ರೆಪ್ಪೆ ತೆಗೆದು ಮುಚ್ಚುವದರೊಳಗೆ ಮಾಡಿದ ‘ಕಾಲ ಯಾನ’

ಗೊರೂರು ಶಿವೇಶ್

**

ಕನ್ನಡದಲ್ಲಿ  ‘ಸೈಕಲಾಜಿಕಲ್ ಥ್ರಿಲ್ಲರ್’ ಗಳು ಬಂದಿದ್ದರೂ ‘ಸೈನ್ಸ್ ಫಿಕ್ಷನ್’ ಸಿನಿಮಾಗಳು ಕಡಿಮೆ ಎಂದೇ ಹೇಳಬಹುದು. ‘ಲೂಸಿಯಾ’ ಸಿನಿಮಾದ ಹತ್ತು ವರ್ಷಗಳ ನಂತರ ಮತ್ತೊಂದು ಸೈನ್ಸ್ ಫಿಕ್ಷನ್ ಚಿತ್ರ ಗಮನ ಸೆಳೆಯುತ್ತಿದೆ, ಅದುವೇ ಶ್ರೀನಿಧಿ ಬೆಂಗಳೂರು ತಂಡದವರ ‘ಬ್ಲಿಂಕ್’. ಇದೊಂದು ವಿಶಿಷ್ಟವಾದ ‘ಟೈಮ್ ಟ್ರಾವೆಲ್ ಸಿನಿಮಾ’. 

ಎಲ್ಲರಿಗೂ ಬಾಲ್ಯದ ಓದಿನ ಇಲ್ಲವೇ ಕಷ್ಟದ ದಿನಗಳು ಮುಂದೊಂದು ಸಂದರ್ಭದಲ್ಲಿ ಸಿಹಿಯ ನೆನಪಾಗಿ ಉಳಿದುಕೊಂಡರೆ, ಉಳಿದಂತೆ ಕಹಿ ಘಟನೆಗಳು ದುರ್ಘಟನೆಗಳು ಬೇಡವೆಂದು ಹೊರಬರಲು ಎಷ್ಟೇ ಪ್ರಯತ್ನಿಸಿದರೂ ಅವು ನೆನಪುಗಳಾಗಿ ಕನಸಾಗಿ ಕಾಡುವುದು ಉಂಟು. ತಮ್ಮ ಗತ ದಿನಗಳಿಗೆ ಹೋಗಿ ನಾವು ಮಾಡಿರಬಹುದಾದ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಅವಕಾಶ ಸಿಕ್ಕರೆ ಎಷ್ಟು ಚೆನ್ನಾಗಿರುತ್ತಿತ್ತು. ಇದು ಎಲ್ಲರ ತಲೆಯಲ್ಲೂ ಹಾದು ಹೋಗುವ ಒಂದು ಯೋಚನೆ. ಇದರ ಕುರಿತಾದ ಎಲ್ಲೋ ಓದಿದ ಕಥೆಯು ನೆನಪಿಗೆ ಬರುತ್ತದೆ. ಕಳ್ಳನೊಬ್ಬ ಸಿಕ್ಕಿ ಬಿದ್ದ ನಂತರ ತಾನು ಕಳ್ಳತನ ಮಾಡುವ ಸಂದರ್ಭದಲ್ಲಿ ಪೊಲೀಸರಿಗೆ ಸುಳಿವು ಕೊಟ್ಟ ಆ ತಪ್ಪನ್ನು ಮಾಡದಿದ್ದರೆ ಎಂಬ ಯೋಚನೆ ಮೂಡುತ್ತದೆ. ಈಗ ಟೈಮ್ ಟ್ರಾವೆಲ್ ನಲ್ಲಿ ಹಿಂದೆ ಹೋಗಿ ಅದನ್ನು ಸರಿಪಡಿಸಿ ಕಳ್ಳತನ ಮಾಡುವ ಅವಕಾಶ ದೊರೆಯುತ್ತದೆ. ಆದರೆ ಆತ ಮತ್ತೆ ಸಿಕ್ಕಿ ಬೀಳುತ್ತಾನೆ ಕಾರಣ ಆ ತಪ್ಪನ್ನು ಸರಿಪಡಿಸಿಕೊಂಡ ಆತ ಬೇರೊಂದು ತಪ್ಪನ್ನು ಮಾಡಿರುತ್ತಾನೆ. ಮತ್ತೊಂದು ಅವಕಾಶ ಆ ಎರಡು ತಪ್ಪುಗಳನ್ನು ಸರಿಪಡಿಸಿಕೊಂಡ ಆತ ಮೂರನೆಯ ಮತ್ತೊಂದು ಸುಳಿವು ಕೊಡುವ ತಪ್ಪನ್ನು ಮಾಡಿರುತ್ತಾನೆ. ಇದು ಮುಂದುವರೆಯುತ್ತದೆ . 

ಬ್ಲಿಂಕ್ ಚಿತ್ರದ ನಾಯಕ ರಾಯದುರ್ಗದಿಂದ ಬೆಂಗಳೂರಿಗೆ ಬಂದು ನೆಲೆಸಿದ್ದಾನೆ. ಎಂಎ ಪದವಿ ಅನುತ್ತಿರ್ಣನಾದ ಆತ ಪರೀಕ್ಷಾ ಸಿದ್ಧತೆಯ ನಡುವೆ ಜೀವನ ನಿರ್ವಹಣೆಗಾಗಿ ಸ್ಕ್ರಿಪ್ಟ್ ರೈಟಿಂಗ್, ವಿಡಿಯೋ ಎಡಿಟಿಂಗ್ ಮುಂತಾಗಿ ಸಣ್ಣಪುಟ್ಟ ಉದ್ಯೋಗ ಜೊತೆಗೆ ಹವ್ಯಾಸಿ ರಂಗಭೂಮಿಯಲ್ಲಿ ರಂಗನಿರ್ವಹಣೆಯನ್ನು (ಸ್ಟೇಜ್ ಮ್ಯಾನೇಜ್ಮೆಂಟ್ ) ಮಾಡುತ್ತಿದ್ದಾನೆ. ಖಚಿತ ಉದ್ಯೋಗವಿಲ್ಲದ ಆತನಿಗೆ ರಂಗಭೂಮಿ ಗೆಳೆಯರ ಜೊತೆಗೆ ಆತನ ಸ್ನೇಹಿತೆ ನೆರವು ನೀಡುತ್ತಿದ್ದಾರೆ. ಒಂದು ದಿನ ಅಪರಿಚಿತನೊಬ್ಬ ಅವನಿಗೆ ಕಾಣಿಸಿಕೊಂಡು ಅವನ ತಾಯಿಯ ಬಗ್ಗೆ ವಿಚಾರಿಸುವುದರ ಜೊತೆಗೆ ಅವನ ಐದನೇ ವಯಸ್ಸಿಗೆ ಕಾಣೆಯಾದ ತಂದೆಯ ಬಗ್ಗೆ ತಿಳಿಸುತ್ತಾನೆ. ಇದೇ ಸಂದರ್ಭದಲ್ಲಿ ನಾಯಕನಿಗೆ ಆಕಸ್ಮಿಕವಾಗಿ ತಾನು ಬಹಳ ಹೊತ್ತು ಕಣ್ಣರಪ್ಪೆಯನ್ನು ಮುಚ್ಚದೆ ಇರುವ ಸಾಮರ್ಥ್ಯದ ಬಗ್ಗೆ ತಿಳಿಯುತ್ತದೆ. ಆ ವ್ಯಕ್ತಿ ಈಗ ಮತ್ತೆ ಮತ್ತೆ ಅವನಿಗೆ ಕಾಣಿಸುವುದರ ಜೊತೆಗೆ ತನ್ನಂತೆ ಇರುವ ಮತ್ತೊಬ್ಬ ವ್ಯಕ್ತಿ ತನ್ನ ಗೆಳತಿಯೊಡನೆ ಓಡಾಡುತ್ತಿರುವ ದೃಶ್ಯವನ್ನು ಕಂಡು ನಾಯಕ ಗೊಂದಲಕ್ಕೀಡಾಗಿ ಉದ್ರಿಕ್ತನಾಗುತ್ತಾನೆ.

ಇದೇ ಸಮಯದಲ್ಲಿ ಮತ್ತೆ ಎದುರಾಗುವ ಆ ವ್ಯಕ್ತಿ ದೊಡ್ಡ ಮೊತ್ತದ ಹಣದ ಆಮಿಷವೊಡ್ಡಿ ತನ್ನಲ್ಲಿರುವ ‘ಟೈಮ್ ಮಶೀನ್’ ಬಗ್ಗೆ ತಿಳಿಸಿ ವಿಶಿಷ್ಟವಾದ ದ್ರವವನ್ನು ಕಣ್ಣಿಗೆ ಹಾಕಿಕೊಂಡರೆ ಆತ ಕಣ್ಣ ರಪ್ಪೆ ಮುಚ್ಚುವ ತನಕ ತನ್ನ ಹಿಂದಿನ ದಿನಗಳಿಗೆ ಯಾನ ಮಾಡಬಹುದು ಎಂದು ತಿಳಿಸುತ್ತಾನೆ. ಇಲ್ಲಿಂದ ಅವನ ಭೂತ, ವರ್ತಮಾನ, ಭವಿಷ್ಯತ್ಕಾಲಗಳಿಗೆ ಪಯಣಿಸುವ ಯಾನ ಆರಂಭವಾಗುತ್ತದೆ. ಅಲ್ಲಿನ ಅನುಭವಗಳೇ ಸಿನಿಮಾದ ತಿರುಳು. ಘಟನೆಗಳಿಗೆ ತಳುಕು ಹಾಕಿಕೊಳ್ಳುತ್ತಾ ಸಾಗುವ ಚಿತ್ರವು ಕಥಾ ನಾಯಕನ ಮೇಲೆ ಉಂಟು ಮಾಡುವ ಪರಿಣಾಮದಿಂದ ಉತ್ತಮ ಚಿತ್ರವಾಗಿ ಮೂಡಿ ಬಂದಿದೆ. ಬಹಳಷ್ಟು ‘ಟೈಮ್ ಟ್ರಾವೆಲ್’ ಸಿನಿಮಾಗಳು ಕ್ರೈಂ ಥ್ರಿಲ್ಲರ್ ಇಲ್ಲವೇ ಮರ್ಡರ್ ಮಿಸ್ಟ್ರಿಗಳಾಗಿದ್ದರೆ ಇದು ಅದಕ್ಕಿಂತ ವಿಭಿನ್ನವಾದ ಚಿತ್ರ. ಹೊಸ ನಿರ್ದೇಶಕ ಶ್ರೀನಿಧಿ ವಿಶೇಷ ವೆನಿಸುತ್ತಾರೆ. ಕಾರಣವೆಂದರೆ ಅವರು ತಮ್ಮ ಸಾಹಿತ್ಯದ ಓದು, ರಂಗಭೂಮಿಯ ಅನುಭವಗಳು ಹಾಗೂ ಮಣ್ಣಿನ ಸಂಸ್ಕೃತಿಯನ್ನು, ಜನಪದ ಕಲಾ ಪ್ರಕಾರಗಳನ್ನು ಸಿನಿಮಾದಲ್ಲಿ ತಂದಿದ್ದು ಅವು ಚಿತ್ರದಲ್ಲಿ ಪೂರಕ ಘಟನೆಗಳಾಗಿ ಆಸಕ್ತಿ ಮೂಡಿಸುತ್ತವೆ.

ಸಾಹಿತ್ಯದ ಕುರಿತಾಗಿ ಆರಂಭದಲ್ಲೇ ಬರುವ ಪಿ ಲಂಕೇಶರ ಮಾತುಗಳು, ಪ್ರಮುಖ ಕಥಾ ಪಾತ್ರಗಳಿಗೆ ಅರಿವು, ಅಪೂರ್ವ, ಸ್ವಪ್ನ ಎಂದು ಹೆಸರಿಸಿರುವುದು ಸ್ವಪ್ನದ ಅರಿವು ಆ ಕ್ಷಣಕ್ಕೆ ಅಪೂರ್ವಅನುಭವ ನೀಡುತ್ತದೆಯೇ? ಎಂಬ ಕುತೂಹಲಕ್ಕೆ ಕಾರಣವಾಗುತ್ತದೆ. ಮತ್ತೆರಡು ಪಾತ್ರಗಳು ಯಶೋಧ ಮತ್ತು ದೇವಕಿ ಕೃಷ್ಣಾವತಾರವನ್ನು ನೆನಪಿಸಿದರೆ ಯಶವಂತ ಚಿತ್ತಲರ ‘ಶಿಕಾರಿ’ (ಬೇಟೆಯೇ ಬೇಟೆಗಾರನನ್ನು ಬೇಟೆಯಾಡುವ ಕಥಾಹಂದರ) ಎಸ್ ಎಲ್ ಬೈರಪ್ಪನವರ ‘ಅನ್ವೇಷಣೆ‘ (ಒಂದು ವ್ಯಕ್ತಿ  ಅಲ್ಲಿಂದ ಹೋದ ನಂತರ ಆತ ಇದ್ದಾಗ ಆತನ ಕುರಿತ ಘಟನೆಗಳು, ಆತ ಉಂಟು ಮಾಡಿದ ಪರಿಣಾಮಗಳ ಕುರಿತಾಗಿ ಅಲ್ಲಿನ ಪಾತ್ರಗಳು ಯೋಚಿಸುವ ತಂತ್ರ.) ಕಾದಂಬರಿಗಳ ರೆಫರೆನ್ಸ್, ಅವರು ಆಡುತ್ತಿರುವ ನಾಟಕ ‘ಸೊಫೋಕ್ಲಿಸ್’ ಮಹಾಕವಿಯ ‘ಈಡಿಪಸ್’. ಟೈಮ್ ಟ್ರಾವೆಲರ್ ನ ರೂಮ್ನಲ್ಲಿ ಕಾಣಿಸಿಕೊಳ್ಳುವ ‘ರಂಗನಾಯಕಿ’ ಚಿತ್ರದ ದೊಡ್ಡ ಪೋಸ್ಟರ್ ‘ರಂಗನಾಯಕಿ’ ಚಿತ್ರಕ್ಕೂ ‘ಈಡಿಪಸ್’ ನಾಟಕಕ್ಕೂ ಇರುವ ಅಂತರ್ ಸಂಬಂಧ ನೆನಪಿಸುತ್ತ ಚಿತ್ರದ ಕಥೆಯನ್ನು ಸಾಂಕೇತಿಕವಾಗಿ ಬಿಂಬಿಸುವ ಪ್ರಯತ್ನ ಮಾಡಿದ್ದಾರೆ. ಬದುಕು ಕಂಡುಕೊಳ್ಳದ ವ್ಯಕ್ತಿಗೆ ತಮ್ಮದೇ ರೀತಿಯಲ್ಲಿ ನೆರವು ನೀಡುವ, ಸಾಂತ್ವನ ಹೇಳುವ ಸ್ನೇಹಿತರ ಘಟನೆಗಳು ಚಿತ್ರದಲ್ಲಿ ಅಂತರ್ಗತವಾಗಿ ಪಡಿಮೂಡಿವೆ.

ಚಿತ್ರದ ನಿರ್ದೇಶಕ ರಂಗಕರ್ಮಿಯು ಆಗಿರುವುದರಿಂದ ಇತ್ತೀಚಿನ ನಾಟಕಗಳಲ್ಲಿ ಸಾಮಾನ್ಯವಾಗಿರುವ ಪುಟ್ಟ ಪುಟ್ಟ ಬಿಟ್ ಹಾಡುಗಳ ಮೂಲಕ ಕಥನ ಸಾಗಿದಂತೆ, ಚಿತ್ರದ ಹಿನ್ನೆಲೆಯಲ್ಲಿ ಮೂಡಿಬರುವ ಹಾಡುಗಳು, ಜನಪದ ಗೀತೆಗಳು (ಚಿತ್ರ ಸಂಗೀತ ಪ್ರಸನ್ನ ಕುಮಾರ್) ಚಿತ್ರವನ್ನು ಸುಂದರವಾಗಿ ನೇಯ್ದಿವೆ. ‘ದಿಯಾ’ ಖ್ಯಾತಿಯ ದೀಕ್ಷಿತ್ ಶೆಟ್ಟಿ, ಚೈತ್ರ ಆಚಾರ್, ಮಂದಾರ ಬಟ್ಟಲಹಳ್ಳಿ, ವಜ್ರದೀರ್ ಜೈನ್, ಗೋಪಾಲಕೃಷ್ಣ ದೇಶಪಾಂಡೆ, ಸುರೇಶ್  ಅನಗಳ್ಳಿ, ಮುಂತಾಗಿ ಎಲ್ಲ ನಟರು ಸಹಜವಾಗಿ ನಟಿಸಿದ್ದಾರೆ. ಪ್ರಮೋದ್ ಮರವಂತೆ, ಜಯಂತ್ ಕಾಯ್ಕಿಣಿ ಗೀತೆಗಳು ಸೊಗಸಾಗಿವೆ. ‘ನಿನಗೆ ವರ ನೀಡಲಿ ನನ್ನ ಧ್ಯಾನ’, ‘ಮರೆಯಾಗುವ ಮುಂಚೆ ಖಾಲಿ ಮಾಡು ಬಾಕಿ ಭಾವನೆ’, ‘ಉಸಿರೇ ಬೇಕಿಲ್ಲ ನಾ ಬದುಕೋಕೆ, ಸಾಕು ಪ್ರೀತಿನೆ’. ಪ್ರಮೋದ್ ಮರವಂತೆ ಅವರ ಸಾಲುಗಳು ತಟ್ಟನೆ ಹಿಡಿದಿಡುತ್ತವೆ. 

ಮುಖ್ಯವಾಗಿ ಚಿತ್ರ ರಂಗಾಸಕ್ತರಿಗೆ, ಸಾಹಿತ್ಯಾಸಕ್ತರಿಗೆ ಮತ್ತು ಕಲಾಸಕ್ತರಿಗೆ ಖಂಡಿತ ಇಷ್ಟವಾಗುತ್ತದೆ. ಆದರೆ ಸಾಮಾನ್ಯ ಪ್ರೇಕ್ಷಕನಿಗೆ, ಮನರಂಜನೆ ಬಯಸುವ ಸಾಮಾನ್ಯ ಪ್ರೇಕ್ಷಕರಿಗೆ ಕಥೆಯನ್ನು ಹಿಂಬಾಲಿಸುವುದೇ ಸಮಸ್ಯೆ.  ಚಿತ್ರಕಥೆ ಸರಳವಾಗಿ ಸಾಗಬೇಕು, ಚಿತ್ರದಲ್ಲಿ ಮೂಡುವ ಸಣ್ಣ ಸಣ್ಣ ಒಗಟುಗಳು, ಪ್ರಶ್ನೆಗಳಿಗೆ ತನ್ನದೇ ಉತ್ತರ ಕಲ್ಪಿಸಿಕೊಂಡಿರುವ ಪ್ರೇಕ್ಷಕನಿಗೆ ಅಂತಿಮವಾಗಿ ಅವು ಸರಿಯಾಗಿದ್ದರೆ ಖುಷಿ, ಇಲ್ಲವಾದಲ್ಲಿ ನಿರ್ದೇಶಕನ ಜಾಣ್ಮೆಯ ಬಗ್ಗೆ ಹೆಮ್ಮೆ . ಎಸ್ ಎಸ್ ಎಲ್ ಸಿ ಓದುತ್ತಿರುವ ಕುಶಲಿ ವಿದ್ಯಾರ್ಥಿಗೆ ಗಣಿತದ ಸರಳ ಸಮೀಕರಣಗಳನ್ನು ಬಿಡಿಸುವಾಗ ಉಂಟಾಗುವ ಖುಷಿಯನ್ನು ಇಂಥ ಸಿನಿಮಾಕು ಅನ್ವಯಿಸಬಹುದು. ಆದರೆ ಆ ಸರಳ ಸಮೀಕರಣದ ಸ್ಥಳದಲ್ಲಿ  ಬುಲಿಯನ್ ಆಲ್ಜಿಬ್ರಾದ,  ಟ್ರಿಗ್ನಾಮೆಟ್ರಿಯ ಸಮಸ್ಯೆ ಒಡ್ಡಿದರೆ ? ಜೊತೆಗೆ ಪುನರಾವರ್ತನೆಯಾಗುವ ಘಟನೆಗಳ (ಟೈಮ್ ಲೂಪ್) ಹಿಡಿದು ಸಾಗುವುದೇ ಸಮಸ್ಯೆ.

ಚಿತ್ರದ ದ್ವಿತಿಯಾರ್ಧದಲ್ಲಿ ಚಕಚಕನೆ ಸಾಗುವ ಘಟನೆಗಳಿಗೆ ಕಣ್ಣು ಮಿಟಕಿಸದೆ, ಅನುಸರಿಸಿದರೆ ಚಿತ್ರಕಥೆಯನ್ನು ಅರ್ಥೈಸಬಹುದು. ಇಲ್ಲವೇ ‘ಪರ್ಮ್ಟೇಶನ್ ಕಾಂಬಿನೇಷನ್ಗಳ’ಲೆಕ್ಕ ಹಾಕಿ ಘಟನೆಗಳನ್ನು ಜೋಡಿಸಿ ಅರ್ಥೈಸಬೇಕು. ಇಲ್ಲವಾದಲ್ಲಿ ಚಿತ್ರದ ಕಥೆಯನ್ನೇ ಅರಿಯಲು ಮತ್ತೊಮ್ಮೆ ನೋಡಬೇಕು. ಚಿತ್ರಮಂದಿರಕ್ಕೆ ಒಮ್ಮೆ ಬರುವುದೇ ಕಷ್ಟವಾಗಿರುವ ಸಂದರ್ಭದಲ್ಲಿ ಪ್ರೇಕ್ಷಕ ಮತ್ತೊಮ್ಮೆ ಕಥೆಗಾಗಿ ಬರುವನೆ? ಎಂಬುದೇ ಸಂದೇಹ. ಇರಲಿ ಎರಡು ತಿಂಗಳ ಹಿಂದೆ ಬಿಡುಗಡೆಯಾಗಿ ವಿಮರ್ಶಕರ ಮೆಚ್ಚುಗೆ ಪಡೆದ ಚಿತ್ರ ಸದ್ಯ ಅಮೆಜಾನ್ ಪ್ರೈಮ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದ್ದು ಆಸಕ್ತರು ಎರಡಲ್ಲ ಮೂರು ಬಾರಿ ನೋಡಿ ಅರ್ಥೈಸಿಕೊಳ್ಳಬಹುದು. ರಂಗಭೂಮಿಯ ಹಿನ್ನೆಲೆಯಿಂದ ಬಂದ ಶ್ರೀನಿಧಿ ಬೆಂಗಳೂರು ಮೊದಲ ಚಿತ್ರದಲ್ಲೇ ಗಮನಸೆಳೆದಿದ್ದು ಮುಂದೆ ಅವರಿಂದ ಇನ್ನಷ್ಟು ಉತ್ತಮ ಚಿತ್ರಗಳನ್ನು ನಿರೀಕ್ಷಿಸಬಹುದು.

‍ಲೇಖಕರು Admin MM

May 27, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: