ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಾಧಿಕಾ ಗಂಗಣ್ಣ ಓದಿದ ಪುಸ್ತಕ: ಮಾತುಗಾರ ರಾಮಣ್ಣ

ರಾಧಿಕಾ ಗಂಗಣ್ಣ

ಬೆಂದಕಾಳೂರು

ಬೆಂಗಳೂರಿನ ಬಿಸಿಲಿನ ಝಳವನ್ನು ತಗ್ಗಿಸಿದ ತುಂತುರು ಮಳೆಯ ತಣ್ಣನೆಯ ಹವೆಯಲ್ಲಿ ಕೈಗೆ ಸಿಕ್ಕಿದ್ದು ಮಾಸ್ತಿ ವೆಂಕಟೇಶ ಅಯ್ಯಂಗಾರ್ ವಿರಚಿತ ಪುಸ್ತಕ ’ಮಾತುಗಾರ ರಾಮಣ್ಣ’. ಐವತ್ತರ ದಶಕದ ಹಿಂದಿನ ಮೈಸೂರಿನ ಆಳ್ವಿಕೆಯ ದಿನಗಳನ್ನು ಶಾನುಭೋಗ ರಾಮಣ್ಣನವರ ನಿರೂಪಣೆಯಲ್ಲಿ ನಮ್ಮ ಮುಂದಿಡುತ್ತಾರೆ ಮಾಸ್ತಿಯವರು. ಮೈಸೂರಿನ ದಿವಾನರ ಆಳ್ವಿಕೆಯ ಪರಿ, ದೇಶದಲ್ಲಿ ಭ್ರಷ್ಟಾಚಾರ ವ್ಯಾಪಿಸಿದ ಬಗೆ, ಕೌಟುಂಬಿಕ ಜೀವನದ ನೆಮ್ಮದಿಗೆ ಬೇಕಾದ ಮನೋಸ್ಥಿತಿ, ಕನ್ನಡ ಭಾಷೆಯ ಸ್ಥಾನಮಾನ, ಈ ಎಲ್ಲದರ ಬಗ್ಗೆಯೂ ಸರಳ, ನೇರ ವಿವರಣೆ, ಇಬ್ಬರು ಹಿರಿಯರ ನಡುವಿನ ಸಂಭಾಷಣೆಯ ಮೂಲಕ, ಸಾಮಾನ್ಯ ವ್ಯಕ್ತಿಯ ದೃಷ್ಟಿಕೋನದಲ್ಲಿ ಲಭ್ಯ. ಮೈಸೂರಿನ ದಿವಾನರ ಆಳ್ವಿಕೆಯ ಬಗ್ಗೆ ತಿಳಿದುಕೊಳ್ಳಲು ಆಸಕ್ತಿಯಿರುವವರಿಗೆ ಉತ್ತಮ ಪುಸ್ತಕ.

ಪುಸ್ತಕದಲ್ಲಿ ನನ್ನ ಮನಸೆಳೆದ ಕೆಲವು ಸಂಗತಿಗಳು (ಪುಸ್ತಕದಿಂದ ನೇರವಾಗಿ ಹೆಕ್ಕಿದ್ದು):

“ಜಪಾನೀಯರಿಗೆಲ್ಲ ಈ ದೇಶ ನಮ್ಮ ದೇಶ, ಇದು ದೊಡ್ಡದಾಗಬೇಕು, ಇದು ದೊಡ್ಡದಾಗಬೇಕಾದರೆ ನಾವೆಲ್ಲ ಚೆನ್ನಾಗಿ ದುಡಿಯಬೇಕು ಅನ್ನೋ ಆಸೆಯಂತೆ ಸ್ವಾಮಿ. ಅವರ ಪಾಠದ ಹೊತ್ತಿನಲ್ಲಿ ದೊಡ್ಡ ದೊಡ್ಡ ಉಪಾಧ್ಯಾಯರು ಇಂಗ್ಲಿಷ್ ಪುಸ್ತಕಾನ ಎದುರಿಗಿಟ್ಟುಕೊಂಡು ಜಪಾನಿ ಭಾಷೆಯಲ್ಲಿ ಪಾಠ ಹೇಳುತ್ತಿದ್ದರಂತೆ. ನಮ್ಮ ದೊಡ್ಡ ಉಪಾಧ್ಯಾಯರು ಮೊದಲು ಕನ್ನಡದಲ್ಲಿ ಪುಸ್ತಕ ಆಗಲಿ ಅದಿಟ್ಟುಕೊಂಡು ಕನ್ನಡದಲ್ಲಿ ಪಾಠ ಹೇಳುತ್ತೇವೆ ಅನ್ನುತ್ತಾರೆ. ಪುಸ್ತಕ ಬರೀಬೇಕಾದ ಈ ದೊಡ್ಡವರೇ ಕನ್ನಡದಲ್ಲಿ ಬರಿಯೋಕಾಗುವುದಿಲ್ಲ ಅಂತಲೋ, ಬೇರೆಯವರು ಬರೀಲಿ ಅಂತಲೋ, ತೆಪ್ಪನೆ ಕುಳಿತು ಬಿಟ್ಟರೆ ಪುಸ್ತಕ ಬರೆಯದೆಯೇ ಕನ್ನಡ ಬೆಳೆಯುತ್ತದೆಯೇ?”

“ನಮ್ಮ ಜನಕ್ಕೆ ಇಂಗ್ಲೀಷು ಅಂದರೆ ಮೋಹ ಆಗಿದೆ. ನಮ್ಮ ದೊರೆಗಳಾಗಿದ್ದ ಪರಂಗಿ ಜನ, ನಮ್ಮನ್ನು ಆಳುವುದಕ್ಕೆ ಉಪಾಯ ಅಂತ ನಮ್ಮ ಜನಕ್ಕೆ ತಮ್ಮಲ್ಲೇ ನಂಬಿಕೆ ಇಲ್ಲದಂತೆ ಮಾಡಿದರು; ಸಂಸ್ಕೃತ ಯಾಕೆ ಅಂತ ಇಂಗ್ಲಿಷ್ ಕಲಿಸಿದರು. ನಾವೆಲ್ಲ ಇಂಗ್ಲಿಷ್ ಕಲಿತದ್ದು ಸಂಬಳಕ್ಕಾಗಿಯೆ. ಹೀಗಾಗಿ ಸಂಸ್ಕೃತ ಮೂಲೆಗೆ ಬಿತ್ತು.”

 

“***ಇವರು ದೊಡ್ಡ ಕೆಲಸದಲ್ಲಿ ಏಳು ಜನ ಮದರಾಸಿನವರನ್ನು ತಂದು ನಿಲ್ಲಿಸಿದರಲ್ಲದೆ ಇಲ್ಲಿಯ ಬೇರೆ ಕೆಲಸದಲ್ಲಿ ಕೂಡ ನೇಮಿಸುವಲ್ಲಿ ತಮ್ಮ ಹತ್ತಿರದ ಕೆಲಸ ಮಾಡಿದ ಮನುಷ್ಯರನ್ನು ಕೆಲಸಕ್ಕೆ ನೇಮಿಸಿದರು. ಒಟ್ಟಿನಲ್ಲಿ ಮೈಸೂರು ತಮಿಳರ ಪಾಲಾಯಿತು. ತನ್ನವನೂ ಅಂತ ಒಬ್ಬನಿಗೆ ತನ್ನ ಹತ್ತಿರ ಕೆಲಸ ಕೊಡದೆ ಮರ್ಯಾದೆ ಉಳಿಸಿಕೊಂಡವರು ವಿಶ್ವೇಶ್ವರಯ್ಯನವರು ಒಬ್ಬರೇ. ವಿಶ್ವೇಶ್ವರಯ್ಯನವರು ಕನ್ನಂಬಾಡಿ ಕಟ್ಟೆಗೆ ಸಾಗರದ ಕಟ್ಟಡ ಆರಂಭಿಸಿದರಲ್ಲ, ಇಲ್ಲಿ ಸರ್ಕಾರದ ಕೆಲಸದಲ್ಲಿದ್ದ ತಮಿಳು ಜನರ ಕೂಗೋ ಕೂಗು. ತಂಜಾವೂರ ಜನಕ್ಕೆ ತೊಂದರೆ ಆಗುತ್ತೆ ಅಂತ. ವಿಶ್ವೇಶ್ವರಯ್ಯನವರು ಗಟ್ಟಿ ದಿವಾನರು. ಕೆಲಸ ಮುಂದುವರಿಸಿದರು. ಕುಡಿಯೋಕೆ ನೀರಿಲ್ಲದೆ ಕಷ್ಟ ಪಡ್ತಾ ಇದ್ದ ಮಂಡ್ಯದ ಸೀಮೆ ನೆಲ, ಶ್ರೀರಂಗಪಟ್ಟಣದ ನೆಲದ ಹಾಗೆ ಗದ್ದೆ ನೆಲ ಆಯ್ತು. ನಮ್ಮ ಜನ ಬದುಕಿಕೊಂಡರು.”

“ನಮ್ಮ ವ್ಯಾಪರಗಾರರು ಒಳ್ಳೇ ತುಪ್ಪಕ್ಕೆ ಜಿಡ್ಡು ಸೇರಿಸೋಕೆ ಏರ್ಪಾಟು ಮಾಡಿದರು. ಊರಿನಲ್ಲಿ ಕಸಾಯಿ ಮನೆಗಳಿಂದ ಕುರಿ ಕೊಬ್ಬನ್ನ ತಂದು ತುಪ್ಪದಲ್ಲಿ ಸೇರಿಸೋದು ಮೊದಲಾಯಿತು. ನಮ್ಮ ಕಾಲದ ಹೊಸ ಭಕ್ಷ್ಯಗಳು ಬೋಂಡಾ, ಪಕೋಡಾ, ಮೈಸೂರುಪಾಕು ಇಂಥದ್ದೆಲ್ಲ ಈ ತುಪ್ಪದಲ್ಲಿ ಮಾಡಿದ್ದು ಹೆಚ್ಚು ರುಚಿ ಆಗ್ತಾ ಇತ್ತಂತೆ. “

“ನಮ್ಮ ದೊಡ್ಡ ಕವಿ, ಜಾಣ ಒಬ್ಬ ರಾಜನಾದವನಿಗೆ ’ಭೂಪತಿ ಅನ್ನಿಸಿಕೊಂಡ ಜನ ಸತ್ತಾಗ ಅವರೊಂದಿಗೆ ಭೂಮಿ ಸಹಗಮನ ಮಾಡಿದ್ದಿಲ್ಲಪ್ಪ’ ಅಂತ ಹೇಳಿದ ಅಂದರು. ಮನುಷ್ಯನಿಗೆ ತಿಳಿಯಬೇಕಾದ ಸಂಗತಿ; ತಿಳಿಯೋದಿಲ್ಲ ಸ್ವಾಮಿ. ಈಗ ದೊಡ್ಡ ದೊಡ್ಡ ಅಧಿಕಾರದಲ್ಲಿ, ಸಂಸ್ಥೆಗಳಲ್ಲಿ ದುರಾಸೆಯಿಂದ ಅನ್ಯಾಯವಾಗಿ ಕಾಸುಗಳಿಸುತಾ ಇರೋ ಪುಣ್ಯವಂತ ಜನಕ್ಕೆ ಈ ಮಾತು ಸಲ್ಲುತ್ತೆ. ಹಣ ಮುಂದಕ್ಕೆ ಯಾರ ಪಾಲಾಗುತ್ತೆ, ಯಾವ ಶುಭವನ್ನು ಸಾಧಿಸುತ್ತೆ ಇವರು ಯೋಚನೆ ಮಾಡಬೇಕು. ಹಣ ಗಳಿಸುತಾ ಇಲ್ಲ; ಆದ್ದರಿಂದ ನಾನು ಈ ವಿವೇಕದ ಮಾತನಾಡುತಾ ಇದೇನೆ. ಗಳಿಸುತಾ ಇರೋರಿಗೆ ಈ ಸತ್ಯ ಹೊಳೆಯೋದಿಲ್ಲ.”

“ ದಂಪತಿಗಳ ನಡುವೆ ಯಾವುದೇ ಬೇಸರ ಇದ್ದರೂ ಮಕ್ಕಳನ್ನು ಬೆಳೆಸೋ ಹೊಣೆಗೆ ಅಡ್ಡಿ ಆಗಬಾರದು. ಪ್ರೇಮ ಇತ್ತು ಸಮ, ಪ್ರೇಮ ಇಲ್ಲ ಬೇಸರ ಅಂತೂ ಕೂಡದು. ಕಚ್ಚಾಟ ಇಲ್ಲದೆ ಇದ್ದರೂ ಆಯಿತು.”

*****

ಅಂತೂ ವಾರಾಂತ್ಯದ ಓದಿಗೆ ಒಂದು ಉತ್ತಮ ಪುಸ್ತಕ. ನಾನು ಆಕೃತಿಯಲ್ಲಿ ಕೊಂಡಿದ್ದು. ಇತರೇ ಪುಸ್ತಕ ಮಳಿಗೆಗಳಲ್ಲೂ ಲಭ್ಯವಿರಬಹುದು.

 

‍ಲೇಖಕರು G

27 March, 2011

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading