ಒಂಟೆಯ ಗಾಡಿ ತನ್ನ paceನಲ್ಲಿ ಹೊರಟಿತ್ತು. ನಾನು ನಂದನ್ ನೊಡನೆ ಕನ್ನಡದಲ್ಲಿ ಮಾತನಾಡುತ್ತಿದ್ದರೆ ಒಂಟೆ ಗಾಡಿಯಲ್ಲಿದ್ದ ಹುಡುಗಿಯರ ಗುಂಪೊಂದು ನಮ್ಮನ್ನು ಮಾತನಾಡಿಸಿತು. ಆ ಮೂರು ಹುಡುಗಿಯರೂ ಬೆಂಗಳೂರಿನಿಂದ ಗುಜರಾತ್ ಗೆ ಬಂದಿದ್ದರು. ಹಿಂದಿನ ದಿನ ಅಹ್ಮದಾಬಾದ್ ನಲ್ಲಿ ಪತಂಗ ಉತ್ಸವದಲ್ಲಿ ಭಾಗವಹಿಸಿ, ಅಂದು ಅಹ್ಮದಾಬಾದ್ನಿಂದ ರಣ್ ಗೆ ಕಾರ್ ಡ್ರೈವ್ ಮಾಡಿಕೊಂಡು ಬಂದಿದ್ದರು. ಮುಂದೊಂದು ದಿನ ನನಗೂ ಇಂಥ ಸಹಚಾರಿಗಳು ಸಿಗಬಹುದೇ? ಎಂಬ ಆಲೋಚನೆ ಸುಳಿದು ಹೋಯಿತು. ಕ್ಷಣಗಳಲ್ಲೇ ನಂದನ್ ಮತ್ತು ಅವರ ಗೆಳೆತನ ಜೋರಾಗೇ ಕುದುರಿತ್ತು. ನಾನು ನನ್ನ ಕ್ಯಾಮೆರಾನೊಂದಿಗೆ ವ್ಯಸ್ತಳಾದೆ. ಸಂಜೆ ಹತ್ತಿರ ಹತ್ತಿರ ಸುಳಿಯುತ್ತಲಿತ್ತು, ಜೊತೆಯಲಿ ಒಂಟೆ ಗಾಡಿಯ ನಿಧಾನ ಗತಿಯ, ಕುಲುಕುವ, ಲಯಭರಿತ ಚಲನೆ! ಒಂಥರಾ ಮುದ ನೀಡುವ ಅನುಭವ.
ಸ್ವಲ್ಪ ಸಮಯದ ನಂತರ ಟಾರ್ ರಸ್ತೆಯಿಂದ ಕೆಳಗಿಳಿದು ಒಂಟೆ ಗಾಡಿ ಮತ್ತದೇ ವಿಶಾಲ ಮೈದಾನದಲ್ಲಿ ಚಲಿಸತೊಡಗಿತ್ತು. ಸುತ್ತ -ಮುತ್ತ ಇತರ ಒಂಟೆ ಗಾಡಿಗಳು, ರಭಸವಾಗಿ ಗಾಳಿಯನ್ನು ಭೇದಿಸಿ ಸಾಗುತ್ತಿದ್ದ ಹಲವು ವಾಹನಗಳು, ಅವರಿವರ ಸಂಭಾಷಣೆಗಳ ಹಿಮ್ಮೇಳ ಇತ್ಯಾದಿ… ನಂದನ್ ಒಂಟೆ ಗಾಡಿ ಓಡಿಸುವವರ ಒಡಗೂಡಿ ಕುಳಿತಿದ್ದ. ಕೊನೆಗೆ ವೈಟ್ ರಣ್ ಹತ್ತಿರ ಬಂದಿಳಿದಾಗ, ನಂದನ್ ಒಂಟೆ ಗಾಡಿ ಓಡಿಸುವ ಫೋಟೋ ತೆಗೆಯೋಣವೆಂದು ಅವನನ್ನು ಅಲ್ಲೇ ಕುಳಿತಿರಲು ಹೇಳಿದೆ. ಎಲ್ಲರೂ ಇಳಿದು ಹೋದೊಡನೆ ಒಂಟೆ ಅದೇ ಘಳಿಗೆಗೆ ಕಾಯುತ್ತಿದ್ದಂತೆ ತನ್ನ ನಿಸರ್ಗ ಕರೆಗೆ ಓಗೊಟ್ಟಿತು. ಯಾಕೋ ಒಂಟೆಗೆ ಡಿಸ್ಟರ್ಬ್ ಮಾಡುವ ಮನಸಾಗಲಿಲ್ಲ. ನಂದನ್ ನ ಕೆಳಗಿಳಿಸಿ, ಅಲ್ಲೇ ಸುತ್ತಲೆಲ್ಲ ನಿಂತಿದ್ದ ಒಂಟೆ ಗಾಡಿಗಳನ್ನು ಕೆಲ ಸಮಯ ವೀಕ್ಷಿಸುತ್ತಾ ಕಳೆದೆ. ಹಾಗೆ ನೋಡುವಾಗ ಒಂದು ಒಂಟೆ ಆಕಳಿಸುತ್ತಿತ್ತು, ಇನ್ನೊಂದು ಕಣ್ಮುಚ್ಚಿ ಧ್ಯಾನಿಸುತ್ತಿತ್ತು! ಆ ಧ್ಯಾನಸ್ತ ಒಂಟೆಗೆ ತೀರ ಸನಿಹ ನಿಂತಿದ್ದೆವೆನಿಸುತ್ತದೆ, ಅದರ ಧ್ಯಾನದ ಮಧ್ಯೆ ಅದಕ್ಕೊಂದು ಸೀನು ಬಂದು ನಮಗೊಂದಿಷ್ಟು ಪ್ರೋಕ್ಷಣೆ. ನಂದನ್ ಮತ್ತು ನನ್ನ ಕಿಲ-ಕಿಲ ನಗು. ಅಂತೂ ಕೊನೆಗೆ ವೈಟ್ ರಣ್ ನೆಡೆಗೆ ಹೆಜ್ಜೆಯಿಡಲು ಪ್ರಾರಂಭಿಸಿದಾಗ ಮಾತಿಗೆ ಮೀರಿದ ಪುಳಕ…
ಹೆಜ್ಜೆಗಳು ಮುಂದೆ ಸಾಗುತಲಿದ್ದವು. ಮುಸ್ಸಂಜೆಯ ಹಿತವಾದ ಬಿಸಿಲಿನಲ್ಲಿ ಫಳ-ಫಳ ಹೊಳೆಯುತಿದ್ದ ಬಿಳಿಯ ಬಣ್ಣದ ಉಪ್ಪು ಮರಳು, ಪ್ರತಿ ಹೆಜ್ಜೆಯ ಸ್ಪರ್ಶಕೂ ‘ಕರ್’ಗುಟ್ಟುವ ಸದ್ದು, ದೃಷ್ಟಿ ಸಾಗಿದಷ್ಟು ದೂರ ಬಿಳಿಯ ಹಾಸು, ದೂರದಿಂದ ತೇಲಿ ಬರುತ್ತಿದ್ದ ಸಂಗೀತದ ಅಲೆ, ವಿಶಾಲ ಬಯಲಿನಲ್ಲಿ, ಸವಾರನ ನಿರ್ದೇಶನಕ್ಕೆ ತಕ್ಕಂತೆ ಅಲ್ಲಲ್ಲಿ ಓಡುತ್ತಿದ್ದ ಕುದುರೆಗಳು, ಮೆಲ್ಲಗೆ ಸಾಗುತ್ತಿದ್ದ ಒಂಟೆಗಳು, ಮಕ್ಕಳ ಕೇಕೆ, ಜೊತೆ-ಜೊತೆಯಾಗಿ ನಡೆಯುತ್ತಿದ್ದ ನೆರಳು… ಒಂದು ಸಂಜೆಯ walk ಗೆ ಅದೆಷ್ಟು ಮಗ್ಗಲುಗಳು! ನಂದನ್ ಆಗಲೇ ನನ್ನ ಬಿಟ್ಟು ಅದೆಷ್ಟೋ ದೂರ ಓಡಿಬಿಟ್ಟಿದ್ದ. ನನ್ನ ಕಣ್ಣುಗಳು ನನ್ನದೇ ನೆರಳ ಮೇಲೆ, ಹಾಗೆ ನೋಡುವಾಗ ಆ ನೆಲದ ಕಂದು ಮಿಶ್ರಿತ ಉಪ್ಪು ಮರಳು ಮತ್ತಷ್ಟು ಮಿಂಚಿದಂತೆನಿಸಿ ನಡೆಯುವುದನ್ನು ನಿಲ್ಲಿಸಿ ಮಂಡಿಯೂರಿ ಕೆಳಗೆ ಕುಳಿತುಬಿಟ್ಟೆ. ಮರಳುಪ್ಪಿನ ಒಂದು ಕಣವನ್ನು ಅಂಗೈಲಿ ಹಿಡಿದು ದಿಟ್ಟಿಸಿದರೆ ಅದು ಸಂಜೆ ಸೂರ್ಯನ ಬೆಳಕಿಗೆ ಮಿರ ಮಿರ ಮಿಂಚತೊಡಗಿತ್ತು… ಅದರಡಿಗೆ ನನ್ನ ಅಂಗೈನ ರೇಖೆಗಳು ಎಂದಿನಂತೆ ತಮ್ಮ ನಿಗೂಢ ಕಥೆಯೊಡನೆ ಮೌನವಾಗಿದ್ದವು, ಆ ಕ್ಷಣಕ್ಕೆ ಉಪ್ಪಿನ ಕಣದ ಸ್ಪರ್ಶವನ್ನು ಅನುಭವಿಸುತ್ತ!
ಮತ್ತೆ ಎದ್ದು ಇನ್ನಷ್ಟು ದೂರ ನಡೆದ ಮೇಲೆ ಮತ್ತೊಂದಿಷ್ಟು ಫೋಟೋಗ್ರಾಫಿ ಟೈಮ್. ಕೆಲ ಸಮಯದ ಹಿಂದೆ ದೂರದಿಂದ ಕೇಳಿ ಬರುತ್ತಿದ್ದ ಸಂಗೀತ ಅಲೆ ಈಗ ಹತ್ತಿರವಾಗುತ್ತಿತ್ತು. ಕಿವಿಗಳು ಇನ್ನಷ್ಟು ನಿಮಿರತೊಡಗಿದ್ದವು. ಆ ದನಿಯೆಡೆಗೆ ಕಣ್ಣು ಹರಿದಾಗ, ನವಿರು ಸಂಜೆಯ ಬಂಗಾರ ಮಿಶ್ರಿತ ಕೇಸರಿಯಡಿಯಲ್ಲಿ, ಬಿಳಿ ಮರಳು ಹಾಸಿನ ಮೇಲೆ, ತೀರ ತಲ್ಲೀನನಾಗಿ ಹಾಡುತ್ತಿದ್ದ ಗುಜರಾತಿ ಜಾನಪದ ಹಾಡುಗಾರ. ತನ್ನ ಮಾಂತ್ರಿಕ ದನಿಯಲ್ಲಿ ಅವನು ಗುಜರಾತಿ ಜಾನಪದ ಗೀತೆಗಳನ್ನು ಹೇಳುತ್ತಿದ್ದರೆ, ಅಲ್ಲಿನ ಜನರೆಲ್ಲಾ ಅವನ ಹಾಡಿಗೆ ಕಿವಿಯಾಗಿ, ಲಯವಾಗಿ, ತಾಳವಾಗಿ, ಭಾವವಾಗಿ, ನಾಟ್ಯವಾಗಿ ಆನಂದಿಸುತ್ತಿದರು. ಕೆಲವು ಜೋಡಿಗಳು, ಕುಟುಂಬಗಳು ಆ ಹಾಡುಗಳಿಗೆ ಹೆಜ್ಜೆ ಹಾಕುತ್ತಿದ್ದರೆ, ಇನ್ನೊಂದಿಷ್ಟು ಜೋಡಿಗಳು ಮರಳಿನಂಗಳದಲ್ಲಿ x ನಂತೆ ಕೈ-ಕೈ ಜೋಡಿಸಿ ಗಿರ-ಗಿರನೆ ತಿರಿಗುತ್ತಿದ್ದವು. ಆಹಾ! ಎಂಥ ಆಹ್ಲಾದಕರ ಸಂಜೆಯದು.. ಸಂಗೀತ, ಸಂತೋಷ, ಸೌಂದರ್ಯ, ಮತ್ತು ಸಂಜೆ ಎಂಥ ಅದ್ಭುತ ಮಿಶ್ರಣ… ಕೆಲ ಹೊತ್ತು ಆ ಹಾಡುಗಳನ್ನು ಕೇಳುತ್ತಾ, ಆ ಇಡೀ ಅನುಭವವನ್ನು ಒಳಗಿಳಿಸುತ್ತ, ಮರಳುಪ್ಪಿನ ಮೇಲೆ ಕಳೆದುಹೋಗಿಬಿಟ್ಟಿದ್ದೆ. ನನ್ನ ಜೀವನದ ಅತಿ ವಿಭಿನ್ನ ಮತ್ತು ಸುಂದರ ಸಂಜೆಗಳಲ್ಲೊಂದು ಆ ಕ್ಷಣಗಳಲ್ಲಿ ಅಲ್ಲಿತ್ತು! ಸೂರ್ಯಾಸ್ತದ ಸಮಯ ಸಮೀಪಿಸುತ್ತಿರುವಾಗಲಂತೂ ಆ ಕ್ಷಣಗಳನ್ನು ಅನುಭವಿಸಲು ಒಂದೇ ಮನಸು, ಒಂದೇ ಹೃದಯ, ಎರಡೇ ಕಣ್ಣುಗಳು ಸಾಲದು ಎಂದೆನಿಸಿಬಿಟ್ಟಿತ್ತು.
ಬಿಳಿಯ ಬೆಡಗಿನ ಆ ಭೂರಮೆಗೂ, ದಿಗಂತದಲ್ಲಿ ಕೇಸರಿ ಬಣ್ಣದಲ್ಲಿ ಮೆಲುವಾಗಿ ಕಂಗೊಳಿಸುತ್ತಿದ್ದ ಸೂರ್ಯನಿಗೂ ಸೌಂದರ್ಯ ಪೈಪೋಟಿ! ಕ್ಷಣಗಳಲ್ಲೇ ಶ್ವೇತ ಸುಂದರಿಗೆ ಅತಿ ಹಗುರವಾಗಿ ಮುತ್ತಿಟ್ಟು, ಬಾನಗಲ ರಂಗಿನೋಕಳಿಯಾಡಿ, ನೆನಪುಗಳ ಹಿಂದೆ ಬಿಟ್ಟು ರವಿ ತೆರೆಯ ಮರೆಯಿಂದ ಜಾರಿದ. ಹಿಮ್ಮೇಳದಲ್ಲಿ ಹುಣ್ಣಿಮೆ ಚಂದ್ರ ಈ ಚೆಲುವನ್ನೆಲ್ಲ ಹೀರಿ ಕಂಗೊಳಿಸಲು ಅಣಿಯಾಗುತ್ತಿದ್ದನೇನೋ! ಸೂರ್ಯಾಸ್ತವಾಗುತ್ತಿದ್ದಂತೆ ಜನ ಮತ್ತೆ ತಮ್ಮ-ತಮ್ಮ ಒಂಟೆ ಗಾಡಿಗಳ ಕಡೆಗೆ, ಬಸ್ ಗಳ ಕಡೆಗೆ ಮರಳತೊಡಗಿದರು. ನಾನೂ ನಿಧಾನವಾಗಿ ಅಲ್ಲಿಂದ ನಡೆದು ಹೊರಟೆ, ‘ ಬದುಕಿಗೊಂದು ಉದ್ದೇಶ ಇದೆಯಾ? ಬೇಕಾ?’ ಅನ್ನೋ ಪ್ರಶ್ನೆ ಸುಮ್ಮನೆ ಸುಳಿಯಿತು. ಉತ್ತರವಿಲ್ಲದ ಪ್ರಶ್ನೆಗಳಿದ್ದರೂ ಬದುಕು ಅದೆಷ್ಟು ಸುಂದರ… ! ಅಂಥದೇ ಒಂದು ಸುಂದರ ಭಾವದಲ್ಲಿ ಮಗ್ನಳಾಗಿ ನಂದನ್ ನೊಡನೆ ಮತ್ತೆ ನಾನು ಒಂಟೆ ಗಾಡಿಯ ಬಳಿ ಮರಳಿದ್ದೆ.






ಅದರಡಿಗೆ ನನ್ನ ಅಂಗೈನ ರೇಖೆಗಳು ಎಂದಿನಂತೆ ತಮ್ಮ ನಿಗೂಢ ಕಥೆಯೊಡನೆ ಮೌನವಾಗಿದ್ದವು, ಆ ಕ್ಷಣಕ್ಕೆ ಉಪ್ಪಿನ ಕಣದ ಸ್ಪರ್ಶವನ್ನು ಅನುಭವಿಸುತ್ತ! Hmmmmm!!!