ಇದು ಗುಜರಿ ಅಂಗಡಿ ಯಿಂದ..
ಪ್ರೀತಿ, ಸಂಗೀತ ಮತ್ತು ಬದುಕು ಇವುಗಳನ್ನು ವಿಭಿನ್ನವಾಗಿ ಕಟ್ಟಿಕೊಡುವ ಇಮ್ತಿಯಾಝ್ ಅಲಿ ಅವರ ಇನ್ನೊಂದು ಪ್ರಯತ್ನ ‘ರಾಕ್‌ಸ್ಟಾರ್’. ಜಬ್ ವಿ ಮೆಟ್ ಮತ್ತು ಲವ್ ಆಜ್, ಕಲ್‌ನಿಂದ ಇನ್ನೊಂದು ಹಂತ ಬೆಳೆದಿದ್ದಾರೆ ನಿರ್ದೇಶಕರು. ಎಲ್ಲ ಗೋಡೆಗಳನ್ನು ಒಡೆದು ಒಂದಾಗಲು ಹಂಬಲಿಸುವ ಪ್ರೀತಿ ಮತ್ತು ಸಂಗೀತ! ಹಾಗೆಯೇ ಅದರ ಬೆನ್ನು ಹತ್ತಿ ಹರಾಜಕ ಬದುಕನ್ನು ಅಪ್ಪಿಕೊಳ್ಳುವ ರಾಕ್‌ಸ್ಟಾರ್. ಒಂದು ಅರ್ಥದಲ್ಲಿ ಇಲ್ಲಿ ಕತೆಯೇ ಇಲ್ಲ. ಬರೇ ಭಾವನೆಗಳನ್ನೇ ಸಿನಿಮಾವಾಗಿಸಿದ್ದಾರೆ. ರಾಕ್‌ಸ್ಟಾರ್‌ನ ಕೈಬೆರಳ ಸ್ಪರ್ಶದಿಂದ ಆರೋಗ್ಯಪೂರ್ಣವಾಗುವ ನಾಯಕಿ. ನಾಯಕಿಯ ಹಂಬಲಿಕೆಯಿಂದಲೇ ತನ್ನ ಸಂಗೀತದ ತೀವ್ರತೆಯನ್ನು ಮುಟ್ಟುವ ರಾಕ್‌ಸ್ಟಾರ್. ಆಧುನಿಕ ಮನಸ್ಸುಗಳ ತಳಮಳ, ಮಿಡಿತಗಳನ್ನು ಕಟ್ಟಿಕೊಡುವ ಪ್ರಯತ್ನ ಈ ಚಿತ್ರದಲ್ಲಿದೆ. ಒಂದು ರೀತಿಯಲ್ಲಿ ತಂತಿಯ ಮೇಲೆ ನಡೆದಿದ್ದಾರೆ ಇಮ್ತಿಯಾಝ್. ತುಸು ಕಾಲು ಜಾರಿದರೂ ಪ್ರಪಾತಕ್ಕೆ. ಒಬ್ಬ ಖ್ಯಾತ ಸಂಗೀತಗಾರನಾಗಬೇಕಾದರೆ ಆತ ಬದುಕಿನಲ್ಲಿ ನೋವು ತಿನ್ನುವುದು ಅತ್ಯಗತ್ಯವೆ? ಅವನ ಬದುಕು ಅರಾಜಕವಾಗುವುದು ಅನಿವಾರ್ಯವೆ? ಮಧ್ಯಮ ವರ್ಗದಿಂದ ಬಂದ ಜನಾರ್ದನ್ ಜಖರ್ ಗಿಟಾರ್ ಹಿಡಿದು ಅದರಿಂದ ಸಂಗೀತವನ್ನು ಹೊರಡಿಸಲು ಪ್ರಯತ್ನಿಸುವಾಗ ಅವನಿಗೆ ಸಿಗುವ ಸಲಹೆ ಇದು. ಯಾವುದೇ ಸಂಗೀತಗಾರನ ಹಿನ್ನೆಲೆಯನ್ನು ನೋಡು. ಅವನೊಬ್ಬ ಭಗ್ನ ಪ್ರೇಮಿಯಾಗಿರುತ್ತಾನೆ. ಅವನ ಬದುಕು ನೋವಿನ ಕುಲುಮೆಯಿಂದ ಎದ್ದು ಬಂದಿರುತ್ತದೆ. ಆ ಭಗ್ನ ಹೃದಯದಿಂದ ಸಂಗೀತ ಹುಟ್ಟುತ್ತದೆ. ದಿಲ್ಲಿ ಯುನಿವರ್ಸಿಟಿಯ ಕ್ಯಾಂಟೀನ್‌ನಲ್ಲಿ ಸಮೋಸಾ ಜೊತೆಗೆ ಚಟ್ನಿಗಾಗಿ ಗದ್ದಲ ಎಬ್ಬಿಸುವ ಜನಾರ್ದನ್‌ಗೆ ಇದು ದೊಡ್ಡ ಸಮಸ್ಯೆಯಾಗುತ್ತದೆ. ನೋವುಗಳಿಲ್ಲದಿರುವುದೇ ಅವನ ನೋವುಗಳಿಗೆ ಕಾರಣ. ತಾನು ಸಂಗೀತಗಾರನಾಗಬೇಕಾದರೆ ನೋವುಗಳು ಬೇಕು. ಅದರ ಹುಡುಕಾಟದಲ್ಲಿ ಮತ್ತಷ್ಟು ಹಾಸ್ಯಾಸ್ಪದನಾಗುತ್ತಾ ಹೋಗುತ್ತಾನೆ ಜನಾರ್ದನ್.
ಅಲ್ಲಿಂದ ಮರಳಿದ ಜನಾರ್ದನ್ ನಿಧಾನಕ್ಕೆ ಮನೆಯಲ್ಲೂ ತಿರಸ್ಕೃತನಾಗುತ್ತಾ ಹೋಗುತ್ತಾನೆ. ಗಿಟಾರ್ ಅವನ ಜೊತೆಯಾಗುತ್ತಾನೆ. ಕಳ್ಳತನದ ಸುಳ್ಳು ಆರೋಪ ಹೊತ್ತು ಮನೆಯಿಂದ ಹೊರಗಟ್ಟಿದಾಗ ಅವನು ದಿಲ್ಲಿಯ ದರ್ಗಾ ಸೇರುತ್ತಾನೆ. ಅಲ್ಲಿ ಹಾಡುತ್ತಾ ಕಾಲ ಕಳೆಯುತ್ತಾನೆ. ಬದುಕು ಅವನನ್ನು ತಿರಸ್ಕರಿಸಿದಂತೆ, ಸಂಗೀತ ಅವನೊಳಗೆ ತೀವ್ರಗೊಳ್ಳುತ್ತಾ ಹೋಗುತ್ತದೆ. ಮುಂದೆ ವಿದೇಶದಲ್ಲಿ ಹೀರಾಳನ್ನು ಅವನು ಮತ್ತೆ ಭೇಟಿ ಮಾಡುತ್ತಾನೆ. ಕಟ್ಟುಪಾಡಿನ ಜಗತ್ತಿನಲ್ಲಿ ಅವಳು ಬಂಧಿಯಾಗಿರುತ್ತಾಳೆ. ಆರೋಗ್ಯ ಕೆಟ್ಟಿರುತ್ತದೆ. ಮಾನಸಿಕ ವೈದ್ಯರನ್ನು ಬೇಟಿಯಾಗಲೆಂದು ಹೊರಟಾಗ ನಾಯಕ ಎದುರಾಗುತ್ತಾನೆ. ನಾಯಕನ ಭೇಟಿಯಿಂದ ಆಕೆ ಮತ್ತೆ ಅರಳುತ್ತಾಳೆ. ಇನ್ನೊಮ್ಮೆ ಆಕೆಯನ್ನು ಅವಳ ಮನೆಯಲ್ಲಿ ಭೇಟಿ ಮಾಡುವ ಪ್ರಯತ್ನ ಅವನನ್ನು ಅಪರಾಧಿಯನ್ನಾಗಿಸುತ್ತದೆ. ಇದು ಜಾರ್ಡನ್‌ಗೆ ಹೊಸ ಇಮೇಜ್ ನೀಡುತ್ತದೆ. ಆತ ಜೈಲು ಸೇರುತ್ತಾನೆ. ಜೈಲಿನಿಂದ ಬಿಡುಗಡೆಯ ಹಂಬಲ ಅವನ್ನು ಇನ್ನಷ್ಟು ಸಂಗೀತದ ಆಳಕ್ಕೆ ಒಯ್ಯುತ್ತದೆ. ‘‘ಈ ನಗರದಲ್ಲಿ ಒಮ್ಮೆ ದಟ್ಟ ಕಾಡಿತ್ತು. ಇಲ್ಲಿರುವ ಮರಗಳನ್ನು ಕಡಿದು ನಗರ ಮಾಡಲಾಯಿತು. ಮರವನ್ನು ಕಡಿಯುವಾಗ ಎರಡು ಜೋಡಿ ಪಾರಿವಾಳಗಳು ಇಲ್ಲಿಂದ ಹಾರಿ ಹೋದವು. ಅದನ್ನು ಯಾರಾದರೂ ಕಂಡಿರಾ…’’ ಸಂಗೀತಗಾರನ ಬಿಡುಗಡೆಯ ಹಂಬಲ. ಎಲ್ಲ ಗೋಡೆಗಳನ್ನು ಮುರಿದು ಪ್ರೀತಿಯಲ್ಲಿ ಒಂದಾಗುವ ತಹತಹಿಕೆ…ಸದ್ದಾಹಕ್ ಹಾಡು…ನಾಯಕನ ಒಳಗಿನ ಸ್ವಾತಂತ್ರದ ಕನಸುಗಳಿಗೆ ರೆಕ್ಕೆ ಕಟ್ಟುತ್ತದೆ. ನಾಯಕನ ವರ್ಚಸ್ಸಿಗೆ ಕಪ್ಪು ಬಣ್ಣ ಬಳಿದಂತೆ ಆತನ ಅಭಿಮಾನಿಗಳು ಇನ್ನಷ್ಟು ಹೆಚ್ಚಾಗುತ್ತಾ ಹೋಗುತ್ತಾರೆ. ನಾಯಕ ಜರ್ಝರಿತನಾದಷ್ಟು ಆತನ ಸಂಗೀತ ಉತ್ಕಟ ಹಂತವನ್ನು ತಲುಪುತ್ತದೆ.
ಹಾಗೆಂದು ಚಿತ್ರ ಪರಿಪೂರ್ಣವಾಗಿದೆ ಎಂದರ್ಥವಲ್ಲ. ಚಿತ್ರವನ್ನು ಇನ್ನಷ್ಟು ತೀವ್ರವಾಗಿಸುವ ಅವಕಾಶ ನಿರ್ದೇಶಕರಿಗಿತ್ತು. ಗಂಧಿ ಜಗತ್ತಿನ ಪರಿಚಯ ನಿರ್ದೇಶಕರಿಗೆ ತುಸು ಕಡಿಮೆ ಅನ್ನಿಸುತ್ತದೆ. ಸುಂದರ ಕಾಶ್ಮೀರವನ್ನು ಕಟ್ಟಿಕೊಡುವಷ್ಟು ಉತ್ಸಾಹ ಆ ಗಂಧೀ ಜಗತ್ತನ್ನು ಕಟ್ಟಿಕೊಡುವಲ್ಲಿ ಕ್ಯಾಮರಾಗಳಿಗಿದ್ದಂತಿಲ್ಲ. ನಾಯಕಿಯ ಅಭಿನಯ ಇನ್ನಷ್ಟು ಪಕ್ವವಾಗಬೇಕಾಗಿತ್ತು ಅನ್ನಿಸುತ್ತದೆ. ತಣ್ಣಗೆ ಜುಳು ಜುಳು ಹರಿಯುವ ಈ ಚಿತ್ರದಲ್ಲಿ ವಿಶೇಷ ತಿರುವುಗಳಿಲ್ಲ. ಆದರೆ ವಿಭಿನ್ನ ದೃಷ್ಟಿಯಿದೆ. ಅದಕ್ಕಾಗಿ ನಿರ್ದೇಶಕರನ್ನು ಅಭಿನಂದಿಸಬೇಕು.









0 Comments