ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರೇಣುಕಾ ರಮಾನಂದಗೆ ಮುಂಬೈ ಪ್ರಶಸ್ತಿ

‘ಅವಧಿ’ಯ ಬರಹಗಾರರಾದ ರೇಣುಕಾ ರಮಾನಂದ ಅವರಿಗೆ ಈ ಸಾಲಿನ ಪ್ರತಿಷ್ಠಿತ ಸುಶೀಲಾ ಶೆಟ್ಟಿ ಸ್ಮಾರಕ ಕಾವ್ಯ ಪ್ರಶಸ್ತಿಯನ್ನು ಘೋಷಿಸಲಾಗಿದೆ.

ಮುಂಬೈನ ಜಗಜ್ಯೋತಿ ಕಲಾವೃಂದ ಸ್ಥಾಪಿಸಿರುವ ಈ ಪ್ರಶಸ್ತಿಯನ್ನು ರೇಣುಕಾ ಅವರ’ ಹಿಂದೊಮ್ಮೆ ನಾನು ಹೆಣ್ಣಾಗಿದ್ದೆ’ ಕೃತಿಯ ಹಸ್ತಪ್ರತಿಗೆ ನೀಡಲಾಗಿದೆ.

ಪ್ರಶಸ್ತಿ 5 ಸಾವಿರ ರೂ ನಗದು, ಪ್ರಶಸ್ತಿ ಫಲಕ, ಪ್ರಶಸ್ತಿ ಪತ್ರ ಒಳಗೊಂಡಿದೆ. ಫೆಬ್ರವರಿ ೧೨ ರಂದು ಮುಂಬೈನ ದೊಂಬಿವಿಲಿ (ಪೂವ೯)ದ ಠಾಕೂರ್ ಸಭಾಗೃಹದಲ್ಲಿ ಪ್ರಶಸ್ತಿ ಪ್ರದಾನ ಹಮ್ಮಿಕೊಳ್ಳಲಾಗಿದೆ

ಇತ್ತೀಚಿಗೆ ಬರೆಯುತ್ತಿರುವ ಭರವಸೆಯ ಕವಯತ್ರಿಯರಲ್ಲಿ ರೇಣುಕಾ ರಮಾನಂದ ಅವರದ್ದು ಮುಖ್ಯ ಹೆಸರು. ತಮ್ಮ ವಿಶಿಷ್ಟ ಪ್ರತಿಮೆಗಳ ಮೂಲಕ ಕಾವ್ಯ ಲೋಕಕ್ಕೆ ಹೊಸ ಸ್ಪರ್ಶ ನೀಡುತ್ತಿದ್ದಾರೆ. ಅವರ ಕಾವ್ಯ ಮಹಿಳಾ ದನಿ ಹೊಸ ದಾರಿ ಹಿಡಿಯುತ್ತಿರುವ ಸೂಚನೆಯೂ ಆಗಿದೆ.

ಕರ್ನಾಟಕ ಲೇಖಕಿಯರ ಸಂಘ ಇವರ ಹೊಸ ದಿಕ್ಕಿನ ಕವಿತೆಗಳನ್ನು ಗಮನಿಸಿ ಎರಡು ಬಾರಿ ದತ್ತಿ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಅವರ ಕವಿತೆಯ ಬನಿ ಅರಿಯಲು ನಿಮಗಾಗಿ ಅವರ ಒಂದು ಕವನ ಇಲ್ಲಿದೆ.

 

ಹಿಂದೊಮ್ಮೆ ನಾನು ಹೆಣ್ಣಾಗಿದ್ದೆ..

ನಾನೊಂದು ಮರ
ಹಿಂದೊಮ್ಮೆ ಹೆಣ್ಣಾಗಿ ಹುಟ್ಟಿ
ಬೆಂಕಿಯಿಂದ ಬಾಣಲೆಗೂ
ಪುನಃ ಬೆಂಕಿಗೂ ಜಿಗಿವ
ತಲೆತಲಾಂತರದ ರೂಢಿಯನ್ನು
ಪರಿಪಾಲಿಸಿಕೊಂಡು ಬಂದವಳು
ದೇಶಾಂತರಕ್ಕೆ ಹೋದ ಮಕ್ಕಳು
ಕೊನೆಯಬಾರಿ ಕಣ್ತುಂಬ ನೋಡಲು ದಕ್ಕದ
ನಿಟ್ಟುಸಿರನ್ನು ಹಾಗೆಯೇ ಬೈತಿಟ್ಟು
ಕ್ಷಯಪೀಡಿತ ಎದೆಗೂಡಿನೊಂದಿಗೆ
ಗಂಟಲು ಕಟ್ಟಿ ಸತ್ತವಳು

ಹೆಣ್ಣೆಂದರೆ ಒಂದು ಹೆಣ್ಣು
ಧಮ೯ದ ಬಗ್ಗೆ ಸುಮ್ಮನೆ
ಯಾಕೆ ತಲೆಕೆಡಿಸಿಕೊಳ್ಳುವಿರಿ
ಒಡಕು ಹಿಮ್ಮಡಿ ಮಾಯಲು ಬಿಡದೇ
ಸದಾ ಭೀತಿಯ ಬಿಚ್ಚುಗೊಡಲಿಯ ಹಿಡಿದು
ಹೆಣ್ಣುಗಳ ದುಡಿಸಿಕೊಳ್ಳುವುದು
ಎಲ್ಲ ಧಮ೯ಗಳ ಜನ್ಮಸಿದ್ಧ ಹಕ್ಕು
ಎಂದು ಎಲ್ಲರೂ ನಂಬಿದ್ದಾರೆ

ಬುಖಾ೯ಗಳು,ಗೌನುಗಳು,ತರಹೇವಾರಿ
ಬಣ್ಣದ ಸೀರೆಗಳು ಮರೆಮಾಡುತ್ತವೆ ನಮ್ಮ
ಒಣಕೆಮ್ಮುಗಳನ್ನು,ಸಪ೯ಸುತ್ತುಗಳನ್ನು
ನೆರೆಹಾವಳಿಯಂತಹ ಮಾಸಿಕ ಸ್ರಾವಗಳನ್ನು
ಅವರದೇ ಮಕ್ಕಳಿಗೆ ತಾಯಾದ
ಜೋಲು ಬಿದ್ದ ಹೊಟ್ಟೆಗಳನ್ನು
ಮತ್ತದರ ಮೇಲಿನ ಆಕಾರಕೆಟ್ಟ ಮೊಲೆಗಳನ್ನು

ಆದರೆ ಈಗ…?
ನಾನೊಂದು ಸುಂದರ ಮರ
ಏಕಾಂತದ ಬೆತ್ತಲೆಯನ್ನು
ಲೋಕಾಂತಕ್ಕೆ ಹರಡಿ
ಬಿಡುಬೀಸಾಗಿ ಬಯಲು ಆಲಯದಲ್ಲಿ
ನಿಂತಿದ್ದೇನೆ
ಒಂದು ಹಿಡಿ ಸುಡುವ ಬೀಜವನ್ನು
ಒಡಲೊಳಗಿಟ್ಟುಕೊಂಡ ಅಗ್ನಿಕನ್ಯೆಯರು
ನನ್ನ ಬಿರುಸು ತೊಗಟೆಯ ಮರೆಗೆ
ನಾಲ್ಕು ಹನಿ ಕಣ್ಣೀರು ಸುರಿಸಲು
ಬರಲಾರಂಭಿಸಿದಂದಿನಿಂದ
ಜಾತಿಗ್ಹುಟ್ಟಿದ ಬಿಕನಾಸಿ ಭಂಡರಿಗೆ
ನೆರಳು ನೀಡುವ ಕೆಲಸ ನಿಲ್ಲಿಸಿದ್ದೇನೆ
ಅವರ ಗರಗಸಗಳು
ನನ್ನ ಸ್ಪರ್ಶಿಸುವ ಮೊದಲೇ
ಸಾವಿರ ಹೋಳಾಗಿಸುವ ಬೇತಾಳವಿದ್ಯೆ
ಕಲಿತಿದ್ದೇನೆ
ಹ್ಹ…ಹ್ಹ…ಹ್ಹ…
ಸುಟ್ಟರೂ ಹೂಳಿದರೂ
ನಾನೊಂದು ಚಂದದ ಮರ
ವಾಗುವುದ ತಪ್ಪಿಸಲಾಗಲಿಲ್ಲ
ಈ ಸಾವ ಕೆಡುವ ಗಂಡರಿಗೆ

‘ಸಸ್ಯಗಳು ಚಲಿಸುವದಿಲ್ಲ’
ಅಹೋರಾತ್ರಿ ಪಾಠ ಓದುತ್ತಿವೆ ಮಕ್ಕಳು

ಕೇಳಿಸಿಕೊಳ್ಳಿ
ಹಿಂದೊಮ್ಮೆ ನಾನು ನಿಮ್ಮೆಲ್ಲರ
ಅಜ್ಜಿಯೋ,ಮುತ್ತಜ್ಜಿಯೋ ಆಗಿದ್ದೆ
ಉಕ್ಕಲಾರದ ಬಿಕ್ಕುಗಳನ್ನು
ಕೆಂಡದೊಲೆಯಲ್ಲಿ ಹುಗಿದಿಟ್ಟು
ಕೆಮ್ಮಿ,ಕೆಮ್ಮಿ ಸತ್ತಿದ್ದೆ

ಯಾವ ಶಾಲೆಗಳಲ್ಲೂ ವಿಜ್ಞಾನ
ಜನ್ಮಾಂತರದ ಪಾಠವನ್ನು ಕಲಿಸುವುದಿಲ್ಲ

ಆದರೆ ನನಗೆ ಚೆನ್ನಾಗಿ ನೆನಪಿದೆ
ನಾನು ಹಿಂದೊಮ್ಮೆ ಹೆಣ್ಣಾಗಿದ್ದೆ
ಬೆಂಕಿಯಿಂದ ಬಾಣಲೆಗೂ
ಬಾಣಲೆಯಿಂದ ಬೆಂಕಿಗೂ
ಜಿಗಿಯುತ್ತಿದ್ದೆ

ಈಗ
ನಾನೊಂದು
ಚೆಂದದ ಮರ

‍ಲೇಖಕರು admin

13 January, 2017

3 Comments

  1. Neeta Rao

    “ಹಿಂದೊಮ್ಮೆ ನಾನು ಹೆಣ್ಣಾಗಿದ್ದೆ” ನಿಜವಾಗಿಯೂ ತುಂಬ ಸುಂದರವಾದ ಕವಿತೆ. ಹೆಣ್ಣಿನ ಮನದಾಳದ ನೋವು-ನಿಟ್ಟುಸಿರುಗಳೆಲ್ಲ ಗಟ್ಟಿಯಾಗಿ ಹೊರಹೊಮ್ಮಿವೆ ಇಲ್ಲಿ. ಅಭಿನಂದನೆಗಳು ರೇಣುಕಾ ರಮಾನಂದ.

  2. Chalapathi Gowda

    ಅಭಿನಂದನೆಗಳು

    • renu

      Thank u sir

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading