ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರೀಲು ಸುತ್ತಿದವನ ಸ್ವಗತ..

 

ಡಾ ಎಸ್ ಬಿ ಜೋಗುರ

ಎಲ್ಲಿ ನೋಡದರೂ ಜನಾನೇ ಜನ..ಗದ್ದಲೋ ಗದ್ದಲು. ನೆರೆದ ಮಂದಿನ್ನ ನಡುವ ಸುತ್ತಿ, ಒಂದೇ ಸವನೆ ಧೂಳು ಅಡರತ್ತಿತ್ತು. ಅಂಥಾ ಸಣ್ಣ ಹಳ್ಳಿಯೊಳಗೂ ಆ ಪರಿ ಮಂದಿ ಸೇರೂದು ವರ್ಷದೊಳಗ ಒಂದೇ ಒಂದು ಸಾರಿ. ಇಂಡಿ ಮತ್ತು ಸೋಲಾಪುರದ ಗಡಿ ಭಾಗದೊಳಗಿರೋ ಶಿಂತ್ರಿ ಅನ್ನೋ ಊರೊಳಗ ಜನೆವರಿ ತಿಂಗಳು, ಹುಣ್ಣಿವಿ ಮುಂದ ಸಿದ್ಧರಾಮೇಶ್ವರ ಜಾತ್ರಿ ಬಾಳ ರಮಜೀಲೇ ನಡೀತಿತ್ತು. ಹಂಗಾಗಿ ಊರ ತುಂಬಾ ಜನಾ ಜಾತ್ರಿ. ನಿಲ್ತಾ..ನಡೀತಾ.. ಪಂವ್..ಪಂವ್ ಅಂತ ಉಸುರು ಬಿಡದೇ ಹಾರ್ನ್ ಬಾರಸ್ತಾ, ಹಗೂರಕ ಗುಡಿ ಮುಂದಿರೋ ತೇರಿನ ಜಾಗದ ಮಟಾ ಬಸ್ ಬಂದು ಮುಟ್ಟೂದಂದ್ರ ಡ್ರೈವರ್ ಕುರಿ ಕ್ವಾಣಾ ಬಿದ್ದಂಗಾಗತಿತ್ತು. ಹಿಂಗಾಗಿ ಅಂವಾ ತುಸು ದೂರದೊಳಗೇ ಬಸ್ ನಿಲ್ಲಿಸಿ ‘ಇನ್ ಬಸ್ ಮುಂದ ಹೋಗುವಂಗಿಲ್ಲ, ಇಲ್ಲೇ ಇಳಕೋರಿ’ ಅಂತಿದ್ದ. ದೂರದಿಂದ ಬಸ್ ಡಿಸ್ಟರ್ಬ್ ಆದ ಜೇನು ಗೂಡು ಕಂಡಂಗ ಕಾಣತಿತ್ತು.
ಬಸ್ಸಿನ ಒಳಗ ಎಷ್ಟು ಮಂದಿತ್ತೋ, ಅದರ ಟಪ್ಪಾದ ಮ್ಯಾಲೂ ಅಷ್ಟೇ ಮಂದಿತ್ತು. ತೊಟ್ಟಿಲು, ಚಿರಕೀಗಾಣ, ಸಣ್ಣ ಸರ್ಕಸ್, ಎರಡು ತಲಿ ಮನುಷ್ಯಾ, ಫಳಾರ ಅಂಗಡಿ, ಬಳಿ ಅಂಗಡಿ, ಬಟ್ಟೆ ಅಂಗಡಿ, ಆಟಿಗೆ ಸಾಮಾನು, ಹೀಂಗ ಗುಡಿಯಿಂದ ಸುರು ಆಗಿ ಭೇಷಿ ಒಂದು ಮೈಲು ಮಟ ರಸ್ತೆ ಎದುರಾ ಬದರ ಅಂಗಡಿಗಳನ್ನ ಟೆಂಟ್ ಹಾಕತಿದ್ದರು. ಅಲ್ಲಲ್ಲಿ ಗಿಡದ ನೆರಳ ಚಾಟಿನೊಳಗ ಜಾತ್ರಿಗಿ ಬಂದ ಎತ್ತಿನ ಗಾಡಿಗೋಳು ನಿಲ್ಲತಿದ್ದವು. ಸಿದ್ದರಾಮೇಶ್ವರ ಜಾತ್ರಿ ಭೇಷಿ ವಾರಮಟ ನಡಿಯೂದು. ಈ ಶಿಂತ್ರಿ ಜಾತ್ರಿಗಿ ಇಕಾಡಿ ಕರ್ನಾಟಕದಿಂದ ಎಷ್ಟು ಜನ ಬರತಿದ್ದರೋ ಆ ಕಡಿ ಅಷ್ಟೆ ಜನ ಮಹಾರಾಷ್ಟ್ರದಿಂದಲೂ ಬರತಿದ್ದರು. ಒಂದು ವಾರದ ಮಟ ಭರ್ಜರಿ ಯಾಪಾರ ಆಗೂದು. ಕನ್ನಡ ಸಾಲಿ ಹಿಂದಿರೋ ಗ್ರೌಂಡಿನೊಳಗ ದೊಡ್ಡದಾಗಿ ಪ್ರತಿವರ್ಷದಂಗ ಮಾಲತೇಶ ಟೂರಿಂಗ್ ಟಾಕೀಜ್ ದ ದೊಡ್ಡದೊಂದು ಟೆಂಟ್ ಬಿದ್ದಿರತಿತ್ತು.
ರೈತರು ಸುಗ್ಗಿ ಮುಗಿಸಿ, ಸವುಡು ಆಗಿದ್ದೇ ಈ ಜಾತ್ರಿಗೊಳು ಸುರು ಆಗತಿದ್ದವು. ಬಿಜಾಪುರ ಜಿಲ್ಲಾದ ಇಂಡಿ ತಾಲೂಕಿನ ಕಟ್ಟ ಕಡೆ ಹಳ್ಳಿ ಈ ಶಿಂತ್ರಿ. ಇದು ಕನ್ನಡ ಸೀಮೆಯೊಳಗ ಇದ್ದರೂ ಇಲ್ಲಿ ಮರಾಠಿ ಹಾವಳಿ ಬಾಳ ಇತ್ತು. ನೀವು ಯಾವುದೇ ಭಾಷೆಯೊಳಗ ಮಾತಾಡದರೂ ಅವರು ಮಾರಾಠಿಯೊಳಗೇ ಉತ್ತರ ಕೊಡವರು. ಹಂಗಂತ ಅವರಿಗಿ ಕನ್ನಡ ಬರೂದಿಲ್ಲ ಅಂತ ತಿಳ್ಕೊಬ್ಯಾಡ್ರಿ. ಮತ್ತ ಮತ್ತ ನೀವು ಕನ್ನಡದೊಳಗೇ ಮಾತಾಡ್ತಾ ಹೊಂಟರೆಂದ್ರ ಅವಾಗ ಅವರೂ ಕನ್ನಡ ಸುರು ಮಾಡ್ತಾರ. ಇಲ್ಲಿ ಜಾತ್ರಿ ಮುಗದ ಮ್ಯಾಲೂ ತಿಂಗಳಾನುಗಟ್ಟಲೆ ಉಳಿಯೋ ಟೆಂಟ್ಗಳಂದರ ಒಂದು ಸಿನೇಮಾದ್ದು, ಇನ್ನೊಂದು ನಾಟಕದ್ದು. ಆ ಶಿಂತ್ರಿಯೊಳಗ ಊರತುಂಬ ತಿರುಗಾಡಿ ಕಾಳು ಕಡಿ ತುಂಬೋ ಗಂಗಪ್ಪ ಚಪ್ಪರದವರ ಅಂತ ಇದ್ದ. ಅಂವಾ ಸಿನೇಮಾ ಮತ್ತ ನಾಟಕದೊಳಗಿನ ಹುಳಾ ಇದ್ದಂಗ. ನಾಟಕ, ಸಿನೆಮಾ ಟೆಂಟ್ ಕಿತಗೊಂಡು ಊರ ಬಿಟ್ಟು ಹೋಗೂ ಮಟ ನೋಡಿದ್ದೇ ನೊಡಿದ್ದು. ಅದು ಮರಾಠಿ ಇರಲಿ, ಕನ್ನಡ ಇರಲಿ, ಹಿಂದಿ ಇರಲಿ ಒಟ್ಟಾರೆ ಹೋಲ್ಸೇಲಾಗಿ ಅಂವಾ ಸಿನೇಮಾ..ನಾಟಕ ನೋಡವನು. ಇಂಥಾ ಗಂಗಪ್ಪಗ ಭೀಮಪ್ಪ ಅನ್ನೋ ಒಬ್ಬನೇ ಒಬ್ಬ ಮಗ ಇದ್ದ. ಆ ಭೀಮಪ್ಪ ಆಗಿನ್ನೂ ಬಾಳ ಸಣ್ಣಂವ. ಹೆಚ್ಚಂದರ ಎಂಟು ವರ್ಷದಂವ ಇರಬೇಕು. ಆ ಗಂಗಪ್ಪ ಅವನ್ನೂ ತನ್ನ ಜೋಡಿ ಕರಕೊಂಡು ಹೋಗಂವ. ಹೆಂಡತಿ ಇಂದರವ್ವ ‘ನೀ ನೋಡೂದಲ್ದೇ ಆ ಪಾರಗೂ ಅದೇ ಚಟಾ ಕಲಸಾಕತ್ತೀಯಲ್ಲ..?’ ಅಂದರೂ ಅಂವಾ ಕೇಳತಿರಲಿಲ್ಲ. ಇಂಥಾ ಗಂಗಪ್ಪನ ಮಗ ಭೀಮಪ್ಪ ತನ್ನೂರಿಗೆ ಬರೋ ಆ ಟೆಂಟಿನ ಸಿನೇಮಾದೊಳಗ 50 ಪೈಸೆ ಕೊಟ್ಟು, ನೆಲದ ಮ್ಯಾಲ ಕುಂತು ಮೊಟ್ಟ ಮೊದಲು ಸ್ವತಂತ್ರವಾಗಿ ಸಿನೇಮಾ ನೋಡಿದ್ದು ಡಾ. ರಾಜಕುಮಾರ ನಟಿಸಿರೋ ಸಿಪಾಯಿ ರಾಮು.
ಇದು ಬರೊಬ್ಬರಿ ನಾಲ್ಕು ದಶಕದ ಹಿಂದಿನ ಮಾತು. ಅದೊಂದು ಕೆಂಪು-ಹಸಿರು ಬಣ್ಣದ ಟ್ರಕ್ಕು. ಅದರ ಹಣಿ ಮ್ಯಾಲ ಮಾಲತೇಶ ಟೂರಿಂಗ್ ಟಾಕೀಸ್ ಅಂತ ಬರೆದ ಬೋಡರ್ು. ಆ ಟ್ರಕ್ಕು ಬರೀ ಟ್ರಕ್ಕಲ್ಲ, ಒಂಥರಾ ಆಲ್ ಇನ್ ಒನ್. ಅದರೊಳಗೆ ಸಿನೇಮಾ ಮೂಡಿಸೋ ಪ್ರೊಜೆಕ್ಟರ್, ರೀಲುಗಳು, ಪೋಸ್ಟರಗಳು, ಜನರೇಟರ್, ಟೆಂಟು ಹಾಕೋ ಕಂಬ, ತಾಡಪಾಲು, ಪತ್ರಾಸು, ಚಾಪೆ, ಹಾಸಿಗೆ ಹೊದಿಕೆ ಎಲ್ಲಾ ಇರತಿದ್ವು. ಜೊತೆಗೆ ಸಿನೇಮಾ ಮೂಡಿಸೋ ಆಪರೇಟರ್ ಮೈಬೂಬ ಮತ್ತು ಮ್ಯಾನೇಜರ ತುಕಾರಾಂ, ಒಂದಿಬ್ಬರು ಗೇಟ್ ಕೀಪರುಗಳು ಸೈತಾ ಖಾಯಂ ಆ ಟ್ರಕ್ಕಿನ್ಯಾಗೇ ಇರತಿದ್ದರು. ರಾತ್ರಿ ಆ ಟ್ರಕ್ಕಲ್ಲೇ ಅವರೆಲ್ಲರ ಠಿಕಾಣಿ. ಇಕಾಡಿ ಟೆಂಟ್ ಹಾಕತಾ ಇದ್ದಂಗ, ಅಕಾಡಿ ಒಂದು ಎತ್ತಿನ ಗಾಡಿ ಮ್ಯಾಲ ಎರಡೂ ಕಡಿ ಪೋಸ್ಟರ್ ಕಟ್ಟಿ ಹಲಗಿ ಹೊಡೀತಾ ಊರ ತುಂಬಾ ಮೆರವಣಗಿ ತಗೀತಿದ್ದರು. ರಾಜಕುಮಾರ ಸಿನೇಮಾ ಇದ್ದರಂತೂ ಮೆರವಣಗಿ ಬಾಳ ಜೋರ್ ಇರತಿತ್ತು. ಹಾರಿಸೋ ಹ್ಯಾಂಡಬಿಲ್ ಮ್ಯಾಲ ಮುಕುರದಂಗ ಬೀಳೋ ಹುಡುಗರು ಅವನ್ನ ಅಡ್ರಾಸಿ ತಗೋತಿದ್ದರು.
ಸಂಜಿ ಆಗತಾ ಇದ್ದಂಗ ಟೆಂಟ್ ನೆತ್ತಿ ಮ್ಯಾಲ ಬಿಗದಿರೋ ಬುಂಗಾ, ಪಿ.ಬಿ.ಶ್ರೀನಿವಾಸ ಹಾಡಿರೋ ‘ಮೂಸಿಕ ವಾಹನ..’ ಅನ್ನೋ ಹಾಡನ್ನ ಆಜೂ ಬಾಜೂ ಊರಮಟ ಕೇಳೂವಂಗ ಬಾಯಿ ಹರಕೊಂಡು ಹಾಡತಿತ್ತು. ತುಸು ಮಬ್ಬ ಆಗಿಂದ ಜನಾ ಹಳಕಹಳಕಾಗಿ ಹರಕೊಂಡು ಬರತಿದ್ದರು. ಡಾ. ರಾಜಕುಮಾರನ ಯಾವುದೇ ಸಿನೇಮಾ ಇದ್ದರೂ ಇಡೀ ಊರಿಗೂರೇ ಕಿತಗೊಂಡು ಬರತಿತ್ತು. ಜಾತ್ರಿ ವ್ಯಾಳೆದೊಳಗಂತೂ ಮುದ್ದಾಂ ರಾಜಕುಮಾರನ ಸಿನೇಮಾನೇ ಹುಡುಕಿ ತರತಿದ್ದರು. ಆವಾಗ ಟಿಕೆಟ್ ದರಾನೂ ಬಾಳ ಕಡಿಮಿ ಇತ್ತು. ನೆಲದ ಮ್ಯಾಲ ಕುಂತರ ಎಂಟಾಣೆ, ಚಾಪಿ ಮ್ಯಾಲ ಬಾರಾಣೆ. ಸಂಜಿ ಆರು ಗಂಟೆ ಆಗತಾ ಇದ್ದಂಗ ಆಪರೇಟರ್ ಮೈಬೂಬ ಹಗೂರಕ ಟ್ರಕ್ಕಿನ ಹಿಂದಿನ ಪಾಟಕ್ ಬಿಡಿಸಿಟ್ಟು ಗಿರ್ರ್ ಅಂತ ರೀಲ್ ಸುತ್ತವನು. ಬರೀ ಮೈಯಿಂದ ಕುಂತು ಅಂವಾ ಮಾಡೊ ಕಿಸಾಮತಿ ನೋಡ್ಕೊಂತ ಭೀಮಪ್ಪನಂಥಾ ಸಣ್ಣ ಸಣ್ಣ ಮಕ್ಕಳು ಬಾಯಿ ಬಿಟ್ಗೊಂಡು ನಿಲ್ಲತಿದ್ದರು. ಅಂವಾ ರೀಲ್ ಸುತ್ತಿ ಇಡೂದು, ಮತ್ತೊಂದು ರೀಲ್ ಸುತ್ತೂದು, ಒಂದು ಜುರುಕಿ ಹಂಗೇ ಬೀಡಿ ಜಗ್ಗೂದು ಮಾಡತಿದ್ದ. ಆ ಭೀಮಪ್ಪನಂಥಾ ಚುಕ್ಕೋಳಗಿ ಆ ಚಕ್ಕಳ ಮೈ ಮೈಬೂಬನೇ ಖರೆ ಖರೆ ಹೀರೋ ಆಗಿದ್ದ. ದೂರ ನಿತ್ಗೊಂಡು ‘ಅವನೇ ನೋಡ್ರೆಲೆ ಸಿನೇಮಾ ಮೂಡಸವನು’ ಅಂತ ತಮ್ಮ ತಮ್ಮೊಳಗ ಮಾತಾಡತಿದ್ದರು. ಬರೀ ಚುಕ್ಕೋಳು ಮಾತ್ರ ಅಲ್ಲ, ಊರಾಗಿನ ಕೆಲ ದೊಡ್ದವರು ಸೈತಾ ಮೈಬೂಬ ರೀಲ್ ಸುತ್ತೂದು ನಿಂತಗೊಂಡು ನೋಡತಿದ್ದರು. ಹಂಗ ನೋಡೂ ಮುಂದ ಸೊಟ್ಟ ಮೈ ಮೈಬೂಬ ತುಸು ಸ್ಟೈಲಾಗಿ ಕೂದಲಾ ಸರಸತಾ, ಬೀಡಿ ಜಗ್ಗತಾ ರೀಲ್ ಸುತ್ತಿ ರೆಡಿ ಮಾಡತಿದ್ದ. ಬರೊಬ್ಬರಿ 6-30 ಕ್ಕ ಒಂದನೇ ಆಟ ಸುರು ಆಗತಿತ್ತು. ಜನಾ ಸರಕಾರಿ ರೀಲ್ ತಪ್ಪತೈತಿ ಅಂತ ಗಡಬಡಿಸಿ ಟಾಕೀಜ್ ಕಡಿ ಓಡಿ ಬರತಿದ್ದರು.

ಟ್ರಕ್ಕಿನ ಹಣಿ ಮ್ಯಾಲಿರೋ ಮಾಲತೇಶ ಟೂರಿಂಗ್ ಟಾಕೀಜ್ ಅನ್ನೋ ಬೋರ್ಡ್ ಗ ಸಣ್ಣ ಸಣ್ಣ ಕಲರ ಲೈಟಗಳಿಂದ ಜಗಮಗ.. ಜಗಮಗ.. ಅಂತಿತ್ತು. ಸಿನೇಮಾ ಸುರು ಆಗಿ ಹೀರೋ ಪ್ರವೇಶ ಆಗಿದ್ದೇ ಟೆಂಟ್ ಕಿತ್ತಿ ಬೀಳೂವಂಗ ಚೀರೂದು, ಸೀಟಿ ಹೊಡಿಯೂದು ನಡೀತಿತ್ತು. ಒಂದು ರಿದಮ್ ಲ್ಲಿ ಸಿನೇಮಾ ರೀಲು ಬರ್ರ್… ಬರ್ರಂತ ಆವಾಜ್ ಮಾಡತಿತ್ತು. ಟ್ರಕ್ಕಿನ ಹಿಂಬಂದಿಯ ಕಿಂಡಿಯಿಂದ ಮೂಡೊ ಛಾಯಾದೊಳಗ ಮುಂದ ಕುಂತವರು ಎದ್ದು ನಿಂತು ಕೈ ಅಲ್ಲಾಡಸತಿದ್ದರು. ಅದನ್ನ ಪರದೇ ಮ್ಯಾಲ ಕಂಡು ಕೇಕೇ ಹಾಕತಿದ್ದರು. ಒಂದು ರೀಲು ಮುಗಿಯೋಮಟ ಜನರು ಕಲ್ಲಾಗಿರತಿದ್ದರು. ಒಂದು ರೀಲು ಮುಗಿದು, ಎರಡನೇ ರೀಲು ಹಾಕೂಮಟ ಮತ್ತ ಜೋರಾಗಿ ಸೀಟಿ ಸುರು ಆಗತಿದ್ವು. ಕಿಂಡಿಯಿಂದ ಒತ್ತರಿಸಿ ಛಾಯಾ ಮೂಡಿದ್ದೇ ಇಡೀ ಟಾಕೀಜ್ ಮತ್ತ ತಣ್ಣಗ ಆಗತಿತ್ತು. ಸಿನೇಮಾ ಮುಗೀತಾ ಬಂದಂಗ ಭೀಮಣ್ಣನಂಥಾ ಹುಡುಗರಗಿ ಬಾಳ ಬ್ಯಾಸರ ಆಗತಿತ್ತು. ಸುರು ಆಗೂ ಮುಂದ ಸರಕಾರಿ ರೀಲು ನೋಡಾಗ ಇರೋ ಖುಷಿ, ಸಿನೇಮಾ ಕ್ಲೈಮ್ಯಾಕ್ಸ್ ಗೆ ಬಂದಾಗ ಇತರ್ಿರಲಿಲ್ಲ. ಯಾಕಾದರೂ ಮುಗಿತೋ ಅನಸತಿತ್ತು. ಮತ್ತ ಎರಡನೆ ಶೊ ಸುರು ಆಗೂ ಮೊದಲು ಮೈಬೂಬ ಬರ್ರ್ ಅಂತ ರೀಲ್ ಸುತ್ತಿ ರೆಡಿ ಇಟ್ಗೊತಿದ್ದ. ಹೊರಗ ಬಯಲಿಗಿ ಬಂದು ಅಲ್ಲಿ ನೆರೆದಿರೋ ಜನರನ್ನ ಸ್ಟೈಲಾಗಿ ನೋಡತಾ ಒಂದು ಬೀಡಿ ಜಗ್ಗತಿದ್ದ.

***

ಟೂರಿಂಗ್ ಟಾಕೀಸ್ ನಡಸ್ತಾ ಬಂದ ರಾಚಪ್ಪಶೆಟ್ರು ಶಿಂತ್ರಿಯೊಳಗ ಅದೇ ಹೆಸರಲೇ ಒಂದು ಸಿನೆಮಾ ಥೇಟರೇ ಕಟ್ಟಸದರು. ಶಿಂತ್ರಿ ಊರು ಅಟೊತ್ತಿಗಾಗಲೇ ಬೇಕಾದಷ್ಟು ಬೆಳದು ಎರಡು ಮೂರು ಸಾರಿ ಅದು ತಾಲೂಕು ಆಗಲೇಬೇಕು ಅಂತ ಅಲ್ಲಿಯ ಲೀಡರಗೋಳು ಉಂಡು ಉಪ್ಪಾಸ ಮಾಡಿದ್ದೂ ಇತ್ತು. ಬಸ್ ನಿಲ್ದಾಣ ಸಮೀಪದೊಳಗೇ ಮಾಲತೇಶ ಚಿತ್ರಮಂದಿರ ಅನ್ನೋ ಭವ್ಯ ಥೇಟರು ತಲೆ ಎತ್ತತು. ಹಿಂದ ಟೂರಿಂಗ್ ಟಾಕೀಸ್ ಇದ್ದಾಗ ಒಂದೋ ಎರಡೊ ಪೋಸ್ಟರ್ ಊರೊಳಗ ಅಂಟಿಸಿದರ ಹೆಚ್ಚು. ಈಗ ಹಂಗರ್ಲ ಗಿಡದ ಬೊಡ್ದಿ, ಮನಿ ಚಪ್ಪರ, ಸಾಲಿ ಕಂಪೌಂಡ್ ಯಾವುದೂ ಸಾಲತಿರಲಿಲ್ಲ. ಊರ ತುಂಬಾ ಸಿನೇಮಾ ಪೋಸ್ಟರು ಕಾಣತಿದ್ವು. ಸಿನೇಮಾ ಡಬ್ಬಿಗಳನ್ನ ತರಲಿಕ್ಕೇ ಅಂತ ಈರಪ್ಪನ ಎಕ್ಕಾ ಗಾಡಿಯನ್ನೇ ಶೆಟ್ರು ನೇಮಿಸಿಕೊಂಡಿದ್ದರು. ಅಂವಾ ಡಬ್ಬಿ ಇಟಗೊಂಡು ಬರೂಮುಂದ ಊರಾನ ಜನ ‘ಯಾವ ಸಿನೇಮಾನೋ ಈರಪ್ಪ..?’ ಅಂತ ಕೇಳವರು. ಅಂವಾ ಜೋರಾಗಿ ‘ಬಬ್ರುವಾನ.. ಬಬ್ರುವಾನ’ ಅಂತಿದ್ದ. ಸಿನೇಮಾ ಯಾವಾಗ ಬದಲೀ ಆಗತೈತಿ, ಮುಂದಿನ ಸಿನೇಮಾ ಯಾವುದು..? ಈಗಿರೋ ಸಿನೇಮಾ ಪೆಟ್ಟಿಗೆ ಮುಂದ ಯಾವ ಊರಿಗಿ ಹೋಗತೈತಿ..? ಅನ್ನೋ ಮಾಹಿತಿ ಎಲ್ಲಾ ಅವನ ಕಡಿ ಇರತಿತ್ತು.
ತೀರಾ ಹೊಸ ಸಿನೇಮಾ ಯಾವುದಾದರೂ ಈ ಜಾತ್ರಿ ಮುಂದ ಬಂದರ ಆ ಪೋಸ್ಟರ್ ಕೆಳಗ ‘ಮುದ್ದಾಂ ಜಾತ್ರೆಯ ಸಲುವಾಗಿ’ ಅಂತ ಬರದಿರತಿದ್ದರು. ಕಾಳು ತುಂಬೋ ಗಂಗಪ್ಪಗ ಈಗ ಹೆಚ್ಚೂ ಕಮ್ಮಿ ಅರವತ್ತು ವರ್ಷ. ಮಗ ಭೀಮಪ್ಪ ಈಗ ಅದೇ ಊರಾಗ ಕಾಲೇಜಿಗಿ ಹೋಗತಿದ್ದ. ಗಂಗಪ್ಪ ಮೊದಮೊದಲ ಊರಾಗ ಮನಿ ಮನಿ ತಿರುಗಾಡಿ ಕಾಳು ಕಡಿ ತುಂಬತಿದ್ದ. ಈಗ ಬಜಾರದೊಳಗ ತಂದೇ ಒಂದು ಸ್ವಂತ ಅಂಗಡಿ ಅಂತ ಮಾಡಿದ್ದ. ಅವನ ಸಿನೇಮಾ ನೋಡೊ ಚಟಾ ಮಾತ್ರ ಕಡಿಮಿ ಆಗಿರಲಿಲ್ಲ. ಅವನ ಅಂಗಡಿಗಿ ಬರೋ ಗಿರಾಕಿಗಳು ಕಾಳು ಖರೀದಿ ಮಾಡೊ ಮೊದಲು ‘ ಗಂಗಪ್ಪಣ್ಣ, ಹ್ಯಾಂಗಿತ್ತು ಸಿನೇಮಾ..?’ ಅಂತ ಕೇಳದರ ಸಾಕು, ವೆಂಕಟೇಶ್ವರ ಕಂಬೈನ್ಸ್ ಅನ್ನೋ ಅಕ್ಷರ ಮೂಡುವಾಗಿಂದ ಸುರು ಮಾಡಿ, ಸಿನಿಮಾ ಮುಗಿದು ಶುಭಂ ಅಂತ ಅಕ್ಷರ ಬೀಳೂವರೆಗೂ ಕತಿ ಹೇಳತಿದ್ದ. ಸುಮಾರು ಇಪ್ಪತ್ತು ವರ್ಷ ಟ್ರಕ್ಕಿನೊಳಗ ಊರಿಂದೂರಿಗೆ ಹೋಗಿ, ಸಿನೇಮಾ ಮೂಡಿಸಿರೋ ಮೈಬೂಬಗೆ ಈಗ ಹೊಸ ಥೇಟರದೊಳಗ ಒಂದು ಚಲೋ ಕ್ಯಾಬಿನ್ ಸಿಕ್ಕಿತ್ತು. ಈಗವನು ಬರೀ ಮೈಯಿಂದ ಕುಂತು ರೀಲ್ ಸುತ್ತೂದಿಲ್ಲ. ಈಗ ಅವನ ನೆತ್ತಿ ಮ್ಯಾಲೇ ಒಂದು ಫ್ಯಾನು ಬಂದಿತ್ತು. ಮೊದಲು ಒಂದೊಂದೇ ರೀಲನ್ನು ಪ್ರೊಜೆಕ್ಟರಗೆ ಏರಿಸತ್ತಿದ್ದ ಮೈಬೂಬಗ, ಈಗ ಎರಡು ಮಶೀನ್ ಇರೋದರಿಂದ ಆ ಕೆಲಸ ಸ್ವಲ್ಪ ಹಗುರ ಆಗಿತ್ತು. ಈ ಹೊಸ ಥೇಟರಲ್ಲಿ ನೆಲಾನೂ ಇರಲಿಲ್ಲ, ಚಾಪೆನೂ ಇರಲಿಲ್ಲ. ಫéಸ್ಟ್ ಕ್ಲಾಸ್ , ಸೆಕೆಂಡ್ ಕ್ಲಾಸ್ ಮತ್ತ ಬಾಲ್ಕನಿ. ಈ ಕ್ಲಾಸ್ ಗೆ ತಕ್ಕಂಗ ಟಿಕೇಟ್ ದರಾನೂ ಈಗ ಬದಲಾಗಿತ್ತು.
ಒಂದು ಸಾರಿ ಮಾಲತೇಶ ಥೇಟರಲ್ಲಿ ಮಸಾಲಾ ಸೀನ್ ಇರೋ ಇಂಗ್ಲಿಷ ಸಿನೇಮಾ ಒಂದು ಬಂದಿತ್ತು. ಮನ್ಯಾಗ ಗೊತ್ತಾಗದಂಗ ಮಾಳಗಿಮ್ಯಾಲ ಮಲಗೋ ಪ್ಲ್ಯಾನ್ ಮಾಡಿ ರಾತ್ರಿ ಹಾಸಗಿ ಸುತ್ತಿಟ್ಟು ಭೀಮಪ್ಪ ಎರಡನೇ ಆಟಕ್ಕ ಜಿಗದಿದ್ದ. ಯಾರಾದರೂ ಪರಿಚಯದವರು ನೋಡಗೀಡ್ಯಾರು ಅಂತ ತಲಿಗಿ ಟವಲ್ ಸುತಗೊಂಡು ಹೋಗಿದ್ದ. ತೇಟರ ಆಜೂ ಬಾಜೂ ಸುತ್ತಾಡಿ ಟೈಮ್ ಪಾಸ್ ಮಾಡಿ, ಸಿನೇಮಾ ಸುರು ಆದ ಮ್ಯಾಲೇ ಹೋಗೂದು ಚಲೊ ಅಂತ ಲೆಕ್ಕಾ ಹಾಕಿ ತುಸು ತಡ ಮಾಡಿನೇ ಒಳಗ ಹೋಗಿದ್ದ. ಪರದೆ ಮ್ಯಾಲ ಸೈಲೆಂಟಾದ ಮ್ಯುಜಿಕ್ ನಡುವ, ಆಕೆ ಸ್ನಾನ ಮಾಡೊ ಸೀನ್ ಒಂದು ಬರತ್ತಿತ್ತು. ಜನರೆಲ್ಲಾ ಗುಂಗಾನ ಗುಂಗಾಗಿದ್ದರು. ಥೇಟರದೊಳಗ ಮಂದೆರೆ ಅದಾರೋ ಇಲ್ಲೋ ಅನ್ನೂವಂಗ ಸೈಲೆಂಟ್ ಇತ್ತು. ಇನ್ನೇನು ಅವಳು ಬಟ್ಟೆ ಬದಲಾಯಿಸೋ ಮಟ್ಟಕ್ಕೆ ಬಂದಾಗ ಎಲ್ಲರೂ ಕಣ್ಣಗಲಿಸಿ ನೊಡ್ತಾ ಇದ್ದಂಗೆ… ಇಂಟ್ರವಾಲ್..! ಜನಾ ಹಿಗ್ಗಾ ಮುಗ್ಗಾ ಮೈಬೂಬನ್ನ ಬೈಯಾಕ ಸುರು ಮಾಡದರು. ‘ಲೇ ಸೀನ್ ಹಾಕೋ ಬೋಳಿಮಗನೇ.. ಕಟ್ ಮಾಡಬ್ಯಾಡಲೇ.. ಏ ಚೋದಿಮಗನೇ ಬೇಗ ಸುರು ಮಾಡೋ..’ ಹಿಂಗ ತರಾವರಿ ಬೈಗುಳಗಳ ಸುರಿಮಳೆ.
ಇದೆಲ್ಲಾ ಆಪರೇಟರ್ ಮೈಬೂಬಗ ಹೊಸತು. ಟೂರಿಂಗ್ ಟಾಕೀಸ್ ಇದ್ದಾಗ ಹಿಂಗೆಲ್ಲಾ ಇರಲಿಲ್ಲ. ಅವಾಗ ಸಿನೇಮಾ ಮೂಡಸವನಿಗೂ ಒಂದು ಇಅಜ್ಜತ್ ಇತ್ತು. ಈಗ ಕರೆಂಟ್ ಹೋದರ, ಸಿನೇಮಾ ರೀಲ್ ತುಂಡಾದರ, ಸ್ವಲ್ಪ ತಡ ಆದರ ಹ್ಯಾಂಗ ಬೇಕು ಹಂಗ ಹಲ್ಕಟ್ ಬೈಗುಳ ಬೈಯವರು. ಮೈಬೂಬಗ ಆ ಬೈಗುಳ ಕೇಳಿ ಬಾಳ ಬ್ಯಾಸರ ಆಗ್ತಿತ್ತು. ಭೀಮಪ್ಪ ಹಗೂರಕ ತನ್ನ ಪಕ್ಕದೊಳಗ ಕುಳತಿರೋ ಆಸಾಮಿಯನ್ನ ಮುಖದ ಮ್ಯಾಲಿನ ಟವಲ್ ಸರಸಿ ನೋಡದ. ಭೀಮಪ್ಪನಿಗೆ ಎದಿ ಝಲ್ ಅಂತು. ಅಂವಾ ಮನಿ ಹಿಂದಿರೋ ಹನುಮಂತ ದೇವರ ಗುಡಿ ಪೂಜಾರಿ ರಾಮಚಂದ್ರ.. ಅವನು ಕಡ್ಡೀ ಆಡಸೂದರೊಳಗ ಇಡೀ ಊರಾಗೇ ಫೇಮಸ್ಸು. ಅಂವಾ ಅಪ್ಪನ ಮುಂದ ಹೇಳಿಗೀಳ್ಯಾನು ಅಂತ ಸಿನೇಮಾ ಮುಗಿಯೂ ಮೊದಲೇ ಗಪೂತಲೇ ಅಲ್ಲಿಂದ ಜಾಗಾ ಖಾಲಿ ಮಾಡಿದ್ದ.
ಈ ಆಪರೇಟರ ಕೆಲಸದೊಳಗ ಮೈಬೂಬಗ ಈಗೀಗ ಮಜಾ ಅನಸತಿಲ್ಲ. ಈ ಜನರ ಬೈಗುಳಗಳದ್ದೇ ಒಂದು ದೊಡ್ದ ಕಿರಕಿರಿ. ಮೂವತ್ತು ವರ್ಷಗಳಿಂದ ಅಂವಾ ಸಿನೇಮಾ ಆಪರೇಟರ್ ಆಗಿ ಕೆಲಸಾ ಮಾಡಿದರೂ ಯಾವ ಸಿನೆಮಾನೂ ಪೂರ್ತಿಯಾಗಿ ಅಂವಾ ನೋಡಿದ್ದಿಲ್ಲ. ಎಲ್ಲಾ ತುಂಡು ತುಂಡು. ಒಂದು ಸಾರಿ ಹಾಡು ಸಿಕ್ಕರೆ, ಇನ್ನೊಮ್ಮೆ ಪೈಟಿಂಗು, ಮತ್ತೊಮ್ಮೆ ಮದುವೆ ಸೀನು ಸಿಕ್ಕರೆ ಇನ್ನೊಮ್ಮ ಸಾವಿನ ಸೀನು. ಅಪೂಟಾ ಸಿನೇಮಾ ನೋಡಿದ್ದು ಬಾಳ ಕಡಿಮೆ. ಅವನೇ ಹೇಳುವಂಗ ಹಂಗೂ ಹಿಂಗೂ ಮಾಡಿ ಶೋಲೆ ಮಾತ್ರ ಅಂವಾ ಪೂರ್ತಿ ನೋಡಿದ ಸಿನೇಮಾ. ಬಿಟ್ಟರೆ ಯಾವ ಸಿನೇಮಾವನ್ನೂ ಪೂರಾ ನೋಡಿರಲಿಲ್ಲ. ಹಿಂದ ಟೂರಿಂಗ್ ಟಾಕೀಸ್ ಇದ್ದ ವ್ಯಾಳೆದೊಳಗ ‘ಮಹಾಸತಿ ಅನಸೂಯ’ ಅನ್ನೋ ಸಿನೇಮಾ ಆರು ತಿಂಗಳಗಟ್ಟಲೆ ನಡದಿತ್ತು. ಜನ ಸುತ್ತ ಮುತ್ತ ಹಳ್ಳಿಯಿಂದ ಗಾಡಿ ಕಟಗೊಂಡು ಬಂದು ಆ ಸಿನೇಮಾ ನೋಡಿ ಹೋಗತಿದ್ದರು.
ಈಗ ಮಾಲತೇಶ ಚಿತ್ರಮಂದಿರ ಹೊಸದಾಗಿ ಕಟ್ಟದ ಮ್ಯಾಲ ಬೇಕಾದಂಥಾ ಚಲೊ ಸಿನೇಮಾ ಸೈತ ಮೂರು ತಿಂಗಳು ಓಡಿದ್ದು ಬಿಟ್ಟರೆ ಅದಕ್ಕಿಂತ ಹೆಚ್ಚು ಓಡಿದ್ದಿಲ್ಲ. ಮೈಬೂಬಗ ಈಗೀಗ ದಿನಕ್ಕ ನಾಕು ಆಟದ ಕೆಲಸಾ ನೀಗೂದಿಲ್ಲ ಅಂತ ಹೇಳಿ, ಅವನ ಮಗ ರಫೀಕನ್ನ ಇದೇ ಚಿತ್ರಮಂದಿರದೊಳಗ ಆಪರೇಟರ ಕೆಲಸಕ್ಕ ಸಹಾಯ ಆಗತೈತಿ ಅಂತ ತಗೋಂಡಿದ್ದ. ಒಂದು ಮತ್ತು ಎರಡನೇ ಆಟದ ಜವಾಬ್ದಾರಿ ಮಗಾ ನೋಡ್ಕೊತಿದ್ದ. ಮೈಬೂಬಗ ಈಗೀಗ ತನ್ನ ನೌಕರಿ ಬಗ್ಗೆ ಚಿಂತಿ ಸುರು ಆಗಿತ್ತು. ಬೇಕಾದಂತಾ ಹೊಸಾ ಸಿನೇಮಾ ಇದ್ದರೂ ಒಂದೇ ವಾರದೊಳಗ ಚಿತ್ರಮಂದಿರ ಖಾಲಿ ಬೀಳೊ ಬಗ್ಗೆ ಅಂವಗ ಬ್ಯಾಸರಿತ್ತು. ಹಿಂಗೇ ಆಗತಾ ಹೋದರ ಶೆಟ್ರು ಎರಡು ಮೂರು ಬಾರಿ ಅದನ್ನ ಕೆಡವಿ ಕಲ್ಯಾಣ ಮಂಟಪ ಕಟ್ಟೊ ಮಾತಾಡಿದ್ದರು. ಹಂಗೇನಾರೆ ಆದರ ತಾನು ಉದ್ಯೋಗ ಕಳಕೊಂಡು ಮನ್ಯಾಗ ಕೂಡಬೇಕು. ಹಿಂಗ ರೀಲು ಸುತ್ತೂದು ಬಿಟ್ಟರ ತನಗ ಬ್ಯಾರೆ ಕೆಲಸಾನೂ ಗೊತ್ತಿಲ್ಲ. ಹಿಂಗೆಲ್ಲಾ ಚಿಂತಿ ಮಾಡಿ ಮೈಬೂಬ ಮತ್ತೂ ನರಪೇತಲಾದಂಗ ಆಗಿದ್ದ. ಮಗ ರಫೀಕಗ ಓದಸಬೆಕಂದ್ರೂ ಓದಲಿಲ್ಲ. ಒಲ್ಲದ ಮನಸ್ಸಿನಿಂದ ಮಗನಿಗೂ ಅದೇ ಆಪರೇಟರ್ ಕೆಲಸಾ ಕಲಿಸಿದ್ದ. ರಫೀಕಗ ಬ್ಯಾಡ ಬೇರೆ ಏನರೆ ಕೆಲಸಾ ಕಲಿ ಇದೆಲ್ಲಾ ಉಪಯೋಗಿಲ್ಲ, ಆರೋಗ್ಯ ಬಾಳ ಬೇಗ ಹಾಳಾಗತೈತಿ ಅಂತ ಹೇಳಿದ್ರೂ ಅಂವಾ ಅಪ್ಪನ ಮಾತ ಕೇಳಿರಲಿಲ್ಲ.

***

ಈಗೀಗ ಟಿ.ವಿ.ಯೊಳಗ ನೂರಾರು ಚಾನೆಲ್ಗಳು. ಅಲ್ಲೂ ಹೊಸ ಹೊಸ ಸಿನೇಮಾಗಳು. ಇದರ ಪರಿಣಾಮ ಥೇಟರ ಕಡಿ ಬರವರ ಪ್ರಮಾಣ ಬಾಳ ಕಡಿಮಿ ಆಗ್ತಾ ಬಂತು. ಯಾವುದೇ ಸಿನೇಮಾ ಬಂದರೂ ಒಂದೇ ಒಂದು ದಿನ ಹೌಸ್ ಫುಲ್  ಅನ್ನೂವಂಗಿಲ್ಲ. ಈ ಊರಿನ ಬಾರ್ಡರಲ್ಲಿರೋ ಸೋಲಾಪುರ ಸಿಟಿ ಕೇವಲ ಇಪ್ಪತ್ತು ಕಿಲೊ ಮೀಟರ್ ದೂರ. ಜನಾ ಅಲ್ಲಿಗೆ ಹೋಗಿ ಮಲ್ಟಿಪ್ಲೆಕ್ಸ್ ಲ್ಲಿ ಸಿನೆಮಾ ನೋಡಿ ಬರಾಕ ಸುರು ಮಾಡದರು. ಶೆಟ್ರು ಕೂಡಾ ಕಾಲಕ್ಕ ತಕ್ಕಂಗ ಚಿತ್ರಮಂದಿರದ ತಂತ್ರಜ್ಞಾನವನ್ನ ಬದಲಸದರು. ಒಳಗ ಡಾಲ್ಬಿ ಸ್ಟೀರಿಯೋ ಕೂಡಸದರು. ಸೀಟಿಂಗ್ ಸಿಸ್ಟಮನ್ನ ಬದಲ್ ಮಾಡದರು. ಈಗ ಮಾಲತೇಶ ಚಿತ್ರಮಂದಿರ ಯಾವ ಮಲ್ಟಿಪ್ಲೆಕ್ಸ್ ಗೂ ಕಡಿಮಿ ಇರಲಿಲ್ಲ. ಸಿನೇಮಾ ಡಬ್ಬಿ, ಎಕ್ಕಾ ಗಾಡಿ, ಆಪರೇಟರ್ ಮೈಬೂಬ, ಈರಣ್ಣ ಇವರಾರಿಗೂ ಈಗ ಅಲ್ಲಿ ಕೆಲಸ ಇಲ್ಲ.
ಈಗ ಮಾಲತೇಶ ಚಿತ್ರಮಂದಿರದಲ್ಲಿ ಮಲ್ಟಿಪ್ಲೆಕ್ಸ್ ಥೇಟರ್ ಥರಾ ಯು.ಎಫ್.ಓ ಡಿಜಿಟಲ್ ಸೆಟ್ಲೈಟ್ ಮೂಲಕ ಸಿನೇಮಾ ಪ್ರದರ್ಶನವಾಗತೈತಿ. ಆಪರೇಟರ ಮೈಬೂಬ ಈಗ ಅದೇ ಚಿತ್ರಮಂದಿರದೊಳಗ ಸೈಕಲ್ ಮೋಟಾರ ಸ್ಟ್ಯಾಂಡಿನ ಉಸ್ತುವಾರಿ ನೋಡೋ ಕೆಲಸ. ಅಂವಾ ಮತ್ತವನ ಮಗ ರಫೀಕ್ ಇಬ್ಬರೂ ಈಗ ಸಿನೇಮಾ ಬಿಡೊವರೆಗೂ ಪ್ರೇಕ್ಷಕರ ವಾಹನಗಳನ್ನು ಪ್ರಾಮಾಣಿಕವಾಗಿ ಕಾಯ್ತಾರ. ಕೇವಲ ಇವರು ಮಾತ್ರ ಅಲ್ಲ, ಇವರಂಗೆ ರೀಲು ಸುತ್ತವರದೆಲ್ಲಾ ಇದೇ ಪರಿಸ್ಥಿತಿ. ಸೈಕಲ್ಲಿಗೆ ಎರಡು ರೂಪಾಯಿ..ಬೈಕಿಗೆ ಐದು ರೂಪಾಯಿ, ಕಾರಿಗೆ ಹತ್ತು ರೂಪಾಯಿ. ಒಂದು ಸೈಕಲ್ ನ್ನು ಮಗ ರಫೀಕ್ ಎತ್ತಿ ಡಬಲ್ ಸ್ಟ್ಯಾಂಡ್ ಹಾಕಿ ನಿಲ್ಲಿಸಿದ್ದೇ ಅದರ ಹಿಂದಿನ ಗಾಲಿ ಗಿರ್ರ್ ಅಂತ ತಿರುಗ್ತಾ ಇತ್ತು. ಅಲ್ಲೆ ಕುಳಿತು ಬೀಡಿ ಸೇದ್ತಾ ಇರೋ ಮೈಬೂಬ ಆ ತಿರುಗೋ ಗಾಲಿಯನ್ನೇ ದಿಟ್ಟಿಸಿ ನೋಡತಿದ್ದ. ರೀಲ್ ಸುತ್ತೋ ವ್ಹೀಲ್ ನೆನಪಾಗಿ ಒಬ್ಬನೇ ಒಳಗೊಳಗೇ ನಗತಿದ್ದ.
 

‍ಲೇಖಕರು G

16 November, 2013

1 Comment

  1. Raj

    A simply wonderful description of an age that has been consigned to the pages of history right in front of our own eyes, that is, if you have a background similar to mine! In my village I saw all of these, a touring tent, then a permanent tent, then a concrete theater and now that converted into a marriage hall!
    These were the features of the tent in my village:
    – the tent had one show every night and 2 shows on the weekly market day (santhe)
    – we had classes like Nela, bench & chair!
    – ticket prices were .75 Rs for Nela, Rs 1.25 for bench (backless) & Rs 2 for chair (regular iron chairs that you could put anywhere you want in its designated area, but we also had the option of paying to the person at the door directly, which of course would go to his pocket directly & there we could strike a bargain, most of the times our line was “This is all what I have!” & would head to nela by paying anywhere from 15 to 50 paise & bench from 50-75 paise!
    – Every evening they will songs on the loud speaker & the starting song was the same one mentioned above (Mushika vahana by PBS) & the ending song was “Tirupathi girivasa” & when we hear the last song everyone would run with their hearts in their mouths to make it before the black & white news reel would start. Most of movies shown were also in black & white with an occasional color movie thrown in..
    – All this was in early 80s, wow what golden & innocent time that was…
    Thank you very much for bringing all those moments back to me..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading