ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರೊಕ್ಕ ಅವರ್ ಜೇಬಿಗೆ ಇಳಿಸಿದ್ರಾ ಅವರ್ ಹೆಂಡ್ತಿ ಮಕ್ಕಳನ್ನಾ ಕೂಡ ಬರ್ಕೊಡ್ತಾರಾ..

ಕಾಣದ ಕಡಲಿಗೆ ಹಂಬಲಿಸಿದೆ ಮನ..

ಹೆಜ್ಜೆ 13

ಗಾಯತ್ರಿ ಮಠದಂಗಳದಲ್ಲಿ

avadhi-column-rahul bw-edited2

ಬೆಳಗ್ಗೆ ಎದ್ದಾಗ ಗಾಯತ್ರಿ ಮಾತೆಗೆ ಮಹಾ ಮಂಗಳಾರತಿ ಮಾಡುತ್ತಿದ್ದುದು ಮಂತ್ರಪಠಣದಿಂದ ಗೊತ್ತಾಯಿತು. ಬೆಳಗಿನ ಉಪಹಾರದ ನಂತರ ನನಗೆ ಏನು ಕೆಲಸವಿಲ್ಲದಿದ್ದರಿಂದ ಮಠವನ್ನು ಒಂದು ಸುತ್ತು ಹೊಡೆದು ಬಂದೆ.

ವಿಸ್ತಾರವಾದ ವಾಹನ ನಿಲ್ದಾಣ, ಪಾದರಕ್ಷೆ ಬಿಡಲು ಪ್ರತ್ಯೇಕ ಸ್ಥಳ, ಒಳಹೊಕ್ಕು ಬಲಕ್ಕೆ ತಿರುಗಿದರೆ ಸ್ವಚ್ಛ ಕೊಳದಲ್ಲಿ ನಿರುಮ್ಮಳವಾಗಿ ಈಜುತ್ತಿದ್ದ ವಿವಿಧ ಜಾತಿಯ ಆಮೆಗಳು, ಚೆಂದದ ನಿರ್ವಹಣೆ ಮಾಡಿದ ಉದ್ಯಾನ, ಸುಸಜ್ಜಿತ ಕೊಠಡಿ ಮತ್ತು ಕಟ್ಟಡಗಳ ಮಧ್ಯೆ ದೇವಾಲಯಗಳು, ಗುಡಿಗಳು. ಸುತ್ತಲೂ ಚಪ್ಪಡಿಕಲ್ಲಿನ ನೆಲ ಹಾಸು. ಎಲ್ಲವೂ ಬಿಳಿ ಬಣ್ಣದಿಂದ ಕಂಗೊಳಿಸುತ್ತಿದ್ದವು. ಜ್ಞಾನ, ವಸತಿ ಮತ್ತು ದಾಸೋಹಕ್ಕೆ ಇಲ್ಲಿ ಕೊರತೆಯೇನಿರಲಿಲ್ಲ. ಗಾಯತ್ರಿ ಮಠವು ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಊಟ, ವಸತಿ ಕಲ್ಪಿಸಿ ಅವರ ಪೂರ್ಣ ವಿದ್ಯಾಭ್ಯಾಸದ ಖರ್ಚನ್ನು ಹೊತ್ತುಕೊಂಡಿದೆ. ಮಾನವೀಯತೆಯನ್ನು ಮೆರೆಯುವ ಇಂತಹ ಸಂಸ್ಥೆಗಳ ಕೆಲಸ ತುಂಬಾ ಪ್ರಶಂಸನೀಯವಾದದ್ದು.

ಮುಂದೇನು ಮಾಡುವುದು ಎಂದು ತಿಳಿಯದೆ ಒಂದೆರಡು ಗಂಟೆ ನಿದ್ರೆ ಹೊಡೆದೆ. ಭಕ್ತಾದಿಗಳ ಗಲಾಟೆಯಿಂದ ಎಚ್ಚರವಾಗಿ ಹೊರಗೆ ಬಂದು ನೋಡಿದರೆ ದಾನಿಗಳ ಸೇವೆಯ ಪ್ರಯುಕ್ತ ಭರ್ಜರಿ ದಾಸೋಹ ನಡೆಯುತ್ತಿತ್ತು. ಹೋಗಿ ಕೇಸರಿ ಬಾತ್, ಪಲ್ಯ, ಅನ್ನ ಸಾಂಬಾರ್, ಮೊಸರನ್ನ ಬಾರಿಸಿ ಬಂದೆ. ಊಟ ಜಾಸ್ತಿಯಾಗಿ ಆಲಸ್ಯ ಮೂಡಿತ್ತು.

avadhi- column- rahul- low res- editedಬುದ್ಧಿಯಿಲ್ಲದ ಮೆದಳು,

ಪ್ರೀತಿಯಿಲ್ಲದ ಮನಸ್ಸು,

ಕಾಯಕವಿಲ್ಲದ ದೇಹ,

ಸೇವೆಯಿಲ್ಲದ ಗುಣ,

ಗುರಿಯಿಲ್ಲದ ಜೀವನ,

ಮಣ್ಣಿನೊಳಗಿರುವ ಹೆಣಕ್ಕೆ ಸಮಾನವಲ್ಲವೇ? ಓ ಪ್ರಕೃತಿ

ನಾ ಮಾಡುತ್ತಿರುವ ಕೆಲಸಗಳು ನನ್ನ ಮನೆಯವರಿಗೆ ಇಷ್ಟವಾಗದೇ ಇರುವುದು ನನಗೆ ಬಹಳ ಬೇಸರ ತಂದಿತ್ತು. ಎಲ್ಲರಿಗೂ ಅವರ ಜೀವನದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳಿಗೆ ಸಂಪೂರ್ಣ ಸ್ವಾತಂತ್ರ್ಯವಿರಬೇಕು. ಉಳಿದವರಿಗೆ ಅದನ್ನು ಪ್ರಶ್ನಿಸುವ ಹಕ್ಕು ಇರುವುದಿಲ್ಲ ಎನ್ನುವುದು ನನ್ನ ಅನಿಸಿಕೆ.

ಹುಟ್ಟಿದಾಗ ಮಗನಾದೆ,

ಬೆಳೆಯುತ್ತಾ ಅಣ್ಣನಾದೆ,

ಕಲಿಯುತ್ತಾ ಸ್ನೇಹಿತನಾದೆ,

ದಾಂಪತ್ಯದಲ್ಲಿ ಗಂಡನಾದೆ,

ಹೆಣ್ಣುಕೊಟ್ಟವರ ಅಳಿಯನಾದೆ,

ವೃದ್ಧರ ಮೊಮ್ಮಗನಾದೆ,

ಇವೆಲ್ಲಕ್ಕಿಂತ ಮಿಗಿಲಾದುದು,

ನನ್ನೊಳಗಿನ ಮನುಷ್ಯನಾಗುವುದಲ್ಲವೇ? ಓ ಪ್ರಕೃತಿ

ಸಂಜೆಯ ಹೊತ್ತಿಗೆ, ನನಗೆ ಸಮಯ ಕಳೆಯಲು ಸಾಕು ಸಾಕಾಗಿ ಹೋಗಿತ್ತು. ಮಠದ ನಿರ್ವಹಣೆ ಹೊತ್ತವರನ್ನು ಭೇಟಿಯಾಗಿ, ಮಠದ ಆವರಣವನ್ನು ಸ್ವಚ್ಛಮಾಡಲು ಅನುಮತಿ ಕೊಡುವಂತೆ ವಿನಂತಿಸಿಕೊಳ್ಳಬೇಕು ಎಂದೆನಿಸಿತು. ಇನ್ನು ಮುಂದಿನ ಜೀವನ ನನಗೆ ಕೂರಲು ಬಿಡದೆ, ಮುಂದೆ ಬರೀ ಅಸ್ಥಿರ, ಅಶಾಂತ, ಅಸ್ಥಿಮಿತವಾದ ಪಯಣವಾಗಿರುತ್ತದೆ ಎಂದೆನಿಸತೊಡಗಿತು. ಸಂಜೆಯ ಪಲ್ಲಕ್ಕಿ ಉತ್ಸವ ಮತ್ತು ಭಜನೆಯಲ್ಲಿ ಭಾಗಿಯಾದರೂ ಕೂಡ, ನನ್ನ ಗಮನ ಒಂದು ಕಡೆ ನಿಲ್ಲುತ್ತಿರಲಿಲ್ಲ. ಅನೇಕಾನೇಕ ಚಿಂತನೆಗಳು ನನ್ನೊಳಗೆ ಹೋಗಿ ತಲೆಭಾರವಾಗಿತ್ತು. ಐವತ್ತು ಕಿಲೋ ಅಕ್ಕಿ ಮೂಟೆಯೊಳಗೆ ಎಪ್ಪತ್ತು ಕಿಲೋ ಅಕ್ಕಿಯನ್ನು ತುರುಕಿ ತುಂಬಿದರೆ ಹೇಗಾಗುತ್ತದೋ, ಅದೇ ರೀತಿಯಾಗಿತ್ತು ನನ್ನ ಮೆದಳು.

ಇನ್ನು ಮನೆಯವರ ಚಿಂತೆ ಕಾಡಿ ನನ್ನ ಕಣ್ಣಾಲಿಗಳು ತೇವವಾಗುತ್ತಿದ್ದವು. ಭಜನೆಯಾದ ಮೇಲೆ ಊಟ ಮಾಡಲು ಮನಸ್ಸಾಗಲಿಲ್ಲ. ಹೊರಗೆ ಹೋಗಿ ಹಣ್ಣುಕಾಯಿ ಮಾರುವ ಗಂಗಮ್ಮನ ಹತ್ತಿರ ಎರಡು ಸೀಬೆಹಣ್ಣು ಮತ್ತು ಎರಡು ಬಾಳೆಹಣ್ಣು ತಿಂದು ಅವಳ ಕುಶಲೋಪರಿ ವಿಚಾರಿಸಿದೆ. ಅವಳಿಗೆ ಪ್ಲಾಸ್ಟಿಕ್‍ನಿಂದ ಆಗುವ ದುಷ್ಪರಿಣಾಮಗಳನ್ನು ವಿವರಿಸಿ, ಆದಷ್ಟು ಪ್ಲಾಸ್ಟಿಕ್ ಕವರ್‍ಗಳನ್ನು ಬಳಸದೆ ಹಣ್ಣು, ಕಾಯಿ, ಹೂವನ್ನು ಗಿರಾಕಿಗಳ ಬ್ಯಾಗಿಗೆ ಅಥವಾ ಒಂದು ಮರದ ಬುಟ್ಟಿಯಲ್ಲಿಟ್ಟು ಕೊಡುವಂತೆ ವಿನಂತಿಸಿ ಕೊಠಡಿಗೆ ಮರಳಿ ನಿದ್ರೆಗೆ ಜಾರಿದೆ.

ಬೆಳಗ್ಗೆ ಎದ್ದಾಗ ತಲೆ ಸಿಡಿಯುತ್ತಿತ್ತ್ತು. ತಲೆನೋವಲ್ಲ, ಏನೋ ಒಂದು ತರಹ ಆಲಸ್ಯ. ಹೀಗೆ ಕುಳಿತರೆ ಈ ದಿನವೂ ಹಾಳಾಗುತ್ತದೆಂದು ತಿಳಿದು, ಎದ್ದು ಮುಖ ತೊಳೆದು ಉಪಹಾರ ಮುಗಿಸಿ, ತಲೆಯ ಕೂದಲು ಕ್ಷೌರ ಮಾಡಿಸಲು, ಕ್ಷೌರಿಕನನ್ನು ಹುಡುಕಿಕೊಂಡು ರಾಮನಕೊಪ್ಪಗೆ ಹೋದರೆ, ಕ್ಷೌರಿಕನ ಅಂಗಡಿಗೆ ಬೀಗ ಜಡಿದಿತ್ತು. ಅಲ್ಲಿಂದ ಸುಮಾರು ಮೂರು ಮೈಲುಗಳ ದೂರದ ಶಿರಸಿಗೆ ಹೋಗುವ ದಾರಿಯಲ್ಲಿದ್ದ ತಡಸ ಎಂಬ ಗ್ರಾಮಕ್ಕೆ ಹೋಗಬೇಕಾಗಿತ್ತು. ಜೇಬಿನಲ್ಲಿ ಇನ್ನಷ್ಟು ರೊಕ್ಕ ಇಟ್ಟುಕೊಂಡು, ಕೈಯಲ್ಲಿ ಕೊಡೆ ಹಿಡಿದುಕೊಂಡು ಹೊರಟೆ. ಬೆಳಗಿನ ತುಂತುರು ಜಡಿ ಮಳೆಯಲ್ಲಿ ನಡೆದು ಹೋಗುವುದೇ ಒಂದು ಉತ್ಸಾಹ. ಹೋಗುವ ದಾರಿಯಲ್ಲಿ ತನ್ನ ಹೊಲಕ್ಕೆ ಹೋಗುತ್ತಿದ್ದ ಒಬ್ಬ ಅಜ್ಜ ನಡೆಯಲು ಜೊತೆಯಾದ. ದೂರದಲ್ಲಿ ಕಂಡ ಗುಡ್ಡ ಕೊರೆತದ ಬಗ್ಗೆ ವಿಚಾರಿಸಿದೆ.

“ಅಜ್ಜಾ, ಆ ಗುಡ್ಡದ ಕಥೆ ಏನು? ಯಾಕಾಗಿ ಅದನ್ನು ನೆಲಸಮ ಮಾಡುತ್ತಿದ್ದಾರೆ?” ಎಂದು ಈಗಾಗಲೇ ಅರ್ಧ ಗುಡ್ಡವನ್ನು ನುಂಗಿಹಾಕಿದ್ದರ ಕಡೆಗೆ ನನ್ನ ಕೈತೋರಿಸಿ ಕೇಳಿದೆ.

“ಅದಾ ರೀ, ಯಾರೋ ರೊಕ್ಕ ಇರೋ ಮಂದಿ ಆ ಗುಡ್ಡಾನ ಒಡೆದು ಜಮೀನು ಮಾಡಕ್ ಹತ್ತಾರೀ”ಎಂದ.

“ಅದು ಸರ್ಕಾರದ ಆಸ್ತಿಯಲ್ಲವೇ. ಅವರ ಹೆಸರಿಗೆ ಹೇಗೆ ಖಾತೆ ಮಾಡಿಸುತ್ತಾರೆ?” ಎಂದು ಕುತೂಹಲದಿಂದ ಕೇಳಿದೆ.

“ರೊಕ್ಕ ಇದ್ರಾ ಏನ್ ಬೇಕಾದ್ರು ಮಾಡ್ತಾರೀ. ನೀವ್ ರೊಕ್ಕ ಅವರ್ ಜೇಬಿಗೆ ಇಳಿಸಿದ್ರಾ ಅವರ್ ಹೆಂಡ್ತಿ ಮಕ್ಕಳನ್ನಾ ಕೂಡ ಬರ್ಕೊಡ್ತಾರಾ” ಎಂದು ತಮಾಷೆಯಾಗಿ ಹೇಳಿದ.

ನಾನು ನಕ್ಕು ಸಮ್ಮತಿಸಿದೆ. ಅವನ ಹೊಲದ ದಿಕ್ಕಿಗೆ ತಿರುಗಿ ಹೊರಟು ಹೋದ. ಅಪರೂಪಕ್ಕೆ ಅಡಿಕೆಯ ತೋಟ ಕಂಡಿತು. ವಿಪರ್ಯಾಸ ಎಂದರೆ ಉತ್ತರ ಕರ್ನಾಟಕದಲ್ಲಿ ಬಳಸುವ ಅಡಿಕೆಯನ್ನು ಹಳೇ ಮೈಸೂರು, ದಕ್ಷಿಣ ಕನ್ನಡ, ಮಲೆನಾಡಿನಿಂದ ತರುತ್ತಾರೆ. ಇಲ್ಲಿ ಅಡಿಕೆ ಬೆಳೆಯುವುದು ಅತೀ ಕಡಿಮೆ. ಎಲ್ಲೆಲ್ಲಿ ಅಡಿಕೆ ಬೆಳೆಯುವರೋ ಅಲ್ಲಿ ಅಡಿಕೆಯ ಬಳಕೆ ಸುಮಾರು. ಸಭೆ ಸಮಾರಂಭಗಳಲ್ಲಿ ಊಟವಾದ ನಂತರದ ತಾಂಬೂಲಕ್ಕಷ್ಟೇ ಸೀಮಿತ.

peopleಸ್ವಲ್ಪ ದೂರ ನಡೆದು ಎಡಕ್ಕೆ ತಿರುಗಿ ನೋಡಿದರೆ, ಬೀಸುತ್ತಿದ್ದ ಗಾಳಿಯಿಂದ ತನ್ನ ಬೃಹತ್ತಾದ ರೆಕ್ಕೆಗಳನ್ನು ಜೋರಾಗಿ ತಿರುಗಿಸಿ ವಿದ್ಯುತ್ ಶಕ್ತಿಯನ್ನು ತಯಾರಿಸುವ ನೂರಾರು ಯಂತ್ರಗಳು ನನ್ನ ಕಣ್ಣಿಗೆ ಬಿದ್ದವು. ಬೆಟ್ಟಗಳ ನಡುವಿನಿಂದ ಬೀಸುವ ಗಾಳಿಗೆ ಎಷ್ಟು ಗಾಂಭೀರ್ಯದಿಂದ ತಿರುಗುತ್ತಿವೆ ಎನಿಸಿತು. ಜಗತ್ತೆಲ್ಲಾ ಅಣು, ಕಲ್ಲಿದ್ದಲು ಸ್ಥಾವರಗಳಿಗೆ ದೊಡ್ಡ ಸಲಾಮ್ ಹೇಳಿ ಪರಿಸರ ಪ್ರಿಯವಾದ ಗಾಳಿ, ಸೂರ್ಯನ ಕಿರಣ ಹಾಗೂ ಜಲದಿಂದ ವಿದ್ಯುತ್ ಶಕ್ತಿ ತಯಾರಿಸುವ ತಂತ್ರಜ್ಞಾನದ ಕಡೆಗೆ ಹೋಗುತ್ತಿದ್ದರೆ, ನಮ್ಮ ದೇಶದವರು ಪರಮಾಣು ತಂತ್ರಜ್ಞಾನಕ್ಕಾಗಿ ಕಂಡ ಕಂಡ ದೇಶಗಳ ಮುಂದೆ ತಮ್ಮ ಎರಡೂ ಹಸ್ತ ಚಾಚಿ ಭಿಕ್ಷೆ ಬೇಡುತ್ತಿದ್ದಾರೆ ಎಂಬ ಯೋಚನೆಯಲ್ಲೇ ನಡೆದು ತಡಸ ಗ್ರಾಮವನ್ನು ತಲುಪಿದೆ.

ಹುಡುಕಿದಾಗ ಮೂರ್ನಾಲ್ಕು ಕ್ಷೌರಿಕನ ಅಂಗಡಿಗಳು ಕಾಣಿಸಿದವು. ಇರುವುದರಲ್ಲಿ ಉತ್ತಮವಾದುದನ್ನು ಆರಿಸಿಕೊಂಡು ಹೋಗಿ ಕುಳಿತೆ. ಬರೀ ತಲೆ ಕೂದಲಿಗೆ ಕತ್ತರಿ ಹಾಕಿ, ಗಡ್ಡವನ್ನು ಹಾಗೇ ಬಿಡುವಂತೆ ತಾಕೀತು ಮಾಡಿದೆ. ಅವನ ಕೆಲಸ ಪರವಾಗಿಲ್ಲ ಎನಿಸಿತು. ಊರ ಜನರು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಲಕ್ಷ ಲಕ್ಷ ಖರ್ಚು ಮಾಡಿದ ಅಭ್ಯರ್ಥಿಗಳ ಬಗ್ಗೆ ಮಾತನಾಡಿಕೊಳ್ಳುತ್ತಿದ್ದರು. ಜನರು ಸ್ವಾಭಿಮಾನ ಕಳೆದುಕೊಂಡಿದ್ದು, ಅದನ್ನು ಮತ್ತೆ ಎತ್ತಿ ಹಿಡಿಯಬೇಕಾದ ತುರ್ತು ಅವಶ್ಯಕತೆಯಿದೆ ಎನಿಸತೊಡಗಿತು.

ರಂಜಾನ್ ಮುಗಿಸಿ ಕೆಲವರು ತಮ್ಮ ವೃತ್ತಿಯಲ್ಲಿ ತೊಡಗಿದ್ದರೆ, ಹಲವರು ಕಾರು, ಲಾರಿಗಳಲ್ಲಿ ಜನರನ್ನು ತುಂಬಿಸಿಕೊಂಡು ವಿಹಾರಕ್ಕೆ ಹೊರಟಿದ್ದು ಕಾಣಿಸಿತು. ವಾಪಸ್ಸು ಬರುವಾಗ ನನ್ನ ಮನಸೆಲ್ಲಾ ಜನರೊಳಗೆ ಮಲಗಿರುವ ಸ್ವಾಭಿಮಾನವನ್ನು ಹೇಗೆ ಬಡಿದೆಬ್ಬಿಸಬೇಕು ಎಂದು ಯೋಚಿಸ ತೊಡಗಿತು. ನಾನು ಈಗ ಮೈಸೂರು ತಲುಪುವಷ್ಟರಲ್ಲಿ ಹತ್ತಾರು ಹಳ್ಳಿಗಳನ್ನು ಸುತ್ತಿದಂತಾಗುತ್ತದೆ. ಹಳ್ಳಿಗರ ನಾಡಿಮಿಡಿತವನ್ನು ಸ್ವಲ್ಪವಾದರು ಅರಿತು ಒಂದು ಕೂಲಂಕುಶವಾದ ಯೋಜನೆಯನ್ನು ಸಿದ್ಧಪಡಿಸಬೇಕು ಎಂದುಕೊಂಡೆ. ಸರ್ಕಾರ ಯಾರ ಅಪ್ಪನ ಮನೆಗಳಿಂದಲೂ ಹಣ ತಂದುಕೊಡುವುದಿಲ್ಲ. ಸರ್ಕಾರಗಳು ನಮ್ಮ ಹಣವನ್ನು ನಮಗೇ ಕೊಡುವ ದಲ್ಲಾಳಿಗಳು ಎಂಬ ಭಾವನೆ ಮೂಡಿಸಬೇಕು ಎನಿಸಿತು. ಮುಂದಿನ ವರ್ಷ ಒಂದೊಂದು ಹಳ್ಳಿಯಲ್ಲೂ ಕೆಲವು ವಾರಗಳು ಉಳಿದು ಇದರ ಬಗ್ಗೆ ಜಾಗೃತಿ ಮೂಡಿಸಬೇಕು. ಹೀಗೆ ಹತ್ತು ಹಲವು ಯೋಜನೆಗಳು ನನ್ನ ತಲೆಯಲ್ಲಿ ಹೊಳೆಯುತ್ತಿದ್ದವು. ಗಾಯತ್ರಿ ಮಠವನ್ನು ತಲುಪಿದ್ದೇ ಗೊತ್ತಾಗಲಿಲ್ಲ.

ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗಿ ಆನಂತರ ಸ್ನಾನ ಮಾಡಿದರಾಯಿತು ಎಂದುಕೊಂಡೆ. ಅಷ್ಟರಲ್ಲಿ ಶಾಲೆಯ ಕೆಲವು ವಿದ್ಯಾರ್ಥಿಗಳು ನನ್ನನ್ನು ಗುರುತಿಸಿ ತುಂಬಾ ಸಂತೋಷದಿಂದ ಮಾತನಾಡಿಸಿದರು. ಅವರಿಗೆ ನನ್ನ ಸ್ವಚ್ಛತಾ ಯೋಜನೆಯನ್ನು ತಿಳಿಸಿ ನನಗೆ ಕೈಜೋಡಿಸಬೇಕೆಂದು ವಿನಂತಿಸಿಕೊಂಡೆ. ಬಹುತೇಕರು ಒಪ್ಪಿದರು. ಎಲ್ಲರಿಗೂ ತಿನ್ನಲು ಬಾಳೆ ಹಣ್ಣುಗಳನ್ನು ಕೊಡಿಸಿ, ಒಳಗೆ ಹೋಗಿ ಖಾಲಿ ಚೀಲಗಳನ್ನು ತಂದು ಅವರ ಕೈಗಿಟ್ಟೆ. ಒಂದಷ್ಟು ಹುಡುಗರು ಮಠದ ಹೊರಗಿನ ಆವರಣ. ಉಳಿದವರು ನನ್ನ ಜೊತೆಗೂಡಿ ಮಠದ ಒಳಗಿನ ಆವರಣವನ್ನು ಸ್ವಚ್ಛಮಾಡಲು ಶುರುಮಾಡಿದೆವು. ಎರಡು ಗಂಟೆಗಳ ಕಾಲದ ಪರಿಶ್ರಮದಿಂದ ಸುಮಾರು ಹತ್ತು ಚೀಲಗಳ ಪ್ಲಾಸ್ಟಿಕ್ ವಿಷವನ್ನು ಭೂಮಿ ತಾಯಿಗೆ ಉಣಿಸುವುದನ್ನು ತಡೆದವು.

ಮಠದಲ್ಲಿ ಆಶ್ರಯ ಪಡೆದು ಅದರ ಸೌಕರ್ಯಗಳನ್ನು ಉಚಿತವಾಗಿ ಬಳಸಿಕೊಂಡೂ, ತನ್ನ ಆವರಣವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಲು ಸೋತಿದ್ದವರು ನಾಚುವಷ್ಟು ಕಸವನ್ನು ವಿಲೇವಾರಿ ಮಾಡಿದೆವು. ಕೆಲಸವಾದ ನಂತರ ಹುಡುಗರಿಗೆ ಚೆನ್ನಾಗಿ ಕೈತೊಳೆದು ಬಾಳೆ ಹಣ್ಣು ತಿನ್ನುವಂತೆ ದುಡ್ಡು ಕೊಟ್ಟು, ನಾನು ಕೋಣೆಗೆ ಬಂದೆ. ಹಾಗೆಯೇ ಇವತ್ತಿನ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದ ಹುಡುಗರಿಗೆ ಒಂದು ಅಭಿನಂದನಾ ಪತ್ರವನ್ನು ಕೊಟ್ಟು, ತಮ್ಮ ಈ ಕಾರ್ಯವನ್ನು ಶಾಲೆಯ ಮುಖ್ಯೋಪಾಧ್ಯಾಯರಿಗೂ ತಿಳಿಸುವಂತೆ ಮನವಿ ಮಾಡಿದೆ.

ರಾತ್ರಿಯ ಭಜನೆಯಲ್ಲಿ ಪಾಲ್ಗೊಂಡಿದ್ದಾಗ, ಮಠದ ಹೊರಗೆ ಒಂದಷ್ಟು ಜನರ ಗುಂಪು ಸೇರಿತ್ತು. ಮಳೆ ಬೇರೆ ಜೋರಾಗಿ ಬರುತ್ತಿತ್ತು. ಯಾರಿಗೆ ಏನಾಯಿತಪ್ಪಾ ಎಂದು ನನಗೆ ಗಾಬರಿಯಾಗಿ ಹೋಗಿ ವಿಚಾರಿಸಿದಾಗ, ಮಠಕ್ಕೆ ಬಂದಿದ್ದ ಪ್ರವಾಸಿಗರೊಬ್ಬರಿಗೆ ಸಕ್ಕರೆ ಅಂಶ ಕಡಿಮೆಯಾಗಿ ಮೂರ್ಚೆ ತಪ್ಪಿದರೆಂದು, ಈಗ ಉಸಿರೇ ಸರಿಯಾಗಿ ಆಡುತ್ತಿಲ್ಲವೆಂದೂ, ಒಬ್ಬಬ್ಬರು ಒಂದೊಂದು ತರಹ ಮಾತನಾಡುತ್ತಿದ್ದರು. ಅದನ್ನು ಕಂಡು ನನ್ನ ತಂದೆ ತಾಯಿಯ ಆರೋಗ್ಯದ ಬಗ್ಗೆ ಚಿಂತೆ ಶುರುವಾಯಿತು. ಇಲ್ಲಿ ಯಾರ ಪರಿಚಯವೂ ಇಲ್ಲ. ಯಾರನ್ನು ಕೇಳಿ ದೂರವಾಣಿ ಪಡೆದುಕೊಳ್ಳಲಿ ದೇವರೇ ಎಂಬ ಯಾತನೇ ಶುರುವಾಯಿತು.

ನನ್ನ ಈ ಕಾರ್ಯ ಮುಗಿಯುವ ತನಕ ಯಾರಿಗೂ ಯಾವುದೇ ತರಹದ ತೊಂದರೆಯಾಗುವುದಿಲ್ಲ ಎಂಬ ಬಲವಾದ ನಂಬಿಕೆಯಿದ್ದರೂ ಅವಾಗವಾಗ ಇಂತಹ ದುಗುಡಗಳು ಬಂದೋಗುತ್ತಿದ್ದವು. ದರ್ಶನ್ ಭೇಟಿಯಾಗಿ ಯಾರಾದರೊಬ್ಬರ ಹತ್ತಿರ ಮೊಬೈಲ್ ಕೊಡಿಸುವಂತೆ ಕೇಳಿಕೊಂಡಾಗ ತನ್ನದೇ ಮೊಬೈಲ್ ಇರುವುದಾಗಿ ಹೇಳಿ, ತನ್ನ ಮೊಬೈಲನ್ನೇ ತಂದು ಕೊಟ್ಟ. ನಿಟ್ಟುಸಿರು ಬಿಟ್ಟು, ಅಪ್ಪನ ದೂರವಾಣಿಗೆ ಕರೆಮಾಡಿದೆ. ಉತ್ತರಿಸಲಿಲ್ಲ. ಮೂರು ಬಾರಿ ಕರೆಮಾಡಿದರೂ ಅದೇ ಕಥೆ. ಏನು ಮಾಡುವುದೆುಂದು ತಿಳಿಯದೆ ಪೂಜಾಳಿಗೆ ಕರೆಮಾಡಿದೆ. ಅವಳು ಕರೆಯನ್ನು ಸ್ವೀಕರಿಸಿ, ಅಮ್ಮನಿಗೆ ಮಾತನಾಡಲು ಕೊಟ್ಟಳು. ಅಮ್ಮ ಮಾತು ಶುರುಮಾಡುವುದಕ್ಕೆ ಮುಂಚೆಯೇ ಅವರಿಗೆ ದುಖಃ ಉಮ್ಮಳಿಸಿತು. ಬೇಗ ಮನೆಗೆ ಬಂದು ಬಿಡುವಂತೆ ಕೋರಿದರು. ಮಾತಿಗಿಂತ ಅಳುವೇ ಜಾಸ್ತಿಯಾಗಿತ್ತು. ನನ್ನ ಕಣ್ಣುಗಳೂ ನೀರಾಡಿದವು.

ಅವರ ನಂತರ ಅಪ್ಪ ಮಾತನಾಡಿದರು. ಅವರು ಅಷ್ಟೇ. ಪೆಚ್ಚಾಗಿ ಏನು ಮಾತನಾಡಬೇಕೆಂಬುದೇ ತಿಳಿಯಲಿಲ್ಲ. ನನ್ನ ಮನದಾಳದ ಆಸೆಯನ್ನು ಅರ್ಥಮಾಡಿಕೊಳ್ಳುವವರು ಒಬ್ಬರೂ ಇಲ್ಲವಲ್ಲಾ ಎಂಬ ಬೇಜಾರಾಯಿತು. ಅಪ್ಪನಾದ ನಂತರ ಪೂಜಾ ಮಾತನಾಡಿದಳು. ಅವಳ ಸರದಿ ಬಂದಾಗ ಅವಳು ಬಿಡುವಳೇ? ಕಳೆದ ವಾರ ಲವಲವಿಕೆಯಿಂದ ಮಾತಾಡಿದ್ದ ಅವಳು, ಈಗೇಕೋ ಬಹಳ ಬೇಜಾರಾದಂತೆ ಇದ್ದಳು. ಈಗ ನೀವೆಲ್ಲ ಬೇಸರಗೊಂಡು ನನ್ನನ್ನು ವಾಪಸ್ಸು ಬರುವಂತೆ ಒತ್ತಾಯಿಸಿದರೆ, ನಾನು ಬಂದುಬಿಡುತ್ತೇನೆ. ಆದರೆ ನನಗಿಷ್ಟವಾದ ಕೆಲಸವನ್ನು ಅರ್ಧಕ್ಕೆ ಬಿಟ್ಟೆನೆಲ್ಲಾ ಎಂಬ ಕೊರಗಿನಲ್ಲಿ ನಾನು ಹಿಂದೆಂದಿಗಿಂತಲೂ ಹೀನಾಯ ಸ್ಥಿತಿ ತಲುಪುತ್ತೇನೆಂಬುದು ಸುಳ್ಳಲ್ಲ ಎಂದು ಮನವರಿಕೆ ಮಾಡಲು ಪ್ರಯತ್ನಿಸಿದೆ.

pi58g8nKTಹತ್ತಿರವಿದ್ದಾಗ ದೂರವಾದರು,

ದೂರವಿದ್ದಾಗ ಹತ್ತಿರವಾದರು,

ಅವರ ನಗುವಲ್ಲಿ ನಾ ಅಳುತ್ತಿದ್ದೆ,

ನನ್ನ ಖುಷಿಯಲ್ಲಿ ಅವರು ಅತ್ತರು,

ನನ್ನ ಮನವ ನೀ ಅರಿಯದೆ,

ನಿನ್ನ ಮನವ ನಾ ತಿಳಿಯದೆ

ಜೀವನ ಬಂಡಿ ತಳ್ಳುವುದೇಗೆ? ಓ ಪ್ರಕೃತಿ

ಮನಸ್ಸು ಭಾರವಾಗಿತ್ತು. ನಿದ್ರೆ ಬರಲಿಲ್ಲ. ನನ್ನ ಸ್ಥಿತಿಯನ್ನು ಅರ್ಥಮಾಡಿಕೊಂಡು, ಒಬ್ಬರಾದರೂ ನನಗೆ ಧೈರ್ಯಕೊಡುವ ಮಾತನಾಡಿ, ನನ್ನ ಕಾರ್ಯಕ್ಕೆ ಆಸರೆಯಾಗಬಾರದೇ ಎಂಬ ಪ್ರಶ್ನೆ ಮೂಡಿತು. ಮೂವತ್ತು ವರ್ಷ ಬೇರೆಯವರ ಇಷ್ಟದಂತೆಯೇ, ಅವರವರ ಕಷ್ಟಗಳಿಗೆ ಹೊಂದಿಕೊಂಡು ಬದುಕಿದ್ದೇನೆ. ಕೆಲವು ವಾರಗಳು ನನಗಿಷ್ಟಬಂದಂತೆ ಇರಲು ಸಾಧ್ಯವಿಲ್ಲವೇ?

ನಾ ಯಂತ್ರಮಾನವ,

ಸಮಯವಿದ್ದೂ ಪ್ರಜ್ಞೆ ಇಲ್ಲ,

ಕಾಯಕವಿದ್ದೂ ಮನಸಿಲ್ಲ,

ಮನೆಯಿದ್ದೂ ಶಾಂತಿಯಿಲ್ಲ,

ಕುಟುಂಬವಿದ್ದೂ ಬಾಂಧತ್ವವಿಲ್ಲ,

ಒಗ್ಗಟ್ಟಿನಲ್ಲಿ ಬಲವಿಲ್ಲ,

ಸಾಧಿಸುವ ಚಲವಿಲ್ಲ,

ಅನ್ಯರ ಮೇಲೆ ನಂಬಿಕೆಯಿಲ್ಲ,

ಪ್ರೀತಿಯಿದ್ದೂ ಬೆಲೆಯಿಲ್ಲ,

ಬರೀ ನೋಟಿನ ಹಿಂದೆ ಓಡುವ ನಾವೆಲ್ಲ

ಯಂತ್ರ ಮಾನವರಲ್ಲವೇ? ಓ ಪ್ರಕೃತಿ

[ಇಲ್ಲಿಯತನಕ ನಡಿಗೆಯಲ್ಲಿ ಕ್ರಮಿಸಿದ ಅಂದಾಜು ದೂರ = 74 ಮೈಲುಗಳು]

‍ಲೇಖಕರು Admin

27 June, 2016

4 Comments

  1. Anonymous

    Rahul at that time, v al need u to come back.. V dint want to listen to anything… Its hard but truth.

    • ರಾದ

      Mr. Anonymous, Thank you for your views. I totally understand your feelings at that time. This write-up was just my side of emotions in the journey.

      Human nature is a complex mechanism. One can’t understand completely. Every view is true and everyone’s emotion is true.
      False is just a human created word which does not apply to anything.

  2. Pradeep K S

    Today’s episode is very nice. Manassina aalakke eliyuva vishayagala prasthavane madiddiri.

    • ರಾದ

      ಧನ್ಯವಾದಗಳು ಪ್ರದೀಪ್ 🙂 ತಮ್ಮ ಯೋಚನಾ ಲಹರಿಗೆ ಈ ಕಾವ್ಯ ಹೊಂದಿಕೊಂಡಿರುವುದು ಖುಷಿ ಕೊಡುತ್ತಿದೆ. ಹೀಗೇ ಮುಂದುವರಿಯಲಿ..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading