ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಮೇಶ್ ಆರೋಲಿಗೆ ಪುತಿನ ಕಾವ್ಯ ಪ್ರಶಸ್ತಿ

putina plaqueಕವಿ ರಮೇಶ್ ಆರೋಲಿ ಅವರಿಗೆ ನಾಡಿನ ಪ್ರತಿಷ್ಟಿತ ಪುತಿನ ಕಾವ್ಯ ಪ್ರಶಸ್ತಿ ಘೋಷಿಸಲಾಗಿದೆ 

ಪಲ್ಲವ ಪ್ರಕಾಶನದ ಪ್ರಕಟಣೆಯಾದ ಅರೋಲಿ ಗೆ ಈ ಪ್ರಶಸಿಯನ್ನು ಪುತಿನ ಟ್ರಸ್ಟ್ ನ ಮುಖ್ಯಸ್ಥರು ಘೋಷಿಸಿದ್ದಾರೆ  
ಅವಧಿಯಲ್ಲಿಯೇ ಪ್ರಕಟವಾಗಿದ್ದ ರಮೇಶ್ ಆರೋಲಿ ಬರೆದ ಜುಲುಮೆ ಕವಿತೆ ಇಲ್ಲಿದೆ 

rameh aroli julume cover

 

ಜುಲುಮೆ

(ಸ್ಪೇನ್ ನ ಬರ್ಸಿಲೋನದಲ್ಲಿ ಕರ್ಲೋಸ್ ಎಂಬ ಬಡ ಚಮ್ಮಾರ ತನ್ನ ವೃತ್ತಿ ಮತ್ತು ಪ್ರಾಮಾಣಿಕತೆಗೆ ಹೆಸರಾಗಿದ್ದ. ತನ್ನ ದೇಶದ ರಾಜಕುಮಾರನನ್ನೂ ನೋಡಿರದ ಆತ ಸುತ್ತಲಿನ ಬಡ ಕೂಲಿ-ಕಾಮರ್ಿಕರಿಗೆ ಕಡಿಮೆ ಬೆಲೆಗೆ ಚಪ್ಪಲಿ/ಬೂಟು ಮಾರಿ ಜೀವನ ಸಾಗಿಸುತ್ತಿದ್ದ.

ಇದು ತಿಳಿದ ಆ ಪ್ರಾಂತದ ಫ್ರೆಂಚ್ ದೊರೆ ಕರ್ಲೋಸ್  ಬಳಿ ಬಂದು ಬಂಗಾರದ ನಾಣ್ಯ, ರಾಜ ವೈಭೋಗದ ಆಸೆ ತೋರಿ ಆಸ್ಥಾನದ ಮುಖ್ಯ ಚಮ್ಮಾರನಾಗಲು ಕೇಳಿಕೊಳ್ಳುತ್ತಾನೆ. ಆದರೆ ಕರ್ಲೋಸ್  ಆ ಆಮಂತ್ರಣವನ್ನು ನಿರಾಕರಿಸಿ ಅಲ್ಲಿಯ ದಿನಗೂಲಿಗಳೇ ತನ್ನ ದೊರೆಗಳೆಂದು ಹೇಳುವುದರೊಂದಿಗೆ ದೊರೆಯ ವಿರೋಧ ಕಟ್ಟಿಕೊಳ್ಳುತ್ತಾನೆ.

ಮನುಷ್ಯನ ಶ್ರಮವನ್ನು ಕೊಳ್ಳಬಹುದೆ ಹೊರೆತು ಮನುಷ್ಯನನ್ನಲ್ಲ ಎಂಬ ನೀತಯುಳ್ಳ ಈ ಜನಪದ ಕತೆಯೇ ಈ ಕಾವ್ಯದ ವಸ್ತು)

ಜುಲುಮೆ

ಉತ್ತುತ್ತ ಉರಿಯಲ್ಲಿ ಊರಾಚೆ ಕೆರೆಯಲ್ಲಿ

ಉತ್ತರ ನಾಡಿನ ಗಡಿಯಲ್ಲಿ ಕಾಣಿರೊ

ಮುತ್ತಂಥ ಮೆಟ್ಟಿನ ಮಲ್ಲಯ್ಯನ

*

ಭೂಮಿ ಗುಡಿಸುವವರ ಬಾನು ಬಳಿಯುವವರ

ಪಾದ ಹಸನಾಗಿ ಇರಲೆಂದು ಮಾಡ್ಯಾನೆ

ನಾಡೊಪ್ಪೊ ಜೋಡ ಮಲ್ಲಯ್ಯ

*

ಹರಗಿದ್ದು ನೆಲವಲ್ಲ ಒರಗಿದ್ದು ತೆನೆಯಲ್ಲ

ಬಿಟ್ಟಿ ಚಾಕರಿಗೆ ಕೊನೆಯಿಲ್ಲ ಮಲಶೆಟ್ಟಿ

ನಾಯಿಚೂರಿಗೆಲ್ಲ ದೊರೆಮಲ್ಲ

*

ಪಾದ ಪಾದರಸ ಹೆಸರು ಸಣ್ಣ ಸರಸ

ದೊರೆಶೆಟ್ಟಿಗೀಕೆ ಕೊನೆ ಕೂಸ ಸರಸೀಗೆ

ಕಾಲಡಿ ಆಣಿಗಾಯ ಕಾಡಿತ್ತ

*

ಸೂರ್ಯಂಗೆ ಮುಗಿದಾರೊ ಚಂದ್ರಂಗೆ ನಮಿಸ್ಯಾರೊ

ಅಷ್ಟ ದಿಕ್ಕೀಗೆ ಹುಡಿಕ್ಯಾರೊ ಕೈ ಮದ್ದು

ಕಾಣದೆ ಬರಿಗೈಲೆ ಬಂದಾರೊ

*

ಕಟ್ಟು ಕುಲಕಿಲ್ಲ ಕೆಟ್ಟು ಬಗೆಯೋದಿಲ್ಲ

ಮೆಟ್ಟು ಮಾಡೋರ ಮನೆತನಕ ನಡಿಬೇಕ

ಹುಟ್ಟುಗಾಲಿಲೆ ಗಿಳಿಯೊಂದ ಹೇಳಿತು

*

ಗುರುತು ಹೇಳಲು ಬ್ಯಾಡ ಮರೆತು ದೊರೆಗೂಸೆ

ಮದ್ದಿನ ಹೆಸರು ಮೆಟ್ಟೆಂಬುದ ಅರಿತು

ಗುಟ್ಟಾಗಿ ಪಡೆದುಕೊ ಜೋಡೊಂದ

*

ತಿಂದಿದ್ದು ಮದ್ದಲ್ಲ ಕಂಡಿದ್ದು ಕಲ್ಲಲ್ಲ

ಕಾಲು ಬ್ಯಾನಿಗೆ ನಿದಿರಿಲ್ಲ ಹಗಲಲ್ಲಿ

ಕುಂಟುತ್ತ ನಡೆದಾಳೊ ದಾರೀಲಿ

*

ಅಲೆಯುತ್ತ ನಡೆದಾಳೊ ಅಳಲು ನುಡಿದಾಳೊ

ಮಾವಿನಕೆರೆ ದಂಡೆ ತಲುಪ್ಯಾಳೊ ಮಂದಿಯ

ಮಲ್ಲಯ್ಯನ ಜೋಪಡಿ ಕೇಳ್ಯಾಳೊ

*

ಮುತ್ತಿನರಮನೆಯಲ್ಲ ಕತ್ತಿ ಹಿಡಿದವರಿಲ್ಲ

ಸುತ್ತ ಗುಡಿಸಲು ಕೊನೆಯಲ್ಲಿ ಸಿಕ್ಕೀತು

ಶಿವನು ಮೆಚ್ಚಿದ ಜೋಪಡಿ

*

ಅರಳಿ ಮರದ ನೆರಳು ಅಳತೆಗೆ ಬೆರಳು

ಅವಳಿ ಆತನ ಕೈಯಲ್ಲಿ ಚರ್ಮವು

ಚಿತ್ತಾರದುಂಗುಟ ಮೆಟ್ಟಲ್ಲಿ

*

ಕತ್ತು ಹೊರಳಲಿಲ್ಲ ಚಿತ್ತ ಕದಲಲಿಲ್ಲ

ಸುತ್ತ ಪರಪಂಚದರಿವಿಲ್ಲ ದುಡಿಮೇಲಿ

ದೂರಾಯ್ತು ದು:ಖವು ಬೆವರಲ್ಲಿ

*

ಕಾವು ಕಾಣದ ಕಾಲು ಬಿಸಿಲು ತಟ್ಟದ ಬಾಲೆ

ಸರಿಸಿಯು ಒಣಗಿದ ಬರಿ ನಾಲೆ ಕೇಳಿದಳು

ಜೋಡೊಂದ ಹಿಮ್ಮಡಿ ಉರಿಜ್ವಾಲೆ

*

ಊರೆಲ್ಲ ಅಲೆದಾಳೊ ಚಮ್ಮಾರ ಬೇಡ್ಯಾಳೊ

ಕಾದ ನೆಲವೆಲ್ಲ ಅಂಗಾರ ಬ್ಯಾಸಿಗೆ

ಸಹಿಸೋಂತ ಮೆಟ್ಟಿನ ಜೋಡೊಂದ

*

ರೆಕ್ಕೆ ಕಾಲು ಗಿಣಿಗೆ ಖಾಲಿಪಂಜರ ದಣಿಗೆ

ರೊಕ್ಕದ ಚಿಂತಿಲ್ಲ ಮಲ್ಲಯ್ಯ ಜೋಡೊಂದ

ಮಾಡಯ್ಯ ಕುದುರೆ ಚರ್ಮದಿ

*

ಹದಿಹರೆಯ ಕಾಲಿಗೆ ಕುದುರೆ ಜೋಡಾದರೆ

ಹಡೆದವ್ವರೆಲ್ಲ ಹೆದರ್ಯಾರೊ ಚಮ್ಮಾಳಿಗೆ

ಆಗದು ಕುದುರೆ ಚರ್ಮದಿ

*

ಜಿಗಿ ಜಿಗಿವ ಜಿಂಕೆ ಚರ್ಮದಿ ಮಲ್ಲಯ್ಯ

ಚೆಂದಾದ ಜೋಡೊಂದ ಆದೀತ ಬಿಂದಿಗೆ

ಬಿರಬಿರನೆ ನೀರೊತ್ತು ತಂದೇನಾ

*

ಜಿಗಿವ ಪರಿ ಕಂಡು ಊರೆಲ್ಲ ಎಲೆ ನಾರಿ

ಜೀರಿಗೆ ತಿಂದು ಉಗಿದಾರ ಮಲ್ಲಯ್ಯನ

ಜೀವಕ್ಕೆ ಕುತ್ತು ತಂದಾರ

*

ಸದ್ದಿಲ್ಲದೇನೆ ಕದ್ದು ಮೇಯುವೆ ಕಬ್ಬು

ಮದ್ದಾನೆ ಚರ್ಮ ಆದೀತ ಮಲ್ಲಯ್ಯ

ನಡೆವ ದಾರಿನೆ ಕಡಿದ್ಹಂಗ

*

ಜಂಬಾದ ನಾರಿ ನಾ ಕಟುಕನೇನಾ

ಜಂಬುರಾಯನ ಕೊಂದೇನಾ ಕುಲದೇವ

ಜಾಂಬವಂತನು ಮೆಚ್ಚಾನು

*

ಮರಳುಗಾಡಿನ್ಯಾಗ ಕರವೊಡ್ಡಿ ಬೇಡಿದರೆ

ಒಡಲ ನೀರುಯ್ಯುವ ಒಂಟೆಯ ತೊಗಲಲಿ

ಹೊಲಿದು ಕೊಡುವೇಯ ಜೋಡೊಂದ

*

ಬಾಯಾರಿ ಬಂದಾರೆ ನೀರುಣಿಸಿ ಕಳುಸೇನು

ನಿಗಿ ನಿಗಿ ಬಿಸಿಲಾಗ ನಿಂದೇನಾ ನಾರಿ

ನಡಿ ನಡಿ ಮುಂದಿನ ಕೇರಿಗೆ

*

ಕೊಟ್ಟು ಕುದಿಯಲು ಬ್ಯಾಡ ಮೆಟ್ಟಿಲ್ಲ ಎನಬ್ಯಾಡ

ಉಟ್ಟುಡುಗೆ ಒಡ್ಡಾಣ ನಿಡೇನ ಹೋಗಲಿ

ನುಣುಪಿನ ನರಿ ಚರ್ಮ ಆದೀತಾ

*

ಗುಂಡು ಹೊಡೆಯಲಾರೆ ಬಾಣ ಬಿಡಲಾರೆ

ಬಂಡೆಣ್ಣೆ ಬದುಕದು ತರವಲ್ಲ ತೆಗಿಯೆ

ಮನೆದೇವ ಹರಳಯ್ಯ ಒಪ್ಪಾನು

*

ಮಾತು ಮಾತಿಗು ಮನೆದೇವನೆಂಬ

ಓತಿಕ್ಯಾತನ ತರಲ್ಯಾಕ ತರಾವರಿ

ಮಾತಾಡಿ ಮಾಡಿದ ಕಸುಬೇನ

*

ಕುಲದೇವನೆಂಬೋನು ನೆಲದೊಡೆಯನೆಂಬುದ

ಕುಳಿತುಂಡ ಕುಲಕೆತ್ತ ತಿಳಿದೀತ ಎಲೆ ಕುಲತಿ

ಕೇಡು ಕುಲದ್ಹಾಡು ನಾಯಿ ಮೊಲೆಜೋಡು

*

ಒಡಲೆಲ್ಲ ಕೊಳಿಗೇರಿ ಒಲೆಯಲ್ಲ ಹೊಲಿಗೇರಿ

ಕರದಲ್ಲಿ ಕೆರದ ಚಾಕರಿ ಆದರು

ಕರೆದುಕೊಳ್ಳುವ ಪರಿ ಅಚ್ಚರಿ

*

ತಿಂಬೋನಲ್ಲ ಹೊಲೆಯ ಅಂಬೋನು ಅರಿಯೆ

ಅಂಬಿಗನಿಗೆ ನೀರೆತ್ತ ಹೊಲೆಯೆ ಅಂಬಾ

ಎಂದುಲಿವ ಕೂಗೆತ್ತ ಹೊಲೆಯೆ

*

ಕಾಲಾಗ ಉರಿಯೆಚ್ಚಿ ನಾಲಿಗಿ ಉರಿಯಾಗಿ

ಮರೆತಾಳು ಮದ್ದಿನ ಕರಾರು ಸರಸಿಯು

ತಾನ್ಯಾರನೆಂಬುದ ಸಾರ್ಯಾಳೊ

*

ಓಣಿ ಓಡಿ ಬಂತು ಕೇರಿ ಕೇಳುತ ನಿಂತು

ದರ್ಪದ ದೊರೆಮಗಳ ದನಿ ಕೇಳಿ ಖುದ್ದು

ಅರಮನೆ ನೆರೆದಿತ್ತು ಕೆರೆದಂಡೇಲಿ

*

ಆಳು ಮಕ್ಕಳು ಸರಿದು ಓಳಾಗಿ ನಿಂತರು

ಮಲಶೆಟ್ಟಿ ಮಗಳೆಡೆಗೆ ಬಂದಾನೊ ಗಳಿಗೆ

ಮಂದಿ ಮೌನದಿ ನಿಂತಾರು

*

ಕಣ್ಣು ಖಾರದ ಉಂಡೆ ಕಾಲು ಹೆಬ್ಬಂಡೆ

ಕೆಕ್ಕರಿಸಿ ಮಲ್ಲಯ್ಯನ ಕಂಡಾನೊ ಮಲಶೆಟ್ಟಿ

ಬಲ್ಲೆಯಾ ತಾನ್ಯಾರು ಎಂದಾನೊ

*

ದೊರೆತಾನ ದುರಾಯ್ತು ಗೌಡಿಕೆ ಗುಡಿಸೋಯ್ತು

ಬಂದಾರೆ ಮನೆತನಕ ದೊರೆತಾನು ದೊರೆಕೀತ

ದೊರೆ ದೊರೆ ತಾನೆಂಬ ದುರುಳಂಗೆ

*

ಅವಳಿ ಕೈ ಬಿಡಲಿಲ್ಲ ತೆವಳಿ ಬದುಕಲಿಲ್ಲ

ಗಟ್ಟಿಗ ಮಲ್ಲಯ್ಯ ತಂದಾನೆ ತಾನೆ

ಬಂದವನ್ಯಾರಾದರೆಂದಾನೆ

*

ದುರುದುರು ನೋಡ್ಯಾನೆ ದೊರೆ ಕತ್ತಿ ಬೀಸ್ಯಾನೆ

ಮಲ್ಲಯ್ಯ ಕುತ್ತಿಗೆ ತೆಗೆದಾನೆ ಮರುಚಣ

ಕುಸಿದ ಕೇಕೆ ಅಳಲು ಕೇಳ್ಯಾನೆ

*

ಹಗಲಲ್ಲೆ ಕತ್ತಲು ಕೆರೆಯಲ್ಲ ನೆತ್ತಾರು

ನಡುಗಿದ ಮಂದಿ ಸುತ್ತಲೂ ಕಂಡಾರು

ಹಾರಿತು ರುಂಡ ಎತ್ತಲೊ

*

ಚಿತ್ಕಾರದನಿ ಕೇಳಿ ಚೀರ್ಯಾವೊ ಅಳಿಲು

ದಿಕ್ಕು ಪಾಲಾಗಿ ಹಕ್ಕಿಯು ಹಾರಿತು

ರೆಕ್ಕೆ ನಾಯಿಯು ರುಂಡ ಒಯ್ಯಿತು

*

ಆದದ್ದು ಅರಿವಿಲ್ಲ ಕಾದಿದ್ದು ಒಳಿತಲ್ಲ

ಕತ್ತಿ ಹಿಡಿದವಗೆ ಖಬರಿಲ್ಲ ಕೂಸು

ಕಣ್ಣೆದುರೆ ಕುಸಿದಾಗ ಕಸುವಿಲ್ಲ

*

ಪಾದಾದುರು ಏರಿ ಮೊಣಕಾಲು ಮೀರಿ

ಕಾದ ಮೈಕುಲುಮೆ ಕಾವೇರಿ ಸರಸಿಗೆ

ಜಗವೊಂದು ಉರಿಚೆಂಡು ಕಣ್ಣಿಗೆ

*

ಧರೆಗೆ ದೊಡ್ಡವನೆಂಬ ದೊರೆಯೊಬ್ಬನಿಲ್ಲ

ಗರಿಕೆ ಮ್ಯಾಲಿನ ಕಿರೀಟ ಸ್ಥಿರವಲ್ಲ ದೊರೆಯೆ

ಉದುರಿ ಬೀಳುವ ಜೀವ ಉಳಿಸೀಕೊ

*

ಮಡದಿಯ ದನಿ ಕೇಳಿ ಮಡುಗಟ್ಟಿದ ಶೆಟ್ಟಿ

ಮರುಕಾದಿ ಮಗಳೆಡೆಗೆ ನೋಡ್ಯಾನೊ ಕಡೆತನಕ

ಹಿಡಿಯೇನು ಕತ್ತಿ ಎಂದಾನೊ

*

ಹಿಂದಿಲ್ಲ ಮುಂದಿಲ್ಲ ಮಲ್ಲಯ್ಯನೆಂಬುವಗೆ

ಕಲ್ಲೆದೆಯ ಮಲಶೆಟ್ಟಿ ಕೊಂದಾನೊ ನಾಡೆಲ್ಲ

ನೆತ್ತಾರು ಮಳೆಯ ತಂದಾನೊ

*

ಪಾಪದ ಮಳೆ ಸುರಿದು ಪಾದಾವು ಸರಿದು

ಕೇರಿ ಗುಡಿಸಲು ಸೇರ್ಯಾವೊ ಕಣ್ಣಾರೆ

ಹರಿದ ನೆತ್ತರು ಮಡವು ಕಂಡಾವೊ

*

ನೆತ್ತಾರು ಮಳೆಯಲ್ಲಿ ಸುತ್ತಾರು ಜನರಿಲ್ಲ

ಹೆತ್ತವರತ್ತು ಕರೆದಾರೊ ಸರಸಿಯ

ಹೊತ್ತೊಯ್ದು ಗುಡಿಸಲಲಿಟ್ಟಾರೊ

*

ಉರಿಉರಿ ಗಂಟಲು ಉರಿಯೆಚ್ಚಿ ಗಂಟಲು

ಬೊಗಸೆ ನೀರನು ಬೇಡ್ಯಾಳೊ ಕಣ್ಣಲ್ಲಿ

ನೆತ್ತಾರ ಹನಿಯ ಮೂಡ್ಯಾವೊ

*

ಆ ಮನಿ ಈ ಮನಿ ನಡುಮನಿ ಕಡೆಮನಿ

ಎಲ್ಲಾ ಮನಿ ಕೊಡಪಾನ ತಂದಾರೊ ಬಾಯ್ತೆರೆದು

ಕುಡಿ ಮಗಳೆ ನೀರ ಎಂದಾರೊ

*

ನೀರೆಲ್ಲ ರಗುತಾಯ್ತು ಕೊಡಪಾನ ಕೆಂಪಾಯ್ತು

ಹಳ್ಳ ಕೆರೆ ಬಾವಿ ಇಂಗೋಯ್ತು ತಂಬಿಗೆ

ನೀರೆಂಬುದಂತು ಮಾಯಾಯ್ತು

*

ಗಂಡ ಹೆಂಡರು ಸೇರಿ ಮುಂಡಾದ ಬಳಿ ಸಾರಿ

ಕಂಡ ದೇವರಿಗೆ ಮುಗಿದಾರೊ ಕೆರೆದಂಡೆ

ಕೊನೆಯ ಬಂಡೆಗೆ ಬಂದಾರೊ

*

ಆ ಮಾರಿ ಈ ಮಾರಿ ಊರಿಗೆ ಉಗಿ ಮಾರಿ

ಉಗಿದುಗಿದು ಅತ್ತು ಕೇಳ್ಯಾರೊ ಕೈ ಮುಗಿದು

ಉಳಿಸಿಕೊಡು ಜೀವ ಎಂದಾರೊ

*

ಉತ್ತುತ್ತ ಊರೆಲ್ಲ ಕತ್ತಾಲಾಗೊ ಹೊತ್ತು

ಮಲ್ಲಪುರಗುಡ್ಡಕ್ಕೆ ಹೋಗಿರಿ ಮಲ್ಲಯ್ಯನ

ಕಲ್ಲೆಂದ ಬಾಯಿಂದ ಹರಸಿರಿ

*

ಕಲ್ಲೆಂದ ಬಾಯಿಂದ ಮಲ್ಲಯ್ಯನ ಹರಿಸಿ

ಮುಂಡಕ್ಕೆ ಹೆಂಡತಿ ಮಾಡೀರಿ ಮಗಳ

ಗಂಡನ ಮನೆಗಿತ್ತು ನಡೆಯೀರಿ

*

ಅಂದಿದ್ದು ಅರಿವಾಯ್ತು ಕೊಂದದ್ದು ತಪ್ಪಾಯ್ತು

ಎಂದಿಗೂ ನಾ ನಿನ್ನ ಮಗನಯ್ಯಾ ತಂದೆ

ಜೀವ ಕೂಡಿಸು ನಿನ್ನಿಛ್ಚೆಯೆಂದೆ

*

ಕರವೊಡ್ಡಿ ಬೇಡಲು ಕಣಗಿಲೆ ನೀಡಲು

ಜೀವ ಪಡೆದಾವೊ ಇಡುದೇಹ ಒಡನೆ

ಗಂಧ ಸುರಿದಾವೊ ಮೋಡ ಸಮನೆ

*

ಚೌಡಿಕೆ ಹಾಡೀತು ಬುಡುಬುಡಿಕಿ ನಕ್ಕೀತು

ಹಲಗೆ ಶಬುದಕ್ಕೆ ಹಗಲಾಯ್ತು ನಾಯಿಚೂರು

ನಿನ್ನೆದಲ್ಲ ಹಳತು ಹೊಸದಾಯ್ತು

*

ರಾತ್ರಿ ಕಂಡ ರಗುತ ಬೆಳಗಾನ ನೀರಾಯ್ತು

ಹಳ್ಳ ಬೆಳ್ಳಾನೆ ಬೆಳ್ಳಕ್ಕಿ ಆಯಿತು

ಮಲ್ಲಯ್ಯನ ಪವಾಡ ಬಯಲಾಯಿತು

*

ಉತ್ತುತ್ತ ಊರಲ್ಲಿ ಕೆರೆದಂಡೆ ಮನಿಯಲ್ಲಿ

ಉತ್ತಮರ ಕುಲದಾಗೆ ಹುಟ್ಟೇನಾ ಮೆಟ್ಟಿನ

ಮಲ್ಲಯ್ಯ ಮೆಚ್ಚಿನ ಮಗನೇನಾ

___________________________________________________

ಟಿಪ್ಪಣಿ :

ನಾಯಿಚೂರು :

ಹಿಂದೊಮ್ಮೆ ದಂಡನಾಯಕನೊಬ್ಬ ಈಗಿನ ರಾಯಚೂರು ಪ್ರಾಂತ್ಯದಲ್ಲಿ ವಾಯು ವಿಹಾರಕ್ಕೆ ಬಂದಾಗ ಮೊಲವೊಂದು ನಾಯಿಯನ್ನು ಬೆನ್ನಟ್ಟಿದ ದೃಶ್ಯ ಕಂಡನಂತೆ. ಕುತೂಹಲಕ್ಕೆ ಹೊಗಿ ನೋಡಿದರೆ ಮೊಲ ನಾಯಿಯನ್ನು ಚೂರಾಗಿ ಹರಿದು ಬಿಟ್ಟಿತ್ತಂತೆ. ನಾಯಿ ಸತ್ತ ಆ ಸ್ಥಳ ಕೋಟೆ ಕಟ್ಟಲು ಸೂಕ್ತಯೆನಿಸಿ; ಕೋಟೆ ಕಟ್ಟಿಸಿ ಅದಕ್ಕೆ ನಾಯಿಚೂರು ಎಂದು ಹೆಸರಿಟ್ಟನಂತೆ.

ಉಗುಳು ಮಾರಿ ದೇವರು :

ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರಿನಲ್ಲಿರುವ ಈ ದೇವರಿಗೆ ಉಗುಳುವ ಮೂಲಕ ನಮಿಸುವುದು ಇಲ್ಲಿಯ ವಿಶೇಷ.

‍ಲೇಖಕರು admin

4 December, 2015

1 Comment

  1. sangeetha raviraj

    ಅಬಿನಂದನೆಗಳು ಸರ್. ತುಂಬಾ ಮನಮುಟ್ಟುವಂತೆ ಬರೆದಿದ್ದೀರಿ
    ಸಂಗೀತ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading