ವಿಷಾದಗಳಿಲ್ಲದೇ ಎದ್ದು ನಡೆದನಾ ವಾರ್ನ್?
ರಮಾಕಾಂತ ಆರ್ಯನ್
ಫುಟ್ಬಾಲ್ ಫೀಲ್ಡ್ ನ ಮದಗಜ, ಫೀಲ್ಡ್ ಆಚೆಗಿನ ಘನಮದನ ಕಾಮರಾಜ, ಡಿಯಾಗೋ ಮರಾಡೋನಾನನ್ನ ಅನಾಮತ್ತಾಗಿ ಎತ್ತು ತಂದು ಲೆಗ್ ಸ್ಪಿನ್ ಬೌಲಿಂಗ್ ಮಾಡು ಎಂದರೆ ನಿಮಗೊಬ್ಬ ಶೇನ್ ವಾರ್ನ್ ಸಿಕ್ಕ ಎಂದೇ ಅರ್ಥ. ಹೌದು ಒಬ್ಬ ವ್ಯಕ್ತಿಯ ತುಂಬು ಜೀವನಕ್ಕೆ ಎಷ್ಟು ಅಷ್ಟೈಶ್ವರ್ಯ, ಸುಖ, ಭೋಗ, ಭಾಗ್ಯ ಸಿಗಬಹುದೋ ಎಲ್ಲವನ್ನೂ ಏರು ಜವ್ವನದಲ್ಲೇ ನೋಡಿದವನು ವಾರ್ನ್.
ಇಲ್ಲಿ ಮದಿರೆ, ಮಾನಿನಿ, ಉದ್ದೀಪನವನ್ನು ಬಿಡಿಸಿ ಹೇಳಬೇಕಾಗಿಲ್ಲ. ಅದೇಕೋ ಗೊತ್ತಿಲ್ಲ ಅವನ ನಿಗೂಢ ಎಸೆತಗಳಂತೆಯೇ ಅವನು ಕೂಡಾ ನಿಗೂಢವಾಗಿ ಅಂದರೆ ಕುಟುಂಬದವರು ಕಾರಣವನ್ನ ಬಿಟ್ಟು ಕೊಡದ ಮಟ್ಟಿಗೆ ತನ್ನ 52 ನೆಯ ವಯಸ್ಸಿಗೆ , ಥಾಯ್ಲೆಂಡ್ನಲ್ಲಿ ಈ ಲೋಕ ಬಿಟ್ಟು ಎದ್ದು ನಡೆದಿದ್ದಾನೆ. ಶೇನ್ ವಾರ್ನ್ ಎಂದರೆ ಇಷ್ಟೇನಾ? ಅವನು ಬರಿಯ ಇಂತಹ ಕಾರಣಕ್ಕೆ ಮಾತ್ರ ನೆನಪಿನಲ್ಲಿಳಿಯಬೇಕಾ? NO …..
ಇದರಾಚೆಗೆ ಶೇನ್ ವಾರ್ನ್ ಬದುಕನ್ನ ಅಲಿಪ್ತವಾಗಿ ನೋಡಿ ಬರೆಯಲಿಕ್ಕೆ ಅಸಾಧ್ಯ. ಅವನು ಎಲ್ಲವುಗಳ ರಸಾಯನ. ಕ್ರಿಕೆಟ್ ಲೋಕ ಅವನನ್ನ ಶತಮಾನದ ಕ್ರಿಕೆಟಿಗ ಎಂದು ಹೆಸರಿಸಿದ್ದರೆ, ಅವನು ಎಸೆದ ಚೆಂಡನ್ನ ಇಪ್ಪತ್ತನೆಯ ಶತಮಾನದ ವಿಸ್ಮಯಕಾರಿ ಎಸೆತ ಎಂದು ಮುಕ್ತ ಕಂಠದಿಂದ ಪ್ರಶಂಸಿಸಿದ್ದರೆ, ಅದಕ್ಕೆ ಅವನು ಸೂಕ್ತವಾಗಿಯೇ ಅರ್ಹ. ಹಾಗಾಗಿಯೇ ಶೇನ್ ವಾರ್ನ್ ಎಂಬ ಹುಡುಗನ ವಿಕ್ಷಿಪ್ತ ಬದುಕನ್ನ ಒಂದು ಮಗ್ಗುಲಿಗೆ ಸೀಮಿತವಾಗಿರಿಸಿ ಹೇಳಲಾಗದು .
ನಿಮಗೆ ಬ್ಯಾಟಿಂಗ್ ಜಗತ್ತಿನಲ್ಲಿ ಒಬ್ಬ ಡಾನ್ ಬ್ರಾಡ್ಮನ್, ಸರ್ ವಿವ್ ರಿಚರ್ಡ್ಸ್, ಸೋಬರ್ಸ್ ಮತ್ತು ಲಾರಾ ಎಂಬ ದೈತ್ಯರು ಸಿಕ್ಕಿಬಿಡಬಹುದು ಆದರೆ ಬೌಲಿಂಗ್ ಜಗತ್ತಿನಲ್ಲಿ ಅದೂ ಸ್ಪಿನ್ನರ್ ರೂಪದಲ್ಲಿ ಬ್ರಾಡ್ಮನ್ ಸಿಗಬೇಕೆಂದರೆ ಅದು ಶೇನ್ ಕೀತ್ ವಾರ್ನ್ ಅಲಿಯಾಸ್ ವಾರ್ನಿ ಮಾತ್ರ!
ಒಂದು ಸನ್ಸ್ರ್ಕೀನ್ ಲೋಶನ್ ಅಥವಾ ZINC ಅನ್ನ ಸೆಕ್ಸಿಯಾಗಿ ಮುಖಕ್ಕೆ ಹೇಗೆ ಹಚ್ಚಿಕೊಳ್ಳಬೇಕೆಂದು ಅವನು ಇಡೀ ಕ್ರಿಕೆಟ್ ಜಗತ್ತಿಗೆ ತೋರಿಸಿಕೊಟ್ಟವನು. ಅವನು ಕಾಸ್ಮೆಟಿಕ್ ಚಿಕಿತ್ಸೆಗಳ ಮೊರೆ ಹೋದಷ್ಟು,ಬಾಲಿವುಡ್ ನ ಯಾವ ಹೀರೋಯಿನ್ ಕೂಡಾ ಮೊರೆ ಹೋಗಿಲ್ಲ. ಸದಾ ಯುವಕನಾಗಿಯೇ ಇರಬೇಕೆಂದು ಕೂದಲಿನ ಟ್ರೀಟ್ಮೆಂಟ್ ಪಡೆದುಕೊಂಡಷ್ಟನ್ನ ಬಾಲಿವುಡ್ ನ ಯಾವ ಹೀರೋ ಕೂಡಾ ಪಡೆದುಕೊಂಡಿಲ್ಲ. ಇವನನ್ನ ಬಿಟ್ಟರೆ ಡೇವಿಡ್ ಬೆಕ್ ಹ್ಯಾಮ್ ಮಾತ್ರ! ಒಂಥರಾ ಸೊಗಸುಗಾರರು!

ವೇಗದ ನಾಡಿನಿಂದ ಬಂದು ಚೆಂಡಿಗೆ ಪ್ರಚಂಡ ತಿರುವುಗಳನ್ನ ತುಂಬಿ ಕಂಗೆಡಿಸಿದವನು. ಮೈಕ್ ಗ್ಯಾಟಿಂಗ್ ಎಂಬ ಬ್ಯಾಟ್ಸ್ಮನ್ ಅನ್ನ, ಅವನು ಬೌಲ್ಡ್ ಮಾಡಿದ್ದು ಶತಮಾನದ ಎಸೆತ. ಅಂದರೆ ನೂರು ವರ್ಷಕ್ಕೆ ಒಮ್ಮೆ ಮಾತ್ರ ಕಾಣಸಿಗುವಂತ ಎಸೆತ! ಜಸ್ಟ್ ವಾವ್!
ಅವನಂತೆ ಯಾರೂ ಇರಲಿಲ್ಲ, ಆ ಬಂಗಾರ ಬಣ್ಣದ ರೇಷ್ಮೆ ನುಣುಪಿನ ಕೂದಲು. ಹೊಳೆದೇ ಹೋಗುವಷ್ಟು ಬಿಳಿಯ ತೊಗಲಿನ ಮೇಲೆ ಅಂಟಿಸಿದಂತಿದ್ದ ನೀಲಿ ಕಣ್ಣುಗಳು. ಮೂಗಿನ ತುದಿಗೆ ಮಾತ್ರ ಸಾಕೆನ್ನುವಂತೆ ಕ್ರೀಮ್ ಹಚ್ಚಿಕೊಳ್ಳುತ್ತಿದ್ದ style! ಮನಮೋಹಕ!
ಬ್ಯಾಟ್ಸ್ಮನ್ಗಳನ್ನ ರೀಡ್ ಮಾಡುತ್ತಿದ್ದ ರೀತಿ, ಮೂರೇ ಮೂರು ಹೆಜ್ಜೆ ನಡೆದು ಬಂದು , ಬಾಲ್, ಬೆರಳ ತುದಿಯಿಂದ ಜಾರುವವರೆಗೆ ತುದಿನಾಲಿಗೆಯನ್ನ ಕಚ್ಚಿ ಹಿಡಿದು ತಿರುವು ತುಂಬುತ್ತಿದ್ದ ರೀತಿಯೇ ದೃಶ್ಯ ಕಾವ್ಯ.
ಎಷ್ಟೋ ಲೆಗ್ ಸ್ಪಿನ್ನರ್ಗಳು ಬಂದಿರಬಹುದು ಆದರೆ ಅವರಾರು ಶೇನ್ ಆಗಲು ಸಾಧ್ಯವಿಲ್ಲ. ಆಸ್ಟ್ರೇಲಿಯಾದಂತ ಹಸಿರು ಹುಲ್ಲಿನ ಪಿಚ್ಗಳಲ್ಲಿ ವೇಗದ ಬೌಲರ್ಗಳು ಅಬ್ಬರಿಸಿರುವ ನೆಲದಲ್ಲಿ ಅವನು ಚೆಂಡನ್ನ ಸ್ಪಿನ್ ಮಾಡಲು ಶುರು ಮಾಡಿದ್ದ. ಅದೊಂಥರಾ ಅಸಾಧ್ಯ ಸವಾಲು. ಆದರೆ ಟೆಸ್ಟ್ ಮತ್ತು ಒನ್ ಡೇ ಯಲ್ಲಿ ಒಟ್ಟು 1000 ವಿಕೆಟ್ಗಳನ್ನ ಕೆಡವಿದ ರೀತಿ ನಿಜಕ್ಕೂ ಅದ್ಭುತ. ಮುತ್ತಯ್ಯ ಮುರಳೀಧರನ್ ಬಿಟ್ಟರೆ ಅತೀ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಕ್ರಿಕೆಟಿಗ ಅವನು. ಮುತ್ತಯ್ಯ ಮುರಳೀಧರನ್ ಅಭ್ಯಾಸ ಮಾಡಿದ್ದು ಏಷ್ಯಾ ಉಪಖಂಡದಲ್ಲಿ. ಸ್ಪಿನ್ನರ್ಗಳ ಪಾಲಿನ ಸ್ವರ್ಗದಲ್ಲಿ . ಆದರೆ ವಾರ್ನ್ ಡಿಫರೆಂಟ್.
ಶೇನ್ ನಲ್ಲಿ ಒಂದು ಸ್ಪೆಷಾಲಿಟಿ ಇತ್ತು. ಅದು ಬ್ಯಾಟ್ಸ್ಮನ್ ನ ಪ್ರತೀ ಹೊಡೆತಕ್ಕೂ ಮುಂಚೆ ಮನಃಶಾಸ್ರ್ತೀಯವಾಗಿ ಓದಿಕೊಳ್ಳವುದು. ಶೇನ್ನ ಹೊಳೆಯುವ ನೀಲಿ ಕಣ್ಣುಗಳಿಗೆ ಬ್ಯಾಟ್ಸ್ಮನ್ನ ಹೊಡೆತಗಳ ಹೊಳಹುಗಳು ಅದು ಹೇಗೋ ಅರ್ಥವಾಗುತ್ತಿತ್ತು. ಈ ವಿಚಾರದಲ್ಲಿ ಶೇನ್ ಎಡವಿದ್ದೇ ಇಲ್ಲ. ಅವನು ನಡೆದದ್ದೇ ದಾರಿ.
ಶೇನ್ ಬೆರಳಿಂದ ಮತ್ತು ಮಣಿಕಟ್ಟಿಂದ ಜಾದೂ ಮಾಡಬಲ್ಲವನಾಗಿದ್ದ. ಅವನಷ್ಟು ಚೆಂಡನ್ನ ತಿರುಗಿಸಿ ಬೌಲ್ಡ್ ಮಾಡಿದ ಇನ್ನೊಬ್ಬ ಆಟಗಾರ ಹಿಂದೆಯೂ ಇರಲಿಲ್ಲ. ಸದ್ಯ ಆಡುತ್ತಿಲ್ಲ. ಅವೆಲ್ಲಾ ಮಾಯದ ಎಸೆತಗಳು. ಔಟಾದ ಬ್ಯಾಟ್ಸ್ಮನ್ನ ಹುಬ್ಬು, ಕಣ್ಣು, ಬಾಯಿ, ಗಲ್ಲ ಮತ್ತು ಬಾಡಿ ಲಾಂಗ್ವೇಜ್ ಅದೆಂಥಾ ಮಾಯದ ಎಸೆತಕ್ಕೆ ತಾನು ಬಲಿಯಾಗಿ ಬಿಟ್ಟೆ ಎಂದು ಕಮೆಂಟೇಟರ್ಗಿಂತಾ ಚೆನ್ನಾಗಿ ಹೇಳುತ್ತಿದ್ದವು. ಶೇನ್ absolute clue less!

ಚೆಂಡು ಸ್ವಲ್ಪ ಹಳೆಯದಾದರೆ, ವಾಸಿಮ್ ಅಕ್ರಮ್ ಅದೆಂಥಾ ರಿವರ್ಸ್ ಸ್ವಿಂಗ್ ತುಂಬುತ್ತಿದ್ದನೋ ಅಂಥದ್ದೇ ಮ್ಯಾಜಿಕ್ ಅನ್ನ ಶೇನ್ ವಾರ್ನ್ ಸ್ಪಿನ್ ನಲ್ಲಿ ಮಾಡುತ್ತಿದ್ದ. ಶೇನ್ ಕೈಯಿಂದ ಜಾರಿದ ಚೆಂಡು ನೆಲದ ಮೇಲೆ ಬಿದ್ದು ಒಂದು ವಿಚಿತ್ರ drift ಆಗುತ್ತಿತ್ತು. ಬ್ಯಾಟ್ಸ್ಮನ್ ತನ್ನ ಕಟ್ಟಕಡೆಯ ಮಿಸ್ಟೇಕ್ ಮಾಡಲೆಂದೇ ಆ ಚೆಂಡು ಹೊಂಚು ಹಾಕಿ ಕಾದು ಅವನಿಗೆ ಚಳ್ಳೆಹಣ್ಣು ತಿನ್ನಿಸಿಬಿಡುತ್ತಿತ್ತು. ಶೇನ್ ಕೆಡವಿದ ಅರ್ಧಕ್ಕರ್ಧ ವಿಕೆಟ್ಗಳು ಮೋಡದ ಮೇಲಿಂದ ಬಿದ್ದಂತ ಫ್ಲೈಟ್ ಎಸೆತಕ್ಕೆ ಸಿಕ್ಕರೆ, ಇನ್ನರ್ಧ ವಿಕೆಟ್ಗಳು ಪಿಚ್ನ ಮೇಲೆ ಬಾಲ್ ಬಿದ್ದನಂತರ ಬ್ಯಾಟ್ಸ್ಮನ್ಗಳನ್ನ ಭ್ರಮಗೆ ಕೆಡವಿ ಅವನನ್ನ ಮನೆಗೆ ಕಳಿಸುತ್ತಿದ್ದವು. ಅವನ ಎಸೆತೆಗಳು ಹಾಗೆ ಭ್ರಮಾಧೀನ! ಕೆಲವು ಮರಾಮೋಸ, ಕೆಲವು ಅನೂಹ್ಯ, ಇನ್ನೂ ಕೆಲವು ಮಾಯಾಜಾಲ!
ಶತಮಾನದ ಎಸೆತಕ್ಕೆ ಔಟ್ ಆದ ಮೈಕ್ ಗ್ಯಾಟಿಂಗ್ನ ಮುಖಭಾವ ಎಂದೂ ಮರೆಯಲಾಗದು. ಅದೊಂಥರಾ ಏಕಕಾಲದಲ್ಲಿ ಇಬ್ಬರು ಬೌಲರ್ಗಳು ಎರಡೂ ಎಂಡ್ಗಳಿಂದ ಬೌಲ್ ಮಾಡಿ ತನ್ನನ್ನ ಔಟ್ ಮಾಡಿಬಿಟ್ಟರೇನೋ ಎನ್ನುವಂಥಾ ರಿಯಾಕ್ಷನ್! Ball of the century!
ಒಬ್ಬ ಒಳ್ಳೆಯ ಬೌಲರ್ ತಾನು ಅತ್ಯದ್ಭುತವಾಗಿ ಬೌಲಿಂಗ್ ಮಾಡಬೇಕೆಂದು ಕನಸುಗಳನ್ನೆಲ್ಲಾ ಹೊಸೆದಿದ್ದರೆ, ಆ ಎಲ್ಲ ಕನಸುಗಳೂ ವಾರ್ನ್ ಬೌಲಿಂಗ್ ರೂಪದಲ್ಲಿರುತ್ತವೆ. ಫ್ಲಿಪ್ಪರ್, ಲೆಗ್ ಬ್ರೇಕ್, ಗೂಗ್ಲಿ, ಸ್ಕಿಡ್ಡರ್, ಬೌನ್ಸರ್, ಎಲ್ಲವೂ ಇತ್ತು. ಇದು ಸಾಲದು ಅಂತ zooter ಎನ್ನುವ ಅಸ್ತ್ರವೂ ಶೇನ್ ಬಳಿ ಇತ್ತು. ಇದು ಚೆಂಡಿಗೆ ಹಿಮ್ಮುಖ ಚಲನೆ ತುಂಬುತ್ತಾ, ಬ್ಯಾಟ್ಸ್ಮನ್ ಊಹೆ ಮಾಡಿದ ವೇಗಕ್ಕಿಂತ ವೇಗ ತಗ್ಗಿ, ಹೆಚ್ಚು ಪುಟಿಯದೇ, ಸ್ವಲ್ಪ ಜಾರಿದ ರೀತಿ ಇದ್ದಕ್ಕಿದ್ದಂತೆ ವಿಕೆಟ್ಗೆ ಬಡಿದುಬಿಡುವ ಅಸ್ತ್ರ. ಆದರೆ ಶೇನ್ ಈ ಅಸ್ತ್ರ ಬಿಡುವ ಮುನ್ನ, ಬ್ಯಾಟ್ಸ್ಮನ್ ಎತ್ತರ, ಅವನು ವಿಕೆಟ್ನ ಯಾವ ಭಾಗದಲ್ಲಿ ನಿಂತಿದ್ದಾನೆ. ಅವನು ಈವರೆಗೂ ಆಡಿದ ಶಾಟ್ಸ್, ಅವನ ಮೂಡ್, ನೆಕ್ಸ್ಟ್ ಅವನ ಧಾವಂತ, ಅವನು ಡಿಫೆಂಡಿಂಗ್ Mode ಹೋಗುತ್ತಾನಾ ಅಥವಾ ಅಟ್ಯಾಕಿಂಗ್ Modeನಲ್ಲಿ ಆಡುತ್ತಾನಾ? ಎಲ್ಲವನ್ನೂ ಸೆಕೆಂಡಿನ ಅರ್ಧ ಭಾಗದಲ್ಲಿ ಅಳೆದಿರುತ್ತಿದ್ದ.
ಬ್ಯಾಟ್ಸ್ಮನ್ ತೀರಾ ಬ್ಯಾಟ್ ಅನ್ನ ನೆಲಕ್ಕೆ ಕುಕ್ಕುವಂತೆ ಬೆನ್ನು ಮೂಳೆಗೆ ಕೆಲಸ ಕೊಟ್ಟಿದ್ದರೆ ಮಾತ್ರ ಈ ಅಸ್ತ್ರದಿಂದ ಬಚಾವ್ ಆಗುತ್ತಿದ್ದ. ಆದರೆ ಔಟಾದ ಮೇಲೆ ಬಹುತೇಕ ಬ್ಯಾಟ್ಸ್ ಮನ್ ಗಳು ಹೀಗೆ ಆಡಬೇಕಿತ್ತು ಅಂತಾ ತಮ್ಮನ್ನ ತಾವೇ ಹಳಿದುಕೊಳ್ಳುತ್ತಿದ್ದರೆ, ಶೇನ್ ವಿಕೆಟ್ ಕಿತ್ತ ಸಂಭ್ರಮದಲ್ಲಿ ಹೊಳೆಯುತ್ತಿರುತ್ತಿದ್ದ.

ಶೇನ್ Sledging ನಲ್ಲೂ ಎತ್ತಿದ ಕೈ. ಪಂದ್ಯದಲ್ಲೂ, ಪಂದ್ಯದ ಹೊರಗೂ! ಒಂದು ಸರಣಿಗಿಂತ ಮುಂಚೆಯೇ ಎದುರಾಳಿ ಬಳಗದ ಒಬ್ಬ ಇಂಪಾರ್ಟೆಂಟ್ ಬ್ಯಾಟ್ಸ್ಮನ್ನನ್ನ ಹುರಿದು ಮುಕ್ಕಿರುತ್ತಿದ್ದ. ಎಲ್ಲರೂ ಒಂದು ಕಡೆ ಪ್ರಾಕ್ಟೀಸ್ ಮಾಡಿದರೆ, ಶೇನ್ ಮೈದಾನದ ಯಾವುದೋ ಮೂಲೆಯಲ್ಲಿ ರಹಸ್ಯ ಎನ್ನುವ ರೀತಿಯಲ್ಲಿ ಪ್ರಾಕ್ಟೀಸ್ ಮಾಡಿರುತ್ತಿದ್ದ. ಮಾತಿನ ಪಂಚ್ಗಳಿಗೆ ಮೆತ್ತಗಾಗಿರುತ್ತಿದ್ದ ಎಷ್ಟೋ ಬ್ಯಾಟ್ಸ್ಮನ್ಗಳು ಆ ಮೇಲೆ ಸರಣಿಯಲ್ಲಿಯೂ ಶೇನ್ನ ಹರಕೆಯ ಕುರಿಗಳಾಗುತ್ತಿದ್ದರು. ಆಶಸ್ ಸರಣಿಗಳಲ್ಲಂತೂ ಈ ಬಲಿಗಳು ಅತೀ ಹೆಚ್ಚು.
ಟೆಸ್ಟ್ನಲ್ಲಿ ಒಂದು ಇನಿಂಗ್ಸ್ ನಲ್ಲಿ ಅತೀ ಹೆಚ್ಚು ಅಂದರೆ 99 ರನ್ ಬಾರಿಸಿದ್ದಾನೆ ವಾರ್ನ್. ಬ್ಯಾಟಿಂಗ್ ನಲ್ಲಿ ಸಣ್ಣ ಮಿಂಚು. ಸ್ಲಿಪ್ನಲ್ಲಿ ಅದ್ಭುತ ಫೀಲ್ಡರ್. ಇದರಾಚೆಗೆ ಅವನೊಂಥರಾ ಸೈಕಿಯಾಟ್ರಿಸ್ಟ್. ತಂಡಕ್ಕೆ ಮೈದಾನದ ಒಳಗೆ ಯಾವಾಗಲೂ ಬೇಕಿದ್ದ ಮನೋವೈದ್ಯ. ಅತ್ಯದ್ಭುತ ಟ್ರಿಕ್ಸ್ಗಳನ್ನ ಕ್ಯಾಪ್ಟನ್ಗೆ ಹೇಳಿಕೊಟ್ಟು ಅನೇಕ ಗೆಲುವುಗಳಿಗೆ ಕಾರಣನಾಗಿದ್ದಾನೆ ಶೇನ್! ರಾಜಸ್ತಾನ್ ರಾಯಲ್ಸ್ನಂತಹ ಅಂಡರ್ ಡಾಗ್ ತಂಡವನ್ನ ಚೊಚ್ಚಲ ಐಪಿಎಲ್ನಲ್ಲಿ ಕಿರೀಟ ತೊಡುವಂತೆ ಮಾಡಿದ ಕೋಚ್ ಅಂಡ್ ಕ್ಯಾಪ್ಟನ್ ಅವನು.
ಮಿಸ್ಟರ್ ಹಾಲಿವುಡ್! ಒಂದು ತುಂಬು ಜೀವನವನ್ನ ನಡೆಸಬೇಕೆನ್ನುವ ಉಮೇದು ಇತ್ತವನಿಗೆ. ಹಾಗಾಗೆ ಚಿರಯುವಕನಂತೆ ಕಾಣಬೇಕೆನ್ನುವ ಎಲ್ಲ ಹಂಬಲಗಳೂ ಕುಣಿಸಿದಂತೆ ಕುಣಿಯುತ್ತಿದ್ದ. ಚೆಂಡಿನಂತೆ ಪುಟಿಯುತ್ತಿದ್ದ. ಇನ್ನೂ ಅರ್ಧ ಬದುಕು ಇದ್ದಂತೆ 52 ವರ್ಷಕ್ಕೆ ಎಲ್ಲವನ್ನೂ ಆನಂದಿಸಿ, ಆಲಂಗಿಸಿ, ಆಸ್ವಾದಿಸಿ, ಮೋಹಿಸಿ, ರಮಿಸಿ ಕಾಮಿಸಿ ಎದ್ದು ನಡೆದಿದ್ದಾನೆ. ಅವನು ಎಲ್ಲವುಗಳ ವಿಪರೀತ ಸಂಗಮ, ಜೊತೆಗೆ ವಿವಾದಾತ್ಮಕವಾಗಿಯಾಗಿದರೂ ಒಪ್ಪಿಕೊಳ್ಳಬೇಕಾದವನು. ಬರೆದರೆ ಮುಗಿಯದವನು, ಮರೆಯಲಾಗದವನು!






0 Comments