-ಸಂಗಮೇಶ ಮೆಣಸಿನಕಾಯಿ
1997-98 ಇರಬೇಕು. ಗದಗಿನ ನಾಗರಿಕ, ನವೋದಯ ದಿನಪತ್ರಿಕೆಗಳಿಗೆ ಹೊಸಹೊಸ ವಿಷಯಗಳನ್ನು ಹುಡುಕಿ ಬರೆಯುವ ಹಂಬಲ. ಸಂಕೇಶ್ವರರ ವಿಜಯಾನಂದ ಟ್ರಾವೆಲ್ಸ್ ಮತ್ತು ಸಂಕೇಶ್ವರ ಪ್ರಿಂಟರ್ಸ್‌ನಲ್ಲಿ ಗುಮಾಸ್ತನಾಗಿ ದುಡಿಯುತ್ತ, ಸಮಯ ಸಿಕ್ಕಾಗ ಬಿ.ಎ. ಓದುತ್ತಿದ್ದ ದಿನಗಳವು.
‘ಕಲಿಯುಗದ ಕುಡುಕ’ ನಾಟಕದ ಕ್ಯಾಸೆಟ್ ಮನೆಮಾತಾಗಿತ್ತು. ಹೀಗಿದ್ದಾಗ ‘…ಕುಡುಕ’ ಖ್ಯಾತಿಯ ರಾಜು ತಾಳಿಕೋಟಿ ಆಗ ನರೇಗಲ್‌ನಲ್ಲಿದ್ದ ನಾಟಕ ಕಂಪನಿಯಲ್ಲಿ ಅಭಿನಯಿಸುತ್ತಿದ್ದರು. ‘ರಾಜು ತಾಳಿಕೋಟಿಯವರ ಸಂದರ್ಶನ ಮಾಡಿಕೊಂಡು ಬರ್ತೀನಿ ಸರ್’ ಅಂತ ನವೋದಯದ ಸಂಪಾದಕರಾದ ರಾಜೀವ ಕಿದಿಯೂರ ಅವರಿಗೆ ಕೇಳಿದೆ. ಅವರು, ‘ಆಯಿತು ಮಾಡ್ರಿ’ ಅಂದರು. ವಾರದ ರಜೆ ಶುಕ್ರವಾರ. ನರೇಗಲ್‌ಗೆ ಹೋದೆ. ಮಧ್ಯಾಹ್ನ ೧೨ ಗಂಟೆ. ನಾಟಕ ಕಂಪನಿ ಇದ್ದ ಟೆಂಟ್‌ನಲ್ಲಿ ಹೋಗಿ ಕೇಳಿದರೆ, “ಅವರು ಗದಿನ್ಯಾಗ ಲಾಡ್ಜ್‌ನ್ಯಾಗ ಇರ್ತಾರ್ರಿ…ಇಲ್ಲಿಗೆ ರಾತ್ರಿ ನಾಟಕ ಇದ್ದಾಗ ಅಷ್ಟ ಬರ್ತಾರ್ರಿ…” ಎಂಬ ಉತ್ತರ ಬಂತು.
ಗದಗಿಗೆ ಮರಳಿದೆ. ಆಗ ಇಂಥ ಕಲಾವಿದರೆಲ್ಲ ವಿ.ಆರ್. ಮಾಳೆಕೊಪ್ಪಮಠ ಅವರ ತ್ರಿಮೂರ್ತಿ ಲಾಡ್ಜ್‌ನ್ಯಾಗ ಇರುತ್ತಿದ್ದರು. ಯಾಕೆಂದರೆ ಮಾಳೆಕೊಪ್ಪಮಠ ಅಜ್ಜಾರು ಸಾಹಿತಿಗಳಿಗೆ-ಕಲಾವಿದರಿಗೆ ಉಚಿತವಾಗಿ ಅಥವಾ ರಿಯಾಯಿತಿ ದರದಲ್ಲಿ ಕೋಣೆ ಒದಗಿಸುತ್ತಿದ್ದರು. ನನ್ನ ಊಹೆಯಂತೆ ತಾಳಿಕೋಟಿ, ತ್ರಿಮೂರ್ತಿ ಲಾಡ್ಜ್‌ನಲ್ಲೇ ಉಳಿದುಕೊಂಡಿದ್ದರು. ಮಧ್ಯಾಹ್ನ ಒಂದು ಗಂಟೆಯ ಸಮಯ. ಇನ್ನೂ ರಾಜು ಎದ್ದಿರಲಿಲ್ಲ. ನಾನೇ ಎಬ್ಬಿಸಿದೆ. ನವೋದಯದ ಪರವಾಗಿ ಸಂದರ್ಶನಕ್ಕೆ ಬಂದಿರುವುದಾಗಿ ಹೇಳಿದೆ. ಕೂಡಲೇ ಮುಖ ತೊಳೆದು ಬಂದರು.
ಸಂದರ್ಶನ ಶುರುವಾಯಿತು. ಭರ್ತಿ ಎರಡು ತಾಸು ರಾಜು ಕೇಳಿದ್ದಕ್ಕೆಲ್ಲ ಉತ್ತರ ಕೊಟ್ಟರು. ಅವರ ಪತ್ನಿ ಪ್ರೇಮಾ ಕೂಡ ಮುಗ್ಧತೆಯಿಂದ ನಮ್ಮ ಸಂದರ್ಶನದಲ್ಲಿ ಭಾಗವಹಿಸಿದರು. ತಾಳಿಕೋಟಿಯ ಜೀವನ ಎಲ್ಲ ರಂಗ ಕಲಾವಿದರಂತೆ ಸಂಘರ್ಷದ ಜೀವನ. ಮೊದಲು ಲಾರಿ ಕ್ಲೀನರ್-ಡ್ರೈವರ್ ಆಗಿ ದುಡಿದ ಆಸಾಮಿ. ಪ್ರೇಮಾ ಗರ್ಭಿಣಿ ಇದ್ದಾಗ ನಾಟಕ ಕಂಪನಿಯೊಂದರ ಮಾಲೀಕ ಇವರನ್ನು ಸಂಬಳ ಕೇಳಿದ್ದಕ್ಕೆ ಒದ್ದು ಹೊರಗೆ ಹಾಕಿದ್ದ. ಮುಂದೇ ದುಃಖದಲ್ಲಿದ್ದಾಗ ಅದ್ಹೇಗೊ ‘ಕಲಿಯುಗದ ಕುಡುಕ’ ಕ್ಯಾಸೆಟ್ ಮಾಡುವ ಯೋಚನೆ ಬಂದಿತ್ತು. ಕೈಯಲ್ಲಿ ಹಣ ಇಲ್ಲ, ಬೆಂಗಳೂರಿನ ಕ್ಯಾಸೆಟ್ ಕಂಪನಿಗಳು ಈ ದಪ್ಪನೆಯ-ಕಪ್ಪನೆಯ-ಟಗರು ಕೂದಲಿನ ಕಲಾವಿದನನ್ನು ತಮ್ಮ ಕಚೇರಿ ಒಳಕ್ಕೂ ಬಿಟ್ಟುಕೊಂಡಿರಲಿಲ್ಲ.
ಹೇಗೂ ಕ್ಯಾಸೆಟ್ ಬಿಡುಗಡೆಯಾದಾಗ ರಾಜು ನಾಡಿನಾದ್ಯಂತ ಹೆಸರಾಗಿದ್ದ. ಎರಡು ತಾಸಿನ ಸಂದರ್ಶನದ ನಂತರ, ಅಲ್ಲೇ ಸ್ಟೇಶನ್ ರಸ್ತೆಯಲ್ಲಿದ್ದ ಖಾನಾವಳಿಯಲ್ಲಿ ಇಬ್ಬರೂ ಊಟ ಮಾಡಿದ್ದೆವು.
ಸಂದರ್ಶನವನ್ನು ಬರಹ ರೂಪಕ್ಕಿಳಿಸಿದಾಗ ಯಾವುದನ್ನು ಬರೆಯುವುದು, ಯಾವುದನ್ನು ಬಿಡುವುದು? ಅಂತೂ ೮-೧೦ ಕಾಗದಗಳಲ್ಲಿ ಮುಗಿಸಿ, ಆವತ್ತೇ ಸಂಪಾದಕರಿಗೆ ತಲುಪಿಸಿದೆ. ಅವರು, “ಇಷ್ಟು ದೊಡ್ಡದರಿ? ನಮ್ಮ ಪತ್ರಿಕೆಯ ಒಂದು ಇಡೀ ಪುಟ ಬೇಕಾಗತ್ತ ಇದಕ್ಕ” ಅಂದರು. ನಾನು ರಾಜು ತಾಳಿಕೋಟಿ ಅಂದರೆ ಯಾರು, ಅವನ ಪ್ರಸಿದ್ಧಿ ಹೇಗಿದೆ ಅನ್ನೋದನ್ನ ವಿವರಿಸಿದೆ. ಆಗ ಸಂಪಾದಕರು ಹೇಳಿದರು-“ಇದನ್ನ ನಾವು ಯಾವತ್ತಾದರೂ ಆರು ಪುಟ ಮಾಡಿದಾಗ ಹಾಕ್ಕೊಂತೀವಿ”. ಆಗ ನವೋದಯ ದಿನಪತ್ರಿಕೆ ಹಬ್ಬ-ವಿಶೇಷ ದಿನಗಳಂದು ಆರು ಪುಟ ಪ್ರಕಟವಾಗುತ್ತಿತ್ತು. ಉಳಿದ ದಿನ ನಾಲ್ಕೇ ಪುಟ.
ಸಂಪಾದಕರು, ಗದಗಿನ ಹಿರಿಯ ಛಾಯಾಗ್ರಾಹಕ ವಸಂತ ಮಹೇಂದ್ರಕರ ಅವರನ್ನು ಕರೆದೊಯ್ದು ರಾಜು ತಾಳಿಕೋಟಿಯ ಫೋಟೊ ತೆಗೆಸಲು ಹೇಳಿದರು. ಮುಂದೆ ಆಗಸ್ಟ್ ೧೫ ರಂದು ತಾಳಿಕೋಟಿ ಸಂದರ್ಶನ ಪ್ರಕಟವಾಯಿತು. ನವೋದಯ ಕಚೇರಿಯ ಲ್ಯಾಂಡ್‌ಲೈನ್‌ಗೆ ಕರೆಗಳ ಸುರಿಮಳೆ ಹರಿದಿತ್ತಂತೆ. ಪತ್ರಗಳೂ ಸಾಕಷ್ಟು ಬಂದಿದ್ದವು. ಸಂಪಾದಕರು ನನ್ನನ್ನು ಕರೆಸಿ, ಪತ್ರಗಳ ರಾಶಿ ತೋರಿಸಿದ್ದರು. “ಅವ ಇಷ್ಟು ಫೇಮಸ್ ಅದಾನ ಅಂತ ನನಗ ಗೊತ್ತಿದ್ದಿಲ್ಲ ಬಿಡ್ರಿ” ಅಂದರು ಮೃದು ಮಾತಿನ ಕಿದಿಯೂರ ಅವರು. ತಾಳಿಕೋಟಿ ಮನೆ ವಿಳಾಸಕ್ಕೆ ನವೋದಯದ ಐದು ಪ್ರತಿ ಕಳಿಸುವ ವ್ಯವಸ್ಥೆ ಮಾಡುವಂತೆ ಸಂಪಾದಕರಿಗೆ ವಿನಂತಿಸಿದ್ದೆ.
ಆ ಪ್ರತಿಗಳು ತಾಳಿಕೋಟಿ ಅವರ ಮನೆ ಇದ್ದ ತಾಳಿಕೋಟೆಗೆ ತಲುಪಿದಾಗ ಅವರ ಮನೆಯಲ್ಲಿ ಹಬ್ಬದ ಸಂಭಮ ಉಂಟಾಗಿತ್ತಂತೆ; ಯಾಕೆಂದರೆ ರಾಜು-ಪ್ರೇಮಾ ಬಗ್ಗೆ ಅದುವರೆಗೆ ಯಾವ ಪತ್ರಿಕೆಯಲ್ಲೂ ಲೇಖನ-ಸಂದರ್ಶನ ಏನೂ ಪ್ರಕಟವಾಗಿರಲಿಲ್ಲವಂತೆ. ನಾಟಕದಲ್ಲಿ ನಟಿಸುತ್ತ ಯಾವುದೋ ಊರಿನಲ್ಲಿದ್ದ ರಾಜು-ಪ್ರೇಮಾ ಅವರು, ಆ ಸಂದರ್ಶನ ನೋಡಿದ್ದು ತಿಂಗಳ ನಂತರ ಓದಿದ ರಾಜು ಒಂದು ದೊಡ್ಡ ಪತ್ರವನ್ನೇ ಬರೆದಿದ್ದ.
ರಾಜು ಜನ್ಮತಃ ಮುಸ್ಲಿಮನಾದರೂ ತಾಳಿಕೋಟೆಯ ಖಾಸ್ಗತೇಶ್ವರನ ಪರಮ ಭಕ್ತ. ಅವನ ನಾಟಕಗಳಲ್ಲೂ ಖಾಸ್ಗತೇಶ್ವರ ಬಂದೇ ಬರ್ತಾನೆ. “ಇವತ್ತು ಶನಿವಾರಲೇ ಖೋಡಿ, ಹನುಮಪ್ಪನ ಗುಡಿಗೆ ಹೋಗಿಬರ್ತೀನಿ ತಡಿ ಒಂದಿಟು” ಅನ್ನಾವ. ಮುಂದೆ ಖಾಸ್ಗತೇಶ್ವರ ಹೆಸರಿನಲ್ಲಿಯೇ ನಾಟಕ ಕಂಪನಿ ಮಾಡಿದ. ನಾನು ಯಾವುದೇ ಊರಿಗೆ ಹೋದಾಗ ಅಲ್ಲಿ ರಾಜುನ ನಾಟಕ ಇರೋದು ಗೊತ್ತಾದರೆ, ಅವನಿದ್ದಲ್ಲಿಗೇ ಹೋಗಿ ಭೇಟಿಯಾಗಿ ಬರೂದು ರೂಢಿ ಆಯಿತು. ಹೀಗೆ ಅವನನ್ನು ಗಂಗಾವತಿ, ಹುಬ್ಬಳ್ಳಿ, ಬೆಂಗಳೂರು ಮುಂತಾದೆಡೆ ಭೇಟಿ ಆಗೂದು, ಟೈಮ್ ಇದ್ದರ ನಾಟಕ ನೋಡೂದು. ಅವರ ತಂಡದ ರಸಮಂಜರಿ ಗಂಗಾವತಿಯಲ್ಲಿದ್ದಾಗ, ನಾನೂ ಅದರಲ್ಲಿ ನಮ್ಮ ಎಂ.ಡಿ.ಗೋಗೇರಿ ಅವರ ‘ಕಳಿಕಾಡೆ ಓಡಿ ಬಂದಿತ್ತ…’ ಎಂಬ ಹಾಡನ್ನೂ ಹಾಡಿದ್ದೆ! ಪ್ರೇಮಕ್ಕ ಅಂತೂ ” ಸಂಗಮೇಶಣ್ಣ ಭಾಳ ದಿವಸಕ್ಕ ಬಂದೀದಿ, ಊಟ ಮಾಡಿಕೊಂಡೇ ಹೋಗು” ಅಂತ ಅಲ್ಲೇ ತಮ್ಮ ಕ್ಯಾಂಪಿನ್ಯಾಗ ಸಿಗೂ ಊಟ ಮಾಡಿಸಿಯೇ ಕಳಿಸ್ತಾಳ.
ಮುಂದ ರಾಜು ಸಿನಿಮಾದಾಗ ನಟಿಸಿದ. ಒಂದಷ್ಟು ರೊಕ್ಕಾನೂ ಮಾಡಿರಬೇಕು. ಸಂಪರ್ಕ ಯಾವಾಗಲೋ ಒಮ್ಮೆ ಫೋನ್‌ನಲ್ಲಿ. ಏಕವಚನ-ಬಹುವಚನ ಸಂದರ್ಭಕ್ಕೆ ತಕ್ಕಂತೆ ಮಿಕ್ಸ್ ಮಾಡಿ ಮಾತಾಡ್ತೀವಿ. ವೈಯಕ್ತಿಕ ಜೀವನದಲ್ಲಿ ತನ್ನ ಒಂದಿಷ್ಟು ಸ್ವಯಂಕೃತ ಅಪರಾಧಗಳಿಂದ ಸಮಸ್ಯೆಗಳನ್ನೂ ಎದುರಿಸಿದ. ಅವನು ಹೇಳದಿದ್ದರೂ ಇತರರಿಂದ ಅಂಥ ಕಹಿಘಟನೆಗಳನ್ನು ಕೇಳಿದಾಗ ಬೇಸರವಾಗಿದ್ದೂ ಇದೆ. ಸಿಂದಗಿ ಬಳಿ ಒಂದು ನಾಟಕ ಶಾಲೆ ಮಾಡಲು ಹೊರಟಿದ್ದ. ಅದು ಏನಾಯಿತೋ ನನಗೀಗ ಮಾಹಿತಿ ಇಲ್ಲ.
ಅದೆಲ್ಲ ಇರಲಿ. ಈಗ ವೃತ್ತಿ ರಂಗಭೂಮಿಯ ಹಿನ್ನೆಲೆಯಿಂದ ಬಂದಿರುವ ರಾಜು ಧಾರವಾಡದ ರಂಗಭೂಮಿಗೆ ಅಧ್ಯಕ್ಷ. ನಾಟಕ ಅಕಾಡೆಮಿಯಲ್ಲೆಲ್ಲ ಹವ್ಯಾಸಿ ರಂಗಭೂಮಿಯವರು ತುಂಬಿಕೊಂಡಾಗ ಎದುರಾಗದ ವಿರೋಧ, ಈಗ ರಾಜುಗೆ ಎದುರಾಗುತ್ತಿದೆ. “ಧಾರವಾಡದ ರಂಗಾಯಣಕ್ಕೆ ವೃತ್ತಿರಂಗಭೂಮಿಯವರು ಯಾಕೆ?” ಎಂಬ ಪ್ರಶ್ನೆ ಎದ್ದಿದೆ. ಹಿಂದೆ ರಂಗಭೂಮಿಗೆ ಸಂಬಂಧ ಇಲ್ಲದವರೇ ಧಾರವಾಡ ರಂಗಾಯಣಕ್ಕೆ ನೇಮಕಗೊಂಡಾಗ ‘ಅಟ್ಟ’ ಏರಿ ತೆಪ್ಪಗಾಗಿದ್ದವರು, ಈಗ ಇದ್ದಕ್ಕಿದ್ದಂತೆ ಜಾಗೃತರಾಗಿದ್ದಾರೆ.
ಇವರೆಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಧಾರವಾಡ ರಂಗಾಯಣವನ್ನು ಮುನ್ನಡೆಸಿಕೊಂಡು ಹೋಗುವ ಸವಾಲು ರಾಜು ಮೇಲಿದೆ.






0 Comments