ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಹಮತ್‌ ತರೀಕೆರೆ ಕಂಡ ಬೀದಿ ಕಲಾವಿದರು…

ರಹಮತ್‌ ತರೀಕೆರೆ

ಮೊದಲ ಸಲ ಯೂರೋಪಿಗೆ ಹೋದಾಗ, ಯಾವುದಾದರೂ ಥಿಯೇಟರಿಗೆ ಹೋಗಿ ಸಂಗೀತ ಕೇಳುವ ಅಥವಾ ನಾಟಕ ನೋಡುವ ಬಯಕೆಯಿತ್ತು. ಸಾಧ್ಯವಾಗಲಿಲ್ಲ. ಆದರೆ ಅಲ್ಲಿನ ಬೀದಿಕಲಾವಿದರು ಪಾಶ್ಚಾತ್ಯ ಸಂಗೀತವನ್ನು ನಮಗೆ ಬೇಕಾದಷ್ಟು ಉಣಬಡಿಸಿದರು. ಈ ಕಲಾವಿದರ ಮೊದಲ ಭೇಟಿ ಮ್ಯೂನಿಕ್ ನಗರದ ಟೌನ್‌ಹಾಲಿನಲ್ಲಾಯಿತು. ಅದೊಂದು ಪ್ರಾಚೀನವಾದ ಭವ್ಯಕಟ್ಟಡ. ವಿಶಾಲ ಅಂಗಳ. ಸುತ್ತಲೂ ತಿನಿಸು ವೈನ್ ಹೂಗುಚ್ಚ ಮಾರುವ ದುಕಾನು. ಪ್ರವಾಸಿಗರೂ ಪ್ರೇಮಿಗಳೂ ಜೇನ್ನೊಣಗಳಂತೆ ಮುಕುರಿಕೊಳ್ಳುವ ತಾಣವದು.

ತಿನ್ನುತ್ತ ಕುಡಿಯುತ್ತ ಫೋಟೊ ತೆಗೆಯುತ್ತ ಮೋಜಿನಲ್ಲಿ ಮುಳುಗಿರುವ ಜನ ಬೀದಿಗಾಯನವನ್ನೂ ಸವಿಯುತ್ತಿದ್ದರು. ಅಲ್ಲಿ ಹಲವಾರು ತಂಡಗಳಿದ್ದವು. ಅವುಗಳಲ್ಲಿ ಉಚ್ಚಸ್ವರದಲ್ಲಿ ಹಾಡುತ್ತಿದ್ದ ಒಬ್ಬ ಗಾಯಕಿಯ ತಂಡ ಬಹಳ ಜನರನ್ನು ಸೆಳೆದಿತ್ತು. ಆ ಗಾಯಕಿ ತನ್ನ ಏರುಸ್ವರದಲ್ಲೂ ಲಯಗೆಡದೆ ಮಾದಕವಾಗಿ ಹಾಡುತ್ತಿದ್ದಳು. ಗದ್ದಲದೊಳಗೂ ಶ್ರೋತೃಗಳನ್ನು ತಲುಪಲೆಂದು ಆಕೆ ಕಂಠತೀಕ್ಷ್ಣತೆ ರೂಢಿಸಿಕೊಂಡಂತಿತ್ತು. ನಮ್ಮಲ್ಲೂ, ಮೈಕಿರದ ಕಾಲದಲ್ಲಿ ನಾಟಕ ಯಕ್ಷಗಾನ ಬಯಲಾಟದ ಕಲಾವಿದರು ಏರುದನಿ ರೂಢಿಸಿಕೊಂಡಿದ್ದರು.

ಪಾರಿಜಾತ ಕಲಾವಿದ ಅಪ್ಪಾಲಾಲರು, ತಂಪುಹೊತ್ತಲ್ಲಿ ಎರಡು ಮೈಲಿ ಕೇಳಿಸುವಂತೆ ಹಾಡುತ್ತಿದ್ದರಂತೆ. ಕೆಲವು ಯಕ್ಷಗಾನ ಭಾಗವತರ ಕಂಠವೂ ಕಂಚಿನ ಗಂಟೆಯಾಗಿತ್ತು. ಸಿನಿಮೋದ್ಯಮದ ಮೊದಲ ದಿನಗಳಲ್ಲಿ ರಂಗಭೂಮಿಯಿಂದ ಹೋದ ಈ ಕಲಾವಿದರು, ಪಿಸುಗುಟ್ಟನ್ನೂ ದಾಖಲಿಸುವ ಮೈಕಿಗೆ ಹೊಂದಿಕೊಳ್ಳಲು ಬಹಳ ಬವಣೆಪಟ್ಟರು.

ಬೀದಿಗಾಯಕರು ಜನರನ್ನು ರಂಜಿಸುವ ಕಾರಣ, ಯೂರೋಪಿನ ನಗರಾಡಳಿತಗಳು ‘ಜನರಿಗೆ ಕಾಡಬಾರದು. ಟ್ರಾಫಿಕ್ಕಿಗೆ ಅಡಚಣೆ ತರಬಾರದು’ ಎಂಬ ಕರಾರು ವಿಧಿಸಿ ಅನುಮತಿ ನೀಡಿವೆ. ವಾಹನ ಹಾಯದ ಹರಹುಳ್ಳ ಕಾಲುಹಾದಿಗಳೇ ಇವರ ವೇದಿಕೆಗಳು. ವಿಶೇಷವೆನಿಸಿದ್ದು, ಮ್ಯೂನಿಕ್ಕಿನಲ್ಲಿ ಒಬ್ಬ ಎಳೆಪ್ರಾಯದ ಚೆಲುವೆ, ಜನರು ಓಡಾಡುವ ಓಣಿಯಲ್ಲಿ ನಿಂತು ವೈಲಿನ್ ನುಡಿಸುತ್ತಿದ್ದುದು.

ವೇಷಭೂಷಣ ಕಂಡರೆ ಆಕೆ ವಿದ್ಯಾರ್ಥಿನಿಯಾಗಿದ್ದು, ಕೈಖರ್ಚಿಗೆ ಬೇಕಾದ್ದನ್ನು ಘನತೆಯಿಂದ ಸಂಪಾದಿಸುತ್ತಿದ್ದಳು. ಇಲ್ಲಿನ ಬೀದಿಗಳಲ್ಲಿ ಚಿತ್ರರಚನೆಯ, ಕುಣಿತದ, ಕಣ್ಕಟ್ಟುಗಳ ಪ್ರದರ್ಶನಗಳುಂಟು. ಆದರೂ ಹಾಡಿಕೆಯೇ ಜನಪ್ರಿಯ. ಜರ್ಮನಿಗಿಂತ ಹೆಚ್ಚಾಗಿ ಇಟಲಿ ನೆದರಲ್ಯಾಂಡ್ಸ್ ಕ್ರೋಶಿಯಾ ಸ್ಲೊವೆನಿಯಾಗಳಲ್ಲಿ ಹೆಚ್ಚು ಬೀದಿ ಕಲಾವಿದರು ಕಂಡರು. ಇಟಲಿಯಲ್ಲಿ ವಿವಿಧ ವಾದ್ಯಗಳನ್ನು ಜೋಡಿಸಿಕೊಂಡು ನುಡಿಸುವ ಹಾಡುವ ತಂಡಗಳಿವೆ. ಹೆಚ್ಚಿನ ಕಲಾವಿದರು ಗಿಟಾರ್, ಕೊಳಲು, ಅಕಾರ್ಡಿನ್, ಸ್ಯಾಕ್ಸೊಫೋನ್, ವೈಲಿನ್, ಪಿಯಾನೊ ನುಡಿಸುವವರು.

ಥಿಯೇಟರಿನಲ್ಲಿ ಪ್ರದರ್ಶನಗೊಳ್ಳುವ ಕಲೆ, ಬೀದಿಗೆ ಬಂದೊಡನೆ ಅದರ ಮರ್ಯಾದೆ ತುಸು ಮುಕ್ಕಾಗುತ್ತದೆಯೇನು? ದಿಟ, ಬೇಡುವ ಪರೋಕ್ಷಮುದ್ರೆ ಅದಕ್ಕೆ ಬಿದ್ದುಬಿಡುತ್ತದೆ. ಇದಕ್ಕೆ ಬೇಕಾಗಿ ಹೆಚ್ಚಿನ ಕಲಾವಿದರು ಸಂಗೀತವನ್ನೇ ವೃತ್ತಿಯಾಗಿಸಿಕೊಂಡ ಅಲೆಮಾರಿಗಳು ಇಲ್ಲವೇ ಬಡವರು. ಅಮೆರಿಕದಲ್ಲಿ ಬಹುತೇಕ ಬೀದಿ ಕಲಾವಿದರು ಕಪ್ಪು ಜನರಂತೆ. ಆದರೆ ಅವರ ಗಾಯನ ಕುಣಿತಗಳಿಗೆ ಆಫ್ರಿಕಾದ ನೆನಪುಗಳೂ ಇವೆ. ಹೀಗಾಗಿ ಅವರ ಕಲೆಗೆ ಕಡಿದುಹೋಗಿರುವ ಪರಂಪರೆಯ ಜತೆಗೆ ಸಂಬಂಧ ಏರ್ಪಡಿಸಿಕೊಳ್ಳುವ ಆಯಾಮವೂ ಇದೆ.

ಯೂರೋಪಿನ ಕೆಲವೆಡೆ ಬೀದಿಕಲಾವಿದರಲ್ಲಿ ಜಾಗಕ್ಕಾಗಿ ನಡೆವ ಜಗಳಕ್ಕೂ ಸಾಕ್ಷಿಯಾದೆವು. ವ್ಯಾಟಿಕನ್ ಶಹರದಲ್ಲಿ ಕಾರ್ಯಕ್ರಮ ಕೊಡುವ ಆಯಕಟ್ಟಿನ ಜಾಗವನ್ನು ಕುರಿತು ಎರಡು ತಂಡಗಳಲ್ಲಿ ಸಂಘರ್ಷ ನಡೆಯಿತು. ಮಾತು ವಿಪರೀತಕ್ಕೆ ಹೋದಾಗ, ಒಂದು ಗುಂಪಿನ ಗಾಯಕನು ಎದುರಾಳಿ ಗುಂಪಿನ ಗಾಯಕನಿಗೆ ಕೈಯಿಂದ ಅಶ್ಲೀಲ ಸನ್ನೆ ಮಾಡುತ್ತ ಬೈದನು. ಪೋಪರು ವಾಸಿಸುವ ಅರಮನೆಯ ಸಮೀಪ, ಬಡ ಕಲಾವಿದರು ಬದುಕಿಗಾಗಿ ಧರ್ಮಯುದ್ಧವನ್ನೂ ಮಾಡುತ್ತಿದ್ದರು.

ಕೆಲವು ಕಲಾವಿದರು ತಮ್ಮ ಜತೆ ನಾಯಿಯನ್ನು ಇರಿಸಿಕೊಂಡಿದ್ದರು. ಸ್ಲೊವೇನಿಯಾದಲ್ಲಿ ಸಾಂಪ್ರದಾಯಿಕ ವೇಷಧರಿಸಿದ ಒಬ್ಬ ಹಿರಿಯ ಗಾಯಕ ಅಕಾರ್ಡಿನ್ ನುಡಿಸುತ್ತಿದ್ದ. ಅವನಿಗಿಂತ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುತ್ತಿದ್ದವನು ಮತ್ತೊಂದು ಮೂಲೆಯಲ್ಲಿದ್ದ ಯುವ ಗಾಯಕ. ಆತ ನಾಯಿಗೊಂದು ಹ್ಯಾಟು ಹಾಕಿ ಕೂರಿಸಿಕೊಂಡು ಅಕಾರ್ಡಿನ್ ನುಡಿಸುತ್ತಿದ್ದ. ಕಲೆ, ಮುಗ್ಧ ಪ್ರಾಣಿಯ ಕೆಲವೊಮ್ಮೆ ಚಿಕ್ಕಮಕ್ಕಳ ನೆರವನ್ನು ಪಡೆದು ಹಾದಿಹೋಕರ ಅನುಭೂತಿಯನ್ನು ಪಡೆಯುತ್ತಿತ್ತು.

ಪ್ರವಾಸಿಗರು ನಾಯಿಯ ತಲೆಸವರಿ ಕಕ್ಕುಲಾತಿ ವ್ಯಕ್ತಪಡಿಸುತ್ತಿದ್ದರು. ನಮ್ಮಲ್ಲಿ ಕರಡಿ ಕೋತಿ ಹಾವು ಇರಿಸಿಕೊಂಡು ಪ್ರದರ್ಶನ ಕೊಡುವವರು ಸಾಮಾನ್ಯವಾಗಿ ಪ್ರಾಣಿಹಿಂಸಕರು. ಆದರೆ ಇಲ್ಲಿ ನಾಯಿಗಳು ಬೆಚ್ಚಗಿನ ಹಾಸಿಗೆಯ ಮೇಲೆ ನಿರಾಳ ಕೂತು ಸಂಗೀತ ಆಲಿಸುತ್ತವೆ ಅಥವಾ ಸಂಗೀತ ಸಾಕಾಗಿ ಜೂಗರಿಸುತ್ತವೆ. ಗಮನಾರ್ಹವೆಂದರೆ, ಯೂರೋಪಿನ ಚಿತ್ರಕಲೆ ಮತ್ತು ಶಿಲ್ಪಗಳಲ್ಲಿ ನಾಯಿ, ಕುಟುಂಬದ ಸದಸ್ಯರಂತೆಯೇ ಚಿತ್ರಿತವಾಗಿದೆ.

ಮನುಷ್ಯರ ವಿವಿಧ ಭಾವಗಳನ್ನು ತೋರಿಸುವ ಕಲಾವಿದರು, ನಾಯಿಯ ಭಾವನೆಯನ್ನೂ ಮುತುವರ್ಜಿಯಿಂದ ಕಾಣಿಸುವರು. ಅವನ್ನು ನೋಡುವಾಗ, ಕೊಳಲು ಬಾರಿಸುವ ಕೃಷ್ಣನ ನಾದಲೀಲೆಗೆ ಗೋಪಿಕೆಯರು ಮತ್ತು ನಿಸರ್ಗದ ಚರಾಚರವು ಪರವಶವಾಗಿದ್ದರೂ, ಆಕಳು ಮಾತ್ರ ತನ್ನ ಕರುವಿನೊಂದಿಗೆ ವಾತ್ಸಲ್ಯದಲ್ಲಿ ತೊಡಗಿರುವ ಹಳೇಬೀಡಿನ ಶಿಲ್ಪವೊಂದು ನೆನಪಾಯಿತು. ದಿಟ, ಕೂಸು ಕುರಿತ ಮಾತೃವಾತ್ಸಲ್ಯ, ದೈವಿಕ ನಾದಕ್ಕಿಂತಲೂ ಕಿಂಚಿದೆತ್ತರವೇ.

ಮಗು ದ್ರಾಕ್ಷಾರಸ ಕುಡಿವುದನ್ನು ಕುತೂಹಲದಿಂದ ನೋಡುತ್ತಿರುವ, ಒಡೆಯನ ಮುಂದೆ ವಿಶ್ರಾಂತ ಭಂಗಿಯಲ್ಲಿರುವ, ಬೇಟೆಯಲ್ಲಿ ಪಾಲ್ಗೊಂಡಿರುವ, ಕುರಿಗಾಹಿಯ ಸಂಗಾತಿಯಾಗಿರುವ ನಾಯಿಯುಳ್ಳ ಚಿತ್ರಪಟಗಳನ್ನು ನಾವು ಕಲಾಶಾಲೆಗಳಲ್ಲಿ ಕಂಡೆವು. ಎಷ್ಟೊ ಹೋಟೆಲುಗಳಲ್ಲಿ ನಾಯಿಯ ಜತೆ ಉಪಹಾರಕ್ಕೆ ಆಸ್ಪದವಿರುವ ಬೋರ್ಡುಗಳಿವೆ. ನಾಯಿಸಮೇತ ಪ್ರಾರ್ಥನೆಗೆ ಆಸ್ಪದವಿರುವ ಚರ್ಚುಗಳೂ ಇವೆ.

ಕೆಲವು ಕಡೆ ಬೀದಿ ಕಲಾವಿದರನ್ನು ಕೇಳುವವರೇ ಇರಲಿಲ್ಲ. ಆಮ್ಸ್ಟರ್‌ಡ್ಯಾಂ ಮ್ಯೂಸಿಯಂ ಹೊರಗೆ ಒಬ್ಬ ಗಾಯಕ ಅದೆಷ್ಟೊ ಹೊತ್ತಿನಿಂದ ಕ್ಲಾರಿಯೊನೆಟ್ ನುಡಿಸುತ್ತಿದ್ದನು. ಆತನಿಗೆ ಯಾರೂ ಸಂಭಾವನೆ ಕೊಟ್ಟದ್ದು ಕಾಣಲಿಲ್ಲ. ಆದರೆ ವ್ಯಾಟಿಕನಿನಲ್ಲಿ ಒಬ್ಬ ಕೊಳಲು ವಾದಕ, ತನಗೇ ಹಾಡಿಕೊಳ್ಳುವಂತೆ ತನ್ಮಯವಾಗಿ, ಅದ್ಭುತವಾಗಿ ನಾದದಲೆ ಎಬ್ಬಿಸುತ್ತಿದ್ದನು. ಜನ ಮರುಳಾದವರಂತೆ ಅವನಿಗೆ ಸಂಭಾವನೆ ನೀಡುತ್ತಿದ್ದರು.

ಬೀದಿಕಲಾವಿದರು ತಮಗಾಗೇ ತಾವೇ ಹಾಡಿಕೊಳ್ಳುವುದುಂಟೇ? ಹಾಡಿದರೂ ಎಷ್ಟುಹೊತ್ತು ಹಾಡಿಕೊಳ್ಳಬಹುದು? ಚಿತ್ತ ಜನರತ್ತ ಹ್ಯಾಟಿನತ್ತ ಹೋಗಿಯೇ ಹೋಗುತ್ತದೆ. ಕ್ರೊವೇಶಿಯಾದ ಡೊಬ್ರೊವ್ನಿಕ್ ನಗರದಲ್ಲಿ ಸಾಂಪ್ರದಾಯಿಕ ವೇಷ ಹಾಕಿಕೊಂಡು ತಂತಿವಾದ್ಯ ನುಡಿಸುತ್ತಿದ್ದ ಕಲಾವಿದನು, ಕೇಳುವ ರಸಿಕರಿಲ್ಲದೆ ತನ್ನ ಜತೆನಿಂತು ಫೊಟೊ ತೆಗೆಸಿಕೊಳ್ಳಿ ಎಂದು ಗೋಗರೆಯುತ್ತಿದ್ದನು. ಬಹುಶಃ ಅವನಿಗೆ ಫೋಟೊದಲ್ಲೇ ಹೆಚ್ಚು ಫಾಯದೆ ಇದ್ದಂತಿತ್ತು.

ವ್ಯಾಟಿಕನ್‌ನಲ್ಲಿ ರೋಮನ್ ಯೋಧರ ವೇಷಧರಿಸಿ ಢಾಲು ಈಟಿ ಹಿಡಿದು ಕದನ ಪ್ರದರ್ಶನ ಮಾಡುತ್ತಿದ್ದ ಕಲಾವಿದರಿದ್ದರು. ಅವರು ಡೆನೂಬ್ ನದಿಯ ವಿಶಾಲ ಸೇತುವೆಯ ಹಾದಿಯನ್ನೇ ರಂಗಸಜ್ಜಿಕೆ ಮಾಡಿಕೊಂಡಿದ್ದರು. ಪ್ರಾಚೀನ ಪುರಾಣ-ಚರಿತ್ರೆಗಳು ಕಲೆಯ ಮಾಧ್ಯಮದಲ್ಲಿ ವರ್ತಮಾನದಲ್ಲಿ ಕಲಾವಿದರ ಹೊಟ್ಟೆಪಾಡಿನ ಸಾಧನಗಳಾಗಿ ರೂಪಾಂತರಗೊಂಡಿದ್ದವು.

ಭಾರತದಲ್ಲಿ ಚರಿತ್ರೆಗಿಂತ ಹೆಚ್ಚಾಗಿ ಪುರಾಣವು ಬೀದಿ ರಂಗಭೂಮಿಗೆ ಅವತರಿಸುತ್ತದೆ. ಅಪ್ಪಟ ಲೌಕಿಕ ಬದುಕಿನ ಸನ್ನಿವೇಶಗಳನ್ನೇ ವೇಷಗಾರಿಕೆಯ ಮೂಲಕ ಪ್ರದರ್ಶಿಸುತ್ತಿದ್ದ ಜಾತಗಾರ ಕಲೆ ಕಣ್ಮರೆಯಾಗಿದೆ. ಆದರೆ ಹಗಲು ವೇಷಗಾರರು ಮಾತ್ರ, ರಾಮಾಯಣ ಮಹಾಭಾರತವನ್ನು ಬೀದಿಯಲ್ಲಿ ಜಾತ್ರೆ ಹಬ್ಬಗಳಲ್ಲಿ ಮರುಸೃಷ್ಟಿ ಮಾಡುತ್ತಲಿದ್ದಾರೆ. ನಾಗರಿಕ ಸಮಾಜವು, ಆಧುನಿಕತೆಯ ಬದುಕಿನಲ್ಲಿ ಕಳೆದುಕೊಂಡ ಪರಂಪರೆಯನ್ನು, ಭಾವುಕವಾಗಿ ಮತ್ತು ಸಾಂಕೇತಿಕವಾಗಿ ಪಡೆದುಕೊಂಡು, ನಚ್ಚಗಿನ ಭಾವ ಅನುಭವಿಸುತ್ತದೆ. ಎಂತಲೇ ಪಾರಂಪರಿಕ ಕಲೆಗಳು ನಗರ ಬದುಕಿನಲ್ಲೇ ಮರುಹುಟ್ಟು ಪಡೆಯುತ್ತಿವೆ.

ಈ ಹಿನ್ನೆಲೆಯಲ್ಲಿ ರಾಜಸ್ತಾನದ ಪ್ರವಾಸೋದ್ಯಮ ಗಮನಿಸಬೇಕು. ಅದರುಸಿರು ನಿಂತಿರುವುದು ರಾಜಪ್ರಭುತ್ವದ ಸಂಕೇತಗಳಾಗಿರುವ ಅರಮನೆ ಕೋಟೆ ಕೊತ್ತಳಗಳಿಂದ ಮಾತ್ರವಲ್ಲ; ಅವುಗಳ ಮಧ್ಯೆ ಕೂತು ಹಾಡುವ ಜನಪದ ಗಾಯಕರಿಂದ ಕೂಡ. ಮಿರಾಶಿ ಸಮುದಾಯಕ್ಕೆ ಸೇರಿದ ರಾಜಸ್ತಾನಿ ಗಾಯಕರು ಪ್ರವಾಸಿಗರ ಪ್ರಧಾನ ಆಕರ್ಷಣೆ. ಅತಿಥಿಗಳನ್ನು ರಂಜಿಸಲು ಸ್ಟಾರ್ ಹೋಟೆಲುಗಳು ಅತ್ಯುತ್ತಮ ಗಾಯಕರನ್ನು ನೇಮಿಸಿಕೊಂಡಿವೆ. ಇದೊಂದು ಬಗೆಯಲ್ಲಿ ಸ್ಥಳೀಯ ಸಂಸ್ಕೃತಿಯನ್ನು ಜಾಗತಿಕ ಮಾರುಕಟ್ಟೆಯಲ್ಲಿಟ್ಟು ಮಾರುವಿಕೆ ಹೌದು. ಆದರೆ ಗಾಯಕರು ತಮ್ಮೂರ ಬೀದಿಗಳಲ್ಲಿ ಪಡೆಯುವುದಕ್ಕಿಂತ ಹೆಚ್ಚಿನ ಗೌರವ-ವರಮಾನ ಗಳಿಸಿ ನೆಮ್ಮದಿಯ ಬದುಕು ನಡೆಸುತ್ತಿದ್ದಾರೆ.

ಇಲ್ಲಿ ರಾವಣಹತ್ತ ಸುರಬಹಾರ್ ಸಾರಂಗಿ ಏಕತಾರಿ ನುಡಿಸುತ್ತ ಹಾಡುವ ಸಾವಿರಾರು ಕುಟುಂಬಗಳಿವೆ. ಮರುಭೂಮಿಯ ಕಠೋರತೆಯನ್ನು ಎದುರಿಸಲೆಂದೇ ಇವರ ವಾದ್ಯ ಮತ್ತು ಕಂಠಗಳು ರೂಪುಗೊಂಡವೋ ಏನೊ? ಕೆಲವು ಪ್ರತಿಭಾವಂತರು ವೃತ್ತಿಗಾಯಕರಾಗಿ ಸಿನಿಮಾರಂಗಕ್ಕೂ ದಾಟಿದ್ದಾರೆ. ದೊಡ್ಡ ಪ್ರಶಸ್ತಿಗಳನ್ನು ಪಡೆದಿದ್ದಾರೆ. ರೇಶ್ಮಾ, ಪಾರ್ವತಿಬಾವುಲ್, ಟಿಪಾನಿಯಾ, ಮುಖ್ತಿಯಾರಲಿ ಮುಂತಾದವರು ಬೀದಿಯಿಂದ ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆದವರು; ಮೈಕೇಲ್ ಜಾಕ್ಸನ್ ಕೂಡ ಬೀದಿಗಾಯಕನಾಗಿದ್ದ ತಾನೇ? ಪಾಶ್ಚಿಮಾತ್ಯ ಪಾಪ್ ಸಂಗೀತವೇ ಕುಲೀನರು ಗಣ್ಯರು ಥಿಯೇಟರಿನಲ್ಲಿ ಆಸ್ವಾದಿಸುವ ಅಭಿಜಾತ ಸಂಗೀತಕ್ಕೆ ಪರ್ಯಾಯವಾಗಿ ಹುಟ್ಟಿದ್ದು.

ಯೂರೋಪಿನ ಬೀದಿಕಲಾವಿದರು ನುಡಿಸುವ ವಾದ್ಯಗಳನ್ನು ಗಮನಿಸಿದೆ. ಅವುಗಳಲ್ಲಿ ಅರ್ಧಕ್ಕಿಂತ ಹೆಚ್ಚು ನಮ್ಮಲ್ಲಿ ಬಂದಿವೆ. ಯೂರೋಪಿನ ದೇಶವೊಂದು ಎರಡು ಶತಮಾನ ಆಳಿದ ದೇಶದಲ್ಲಿ ಇದೇನೂ ವಿಶೇಷ ಸಂಗತಿಯಲ್ಲ. ಆದರೆ ಇವು ನಮ್ಮ ರಂಗಭೂಮಿ, ಶಾಸ್ತ್ರೀಯ ಸಂಗೀತ, ಧಾರ್ಮಿಕ ಕಾರ್ಯಕ್ರಮಗಳಲೆಲ್ಲ ನುಸುಳಿ ನೆಲೆಸಿರುವುದು ವಿಶೇಷ. ವೈಲಿನ್ ಹಿಡಿದು ತತ್ವಪದ ಹಾಡುತ್ತಿದ್ದ ಮಾರೆಪ್ಪದಾಸರು, ಹಾರ್ಮೊನಿಯಂ ನುಡಿಸುತ್ತಿದ್ದ ಪುಟ್ಟರಾಜ ಗವಾಯಿಗಳು, ಸ್ಯಾಕ್ಸೊಫೋನ್ ನುಡಿಸುತ್ತಿದ್ದ ಕದ್ರಿ ಗೋಪಾಲನಾಥ ನೆನಪಾಗುತ್ತಾರೆ.

ಇಟಲಿಯ ಕಲಾಶಾಲೆಯಲ್ಲಿ ಬೀದಿ ಕಲಾವಿದರನ್ನು ಕುರಿತ ಒಂದು ವರ್ಣಚಿತ್ರ ನೋಡಿದೆ. ಹಿರಿಯ ಕಲಾವಿದರು ಬೇರೆಬೇರೆ ವಾದ್ಯ ನುಡಿಸುತ್ತಿರುವಾಗ, ಹುಡುಗನೊಬ್ಬ ತ್ರಿಕೋನಾಕಾರ ಕಬ್ಬಿಣದ ಸಲಾಕಿಯನ್ನು ರಾಡಿನಿಂದ ಬಾರಿಸುತ್ತಿರುವ ದೃಶ್ಯವಿತ್ತು. ಡಂಕವೆಂದು ಕರೆಯಲಾಗುವ ಈ ವಾದ್ಯ ನಮ್ಮ ಹೈದರಾಬಾದ್ ಕರ್ನಾಟಕದ ಭಜನಾ ತಂಡಗಳಲ್ಲಿದೆ.

ಯೂರೋಪಿಗೆ ಇದು ಈಜಿಪ್ತಿನಿಂದ ಬಂತಂತೆ. ಈಜಿಪ್ತಿಗೆ ಎಲ್ಲಿಂದ ಹೋಯಿತೊ? ವಾದ್ಯಗಳ ಪಯಣ ಊಹಾತೀತ. ಬೀದಿಕಲಾವಿದರು ಅಲೆಮಾರಿಗಳಾದ ಕಾರಣ, ವಾದ್ಯಗಳು ಮಾತ್ರವಲ್ಲ, ರಾಗ ಲಯಗಳೂ ಅಲೆದಾಡುತ್ತವೆ. ಇಷ್ಟಕ್ಕೂ ನಾದ ಹೊಮ್ಮುವಾಗ ಖಂಡ, ದೇಶ, ಸಮಾಜದ ಗಡಿಗಳು, ಶಿಷ್ಟ-ಜನಪದದ ಭೇದಗಳು ಅಳಿಯುತ್ತವೆ. ಕಲೆಯ ಆತ್ಯಂತಿಕ ಸೃಜನಶೀಲತೆ ಇರುವುದೇ ಸಮಾನ ಮನಸ್ಕತೆಯಿದ್ದಾಗ ಸಹಜ ಬೆರೆಯುವಿಕೆಯಲ್ಲಿ.

ಬೀದಿಕಲೆಯ ವಿಷಯದಲ್ಲಿ, ಯೂರೋಪಿನ ಕಲಾವಿದರಿಗೂ, ನಮ್ಮ ವೇಷಗಾರರು ಚೌಡಿಕೆಯವರು ಜಾತಿಗಾರರು ಫಕೀರರು ಕೋಲೆತ್ತಿನವರು ಗಣೆಯವರು ಜೋಗಿತಿಯರು ನೀಲಗಾರರು ಹಗಲುವೇಷದವರು ಜೋಗಿಗಳಿಗೂ ಎರಡು ವ್ಯತ್ಯಾಸಗಳಿವೆ. ಮೊದಲನೆಯದಾಗಿ-ನಮ್ಮಲ್ಲಿ ಬೀದಿಕಲೆಗೆ ಭಕ್ತಿ ಅನುಭಾವ ಪಂಥಗಳು ಲಗತ್ತಾಗಿವೆ. ಬೀದಿಗಾಯನಗಳಲ್ಲಿ ಸೂಫಿ, ಕಬೀರ, ಬಾವುಲರ ದರ್ಶನ ಮತ್ತು ಆನುಭಾವಿಕತೆಯು ಹೊಳೆಯಾಗಿ ಪ್ರವಹಿಸುತ್ತದೆ. ಧರ್ಮ, ಪಂಥ ಮತ್ತು ಸಂತ ಪರಂಪರೆಗಳು, ತಮ್ಮ ತತ್ವ ದರ್ಶನ ಮಹಿಮೆಗಳನ್ನು ಹರಡಲು ಚಾರಣ ಕಲಾವಿದರನ್ನು ಸೃಷ್ಟಿಸಿಕೊಂಡವು. ಆದರೆ ಪಾಶ್ಚಾತ್ಯರಲ್ಲಿ ಕಲೆಗೆ ಈ ಪರಿಯ ಧಾರ್ಮಿಕ ಲೇಪ ಕಡಿಮೆ.

ಎರಡನೆಯದಾಗಿ-ನಮ್ಮ ಕಲಾವಿದರ ದೇಹ ಬಿಸಿಲಲ್ಲಿ ಸುಟ್ಟು ಕಪ್ಪಾಗಿರುತ್ತದೆ. ಬಟ್ಟೆ ಮಲಿನವಾಗಿರುತ್ತದೆ. ಅವರು ಕಲೆಯ ಮೂಲಕ ಸೆಳೆಯುವುಕ್ಕಿಂತ ಮಿಗಿಲಾಗಿ ದೈನ್ಯದಿಂದ ಮರುಕವನ್ನು ಉದ್ದೀಪಿಸಿ, ದಾನವನ್ನು ಪಡೆಯುವರು. ಧಾರ್ಮಿಕ ಸ್ಪರ್ಶವಿರುವ ಬೀದಿಕಲೆಗಳು ಜನತಾ ಪೋಷಣೆಯಿದ್ದ ಕಾಲದಲ್ಲಿ ದೈನೇಸಿಯಾಗಿರಲಿಲ್ಲ.

ಆಧುನಿಕ ಮನರಂಜನಾ ಮಾಧ್ಯಮಗಳು ಬಂದ ಬಳಿಕ ಪಾರಂಪರಿಕ ಗೌರವ ಕಳೆದುಕೊಂಡು ಬೇಡುವ ಸಾಧನವಾದವು. ಆದರೆ ಯೂರೋಪಿನಲ್ಲಿ ಕಲಾವಿದರು ತಮ್ಮ ಸೃಜನಶೀಲತೆಯಿಂದ ರಸಿಕರನ್ನು ಬೆರಗುಗೊಳಿಸಿ ಘನತೆಯಿಂದ ಸಂಭಾವನೆ ಗಳಿಸುವರು. ಪಾರಂಪರಿಕ ಕಲೆಗಳನ್ನು ಪ್ರವಾಸೋದ್ಯಮದ ಭಾಗವಾಗಿ ಬೆಳೆಸುವ ಕಲೆಯೂ ಅಲ್ಲಿ ಚೆನ್ನಾಗಿ ಸಿದ್ಧಿಸಿದೆ.

ಅಪವಾದವೆಂಬಂತೆ ಕ್ರೋಶಿಯಾದಲ್ಲಿ ಧಾರ್ಮಿಕ ಬೀದಿಕಲಾವಿದರ ತಂಡ ಭೇಟಿಯಾಯಿತು. ಅಲ್ಲಿನ ಸ್ಪ್ಲಿಟ್ ಶಹರದಲ್ಲಿ ಒಂದು ಪ್ರಾಚೀನ ಅರಮನೆಯಿದೆ. ಅದರೊಳಗೆ ಛಾವಣಿಯಿಲ್ಲದೆ ಆಗಸ ಕಾಣುವ ಅದ್ಭುತವಾದ ಶಿಲಾಕೆತ್ತನೆಯಿರುವ ಅಂತಃಪುರವಿದೆ. ಪ್ರವಾಸಿಗರು ಈ ಖೋಲಿಯನ್ನು ಹೊಕ್ಕೊಡನೆ ಕಪ್ಪುಸೂಟು ಧರಿಸಿದ ಒಂದು ತಂಡ ಹಾಡತೊಡಗುವುದು. ಕ್ರಿಸ್ತನ ಮಹಿಮೆಯ ಗೀತೆಗಳ ಇಂಪಾದ ಹಾಡಿಕೆ. ಅವರು ಪ್ರವಾಸಿಗರಿಂದ ಸಂಭಾವನೆ ಸ್ವೀಕರಿಸಲಿಲ್ಲ. ತಮ್ಮ ಹಾಡಿಕೆಯ ಆಲ್ಬಮ್ ಖರೀದಿಸಲು ವಿನಂತಿಸಿದರು. ಧರ್ಮಪ್ರಸಾರ, ಮನರಂಜನೆ, ಸಂಸ್ಕೃತಿವಿಶಿಷ್ಟ ಕಲೆಯ ಪರಿಚಯ, ವ್ಯಾಪಾರ ಎಲ್ಲವೂ ಮರ್ಯಾದೆಯಲ್ಲಿ ಮಿಳಿತವಾಗಿತ್ತು ಅಲ್ಲಿ.

ನಮ್ಮ ದರ್ಗಾ-ಮಸೀದಿ ಗುಡಿ-ಚರ್ಚುಗಳ ಬಳಿ ಇರುವಂತೆ ಯೂರೋಪಿನ ಚರ್ಚುಗಳ ಮುಂದೆ ಭಿಕ್ಷುಕರು ಹೆಚ್ಚು ಕಾಣಲಿಲ್ಲ. ಅಲ್ಲಿ ಭಿಕ್ಷೆ ಅಪರಾಧವೆಂಬ ರಾಷ್ಟ್ರೀಯ ಲಜ್ಜೆಯೆಂಬ ಭಾವವಿದೆ. ಆದರೂ ಕೆಲವೇ ಭಿಕ್ಷುಕರು ಕಂಡರು. ನಮ್ಮ ವಸತಿಯಿದ್ದ ಮ್ಯೂನಿಕ್ ನಗರದ ಬ್ರೆಕ್ಟ್ ಬಡಾವಣೆಯಲ್ಲಿ, ನಾಯಪರ್ಲಾಕ್ ಮೆಟ್ರೊ ನಿಲ್ದಾಣಕ್ಕೆ ಹೋಗುವ ಹಾದಿಯಲ್ಲಿ, ಒಬ್ಬ ಭಿಕ್ಷುಕ ಎದುರಾಗುತ್ತಿದ್ದನು.

ಹ್ಯಾಟನ್ನು ಮುಂದಿರಿಸಿಕೊಂಡು ಕೂತಿರುತ್ತಿದ್ದ ಆತ ಹಾದಿಹೋಕರ ಮುಖನೋಡಿ ಸ್ನೇಹಭಾವದಲ್ಲಿ ಮುಗುಳ್ನಗುತ್ತ ಹಲೋ ಎನ್ನುತ್ತಿದ್ದನು. ಜರ್ಮನಿಗೆ ಹೋಲಿಸಿದರೆ ವ್ಯಾಟಿಕನ್ನಿನಲ್ಲಿ ಹೆಚ್ಚು ಭಿಕ್ಷುಕರಿದ್ದರು. ಕ್ರಿಸ್ತನ ಕರುಣೆಯನ್ನು ನಮಗೂ ತುಸು ಹಣಿಸಿ ಎಂಬ ಭಾವದಲ್ಲಿ, ನೆಲಕ್ಕೆ ಹಣೆಹತ್ತಿಸಿ ಮೊಣಕಾಲ ಮೇಲೆ ಕೂತಿರುತ್ತಿದ್ದರು. ಕಾರಣ, ಹದಗೆಟ್ಟಿರುವ ಇಟಲಿಯ ಆರ್ಥಿಕತೆಯೊ ಧಾರ್ಮಿಕ ಯಾತ್ರಾಸ್ಥಳಗಳಲ್ಲಿ ಇದು ಅನಿವಾರ್ಯವೊ ತಿಳಿಯದು.

ಯೂರೋಪಿನ ಸಾರ್ವಜನಿಕ ವಾಹನಗಳಲ್ಲಿ ಬೀದಿ ಕಲಾವಿದರನ್ನು ಕಾಣಲಿಲ್ಲ. ಅದು ಪಯಣಿಕರ ಅಪ್ಪಟ ಖಾಸಗಿ ಸಮಯ. ಯಾರೂ ಯಾರ ನೆಮ್ಮದಿಯನ್ನು ಕೆೆಡಿಸುವಂತಿಲ್ಲ. ಯೂರೋಪಿನ ಕಲಾವಿದರನ್ನು ಕಂಡಾಗ ಕಲೆಯ ಹಂಗಿಲ್ಲದೆ ಅಂಗವಿಕಲತೆ ಬಡತನ ಧಾರ್ಮಿಕತೆ ತೋರಿ ಬದುಕುವ ದೊಡ್ಡ ಪ್ರಮಾಣದಲ್ಲಿ ಭಿಕ್ಷುಕರನ್ನು ನಾವು ಸೃಷ್ಟಿಸಿದ್ದೇವೆಯೇ ಎಂಬ ಪ್ರಶ್ನೆ ಸುಳಿಯಿತು. ನಮ್ಮ ಧಾರ್ಮಿಕ ಕ್ಷೇತ್ರಗಳಲ್ಲಿ ಭಿಕ್ಷುಕುರು ತಮ್ಮ ಆರ್ತಸ್ವರಗಳಿಂದ ಕರುಣೆ ಉಕ್ಕಿಸುವರು. ಇದಕ್ಕೆ ಕಾರಣ ಬಡತನ ಮಾತ್ರವಲ್ಲ; ಭಿಕ್ಷೆ ಬೇಡುವುದು ಸ್ವಾಭಿಮಾನಕ್ಕೆ ತಕ್ಕುದಲ್ಲ ಎಂಬ ಪ್ರಜ್ಞೆ ಇಲ್ಲದಿರುವುದು.

ಭಿಕ್ಷೆ ಕೊಡುವುದು ಧಾರ್ಮಿಕವಾಗಿ ಪುಣ್ಯಕಾರ್ಯವೆಂಬ ಭಾವ ಇರುವುದು. ದಾನವನ್ನು ಧಾರ್ಮಿಕ ಸೇವೆಯಾಗಿಸಿದ ಸಮಾಜಗಳು, ಸಂಪತ್ತಿನ ಸಮಾನ ಹಂಚಿಕೆಯಲ್ಲಾಗಿರುವ ದೋಷವನ್ನು ಮರೆತುಬಿಡುತ್ತವೆ. ಕಲಾವಿದರು ತಮ್ಮಷ್ಟಕ್ಕೆ ಹಾಡುತ್ತ ಹೋದಾಗ ಸಿಗುವ ನೆಮ್ಮದಿ, ಕೈಯೊಡ್ಡಿದೊಡನೆ ಕಲೆಯ ರ‍್ಯಾದೆ ಊನಗೊಳ್ಳುತ್ತದೆ. ಕೇದಾರದಲ್ಲಿ ಜೋಗಿಯೊಬ್ಬ ತನ್ನಷ್ಟಕ್ಕೆ ತಾನು ತನ್ಮಯವಾಗಿ ಬೇಡು ಭಾವವಿಲ್ಲದೆ ಹಾಡಿದ್ದು ನೆನಪಿಗೆ ಬರುತ್ತದೆ.

ಜೆರುಸಲೇಮಿನ ಮಾತೆ ಮೇರಿಯ ಚರ್ಚಿನಲ್ಲಿ, ಒಬ್ಬ ಗಾಯಕಿ ಎಲ್ಲರೂ ಮೌನವಾಗಿ ಪ್ರಾರ್ಥನೆ ಸಲ್ಲಿಸುತ್ತಿರುವಾಗ, ಇದ್ದಕ್ಕಿದ್ದಂತೆ ಉಚ್ಚವಾದ ಗಂಭೀರವಾದ ಇನಿದಾದ ಸ್ವರದಲ್ಲಿ ಹಾಡಿದ್ದು ನೆನಪಾಗುತ್ತಿದೆ. ಪೋಲೆಂಡಿನ ಯಾತ್ರಿಕಳಾಗಿದ್ದ ಆಕೆ ಆಗಷ್ಟೇ ಶಿಲುಬೆಯಿಂದ ಇಳಿಸಿದ ಏಸುವಿನ ದೇಹವನ್ನು ಮಡಿಲಲ್ಲಿಟ್ಟು ಹಾಡುತ್ತಿರುವ ಮೇರಿಯಂತೆ, ನಮಗರಿಯದ ಭಾಷೆಯಲ್ಲಿ ಹೃದಯದಾಳದಿಂದ ಹಾಡಿದಳು.

ನಿಶ್ಯಬ್ದವಾದ ವಾತಾವರಣದಲ್ಲಿ ಆಕೆಯ ದನಿ ಕೇಳುಗರ ಧಮನಿಗಳಲ್ಲಿ ಹಾದು, ಮಾತೆ ಮೇರಿಯ ಶೋಕಭರಿತ ವಾತ್ಸಲ್ಯಭಾವವನ್ನು ತುಂಬಿಬಿಟ್ಟಿತು. ಕಣ್ಣು ತೇವವಾದವು. ಆಧ್ಯಾತ್ಮಿಕ ಅನುಭವವು ಕಲೆಯ ಮೂಲಕ ತೀವ್ರವಾಗಿ ಹೊಮ್ಮುತ್ತದೆ. ಈ ಅನುಭವ ಕೊಡಬಲ್ಲ ಬೀದಿಕಲಾವಿದರು ಈಗಲೂ ನಮ್ಮಲ್ಲಿದ್ದಾರೆ. ಅವರು ಕೇವಲ ಹೊಟ್ಟೆಪಾಡಿನವರಲ್ಲ.

‍ಲೇಖಕರು Avadhi

26 June, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading