ವಿನಯ್ ಕುಮಾರ್ ಎಂ ಜಿ
ಹಾಸನ ನನಗೆ ಥೇಟ್ ಮನೆಯಂತೆಯೇ ಎನಿಸುವುದಕ್ಕೆ ಮುಖ್ಯ ಕಾರಣಗಳಲ್ಲಿ ಒಬ್ಬರು ಡಾಕ್ಟರ್ ರವಿಕುಮಾರ್ ಎಲ್. ಪಿ. ನಾನು ಯಾವುದೇ ಯೋಜನೆ ರೂಪಿಸಿದರೂ ಬೆನ್ನಿಗೆ ನಿಂತು ಅದರ ಆಗು-ಹೋಗುಗಳನ್ನು ನಿರಂತರ ಚರ್ಚಿಸುವವರು ಅವರು. ಅದರಲ್ಲೂ ಶಿಕ್ಷಣದ ಕುರಿತು ಯಾವುದಾದರೂ ಹೊಸ ಕಾರ್ಯಕ್ರಮ ರೂಪಿಸಬೇಕೆಂದರೆ ರವಿಯವರೊಡನೆ ಮಾತನಾಡಿದರಾಯಿತು. ಆ ಇಡೀ ಕಾರ್ಯಕ್ರಮ ಅಥವಾ ಯೋಜನೆ ಸಮಕಾಲೀನ ಶೈಕ್ಷಣಿಕ ಸಂದರ್ಭದಲ್ಲಿ ಯಾವ ಸ್ಥಾನ ಪಡೆಯಬಹುದು ಎಂಬುದನ್ನು ಎಲ್ಲ ವಿವರಣೆಯೊಂದಿಗೆ ಹೇಳಿಬಿಡುತ್ತಾರೆ.
ವೈಯಕ್ತಿಕವಾಗಿ ಬಹಳ ಶಿಸ್ತಿನ ಮನುಷ್ಯರಾದ ಆಳದಲ್ಲಿ ಮಾನವೀಯ ಅತಃಕರಣವಿರುವ ರವಿಕುಮಾರರ ಪುಸ್ತಕ ಬಿಡುಗಡೆ ಇದೆ ಎಂದು ತಿಳಿದು ಹಾಸನದ ಅಶೋಕ ಹೋಟೆಲ್ಲಿಗೆ ಹೋದೆ. ಮಂಡ್ಯ, ಹಾಸನದಂತಹ ಊರುಗಳಲ್ಲಿ ಸಾಹಿತ್ಯ ಕೃಷಿ ಬೇಕಷ್ಟಿದ್ದರೂ ಇಂಗ್ಲಿಷಿನಲ್ಲಿ ಬರೆಯುವವರ ಸಂಖ್ಯೆ ಬಹಳ ಕಡಿಮೆ. ಆ ಬಹಳ ಕಡಿಮೆ ಮಂದಿಯ ಸಾಲಿಗೆ ರವಿಕುಮಾರ್ ಕೂಡಾ ಸೇರಿದರು. ಪುಸ್ತಕ ಮಾತ್ರ ಇಂಗ್ಲಿಷಿನಲ್ಲಿರದೇ ಅದರ ಬಿಡುಗಡೆಯನ್ನೂ ಥೇಟ್ ಕಾರ್ಪೊರೇಟ್ ಈವೆಂಟಿನಂತೆ ಅಚ್ಚುಕಟ್ಟಾಗಿ ಹಾಸನದ ಸ್ಟಾರ್ ಹೊಟೆಲ್ಲುಗಳಲ್ಲೊಂದಾದ ಅಶೋಕದಲ್ಲಿ ಆಯೋಜಿಸಿದ್ದರು. ಆಯ್ದ ಆಹ್ವಾನಿತರಂತೆ ಭಿನ್ನ ಕ್ಷೇತ್ರದ ಗಣ್ಯರು ಬಂದಿದ್ದರು. ರವಿಯವರು ಮೂಲತಃ ಶಿಕ್ಷಣ ತಜ್ಞರೂ ಪ್ರಾಂಶುಪಾಲರೂ ಆಗಿರುವುದರಿಂದ ಶಿಕ್ಷಣ ಕ್ಷೇತ್ರದ ಗಣ್ಯರೇ ಬಹಳಷ್ಟಿದ್ದರು.

ಖಾಸಗಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಶಿವರಾಮೇಗೌಡರು, ನೇತಾಜಿ ಪಬ್ಲಿಕ್ ಸ್ಕೂಲಿನ ಕರ್ನಲ್ ನಟೇಶ್’, ಆಲೂರಿನ ಬೆತೆಸ್ತಾ ಶಾಲೆಯ ಪಾಸ್ಟರ್ ಮಾಥ್ಯೂ, ಆರ್ಕಿಟೆಕ್ಟ್ ಮಧು ನಾರಾಯಣ್, ಜನಮಿತ್ರ ಪತ್ರಿಕೆ ಸಂಪಾದಕರಾದ ನವೀನ್, ಹಾರ್ವರ್ಡ್ ಸ್ಕೂಲ್ ಆಫ್ ಎಕ್ಸಲೆನ್ಸಿನ ಆತ್ನೀಯ ಮಿತ್ರರಾದ ರಾಜಶೇಖರ್, ಅರ್ರೆ ಪಿಕ್ಸೆಲ್ಸ್’ನ ಪಿ. ಕೃಷ್ಣ, ಹಾಸನಾಂಬ ಶಿಕ್ಷಣ ಕಾಲೇಜಿನ ಪ್ರಾಂಶುಪಾಲರಾದ ಡಾ. ಮಾಲಿನಿ ಮುಂತಾದ ಅನೇಕರು ಅಲ್ಲಿದ್ದರು. ಜೊತೆಗೆ ಪರಿಚಯಗೊಂಡ ಮೈಸೂರು ಶಾರದಾ ವಿಲಾಸ್ ಶಿಕ್ಷಣ ಕಾಲೇಜಿನ ಪ್ರೊಫೆಸರರಾದ ವಿಶ್ವನಾಥ್ ಹಾಗೂ ನಮ್ಮವರೇ ಆದರೂ ನೇರವಾಗಿ ಸಿಕ್ಕಿರದಿದ್ದ ಜೆಸಿಐ ಹಾಸನ್ ಹೊಯ್ಸಳದ ಅಧ್ಯಕ್ಷರಾದ ಪ್ರವೀಣ್’ರವರು ಸಿಕ್ಕ ಕೆಲ ಗಂಟೆಗಳಲ್ಲೇ ಆತ್ಮೀಯರಾಗಿಬಿಟ್ಟರು. ಈ ಎಲ್ಲ ಸಖ್ಯವನ್ನೂ ಸಾಧ್ಯವಾಗಿಸಿದ ಡಾಕ್ಟರ್ ರವಿಕುಮಾರ್ ಎಲ್.ಪಿ.ಯವರಿಗೆ ಧನ್ಯವಾದಗಳು.
ಅಂದಹಾಗೆ ಪುಸ್ತಕದ ಹೆಸರು ಹೆವೆನ್ಲಿ ಥಾಟ್ಸ್. ಮನುಷ್ಯನ ಬದುಕಿಗೆ ಬೇಕಾದ ಕೌಶಲಗಳನ್ನು ಸಣ್ಣ ಸಣ್ಣ ಕಥೆಗಳು, ಪ್ರಸಂಗಗಳು, ಉದಾಹರಣೆಗಳನ್ನಿಟ್ಟುಕೊಂಡು ಸರಳ ಇಂಗ್ಲಿಷಿನಲ್ಲಿ ವಿವರಿಸಿದ್ದಾರೆ. ಸುಮಾರು ಎಪ್ಪತ್ತು ಅಧ್ಯಾಯಗಳುಳ್ಳ ಈ ಕಿರು ಪುಸ್ತಕವನ್ನು ಮಕ್ಕಳಾದಿಯಾಗಿ ಯಾವ ವಯಸ್ಸಿನವರಾದರೂ ಓದಬಹುದು.
ಏಕಕಾಲಕ್ಕೆ ಕಾಫಿ ಟೇಬಲ್ ಪುಸ್ತಕವಾಗುವ ಲಕ್ಷಣವೂ ಬದುಕನ್ನು ಸರಿದಾರಿಗೆ ಎಳೆದೊಯ್ಯುವ ಚಿಕಿತ್ಸಕ ಗುಣವೂ ಈ ಪುಸ್ತಕಕ್ಕುಂಟು. ಇಂತಹ ಒಳ್ಳೆಯ ಪುಸ್ತಕ ಕನ್ನಡಕ್ಕೂ ಬರಬೇಕು ಎನ್ನುವುದನ್ನು ಸಭೆಯಲ್ಲಿಯೇ ನಾನು ಹೇಳಿದ್ದೇನಾದರೂ ಇಲ್ಲಿಯೂ ಹೇಳುತ್ತಿದ್ದೇನೆ. ಬಹುಬೇಗ ಈ ಪುಸ್ತಕ ಕನ್ನಡಿಗರಿಗೆ ಸಿಕ್ಕಲಿ. ರವಿಕುಮಾರ್’ರವರು ಇನ್ನೂ ಹೆಚ್ಚಿನ ಕೃತಿಗಳನ್ನು ರಚಿಸಲು ಈ ಪುಸ್ತಕ ಮತ್ತು ನಮ್ಮೆಲ್ಲರ ಹಾರೈಕೆಗಳು ಪ್ರೇರಣೆಯಾಗಲಿ ಎಂದು ಹಾರೈಸುತ್ತೇನೆ.









0 Comments