ಅಕ್ಟೋಬರ್ ೧೭ರಂದು ಪ್ರಖ್ಯಾತ ಸರೋದವಾದಕ ಪಂ. ರಾಜೀವ್ ತಾರಾನಾಥ್ ಅವರ ೯೧ನೆಯ ಹುಟ್ಟುಹಬ್ಬ. ಅಂದು ಪಂಡಿತ್ ತಾರಾನಾಥ್ ಟ್ರಸ್ಟ್, ಕರ್ನಾಟಕ ಸರ್ಕಾರದ ಕನ್ನಡ ಹಾಗೂ ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ
ಪಂ. ರಾಜೀವ್ ತಾರಾನಾಥರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಸ್ವತಃ ಪಂ. ರಾಜೀವ್ ತಾರಾನಾಥರು ಸರೋದ್ ನುಡಿಸಲಿದ್ದಾರೆ. ಸಂಗೀತ ಪ್ರೇಮಿಗಳಿಗೆ, ಸ್ನೇಹಿತರಿಗೆ, ಶಿಷ್ಯರಿಗೆ ಹಾಗೂ ಅಭಿಮಾನಿಗಳಿಗೆ ಇದೊಂದು ಮಹತ್ವದ ಕಾರ್ಯಕ್ರಮ.
ಪಂ. ರಾಜೀವ್ ತಾರಾನಾಥರು ಹಲವು ವರ್ಷಗಳ ನಂತರ ಬೆಂಗಳೂರಿನಲ್ಲಿ ಕಾರ್ಯಕ್ರಮ ನೀಡುತ್ತಿದ್ದಾರೆ. ಅವರೊಂದಿಗೆ ಬೆಂಗಳೂರಿನ ಪ್ರಖ್ಯಾತ ತಬಲಾ ವಾದಕರಾದ ಶ್ರೀ ಉದಯರಾಜ್ ಕರ್ಪೂರ್ ತಬಲ ಸಾಥ್ ನೀಡುತ್ತಿದ್ದಾರೆ. ಕನ್ನಡದ ಪ್ರಖ್ಯಾತ ಬರಹಗಾರರೂ ಜ್ಞಾನಪೀಠಪ್ರಶಸ್ತಿ ವಿಜೇತರಾದ ಡಾ. ಚಂದ್ರಶೇಖರ್ ಕಂಬಾರ, ವೀಣಾ ವಾದಕರಾದ ವಿದ್ವಾನ್ ಬಾಲಕೃಷ್ಣ, ಹಾಗೂ ಹಲವು ವಿಶೇಷ ಅತಿಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಪಂ. ರಾಜೀವ್ ತಾರಾನಾಥರು ಉಸ್ತಾದ್ ಅಲಿ ಅಕ್ಬರ್ ಖಾನ್ ಅವರ ಪ್ರಮುಖ ಶಿಷ್ಯರು. ಅವರದ್ದು ಬಹುಮುಖ ಪ್ರತಿಭೆಯ ವ್ಯಕ್ತಿತ್ವ. ಸಂಗೀತದೊಂದಿಗೆ ಕನ್ನಡ ಹಾಗೂ ಇಂಗ್ಲಿಷ್ ಸಾಹಿತ್ಯಗಳಿಗೂ ಅವರ ಕೊಡುಗೆ ಗಣನೀಯ. ಸಿನಿಮಾ ಕ್ಷೇತ್ರದಲ್ಲಿ ಕೂಡ ಅವರ ಸಾಧನೆ ಅಪಾರ. ಜಗತ್ತಿನಾದ್ಯಂತ ಅವರು ಮುಖ್ಯ ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ. ಜೊತೆಗೆ ಹಿಂದೂಸ್ತಾನಿ ಸಂಗೀತವನ್ನು ಭಾರತ ಹಾಗೂ ಅಮೇರಿಕೆಯ ಕ್ಯಾಲಿಫೋರ್ನಿಯಾ ಇನ್‌ಸ್ಟಿಟ್ಯೂಟ್ ಆಫ್ ಆರ‍್ಟ್ ಸೇರಿದಂತೆ ಹಲವು ಸಂಸ್ಥೆಗಳಲ್ಲಿ ಭೋದನೆ ಮಾಡಿದ್ದಾರೆೆ.
ಪದ್ಮಶ್ರೀ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಚೌಡಯ್ಯ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಮೊದಲಾದ ಹಲವು ಪ್ರಶಸ್ತಿಗಳು ಅವರನ್ನು ಅರಸಿ ಬಂದಿವೆ. ತಮ್ಮ ಘರಾನದ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಲು ಹಾಗೂ ಹಿಂದೂಸ್ತಾನಿ ಸಂಗೀತಕ್ಕೆ ಉತ್ತೇಜನ ನೀಡಲು ಅವರು ತಮ್ಮ ತಂದೆಯವರ ಹೆಸರಿನಲ್ಲಿ ಪಂಡಿತ್ ತಾರಾನಾಥ್ ಟ್ರಸ್ಟ್ ಸ್ಥಾಪಿಸಿದ್ದಾರೆ.
ಆ ಸಂಜೆ ಬೆಂಗಳೂರಿಗರಿಗೆ ಮತ್ತೊಮ್ಮೆ ಸರೋದ್ ಮಾಂತ್ರಿಕರ ಸಂಗೀತವನ್ನು ಸವಿಯಲು ಸೊಗಸಾದ ಸಮಯ!
ಕಾರ್ಯಕ್ರಮ ವಿವರ:
ಸ್ಥಳ: ರವೀಂದ್ರ ಕಲಾಕ್ಷೇತ್ರ, ಬೆಂಗಳೂರು,
ದಿನಾಂಕ : ೧೭-೧೦-೨೦೨೩
ಸಮಯ: ಸಂಜೆ ೬:೦೦ ರಿಂದ ೮:೩೦






0 Comments