ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಲಂಕೇಶ್ ಅಡಿಗರ ಮನೆಗೆ ಹೋದರು..

ಶೂದ್ರ ಶ್ರೀನಿವಾಸ್  

ಗೋಪಾಲ ಕೃಷ್ಣ ಅಡಿಗರು ಮತ್ತು ಲಂಕೇಶ್ ಅವರು ನಮ್ಮ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದ ಅಪೂರ್ವ ಲೇಖಕರು.

ಸಾಹಿತ್ಯಕ ಶ್ರೀಮಂತಿಕೆಯ ನೆಪದಲ್ಲಿ ಇವರಿಬ್ಬರೂ ಸೃಷ್ಟಿಸಿದ ವಾಗ್ವಾದಗಳನ್ನು ಎಂದೆಂದೂ ಮರೆಯಲು ಸಾಧ್ಯವಿಲ್ಲ. ಇವರಿಬ್ಬರ ಮಹತ್ವಪೂರ್ಣ ಒಡನಾಟದಿಂದಲೇ ‘ಅಕ್ಷರ ಹೊಸ ಕಾವ್ಯ’ ದಂಥ ಚಾರಿತ್ರಿಕ ಕಾವ್ಯ ಸಂಗ್ರಹ ಬರಲು ಸಾಧ್ಯವಾಗಿದ್ದು.

ಅದರಲ್ಲಿ ಲಂಕೇಶ್ ಅವರ ದೀರ್ಘಪ್ರಸ್ತಾವನೆ ಕಾವ್ಯದ ವೈವಿಧ್ಯಮಯ ಸಾಧ್ಯತೆಗಳ ಕುರಿತು ಚರ್ಚೆಗೆ  ಆಹ್ವಾನಿಸುವಂಥದ್ದು.  ಇಂಥ ಚರ್ಚೆಮತ್ತು ವಾಗ್ವಾದಗಳಿಗೆ  ಆ ಕಾಲಘಟ್ಟದಲ್ಲಿ  ‘ಪ್ರಜಾವಾಣಿ’ಯಂಥ ಪತ್ರಿಕೆ ವೇದಿಕೆ ನಿರ್ಮಾಣ ಮಾಡಿಕೊಟ್ಟಿತ್ತು  ಎಂಬುದೂ ಕೂಡ ಬಹಳ ಮುಖ್ಯವಾದದ್ದು.

ಇಷ್ಟೆಲ್ಲ ನಡೆಯುವಾಗ ಅಡಿಗರು ಮತ್ತು ಲಂಕೇಶ್ ಅವರು ತುಂಬ ಅನನ್ಯವಾಗಿದ್ದರು. ಯಾವುದೋ ಕಾರಣಕ್ಕಾಗಿ ಇಬ್ಬರೂ ಭೇಟಿಯಾಗುತ್ತಿರಲಿಲ್ಲ. ಆದರೆ ಭೇಟಿಯಾಗುವುದಕ್ಕೆ ಹಂಬಲಿಸುತ್ತಿದ್ದರು.

ಈ ಮಧ್ಯೆ ಲಂಕೇಶ್ ಅವರು ‘ಅಕ್ಷರ ಹೊಸ ಕಾವ್ಯ ‘   ಎರಡನೆಯ ಮುದ್ರಣಕ್ಕೆ ಸಿದ್ಧತೆ ನಡೆಸಿದ್ದರು. ಕಿ.ರಂ.ನಾಗರಾಜ ಮತ್ತು ಡಿ.ಆರ್.ನಾಗರಾಜ ಅವರ ಪ್ರೇರೇಪಣೆಯೂ ಮುಖ್ಯ ಕಾರಣವಾಗಿತ್ತು.

ಆದರೆ ಕೆಲವು ಕವಿಗಳು ಅನುಮತಿ ಕೊಡದಿದ್ದರೂ ಚಿಂತೆ ಇಲ್ಲ; ಅಡಿಗರಂಥ ದೊಡ್ಡ ಕವಿಯ ಒಪ್ಪಿಗೆಯನ್ನು ಅವರು ಬಯಸಿದ್ದರು. ಯಾಕೆಂದರೆ ಅಡಿಗರನ್ನು ಅತ್ಯಂತ ಇಷ್ಟಪಡುತ್ತಿದ್ದರು. ಜೊತೆಗೆ ಅಡಿಗರು ತಮ್ಮ ಇಳಿ ವಯಸ್ಸಿನಲ್ಲಿ  ‘ಚಿಂತಾಮಣಿಯಲ್ಲಿ ಕಂಡಮುಖ’ ದಂಥ ಅಪೂರ್ವ ಕವಿತೆಯನ್ನು ಪ್ರಕಟಿಸಿದ್ದರು.

ಅದನ್ನು ಸಂಗ್ರಹದಲ್ಲಿ ಸೇರಿಸಿಕೊಳ್ಳಲೇಬೇಕಾಗಿತ್ತು.

ಇದಕ್ಕೆ ಸಂಬಂಧಿಸಿದಂತೆ ಅಡಿಗರಲ್ಲಿ ಬೆಂಗಳೂರಿನ ಗಾಂಧಿ ಬಜಾರ್ ಸರ್ಕಲ್ ಲಂಚ್ ಹೋಮ್ ನಲ್ಲಿ ನಾನು ಕೆಲವು ಲೇಖಕರ ನಡುವೆ ಪ್ರಸ್ತಾಪಿಸಿದಾಗ; “ಲಂಕೇಶ್ ನೀಚ ವ್ಯಕ್ತಿ  ಇರಬಹುದು ಆದರೆ ಉತ್ತಮ ಕವಿ ಮತ್ತು ಕತೆಗಾರ ” ಎಂದರು.

ಇದನ್ನು ಲಂಕೇಶ್ ಅವರಿಗೆ ತಿಳಿಸಿದಾಗ ಸಂತೋಷಪಟ್ಟರು. ಅವರಿಗೆ ಅಡಿಗರು ನೀಚ ಎಂದು  ಹೇಳಿದ್ದು ಮುಖ್ಯವಾಗಲಿಲ್ಲ. ತಮ್ಮನ್ನು  ಒಬ್ಬ ಉತ್ತಮ ಕವಿ ಮತ್ತು ಕತೆಗಾರ ಎಂದು ಹೇಳಿದ್ದು  ಮುಖ್ಯವಾಗಿತ್ತು.

ಇದನ್ನು  ಸಂಭ್ರಮದಿಂದಲೇ ಕಿ.ರಂ ಅವರ ಮುಂದೆ ಪ್ರಸ್ತಾಪಿಸಿದ್ದರು. ಇದಾದ ನಂತರ ಅಡಿಗರನ್ನು ಭೇಟಿಯಾಗುವ ತೀವ್ರತೆ ಜಾಸ್ತಿಯಾಗುತ್ತಲೇ ಹೋಗುತ್ತಿತ್ತು. ಕೊನೆಗೆ ಇಪ್ಪತ್ತೇಳು ವರ್ಷಗಳನಂತರ ಅಡಿಗರ ಒಪ್ಪಿಗೆಯನ್ನು ಪಡೆದು ಲಂಕೇಶ್ ಅವರನ್ನು  ಕಿ.ರಂ ಮತ್ತು ನಾನು ಅಡಿಗರ ಮನೆಗೆ ಕರೆದುಕೊಂಡು ಹೋದೆವು.

ಅಡಿಗರು ಪ್ರೀತಿಯಿಂದ ಬರಮಾಡಿಕೊಂಡರು. ತಮ್ಮ ಪತ್ನಿಯನ್ನು ಕರೆದು “ನೋಡು ಯಾರು ಬಂದಿದ್ದಾರೆ ” ಎಂದು ಹೇಳಿದರು. ಆಕೆಯೂ ಬಂದು ನೋಡಿ ಸಂಭ್ರಮಪಟ್ಟರು. ಎಲ್ಲರಿಗೂ ಕಾಫಿಯನ್ನು ತಂದುಕೊಟ್ಟರು

ಆಗ ಅಡಿಗರು ಲಂಕೇಶ್ ಅವರನ್ನು ಕೇಳಿದ್ದು: “ಲಂಕೇಶ್ ಸಿಗರೇಟ್ ಯಾವಾಗ ಬಿಟ್ಟಿರಿ ? ” ಅದಕ್ಕೆ “ಸರ್ ನೀವು ಯಾವಾಗ ಬಿಟ್ಟಿರಿ ?” ಇಬ್ಬರೂ ಹೀಗೆ ಕೇಳಿಕೊಳ್ಳುತ್ತಲೇ ; “ಇನ್ನೂ ಸ್ವಲ್ಪ ಮೊದಲೇ  ಬಿಡಬೇಕಾಗಿತ್ತು” ಎಂದು ಒಬ್ಬರಿಗೊಬ್ಬರು ಸಮಜಾಯಿಷಿ ಹೇಳಿಕೊಂಡರು.

ಹೀಗೆಯೇ ಸಾಹಿತ್ಯ, ಸಂಸ್ಕೃತಿ, ರಾಜಕೀಯದ ಕಡೆಗೆ ಸಂವಾದ ಸಾಗಿತ್ತು. ಇಪ್ಪತ್ತೇಳು ವರ್ಷಗಳಿಂದ ಮಾತಾಡದಿದ್ದುದನ್ನು ಎರಡು ಗಂಟೆಯಲ್ಲಿ ಮುಗಿಸುವ ಧಾವಂತ ಎದ್ದು ಕಾಣುವಂತಿತ್ತು. ಹೀಗೆಯೇ ಸಂವಾದದ ಮಧ್ಯೆ ಅಡಿಗರು ” ಲಂಕೇಶ್ ನಮಗ್ಯಾರಿಗೂ ನಮ್ಮ ಈ ಹೊಟ್ಟೆಯ ಬಗ್ಗೆ ಕರುಣೇನೇ ಇಲ್ಲ. ಅದನ್ನು ಒಂದು ಡಸ್ಟ್ ಬಿನ್ ಎಂದು ತಿಳಿದು ಸಿಕ್ಕಿದ್ದನ್ನೆಲ್ಲ ತಿನ್ನುತ್ತ ಹೋಗ್ತೀವಿ. ಆದರೆ ಅದು ಕರುಣಾಮಯಿಯಾಗಿ ನಮಗೆ ಬೇಕಾದ್ದನ್ನುಳಿಸಿ ಮಿಕ್ಕದ್ದೆಲ್ಲವನ್ನು ಪಕ್ಕಕ್ಕೆ ತಳ್ಳುತ್ತದೆ.” ಎಂದರು.

ಅದಕ್ಕೆ  ಲಂಕೇಶ್ ಅವರು ಸಾಕಷ್ಟು ಭಾವುಕರಾಗಿದ್ದರು. ಒಂದು  ಕ್ಷಣ ನಮ್ಮನ್ನು ಕರೆದುಕೊಂಡು ಹೊರಗೆ ಹೋದರು. “ಈ ಮನುಷ್ಯ ನಮ್ಮ ಕಾಲದ ಒಬ್ಬ ದೊಡ್ಡ ಕವಿ ಮಾತ್ರ ಅಲ್ಲ; ದೊಡ್ಡ ಸಂತನೂ ಕೂಡ.” ಎಂದು ಕಿ.ರಂ ಅವರ ಹೆಗಲ ಮೇಲೆ ತಲೆಯಿಟ್ಟು ಕಣ್ಣೀರು ಸುರಿಸಿದ್ದರು.

ಇದಕ್ಕೆ ಮುಖ್ಯ ಕಾರಣ: ಇಬ್ಬರ ಹೊಟ್ಟೆ ಸಾಕಷ್ಟು ಡ್ಯಾಮೇಜ್ ಆಗಿತ್ತು. ಇದಾದ ಕೆಲವು ಕ್ಷಣಗಳ ನಂತರ ಒಳಗೆ ಹೋಗಿ ಅಡಿಗರಿಗೆ ಮತ್ತು ಅವರ ಶ್ರೀಮತಿಯವರಿಗೆ ನಮಸ್ಕರಿಸಿ ಹೊರಗೆ ಬಂದಿದ್ದರು.

ಲಂಕೇಶ್ ಅವರು ಆಫೀಸ್ ಗೆ ವಾಪಸು ಹೋಗುವಾಗ ಒಂದೇ ಒಂದು ಮಾತೂ ಆಡಿರಲಿಲ್ಲ.

‍ಲೇಖಕರು avadhi

20 April, 2018

2 Comments

  1. nutana doshetty

    Hiriyara intha boudhdhika jagalagalu eega illa..

    eegeniddaroo hiritanavanoo mareta kubjate..

    Thank you for sharing this memorable moment

    nutana doshety

  2. ಶಿವಶಂಕರ ಭಟ್ಟ

    ಅಡಿಗರು ಲಂಕೇಶರನ್ನು ನೀಚ ವ್ಯಕ್ತಿ ಎಂದದ್ದು ಮತ್ತು ಲಂಕೇಶರು ಅಡಿಗರನ್ನು ಸಂತ ಎಂದು ಹೇಳಿದ್ದು ಮಾತ್ರ ನಂಬಲು ಆಗುವುದಿಲ್ಲ. ಶೂದ್ರ ಶ್ರೀನಿವಾಸರು ತಮ್ಮ ಗುರುಗಳ ವ್ಯಕ್ತಿತ್ವವನ್ನು ಆಗಸದೆತ್ತರಕ್ಕೆ ಏರಿಸಲು ಹೆಣೆದ ಈ ಕಥೆ ಅದ್ಭುತವಾಗಿದೆ. ಆದರೆ ಅಡಿಗರ ಮತ್ತು ಲಂಕೇಶರ ನಡೆನುಡಿಗಳನ್ನು ಬಲ್ಲವರು ಈ ಕಥೆಯನ್ನು ನಂಬುವುದಿಲ್ಲ. ಶೂದ್ರ ಶ್ರೀನಿವಾಸರಿಗೆ ಏನಾದರೂ ಮಾಡಿ ತಮ್ಮ ಗುರುಗಳಾದ ಲಂಕೇಶರನ್ನು ‘ಬಸವನಗುಡಿಯ ಅಶಾಂತ ಸಂತ’ನೆಂದು ಬಣ್ಣಿಸುವ ಆಸೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading