ಜೋಳದ ಕಾಳು, ಕೋಳಿ ಮೊಟ್ಟೆ

ಜೋಳದ ಕಾಳು, ಕೋಳಿ ಮೊಟ್ಟೆ (1886)

ಮೂಲ ಕಥೆ : ಲಿಯೋ ಟಾಲ್ ಸ್ಟಾಯ್

ಕನ್ನಡಾನುವಾದ : ರಮೇಶ್ ಹೆಚ್ ಕೆ

**

ಒಂದು ದಿನ ಕೆಲ ಮಕ್ಕಳಿಗೆ ಕೋಳಿ ಮೊಟ್ಟೆಯಷ್ಟು ಗಾತ್ರದ ಕಾಳನ್ನು ಹೊಂದಿದ್ದ ತೆನೆಯು ದೊರೆತಿತು. ಅವರು ಅದನ್ನು ಹಿಡಿದು ಹೋಗುತ್ತಿರುವುದನ್ನು ಕಂಡ ದಾರಿ ಹೋಕನೊಬ್ಬ ಅದನ್ನು ಒಂದು ರೂಪಾಯಿ ಕೊಟ್ಟು ಖರೀದಿಸಿ ನಗರಕ್ಕೆ ಬಂದು ಕುತೂಹಲಕ್ಕಾಗಿ ರಾಜನಿಗೆ ಮಾರಿದನು.

ಆ ತೆನೆಯನ್ನು ಕಂಡ ರಾಜ ತೀರಾ ಆಶ್ಚರ್ಯಗೊಂಡು ತನ್ನ ಆಸ್ಥಾನದ ಎಲ್ಲಾ ಬುದ್ಧಿವಂತರನ್ನು ಕರೆದು ಅದು ಏನೆಂದು ತಿಳಿದುಕೊಳ್ಳಲು ಸೂಚಿಸಿದ. ಆದರೆ ಬಹು ದಿನಗಳ ಕಾಲ ಅದೇನೆಂದು ತಿಳಿದುಕೊಳ್ಳುವಲ್ಲಿ ಪಂಡಿತರು ವಿಫಲರಾದರು, ಅದರ ಕುರಿತಂತೆ ಒಂದು ಸುಳಿವೂ ಸಹ ಅವರಿಗೆ ತಿಳಿಯದ ಕಾರಣ ಅದನ್ನು ಕಿಟಕಿಯ ಬಳಿ ನೇತುಹಾಕಿದ್ದರು. ಹೀಗಿರುವಾಗ ಒಂದು ದಿನ ಅಲ್ಲಿಗೆ ಬಂದ ಕೋಳಿಯೊಂದು, ಅದನ್ನು ತಿನ್ನಲು ಪ್ರಯತ್ನಿಸಿ, ಚಿಕ್ಕದಾಗಿ ಒಂದು ರಂಧ್ರವನ್ನು ಕೊರೆಯಿತು. ಆಗ ಅಲ್ಲಿದ್ದ ಪಂಡಿತರಿಗೆಲ್ಲ ಅದೊಂದು ಜೋಳದ ಕಾಳು ಎಂದು ಗೊತ್ತಾಯಿತು. ಒಡನೆಯೇ ಪಂಡಿತರೆಲ್ಲರೂ ರಾಜನ ಬಳಿ ತೆರಳಿ ಬಲು ಉತ್ಸಾಹದಿಂದ ಈ ವಿಷಯವನ್ನು ತಿಳಿಸಿದರು.

ಅದು ಜೋಳದ ಕಾಳು ಎಂದು ತಿಳಿದ ರಾಜನಿಗೆ ಬಹಳಷ್ಟು ಆಶ್ಚರ್ಯವಾಯ್ತು!. ಕೂಡಲೇ ಆತ ಈ ರೀತಿಯ ಜೋಳ ಯಾವಾಗ ಮತ್ತು ಎಲ್ಲಿ ಬೆಳೆಯುತ್ತಿದ್ದರು ಎಂದು ತಿಳಿದುಕೊಂಡು ಬನ್ನಿ ಎಂದು ಆಜ್ಞೆಯಿತ್ತನು. ಮತ್ತೆ ಪಂಡಿತರು ಹುಡುಕಲು ಆರಂಭಿಸಿ,ತಮ್ಮ ಎಲ್ಲಾ ಪುಸ್ತಕಗಳನ್ನು ಹುಡುಕಿದರು; ಆದರೆ ಜೋಳದ ಕಾಳಿನ ಕುರಿತಾಗಿ ಒಂದಿಷ್ಟೂ ಮಾಹಿತಿ ದೊರೆಯಲಿಲ್ಲ. ಅವರು ರಾಜನ ಬಳಿಗೆ ಬಂದು ” ನಮಗೆ ಉತ್ತರ ದೊರೆಯಲಿಲ್ಲ. ನಮ್ಮ ಯಾವ ಪುಸ್ತಕದಲ್ಲೂ ಇದರ ಬಗ್ಗೆ ಮಾಹಿತಿ ಇಲ್ಲ, ಈ ಕುರಿತು ನೀವು ಯಾರಾದರೂ ರೈತರನ್ನೇ ವಿಚಾರಿಸಿದರೆ ಒಳ್ಳೆಯದು, ಅವರ ಪೂರ್ವಜರಿಂದ ಇದರ ಬಗ್ಗೆ ಅವರಿಗೆ ತಿಳಿದಿರಲೂಬಹುದು” ಎಂದು ಆಸ್ಥಾನ ಪಂಡಿತರು ಹೇಳಿದರು.

ರಾಜನಿಗೂ ಕೂಡಾ ಇದು ಸರಿಯೆನ್ನಿಸಿ ತನ್ನ ರಾಜ್ಯದಲ್ಲಿ ಇರುವ ಅತ್ಯಂತ ಹಿರಿಯ ರೈತನನ್ನು ಕರೆತರಲು ಆದೇಶಿಸಿದನು. ರಾಜನ ಅಣತಿಯಂತೆ ಅವನ ಸೇವಕರು ಅಂತಹ ವ್ಯಕ್ತಿಯನ್ನೇ ರಾಜನ ಬಳಿ ಕರೆತಂದರು. ಬಹಳಷ್ಟು ವಯಸ್ಸಾಗಿ ಬೆನ್ನು ಬಾಗಿದ, ದುರ್ಬಲ ತೆಳುದೇಹ ಮತ್ತು ಬಾಯಲ್ಲಿ ಒಂದೂ ಹಲ್ಲಿರದ ವ್ಯಕ್ತಿಯೊಬ್ಬ ಎರಡೆರಡು ಊರುಗೋಲಿನ ಸಹಕಾರದಿಂದ ಕಷ್ಟಪಟ್ಟು ರಾಜನ ಎದುರಿಗೆ ಬಂದನು .

ರಾಜನು ಅಲ್ಲಿದ್ದ ಕಾಳನ್ನು ತೋರಿಸಿದನು, ಆದರೆ ಆ ವ್ಯಕ್ತಿಗೆ ಅದು ಸರಿಯಾಗಿ ಕಾಣುತ್ತಿರಲಿಲ್ಲ, ಅದನ್ನು ಕೈಗಳಿಂದ ಹಿಡಿದುಕೊಂಡು ಸ್ಪರ್ಶಿಸಲು ತೊಡಗಿದ. ಆಗ ರಾಜನು ಉತ್ಸಾಹದಿಂದ ಕೇಳಿದನು :

“ಹಿರಿಯ ಈ ರೀತಿಯ ಬೆಳೆ ಎಲ್ಲಿ ಬೆಳೆಯುತ್ತಾರೆ ? ನೀನು ಎಂದಾದರೂ ಈ ರೀತಿಯ ಧಾನ್ಯವನ್ನು ಕೊಂಡಿರುವೆಯಾ ಅಥವಾ ನಿನ್ನ ಹೊಲದಲ್ಲಿ ಬೆಳೆದಿದ್ದೆಯಾ ? ರಾಜ ಕೇಳಿದ. ಮುದುಕನು ಸ್ವಲ್ಪ ಕಿವುಡನಾಗಿದ್ದ, ಹೀಗಾಗಿ ರಾಜನ ಮಾತನ್ನು ಅರ್ಥ ಮಾಡಿಕೊಳ್ಳಲು ಸಾಕಷ್ಟು ಕಷ್ಟಪಡುತ್ತಿದ್ದ.

“ಇಲ್ಲ!’ ಕೊನೆಗೂ ಆತ ಉತ್ತರಿಸಿದ, ” ಈ ರೀತಿಯ ಯಾವುದನ್ನೂ ನಾನು ಕೊಂಡಿಲ್ಲ ಮತ್ತು ಬೆಳೆದಿಲ್ಲ. ನಾನು ಕೊಳ್ಳುತ್ತಿದ್ದ ಧಾನ್ಯಗಳೂ ಸಹ ಇದೇ ರೀತಿ ಚಿಕ್ಕದಾಗಿದ್ದವು. ಈ ಬಗ್ಗೆ ನೀವು ನನ್ನ ತಂದೆಯನ್ನು ಕೇಳಿ, ಅವರಿಗೆ ಈ ಬಗ್ಗೆ ಗೊತ್ತಿದ್ದರೂ ಗೊತ್ತಿರಬಹುದು”. ಆತ ಉತ್ತರಿಸಿದ.

ಈಗ ರಾಜನ ಆದೇಶದ ಮೇರೆಗೆ ಆತನ ತಂದೆಯನ್ನೂ ಸಹ ಕರೆಸಲಾಯಿತು. ಆತನ ತಂದೆಯು ಒಂದೇ ಊರುಗೋಲಿನ ಸಹಾಯದಿಂದ ಅಲ್ಲಿಗೆ ಬಂದನು. ಚೆನ್ನಾಗೇ ದೃಷ್ಟಿ ಹೊಂದಿದ್ದ ಆತನು ರಾಜ ಹೇಳಿದಾಕ್ಷಣ ಆ ಧಾನ್ಯವನ್ನು ತೆಗೆದುಕೊಂಡು ಚೆನ್ನಾಗಿ ಗಮನಿಸಿದನು.

ಈ ರೀತಿಯ ಬೆಳೆ ಎಲ್ಲಿ ಬೆಳೆಯುತ್ತಾರೆ ? ನೀನು ಎಂದಾದರೂ ಈ ರೀತಿಯ ಧಾನ್ಯವನ್ನು ಕೊಂಡಿರುವೆಯಾ ಅಥವಾ ನಿನ್ನ ಹೊಲದಲ್ಲಿ ಬೆಳೆದಿದ್ದೆಯಾ ? ರಾಜ ಮತ್ತದೇ ಪ್ರಶ್ನೆಯನ್ನು ಕೇಳಿದನು.

ಈತನಿಗೂ ಸಹ ಅಷ್ಟಾಗಿ ಕೇಳಿಸುತ್ತಿರಲಿಲ್ಲವಾದರೂ ಸಹ ಅವನ ಮಗನಿಗಿಂತ ಈತನ ಸ್ಥಿತಿ ಉತ್ತಮವಾಗಿತ್ತು.

“ಇಲ್ಲ!’ ಆತನು ಉತ್ತರಿಸಿದ, ” ಈ ರೀತಿಯ ಯಾವುದನ್ನೂ ನಾನು ಕೊಂಡಿಲ್ಲ ಮತ್ತು ಬೆಳೆದಿಲ್ಲ. ಅಲ್ಲದೇ ನಮ್ಮ ಕಾಲದಲ್ಲಿ ಹಣವನ್ನು ಬಳಸುತ್ತಿರಲಿಲ್ಲ. ಆಗ ಪ್ರತಿಯೊಬ್ಬರೂ ಸಹ ತಮ್ಮ ಧಾನ್ಯಗಳನ್ನು ತಾವೇ ಬೆಳೆದುಕೊಳ್ಳುತ್ತಿದ್ದರು, ಹಾಗೊಂದು ವೇಳೆ ಇತರೆ ಧಾನ್ಯಗಳು ಬೇಕಾಗಿದ್ದರೂ ಸಹ ನಾವು ಬೇರೆ ಧಾನ್ಯಗಳನ್ನು ಬೆಳೆಯುತ್ತಿದ್ದವರೊಂದಿಗೆ ಹಂಚಿಕೊಳ್ಳುತ್ತಿದ್ದೆವು. ಈ ರೀತಿಯ ಧಾನ್ಯವನ್ನು ಎಲ್ಲಿ ಬೆಳೆಯುತ್ತಾರೋ ನನಗೆ ತಿಳಿದಿಲ್ಲ. ನಾನೂ ಸಹ ಕೆಲ ಹಿಟ್ಟಿನ ಧಾನ್ಯಗಳನ್ನು ದೊಡ್ಡ ಪ್ರಮಾಣದಲ್ಲಿ ಬೆಳೆದಿದ್ದೇನೆ. ಆದರೆ ಈ ರೀತಿಯ ಧಾನ್ಯದ ಪರಿಚಯ ನನಗಿಲ್ಲ, ಆದರೆ ನನ್ನ ತಂದೆಯ ಕಾಲದಲ್ಲಿ ಇಂತಹದ್ದನ್ನು ಹೆಚ್ಚಾಗಿ ಬೆಳೆಯುತ್ತಿದ್ದರೆಂದು ನಾನು ಕೇಳಿದ್ದೇನೆ, ಬೇಕಾದರೆ ಅವರನ್ನೇ ನೀವು ವಿಚಾರಿಸಿ’ ಎಂದು ಆತ ಹೇಳಿದನು.

ಮತ್ತೆ ಯಥಾ ಪ್ರಕಾರ ರಾಜನ ಆಜ್ಞೆಯನುಸಾರವಾಗಿ ಆತನ ತಂದೆಯನ್ನೂ ಸಹ ಹುಡುಕಿ ಕರೆಸಲಾಯಿತು. ಆತನ ತಂದೆಯು ಊರುಗೋಲಿನ ಸಹಾಯವಿಲ್ಲದೆಯೇ ಅಲ್ಲಿಗೆ ಬಂದನು. ಆತನ ದೃಷ್ಟಿ ಚೆನ್ನಾಗಿದ್ದು, ಕಿವಿಯೂ ಸ್ಪಷ್ಟವಾಗಿ ಕೇಳುತ್ತಿತ್ತು ಮತ್ತು ಆತನ ಮಾತೂ ಕೂಡಾ ಬಹಳಷ್ಟು ಸ್ಪಷ್ಟವಾಗಿತ್ತು. ರಾಜನು ಮತ್ತೆ ಆ ಧಾನ್ಯವನ್ನು ತೋರಿಸಿ ವಿವರಣೆ ಕೇಳಿದನು. ತಕ್ಷಣ ಆ ವ್ಯಕ್ತಿಯು ಆ ಧಾನ್ಯವನ್ನು ಕೈಗೆತ್ತಿಕೊಂಡು ಹೇಳಿದನು.

” ಬಹಳಷ್ಟು ಕಾಲದ ಹಿಂದೆ ಈ ರೀತಿಯ ಧಾನ್ಯವನ್ನು ನೋಡಿದಂತಿದೆ ” ಎನ್ನುತ್ತಾ ಸ್ವಲ್ಪ ಅದರ ರುಚಿ ನೋಡಿದನು.
“ಹೌದು ಇದೇ ಅದು ” ಎಂದು ಉತ್ತರಿಸಿದನು .

” ಓ ಹೌದಾ ಹಾಗಿದ್ದರೆ, ಹೇಳು ತಾತ ? ಈ ರೀತಿಯ ಧಾನ್ಯವನ್ನು ಎಲ್ಲಿ ಮತ್ತು ಯಾವಾಗ ಬೆಳೆಯಲಾಗಿತ್ತು? ನೀವು ಎಂದಾದರೂ ಈ ರೀತಿಯ ಧಾನ್ಯವನ್ನು ಕೊಂಡಿದ್ದಿರೇ ಅಥವಾ ನಿಮ್ಮ ಹೊಲದಲ್ಲಿ ಅದನ್ನು ಬೆಳೆಸಿದ್ದಿರೇ? ರಾಜ ತಿಳಿದುಕೊಳ್ಳಲು ಹವಣಿಸಿದ..

ಅದಕ್ಕೆ ಆ ಹಿರಿಯ ಈ ರೀತಿ ಉತ್ತರಿಸಿದ :
” ನಮ್ಮ ಕಾಲದಲ್ಲಿ ಈ ರೀತಿಯ ಧಾನ್ಯವನ್ನು ಎಲ್ಲೆಡೆಯೂ ಬೆಳೆಯಲಾಗುತ್ತಿತ್ತು. ನಾನೂ ಯುವಕನಾಗಿದ್ದಾಗ ಈ ರೀತಿಯ ಧಾನ್ಯ ಬೆಳೆಯುತ್ತಿದ್ದೆ ಮತ್ತು ಅದನ್ನು ಆಹಾರಕ್ಕಾಗಿ ಬಳಸಲು ಇತರರಿಗೂ ನೀಡುತ್ತಿದ್ದೆ. ನಾವು ಇದೇ ರೀತಿಯ ಧಾನ್ಯವನ್ನು ಬಿತ್ತಿ ಬೆಳೆದು ಕಟಾವು ಮಾಡುತ್ತಿದ್ದೆವು’.

ರಾಜ ಪುನಃ ಕೇಳಿದೆ :
” ತಾತ ನೀವಿದನ್ನು ಖರೀದಿಸುತ್ತಿದ್ದಿರೋ ಅಥವಾ ಎಲ್ಲವನ್ನೂ ನೀವೇ ಬೆಳೆಯುತ್ತಿದ್ದಿರೋ ?

ಆ ವ್ಯಕ್ತಿ ಮುಗುಳು ನಕ್ಕು ಉತ್ತರಿಸಿದ,

“ನಮ್ಮ ಕಾಲದಲ್ಲಿ ಅನ್ನವನ್ನು ಮಾರಾಟ ಮಾಡುವಂತಹ ಪಾಪದ ಕೆಲಸವನ್ನು ಯಾರೂ ಮಾಡುತ್ತಿರಲಿಲ್ಲ; ನಮಗೆ ಹಣ ಎಂದರೆ ಏನೆಂಬುದೂ ಸಹ ತಿಳಿದಿರಲಿಲ್ಲ. ಆಗ ಪ್ರತಿಯೊಬ್ಬ ಮನುಷ್ಯನಿಗೂ ಸಹ ತನ್ನದೇ ಆದ ಇಂತಿಷ್ಟು ಆಹಾರ ಧಾನ್ಯ ಇರುತ್ತಿತ್ತು.’

“ಸರಿ ಹಾಗಿದ್ದರೆ, ನಿಮ್ಮ ಹೊಲ ಎಲ್ಲಿತ್ತು ಅಂದರೆ ಈ ಧಾನ್ಯಗಳನ್ನು ಎಲ್ಲಿ ಬೆಳೆಯುತ್ತಿದ್ದಿರಿ ? ರಾಜ ಮತ್ತೆ ಕೇಳಿದ.

ಆತ ಉತ್ತರಿಸಿದ :
” ನನ್ನ ಹೊಲ ಈ ಭೂಮಿ ತಾಯಿ ಆಗಿತ್ತು. ನಾನು ಎಲ್ಲಿ ಉಳುಮೆ ಮಾಡುತ್ತಿದ್ದೇನೋ ಅದೇ ನನ್ನ ಹೊಲವಾಗಿತ್ತು . ಯಾರೊಬ್ಬರೂ ಸಹ ಈ ಭೂಮಿ ನನ್ನ ಸ್ವಂತದ್ದು ಎಂದು ಹೇಳುತ್ತಿರಲಿಲ್ಲ. ಬದಲಾಗಿ ಅವರವರ ಶ್ರಮವನ್ನು ಮಾತ್ರ ತನ್ನ ಸ್ವಂತದ್ದು ಎಂದು ತಿಳಿದಿದ್ದರು.’

ತುಸು ಗಂಭೀರನಾದ ರಾಜ “ದಯಮಾಡಿ ನನ್ನ ಇನ್ನೆರಡು ಪ್ರಶ್ನೆಗಳಿಗೆ ಉತ್ತರಿಸಿ” ಎಂದು ವಿನಂತಿಸಿಕೊಳ್ಳುತ್ತಾ ಕೇಳಿದ : ” ಅಂದು ಈ ರೀತಿಯ ಬೆಳೆಯನ್ನು ನೀಡುತ್ತಿದ್ದ ಭೂಮಿ ಈಗೇಕೆ ನೀಡುತ್ತಿಲ್ಲ? ಮತ್ತು ಎರಡನೆಯದಾಗಿ, ನೀವು ಇಷ್ಟೊಂದು ಆರೊಗ್ಯವಾಗಿದ್ದು ಏಕೆ ನಿಮ್ಮ ಮಗ ಮತ್ತು ಮೊಮ್ಮಗ ಊರುಗೋಲಿನ ಸಹಾಯದಿಂದ ನಡೆಯುತ್ತಾ ಸಾಕಷ್ಟು ಬಳಲಿದಂತೆ ಕಾಣುತ್ತಿದ್ದಾರೆ. ಏಕೆ ಈ ವ್ಯತ್ಯಾಸ ಉಂಟಾಗಿದೆ?

ಆತ ಉತ್ತರಿಸಿದ :

ಇದು ಬಹಳಷ್ಟು ಸರಳವಿದೆ, ” ಬರು ಬರುತ್ತಾ ಈ ಮನುಷ್ಯರು ತಮ್ಮ ಸ್ವಂತ ಶ್ರಮವನ್ನು ಮರೆತು ಇತರರ ಶ್ರಮದ ಮೇಲೆ ಬಹಳಷ್ಟು ಅವಲಂಬಿತರಾಗುತ್ತಿದ್ದಾರೆ. ಆದರೆ ಹಿಂದಿನ ಕಾಲದ ಮನುಷ್ಯರು ಹೀಗಿರಲಿಲ್ಲ; ಅವರು ಬಹಳಷ್ಟು ನೀತಿಬದ್ಧವಾಗಿ ಬದುಕುತ್ತಿದ್ದರು ಮತ್ತು ಅವರೆಲ್ಲ ತಮ್ಮ ಸ್ವಂತ ಶ್ರಮದಿಂದ ಗಳಿಸಿದ್ದನ್ನು ಬಿಟ್ಟು ಮತ್ತೊಬ್ಬರ ಶ್ರಮದ ಅನ್ನ ಮತ್ತು ಅನುಕೂಲಗಳಿಗೆ ಎಂದಿಗೂ ಆಸೆ ಪಡುತ್ತಿರಲಿಲ್ಲ.

‍ಲೇಖಕರು avadhi

May 24, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: