ಲಂಕೇಶರ ಆ ಬುಧವಾರ

ಬುಧವಾರ

krishna raichur

ಕೃಷ್ಣ ರಾಯಚೂರು 

ವಾರದ ಒಂದೊಂದು ದಿನವೂ ದೇವರ ಹೆಸರಿಗೆ ಮುಡುಪಾಗಿಟ್ಟಿರುವುದನ್ನು ನೋಡುತ್ತಿದ್ದೇವೆ. ಇದು ಆಹಾರ ಕ್ರಮದ ಮೇಲೂ ನಿರ್ಭಂದ ಹೇರಿಕೆಯಾಗಿರುವುದು ಉಂಟು. ಗಾಳಿ ನೀರು ಉಸಿರಾಟ ಹೊರತು ಪಡಿಸಿ. ನನ್ನ ಮಾಸ್ತರ ಒಬ್ಬರ ಸಹವಾಸದಿಂದ ಹತ್ತನೆಯ ತರಗತಿಯ ಆಜುಬಾಜಿನಲ್ಲಿ ಲಂಕೇಶ್ ಪತ್ರಿಕೆಯ ಕೊಳ್ಳುವ ಹವ್ಯಾಸ ಆರಂಭವಾಗಿದ್ದು. ಈ ಪತ್ರಿಕೆಯಲ್ಲಿ ಸಿನಿಮಾ ಲೇಖನಗಳೊಂದಿಗೆ ನನ್ನ ಓದು ಆರಂಭವಾಗಿ, ತುಂಟಾಟ ಕ್ರಮೇಣ ಮರೆಯುವ ಮುನ್ನ, ಟೀಕೆ ಟಿಪ್ಪಣೆ, ನೀಲು ಹಿಗೇ ಸಾಗ್ತಾ ಹೋಗಿದ್ದು. ಹುಚ್ಚು ಅತೀಯಾದಾಗ ಪತ್ರಿಕೆ ಬರುವ ಅಂಗಡಿ, ನಂತರ ಪತ್ರಿಕೆ ಬರುವ ವಾರದ ಮಾಹಿತಿ. ಆಗ ಮಾಹಿತಿಯನ್ನು ಅನುಸರಿಸಿ ಲಂಕೇಶ ಪತ್ರಿಕೆ ಬರೋದೆ ಬುಧುವಾರ ಅನ್ನುವ ಕನ್ಫರ್ಮ್ ಆಗಿ ಕಾಯ್ತಾ ಇರೋದು ಒಂದಷ್ಟು ದಿನಗಳಕಾಲ ನಡೆದೇಹೋಯ್ತು.

lankesh indira archiveಇತಿಹಾಸವೆಂದರೆ ಮೈಲುದೂರ ಓಡುವ ನನಗೆ ಬಾಬ್ರಿ ಮಸೀದಿಯ ಪ್ರಕರಣದ ತಲೆ ಬುಡವೇ ಅರ್ಥವಾಗಿರಲಿಲ್ಲ. ಪ್ರತಿ ಬುಧವಾರಗಳಂತೆ ಅಂಗಡಿಯವನ ಮುಂದೆ ಪತ್ರಿಕೆಯ ಕಟ್ಟನ್ನು ಬಿಚ್ಚುವವರೆಗೆ ಕಾದು ಪತ್ರಿಕೆ ಕೊಂಡಾಗ ಟೀಕೆ ಟಿಪ್ಪಣೆಯ `ಇಟ್ಟಿಗೆ ಪವಿತ್ರವಲ್ಲ ಜೀವ ಪವಿತ್ರ’ ಎನ್ನುವ ತಲೆಬರಹ ಹೊತ್ತ ಮಾತಿನ ಬೆಳಕಭಾಗಿನ ನೀಡಿದ್ದನ್ನು ನೆನೆಯುತ್ತೇನೆ. ಇತಿಹಾಸದ ಸೂಕ್ಷ್ಮ ಮಾಹಿತಿಗಳನ್ನು ಪ್ರಚೋದಿಸದೆ ಆಳಕ್ಕೆ ಬಿಡುವ ಸಿದ್ಧಿ ಲಂಕೇಶರಿಗಿತ್ತು. ನಮ್ಮಂಥವರನ್ನು ಜಾಣ

ಜಾಣೆಯರೆಂದು ಬಿಂಬಿಸುತ್ತಾ ಇಡೀ ಜಗತ್ತನ್ನೆ ಸುತ್ತಿಸಿಬಿಡುವ ಲಂಕೇಶರು ಕಲೆ ಸಂಸ್ಕೃತಿ ರಾಜಕೀಯಗಳ ಮೂಲಕ ಒಂದು ಬಿಗುವನ್ನೇ ಕಟ್ಟುತ್ತಿದ್ದರು. ಸೋತವರ ಒಡಲಿಗೆ ಇವರೇ ಕಡಲಾಗಿ ಕಂಪಿಸುತ್ತಿದ್ದರು. ಆ ಕಾಲದಲ್ಲಿ ಎಷ್ಟು ವ್ಯಾಮೋಹಿಗಳಾಗಿದ್ದೆವೆಂದರೆ ಪತ್ರಿಕೆ ಮೂಲಕ ಏನಾದರೂ ಹೊಸತು ಸಿಕ್ಕೆ ಸಿಗುತ್ತದೆಂಬ ಆಸೆಯಲ್ಲಿ ಲೆಕ್ಕವಿಲ್ಲದಷ್ಟು ಬುಧವಾರಗಳನ್ನು ದಾಟಿದ್ದೇವೆ. ಬುದ್ಧ, ಗಾಂಧಿ, ಅಂಬೇಡ್ಕರ್, ಲೋಹಿಯಾ, ನೆರೊಡಾ, ಕಾಫ್ಕಾ, ಬೋದಿಲೇರ್, ಡಾಲಿ ಅಲ್ಲದೇ ಕೇಳಿದ ಕೇಳದಿರುವವರ ಚಿಂತನಾಶೀಲರ ಹೆಸರುಗಳು ನಾವು ದಾಟಿದ ಬುಧವಾರಗಳೇ ನಮಗೆ ದಕ್ಕಿಸಿವೆ.

ಸರಳ ಗಧ್ಯದ ಮೂಲಕ ಬಯಲಿನಂಥಾ ಬಯಲನ್ನೇ ತೋರಿಸಿಬಿಡುತ್ತಿದ್ದರು. ಸಾಹಿತ್ಯ ವಿಮರ್ಶೆಯೆಂದರೆ ಸಾಂಸ್ಕೃತಿಕ ವಿಮರ್ಶೆ ಎನ್ನುವುದನ್ನ ಪರಿಚಯಿಸಿದ ಇವರು ಬರಹಗಾರರಿಗೆ ಎಚ್ಚರ ಮತ್ತು ಆಧುನಿಕ ಪ್ರಜ್ಞೆಗಳನ್ನು ತೋರಿಸಿದ್ದಾರೆ. ನನ್ನನ್ನು ಅತೀಯಾಗಿ ಕಾಡಿದ `ಮೋಕ್ಷ ಹುಡುಕುತ್ತಾ ಪ್ರೀತಿಯ ಬಂಧನದಲ್ಲಿ’ ಬುದ್ಧನನ್ನು ಅರಳಿಸಿದ ಬಗೆಯಾಗಲೀ ಇವರು ಅನುವಾದಿಸಿದ ಭೋದಿಲೇರನ ಪಾಪದ ಹೂಗಳು ಬಗ್ಗೆಯಾಗಲಿ ಹೇಗೆ ಹೇಳಲಿ?

ಮನುಷ್ಯ ಯಾವಾಗಲೂ ಕುಡಿತದ ಸ್ಥಿತಿಯಲ್ಲಿರಬೇಕು
ಅದೊಂದೆ -ಪರಿಹಾರ ಸಮಸ್ಯೆಗೆ
ಕಾಲನ ಅಸಹ್ಯಭಾರ ನಿನ್ನ ಭುಜ ಮುರಿಯದಂತೆ
ನಿನ್ನ ತಲೆಯನ್ನು ತಗ್ಗಿಸದಂತೆ ನೋಡಿಕೊಳ್ಳುವುದಕ್ಕಾಗಿ
ಬಿಡದೆ ಸುಮ್ಮನೇ ಕುಡಿಯಬೇಕು ಮಾತ್ರ
ಏನನ್ನ ಕುಡಿಯುವುದು?
ವೈನ್, ಕಾವ್ಯ, ಋಜುತ್ವ
ಯಾವುದನ್ನಾದರೂ
ಕುಡಿಯಬೇಕು ಮಾತ್ರ.

ಇವರ ನೀಲು ಪಧ್ಯಗಳಿಂದ ಪ್ರೇರೆಪಿತನಾಗಿ ಬರೆದ ಕವಿತೆಗಳ ಸಂಕಲನ `ವಿನ್ಯಾಸದ ಹೊರಗೆ’ `ಜೋಳಿಗೆಯಲ್ಲೊಂದು ಅಗುಳು’ `ಇರುವೆ ನಡಿಗೆಯ ಸದ್ದು’ ಕೂಡಾ ಲಂಕೇಶರಿಗೆ ಗೌರವದ ಅರ್ಪಣೆ ಎನ್ನಬಹುದು. ಅವರಿಲ್ಲದ ಕಾಲ ನಮ್ಮಂಥವರನ್ನು ಬಹುವಾಗಿ ಕಾಡಿದರೂ ಅವರ ನಡಿಗೆಯ ಜತೆ ಇದ್ದೇ ಇರುತ್ತೇವೆ.

‍ಲೇಖಕರು admin

March 13, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಚಂದ್ರಪ್ರಭಾ ಬಿ.

    ಕೃಷ್ಣ ರಾಯಚೂರರ ಈ ನೆನಪುಗಳು ಆ ಕಾಲದ ಎಲ್ಲರ ನೆನಪುಗಳು ಹೌದು. ಲಂಕೇಶ್ ಮೇಷ್ಟ್ರು ಇನ್ನೂ ಇರಬೇಕಿತ್ತು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: