾನೂ ಮಲಗಿನಿ. ಎಲ್ಲಿ ನನ್ನ ಮ್ಯಾಲ ಕಾಲಿಟ್ಟು ತುಳಿದು ಹೋಗ್ತಾನೇನೊ ಅನ್ನುವ ಅಂಜಿಕಿ ಇರುತಿತ್ತು. ಆ ಮುಸ್ಲಿಂ ದೇವರೇನಾದ್ರೂ ಈ ಕಟ್ಟಿ ಮ್ಯಾಲ ಕುಂತಿದ್ದಕ್ಕ ಈ ಹೆಸರು ಬಂತೇನೊ ಗೊತ್ತಿಲ್ಲ. ಹಂಗ ಇದರ ಎದುರಿಗೆ ಇರೋದೇ ಹಿರೊಡೇಶ್ವರ ಗುಡಿ. ಕಲ್ಲಿನಲ್ಲಿ ಕೆತ್ತಿದ ನಾಗಪ್ಪನ ಚಿತ್ರ ಐತಿ. ದಿನಾ ಸಂಜಿಕ ಓಣಿಯಲ್ಲಿನ ಯಾರಾದರೊಬ್ಬರು ದೀಪ ಹಚ್ಚತ್ತಿದ್ರು. ಎಟ್ಟೊ ಸಾರಿ ನಾನು ಹಚ್ಚಿದಿನಿ. ಅದು ಅವ್ವನ ಮಾತಿಗಿ ಬ್ಯಾಸರ ಮಾಡಕೊಂಡು. ಜಾತಿ ಮತ ಅಂತ ಹೊಡೆದಾಡುವ ಜನ್ರ ನಡುವ ನನ್ನ ಓಣಿಯ ಹುಸೇನ ಕಟ್ಟಿ, ಹಿರೊಡೇಶ್ವರ ಗುಡಿ ಸಾಮರಸ್ಯದ ಸಂಕೇತಾಗಿ ಆಗ ಕಾಣತಿದ್ದವು. ಹೊತ್ತ ಮುಣುಗ್ತು ಅಂದ್ರ ಮುದುಕ ಮುದುಕಿಯರು, ಕಾಕಾ, ಮಾಮಾ, ಸಣ್ಣವ್ವ, ಅತ್ತಿ ಅಂತ ಕರಿತ್ತಿದ್ದ ಯಾಱರೊ ಕುಂತ ಮಾತನಾಡತ್ತಿದ್ರು. ಗಾಳಿ ಬೇಕಂತ ಓಣ್ಯಾಗಿನ ಕೆಲವ್ರು ಕಟ್ಟಿ ಮ್ಯಾಲ, ಗುಡಿ ಮುಂದ ಮಲಗತ್ತಿದ್ರು. ಹಂಗ್ ನಮಗ ಇದು ಆಟದ ಜಾಗ ಆಗಿತ್ತು. ಇವತ್ತು ಅದೇ ಹುಸೇನ ಕಟ್ಟಿ ಮತ್ತು ಹಿರೊಡೇಶ್ವರ ಗುಡಿ ನನಗ ಸ್ವಾಗತ ಮಾಡಕತ್ತಾವ. ಅದ ಹಳೆಯ ನೆನಪುಗಳನ್ನ ಹೊತ್ತು ಭಾರವಾದ ಮನಸ್ಸಿನಿಂದ ಹಾಗೇ ಎರಡು ಹೆಜ್ಜೆ ಹಾಕುವಷ್ಟರಲ್ಲಿ ನನ್ನ ಮನಿ ಬಂದಿತ್ತು. ಆ ಒಂದು ರಾತ್ರಿ ನನ್ನ ಈ ಇಪ್ಪತ್ತು ವರ್ಷಗಳ ಅಲೆದಾಟದ ಬದುಕಿಗೆ ಹ್ಯಾಗೇ ಕಾರಣವಾಗಿ ಹೋಯಿತ್ತಲ್ಲ.

***

ಮೂಲೆಯಲ್ಲಿ ಹಚ್ಚಿಟ್ಟಿದ್ದ ಚಿಮಣಿಯ ಬೆಳಕು ಇಡಿ ಪಡಸಾಲಗಿಯ ತುಂಬ ಮಬ್ಬು ಬೆಳಕು ಚೆಲ್ಲಿತ್ತು. ಅದರ ಅರೆಬರೆ ಬೆಳಕಿನಲ್ಲಿ ತಂಗಿ ಗೌರಿ ಬಣ್ಣದ ತಗಡಿನಿ ತೂತ್ತುರಿ ಕಾಸಿಗೆ ಕೊಂಡನು ಕಸ್ತೂರಿ ಅಂತ ಜೋರ ಜೋರಾಗಿ ಹಾಡತ್ತಿದ್ದಳು. ಇನ್ನೊಂದು ಕೋಣಿಯಲ್ಲಿ ರೊಟ್ಟಿ ಬಡಿತ್ತಿದ್ದ ಅವ್ವ ಏನೇನೊ ಒಟಗೂಡುತ್ತಿದ್ದಳು. ಹೊಲದಿಂದ ಬಂದ ಅಪ್ಪ, ಎತ್ತುಗಳನ್ನ ಕೊಟಗ್ಯಾಗ ಕಟ್ಟಿದವನೇ, ಎ ಶಾಂತಿ ಮುಖ ತೊಳೆಯಕ್ಕ ನೀರ್ ಕೊಡು ಅಂದ. ಕೈಯಲ್ಲಿ ಪುಸ್ತಕ ಹಿಡ್ದು ಏನೇನೊ ಯೋಚನೆ ಮಾಡ್ತಾ ಕುಳಿತ್ತಿದ್ದ ನನಗ, ನೀನ ನಿಮ್ಮಪ್ಪಗ ಒಂದ ಚರಗಿ ನೀರ್ ಕೊಡಂತ ಹೇಳದಳು. ಮುಖ ತೊಳಕೊಂಡ ಬಂದ ಅಪ್ಪ ಉಸ್ ಅಂತ ಕಂಬಕ್ಕ ಬೆನ್ನ ಹಚ್ಚಿ ಕುಂತ. ಅವ್ವ ಬಂದು, ಹಿಂಗ್ಯಾಕ ಕುಂತಿರಿ ಅಂತ ಕೇಳದಳು. ಅಪ್ಪ ಮಾತಾಡಲಿಲ್ಲ. ಯಾವತ್ತಿದ್ದರೂ ನಿಮ್ಮದು ಇಷ್ಟೇ. ಏನು ಎತ್ತ ಅಂತ ಹೇಳೋದಿಲ್ಲಂತ ಸಿಟ್ಟ ಮಾಡಕೊಂಡ ಅವ್ವ ಅಡಗಿ ಮನಿಗಿ ಹೋದಳು.
ಏ ವಿನೋದ ಊಣ್ಣಕ್ಕ ಬಾರೊ, ನಿಮ್ಮಪ್ಪ ಇನಾ ಯಾವಾಗ ಊಣತಾನೊ ಯಾರಿಗಿ ಗೊತ್ತು. ಗೌರಿ ಕೂಡಾ ನೀನು ಊಣ ಬಾ ಅಂತ ಕರದಳು. ಹೂಂ ಅಂದು ಪುಸ್ತಕ ಮಡಚಿಟ್ಟು ಹೋದೆ. ಇದನೆಲ್ಲ ಕೇಳಿಸಿಕೊಳ್ಳುತ್ತಿದ್ದ ಅಪ್ಪ ಹಾಸಗಿ ಹೊತ್ತಕೊಂಡು ಅಂಗಳಕ್ಕ ಹೊರಟ. ಖಾಲಿ ಹೊಟ್ಟಿಲಿ ಯಾಕ ಮಲಗತಿರಿ, ಊಣ ಬರ್ರಿ ಅಂತ ಅವ್ವ ಕರಿತ್ತಿದ್ದಳು, ಅಪ್ಪ ಆಗಲೇ ಹೊಸ್ತಿಲ ದಾಟಿದ್ದ. ಗೌರಿ, ನಾನು ಊಟ ಮಾಡಿ ಮಲಗದ್ವಿ. ರೊಟ್ಟಿ ಬುಟ್ಟಿ, ಮಸರ ಗಡಗಿನೆಲ್ಲ ನೆಲವಿನ ಮ್ಯಾಲ ಇಟ್ಟು ಅಕಿನೂ ಒಂದ ಕಡೆ ಚಾಪಿ ಹಾಸಕೊಂಡ ಮಲಗದಳು. ನನ್ಗೂ ನಿದ್ದಿ ಹತ್ತಿರಲಿಲ್ಲ. ಸಮ್ಮ ಹೊರಳಾಡತ್ತಿದ್ದೆ. ಅವ್ವ ಮಲಗದಲ್ಲೇ ಅಳಾಕತ್ತಿದ್ದು ಕೇಳಸತಿತ್ತು. ಎದ್ದು ಹೋಗಿ ಕೇಳುವ ದೈರ್ಯ ಬರಲಿಲ್ಲ.
ಅಪ್ಪನಿಗೂ ನಿದ್ದಿ ಬರಲಿಲ್ಲಂತ ಕಾಣಸತೈತಿ, ಅಂವನು ಕೆಮ್ಮತ್ತಾ ಒಳಗ ಬಂದ. ಅವ್ವ ಅಳಾಕತ್ತಿದ್ದನ ನೋಡಿ, ಯಾಕ ಅಳತಿ, ಸುಮ್ಮ ಬಿಳಾಕ ಬರತದಿಲ್ಲಂತ ಜೋರ ಮಾಡಿದ. ಆದ್ರೂ ಅವ್ವ ಅಳೋದು ನಿಲ್ಲಸಲಿಲ್ಲ. ಸ್ಪಲ್ಪ ಹೊತ್ತ ಬಳಿಕ ಅಪ್ಪನೇ ನನ್ನ ತೆಲ್ಯಾಗ ನೂರೆಂಟು ಚಿಂತಿ ಹೊಕ್ಕು ಕಾಡತಿರತಾವ. ಮನಸಗಿ ನೆಮ್ಮದಿ ಇಲ್ಲ. ಅದ್ಕ ಯಾರದೂ ಸಿಟ್ಟ ತಂದು ನಿನ್ನ ಮ್ಯಾಲ ಮಾಡಕೊಂಡರತಿನಿ. ನಿನ್ನ ಬಿಟ್ರ ನನ್ಗರ ಯಾರ ಅದಾರ ಅಂತ ಹೇಳತ್ತಿದ್ದರೂ ಅವ್ವ ಇನಾ ಅಳತ್ತಿದ್ದಳು. ಈಗ ಏನ ಆತಂತ ನೀ ಹಿಂಗ್ ಅಳತಿ ಅಂತ ಕೇಳಿದ್ದಕ್ಕ, ಯಾರದರ ಸಿಟ್ಟ ತಂದ ನನ್ನ ಮ್ಯಾಲ ಹಾಕುವಲ್ಲರಿ, ಹಿಂಗಂತ ಹೇಳದೆ ಕೇಳದೆ ಸುಮ್ಮ ಹೋಗಿ ಮಲಕೊಂಡ್ರ ನಾ ಏನಂತ ತಿಳಕೊಬೇಕ ಅಂತ ಕೇಳದಳು. ಹಿಂಗ ಅವ್ವ ಅಪ್ಪ ಮಾತಾಡತ್ತಿದ್ದುದನ್ನ ಮಲಕೊಂಡಲ್ಲೇ ಕೇಳತ್ತಿದ್ದೆ.
ನಿನ್ನ ಮುಂದ ಯಾವುದನ್ನೂ ಮುಚ್ಚಿಟ್ಟಿಲ್ಲ. ಆದ್ರ, ಏನ ಆದ್ರ, ಅದ ಏನಂತ ಹೇಳರಲಾ. ಇಟ್ಟ ವರ್ಷ ನಿಮ್ಮ ಕೂಡಾ ಬಾಳೆ ಮಾಡಿನಿ. ಇನ್ನೂ ತನಕ ನಿಮಗ ಹಿಂಗ್ಯಾಕ ಮಾಡಾಕತ್ತಿರಿ ಅಂತ ಕೇಳಿಲ್ಲ ಅಂತ ಅವ್ವ, ಅಪ್ಪಗ ಪ್ರಶ್ನೆ ಮ್ಯಾಲ ಪ್ರಶ್ನೆ ಹಾಕದಳು. ಶಾಂತಿ, ನನ್ಗ ನಮ್ಮ ವಿನೋದನದ ಚಿಂತಿ ಅಂತ ಹೇಳತಿದ್ದಂತೆ ನನ್ನ ಕಿವಿ ಸೆಟದ ನಿಂತವು. ಅಂವನದ್ಯಾಕರಿ ಚಿಂತಿ. ಚಂದಗ ಶಾಲಿ ಕಲಿಯಾಕತ್ತಾನ. ನಾಳೆ ದೊಡ್ಡ ಸಾಹೇಬ್ ಆಗಿ, ಅಂವನ ತಂಗಿ ಲಗ್ನ ಮಾಡಿ, ನಮ್ಮನ್ನ ಚೆಂದಾಗಿ ನೋಡಕೊತಾನ ಅಂತ ನನ್ನ ಮೇಲೆ ಇಟ್ಟುಕೊಂಡಿದ್ದ ಆಸೆ ಕನಸುಗಳನ್ನ ಅವ್ವ ಪಟಪಟಂತ ಹೇಳತ್ತಿದ್ದರ, ಅಪ್ಪ ಸುಮ್ಮ ಕುಳತ್ತಿದ್ದ. ಎಷ್ಟಹೊತ್ತಿನ ಮ್ಯಾಲ ಮಾತಾಡಿದ ಅಪ್ಪ, ಮುಂದಿದ್ದು ಯಾರ ಕಂಡಾರಲೇ. ಅಂವ ಹ್ಯಾಂಗ್ ಆಡಸ್ತಾನ ಹಂಗ್ ಆಡಬೇಕಷ್ಟ. ನೀವು ಹೇಳೋದು ಖರೆ ಐತಿ. ಒಟ್ಟನಾಗ ಅಂವ ಚಂದ ಇದ್ದರ ಸಾಕ್. ಆದ್ರ ಹಂತದೇನ ಆತಂತ ನೀವು ಹಿಂಗ ಮಾತಾಡಾಕತ್ತಿರಿ. ಅಂವ ಏನಾರ ತಪ್ಪ ಮಾಡ್ಯಾನೇನ ಅಂತ ಕೇಳದಳು. ಅಂವದು ಸರಿನೋ ತಪ್ಪೋ ಗೊತ್ತಿಲ್ಲ. ಆದ್ರ ನಮ್ಮ ಹದ್ದಬಸ್ತಿನಲ್ಲಿ ಇಟ್ಟಗೊಂಡ್ರ ಸಾಕು. ನೀವು ಹಿಂಗ್ ಒಗಟ ಹೇಳದಂಗ್ ಹೇಳದರ ನನ್ಗ ಹಾಂಗ ಗೊತ್ತಾಗಬೇಕು. ಜರಾ ಬಿಡಿಸಿ ಹೇಳರಲಾ. ವಿನೋದ ಮತ್ತ ಆ ಸೀತಾರಾಂ ಭಟ್ರ ಮಗಳು ಜಾನಕಿ ಕೂಡಾ ಶಾಲಿಗಿ ಹೋಗುವಾಗ ಬರುವಾಗ ಮಾತಾಡಕೊಂಡ ಬರತಾನಂತ. ಅದ್ಕ ಓಣ್ಯಾಗಿನ ಮಂದಿ ಏನೇನಾರ ಮಾತಾಡಾಕತ್ತಾರ ಅಂತ ಅಪ್ಪ ಹೇಳತ್ತಿದ್ದಿದ್ದನ್ನ ಕೇಳಿ ನನ್ಗ ಹೆದರಕಿ ಆಯ್ತು. ಮಲಗದಲ್ಲಿಯೇ ಅರ್ಧ ಹಾಸಗಿ ತೊಯಿಸಿಬಿಟ್ಟಿದ್ದೆ. ಅಲ್ಲರಿ ಮಂದಿ ಹಂಗೂ ಇರತಾರ, ಹಿಂಗೂ ಇರತಾರ. ಏನೊ ಒಟ್ಟಗಿ ಓದತಾವಂತ ಮಾತಾಡಕೊಂಡ ಬರತಾರ. ಅದನ್ನ ಯಾರೊ ಏನೊ ಹೇಳದ್ರಂತ ನೀವು ಹಿಂಗ್ ತಲೆ ಕೆಡಸಕೊಂಡ ಕುಂದ್ರೊದೇನ. ಅಂವನಿಗಿ ನಾ ಬುದ್ಧಿ ಹೇಳತಿನಿ ಅಂತ ಅವ್ವ ಅಂದಿದ್ದಕ್ಕ. ನೀ ಏನ ಬುದ್ಧಿ ಹೇಳೋದು ಬ್ಯಾಡ. ಅಂವನ್ನ ನನ್ನ ಜೋಡಿ ಹೊಲಕ್ಕ ಕರಕೊಂಡ ಹೋಗ್ತಿನಿ ಅಂತ ಅಪ್ಪ ಏನೇನೂ ಹೇಳತ್ತಿದ್ದ. ಹಂಗೆಲ್ಲ್ಯಾರ ಮಾಡಿರಿ. ನಾ ಅಂವನಿಗಿ ತಿಳಿಸಿ ಹೇಳತಿನಿ. ಇರೊದೊಂದು ಗಂಡ್ಸ ಮಗಾ. ಚಂದ ಶಾಲಿ ಕಲಿಲಿ. ಈಗ ನೀವು ಹೋಗಿ ಸುಮ್ಮ ಮಲಗರಿ ಅಂತ ಹೇಳಿ ಕಳಸದಳು.
ಅಪ್ಪ ಶಾಲಿ ಬಿಡಸ್ತಾನ ಅನ್ನೊ ಮಾತ ಕೇಳಿ ನಿದ್ದಿನೇ ಬರಲಿಲ್ಲ. ಹ್ಯಾಂಗಾರ ಮಾಡಿ ಶಾಲಿ ಕಲಿಬೇಕು. ಅವ್ವನ ಕನಸ ನನಸ ಮಾಡಬೇಕೆಂತ ನಿರ್ಧಾರ ಮಾಡಿ, ಲಂಡ ಚೊಣ್ಣ, ಡಗಳಾ ಅಂಗಿ ಹಾಕೊಂಡು, ನಡು ರಾತ್ರಿಯಲ್ಲಿ ಮನಿ ಬಿಟ್ಟೆ. ಆಗ ನಾನು ಓದತ್ತಿದಿದ್ದು ಹತ್ತನೆತ್ತೇ.

***

ಕೆಮ್ಮುತ್ತಾ ಹೊರಗ ಬಂದ ಸಿದ್ದಣ್ಣ, ಯಾರೊ ಅದು ಕುಂತಿರೋದು, ಏ ತಮ್ಮಾ ನೀನಗ ಕೇಳಾಕತ್ತಿನಿ. ಯಾರಪಾ ನೀ… ಏ ಗೌರಿ, ಚಿಮಣಿ ತಗೊಂಡು ಬಾ ಇಲ್ಲಿ ಅಂತ ಮಗಳಿಗಿ ಕಱಕತ್ತ. ಹಂಗ್ಯಾಕ ಒದರಾಕತ್ತರಿ, ಅಕಿ ಮಲಗ್ಯಾಳ ಅಂತ ಹೇಳ್ತಾ ಹೆಜ್ಜಿ ಮ್ಯಾಲ ಹೆಜ್ಜಿ ಇಟಕೊಂಡ ಬಂದ ಶಾಂತವ್ವ, ಯಾರ ಬಂದರಾ ಇಷ್ಟಹೊತ್ತನ್ಯಾಗಂತ ಕೇಳದಳು. ನನಗೇನ ಗೊತ್ತು, ಎಲ್ಲ ನೋಡ ಯಾರೊ ಕುಂತಾರ, ಮುಖನಾರ ನೋಡೋಣ ಜರಾ ಚಿಮಣಿ ಮುಂದಕ್ಕ ತಗೊಂಡು ಬಾ ಅಂತ ಹೇಳತ ನಾಕ ಹೆಜ್ಜಿ ಹಾಕದ. ಗಂಡನ ಹಿಂದ ಹೋದ ಶಾಂತವ್ವ, ಮುಖ ನೋಡೋಕ್ಕಿಂತ ಮೊದ್ಲ ಅಂವ ನಮ್ಮ ವಿನೋದ ಅದಾನಾ ಅಂದ್ಳು. ಹುಚ್ಚಿ, ಹಳೇ ಹುಚ್ಚಿ, ಅಂವ ಹೋಗಿ ಇಪ್ಪತ್ತ ವರ್ಷ ಆಗ್ಯಾದ. ನಿನ್ನ ಕಣ್ಣ ಪೂರಾ ಹೋಗ್ಯಾವ ಅಂತ ಹೆಂಣ್ತಿಗಿ ಬೈಯಾಕತ್ತ. ಅಂವ ಹೋಗಿ ಇಪ್ಪತ್ತ ವರ್ಷ ಆಗಿರಬಹುದು, ನನ್ನ ಕಣ್ಣ ಪೂರಾ ಕಾಣಕ್ಕಿಲ್ಲ. ಆದ್ರ ನನ್ನ ಹೆತ್ತ ಮಗನನ್ನ ಗುರುತಿಸದಷ್ಟು ಮಂಜಾಗಿಲ್ಲ ಅಂದಳು. ತಲಿ ಅಲ್ಲಾಡಿಸುತ್ತಾ ಇನ್ನು ನಾಕ ಹೆಜ್ಜಿ ಮುಂದ ಹೋದ ಸಿದ್ದಣ್ಣ, ದಿಟ್ಟಿಸಿ ಮುಖ ನೋಡ್ದ. ಹೌದು, ಇಪ್ಪತ್ತು ವರ್ಷಗಳ ಹಿಂದೆ ಮನೆ ಬಿಟ್ಟ ಹೋದ ನನ್ನ ಮಗ. ಶಾಂತಿಯ ಮುದ್ದಿನ ಮಗ, ಗೌರಿಯ ಅಕ್ಕರೆಯ ಅಣ್ಣ ಅಂತ ಮನಸ್ಸಿನೊಳಗ ಹೇಳತಾ, ನೀ ಹೇಳದಂಗ್ ಇಂವ ನಮ್ಮ ವಿನೋದ ಅದಾನ. ನೀ ಹೇಳಿದ್ದು ಖರೇ ಐತಿ ಅಂತ ಹೇಳದ. ನೋಡ್ರಿ, ಅಂವ ನಮಗ ಬಿಟ್ಟು ಇಪ್ಪತ್ತ ವರ್ಷ ಹೋಗ್ಯಾನ. ಆದ್ರ ಹಡದು ಹದಿನಾರ ವರುಷ ಬೆಳಸಿನಿ. ಇನಾ ಇಪ್ಪತ್ತ ವರುಷ ಬಿಟ್ಟ ಬರಲಿ ಗುರುತ ಹಿಡಿತಿನಿ ಅಂತ ಗಂಡಗ ಅಂದಳು.
ಏ ವಿನೋದಾ, ಏ ವಿನೋದಾ ಇಲ್ಲಿ ಹಿಂಗ್ಯಾಕ ಕುಂತಿಯೊ.. ಒಳಗ ಬರೊದಲ್ಲೇನೊ ಅಂತ ಮಗನಿಗೆ ಸಿದ್ದಣ್ಣ ಕೇಳಕತ್ತ. ಯಾಕೊ ಮಗಾ, ನಿಮ್ಮಪ್ಪ ಅಷ್ಟ ಮಾತಾಡಾಕತ್ತಾನ, ನೀ ಹಿಂಗ್ಯಾಕ ಗರಬಡದವರಂಗ ಕುಂತಿ , ಏನಾರ ಮಾತಾಡೊ ಅಂದಳು ಶಾಂತವ್ವ. ಲೇ.. ವಿನೋದಾ ನಿಮ್ಮವ್ವನ ಮುಖ ನೋಡಲೇ ಒಂದ ಸಾರಿ ಅಂತ ಗಂಡ ಹೆಣ್ತಿ ಇಬ್ರೂ ಒಂದೇ ಸಮ ಮತಾಡಾಕತ್ತರೂ ವಿನೋದ ಮಾತ್ರ ತುಟಿ ಬಿಚ್ಚಲಿಲ್ಲ. ಸ್ವಲ್ಪ ಹೊತ್ತಿನ ಮ್ಯಾಲ ತಲೆ ಎತ್ತಿ ನೋಡಿದ. ಆತನ ಎದುರು ಎರಡು ಬಡಕಲ ಜೀವಗಳು ನಿಂತಿದ್ದವು. ಸುಕ್ಕು ಗಟ್ಟಿದ ಮುಖ, ಬಾಗಿದ ಮೈ, ಒಡೆದ ಹೋದ ಚಾಳಿಸನಲ್ಲಿ ಮನಿ ಬಿಟ್ಟ ಹೋದ ಮಗನಿಗಾಗಿ ಬಕ್ ಪಕ್ಷಿಯಂತೆ ಕಾಯುತ್ತಿದ್ದ ಸ್ಪಷ್ಟ ಚಿತ್ರಣ ಕಾಣತಿತ್ತು. ಮತ್ತ ಸಿದ್ದಣ್ಣ ಮಾತನಾಡತಾ, ನೀ ಹೋದಾಗಿಂದ ನಿಮ್ಮವ್ವ ಚೆಂದಗ ಊಂಡಿದ್ದೆ ನೋಡಿಲ್ಲ. ಮೈ ಒಳಗ ಕಸವು ಇಲ್ಲದ್ದಿದ್ರೂ ನನ್ನ ಮಗ ಇವತ್ತ ಬರ್ತಾನ, ನಾಳೆ ಬರ್ತಾನ ಅಂತ ಬಡದಾಡತಾಳ. ನಿನ್ನ ದಾರಿ ನೋಡಿ ನೋಡಿ ಅಕಿನ ಕಣ್ಣ ನೋಡ ಹ್ಯಾಂಗ ಆಗ್ಯಾವ. ಇಷ್ಟ ವರ್ಷ ನಿಮ್ಮವ್ವಗ ಬಿಟ್ಟ ಹ್ಯಾಂಗ ಇದ್ದಿ ಅಂತ ಮಗನಿಗೆ ಕೇಳಿದ. ಸಮ್ಮ ಇರ್ರಿ, ಈಗೆಲ್ಲಾ ಯಾಕ ಅದು, ನಮ್ಮ ಮಗಾ ತಿರಗಿ ಮನಿಗಿ ಬಂದನಲ್ಲ ಅಷ್ಟ ಸಾಕ. ಯಾವಾಗ ಊಂಡಾನೊ ಏನೊ, ನೀವು ಕರಕೊಂಡ ಒಳಗ ಬರ್ರಿ, ನಾ ರೊಟ್ಟಿ ಮಾಡತಿನಿ ಅಂತ ಗಂಡಗ ಹೇಳಿ ಹೆಜ್ಜಿ ಮ್ಯಾಲ ಹೆಜ್ಜಿ ಇಟ್ಟಕೊಂಡ ಎ ಗೌರಿ… ಗೌರಿ ಅಂತ ಮಗಳಿಗಿ ಕರಿತಾ ಒಳಗ ಹೋದಳು.

ನೀ ಹೋದಾಗಿನಿಂದ ಅಕಿನ ಮಾರಿ ಮ್ಯಾಲ ನಗುನೇ ನೋಡಿರಲಿಲ್ಲ. ಈಗ ನೋಡ ಹಾಂಗ್ ಕುಣ್ಯಾಕತ್ತಾಳ. ಮಗನ ಮ್ಯಾಲ ಅಕಿಗಿ ಎಟ್ಟ ಅಕ್ಕರಿ ನೋಡಂತ ಹೇಳತಾ, ಹಾಂ, ಗೌರಿಗಿ ನಿದ್ದಿ ಜೋರ ಹತ್ತೈತಿ ಅಂತ ಕಾಣಸತೈಯಿತಿ. ದಿನಾ ಅವರವ್ವಗ ಅಣ್ಣಾ ಯಾವಾಗ ಬರತಾನಂತ ಕೇಳಕ್ಕಿ. ಪಾಪ ಅದು ಮುಂಜಾನಿಂದ ಸಂಜಿ ತನಕ ನಮ್ಮ ಕೈ ಕೈಯಾಗ ಮಾಡಿ ಮಾಡಿ ಅದುಕು ಸಾಕಾಗಿರತದ. ನಿನ್ನ ನೋಡಿದ್ರ ಅಕಿನೊ ಬಾಳ ಸಂತೋಷ ಪಡತಾಳ. ಅವಳು ಈಗ ಮದ್ವಿ ವಯಸ್ಸಿಗಿ ಬಂದಾಳ. ಈಗ ನೀ ಬಂದಿಯಲ್ಲ. ನಮ್ಮ ಚಿಂತಿ ಕಡಿಮಿ ಆಯ್ತು. ಅಕಿನ ಮದ್ವಿ ನಿನ್ನ ಕೈಯಾರ ನಡಿಲಿ. ಹಾಂ, ನಡಿ ನಡಿ ಮೊದ್ಲ ಒಳಗ ನಡಿ, ಊಂಡು ಮಲಕೊಳ್ಳುವಂತಿ. ಮೊದ್ಲ ನಿನ್ಗ ಸುಸ್ತ ಆಗ್ಯಾದ. ಇಲ್ಲಂದ್ರ ನಿಮ್ಮವ್ವ ನನ್ಗ ಬಿಡಿಗಿಂಲಂತ ಹೇಳಿ ಒಳಗ ಕರೆದುಕೊಂಡು ಹೋದ.
ನಡು ರಾತ್ರಿ, ಅರ್ಧಂಬರ್ಧ ಕಣ್ಣ ತಗೊಂಡು ರೊಟ್ಟಿ ಮಾಡಿ ಮಗನಿಗಿ ಊಣ್ಣಕ್ಕ ಕೊಟ್ಟಳು. ವಿನೋದ ಹಂಗ್ಯಾಕಲಾ ಮಾಡ್ದಿ, ಇಟ್ಟ ವರುಷ ನಮ್ಮ ಬಿಟ್ಟ ನೀ ಹ್ಯಾಂಗಿದ್ದೊ ಗೊತ್ತಿಲ್ಲ. ಆದ್ರ ನಾವ್ ಮೂವರು ಮಾತ್ರ ಕಣ್ಣೀರಿನ್ಯಾಗ ಕೈ ತೊಳಕೊಂಡಿವಿ ಅಂತ ಹೇಳತ್ತಿದ್ದ ಗಂಡನ ಮಾತನ್ನ ತಡೆದ ಶಾಂತವ್ವ, ಅಂವ ಹೊಟ್ಟಿ ತುಂಬಾ ಊಂಡು ಕಣ್ಣ ತುಂಬಾ ನಿದ್ದಿ ಮಾಡಲಿ. ಮುಂಜಾನಿ ಕೇಳುವರಂತಿ. ನೀವೀಗ ಸುಮ್ಮರಿ ಅಂದಳು. ಅವರ ಹತ್ತ ಮಾತಿಗಿ ಒಂದ ಮಾತಾಡತ್ತಿದ್ದ ವಿನೋದ, ಊಂಡು ದೇವರ ಕೋಣಿಯಲ್ಲಿ ಹೋಗಿ ಮಲಕೊಂಡ.
ಎಷ್ಟಹೊತ್ತಾದ್ರೂ ವಿನೋದನಿಗೆ ನಿದ್ದೆ ಹತ್ತಲಿಲ್ಲ. ಮೈ ಕೈಯಲ್ಲಾ ಬ್ಯಾನ ಆಗತ್ತಿದ್ದರೂ ನಿದ್ದಿ ಬರಲಿಲ್ಲ. ಕೋಣಿಯಿಂದ ಎದ್ದು ಪಡಸಾಲಗಿಗಿ ಬಂದ. ಅವ್ವ, ಅಕ್ಕಿನ ಬಾಜು ಗೌರಿ. ಆ ಕಡೆ ಅಪ್ಪ ಮಲಗಿದ್ರು. ಎಲ್ಲಾ ದಿಕ್ಕಿಗೂ ಒಂದ ಸಾರಿ ಕಣ್ಣಾಡಿಸಿದ. ಅಂವ ಮನಿ ಬಿಟ್ಟು ಹೋಗುವಾಗ ಇದ್ದ ಮನಿ, ಪೂರ್ತಿ ಬದಲಾಗಿ ಹೋಗಿತ್ತು. ಅಲ್ಲಲ್ಲಿ ಬಿರುಕು ಬಿಟ್ಟಿದ್ದ ಗ್ವ್ಯಾಡಿ, ಜೋತು ಬಿದ್ದ ಜಂತಿ, ಜಂಪಕ್ ಹಾಕಿದ್ದ ಅವ್ವ ಅಪ್ಪನ ಅರಬಿ ಕೂಡಾ ಗೌರಿ ಲಂಗಾ ದಾವಣಿ. ಮನಿ ತುಂಬಾ ತುಂಬಿರತ್ತಿದ್ದ ಜ್ವಾಳ, ಗೋದಿ ಜಾಗ ಖಾಲಿ ಖಾಲಿ ಐತಿ. ಎರಡತ್ತಿನ ಜಾಗದಲ್ಲಿ ಒಂದು ಆಕಳ. ಎಡಕ್ಕ ತಿರಗಿ ಮತ್ತೊಮ್ಮೆ ಗೋಡೆ ಕಡೆ ನೋಡಿದ, ಅವೇ ಹಳೇ ಫೋಟೊಗಳ ಸಾಲಿನಲ್ಲಿ ಅರ್ಧ ಗೋಡೆ ಸೈಜಿನ ಗಡಿಯಾರದ ಮುಳ್ಳುಗಳು ಎರಡರ ಮ್ಯಾಲ ನಿಂತಿದ್ದನ್ನ ನೋಡಿದ. ಅವರಪ್ಪನ ಲಗ್ನದಲ್ಲಿ ಯಾರೊ ಕೊಟ್ಟಿದ್ದು. ಅದು ಅವರಪ್ಪನೇ ಅಂವ್ನಿಗೆ ಹೇಳಿದ್ದನ್ನ ನೆನಪಿಸಿಕೊಂಡು ಹೊಸ್ತಿಲ ಹೊರಗ ಕಾಲಿಟ್ಟು ಓಣಿ ದಾಟಿದ.
ಎಲ್ಲರ ಸಮೇತ ರಸ್ತೆನೊ ಮಲಗಿತ್ತು. ಅಲ್ಲಲಲ್ಲಿ ನಾಯಿಗಳ ಗೌ…ಗೌ… ಸದ್ದು. ಲಕ್ವ ಹೊಡದವರಂಗ್ ಮಾಡಕತ್ತಿದ್ದ ಸರ್ಕಾರಿ ಲೈಟ್ಗಳ ನಡುವೆ ಅವಳ ಜೊತೆ ಓಡ್ಯಾಡಿದ ಒಂದೊಂದು ಓಣಿ ದಾಟುತ್ತಾ ಕಳೆದು ಹೋದ ನೆನಪುಗಳನ್ನ ಕತ್ತಲಲ್ಲಿ ಹುಡುಕುವ ಪ್ರಯತ್ನ ಮಾಡತ್ತಿದ್ದ. ಯಾವದೂ ಸ್ಪಷ್ಟವಾಗಿ ಕಾಣುವಲ್ಲದು ಅಂವನಿಗೆ. ಅದೇ ಗುಂಗಿನಲ್ಲಿ ಗೋಲಗೇರಿ ನಾಕಾದಲ್ಲಿ ಬಂದು ನಿಂತಿದ್ದ. ಕೆಲವು ಡಬ್ಬಾ ಅಂಗಡಿಗಳ ಜಾಗದಲ್ಲಿ ಬಿಲ್ಡಿಂಗ್ಗಳು ತಲೆ ಎತ್ತಿದ್ದವು. ಕಾಲ ಬದಲಾದಂಗ್ ಎಲ್ಲಾನೊ ಬದಲಾಗಿತ್ತು. ಅವುಗಳನ್ನೇ ನೋಡುತ್ತಾ ಹೊರಟಿದ್ದ, ಮಂದಸ್ಮಿತನಾಗಿ ನಿಂತಿದ್ದ ಸ್ವಾಮಿ ವಿವೇಕಾನಂದರ ದರ್ಶನವಾಯಿತು. ಅಂವನನ್ನೇ ನೋಡಿ ನಗುತ್ತಿದ್ದಾರೆ ಅಂತ ಅನಿಸಿತು. ಯಾವ ಜಾತಿ ಧರ್ಮದ ಸಲುವಾಗಿ ದೇಶ ವಿದೇಶ ಸುತ್ತಾಡಿ, ತಮ್ಮ ಇಡೀ ಬದುಕನ್ನ ಮುಡುಪಾಗಿಟ್ಟು ಹಿಂದೂ ಧರ್ಮದದ ಬಗ್ಗೆ ಗಂಟಲ ಹರಕೊಂಡು ಹೇಳಿದ್ರು. ಇವತ್ತು ಅದೇ ಜಾತಿ ಧರ್ಮದಲ್ಲಿ ಕಿತ್ತಾಟ, ಹೊಡೆದಾಟ ನಡೆದೈಯಿತಿ. ಅವರ ಶಿಷ್ಯರು, ಅನುಯಾಯಿಗಳು ಅಂತ ಹೇಳುತ್ತಾ ತಿರಗಾಡುತ್ತಿರುವವರಲ್ಲಿ ಅವರ ಒಂದೇ ಒಂದು ತತ್ವ ಸಿದ್ಧಾಂತ ಕಾಣತ್ತಿಲ್ಲ ಅಂವನಿಗೆ. ಹೀಗೆ ಮನಸ್ಸಿನೊಳಗೆ ಏನೇನೊ ಕತ್ತಿಟಾಗಳು ಶುರುವಾಗಿತ್ತು, ಮೆಲ್ಲನೆ ಅವಳ ನೆನಪಿನ ಮೂಟೆ ಹೊತ್ತು ಮುಂದ ಸಾಗಿದ.
ಅಂವನು ಊರು ಬಿಟ್ಟು ಹೋಗುವಾಗ ಇದ್ದ ಕಲ್ಲು ಮಣ್ಣಿನ ಹಾದಿಗೆ ಈಗ ಅಲ್ಪ ಸಲ್ಪ ಡಾಂಬರ ಬಿದ್ದಿತ್ತು. ರಸ್ತೆನ ಅಗಲ ಮಾಡಿ ಎರಡು ರೋಡ್ ಮಾಡಿದ್ರು. ಸಾಲು ಸಾಲು ಲೈಟಿನ ಕಂಬಗಳನ್ನ ನಿಲ್ಲಿಸಿದ್ರು. ಆದ್ರ ಒಂದೂ ಸುದ್ದಿರಲಿಲ್ಲ. ರಸ್ತೆ, ಲೈಟ್ ಎಲ್ಲವು ಊರಿನ ಜನರಂತೆ ಬೆಚ್ಚಗೆ ಮಲಗಿಕೊಂಡಿದ್ದವು. ಹಿಂಗ ಬದಲಾಗುತ್ತಿರುವ ತನ್ನ ಊರಿನ ಚಿತ್ರಣವನ್ನ ನೋಡುತ್ತಾ ಹುಚ್ಚಪ್ಪ ಗಂಗಪ್ಪ ಹೈಸ್ಕೊಲ್ ಮುಂದ ಬಂದ ನಿಂತಿದ್ದ. ಅಂವನು ಕಲಿಯುವಾಗಿದ್ದ ಬ್ರಿಟಿಷರ ಕಾಲದ ಕಲ್ಲಿನ ಮತ್ತು ಕೆಂಪು ಬಣ್ಣದ ಶಾಲಿ ಜಾಗದಲ್ಲಿ ಎರಡು ಮೂರ ಅಂತಸ್ತಿನ ಕಟ್ಟಡ ತಲೆ ಎತ್ತಿ ನಿಂತಿತ್ತು. ಕಟಗಿ ಬೋರ್ಡ್ ಸ್ಥಳವನ್ನ ಮಿರಮಿರ ಮಿಂಚುವ ಬೋರ್ಡ್ ಆಕ್ರಮಸಿಕೊಂಡಿತ್ತು. ಹೈಸ್ಕೊಲ್, ಕಾಲೇಜ್ ಜೊತೆಗೆ ಯಾವದ್ಯಾವದೊ ಕೋರ್ಸ್ಗಳ ಬಂದು ಸೇರಿಕೊಂಡಿದ್ದವು. ತಾನು ಕಲೆತ ಶಾಲೆ ಇಷ್ಟು ಮುಂದುವರೆದಿರುವುದಕ್ಕೆ ಒಳಗೊಳಗೆ ಖುಷಿ ಪಟ್ಟ. ಅಷ್ಟರಲ್ಲೇ ಅಂವನ ಕಣ್ಣು ಎದುರಿಗಿನ ಹುಡುಗಿಯರ ಹೈಸ್ಕೊಲ್ ಕಡೆ ಬಿತ್ತು.
ಬಿಳಿ, ಹಸಿರು ಬಣ್ಣದ ಉಡುಪಿನಲ್ಲಿ ಬರತ್ತಿದ್ದ ಹುಡುಗಿಯರ ಗುಂಪಿನಲ್ಲಿ ಮೊಟು ಜಡೆಯ ಹುಡ್ಗಿ ಗೆಳತಿಯರೊಂದಿಗೆ ನಗತಾ ಬರತ್ತಿದ್ದಳು. ಅವಳ ಬಿನ್ನಾಣಕ್ಕೆ ಮನ ಸೋತವರಲ್ಲಿ ನಾನು ಒಬ್ಬ ಅಂತ ಅಲ್ಲೇ ನಿಂತ. ಅವಳನ್ನ ಬಣಿಸಲು ಪದಗಳೊಂದಿಗೆ ಜಗಳವಾಡಿ ಸೋತ. ಕ್ಷಣಾರ್ದದಲ್ಲಿ ಅಂವನ ಮೈ ಕಂಪಿಸ್ತು. ಆ ದಿನಗಳಲ್ಲಿ ಎದೆಯೊಳಗೆ ಆದ ಹೊಯ್ದಾಟ, ತಳಮಳ, ಅಂಜಿಕೆ ಇನ್ನು ಅಂವನನ್ನ ಕಾಡುತ್ತಿದ್ದವು. ಕಡೆಗೂ ಅವಳಿಗೆ ಹೇಳದೆ ಅಂವನ ಎದೆಯೊಳಗೆ ಉಳಿದಿದ್ದ ಪದ ಅಂವನನ್ನ ಅಣಿಕಿಸುತಿತ್ತು. ಅಪ್ಪ ಎಲ್ಲಿ ಶಾಲಿ ಬಿಡಸ್ತಾನ ಅನ್ನುವುದಕ್ಕಿಂತ ಅವಳ ಬಗ್ಗೆ ಮೂಡಿದ್ದ ಆಸೆ ಕನಸುಗಳು ಎಲ್ಲಿ ಮನೆಯಲ್ಲಿ ಗೊತ್ತಾಗತದ ಅನ್ನುವ ಭಯಕ್ಕೆ ಮನಿ ಬಿಟ್ಟಿದ್ದು ಅನ್ನುವುದು ಗೊತ್ತಾಗಿದ್ದು ಅಂವನ ಅಲೆದಾಟದ ಬದುಕಿನಿಂದ. ಎಲ್ಲದಕ್ಕೂ ಉತ್ತರವಾಗಿದ್ದ ಅಲೆಮಾರಿ ಜೀವನ, ಇನ್ನೊಂದಕ್ಕೆ ಪ್ರಶ್ನೆಯಾಗಿಯೇ ಊಳದಿದೆ.
ಹುಟ್ಟು, ಸಾವು, ಪ್ರೀತಿ, ಗಂಡು ಹೆಂಣ್ಣು ಎಲ್ಲವೂ ಎರಡಕ್ಷರ. ಈ ಎರಡಕ್ಷರದ ಬಾಳಿಗೆ ಜಾತಿ ಎನ್ನುವ ಎರಡಕ್ಷರ ಹ್ಯಾಗೇ ಮುಳ್ಳಾಗಿ ಚುಚ್ಚಿತು ಅಂತ ಆತನ ಕಣ್ಣುಗಳಲ್ಲಿ ನೀರು ತುಂಬಿಕೊಂಡಿತ್ತು. ಅಳುವುದಕ್ಕೊ ಆಗದೇ ನಗುವುದಕ್ಕೊ ಆಗದೇ ಮೌನಕ್ಕೆ ಶರಣಾಗಿದ್ದ. ಅಂವನಿಗಾಗಿ ಆಕೆ ಕಾಯುತ್ತಿದಿದ್ದು, ಆಕೆಗಾಗಿ ಅಂವನು ಕಾಯುತಿದಿದ್ದು, ತಿರುಗಿ ತಿರುಗಿ ನೋಡುತಿದಿದ್ದು, ಒಟ್ಟಿಗೆ ಹೋಗುವಾಗ ಅವರಿಗೆ ಗೊತ್ತಿಲ್ಲದೇ ತಾಕಿದ ಮೈಗೆ ಹುಟ್ಟಿಕೊಂಡ ಅಸಹಜ ಭಾವನೆ. ಹೊಸ ಬಟ್ಟೆ ತೊಟ್ಟಾಗ ಅಂವನ ಎದರು ನಿಂತು ನಾ ಹ್ಯಾಂಗ ಕಾಣಸ್ತಿನಿ ಅಂತ ಕೇಳಿದ್ದು, ಗೌರಿ ಹುಣ್ಣಿಮೆ ಜಾತ್ರೆಯಲ್ಲಿ ಬಳೆ ಕೇಳಿದ್ದು, ಇಂವನು ಕೊಡಿಸಿದ್ದು ಯಾಕೆ ಅನ್ನುವುದು ಗೊತ್ತಾಗುವ ಮೊದ್ಲೆ ಊರು ಬಿಟ್ಟಿ ಹೋಗಿದ್ದ.
ಹೌದು, ನನ್ನ ಈ ಇಪ್ಪತ್ತು ವರ್ಷಗಳ ಅಲೆದಾಟದ ಬದುಕಿಗೆ ಕಾರಣವಾಗಿದ್ದು ಪ್ರೀತಿ, ಜಾತಿ. ಹೆತ್ತವರನ್ನ, ಒಡ ಹುಟ್ಟಿದವಳನ್ನ, ವಾರಗಿಯವರನ್ನ ಬಿಟ್ಟು ಒಂಟಿಗಾಗಿ ಅಲೆಯುವಂತೆ ಮಾಡಿದ್ದು ಇದೇ ಪ್ರೀತಿ, ಜಾತಿ. ಅವಳೊಂದಿಗೆ ನಗುನಗುತ್ತಾ ಇದ್ದಾಗ, ಏನೋನೊ ಮಾತನಾಡುತ್ತಿದ್ದಾಗ ಅದು ಪ್ರೀತಿಯೊ ಗೆಳತನವೊ ಏನಾಗಿತ್ತು ಅನ್ನುವುದು ಗೊತ್ತಿರಲಿಲ್ಲ. ಆದ್ರ ಅಪ್ಪನ ಬಾಯಿಂದ ಬಂದ ಜಾತಿ ಎನ್ನುವ ಹೊಸ ಶಬ್ಧ ನನ್ನನ್ನ ಹೇಳದೆ ಕೇಳದೆ ಊರನ್ನ ಬಿಡುವಂತೆ ಮಾಡಿತಲ್ಲಂತ ಕಿರುಚುತ್ತಾ ಓಡಿದ.
ಇಂವನು ಓಡಿ ಬರುವುದನ್ನ ದೂರದಿಂದ ಒಬ್ಬ ನೋಡತ್ತಿದ್ದ. ಕುದುರೆ ಮೇಲೆ ಬ್ಯಾರೆ ಕುಂತಿದ್ದ. ಇಂವನು ಹೋದವನೇ ಅಂವನ ಮುಂದ ತೇಕುತ್ತಾ ನಿಂತ. ಅಂವನು ಮಾತಾಡಲಿಲ್ಲ. ನೋಡು ಈ ಹಾಳ ಸಮಾಜ. ಇಲ್ಲಿ ಯಾವುದಕ್ಕೊ ಜೀವವಿಲ್ಲ. ಎಲ್ಲವು ಸತ್ತು ಬಿದ್ದಿರುವ ಬರಿ ದೇಹಗಳು. ಈ ದೇಹಗಳಿಗೆ ಜಾತಿ, ಧರ್ಮ ಬೇಕು. ಪ್ರೀತಿ ಅಲ್ಲ. ಇಂತಹ ಕೊಳೆತು ನಾರುತ್ತಿರುವ ಮನಸ್ಸುಗಳ ನಡುವ ನಾ ಹ್ಯಾಂಗ ಬಾಳಲಿ ಅಂತ ಕೇಳಿದ. ಆ ಆಸಾಮಿ ಕಮಕ್ಕ ಕಿಮಕ್ಕ ಅನ್ನಲಿಲ್ಲ. ಯಾವ ಜನರಿಗಾಗಿ ನೀ ಬಡದಾಡಿದೊ, ಜಾತಿಗಳ ನಡುವಿನ ಗೋಡೆ ಒಡೆಯಲು ಅಂತರಜಾತಿ ಮದ್ವೆ ಮಾಡಿಸಿದಿಯೋ ಇವತ್ತು ಅದೇ ಜನ ಜಾತಿಗಾಗಿ ಸಾಯಿತಿದಾರ, ಸಾಯಿಸತಿದಾರ. ಆದ್ರ ಊರಿಗೆ ಹತ್ತರಂತೆ ನಿನ್ನನ್ನ ನಿಲ್ಲಿಸೋದ ಮರತಿಲ್ಲ. ಹಂಗ ಅದರ ಕೆಳಗ ನೀನು ಹೇಳಿದ ಮಾತನ್ನ ಒಂದಕ್ಷರವೊ ತಪ್ಪದೇ ಬರೆದಿದ್ದಾರೆ. ಓದುತ್ತೇನೆ ಕೇಳ ಅಂತ ಹೇಳಿ ಓದಿದ, ಜಾತಿವಿಡಿದು ಸೂತಕವನರಸುವೆ, ಜ್ಯೋತಿವಿಡಿದು ಕತ್ತಲೆಯನರಸುವೆ ! ಇದೇಕೊ ಮರುಳುಮಾನವಾ ಜಾತಿಯಲ್ಲಿ ಅಧಿಕನೆಂಬೆ ! ವಿಪ್ರ ಶತಕೋಟಿಗಳಿದ್ದಲ್ಲಿ ಫಲವೇನೊ ಭಕ್ತನೆ ಶಿಖಾಮಣ ಎಂದುದು ವಚನ. ನಮ್ಮ ಕೂಡಲಸಂಗನ ಶರಣರ ಪಾದಪರುಷವ ನಂಬು, ಕೆಡಬೇಡ ಮಾನವಾ. ಈಗಲೂ ಅಂವ ಮಾತಾಡಲಿಲ್ಲ. ಇಂವ ಅದ ಬಾರವಾದ ಮನಸ್ಸನ್ನ ಹೊತ್ತು ಮುಂದ ಸಾಗಿದ.
ಒಂದೊಂದು ಹೆಜ್ಜೆಯು ಅಂವನಿಗೆ ಇಡುವುದು ಕಷ್ಟವಾಯಿತು. ಮತ್ತ ಅದ ನಾಯಿಗಳ ಗೌ…ಗೌ… ಸದ್ದು. ಅಂವನ ಹೆಜ್ಜೆ ಸಪ್ಪಳ ಅಂವನಿಗೆ ಕೇಳಿಸುತಿತ್ತು. ಹೌದು, ಇಲ್ಲಗಳ ನಡುವ ಸಾಗಿದ. ಮತ್ತೊಬ್ಬ ಮಹಾನುಭಾವರು ನಿಂತಿದ್ದರು. ಅವರ ಮುಖ ನೋಡುತ್ತಿದ್ದಂತೆ ಅವರೇ ಇಂವನಿಗೆ ಬಯ್ಯುವುದಕ್ಕೆ ಶುರು ಮಾಡಿದ್ರು. ಜಾತಿಯಿಂದ ಪ್ರೀತಿ ಕಳೆಕೊಂಡೆ ಅಂತ ಒಂದೇ ಸಮ ಬಡಕೊಳ್ಳತಿದಿಯಲ್ಲಾ ಏ ಹುಚ್ಚಾ, ಅದನ್ನ ಎದುರಿಸಕ್ಕೆ ಆಗದೇ ಇಷ್ಟ ವರ್ಷ ಅಲೆದಾಡಿ ಅಲೆದಾಡಿ ಮತ್ತ ಬಂದಿ ಅಂತ ಉಗಿದ್ರು. ಈಗ ಇಂವ ನಕ್ಕ ಹೇಳತಾನ, ನಿಮಗೊಂದು ನನ್ನ ಸಲಾಂ. ನೀ ಉಂಡ ಕಷ್ಟ ಈಗಿನವರಿಗಿಲ್ಲ. ನೀ ಬರೆದ ಪುಸ್ತಕದಿಂದ ಎಲ್ಲರೂ ಆರಾಮ ಅದರಾ ಅಂತ ನೀ ತಿಳಕೊಂಡಿ. ಇಲ್ಲಿ ಯಾರೂ ಆರಾಮ ಇಲ್ಲ. ಆರಾಮ ಇರುವುದಕ್ಕೂ ಬಿಡೋದಿಲ್ಲ. ನಿನ್ನ ಹೆಸರಿನಲ್ಲಿ ನೂರೆಂಟು ಸಂಘ ಸಂಸ್ಥೆಗಳು. ಅದಕೊಬ್ಬ ನಾಯಕರು. ಅವರ ಕುಂಡಿ ತುಂಬೈಯಿತಿ ಹೊರ್ತು ಅವರ ಹಿಂದಿನವರ ಹೊಟ್ಟೆ ಬೆನ್ನಿಗೆ ಹತ್ತಿದ್ದು ಅವರಿಗೆ ಕಾಣುವಲ್ಲದು. ಜಾತಿ ಬೆಂಕಿಗಿ ಸಿಕ್ಕು ಸುಡುತ್ತಿರುವಱರು ಇವರ ಕಣ್ಣಿಗೆ ಕಾಣಲ್ಲ. ಅವರಿಗೆ ಬೇಕಿರುವುದು ನಿನ್ನ ಹೆಸರು. ನೋಡು ನಿನ್ನನ್ನು ಹ್ಯಾಗೇ ಮಾಡಿ ನಿಲ್ಲಿಸಿದಾರ. ನಿನ್ನಲ್ಲಿ ಇದ್ದ ಕಿಚ್ಚು ಯಾರಲ್ಲಿ ಐತಿ ಹೇಳು ಮಾರಾಯಾ ಅಂತ ಒಂದೇ ಸಮ ಒಟಗುಟುತ್ತಾ ಹುಚ್ಚನಂತೆ ಸಾಗಿದ.
ಇಷ್ಟೇಲ್ಲಾ ಊರು ತುಂಬಾ ಸುತ್ತಾಡುವಷ್ಟರಲ್ಲಿ ರಾತ್ರಿ ಮೂರು ಗಂಟೆ ಆಗಿತ್ತು. ಸೂರ್ಯ ಹುಟ್ಟುತ್ತಲೇ ಗರತಿಯಂಗ ಕಾಣುವ ಊರು ಈಗ ಗಂಡ ಸತ್ತ ಮುಂಡೆ ಹಂಗ ಗಪ್ಪ ಬಿದ್ದುಕೊಂಡಿತ್ತು. ಹಿಂದಿರುಗಿ ನೋಡಿ ಹೋರಟ. ಕೊನೆಯದಾಗಿ ಇನ್ನೊಬ್ಬರು ಕಾಯುತ್ತಿದ್ದರು. ಎಲ್ಲರನ್ನ ನನ್ನವರು. ಶಾಂತಿ ಶಾಂತಿ ಶಾಂತಿ ಅಂತ ಮೈ ಮ್ಯಾಲಿನ ಬಟ್ಟೆ ಗಿಟ್ಟೆಯಲ್ಲ ಕಳಚಿ ಕುಂತವರು. ನಿನ್ನ ಬಗ್ಗೆ ನಾ ಸಣ್ಣಂವನಿದ್ದಾಗಿನಿಂದ ಕೇಳತಾ ಬಂದಿನಿ. ನಿನ್ನ ಬಗ್ಗೆ ಎಂತೆಂತ ಮಾತುಗಳನ್ನ ಹೇಳತಾರೊ ಎಪ್ಪಾ. ಬಾಯಿ ಬಿಟ್ರೆ ಸಾಕು ನೀ ಹಿಂಗ್, ನೀ ಹಂಗ್, ಅವರಂಗ್ ನೀವು ಬದಕಬೇಕು ಅಂತ ಹೇಳಿದ್ದು ಕೇಳಿದಿನಿ ಹೊರ್ತು, ಅವರ ಮಾತ್ರ ನಾನು ಹಿಂಗ್ ಬದಕತಿನಂತ ಹೇಳಿದ್ದ ಒಂದು ಮಾತೂ ಕೇಳಿಲ್ಲ. ರಕ್ತದ ಹೊಳೆ ಹರಿಬಾರದಂತ ನೀ ಏನೇನೊ ಮಾಡಿದಿ. ಈಗ ನೋಡು, ನೀ ಇಲ್ಲಂತ ದಿನಾ ರಕ್ತದ ಓಕಳಿನೇ ಆಡ್ತಾರ. ಜಾತಿಯ ಕೊಳೆ ತೊಳೆದುಕೊಂಡು ಬದಕುವ ಮನಸ್ಸು ಯಾರು ಮಾಡುತ್ತಿಲ್ಲ. ನಿಮ್ಮೆಲ್ಲರ ಹೆಸರ ಹೇಳಕೊಂಡ ಹಾದರ ಮಾಡುವ ಇವರ ನಡುವ ನಾ ಬದುಕಲ್ಲ. ಇನ್ನ, ಅವ್ರು ಹರಿಸುವ ರಕ್ತ ನನ್ನ ಕಾಲಿಗಿ ತಾಕುವ ಮೊದ್ಲ ನಾ ಇಲ್ಲಿಂದ ಹೊರಡತಿನಂತ ಹೇಳತಾ ಕತ್ತಲೊಳಗ ಹೆಜ್ಜೆ ಹಾಕಿದ…
 

‍ಲೇಖಕರು G

June 14, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: