ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ರಾಧೆಯ ಕಾಡುವ ಒಂಟಿತನದ ಸುಖ

ನಾ.ದಾಮೋದರ ಶೆಟ್ಟಿ

ಚಿತ್ರಗಳು: ದಯಾನಂದ ಕುಕ್ಕಾಜೆ

ಕಳೆದ ದಶಕದ ಆದಿಯಲ್ಲಿ ಏಕವ್ಯಕ್ತಿ ಪ್ರದರ್ಶನಗಳು ರಾಜ್ಯದ ಉದ್ದಗಲಗಳಲ್ಲಿ ಸಾಕಷ್ಟು ದೊಡ್ಡ ಸಂಖ್ಯೆಯಲ್ಲೇ ನಡೆಯುತ್ತಿದ್ದುವು. ಕೃಷ್ಣಮೂರ್ತಿ ಕವತ್ತಾರ್, ಟಿ ಎಸ್ ನಾಗಾಭರಣ, ಸಿ ಆರ್ ಸಿಂಹ, ಲಕ್ಷ್ಮೀ ಚಂದ್ರಶೇಖರ್, ಶಶಿಕಲಾ, ನೀನಾಸಮ್ ಅಶ್ವತ್ಥ್, ಎನ್ ಮಂಗಳಾ, ಸೀತಾ ಕೋಟೆ ಭಾಗೀರಥಿ ಬಾಯಿ  ಮೊದಲಾದವರೆಲ್ಲ ಸಾಕಷ್ಟು ಪ್ರಸಿದ್ಧಿಯನ್ನೂ ಪಡೆದರು.

ಮಿತಿಯೊಳಗಿನ ಸಂಖ್ಯೆಯ ಪಾತ್ರಗಳನ್ನಿಟ್ಟುಕೊಂಡು ಅಭಿನಯಿಸುವಲ್ಲಿಂದ ಮೂವತ್ತು, ನಲುವತ್ತು ಸಂಖ್ಯೆಯ ಪಾತ್ರಗಳ ಭರಾಟೆಯೇ ಹೆಚ್ಚಾದಾಗ, ಅವರನ್ನೆಲ್ಲ ಸಂಭಾಳಿಸುವುದು ಬಹು ತ್ರಾಸದ ಕೆಲಸವಾಯಿತು. ಆಗ ಹೀಗೊಂದು ಏಕವ್ಯಕ್ತಿ ಪ್ರದರ್ಶನ ಅನಿವಾರ್ಯವಾಯಿತು. ಇನ್ನು ಕೆಲವರಿಗೆ ಇದು ‘ಪ್ರಯೋಗ’ ಎಂಬ ಕಾರಣಕ್ಕೂ ಇಷ್ಟವಾಯಿತು.

ಕರಾವಳಿಯ ಪ್ರತಿಭೆ ಮಂಜುಳಾ ಸುಬ್ರಹ್ಮಣ್ಯ ಇಂತಹ ಪ್ರಯೋಗಗಳನ್ನು ಮಾಡುವುದರಲ್ಲಿ ಹೆಸರು ಪಡೆದವರು. ಅದಕ್ಕೆ ಹೊಂದಿಕೊಳ್ಳುವಂತೆ ಈ ಬಗೆಯ ಬರವಣಿಗೆಯಲ್ಲಿ ಅನುಭವವಿರುವ ಸುಧಾ ಆಡುಕಳ ರಚಿಸಿದ ‘ರಾಧಾ’ ಎನ್ನುವ ಕೃತಿಯೂ ಅವರ ಪಾಲಿಗೆ ವರದಾನವಾಯಿತು. ನಗರದ ಡಾನ್ ಬಾಸ್ಕೋ ಸಭಾಂಗಣದಲ್ಲಿ ಪ್ರದರ್ಶನವೂ ಆಯಿತು.

‘ರಾಧಾ-ಕೃಷ್ಣ’ಕ್ಕಿಂತ ಪೂರ್ವದ ‘ರಾಧೇಶ್ಯಾಮ’ದೊಳಗಿನ ನವುರುತನವನ್ನು ಕಂಡರಿಸುವ ಪ್ರಯತ್ನವನ್ನು ಮಾಡಿದ ಸುಧಾ ಅವರು ಶ್ಯಾಮ ಮಧುರೆಗೆ ಹೋಗುವುದಕ್ಕಿಂತ ಮೊದಲಿನ ಕಾಲಘಟ್ಟದ ಅವರಿಬ್ಬರ ಪ್ರಣಯ ಹಾಗೂ ಮುಂದೆ ರಾಧೆ ಒಂಟಿಯಾಗಿ ಬದುಕುವುದರ ಕಡೆಗೆ ಒಲವನ್ನು ತೋರುವ ಸನ್ನಿವೇಶವನ್ನು ಚಿತ್ರಿಸಿದ್ದಾರೆ. ರಾಧೆಗೆ ಬೇರೆ ಮದುವೆಯ ಸನ್ನದ್ಧತೆಗಳು ಆಗುವುದರ ನಡುವೆಯೇ ಶ್ಯಾಮನ ಹೊರತಾದವರ ಜೊತೆಗಿನ ಬದುಕನ್ನು ನಯವಾಗಿ ನಿರಾಕರಿಸಿದ ಆಕೆ ಮನೆಬಿಟ್ಟು ಹೊರಡುತ್ತಾಳೆ. ಹಾಗೆ ಹೊಸದೊಂದು ವ್ರತದೋಪಾದಿಯ ಬದುಕನ್ನು ಕಟ್ಟಿಕೊಂಡರೆ ಶ್ಯಾಮನೂ ಒಲಿಯುತ್ತಾನೆ, ಒಲಿಯಲೇಬೇಕು ಎಂಬ ಸಂದೇಶದೊಂದಿಗೆ ನಾಟಕ ಪರ್ಯಾವಸನಗೊಳ್ಳುತ್ತದೆ.

ಸುಮಾರು ಒಂದೂಕಾಲು ಘಂಟೆಯ ಈ ಏಕವ್ಯಕ್ತಿ ಪ್ರದರ್ಶನವು ಎಲ್ಲೂ ನೀರಸವೆನಿಸುವುದಿಲ್ಲ. ಕೃಷ್ಣನ ವಿವರಗಳು ಬಂದಾಗ ರಂಗ ಸಜ್ಜಿಕೆಯ ಭಾಗವಾಗಿದ್ದ ಬಾಗಿಲೊಂದನ್ನು ಮೆತ್ತನೆ ತಿರುಗಿಸಿ ಹಿಂಭಾಗದ ನವಿಲಿನ ಚಿತ್ರವನ್ನು ಕಾಣಿಸುವುದು, ಕಾಮವಿವರಗಳು ಬಂದಾಗ ಹಾವಿನ ಚಿತ್ರವುಳ್ಳ ಬಾಗಿಲನ್ನು ತೋರುವುದು, ರಾಧೆ ಒಂಟಿಯಾಗಿ ಬದುಕ ಹೊರಟಾಗ ಆಕೆ ತನ್ನ ಪ್ರೀತಿಯ ಗೋವುಗಳನ್ನು ಒಯ್ಯುವಳೆಂಬುದನ್ನು ಚಿತ್ರದ ಮೂಲಕ ವ್ಯಕ್ತಪಡಿಸುವುದು- ಮುಂತಾದ ಕಡೆಗಳಲ್ಲಿ ಬಳಕೆಯಾದ ಸಂಕೇತಗಳು ನಾಟಕಕ್ಕೆ ಪೂರಕವಾದವುಗಳೆ. ಮಾತ್ರವಲ್ಲದೆ ಅದೊಂದು ನೂತನ ತಂತ್ರಗಾರಿಕೆಯೂ ಹೌದು. ಕೃಷ್ಣ ಮಧುರೆಗೆ ಹೊರಡುವ ಸನ್ನಿವೇಶವನ್ನು ಚಿಕ್ಕಮ್ಮ ಆಕೆಯೊಂದಿಗೆ ಹಂಚಿಕೊಳ್ಳುವುದು, ಆಕೆಯೂ ಮಧುರೆಗೆ ಹೊರಟರೆ ಆತನ ಅಭಿವೃದ್ಧಿ ಕುಂಠಿತಗೊಳ್ಳಬಹುದೆಂದು ಯಶೋದೆ ಹೇಳುವುದು-ಇತ್ಯಾದಿ ಮನೋಜ್ಞ ಸನ್ನಿವೇಶಗಳು ಪ್ರಯೋಗವನ್ನು ಸ್ಮರಣೀಯವೆನಿಸುವಂತೆ ಮಾಡಿವೆ. ಅದು ಮಂಜುಳಾ ಸುಬ್ರಹ್ಮಣ್ಯ ಅವರ ಅಭಿನಯದ ತಾಖತ್ತಿನ ಫಲವೂ ಹೌದು.

ವೇದಿಕೆಯನ್ನು ಸುಂದರವಾಗಿ ವಿನ್ಯಾಸ ಮಾಡಲಾಗಿದೆ. (ರಂಗ ವಿನ್ಯಾಸ: ಮೋಹನ ಸೋನ). ಆದರೆ ಮಧ್ಯದಲ್ಲಿ ಇರಿಸಲಾದ ಲೆವೆಲ್ಗಳನ್ನು ಬಳಸದೆ ರಾಧೆ ನೆಲವನ್ನೇ ಕುಳ್ಳಿರಲು ಆಯುತ್ತಿದ್ದುದೇಕೆ? ನರ್ತನದ ತನ್ಮಯತೆಯ ನಡುವೆ ನಟಿ ಪಾತ್ರದಿಂದ ದೂರಹೋಗುತ್ತಿದ್ದಳೆ?

ಪ್ರಯೋಗ ಇನ್ನಷ್ಟು ಶಕ್ತವಾಗಬೇಕಿದ್ದರೆ ಹಿನ್ನೆಲೆ ಸಂಗೀತಕ್ಕೆ ಸರಿಯಾದ ಶಸ್ತ್ರಚಿಕಿತ್ಸೆ ಆಗಬೇಕು. ಮಾತುಗಾರಿಕೆಯ ಮಟ್ಟಕ್ಕೆ ಹಾಡುಗಾರಿಕೆಯ ಧ್ವನಿಯೂ ಏರಬೇಕಾದ ಅಗತ್ಯವಿದೆ. ಕೊಳಲು, ಗೆಜ್ಜೆ, ಆಲಾಪನೆ, ಹೆಚ್ಚೇಕೆ- ಬಾಗಿಲು ತಟ್ಟುವ ಧ್ವನಿಗೆ ಕೂಡ ಮಹತ್ವ ನೀಡಬೇಕಾಗಿದೆ. ಇಂತಹ ಏಕವ್ಯಕ್ತಿ ಪ್ರದರ್ಶನಗಳಲ್ಲಿ ಅವೆಲ್ಲವೂ ಪೂರಕವೆ. ಸಂಗೀತ ಸರಿಯಾದ ಮಟ್ಟದಲ್ಲಿ ಬಳಕೆಯಾದರೆ ಒಂಟಿಯಾದ ರಾಧೆಗೆ ಭೀಮಬಲವೇ ಬಂದುಬಿಡಬಹುದು. ಆಗ ಅಮಿತ ಹಾಡುಗಳನ್ನು ಒಪ್ಪಿಕೊಳ್ಳಲೂ ಸಾಧ್ಯವಾದೀತು. ಶ್ರೀಪಾದ ಭಟ್ಟರು ಇಂತಹ ರೂಪಕದೋಪಾದಿಯ ಏಕವ್ಯಕ್ತಿ ನಾಟಕವನ್ನೂ ಸಮರ್ಪಕವಾಗಿ ನಿರ್ದೇಶಿಸಬಲ್ಲರು ಎಂಬುದನ್ನು ಸಾಬೀತುಪಡಿಸಿದ್ದಾರೆ. ಬೆಳಕು ನೀಡಿದವರನ್ನು (ಪೃಥ್ವಿನ್ ಉಡುಪಿ) ವಿಶೇಷವಾಗಿ ಉಲ್ಲೇಖಿಸಬೇಕು.

ಒಂಟಿ ಪಾತ್ರವೊಂದು ಬಹುಪಾತ್ರಗಳನ್ನು ಅಭಿನಯಿಸುತ್ತ ಪ್ರೇಕ್ಷಕ ಸಮುದಾಯವನ್ನು ಹಿಡಿದಿಟ್ಟುಕೊಳ್ಳುವುದಷ್ಟೇ ಅಲ್ಲ; ಅಲ್ಲಿನ ಪಾತ್ರಗಳಿಗೂ ನೋಡುವ ಪ್ರೇಕ್ಷಕರಿಗೂ ನ್ಯಾಯವೊದಗಿಸಬೇಕಲ್ಲ; ಅದನ್ನು ಮಂಜುಳಾ ಸುಬ್ರಹ್ಮಣ್ಯ ಅವರು ಮನಸ್ಸಿಟ್ಟು ಮಾಡಿದ್ದಾರೆ. ಆ ಮೂಲಕ ಪ್ರವರ್ಧಮಾನಕ್ಕೆ ಬರುತ್ತಿರುವ ‘ಅರೆಹೊಳೆ ಪ್ರತಿಷ್ಠಾನ’ದ ಪ್ರಯತ್ನವನ್ನು ಯಶಸ್ಸಿನ ಅಂಚಿಗೆ ತಂದಿದ್ದಾರೆ.

‍ಲೇಖಕರು admin

28 January, 2017

ನಿಮಗೆ ಇವೂ ಇಷ್ಟವಾಗಬಹುದು…

1 Comment

  1. ಸುಧಾ ಚಿದಾನಂದಗೌಡ

    ರಾಧೆಗೆ ಬೇರೆ ಮದುವೆಯ ಸನ್ನದ್ಧತೆಗಳು …?
    ರಾಧೆ ಮೊದಲೇ ವಿವಾಹಿತೆಯಲ್ಲವೇ…?
    ಅಥವಾ ಕಥೆಯನ್ನು ಮುರಿದುಕಟ್ಟುವಾಗ ಈ ರೀತಿಯ ತಿರುವುಗಳನ್ನು ತಂದುಕೊಳ್ಳಬಹುದೇ..?
    ಏನೇ ಆದರೂ,, ಈ ರಾಧೆ ನೋಡಿಸಿಕೊಳ್ಳಲು ಅರ್ಹಳು ಎನ್ನಲಡ್ಡಿಯಿಲ್ಲ…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading