
ಕಿರಣ್ ಭಟ್
ಸ್ವಾತಂತ್ರ್ಯಾನಂತರದ ಅತಿ ದೊಡ್ಡ ಆಂದೋಲನ. ರೈತ ಆಂದೋಲನ ನೂರು ದಿನ ದಾಟಿದೆ. ದಿನದಿನಕ್ಕೂ ಶಕ್ತಿ ಹೆಚ್ಚಿಸಿಕೊಳ್ಳುತ್ತ ದೇಶವೆಲ್ಲ ವ್ಯಾಪಿಸಿದೆ ಇಡಿಯ ಜಗತ್ತಿನ ಗಮನ ಸೆಳೆಸಿದೆ. ಇಂಥ ಮಹಾನ್ ಚಳುವಳಿಗೆ ಕಾವ್ಯ ಪ್ರತಿಕ್ರಿಯೆಯಾಗಿ ‘ಹೊನ್ನಾರು ಒಕ್ಕಲು’ ಕವಿತಾ ಸಂಕಲನ ಬಂದಿದೆ. ಡಾ.ಕೆ ಷರೀಫಾ ಮತ್ತು ಯಮುನಾ ಗಾಂವ್ಕರ್ ಈ ಸಂಕನವನ್ನ ಸಂಪಾದಿಸಿದ್ದಾರೆ.
‘ಬಹುರೂಪಿ’ಯಲ್ಲಿ ಖ್ಯಾತ ಚಿಂತಕ ಪಿ.ಸಾಯಿನಾಥ್ ಪುಸ್ತಕವನ್ನ ಬಿಡುಗಡೆಗೊಳಿಸಿದ್ದಾರೆ. ಕುವೆಂಪು, ಬೇಂದ್ರೆ, ಸಿದ್ಧಲಿಂಗಯ್ಯ, ವೈದೇಹಿ ಯವರಿಂದ ಮೊದಲುಗೊಂಡು ಇತ್ತೀಚಿನ ಯುವ ಮನಸುಗಳು ಪ್ರಸ್ತುತ ಚಳುವಳಿಗೆ ಸ್ಪಂದಿಸಿ ರಚಿಸಿದ ಅರವತ್ನಾಲ್ಕು ಕವನಗಳಿಲ್ಲಿವೆ.
ಡಾ.ಪುರುಷೋತ್ತಮ ಬಿಳಿಮಲೆ ಯವರು ತೇಕ್ರಿ ಗಡಿಯಲ್ಲೇ ಕುಳಿತು ಬರೆದ ಮೌಲಿಕವಾದ ಮುನ್ನುಡಿಯಿದೆ. ಚಳುವಳಿಯ ಹೀರೋ ಗಳ ಜೊತೆ ಕೆಲವು ದಿನ ಜತೆಯಾಗಿದ್ದು ಅಧ್ಯಯನ ಮಾಡಿದ ನವೀನ್ ಕುಮಾರ್ ತೆಗೆದ ಭಾವಚಿತ್ರಗಳಿವೆ.
ಕನ್ನಡದ ಯುವ ಮನಸುಗಳು ಚಳುವಳಿಗೆ ಸ್ಪಂದಿಸಿದ ರೀತಿ ಅನನ್ಯ. ತುಂಬ ತೀಕ್ಷ್ಣ ಪ್ರತಿಕ್ರಿಯೆಗಳು ಇಲ್ಲಿ ಶಬ್ದಗಳಲ್ಲಿಳಿದಿವೆ.
ಇಂಥ ಬಿಗುವಿನ ದಿನಗಳಲ್ಲಿ ಈ ಪುಸ್ತಕವೊಂದು ಸಶಕ್ತ ಪ್ರತಿಕ್ರಿಯೆ.
* * * *
ಏಕೆಂದರೆ …
ಸರಕಾರ ರೊಕ್ಕ ಮುದ್ರಿಸಬಹುದೆ ಹೊರತು
ತುಂಡು ರೊಟ್ಟಿಯನ್ನಲ್ಲ. ನೆನಪಿರಲಿ.

- ಅಲ್ಲಾಗಿರಿರಾಜ್
*
ಏಕೆಂದರೆ …
ನಿನ್ನ ಬಳಿ ಬಂದೂಕಿದೆ…
ನನ್ನ ಬಳಿ ಹಸಿವಿದೆ…
ಕೇವಲ ಹಸಿವಿದೆ….
ಮತ್ತೆ ಇಬ್ಬಾಯ ಖಡ್ಗಗಳ
ಹಾದಿಯಲಿ ನೆಟ್ಟು
ನಡೆವವರ ಪಾದ ಸೀಳಿ
ನೆತ್ತರ ಚಿತ್ತಾರ ಬಿಡಿಸಿ ಸಂಭ್ರಮಿಸಬಹುದು
- ರಂಗನಾಥ ಕಂಟನಕುಂಟೆ.
ಏ ದೊರೆಯೇ
ನಾವು ಬಂದೆವು
ನಿನ್ನ ಹೊಟ್ಟೆಗೆ ಅನ್ನ ಕೊಟ್ಟವರು
ಜಗದ ಹೊಟ್ಟೆಗೆ ತುತ್ತನಿಟ್ಟವರು.
- ಸಚಿನ್ ಅಂಕೋಲಾ
ಅನ್ನದಾತರ
ಬಿರಿದ ಪಾದಗಳಲ್ಲಿ
ನಿಮ್ಮ ಪಾರ್ಲಿಮೆಂಟಿನ
ಬೇರುಗಳಿವೆ.

ಮಂಜುಳಾ ಹುಲಿಕುಂಟೆ.
*
ಯಾವ ಗೋಡೆಗಳೂ
ಬಂಧಿಸಲಾರವು ನಮ್ಮನ್ನು
ಯಾವ ಬಂದೂಕಿನ ನಳಿಕೆಗಳೂ
ಬಗ್ಗಿಸಲಾರವು ನಮ್ಮನ್ನು
ಕೆ. ಮಹಾಂತೇಶ
*
ಮಣ್ಣ ಕಣಗಳ ನಡುವೆ
ಅನ್ನ ಕಣಗಳ ಬೆಳೆದು
ಮಣ್ಣಾಗಿ ಹೋಗುವೆವು
ಮಣ್ಣ ಮಾರುವದಿಲ್ಲ.
ನಾ ದಿವಾಕರ.
*
ಹೌದು
ವಿಶ್ವ ನೋಡುತಿದೆ
ಬದಲಾದ ಭಾರತವನ್ನು
ದಿಗ್ಭ್ರಾಂತಿಯಿಂದ.
ಬಿ.ಎಂ. ಬಷೀರ್.
…..ತಕ್ಷಣಕ್ಕೆ ಅನಿಸಿದ್ದು ಇಷ್ಟು






“ಕವಿತೆಯೆನ್ನುವುದು ಅನಿರ್ವಚನೀಯವಾದದ್ದು ಅಂದರೆ ಮಾತಿನಲ್ಲಿ ಹೇಳಲಾಗದ್ದು. ಹೇಳಿಯೂ ಹೇಳದೇ ಉಳಿದು ಆ ಕಡೆಗೆ ಕೈತೋರಿಸುವಂಥಾದ್ದು. ಸಾಲುಗಳ ನಡುವಿನ ಮೌನದಲ್ಲಿ ಹೊಳೆಯುವಂಥಾದ್ದು. ಕವಿತೆ ಉಪದೇಶಿಸುವುದಿಲ್ಲ. ಅದು ವಿಚಾರಗಳ ಮಂಡನೆಯಲ್ಲ. ಅದು ಕೇವಲ ಛಂದಸ್ಸಿನ ಜಿಡುಕು ರಚನೆಯಲ್ಲ. ಅದು ಸಮಾಜ ಪರಿವರ್ತನೆಗಾಗಿ ಇರುವುದೂ ಅಲ್ಲ. ಅದಕ್ಕಾಗಿ ಬೇರೆಯೇ ಜನರಿದ್ದಾರೆ. ಕವಿತೆಯೆನ್ನುವುದು ಒಂದು ವಿಶಿಷ್ಟ ಅನುಭವದ ಅಭಿವ್ಯಕ್ತಿ; ಒಂದು ದರ್ಶನ. ಕವಿಯ ವೈಯಕ್ತಿಕ ಅನುಭವ ಹಾಗೂ ಅವನ ಲೋಕಾನುಭವದ ಮುಖಾಮುಖಿಯಲ್ಲಿ ಹುಟ್ಟಿಕೊಳ್ಳುವ ವಿಶಿಷ್ಟ ಅನುಭವ. ಆ ಅನುಭವವು ಕವಿಗೆ ದಕ್ಕುವುದು ರೂಪಕ, ಪ್ರತಿಮೆ, ಸಂಕೇತ…ಇತ್ಯಾದಿಗಳ ರೂಪದಲ್ಲಿ.”-ಸುಬ್ರಾಯ ಚೊಕ್ಕಾಡಿ