ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರತ್ನಮ್ಮ ಇವತ್ತು ತೀರಿಕೊಂಡರು..

 

 

 

 

 

ಆರ್ ಟಿ ವಿಠ್ಠಲಮೂರ್ತಿ 

 

 

 

ಒಬ್ಬ ಪ್ರಬಲ ಸಮಾಜವಾದಿ ನಾಯಕನನ್ನು
ರೂಪಿಸಿದ ಶಕ್ತಿ ಕಣ್ಮರೆಯಾಯಿತು

ನನ್ನಂತಹ ಅಸಂಖ್ಯಾತ ಮಕ್ಕಳಿಗೆ ತಾಯಿಯ ಪ್ರೀತಿ ಕೊಟ್ಟ ಶ್ರೀಮತಿ ರತ್ನಮ್ಮ ಇವತ್ತು ತೀರಿಕೊಂಡರು.

ತುಂಬ ಜನರಿಗೆ ಶ್ರೀಮತಿ ರತ್ನಮ್ಮ ಅಂತ ಹೇಳಿದರೆ ಗೊತ್ತಾಗದೇ ಇರಬಹುದು.ಆದರೆ ನಾಡು ಕಂಡ ಅಪ್ರತಿಮ ಸಮಾಜವಾದಿ ನಾಯಕ ಎಸ್.ಎಸ್. ಕುಮಟಾ ಅವರ ಪತ್ನಿ ಎಂದರೆ ಮನಸ್ಸೆಂಬ ಬೇರಿಗೆ ನೀರಿಳಿದಷ್ಟು ಸುಲಭವಾಗಿ ಗೊತ್ತಾಗುತ್ತದೆ.

ಸಮಾಜವಾದಿ ನಾಯಕರ ಪೈಕಿ ಕೆಲವರು ಪರಿಸ್ಥಿತಿಗೆ ಹೊಂದಿಕೊಂಡು ಬಂಡವಾಳಷಾಹಿಗಳಾದರು, ಅಧಿಕಾರ ಅನುಭವಿಸಿದರು.

ಇಂತವರನ್ನು ನೋಡಿ, ಸಮಾಜವಾದಿಗಳೆಲ್ಲ ಮಜಾವಾದಿಗಳಾದರು ಎಂದು ಹಲವರು ಕ್ಲೀಶೆಯ ಮಾತುಗಳನ್ನಾಡುತ್ತಾರೆ. ಆದರೆ ವಾಸ್ತವವೆಂದರೆ ಸಮ ಸಮಾಜದ ಕನಸು ಕಂಡು,ಬದುಕಿನುದ್ದ ಹೋರಾಡಿ, ಬಡತನವನ್ನೇ ಹಾಸಿ, ಹೊದ್ದುಕೊಂಡ ನಿಜವಾದ ಸಮಾಜವಾದಿಗಳ ಸಂಖ್ಯೆ ಕನಿಷ್ಟವೆಂದರೂ ಶೇಕಡಾ ತೊಂಭತ್ತೈದರಷ್ಟು.

ಎಸ್.ಎಸ್.ಕುಮಟಾ ಕೂಡಾ ಅಂತಹ ಸಮಾಜವಾದಿ.

ಅಂತವರ ಬದುಕಿಗೆ ಪ್ರವೇಶಿಸಿದ ಶ್ರೀಮತಿ ರತ್ನಮ್ಮ ಕುಮಟಾ ಕೂಡಾ ನಿಜವಾದ ಅರ್ಥದಲ್ಲಿ ಸಮಾಜವಾದಿ. ಪತಿಯನ್ನು ಸಮಾಜವಾದದ ಹೋರಾಟದಲ್ಲಿರಲು ಅನುವು ಮಾಡಿಕೊಟ್ಟು ತುಂಬು ಸಂಸಾರದ ನೊಗವನ್ನು ಹೊತ್ತ ತಾಯಿ ಅವರು.

‘ಯೇ, ನಿಮ್ಮ ಸಮಾಜವಾದದ ಗೊಡವೆಯೇ ಬೇಡ. ಮೊದಲು ಮನೆ, ಅಮೇಲೆ ಜನ’ ಅಂತ ಆ ತಾಯಿ ಪಟ್ಟು ಹಿಡಿದು ಕುಳಿತಿದ್ದರೆ ಅಸಂಖ್ಯಾತ ಬಡ ಬದುಕುಗಳಿಗೆ ಚೈತನ್ಯ ನೀಡುವ ಎಸ್.ಎಸ್. ಕುಮಟಾ ಅವರಂತಹ ಸಮಾಜವಾದಿ ನಾಯಕ ಸೃಷ್ಟಿಯಾಗುತ್ತಲೇ ಇರಲಿಲ್ಲ.

ಯಾಕೆಂದರೆ ಸಮ ಸಮಾಜದ ಕನಸು ಕಾಣುವ ಕಣ್ಣುಗಳಿಗೆ, ಮನಸ್ಸುಗಳಿಗೆ ತಮ್ಮ ತ್ಯಾಗದ ಮೂಲಕ ಕಸುವು ತುಂಬುವ ಮನಸ್ಸುಗಳು ಬೇಕೇ ಬೇಕು. ಎಸ್.ಎಸ್.ಕುಮಟಾ ಅವರಿಗೆ ಇಂತಹ ಕಸುವು ತುಂಬಿದವರು ಶ್ರೀಮತಿ ರತ್ನಮ್ಮ ಎಸ್.ಕುಮಟಾ.

ಅವರ ಹಿರಿ ಮಗಳು ಪದ್ಮಾ ಕುಮಟಾ ಕಳೆದ ವರ್ಷ ತೀರಿಕೊಂಡರು. ಉಳಿದಂತೆ ಅವರ ಮಕ್ಕಳಾದ ಮಮತಕ್ಕ, ಸುಜಾತ ಕುಮಟಾ, ಸುಬ್ರಮಣ್ಯ ಕುಮಟಾ, ಮೈತ್ರಿ.. ಹೀಗೆ ಎಲ್ಲರೂ ಬದುಕಿನ ಜತೆ ತಂದೆಯಂತೆಯೇ ಒಡನಾಡಿದವರು. ಇವರ ಪೈಕಿ ಸುಬ್ರಮಣ್ಯ ಕುಮಟಾ ನನ್ನ ಸಹಪಾಠಿ. ಈಗ ವಿಧಾನಸೌಧದಲ್ಲಿ ಕೆಲಸ ಮಾಡುತ್ತಿದ್ದಾನೆ.

ಆದರೆ ಎಲ್ಲದರ ನಡುವೆಯೂ ಬದುಕನ್ನು ಪತಿಗಾಗಿ, ಆ ಮೂಲಕ ಸಮಾಜಕ್ಕಾಗಿ ಅರ್ಪಿಸಿದ ಶ್ರೀಮತಿ ರತ್ನಮ್ಮ ಇವತ್ತು ತೀರಿಕೊಂಡಿದ್ದಾರೆ. ಆದರೆ ಲಕ್ಷಾಂತರ ಮನಸ್ಸುಗಳಲ್ಲಿ ಖಾಯಂ ಆಗಿ ಉಳಿದುಕೊಂಡಿದ್ದಾರೆ.

ನಮ್ಮ ಬದುಕು ಮೊದಲು,ಉಳಿದವರ ಗೋಜಲು ನಮಗೇಕೆ ಎನ್ನುವ ಮನ:ಸ್ಥಿತಿಗಳು ಹೆಚ್ಚಾಗುತ್ತಿರುವ ಜಾಗತೀಕರಣದ ಈ ಕಾಲಘಟ್ಟದಲ್ಲಿ ಈ ತಾಯಿಯ ಬದುಕು ನಿಜವಾದ ಆದರ್ಶದಂತೆ ಕಾಣುವುದು ಸಹಜ.

‍ಲೇಖಕರು avadhi

16 January, 2018

1 Comment

  1. Sudha ChidanandGowd

    ಈ ತಾಯಿಯವರ ಕುರಿತು ಕೇಳಿದ್ದೆ.
    ಯಾವ ತಾಯಿ ತೀರಿಹೋದರೂ ಒಂದು ಅನಾಥಪ್ರಜ್ಣ ಕಾಡುತ್ತದೆ.
    ಅಮ್ಮಂದಿರ ಸಾವು- ಹೃದಯ ಹೆಪ್ಪುಗಟ್ಟಿಸುವ ಎಂದೂ ಕರಗದ ತಣ್ಣನೆಯ ವಿಷಣ್ಣಭಾವ…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading