ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಾಜ್ ಕುಮಾರ್ ಅವರೊಂದಿಗೆ ನಡೆದ ಒಂದು ಸನ್ನಿವೇಶ…

ಪಿ ಎಚ್ ವಿಶ್ವನಾಥ್

ನಾನು ಆಗ ಮುಂಜಾನೆಯ ಮಂಜು ಚಿತ್ರವನ್ನು ಮಾಡುತ್ತಿದ್ದ ಸಮಯ. ಎಲ್ಲಾ ಹಾಡುಗಳ ರೆಕಾರ್ಡಿಂಗ್ ಮುಗಿದಿತ್ತು.

ಹಾಡುಗಳ ಕಂಪೋಸಿಂಗ್ ಸಮಯದಲ್ಲಿ ಒಂದು ಹಾಡನ್ನು ಡಾ. ರಾಜ್‌ಕುಮಾರ್ ಅವರಿಗಾಗಿಯೇ ಕಂಪೋಸ್ ಮಾಡಲಾಗಿದ್ದು ಅದರ ರೆಕಾರ್ಡಿಂಗ್ ಮಾತ್ರ ಬಾಕಿ ಇತ್ತು. ಆಗ ನಿಮ್ಮ ಕೆಲಸ ಎಲ್ಲ ಮುಗಿಸಿಕೊಳ್ಳಿ ನಂತರ ಬಂದು ಹಾಡ್ತಾರೆ ಎಂದು ಪಾರ್ವತಮ್ಮನವರು ಹೇಳಿದ್ದರಿಂದ ಡಮ್ಮಿ ವಾಯ್ಸ್ನಲ್ಲಿ ಹಾಡಿನ ಚಿತ್ರೀಕರಣವೂ ಆಯಿತು. ಚಿತ್ರ ಸಂಪೂರ್ಣವಾಗಿ ಮುಗಿದು ರೀ ರೆಕಾರ್ಡಿಂಗ್ ಸಹ ಪ್ರಾರಂಭ ಆಯಿತು. ನಿರ್ಮಾಪಕ ಸಂದೇಶ್ ನಾಗರಾಜು ಅವರು ಹಲವಾರು ಬಾರಿ ಒಡಾಡಿ ರೀ ರೆಕಾರ್ಡಿಂಗ್ ನಡೆಯುತ್ತಿರುವಾಗಲೇ ಒಂದು ದಿನ ಇವತ್ತು ಅಣ್ಣಾವು ಬರ್ತಾರೆ ಹಾಡನ್ನು ರೆಕಾರ್ಡ್ ಮಾಡಿಬಿಡಿ ಅಂದರು. ಎಷ್ಟು ಹೊತ್ತಿಗೆ ಬರ್ತಾರೆ ಅಂದಿದ್ದಕ್ಕೆ ಒಟ್ಟಲ್ಲಿ ಇವತ್ತು ಬರ್ತೀನಿ ಅಂದಿದ್ದಾರೆ ಟೈಮ್ ಹೇಳಿಲ್ಲ ನೀವು ರೆಡಿಯಾಗಿರಿ ಅಂದರು.

ಆ ದಿನ ಸಾಯಂಕಾಲ ಐದೂ ಮುಕ್ಕಾಲು ಗಂಟೆಯ ಹೊತ್ತಿಗೆ ಸರಿಯಾಗಿ ನಾನು ಕನ್ಸೋಲ್ ರೂಮ್‌ನಲ್ಲಿ ಕುಳಿತು ಏನನ್ನೋ ಓದುತ್ತಿದ್ದಾಗ ಚೆನ್ನನೊಂದಿಗೆ ಅಣ್ಣಾವರು ಬಂದರು. ಆದರೆ ಆ ಸಮಯಕ್ಕೆ ಸರಿಯಾಗಿ ಹಂಸಲೇಖಾರವರು ಯಾವುದೋ ಕಾರಣಕ್ಕೆ ಹೊರಗೆ ಹೋಗಿದ್ದರು. ನಿರ್ಮಾಪಕರೂ ಸಹ ಅಲ್ಲಿ ಇರಲಿಲ್ಲ. ಈಗಿನಂತೆ ಕಮ್ಯುನಿಕೇಟ್ ಮಾಡಲು ಆಗ ಮೋಬೈಲ್ ಪೋನ್‌ಗಳೂ ಇರಲಿಲ್ಲ. ಹಾಗಾಗಿ ನಾನೇ ಅವರನ್ನ ಸ್ವಾಗತಿಸಬೇಕಾಯಿತು.

ಅವರು ಬಂದು ಸೌಂಡ್ ಇಂಜಿನೀಯರ್ ಕುಳಿತುಕೊಳ್ಳುವ ಛೇರ್ ಪಕ್ಕದಲ್ಲಿದ್ದ ಛೇರ್‌ನಲ್ಲಿ ಕುಳಿತು ಕೊಂಡರು. ನಾನು ಆವರೆಗೂ ರಾಜ್‌ಕುಮಾರ್‌ರವರೊಂದಿಗೆ ಒಂದೇ ಒಂದುಸಲ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಪುಟ್ಟಣ್ಣ ಕಣಗಾಲ್‌ರ ಸಹ ನಿರ್ದೇಶಕನಾಗಿದ್ದಾಗ ಐದು ನಿಮಿಷ ಮಾತನಾಡಿದ್ದನ್ನು ಬಿಟ್ಟರೆ ಮತ್ಯಾವತ್ತೂ ಮಾತಾಡಿರಲಿಲ್ಲ, ಏನಿದ್ದರೂ ಎದುರು ಕಂಡಾಗ ದೂರದಿಂದಲೇ ನಮಸ್ಕಾರ ಮಾಡುತ್ತಿದ್ದೆ. ಹಾಗೆ ಅವರಿಗೆ ಸವಿರಾರು ಜನರು ನಮಸ್ಕಾರ ಮಾಡುತ್ತಿದ್ದುದರಿಂದ ಅವರಿಗೆ ನನ್ನ ಪರಿಚಯ ಇರವುದು ಸಾಧ್ಯವಿರಲಿಲ್ಲ. ಸ್ಟುಡಿಯೋ ಕನ್ಸೋಲ್ ರೂಮ್‌ನಲ್ಲಿದ್ದ ಹುಡುಗರೆಲ್ಲಾ ಎದ್ದು ನಿಂತಿದ್ದರು ನಾನೂ ಅವರೊಂದಿಗೆ ನಿಂತುಕೊಂಡೇ ಇದ್ದೆ. ಸ್ಟುಡಿಯೋ ಹಾಲ್‌ನಲ್ಲಿ ಯಾರೂ ಇಲ್ಲದ್ದನ್ನು ಕಂಡು “ಎಲ್ಲಿ ಎಲ್ಲಾ, ಯಾರೂ ಕಾಣ್ತಾ ಇಲ್ಲವಲ್ಲ” ಅಂದರು. ಅಲ್ಲಿದ್ದ ಹುಡುಗರು “ಎಲ್ಲ ಟಿಫಿನ್‌ಗೆ ಹೋಗಿದ್ದಾರೆ ಸಾರ್ ಹಂಸಲೇಖಾವರು ಹೊರಗೆ ಹೋಗಿರೊದರಿಂದ ಹತ್ತು ನಿಮಿಷ ಮುಂಚೇನೇ ಬ್ರೇಕ್ ಮಾಡಿದೆ” ಎಂದರು. “ನೀವೆಲ್ಲ ತಿಂಡಿ ತಿನ್ನೋಲ್ಲವಾ ಹೋಗಿ ನೀವೂ ತಿಂಡಿ ತಿಂದು ಬನ್ನಿ” ಎಂದು ಎಲ್ಲರನ್ನೂ ಕಳಿಸಿದರು. ನಾನೂ ಚೆನ್ನ ಹಾಗೂ ಅಣ್ಣಾವರು ಮಾತ್ರವೇ ಅಲ್ಲಿ ಉಳಿದೆವು, ನನಗೆ ಏನು ಮಾಡಬೇಕು ಅಂತ ಗೊತ್ತಾಗಲಿಲ್ಲ. ಆಗ ಚನ್ನ ಇವರೇ ಪಿ ಎಚ್‌ ವಿಶ್ವನಾಥ್ ಈ ಪಿಕ್ಚರ್ ಡೈರೆಕ್ಟರ್ ಎಂದು ಅಣ್ಣಾವರಿಗೆ ಹೇಳಿದರು. ಆಗ ಅವರು, ಹಾ ನನಗೆ ಗೊತ್ತು ಗೊತ್ತು ಎಂದು ಹೇಳುತ್ತಾರೆ ಎಂದು ನಾನು ನಿರೀಕ್ಷಿದ್ದೆ. ಆದರೆ ಅವರು ಹಾಗೆ ಹೇಳದೆ ಕುಳಿತಿದ್ದ ಖುರ್ಚಿಯಿಂದ ಎದ್ದು ನಿಂತು ಎರೆಡು ಕೈ ಜೋಡಿಸಿ “ನಮಸ್ಕಾರ ತುಂಬಾ ಸಂತೋಷ” ಎಂದು ಹೇಳಿದರು. ಅವರು ನಿಂತು ಹಾಗೆ ಕೈ ಜೋಡಿಸಿ ನಮಸ್ಕಾರ ಮಾಡಿದ್ದು ನನಗೆ ಒಂದು ರೀತಿಯಲ್ಲಿ ತುಂಬಾ ಮುಜುಗರವಾಯಿತು. ಏನು ಹೇಳಬೇಕೂಂತಾನೇ ಗೊತ್ತಾಗಲಿಲ್ಲ. ಹಾಗೇ ನಿಂತೇ ಇದ್ದ ಅವರು ಚನ್ನನ ಕಡೆ ತಿರುಗಿ “ನೀನು ತಿಂಡಿ ತಿನ್ನಲ್ಲವೇನಪ್ಪಾ, ಹೊಗಿ ಮುಗಿಸಿಕೊಂಡುಬಾ ಅಷ್ಟುಹೊತ್ತಿಗೆ ಇವರೂ ಬರ್ತಾರೆ” ಎಂದರು. “ಹಂಸಲೇಖಾವರು ಇದ್ದಿದ್ದರೆ ಹಾಡನ್ನಾದರೂ ನೋಡಿಕೊಳ್ಳಬಹುದಾಗಿತ್ತು” ಎಂದ ಚನ್ನನಿಗೆ “ಪರವಾಗಿಲ್ಲ ನೋಡಿಕೊಂಡರಾಯಿತು ಬಿಡು ನಿಧಾನಕ್ಕೆ ಮಾಡೋಣ ನೀನು ಹೋಗಿ ತಿಂಡಿ ತಿಂದು ಬಾ ನನ್ನ ಜೊತೆಗೆ ಡೈರೆಕ್ಟರು ಇರ್ತಾರೆ ಮಾತಾಡ್ತಾ ಇರ್ತೀವಿ” ಎಂದರು. ಚನ್ನ ಹೊರಟು ಹೋದರು. ಈಗ ಕನ್ಸೋಲ್ ರೂಮಿನಲ್ಲಿ ನಾನೂ ಹಾಗೂ ಕರ್ನಾಟಕದ ಕಣ್ಮಣಿ ಎಲ್ಲರ ನೆಚ್ಚಿನ ಅಣ್ಣಾವು ಇಬ್ಬರೇ ಉಳಿದೆವು. ಅವರು ಚನ್ನ ಹೋದ ಮೇಲೂ ಸಹ ಹಾಗೇ ನಿಂತೇ ಇರುವುದನ್ನು ನಾನು ಅಬ್ಸರ್ವ್ ಮಾಡಿದೆ. “ಸಾರ್ ಕೂತುಕೊಳ್ಳಿ ನಿಂತೇ ಇದ್ದೀರಿ” ಅಂದೆ. ನಾನೂ ನಿಂತಿದ್ದನ್ನು ತೋರಿಸಿ “ನೀವು ಕೂತುಕೊಳ್ಳಿ” ಅಂದರು. ಅವರು ನಿಂತಿರುವಾಗ ಅವರ ಮುಂದೆ ನಾನು ಕುಳಿತುಕೊಳ್ಳುವುದೇ ಎನ್ನುವ ಗಲಿಬಿಲಿಯಲ್ಲಿ ಅವರನ್ನೇ ನೋಡಿದೆ.

ಕೊನೆಗೆ ನಾನು ಕುಳಿತುಕೊಳ್ಳುವುದಿಲ್ಲವೆಂದು ಅವರಿಗೆ ಮನವರಿಕೆಯಾಗಿ ಅವರು ಕುಳಿತುಕೊಂಡು ನನ್ನನ್ನು ಕುಳಿತುಕೊಳ್ಳುವಂತೆ ಮಾಡಿದರು. ನಾನು ಕುಳಿತುಕೊಂಡಮೇಲೆ ನಿಧಾನವಾಗಿ ಅವರೇ ಮಾತಿಗೆ ಶುರುಮಾಡಿದರು. “ತಾವು ಹಾಡು ನೋಡಿಕೊಳ್ಳುವುದಾದರೆ ನನ್ನ ಹತ್ತಿರ ಸಾಹಿತ್ಯ ಇದೆ ಕೊಡಲೇ” ಅಂದೆ. ಆಗ ಅವರು ಏನನ್ನೂ ಹೇಳದ್ದನ್ನು ಕಂಡು “ಹಾಡಿನ ಟ್ಯೂನ್ ಜೊತೆಗಿದ್ದರೇ ಸಾಹಿತ್ಯವನ್ನು ನೋಡಿಕೊಳ್ಳೋಕೆ ಚನ್ನಾಗಿರುತ್ತದೆ ಆದರೆ ನನಗೆ ಟ್ಯೂನ್ ಹಾಡಿ ತೋರಿಸೋಕೆ ಬರೋಲ್ಲ ಬೇಕಾದರೆ ಸ್ಟುಡಿಯೋ ಹುಡುಗರನ್ನ ಕರೀತೀನಿ ಟ್ರಾಕ್ ಹಾಕಿಸಿಕೊಂಡು ಲಿರಿಕ್ಸ್ ನೋಡಿಕೊಳ್ಳಬಹುದು” ಎಂದೆ. “ಏನೂ ಬೇಡ ಅವರು ಈಗ ತಾನೇ ತಿಂಡಿ ತಿನ್ನೋಕೆ ಹೋಗಿದ್ದಾರೆ ನಿಧಾನವಾಗಿ ತಿಂದು ಬರಲಿ, ನನಗೋಸ್ಕರ ಅವರು ಅರ್ಧದಲ್ಲಿ ತಿಂಡಿ ಬಿಟ್ಟು ಬರೊದು ಬೇಡ” ಎಂದರು. ನನಗೆ ಮುಂದಕ್ಕೆ ಅವರ ಹತ್ತಿರ ಏನು ಮಾತನಾಡಬೇಕೆಂದು ಗೊತ್ತಾಗದೇ ಮನದಲ್ಲೇ ಚಡಪಡಿಸುತ್ತಿದ್ದೆ. ಅದನ್ನು ಅರಿತ ರಾಜ್‌ಕುಮಾರ್ ರವರು “ಪರವಾಗಿಲ್ಲ ನೀವು ಲಿರಿಕ್ಸ್ ಕೊಡಿ ನಾನು ನೋಡಿಕೊಳ್ತಾ ಇರ್ತೀನಿ ಅಂದರು. ನಾನು ಸ್ವಲ್ಪ ರಿಲೀಫ್‌ ಸಿಕ್ಕಂತಾಗಿ ಹೊರಗೆ ಹೋಗಿ ಲಿರಿಕ್ಸ್ ಪೇಪರ್ ಹುಡುಕಿ ತಂದೆ.

ಮೆಲ್ಲಗೆ ಸದ್ದಾಗದಂತೆ ಬಾಗಿಲು ತೆಗೆದು ಒಳಗೆ ಬಂದಾಗ ಅಣ್ಣಾವರು ಕಣ್ಣು ಮುಚ್ಚಿ ಯಾವುದೋ ಹಾಡನ್ನು ಗುನುಗುನಿಸುತ್ತಿದ್ದರು. ನಾನು ಒಳಗೆ ಬಂದಿದ್ದು ಅವರ ಅರಿವಿಗೆ ಬರಲಿಲ್ಲ ನಾನು ಅವರ ಹಾಡಿನ ಧ್ಯಾನಕ್ಕೆ ಭಂಗ ತರದೆ ಹಾಗೇ ಕೇಳುತ್ತಾ ನಿಂತಿದ್ದೆ. ಕಣ್ಣು ಬಿಟ್ಟು ನೋಡಿದವರು ಹಾಡನ್ನು ನಿಲ್ಲಿಸಿ ಕೈ ಚಾಚಿದರು. ನಾನು ಬಳಿಗೆ ಹೋಗಿ ಅವರ ಕೈಗೆ ಹಾಡಿನ ಪೇಪರ್ ಕೊಟ್ಟು ಮಿಕ್ಸರ್ ಮುಂದಿನ ನನ್ನ ಸೀಟ್‌ನಲ್ಲಿ ಕುಳಿತೆ. ಲಿರಿಕ್ಸ್ ಒದಿಕೊಳ್ಳುತ್ತಿದ್ದ ಅವರು ಮಧ್ಯದಲ್ಲಿ ಲಿರಿಕ್ಸ್ ಪೇರ‍್ನಲ್ಲಿ ತೋರಿಸುತ್ತಾ ಏನನ್ನೋ ಕೇಳಿದರು ನಾನು ಎದ್ದು ಅವರ ಬಳಿಗೆ ಹೋಗಿ ಅವರು ಕೇಳಿದ್ದಕ್ಕೆ ಉತ್ತರ ನೀಡಿ ನಿಂತಿರಲೋ ಹೋಗಿ ಕುಳಿತುಕೊಳ್ಳಲೋ ಎಂದು ಒಂದು ಕ್ಷಣ ಯೊಚಿಸಿ ಮತ್ತೆ ನನ್ನ ಸೀಟಿನ ಕಡೆಗೆ ತಿರುಗಿದೆ. ನನ್ನ ಕಡೆ ತಲೆ ಎತ್ತಿ ನೋಡಿದ ಅವರು “ಇಲ್ಲೇ ಕೂತುಕೋ ಬನ್ನಿ” ಎಂದರು. ನಾನು “ಇಲ್ಲಾ ಸಾರ್ ಇಟೀಸ್ ಓಕೆ” ಅಂದು ನನ್ನ ಸ್ಥಾನದಲ್ಲಿ ಕುಳಿತೆ. ಆದರೆ ಅವರು “ನೀವ್ ಇಲ್ಲಿ ನನ್ನ ಪಕದಲ್ಲಿ ಕುಳಿತುಕೋ ಬನ್ನಿ” ಎಂದು ಒತ್ತಾಯದ ಧ್ವನಿಯಲ್ಲಿ ಹೇಳೀದರು. “ಇಲ್ಲ ಸಾರ್ ಪರವಾಗಿಲ್ಲ ಥ್ಯಾಂಕ್ಸ್” ಅಂದೆ. “ಯಾಕೆ ಹಾಗೆ ಸಂಕೋಚ ಪಟುಕೊಳ್ತಾ ಇದೀರಿ ಇಲ್ಲಿ ಬನ್ನಿ” ಅಂದರು. “ನಾನು ಇಲ್ಲ ಸಾರ್ ನಿಮ್ಮ ಜೊತೆ ಹೀಗೆ ಇಷ್ಟು ದೂರದಲ್ಲಿದ್ದರೇನೇ ಮಿಂಚು ಹೊಡೆಯೋ ಹಾಗೆ ಅನ್ನಿಸ್ತಿದೆ, ನಿಮ್ಮ ಪಕ್ಕ ಬಂದು ಕೂತುಕೊಳ್ಳೋಕೆ ಒಂಥರಾ ಆಗುತ್ತೆ, ಅಲ್ಲದೇ ತುಂಬಾ ಸಂಕೋಚ ಬೇರೆ ಆಗ್ತಾ ಇದೆ, ನಾನಿಲ್ಲೇ ಕಂಫರ್ಟಬಲ್ಲಾಗಿದೀನಿ” ಎಂದೆ.

ಕೈಯಲ್ಲಿದ್ದ ಲಿರಿಕ್ಸ್ ಪೇಪರ್ ಪಕ್ಕಕ್ಕಿಟ್ಟು ಎದ್ದು ನನ್ನ ಹತ್ತಿರ ಬಂದು ನನ್ನ ಕೈ ಹಿಡಿದು ಪಕ್ಕದಲ್ಲಿ ಕೂರಿಸಿಕೊಂಡರು. “ನೋಡಿ ನೀವು ಡೈರೆಕ್ಟರು, ನಮ್ಮಂಥ ಹಾಡುಗಾರರನ್ನ ಹುಟ್ಟು ಹಾಕೋ ಶಕ್ತಿ ನಿಮಗೆ ಇದೆ. ನಿಮ್ಮ ಹೆಸರು ನನಗೆ ಗೊತ್ತು, ನಿಮ್ಮ ಪಂಚಮವೇದ ಚಿತ್ರ ನಾನು ನೋಡಿಲ್ಲ ಆದರೆ ಅದರ ಬಗ್ಗೆ ಸುಮಾರು ಕಡೆ ಓದಿದ್ದೀನಿ, ನಿಮ್ಮ ಮುಖ ಪರಿಚಯ ನನಗಿರಲಿಲ್ಲ, ನಿಮ್ಮ ವಯಸ್ಸು ಚಿಕ್ಕದಿರಬಹುದು, ಇಂಡಸ್ಟ್ರೀಲಿ ನಮ್ಮೊಷ್ಟು ವರ್ಷಗಳನ್ನ ಕಳೆದಿಲ್ಲದೇ ಇರಬಹುದು, ಆದರೆ ನಿಮ್ಮ ಸ್ಥಾನ ಇದೆಯಲ್ಲ ಡೈರೆಕ್ಟರ್ ಸ್ಥಾನ ಅದು ಸುಲಭವಾಗಿ ಬರೋದಲ್ಲ, ಬಹಳ ದೊಡ್ಡದು. ಸಿನಿಮಾದಲ್ಲಿ ಅದಕ್ಕೆ ಯಾವಾಗಲೂ ತನ್ನದೇ ಆದ ಗೌರವ ಇದ್ದೇ ಇರುತ್ತೆ. ಅಲ್ಲದೇ ನಿಮ್ಮಂಥ ಯುವಕರ ಜೊತೆ ಹೀಗೆ ಪಕ್ಕದಲ್ಲಿ ಕೂತು ಮಾತಾಡ್ತಿದ್ದಾಗ ನಾನೂ ಇನ್ನೂ ಹುಡುಗ ಅನ್ನೋ ಸಂತೋಷದ ಭಾವನೆ ಉಂಟಾಗುತ್ತೆ, ನೀವು ಹೀಗೆ ದೂರ ದೂರ ಇರೋದರಿಂದ ನನ್ನ ಆ ಸಂತೋಷವನ್ನ ಕಿತ್ತುಕೊಂಡ ಹಾಗಾಗೋಲ್ಲವೇ” ಎಂದು ನನ್ನ ಮುಂಗೈ ತಟ್ಟುತ್ತಾ ಹೇಳಿದರು.

ಅವರಿಗೆ ಸಂತೋಷ ಆಯಿತೋ ಇಲ್ಲವೋ ಗೊತ್ತಿಲ್ಲ, ನನ್ನಲ್ಲಿದ್ದ ಸಂಕೋಚವನ್ನ ಈ ರೀತಿಯಾಗಿ ದೂರ ಮಾಡೋ ಅವರ ಉದ್ದೇಶವಂತೂ ಸಫಲವಾಗಿತ್ತು. ತನ್ನನ್ನ ಸಣ್ಣದಾಗಿ ಬಿಂಬಿಸಿಕೊಂಡು, ಬೇರೆಯವರ ಕೀಳರಿಮೆಯನ್ನು ಕಿತ್ತು ಹಾಕೋದಕ್ಕೆ ಇದಕ್ಕಿಂತ ಉತ್ತಮ ಮಾರ್ಗ ಇನ್ನೊಂದಿರಲಾರದು ಎಂದು ಅನ್ನಿಸಿತು.

‍ಲೇಖಕರು avadhi

26 April, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading