ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಲಂಕೇಶರನ್ನು ಮರೆಯುವ ಮುನ್ನ ಒಂದು ಟೀಕೆ-ಟಿಪ್ಪಣಿ – ಚಲಂ

ಚಲಂ

ನಮ್ಮ ನಾಡು ಕಂಡ ಅಚ್ಚರಿಗಳಲ್ಲಿ ಲಂಕೇಶ್ ಅಚ್ಚರಿಗಳಲ್ಲಿ ಅಚ್ಚರಿ.ಅವರು ನಾಡಿನ ತುಂಬಾ ಬೀಸಿ ಹೋದ ಪ್ರಜ್ಞಾವಂತಿಕೆಯ ಗಾಳಿ ಜೀವಂತಿಕೆಯನ್ನು ಸಾರುವಂತಿತ್ತು.ಪ್ರಜ್ಞಾವಂತಿಕೆಯನ್ನು ಗೇಲಿಯೆಂಬಂತೆ ನೋಡುತ್ತಿರುವ ಈ ಸಮಯದಲ್ಲಿ ಮತ್ತೆ ಅದೇ ಪ್ರಶ್ನೆ ಹುಟ್ಟಿಕೊಳ್ಳುತ್ತದೆ.ಧರ್ಮ ತನ್ನ ಮೂಗುದಾರ ಕಿತ್ತುಕೊಂಡು ಯರ್ರಾಬಿರ್ರಿ ಓಡುತ್ತಾ ಸಿಕ್ಕವರನ್ನು ತುಣಿಯುತ್ತಾ ಘಾಸಿಯಾದವರ ಛೀತ್ಕಾರ ಕೇಳುವ ಈ ಸಮಯದಲ್ಲಿ ಮತ್ತೆ ಅದೇ ಪ್ರಶ್ನೆ ಹುಟ್ಟಿಕೊಳ್ಳುತ್ತದೆ.ಸಾಹಿತಿಗಳೆನಿಸಿಕೊಂಡವರು ತಮ್ಮ ನಿಲುವಿನಲ್ಲಿ ಬದಲಾಗುತ್ತಾ,ಬದಲಾವಣೆಗೊಂದು ಸಮರ್ಥನೆ ನೀಡುತ್ತಾ,ಜನ ಅವರನ್ನು ನೋಡಿ ಮುಸಿಮುಸಿ ನಗುತ್ತಿರುವಾಗ,ದೇವನೂರು ಮಹಾದೇವರ ನಿಲುವಿನ ಬದ್ದತೆಯನ್ನು ಯಾವ ಚೌಕಟ್ಟಿಲ್ಲದೇ ವಾದಿಸುವಾಗ ಮತ್ತೆ ಅದೇ ಪ್ರಶ್ನೆ ಹುಟ್ಟಿಕೊಳ್ಳುತ್ತದೆ.
ಈ ವಿಚಾರಗಳಿಗೆ ಲಂಕೇಶರ ಪ್ರತಿಕ್ರಿಯೆ ಏನಾಗಿರುತ್ತಿತ್ತು..?
ಹೌದು ನಮ್ಮೆಲ್ಲರ ಗೊಂದಲದ ಪ್ರಶ್ನೆಗಳಿಗೆ ಲಂಕೇಶರ ಗೊಂದಲದ ವ್ಯಕ್ತಿತ್ವದಲ್ಲಿ ಉತ್ತರವಿದ್ದಂತೆ ಭಾಸವಾಗುತ್ತಿದೆ.ಇದಕ್ಕೆ ಲಂಕೇಶರು ಏನನ್ನುತ್ತಿದ್ದರು ಅನ್ನುವ ಪ್ರಶ್ನೆಯ ಹಿಂದೆಯೇ ನಾವು ಎಲ್ಲದಕ್ಕೂ ಪ್ರತಿಕ್ರಿಯಿಸುವುದನ್ನು ಬಿಟ್ಟಿದ್ದೇವಾ ಅನ್ನುವುದನ್ನೂ ಪ್ರಶ್ನಿಸಿಕೊಳ್ಳಬೇಕಿದೆ.ಹಲವು ದಶಕಗಳ ಕಾಲ ನಮ್ಮ ನಾಡಿನ ಸಾಕ್ಷಿಪ್ರಜ್ಞೆಯಂತೆ ನಡೆದುಹೋದ ಲಂಕೇಶರು ಕೆಲವನ್ನು ಕಲಿಸದೇ,ಕೆಲವನ್ನು ಕಲಿಯದೇ ಹೊರಟುಹೋದರು.ಅವರು ಹೋದ ಹಾದಿಯಿಂದ ಏನಾದರೂ ಪ್ರತಿಕ್ರಿಯೆಬರುತ್ತದಾ ಅಂತಾ ಕಣ್ಣು ಕೀಲಿಸಿಕೊಂಡು ಕುಳಿತಿದ್ದೇವೆ.
ಲಂಕೇಶರು ನಡೆದ ಹಾದಿ ನಮ್ಮ ಯುವಸಾಮುದಾಯಕ್ಕೆ ಸ್ಪೂತರ್ಿಯಾಗಬೇಕಿತ್ತು.ಅವರ ವಿಚಾರಗಳಿಂದ ಸ್ಪೂತರ್ಿ ಪಡೆದ ದೊಡ್ಡ ಪಡೆಯೇ ಇದೆ.ಆದರೆ ಅಲ್ಲಿ ಯಾರು ಅವರು ನಡೆದ ಹಾದಿಯಲ್ಲಿ ಯಾರು ನಡೆಯಲಿಲ್ಲ ಎಂಬುದೂ ಕೂಡ ಮುಖ್ಯ.ಮಾತಿನ ಮದ್ಯೆ ಲಂಕೇಶರನ್ನು ಕೋಟ್ ಮಾಡುವುದಷ್ಟೇ ಲಂಕೇಶರ ದಾರಿಯಲ್ಲ.ಲಂಕೇಶ್ ನಮ್ಮ ಸಮಾಜದಲ್ಲಿ ಕೊಂಚವಾದರೂ ವಿಚಾರವಂತಿಕೆಯಿದ್ದವನು ಹೇಗೆ ಬದುಕಬಹುದು ಎಂಬುದಕ್ಕೆ ಸ್ಪಷ್ಟ ಉದಾಹರಣೆಯಾಗಿದ್ದರು.ಅವರೂ ನಮ್ಮ ಸಮಾಜದಂತೆ ಗೊಂದಲಮಯವಾಗಿ ಬದುಕಿದರು.ಇದೇ ಸಮಾಜ ಅನ್ನುತ್ತಾ ನಡೆಯುತ್ತಿದ್ದ ಗಾಂದೀಬಜಾರಿನ ನಡುವಿನಿಂದ ಮಾತನಾಡಿದರು.ಅವರು ಗಾಂಧಿಬಜಾರಿನಿಂದ ಹೆಚ್ಚು ಮಾತನಾಡಿದರು ಎಂಬುದು ಅತೀ ಮುಖ್ಯವಾದ ವಿಚಾರ.

ಲಂಕೇಶರಂತೆ ಬದುಕುವುದು ಸುಲಭವಲ್ಲ.ಆಗಿನ ಕಾಲದಲ್ಲಿ ಕುಗ್ರಾಮದಿಂದ ಬಂದು ಓದಿಕೊಂಡ ಹುಡುಗರು ಯಾವುದ್ಯಾವುದೋ ಹುದ್ದೆಗಳನ್ನು ಅರಸುತ್ತಾ,ಪಾಠ ಮಾಡುತ್ತಾ ತಮ್ಮ ನೆಲಮೂಲವನ್ನು ಮರೆತು ತಾವು ಕಂಡ ಬಡತನವನ್ನು ತಮ್ಮ ಮಿತಿಗೆ ಮಾತ್ರ ಕಿತ್ತೊಗೆಯುತ್ತಾ ನಾಡಿನ ಶುದ್ದ ನಾಗರೀಕರಾಗಿ ನಡೆದುಕೊಳ್ಳುತ್ತಿದ್ದ ಸಮಯದಲ್ಲಿ ಲಂಕೇಶರು ತಮ್ಮ ಉಪನ್ಯಾಸಕ ಕೆಲಸಕ್ಕೆ ರಾಜೀನಾಮೆ ನೀಡಿ ಹೊರಬಂದರು.ಒಂದು ಸರ್ಕಾರಿ ನೌಕರಿಯನ್ನು ಬಿಟ್ಟುಬರುವುದೇ ನಿಜಕ್ಕೂ ಈ ಕಾಲದಲ್ಲಿ ಒಂದು ಕ್ರಾಂತಿ.
ಲಂಕೇಶ್ ಅಂದರೆ ಅವರದೇ ನೀಳ್ಗತೆ ಅಥವಾ ಪುಟ್ಟ ಕಾದಂಬರಿ ಅಥವಾ ಒಂದು ಜಟಿಲ ಪ್ರಭಂಧ ಅಥವಾ ಹಾಗೇ ಸುಮ್ಮನೇ ಓದಿಸಿಕೊಳ್ಳುವ ಪ್ಯಾಂಟಸಿಯಂತಹಾ ಕೃತಿ ಬಿರುಕುವಿನಲ್ಲಿನ ಬಸವರಾಜು.ನಾವು ನಮ್ಮ ಬದುಕಿನಲ್ಲಿ ಎಲ್ಲದಕ್ಕೂ ಒಂದು ಚೌಕಟ್ಟನ್ನು ಹಾಕಿಕೊಳ್ಳುತ್ತಾ ಮಾಡುವ ಕೆಲಸಗಳಿಗೆ ಕಾರಣಗಳನ್ನು ಆರೋಪಿಸುತ್ತಾ ಬದುಕುತ್ತಿರುವಾಗ ನಮ್ಮ ಬದುಕು ಹಾಗಿಲ್ಲ ಅಂತ ತೋರಿಸಿಕೊಡುವ ಕೃತಿ ಬಿರುಕು.ಅಲ್ಲಿ ಬಸವರಾಜುವಿಗಿರುವ ಗೊಂದಲ,ಆತಂಕ ಚಿತ್ತಾಲರ ‘ಶಿಕಾರಿ’ಯ ನಾಗಪ್ಪನ ಗೊಂದಲ ಆತಂಕವೂ ಒಂದೇ ರೀತಿಯಾಗಿ ಕಾಣುತ್ತಾ ನಾವು ಕನ್ನಡಿಯ ಮುಂದೆ ನಿಂತಂತೆ ಭಾಸವಾಗುವುದು ನಮ್ಮ ಬದುಕೂ ಕೂಡ ಅದೇ ರೀತಿಯಾಗಿ ಇರುವ ಕಾರಣಕ್ಕಾಗಿ.ಲಂಕೇಶ್ ಕೂಡ ಒಂದು ಹಿಡಿತಕ್ಕೆ ಸಿಕ್ಕರು ಅಂದುಕೊಳ್ಳುವಷ್ಟರಲ್ಲಿ ಮತ್ತೆಲ್ಲೋ ಯಾರನ್ನೋ ತಡವಿಕೊಂಡು ತಪ್ಪಿಸಿಕೊಳ್ಳುತ್ತಾ ಸಾಗಿರುತ್ತಿದ್ದರು.ಮತ್ತೆಲ್ಲೋ ನಮ್ಮ ಸಮಸ್ಯೆಗಳಿಗೆ ಉತ್ತರವಾಗಿ ಸಿಕ್ಕಿಬಿಡುತ್ತಾ ಆತ್ಮೀಯರಾಗುತ್ತಾ ಹೋದರು.
ಲಂಕೇಶರು ಮಾಡಿದ ಮತ್ತೊಂದು ಮಹತ್ತರವಾದ ಕೆಲಸವೆಂದರೆ ತಮ್ಮ ಫ್ಯಾಶನ್ನು ಅಥವಾ ಖಯಾಲಿಗಳಿಗೂ ಕೂಡ ಒಂದು ಮಟ್ಟಿನ ಘನತೆಯನ್ನು ತಂದುಕೊಟ್ಟಿದ್ದು.ಜೂಜಿನ ಬಗ್ಗೆ ಅವರಿಗಿದ್ದ ವ್ಯಾಮೋಹಕ್ಕೆ ನಮ್ಮಲ್ಲೂ ಸಹಾನೂಭುತಿ ಹುಟ್ಟಿಸಿವಂತೆ ಮಾಡುತ್ತಿದ್ದರು.ಕುದುರೆ ರೇಸಿನ ಹಲವು ಜಾಕಿಗಳ ಹೆಸರುಗಳ ಪರಿಚಯ ನಾಡಿಗಾದದ್ದು ಇವರಿಂದಲೇ ಅಂತ ಹೇಳಬಹುದು.ಅವ್ವ ಕಾದಂಬರಿಯಲ್ಲಿ ಬರುವ ಕುದರೆ ರೇಸಿನ ವ್ಯಸನಿ ಕೂಡ ನಮ್ಮಲ್ಲಿ ಸಹಾನೂಭೂತಿ ಗಿಟ್ಟಿಸಿಕೊಳ್ಳುತ್ತಾನೆ.ಲಂಕೇಶ್ ಬರೆದ ಅದೆಷ್ಟೋ ಪುಟಗಳ ಮದ್ಯೆ ಜೂಜು ಕೂಡ ಮನುಷ್ಯನ ಮೂಲಭೂತ ಅವಶ್ಯಕತೆಗಳಲ್ಲಿ ಒಂದು ಅಂತ ಬರೆದ ನೆನಪು.
ಲಂಕೇಶರು ಪತ್ರಿಕೆ ಮಾಡುವ ಮುನ್ನ ಸಿನೆಮಾ ಮಾಡಿದರು.ನಂತರ ಪತ್ರಿಕೆಯ ಜೊತೆಗೆ ಒಂದಷ್ಟು ಸಿನೆಮಾಗಳನ್ನು ಮಾಡಿದರು.ಅವಕ್ಕೆ ರಾಷ್ಟ್ರಮಟ್ಟದ ಪ್ರಶಸ್ತಿಗಳು ಬಂದವು.ಆದರೆ ಸಿನೆಮಾ ಲೋಕದ ಬಗ್ಗೆ ಲಂಕೇಶರಿಗೆ ಯಾವ ರೀತಿಯ ಕಲ್ಪನೆಯಿತ್ತೋ ಗೊತ್ತಿಲ್ಲ.ತಮ್ಮದೇ ಕತೆಗಳನ್ನು ಸಿನೆಮಾ ಮಾಡಿದ ಅವರು ಚಿತ್ರರಂಗದಲ್ಲೂ ಕೂಡ ಲಂಕೆಶ್ ಯುಗ ಅನ್ನುವಂತಹಾ ಸಿನೆಮಾಗಳನ್ನು ಮಾಡಬಹುದಿತ್ತು.ಅವರಿಗೆ ಇಡೀ ಚಿತ್ರರಂಗದ ಕಡೆಗೆ ಒಂದು ನಿದರ್ಿಷ್ಟ ನೋಟವಿತ್ತು.ನಮ್ಮ ದೇಶದ ಸಿನೆಮಾಗಳ ಜೊತೆಗೆ ಜಗತ್ತಿನ ಸಿನೆಮಾಗಳನ್ನು ನಾಡಿಗೆ ಹೊಸರೀತಿಯಲ್ಲಿ ಪರಿಚಯ ಮಾಡಿಕೊಟ್ಟ ಹಿರಿಮೆ ಅವರದು.ಜಾಗತಿಕ ಮಟ್ಟದ ಲೇಖಕರನ್ನು ನಮಗೆ ಪರಿಚಯಿಸಿದಂತೆ ಸಿನೆಮಾಗಳನ್ನು ನಟನಟಿಯರನ್ನು ಪರಿಚಯಿಸಿದರು.ಆದರೆ ಯಾಕೋ ಅವರು ಸಿನೆಮಾ ಎಂಬ ಮಾಯಾಬಜಾರಿನಲ್ಲಿ ತಮ್ಮ ಅಭಿರುಚಿಯ ಕ್ಷೇತ್ರವನ್ನು ಬಿಡಬಾರದೆಂಬಂತೆ ಒಂದು ಸುತ್ತು ಅಡ್ಡಾಡಿ ಬಂದರು.ಈಗಲೂ ನಮಗೆ ಈಗ ಸಿನೆಮಾವೆಂದರೆ ಕೆಂಪಾದವೊ ಎಲ್ಲಾ ಕೆಂಪಾದವೋ..ಹಾಡಷ್ಟೇ ನೆನಪಾಗುತ್ತದೆ.
ಲಂಕೇಶ್ ಪತ್ರಿಕೆ ಅಂತ ತಮ್ಮ ನಾಮದೇಯವನ್ನಿಟ್ಟುಕೊಂಡು ಪತ್ರಿಕೆ ಶುರು ಮಾಡಿದಾಗ ಇಡೀ ನಾಡಿನಲ್ಲಿ ಹೊಸಸಂಚಲನವನ್ನುಂಟು ಮಾಡಿತ್ತು.ಅದಕ್ಕೂ ಮುನ್ನ ಅವರು ಪ್ರಜಾವಾಣಿಗೆ ಅಂಕಣ ಬರೆಯುತ್ತಿದ್ದರು.ಅಲ್ಲಿ ಒಂದು ಅಂಕಣದ ಮೂಲಕವೇ ತಮ್ಮದೇ ಆದ ಒಂದು ಓದುಗರ ವಲಯವನ್ನು ಹುಟ್ಟುಹಾಕಿದ್ದರು.ಪತ್ರಿಕೆ ಶುರು ಮಾಡುವ ಹೊತ್ತಿಗೆ ತಮ್ಮ ಹೆಸರಿಗೆ ತಕ್ಕಂತೆ ಹಲವು ತಲೆಗಳನ್ನು ನಾಡಿಗೆ ತೋರಿಸಿದ್ದರು.ಅವರು ಒಂದು ನಿಲುಗಡೆಗೆ ಅಂತ ಬಂದದ್ದು ಲಂಕೇಶ್ ಪತ್ರಿಕೆಯಲ್ಲೇ.ಅಬ್ಬಾ ಇಲ್ಲಿಗೆ ಮುಗಿಯಿತಲ್ಲಾ ಅಂತ ಅವರ ಹೆಂಡತಿ ಇಂದಿರಾರವರು ನಿಟ್ಟುಸಿರುಬಿಟ್ಟಿರಬಹುದು.ಯಾಕೆಂದರೆ ಲಂಕೇಶರನ್ನು ಅಭಿರುಚಿ ಎಂಬೋ ಫ್ಯಾಶನ್ನು,ಫ್ಯಾಶನ್ನು ಎಂಬೋ ವಿಚಾರವಂತಿಕೆ,ಹೀಗೆ ಗೊಂದಲಮಯವಾದ ವ್ಯಕ್ತಿತ್ವದ ಕೆಲಸಗಳನ್ನು ದೂರ ನೋಡಿದವರಿಗೆ ಚಂದ.ಜೊತೆಯಲ್ಲೇ ಸಾಗಿದವರಿಗೆ ಅದರ ತಾಪ ಬೇಗನೇ ತಾಗುತ್ತದೆ.
ನಂತರ ಪತ್ರಿಕೆ ಶುರುವಾದ ಮೇಲೆ ನಡೆದದ್ದು ಮಾತ್ರ ಇತಿಹಾಸವೇ.ಲಂಕೇಶರ ದೈತ್ಯಶಕ್ತಿಯ ಅನಾವರಣವಾದ್ದದ್ದು ಅಲ್ಲಿಯೇ.ಅದಕ್ಕೆ ಬೇಕಾದ ಸ್ಪೇಸ್ ಕೂಡ ಪತ್ರಿಕೆಯಲ್ಲಿತ್ತು.ಈ ಸಂಚಿಕೆ,ಟೀಕೆ-ಟಿಪ್ಪಣಿ,ಮರೆಯುವ ಮುನ್ನ,ನಿಮ್ಮಿ ಕಾಲಂ,ನೀಲು,ಕೇಳಿ,ತುಂಟಾಟ,ಹೀಗೇ ವಿಸ್ತಾರವಾಗಿ ಲಂಕೇಶ್ ತೆರೆದುಕೊಳ್ಳುತ್ತಾ ಹೋದರು.ಲಂಕೇಶ್ ಪತ್ರಿಕೆ ಈ ರೀತಿಯ ಬರಹಗಳ ಜೊತೆಗೆ ರಾಜಕೀಯ ವಿಶ್ಲೇಷಣೆಗಳ ಮೂಲಕವೂ ಅತಿದೊಡ್ಡ ಸಂಚಲನವನ್ನು ಉಂಟುಮಾಡಿತು.ಒಂದು ಪತ್ರಿಕೆ ಒಂದು ಸಕರ್ಾರವನ್ನು ಕೆಡವಬಲ್ಲುದು ಎಂಬ ಮಾತನ್ನು ನಿಜ ಮಾಡಿದ ಕೀತರ್ಿ ಲಂಕೇಶರದ್ದು.
ಲಂಕೇಶ್ ರಾಜಕೀಯ ಸುದ್ದಿ ವಿಶ್ಲೇಷಕರಾಗಿ ಈ ರೀತಿಯಾಗಿ ಬೆಳೆಯುತ್ತಿರುವಾಗಲೇ ಅವರಿಗೆ ರಾಜಕೀಯದಷ್ಟೇ ಮುಖ್ಯವಾದುದು ನಮ್ಮ ಸಂಸ್ಕ್ರತಿ,ಸಾಹಿತ್ಯ,ಕ್ರೀಡೆ,ಮನರಂಜನೆ ಎಂಬುದನ್ನು ಮರೆಯಭಾರದು ಎಂಬುದನ್ನು ಒತ್ತಿಹೇಳಿದರು.ಇದೆಲ್ಲಾ ಗೊಂದಲ ಅಂತ ಅನ್ನಿಸುವಷ್ಟರಲ್ಲಿ ಲಂಕೇಶ್ ನಾಡಿನ ಒಂದು ಅದ್ಭುತವನ್ನು ಸೃಷ್ಟಿಮಾಡಿಹೋಗಿದ್ದರು.
ಲಂಕೇಶ್,ತೇಜಸ್ವಿ,ರಾಮದಾಸ್,ಹೀಗೆ ನಮ್ಮ ನಡುವೆ ಹೇಗೆ ಬದುಕಬೇಕು..?ಎಷ್ಟು ಸಂವೆದನಾಶೀಲರಾಗಿರಬೇಕು ?ಎಷ್ಟರ ಮಟ್ಟಿಗೆ ಸ್ಪಂದನಾಶೀಲರಾಗಿರಬೇಕು ?ಮತ್ತು ಮುಖ್ಯವಾಗಿ ರಾಜಿಯಿಲ್ಲದೇ ಹೇಗೆ ರಚನಾತ್ಮಕವಾಗಿ ಬದುಕಬೇಕು ಎಂಬುದನ್ನು ತೋರಿಸಿಕೊಟ್ಟವರು.
ಲಂಕೇಶರು ವಾದ ಪ್ರತಿವಾದಗಳಲ್ಲಿ ನಂಬಿಕೆಯಿಟ್ಟಿದ್ದರು.ಅವು ಏಕತಾನತೆಯಿಂದ ಬೋರು ಹೊಡೆಸಬಾರದು ಎಂಬ ಕಾರಣಕ್ಕಾಗಿ ಅವು ಜಗಳದ ರೂಪವನ್ನು ಪಡೆದುಕೊಳ್ಳುತ್ತಿದ್ದವು.ಲಂಕೇಶ್ ಒಮ್ಮೊಮ್ಮೆ ಏಕಾಂಗಿಯಾಗಿ,ಕೆಲವೊಮ್ಮೆ ತಮ್ಮ ಶಿಷ್ಯಪಡೆಯ ಮುಖೇನ ಯುದ್ದಕ್ಕೆ ಹೋಗಿರುವುದುಂಟು.ಇದರಿಂದ ನಾಡಿಗೆ ಉಪಕಾರವೇ ಆಗಿದೆ.
ಈಗ ಬಹುಮುಖ್ಯವಾದ ಪ್ರಶ್ನೆಯೆಂದರೆ ನಮ್ಮ ನಾಡಿನಲ್ಲಿ ಈಗಲೂ ಇರುವ ಅವರ ಒಡನಾಡಿಗಳು,ಅವರಿಂದ ಪ್ರೇರಿತರಾದವರು,ಅವರನ್ನು ಮೆಚ್ಚಿದವರು ಅದೆಷ್ಟರ ಮಟ್ಟಿಗೆ ಸಮಾಜದ ವಿದ್ಯಾಮಾನಗಳಿಗೆ ಸ್ಪಂದಿಸುತ್ತಿದ್ದಾರೆ?ಪ್ರತಿಕ್ರಿಯಿಸುತ್ತಿದ್ದಾರೆ?ಅವರು ಬದುಕಿನಲ್ಲಿ ಪ್ರಶ್ನಿಸಿಕೊಂಡಂತೆ ಮೌಲ್ಯಗಳ ಬಗ್ಗೆ ವಿಚಾರಿಸಿಕೊಂಡವರೆಷ್ಟು ಮಂದಿ ?ಎಂಬುದನ್ನು ಗಮನಿಸಬೇಕು.ಇಂತಹಾ ಒಂದು ಆತ್ಮಾವಲೋಕನ ನಡೆಯದೇ ಇದ್ದರೆ ಮತ್ತೆ ಅದೇ ಪ್ರಶ್ನೆ ಲಂಕೇಶರು ಇದ್ದಿದ್ದರೆ ಅವರ ಪ್ರತಿಕ್ರಿಯೆ ಏನಿರುತ್ತಿತ್ತು..? ಎಂಬಲ್ಲಿಗೆ ಮುಗಿಯುತ್ತದೆ.ಯಾವ ಕ್ರಿಯೆ,ಪ್ರತಿಕ್ರಿಯೆ ನಡೆಯುವುದಿಲ್ಲ.

‍ಲೇಖಕರು G

25 January, 2015

3 Comments

  1. ಅಕ್ಕಿಮಂಗಲ ಮಂಜುನಾಥ

    ಲಂಕೇಶರ ವ್ಯಕ್ತಿತ್ವವನ್ನು ಹೇಳುವ ಲೇಖನ ತುಂಬಾ ಚೆನ್ನಾಗಿದೆ. ಹಿಂದೆ ಅವರ ಜೊತಗಿದ್ದು ಜಗಳವಾಡುತ್ತಿದ್ದ ಮತ್ತು ಸ್ಪಂದಿಸುತ್ತಿದ್ದ ಚಂ.ಪಾ, ಕುಂ.ವೀ . ರಂತಹ ಅನೇಕ ಲೇಖಕರು ಈಗಲೂ ನಮ್ಮ ನಡುವೆ ಸಮಾಜದ ವಿದ್ಯಮಾನಗಳಿಗೆ ಸ್ಪಂದಿಸುತ್ತಿದ್ದಾರೆ.

  2. Somashekhar Rachaiah

    ಈಗ ತಾನೇ ‘ಮರೆಯುವ ಮುನ್ನ’ ಸಂಪುಟಗಳನ್ನು ಓದಿ ಮುಗಿಸಿದೆ. ಈ ಲೇಖನಗಳನ್ನು ‘ಲಂಕೇಶ್ ಪತ್ರಿಕೆ’ಯಲ್ಲಿ ಓದುತ್ತಿದ್ದಾಗ ಅವರ ವ್ಯಕ್ತಿ/ಪುಸ್ತಕ ವಿಮರ್ಶೆಗಳಲ್ಲಿನ ಅವರ ಕೆಲವು ಅನಿಸಿಕೆಗಳು ಬಹುಪಾಲು ಅವರ anti-ವೈದಿಕ ನಿಲುವಿನಿಂದ ಬಂದವೇನೋ ಎನಿಸುತ್ತಿತ್ತು. ಈಗ ಅದನ್ನು ಓದಿದಾಗ ಅವು ಅದೆಷ್ಟು ವಸ್ತುನಿಷ್ಠವಾಗಿವೆ ಎನಿಸಿತು. ಲಂಕೇಶ್ ಇಲ್ಲವಾಗಿ ೧೫ ವರ್ಷ ಆಯಿತು ಎಂದು ನಂಬಲೇ ಆಗುತ್ತಿಲ್ಲ. ಅವರು ಬಿಟ್ಟು ಹೋಗಿರುವ ಬರಹ/ ಚಿಂತನೆಗಳಿಗೆ ಸಾವಿಲ್ಲ

  3. ಶ್ವೇತಾ.ಎ

    ಲಂಕೇಶರ ಬರಹದ ಬಗ್ಗೆ ಬೆಳಕು ಚೆಲ್ಲುವ ಈ ಲೇಖನ ನಿಜಕ್ಕೂ ಸ್ವಾಗತರ್ಹ…..ಈ ಪ್ರತಿಭೆಯ ಅನಾವರಣ,ತಿಳಿಯದವರಿಗೂ ತಿಳಿಸಿ ಲಂಕೇಶರ ಬಗ್ಗೆ ಗೌರವ ಅಭಿಮಾನ ಮೂಡಿಸುವ ಮುನ್ನುಡಿಯಾಗಿದೆ…..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading