ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರುತಮ್ಮನ ಲಾಳ ಪ್ರವಾಸಕ್ಕೆ ಹೋದ ಕಥೆ – ಆಸ್ಟ್ರೇಲಿಯಾದಿಂದ ಶಿಲ್ಪಾ ಕುಲಕರ್ಣಿ

ರುತಮ್ಮನ ಕಥೆ

ಶಿಲ್ಪಾ ಕುಲಕರ್ಣಿ

ಬ್ರಿಸ್ಬೇನ್, ಆಸ್ಟ್ರೇಲಿಯ

ಮಾನವ ಸಂಬಂಧಗಳು ಈ ಆಧುನಿಕ ಕಾಲದಲ್ಲಿ ಕಡಿಮೆಯಾಗುತ್ತಿವೆ ಎನ್ನುವ ವಾದದಲ್ಲಿ ಹುರುಳಿಲ್ಲ ಎನ್ನುವದನ್ನು ಸಾಧಿಸುವ ಸಲುವಾಗಿಯೇ ಕಟ್ಟಿರುವ ಕಥೆಯಂತಿರುವ ಈ ಘಟನೆಯನ್ನು ನನ್ನೊಂದಿಗೆ ಹಂಚಿಕೊಂಡವಳು ನನ್ನ ರುಮೆನಿಯನ್ ಗೆಳತಿ ಎಲಿಸ್. ಮೇಲುನೋಟಕ್ಕೆ ಒಂದು ಸಾಮಾನ್ಯ ಘಟನೆಯಲ್ಲಿ ಅಸಾಮಾನ್ಯವಾದುದನ್ನು ಹುಡುಕುವ ಬಾಲಿಶ ಪ್ರಯತ್ನ ಎಂದು ನಕ್ಕು ಬಿಡಬಹುದಾದ ಈ ಕಥೆಯಲ್ಲಿ ಮಾನವ ಸಂಬಂಧಗಳು ಪಡೆದುಕೊಳ್ಳುತ್ತಿರುವ ಈ ಹೊಸ ರೂಪಗಳು, ಒಬ್ಬರ ಭಾವನೆಗಳಿಗೆ ಮತ್ತೊಬ್ಬರು ಮಿಡಿಯುವ ರೀತಿ ನಿಮಲ್ಲಿ ಕೆಲವರಿಗಾದರೂ ಸೋಜಿಗ ತರಬಹುದು.

ನಮ್ಮ ಕಥೆಯ ಕಥಾ ನಾಯಕಿ ರುತ್ತಮ್ಮ ಅಥವಾ ಮಮಾರುತಾ (Mama Rutha) ರೊಮೆನಿಯಾದ ಒಬ್ಬ ಸಾಮಾನ್ಯ ನೇಕಾರ ಮಹಿಳೆ. ನೇಕಾರಿಕೆಯೇ ಅವಳ ಜೀವನ ಮತ್ತು ಲಾಳ (shuttle) ಅನ್ನುವ ಒಂದು ಕಟ್ಟಿಗೆ ತುಂಡು ಅವಳ ಸಂಗಾತಿಯಾಗಿತ್ತು. ಆದರೆ ಅವಳಿಗಿದ್ದದ್ದು ಒಂದೇ ಆಸೆ. ತನ್ನ ಜೀವಿತಾವಧಿಯಲ್ಲಿ ರೊಮೆನಿಯಾವನ್ನು ಪ್ರವಾಸ ಮಾಡುವದು. ಆದರೆ ಕೆಲಸದ ಜಂಜಾಟ ಹಾಗೂ ಅನುಕೂಲವಿಲ್ಲದ ಕಾರಣ ಅವಳು ತನ್ನ ಊರನ್ನೂ ಬಿಟ್ಟು ಹೊರ ಹೋಗಲಾಗಲಿಲ್ಲ. ಅವಳು ತಾನು ಹೋಗಲಾಗದಿದ್ದರೂ ತನ್ನ ಲಾಳವಾದರೂ ಸುಂದರವಾದ ರೊಮೆನಿಯಾವನ್ನು ಹಾಗೂ ಇತರ ಕೆಲವು ದೇಶಗಳನ್ನು ಪ್ರವಾಸ ಮಾಡಲಿ ಎಂದು ತನ್ನ ಚಿಕ್ಕ ಮೊಮ್ಮಗಳ ಮುಂದೆ ತನ್ನ ಬಯಕೆಯನ್ನು ಹೇಳಿಕೊಂಡಿದ್ದಳು. ಈಗ ಅವಳು ತೀರಿಕೊಂಡು ಹಲವು ವರ್ಷಗಳಾಗಿವೆ.

ಅವಳ ಮೊಮ್ಮಗಳು ಎಲಿನ ದೊಡ್ಡವಳಾದ ಮೇಲೆ ತನ್ನ ಅಜ್ಜಿಯ ಆಸೆಯನ್ನು ಮರೆತಿರಲಿಲ್ಲ , ಅವಳು ಅದನ್ನು ನೆರವೇರಿಸಲು ಏನಾದರೂ ಮಾಡಬೇಕು ಎಂದು ನಿರ್ಧಾರ ಮಾಡಿದಳು. ತಕ್ಷಣ ಅವಳು ಒಂದು ಬ್ಲಾಗ್(http://www.suveicachicd10.blogspot.com.au/)ನ್ನು ರಚಿಸಿ ತನ್ನ ಅಜ್ಜಿಯ ಕಥೆ ಹಾಗೂ ಅವಳ ಆಸೆಯನ್ನು ಅದರಲ್ಲಿ ಬರೆದು ಅದನ್ನು ಫೇಸ್ ಬುಕ್ ನಲ್ಲಿ ಹಾಕಿದಳು.

ಮಮಾರುತಾಳ ಕಥೆ ಜಗತ್ತಿನಾದ್ಯಂತ ಇರುವ ಎಲ್ಲ ರೊಮೆನಿಯನ್ನರ ಮನಸಿನ ಕದವನ್ನು ತಟ್ಟಿತು. ರಾಡು ಎನ್ನುವ ಒಬ್ಬ ಯುವಕ ಆ ಲಾಳವನ್ನು ಜರ್ಮನಿಗೆ ತೆಗೆದುಕೊಂಡು ಹೋಗಲು ಮುಂದೆ ಬಂದ. ಎಲಿನ ಸಂತೋಷದಿಂದ ಒಪ್ಪಿಕೊಂಡಳು. ಹಾಗೆ ಜರ್ಮನಿಯ ಮುಂಚೆನ್ ಗೆ ಹೋಗುವಾಗ ಮಾರ್ಗದಲ್ಲಿ ರಾಡು ಹಂಗೇರಿ ಹಾಗೂ ಆಸ್ಟ್ರಿಯಾಗಳಿಗೂ ತೆಗೆದುಕೊಂಡು ಹೋದ. ಇದು ಮಮಾರುತಾಳ ಲಾಳದ ಮೊದಲ ವಿದೇಶ ಪ್ರವಾಸ. ಅಲ್ಲಿಂದ ಆ ಲಾಳ ಆಮಸ್ಟರಡ್ಯಾಮನಲ್ಲಿ ಚಿತ್ರಕಾರ ಜಾನ ವೀರ್ಮರ್‌ನನ್ನು ಹಾಗೂ ಬ್ರುಸೆಲ್ಸ್‌ನಲ್ಲಿ ಯುರೋಪಿಯನ್ ಪಾರ್ಲಿಮೆಂಟ್‌ನ್ನು ಭೇಟಿ ಮಾಡಿತು. ಮತ್ತೆ ರೊಮೆನಿಯಾಕ್ಕೆ ಮರಳಿತು, ಆಗ ರಾಡು ತನ್ನ ಈ ಕಥೆಯನ್ನು ಫ಼ೇಸ್ ಬುಕ್ ನಲ್ಲಿ ಬರೆದುಕೊಂಡನು.

ಇದನ್ನು ನೋಡಿದ ನನ್ನ ರೊಮೆನಿಯಾದ ಗೆಳತಿ ಎಲಿಸ್ ಅದನ್ನು ಆಸ್ಟ್ರೇಲಿಯಾಕ್ಕೆ ತೆಗೆದುಕೊಂಡು ಬರಲು ನಿರ್ಧರಿಸಿ ಮಮಾರುತಾಳ ಮೊಮ್ಮಗಳು ಎಲಿನ್‌ನ್ನು ಸಂಪರ್ಕಿಸಿದಳು ಆದರೆ ಲಾಳ ಆಗಲೆ ಇಸ್ತಾನ್‌ಬುಲ್ ಪ್ರವಾಸಕ್ಕೆ ತಯಾರಾಗಿ ಕುಳಿತಿತ್ತು ಹಾಗಾಗಿ ನನ್ನ ಗೆಳತಿ ಆ ಲಾಳವನ್ನು ಆಸ್ಟ್ರೇಲಿಯಾಕ್ಕೆ ತರಲು ನಾಲ್ಕು ತಿಂಗಳು ಕಾಯಬೇಕಾಯಿತು.

ಆವೇಳೆ ಇದು ಇಸ್ತಾನ್‌ಬುಲ್‌ನಲ್ಲಿ ಜನಪ್ರಿಯ ಬಾಜಾರ್, ಪಲೆರ್ಮೊ ಮತ್ತು ಇಟಲಿಯಲ್ಲಿ ವೆನಿಸ್‌ನ್ನು, ಸ್ಟ್ರಾಸಬರ್ಗ್ ಮತ್ತು ಫ್ರೆಂಚ್ ಆಲ್ಪ್ಸ್ , ಆಫ್ರಿಕಾದಲ್ಲಿ ಸಹಾರಾ ಮರುಭೂಮಿಯನ್ನು ದರ್ಶನ ಮಾಡಿತು. ಹಾಗೆಯೇ ವಿಯೆನ್ನಾ, ಲಂಡನ್, ಡಸ್ಸೆಲ್ದೊರ್ಫ಼್‌ದಲ್ಲಿ ಪ್ರಸಿದ್ಧ ಹಾಡುಗಾರ ಮೈಕಲ್ ಬಬಲ್‌ರನ್ನು ಭೇಟಿ ಮಾಡಿತು. ನಂತರ ಥೈಲ್ಯಾಂಡ್ ಹಾಗೂ ಇನ್ನಿತರ ಸ್ಥಳಗಳ ಪ್ರವಾಸ ಮಾಡಿತು, ಹೀಗೆ ಇದರ ಪ್ರಯಾಣ ಸಾಗಿತು.

ನನ್ನ ಗೆಳತಿಗೆ ವೈಯಕ್ತಿಕ ಕಾರಣಗಳಿಂದಾಗಿ ಇಲ್ಲಿ ಆಸ್ಟ್ರೇಲಿಯದಿಂದ ರೊಮೆನಿಯಾಕ್ಕೆ ಹೋಗಬೇಕಾಯಿತು. ಆಗ ಅವಳು ಎಲಿನ್‌ಳನ್ನು ಲಾಳವನ್ನು ಆಸ್ಟ್ರೇಲಿಯಾಕ್ಕೆ ತರುವ ವಿಷಯವಾಗಿ ಮಾತನಾಡಿದಳು, ಅವಳು ಕೂಡ ಸಂತಸದಿಂದ ಒಪ್ಪಿಕೊಂಡಳು. ಆಲ್ಲಿಂದ ನನ್ನ ಗೆಳತಿ ಲಾಳವನ್ನು ಆಸ್ಟ್ರೇಲಿಯಾಕ್ಕೆ ಬರುವ ದಾರಿಯಲ್ಲಿ ಇಟಲಿಗೆ ತೆಗೆದುಕೊಂಡು ಹೋಗಿ ಅಲ್ಲಿಯ ತನ್ನ ನೆಂಟರಿಗೆ ತೋರಿಸಿದಳು. ಅಲ್ಲಿಂದ ಆಸ್ಟ್ರೇಲಿಯಾಕ್ಕೆ ತೆಗೆದುಕೊಂಡು ಬಂದಳು. ಆಸ್ಟ್ರೇಲಿಯಾದಲ್ಲಿ ಆ ಲಾಳ ಅವಳ ಹತ್ತಿರ ೫ ತಿಂಗಳವರೆಗೆ ಉಳಿಯಿತು. ಅವಳು ಮೊದಲು ಬ್ರಿಸ್ಬೇನ್‌ಗೆ ಪರಿಚಯಿಸಿದಳು ಆದರೆ ಇಲ್ಲಿಯ eನರಿಗೆ ಅದರ ಬಗ್ಗೆ ಇರುವ ಅವಳ ಭಾವೋದ್ರೇಕತೆ ಅರ್ಥವಾಗಲಿಲ್ಲ. ಅವಳು ಅದನ್ನು ತೆಗೆದುಕೊಂಡು ನ್ಯೂಜಿಲೆಂಡ್‌ಗೆ ಹೋದಳು ಅಲ್ಲಿಯ ಜನ ಅದರ ಬಗ್ಗೆ ಆಸಕ್ತಿ ತೆಗೆದುಕೊಂಡು ಅವರಿಗಾಗಿ ಒಂದು ವಿಶೇಷ ಕಾರ್ಯಗಕ್ರಮ ಇಟ್ಟುಕೊಂಡಿದ್ದರು ಅಲ್ಲಿ ಆ ಲಾಳ ವಿಶೇಷ ಅತಿಥಿಯಾಗಿತ್ತು. ಇದಾದ ನಂತರ ನೋಡಿದ ಜನರೆಲ್ಲ ಈ ಲಾಳದ ಬಗ್ಗೆ ಸ್ಪಂದಿಸತೊಡಗಿದರು. ಈ ಲಾಳದ ಕಥೆಯನ್ನು ಕೇಳುತ್ತಿದ್ದರು, ಅದರೊಂದಿಗೆ ಪೊಟೊ ತೆಗೆಸಿಕೊಳ್ಳುತ್ತಿದ್ದರು. ಮತ್ತೆ ಅಲ್ಲಿಂದ ತಿರುಗಿ ಆಸ್ಟ್ರೆಲಿಯಾ ಪ್ರವಾಸ ಕೈಗೊಂಡಿತು. ಕ್ರಿಸ್‌ಮಸ್ ರಜೆಯಲ್ಲಿ ಪರ್ತ್ ಹಾಗೂ ಅಲ್ಬನಿಗೆ ಹೋಗಿ ಬಂದಿತು.ಅಷ್ಟರಲ್ಲಿ ಅದನ್ನು ಅಮೆರಿಕ ಪ್ರವಾಸ ಮಾಡಿಸಲು ಯಾರೊ ಒಬ್ಬರು ಟಿಕೆಟ್ ಬುಕ್ ಮಾಡಿದ್ದರು. ಅಲ್ಲಿಗೆ ನನ್ನ ಗೆಳತಿಯೊಂದಿಗಿದ್ದ ಲಾಳ ಮರಳಿ ರುಮೇನಿಯಾಕ್ಕೆ ಪ್ರಯಾಣಿಸಿತು.

ತನ್ನ ಪ್ರವಾಸ ಕಾಲದಲ್ಲಿ ಹಲವಾರು ಜನ ಈ ಲಾಳದ ಜೊತೆಗೆ ಪೊಟೊ ತೆಗೆಸಿಕೊಂಡರು. ಹಾಗೆಯೇ ಅವರ ಪೊಟೊದಲ್ಲಿ ಒಡಮೂಡಿದ ಈ ಲಾಳ ಅವರೆಲ್ಲರೊಂದಿಗೆ ತನ್ನ ಒಡತಿಯ ಮನದಾಸೆಯನ್ನ, ವ್ಯಥೆಯನ್ನು ಹಾಗೆಯೆ ಮಾನವ ಸಂಬಂಧಗಳ ಹೊಸ ತರಂಗಗಳನ್ನೂ ಮೂಡಿಸಿರಬಹುದಲ್ಲವೆ??

 

ನಂಬಿದರೆ ನಂಬಿ, ಇತ್ತೀಚಿನ ವರದಿಯ ಪ್ರಕಾರ ಈ ಲಾಳ ಇಲ್ಲಿಯವರೆಗೂ ಇಡೀ ಜಗತ್ತಿನಾದ್ಯಂತ ೩೦೦,೦೦೦ಕಿಮೀ ಪ್ರವಾಸ ಮಾಡಿದೆ, ಅದನ್ನು ಬಾಹ್ಯಾಕಾಶಕ್ಕೂ ತೆಗೆದುಕೊಂಡು ಹೋದರೂ ಆಶ್ಚರ್ಯ ಪಡಬೇಕಾಗಿಲ್ಲ. ಹೀಗಾಗಿ ಮಾಮಾರುತಾಳ ಆಸೆ ಪೂರೈಸಿದಂತಾಗಿದೆ. ಒಬ್ಬ ಶ್ರಮಜೀವಿಯ ಆಸೆ ಈಡೇರಿಸಲು ಜನ ಮುಂದೆ ಬಂದ ರೀತಿ ಶ್ಲಾಘನೀಯ. ಆ ಲಾಳ ಒಂದು ಕಟ್ಟಿಗೆ ತುಂಡು ಆಗಿರಬಹುದು,ಆದರೆ ಅದು ಅವರ ಪಾಲಿಗೆ ಮಾಮಾರುತಾಳ ಆತ್ಮ. ಜಗತ್ತಿನಲ್ಲಿ ಇನ್ನು ಇಂಥ ಭಾವಜೀವಿಗಳು ಇದ್ದಾರೆ ಹಾಗೂ ಮನುಷ್ಯರಿರುವ ತನಕ ಇಂಥ ಮನುಷತ್ವದ ಭಾಗವೇ ಆಗಿರುವ ಈ ಬೇರೆಯವರಿಗೆ ಮಿಡಿಯುವ ಗುಣ ಇದ್ದೇ ಇರುತ್ತದೆ.

 

 

 

‍ಲೇಖಕರು G

15 October, 2012

3 Comments

  1. Priya Kulkarni

    Very nice story and very good narration. Humanity is still alive around the world!!

  2. Sadanand Kubsad

    A nice heart touching story-“fulfilling the wish”. There is a saying in Kannada-“Ravi kanaddan Kavi kanuthane’.

  3. Sadanand Kubsad

    A nice heart touching story-”fulfilling the wish”. There is a saying in Kannada-”Ravi kanaddan Kavi kanuthane’.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading