ನವೀನ್ ಸೂರಿಂಜೆ
ಕಾಂತಾರ ಸಿನೇಮಾ ತುಳುನಾಡಿನ ಸಂಸ್ಕೃತಿಯನ್ನು ಸಾರುತ್ತದೆಯೇ ? ಈ ಸಿನೇಮಾ ತಳವರ್ಗ ಮತ್ತು ಭೂಮಾಲಕರ ನಡುವಿನ ಸಂಘರ್ಷವನ್ನು ತೋರಿಸುತ್ತದೆಯೇ ? ಗುಳಿಗ, ಪಂಜುರ್ಲಿ ಪಾತ್ರ ಮಾಡಲು ನಾನು ಒಂದು ತಿಂಗಳು ಮಾಂಸಾಹಾರ ತ್ಯಜಿಸಿದ್ದೆ ಎನ್ನುವ ರಿಷಬ್ ಶೆಟ್ಟಿ ದೈವಗಳಿಗೆ ಮಾಡುತ್ತಿರುವ ಅವಹೇಳನವಲ್ಲವೇ ? ಕಾಂತಾರ ಸಿನೇಮಾದಲ್ಲಿ ಭೂಮಾಲಕ ಮತ್ತು ದಲಿತರ ನಡುವಿನ ಸಂಘರ್ಷದ ಎಳೆಯಿದೆ ಮತ್ತು ದಲಿತ ಬಂಡಾಯವಿದೆ ಎಂದು ಯಾರಾದರೂ ಭಾವಿಸಿದರೆ ಅವರಿಗೆ ಕತೆ ಅರ್ಥ ಆಗಿಲ್ಲ ಎಂದರ್ಥ.
ಕಾಂತಾರ ಕತೆಯಲ್ಲಿ ದಲಿತ ಕುಟುಂಬಗಳು ಭೂಮಾಲಕರ ಗೇಣಿಯಲ್ಲಿ ಇಲ್ಲ ಅಥವಾ ಭೂಮಾಲೀಕರ ಕೃಷಿ ಕಾರ್ಮಿಕರಾಗಿಯೂ ಇಲ್ಲ. ಕಾಡಂಚಿನ ದಲಿತರಾಗಿರುವ ಇವರು ತಮ್ಮದೇ ಕೃಷಿ ಭೂಮಿಯನ್ನು ಹೊಂದಿದ್ದಾರೆ. ಕರಾವಳಿಯ ಕಾಡಂಚಿನ ಅಥವಾ ಕಾಡೊಳಗಿನ ಮಲೆಕುಡಿಯವೂ ಸೇರಿದಂತೆ ಹಲವು ದಲಿತ ಪಂಗಡಗಳು ಮೆಲ್ವರ್ಗಕ್ಕೆ ಸಮನಾಗಿ ಭೂಮಿ ಹೊಂದಿದೆ. ಕಾಂತಾರ ಸಿನೇಮಾದ ದಲಿತರೂ ಇಂತದ್ದೇ ಭೂಮಿ ಹೊಂದಿದ್ದಾರೆ. ಭೂಮಿ ಮಾತ್ರವಲ್ಲ, ಮೇಲ್ವರ್ಗದ ಬಂಟರಂತೆ ಕಂಬಳದ ಕೋಣವನ್ನೂ ಹೊಂದಿದ್ದಾರೆ. ಅಂದರೆ ಈ ಕತೆಯ ದಲಿತರು ಮೇಲ್ವರ್ಗದ ಜೀತಕ್ಕೋ, ಕಾರ್ಮಿಕರಾಗಿಯೊ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ. ಅದರ ಅರ್ಥ ಮೇಲ್ವರ್ಗದ(ಪಾತ್ರ : ಅಚ್ಯತ) ವ್ಯಕ್ತಿ ದಲಿತರ ಧಣಿ ಅಲ್ಲ.
ದಲಿತ ವ್ಯಕ್ತಿ ಮೇಲ್ವರ್ಗದ ವ್ಯಕ್ತಿಯ ಮನೆಯೊಳಗೆ ನುಗ್ಗಿ ಡೈನಿಂಗ್ ಟೇಬಲ್ ನಲ್ಲಿ ಕುಳಿತು ಊಟ ಮಾಡುವ ದೃಶ್ಯವಿದೆ. ಇದು ಬಂಡಾಯದ್ದೋ, ಹೋರಾಟದ ಫಲದ್ದೊ ಬೆಳವಣಿಗೆಯಲ್ಲ. ಶಿವ ಎಂಬ ದಲಿತ ಹೀರೋವನ್ನು ಮೇಲ್ವರ್ಗದ ಇನ್ನೊಬ್ಬ ವ್ಯಕ್ತಿ ಜೈಲಿನಿಂದ ಬಿಡುಗಡೆಗೊಳಿಸುತ್ತಾನೆ. ಇಬ್ಬರು ಮೇಲ್ವರ್ಗದವರ ದ್ವೇಷ ಸಾಧನೆಗೆ ದಲಿತ ಹೀರೋ ಶಿವ ಬಳಸಲ್ಪಡುತ್ತಾನೆ ಅಷ್ಟೆ. ಹೋಗಲಿ, ಕಾಂತಾರ ಸಿನೇಮಾವನ್ನು ತುಳುನಾಡ ಸಂಸ್ಕೃತಿ, ಆಚರಣೆಯ ಪರಿಚಯ ಎಂದು ನೋಡಬಹುದೇ ? ನಟ ನಿರ್ದೇಶಕ ರಿಷಬ್ ಶೆಟ್ಟಿ ತನ್ನ ಎಲ್ಲಾ ಸಂದರ್ಶನದಲ್ಲಿ ಇದು ತುಳುನಾಡ ದೈವಾರಾಧನೆಯ ಸಂಸ್ಕೃತಿ. ಇದರ ಶೂಟಿಂಗ್ ಟೈಮಲ್ಲಿ ನಾನು ಒಂದು ತಿಂಗಳು ಮಾಂಸಾಹಾರ ತ್ಯಜಿಸಿದ್ದೆ ಎಂದಿದ್ದಾರೆ.

ಇನ್ನೂ ಮುಂದುವರೆದ ರಿಷಬ್ ಶೆಟ್ಟಿಯವರು “ಕರಾವಳಿಯೇತರರಿಗೆ ತುಳುನಾಡಿನ ಭೂತಾರಾಧನೆಯ ವಿಷಯ ಗೊತ್ತಿಲ್ಲ. ಹಾಗಾಗಿ ವಿಮರ್ಶೆ ಮಾಡುವಾಗ ನಮ್ಮ ಆರಾಧನಾ ಪರಂಪರೆಗೆ ಅವಹೇಳನ ಆಗಕೂಡದು. ಅದು ನಮ್ಮ ಭಾವನೆಗೆ ಧಕ್ಕೆ ತರುತ್ತದೆ” ಎಂದಿದ್ದಾರೆ. ವಾಸ್ತವವಾಗಿ ಇಡೀ ಸಿನೇಮಾದಲ್ಲಿ ರಿಷಬ್ ಶೆಟ್ಟಿ ದೈವಾರಾಧಕರ ಭಾವನೆಗೆ ಧಕ್ಕೆ ತಂದಿದ್ದಾರೆ. ಕಾಂತಾರ ಸಿನೇಮಾದ ಕೊನೆಯ ಭಾಗದಲ್ಲಿ ಗುಳಿಗ ದೈವದ ಪ್ರವೇಶವಾಗುತ್ತದೆ. ಗುಳಿಗ ದೈವವು ಕೋಲದಲ್ಲಿ ಜೀವಂತ ಕೋಳಿಯ ಕತ್ತು ಸೀಳಿ ರಕ್ತ ಕುಡಿಯುತ್ತದೆ. ಇಂತಹ ಪಾತ್ರವನ್ನು ಮಾಡಲು ನಾನು ಮಾಂಸಾಹಾರ ತ್ಯಜಿಸಿದ್ದೆ ಎಂದು ಹೇಳುವ ಮೂಲಕ ದೈವದ ಆಹಾರ ಕ್ರಮವನ್ನೇ ಅವಹೇಳನ ಮಾಡಿದ್ದಾರೆ.
ದೈವ ಮನುಷ್ಯನ ಮೇಲೆ ಆವಾಹನೆಗೊಳ್ಳಲು ಕ್ರಮವಿದೆ. ದೈವದ ಪಾತ್ರಿಗೆ ಎಣ್ಣೆಬೂಳ್ಯ ನೀಡಿದ ಬಳಿಕ ಮದಿಪುವಿನಲ್ಲಿ ದೈವದ ಇಡೀ ಇತಿಹಾಸವನ್ನು ಹೇಳಿ, ಆ ಗ್ರಾಮದ ದೈವಗಳ ಅನುಮತಿಯನ್ನು ಪಡೆದು, ಎಲ್ಲಾ ಜಾತಿ ಮತ್ತು ಸೇರಿದ ಜನರ ಒಪ್ಪಿಗೆ ಪಡೆದು ದೈವವನ್ನು ಪಾತ್ರಿ ಆವಾಹಿಸಿಕೊಳ್ಳುತ್ತಾನೆ ಅಥವಾ ಮಧ್ಯಸ್ಥನು ಪಾತ್ರಿಯ ಮೇಲೆ ಆಹ್ವಾನಿಸುತ್ತಾನೆ. ಯಾರದ್ದೊ ಮೇಲಿನ ದ್ವೇಷಕ್ಕಾಗಿಯೋ, ಪವಾಡ ತೋರಿಸಲೆಂದೊ ದೈವ ದಿಡೀರಣೆ ಯಾವುದೋ ವ್ಯಕ್ತಿಯ ಮೈಮೇಲೆ ಬರುವುದಿಲ್ಲ. ರಿಷಬ್ ಶೆಟ್ಟಿಯ ಮೈಮೇಲೆ ಗುಳಿಗ ಬರುವುದು ರಿಷಬ್ ಶೆಟ್ಟಿ ಅರೆ ಪ್ರಜ್ಞಾವಸ್ಥೆಯಲ್ಲಿ ಬಿದ್ದಿದ್ದಾಗ. ದೈವ ಆವಾಹನೆಗೊಂಡ ಬಳಿಕ ಸಿಕ್ಕ ಸಿಕ್ಕ ಆಯುಧ, ದೊಣ್ಣೆಗಳಿಂದ ಶತ್ರುಗಳ ಮೇಲೆ ದಾಳಿ ಮಾಡುವ ದೃಶ್ಯವಿದೆ.
ಈ ರೀತಿ ದೈವ ವ್ಯಕ್ತಿಯ ಮೈಮೇಲೆ ಬಂದು ಹುಚ್ಚಾಟ ಮಾಡಲು ದೈವಾರಾಧನೆಯಲ್ಲಿ ಅವಕಾಶ ಇದೆಯೆ ? ಇದು ದೈವಾರಾಧನೆಗೆ ಮಾಡುವ ಅವಮಾನವಲ್ಲವೇ ? ಸಿನೇಮಾವನ್ನು ಮನರಂಜನೆಗಾಗಿ ನೋಡಿ ಎಂದು ಹೇಳುವ “ರಾಜಕೀಯೇತರ ವ್ಯಕ್ತಿಗಳ” ಅಭಿಪ್ರಾಯಕ್ಕೆ ತಲೆಬಾಗೋಣಾ. ಆದರೆ ಸಿನೇಮಾ ಎನ್ನುವುದು ಒಂದು ಸಶಕ್ತ ರಾಜಕೀಯ. ರಿಷಬ್ ಶೆಟ್ಟಿ ಅಂತಹ ರಾಜಕೀಯವನ್ನೇ ಮಾಡಿದ್ದಾರೆ. “ಓಂ, ನಾನು ಮಾಂಸಾಹಾರ ತ್ಯಜಿಸಿದ್ದೆ, ಇದು ತುಳುನಾಡು ಭೂತಾರಾಧನೆ, ಹೋರಾಟ ಬಿಟ್ಟು ಮೊದಲು ಭೂಮಿಯನ್ನು ಸರ್ಕಾರಕ್ಕೆ ನೀಡಿ ನಂತರ ನಿಮ್ಮದಾಗುತ್ತದೆ, ಪ್ರಭುತ್ವದ ವಿರುದ್ದ ಹೋರಾಡಬೇಡಿ” ಎನ್ನುವ ರಾಜಕೀಯಕ್ಕೆ ಸಿನೇಮಾ ಬಳಕೆಯಾಗಿದೆ. ಹಾಗಾಗಿ ಇದನ್ನು ಅದೇ ದೃಷ್ಟಿಯಲ್ಲಿ ವಿಮರ್ಶೆ ಮಾಡಬೇಕಿದೆ. ಸಿನೇಮಾ ಬಗ್ಗೆ ಮಾತ್ರ ಮಾತನಾಡಿ ಎಂದರೆ “ಪಂಜುರ್ಲಿಯ ಪಾತ್ರಿಯಾಗಿ ರಿಷಬ್ ಶೆಟ್ಟಿ ಅದ್ಬುತ ನಟನೆ ಮಾಡಿದ್ದಾರೆ. ಒಬ್ಬ ವೃತ್ತಿಪರ ದೈವ ಪಾತ್ರಿಗಿಂತಲೂ ಚೆನ್ನಾಗಿ ನೃತ್ಯ ಮಾಡಿದ್ದಾರೆ. ಸಿನೇಮಾ ತಂತ್ರಜ್ಞರು, ಕ್ಯಾಮರಾ, ಎಲ್ಲಾ ಕಲಾವಿದರ ನಟನೆ ಎಲ್ಲವೂ ಸೂಪರ್.






0 Comments