ವರ್ತಮಾನದ ಸಮಾಜದ ಪುಟಗಳನ್ನು ತೆರೆದಿಟ್ಟ ‘ಕೊನೆಯ ಪುಟದ ಸಾಲುಗಳು’

ರವಿರಾಜ್ ಸಾಗರ್
“ನಿತ್ಯವು ದುಡಿದು ಬದುಕುವವರ ನೋಡಿ ಐಷಾರಾಮಿ ಬದುಕನ್ನು ನಡೆಸುವವರ ನಡುವೆನೆಮ್ಮದಿಯ ಬದುಕಿಗಾಗಿ ಒಮ್ಮೆ ಬುದ್ಧನಾಗಿ ಬಿಡು” ಎಂದು ಹೇಳುವ ಕವಿ ದುರ್ಗಪ್ಪ ಗುಡುದೂರು ರಾಯಚೂರಿನ ಬಿಸಿಲು ಬವಣೆ ಉಂಡು ಬದುಕಿದವರು. ದೇವನಾಮಪ್ರಿಯ ಎಂದು ಕರೆಸಿಕೊಂಡ ಅಶೋಕನಂತವನನ್ನೂ ಸೆಳದ ಮಸ್ಕಿಯ ನೆಲದವರು. ಹಾಗಾಗಿ ಅವರ ನೆಲ ಮೂಲದ ದನಿಯೇ ಅವರ ಲೇಖನಿಯಲ್ಲಿ ಕವಿತೆಗಳಾಗಿವೆ. ನೀವು ಬುದ್ಧನಾದರೂ ಆಗಿ, ಬಸವಣ್ಣನ ಆದರೂ ಆಗಿ.
ನಾವು ಮಾತ್ರ ಸಾಧ್ಯವಾದಷ್ಟು ಜನರನ್ನು ತುಳಿದು, ಸರ್ಕಾರದ ಬೊಕ್ಕಸವನ್ನು ಕೊಳ್ಳೆ ಹೊಡೆದು ಬದುಕುತ್ತೇವೆ. ಬುದ್ಧಿಜೀವಿಗಳು, ಕವಿಗಳ ಒಣ ಆದರ್ಶಗಳ ಭ್ರಮೆಗಳು ನಮಗೆ ಬೇಕಿಲ್ಲ ಎನ್ನುವವರ ನಡುವೆ ಬುದ್ಧ ಮಾರ್ಗವನ್ನು ಶಾಂತರಸದ ದನಿಯಲ್ಲಿ ಹೇಳಲು ಹೊರಟ ಕವಿಯ ಆಶಯಕ್ಕೆ ಸ್ಪಂದಿಸಿ ಶೀಘ್ರ ಬದಲಾವಣೆಗೆ ತೆರೆದುಕೊಳ್ಳಬಲ್ಲ ಅಂಗುಲಿಮಾಲನಂತ ಸಹೃದಯಿಗಳು ಈಗ ಇದ್ದಾರೆಯೇ ಎಂದು ಹುಡುಕಬೇಕಾಗಿದೆ.
ಸಾಕ್ಷರತೆ ಮತ್ತು ತಾಂತ್ರಿಕತೆ ಬಲ್ಲ ಈ ಕಾಲದಲ್ಲಿ ಅಂಗುಲಿಮಾಲನಿಗಿಂತ ಕಠೋರ, ಅಮಾನವೀಯ ಚಟುವಟಿಕೆಗಳು ಸಾಂಗಿಕವಾಗಿ, ಪ್ರಾಯೋಜಿತವಾಗಿಯೇ ಜರುಗುತ್ತಿರುವುದನ್ನು ನೋಡುತ್ತಿದ್ದೇವೆ. ಹಾಗಾಗಿ ಸರ್ವೋದಯ, ಸಮ ಸಮಾಜ ನಿರ್ಮಾಣ ಹಗಲುಗನಸಾಗಿಯೇ ಸಾಗುತ್ತಿದೆ ಅಲ್ಲವೇ…? ಇಂತಹ ಹಲವು ಪ್ರಶ್ನೆಗಳನ್ನು ಎತ್ತಬಲ್ಲ, ವರ್ತಮಾನದ ಸಾಮಾಜಿಕ ಸಮಸ್ಯೆಗಳಿಗೆ ಮುಖಾಮುಖಿಯಾಗಿಸಬಲ್ಲ ,ಕೆಣಕಬಲ್ಲ,ಕೆದಕಬಲ್ಲ ಗ್ರಹಿಕೆಯನ್ನು ನೀಡುವ ಹಲವು ಕವಿತೆಗಳು ‘ಕೊನೆಯ ಪುಟದ ಸಾಲು’ ಕವನ ಸಂಕಲನದಲ್ಲಿ ಕಾಣಬಹುದು.
“ನನ್ನೊಳಗಿನ ಮನಸ್ಸುಕಾಡುತ್ತಿದೆ ನಿತ್ಯಬಡತನ, ಹಸಿವು ನೋವುಗಳ ಅರಿತು ಸತ್ಯ” ಎನ್ನುವ ‘ಬುದ್ಧ ಭಾರತ’ ಕವಿತೆಯಲ್ಲಿನ ಸಾಲುಗಳನ್ನು ಗಮನಿಸಿದಾಗ ಕವಿಯ ಸಂವೇದನಶೀಲತೆ ಅರಿವಾಗುತ್ತದೆ. ಈ ಕೃತಿಯ ಹಲವು ಕವಿತೆಗಳಲ್ಲಿ ಸ್ವಯಂ ಸಂವೇದನಶೀಲ ಸ್ವಗತಗಳನ್ನು, ಸ್ವಯಂ ವಿಮರ್ಶೆಯನ್ನು, ಆತ್ಮಾವಲೋಕನವನ್ನು, ಆಕ್ರೋಶವನ್ನು ಗುರುತಿಸಬಹುದು.

ಉಳ್ಳವರ ದಬ್ಬಾಳಿಕೆ, ಕುಠಿಲ ರಾಜಕೀಯ,ಒಡೆದು ಆಳುವಿಕೆ, ಪರಿಸರ ನಾಶದ ಕುರಿತು ಕವಿಯ ಸಾತ್ವಿಕ ಸಿಟ್ಟು ಹಲವು ಕವಿತೆಗಳಲ್ಲಿದೆ. ವರ್ತಮಾನದ ಹಲವು ಬರಹಗಾರರನ್ನು ಕಾಡುವ ಸಂಗತಿಗಳೆ ಇವರನ್ನು ಸಹ ಕಾಡಿವೆ. ಭೂತಕಾಲದ ಮಹಾಕಾವ್ಯ, ಪುರಾಣಗಳನ್ನೆ ಮತ್ತೆ ಮತ್ತೆ ಸಾಹಿತ್ಯವಾಗಿಸುವವರ ನಡುವೆ ವರ್ತಮಾನವನ್ನು ಭೂತ ಮತ್ತು ಭವಿಷ್ಯತ್ತಿನ ಆಯಾಮಗಳಲ್ಲಿ ಸೃಜನಶೀಲ ಸಂವೇದನೆಯಾಗಿಸುವವರ ಅಗತ್ಯವಿದ್ದು ದುರ್ಗಪ್ಪ ಗುಡದೂರು ಅವರಿಗೂ ಆ ಸ್ಥಾನವನ್ನು ತುಂಬುವ ಸಾಮರ್ಥ್ಯ ಬರಲಿ ಎಂದು ಹಾರೈಸುವೆ.
“ಅಕ್ಷರವಿಲ್ಲದೆ ನಿರುದ್ಯೋಗಿಗಳಾಗಿಜ್ಞಾನಪಡೆಯದೆ ಅಜ್ಞಾನಿಗಳಾಗಿಅಸೂಯೆಪಡೆದೆ ಆಪ್ತಬಾಂಧವರಾಗಿನಿತ್ಯ ಕಾಯಕವ ಮಾಡಿದ ಜನಗಳಿವರು”ಎಂದು ‘ಮುಗ್ಧ ಮನಸ್ಸುಗಳು’ ಕವಿತೆಯಲ್ಲಿ ಬಹಳ ಮಾರ್ಮಿಕ ನುಡಿಗಳನ್ನಾಡಿದ್ದಾರೆ. ಅಸೂಹೆ ಪಡದ ಮುಗ್ಧ ಕಾಯಕಜೀವಿಗಳ ಬೆವರಿನಲ್ಲಿ ಕೋಟೆಕಟ್ಟಿ ಮೆರೆಯುವ ಉದ್ಯಮ ವಲಯ, ಉಳ್ಳವರ ವಲಯ ರಾಜಕೀಯ ವಲಯ ಸರ್ವೋದಯದ ಇಂತಹ ಸಂವೇದನೆಗಳನ್ನು ಆಲಿಸುವಂತಾಗಲಿ.
ನುಡಿಗಟ್ಟುಗಳಲ್ಲಿ ಅಡಗಿಸಿಟ್ಟು, ಪ್ರತಿಮೆ, ಪ್ರಾಸ ಪಾಂಡಿತ್ಯವನ್ನು ಪ್ರದರ್ಶಿಸಬಲ್ಲ ಕಾವ್ಯಾತ್ಮಕ ಶಬ್ದಗಳ ಆಡಂಬರಕ್ಕೆ ಮೊರೆ ಹೋಗದೆ ನೇರನುಡಿಯ ಸರಳ ಪದಗಳಲ್ಲಿ ಪದಮಾಲೆ ಕಟ್ಟಿದ್ದಾರೆ. ಅವುಗಳ ಕಾವ್ಯದ ಕಸುವನ್ನು ಪರೀಕ್ಷಿಸುವ ಹೊತ್ತು ಇದಲ್ಲ. ಮೊದಲ ಕೃತಿಯ ಮೊದಲ ಹೆಜ್ಜೆ ಇಟ್ಟಿರುವ ದುರ್ಗಪ್ಪ ಗುಡುದೂರು ಇವರನ್ನು ಪ್ರೋತ್ಸಾಹಿಸಿ ಕಾವ್ಯಾಲಯದೊಳಕ್ಕೆ ಸ್ವಾಗತಿಸುವ ಹೊತ್ತಿದು. ರಾಯಚೂರಿನ ಹಿರಿಯ ಕವಿಗಳು ಈ ಬಗ್ಗೆ ಜವಾಬ್ದಾರಿ ತೆಗೆದುಕೊಳ್ಳಬೇಕಾದ ಹೊತ್ತಿದು. ಹಾಗಾಗಿ ಕೊನೆ ಪುಟದ ಸಾಲನ್ನು ಹೇಳಹೊರಟ ಆರಂಭಿಕ ಕವಿಮಿತ್ರನಿಂದ ಮತ್ತಷ್ಟು ಉತ್ತಮ ಕೃತಿಗಳನ್ನು ನಿರೀಕ್ಷಿಸಿ ಹಾರೈಸುವೆ.
ಕ್ರಿಯಾಶೀಲ ಶಿಕ್ಷಕರಾಗಿ, ಸ್ನೇಹಜೀವಿಯಾಗಿದ್ದ ಇವರು ಲೇಖನಿ ಹಿಡಿದು ತಾನು ಒಂದು ಕವನ ಸಂಕಲನ ಪ್ರಕಟಿಸಬೇಕೆಂದು ಹಲವು ವರ್ಷಗಳಿಂದ ಹೇಳಿಕೊಂಡಿದ್ದರು. ಯುವ ಬರಹಗಾರರಿಗೆ ಪ್ರೋತ್ಸಾಹಿಸುತ್ತ ಬಂದಿರುವ ಪುಸ್ತಕ ಪ್ರಾಧಿಕಾರ ದುರ್ಗಪ್ಪ ಇವರ ಕವಿತೆಗಳ ಕಟ್ಟನ್ನು ಪ್ರೋತ್ಸಾಹಧನಕ್ಕೆ ಆಯ್ಕೆಮಾಡಿ ಪ್ರಕಟಣೆಗೆ ಸಹಕರಿಸಿ ಬೆಳೆಸಿದೆ. ಪ್ರಾಧಿಕಾರದ ಇಂತಹ ಕಾರ್ಯಕ್ಕೆ ಅಭಿನಂದನೆ ಹೇಳಲೇಬೇಕು.

ಇನ್ನು ಆ ಕೃತಿಯ ಪುಟಗಳ ಕುರಿತು ಮಾತನಾಡುವುದು, ತಾನು ಬರೆಯಬೇಕು, ಬರೆಯಬಲ್ಲೆ ಎಂದು ಹೆಜ್ಜೆ ಇಟ್ಟಿರುವ ಕವಿ ದುರ್ಗಪ್ಪ ಗುಡುದೂರು ಅರವರನ್ನು ಕೈಹಿಡಿದು ನಡೆಸುವುದು, ತಿದ್ದುವುದು ಓದುಗರದೂ ಒಂದಿಷ್ಟು ಪಾಲಿದೆ. ಏಕೆ ಈ ಮಾತನ್ನು ಹೇಳುತ್ತಿದ್ದೇನೆ ಅಂದರೆ ಇಂದು ರಾಜ್ಯದ ಮೂಲೆ ಮೂಲೆಯಲ್ಲಿ ಸಾಕ್ಷರ ಸಂಖ್ಯೆ, ಸಂವೇದನಶೀಲರ ಸಂಖ್ಯೆ ಸಾಕಷ್ಟಿದೆ. ಬರೆಯಬಲ್ಲೆ ಎಂದು ಲೇಖನಿ ಹಿಡಿದು ಹೊರಟವರು ದೊಡ್ಡ ದಂಡಿದೆ. ಆದರೆ ಅವರಿಂದ ಏನನ್ನು ಬರೆಸಬೇಕು, ಯಾವ ದಾರಿಯತ್ತ ಮುನ್ನಡೆಸಬೇಕು, ವರ್ತಮಾನಕ್ಕೆ ಹಾಗೂ ಭವಿಷ್ಯತ್ತಿಗೆ ಎಂತಹ ಸಾಹಿತ್ಯ ಬೇಕಾಗಿದೆ ಎಂದು ಪ್ರಜ್ಞಾವಂತಿಕೆಯ ಇಂದ ಹೆಜ್ಜೆ ಇಡಬೇಕಾದ ಹೊತ್ತಿದು.
ಓದುಗರ ಅಭಿರುಚಿ ಕೆಡಿಸುವ, ಓದುಗರ ಗ್ರಹಿಕೆ ಕೆಡಿಸುವ, ಸುಳ್ಳನ್ನೇ ಸತ್ಯ ಮಾಡುವ, ಇತಿಹಾಸವನ್ನೇ ರಾಜಕೀಯ ಕಾರಣಕ್ಕಾಗಿ ತಿರುಚುವ ನೂರಾರು ಕೃತಿಗಳು, ಬರಹಗಳು ಪ್ರಕಟ ಆಗುತ್ತಿರುವ ಡಿಜಿಟಲ್ ಮಾಧ್ಯಮಗಳ ಈ ಕಾಲದಲ್ಲಿ ಸಾಮಾಜಿಕ ಜವಾಬ್ದಾರಿಯುತ ಆಶಯಗಳ, ದೇಶದ ಸರ್ವೋದಯದ ದೂರದೃಷ್ಟಿಯ ಸಮಚಿತ್ತದ ಬರಹಗಾರ ಅಗತ್ಯವಿದೆ. ಹಾಗಾಗಿ ವರ್ತಮಾನದ ಬರಹಗಾರರ ಬರಹಗಳು ಸಮಾಜಕ್ಕೆ ಮುಖಾಮುಖಿ ಆಗುವಾಗ ಸಾಮಾಜಿಕ ಸ್ವಾಸ್ಥ್ಯದ ಸತ್ಯ ಮಾರ್ಗದತ್ತ ಮುನ್ನಡೆಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಯುವ ಬರಹಗಾರರಿಗೆ ಮಾರ್ಗದರ್ಶನದ ಅಗತ್ಯವಿದ್ದು ನೆಲದ ಹಿರಿಯ ಪ್ರಜ್ಞಾವಂತರು ಸಾಂಘಿಕತೆಗೆ, ಯುವ ಬರಹಗಾರರ ಒಳಗೊಳ್ಳುವಿಕೆಗೆ ಕ್ರಿಯಾಶೀಲರಾಗಬೇಕಿದೆ.
ಈ ಕೃತಿಯನ್ನು ಶಾರದಾ ಪ್ರಕಾಶನ ಸಿಂಧನೂರು ಇವರು ಪ್ರಕಟಿಸಿದ್ದು 86 ಪುಟಗಳಲ್ಲಿ 58 ಕವಿತೆಗಳಿವೆ. ಡಾ.ವಡ್ಡಗೆರೆ ನಾಗರಾಜಯ್ಯ ಅವರು ಪ್ರೀತಿಯಿಂದ ಮುನ್ನುಡಿ ಬರೆದು ಹರಸಿದ್ದಾರೆ. ಕೆ ಖಾದರ್ ಭಾಷಾ ಬೆನ್ನುಡಿ ಬರೆದಿದ್ದಾರೆ.ಬೆಲೆ 90 ರೂಗಳಿದ್ದು ಪುಸ್ತಕಗಳನ್ನು ಕೊಂಡು ಉಡುಗೊರೆಯಾಗಿ ನೀಡುವ ಮೂಲಕ ಪುಸ್ತಕ ಓದುವ ಸಂಸ್ಕೃತಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.ಕೊನೆಯ ಪುಟದ ಸಾಲುಗಳು ಕೊನೆಯಿಲ್ಲದೆ ಓದುಗರನ್ನು ತಲುಪಲಿ.






0 Comments