ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ರಣ್ ಉತ್ಸವ ಮತ್ತು ನಾವಿಬ್ಬರು’ – ಚಂದಿರನಿದ್ದನು ಜೊತೆಯಲ್ಲೆ…

(ಇಲ್ಲಿಯವರೆಗೆ)

ಮತ್ತೆ ಆಟೋ  ಏರಿ ಹೊರಟಾಗ ಕೊರೆಯುವ ಚಳಿ…  ಮಧ್ಯಾಹ್ನದ ಬಿಸಿಲಿನಿಂದಾಗಿ ನಾ ಜ್ಯಾಕೆಟ್ ಧರಿಸಿರಲಿಲ್ಲ. ಸದ್ಯಕ್ಕೆ ನಂದನ್ ಜ್ಯಾಕೆಟ್ ಧರಿಸಿದ್ದ. ನನ್ನ ಬಳಿ  ಹೆಗಲಿಗೆ ಸುತ್ತಿಕೊಂಡಿದ್ದ ಒಂದು ಶಾಲ್ ಇತ್ತು. ಆದರೆ  ಅಲ್ಲಿದ್ದದ್ದು  ನಡುಕ ಹುಟ್ಟಿಸುವ ಚಳಿಯಲ್ಲ, ಹೆಪ್ಪುಗಟ್ಟಿಸುವ ಚಳಿ!

ನಮ್ಮ ಎಂದಿನ ‘who cares’ attitude ಧರಿಸಿ ಭುಜ್ ನ ಚಿಕ್ಕ ಮಾರುಕಟ್ಟೆಯೆಡೆಗೆ ಕಣ್ಣಾಡಿಸುವಾಗ ಮತ್ತೆ ಬಾಲ್ಯದ ದಿನಗಳ, ಶನಿವಾರದ ಸಂತೆಯ ನೆನಪು.. ಅಂಗಡಿಯೊಂದರ ಮೇಲೆ ಗುಜರಾತಿಯಲ್ಲಿ ಬರೆದದ್ದು ಓದಿ  ನಗು ಬಂತು – ‘Sweet send snacks’. How cute! 🙂

ಅದಾಗಲೇ ಹುಣ್ಣಿಮೆ ಚಂದ್ರ ಬಾನೇರಿ  ನಗುತಿದ್ದ. ಭುಜೋಡಿ, ಭುಜ್ ನಿಂದ ಒಂದು ೬-೭ ಕಿ. ಮೀ. ದೂರ. ಆಟೋ ತನ್ನ ಪಾಡಿಗೆ ತಾನು ತನ್ನ ಮಾಮೂಲಿ ವೇಗದಲ್ಲಿ ಹೊರಟಿತ್ತು. ಸ್ವಲ್ಪ ಊರು ದಾಟಿದಂತೆ ಅಗಲ ರಸ್ತೆ, ಇಳಿಸಂಜೆ, ಪೆಟ್ರೋಲ್ ಬಂಕ್ ಗಳು, ಹೊಲಗಳು, ಬೆಂಕಿ  ಕಾಯಿಸಿಕೊಳ್ಳುತ್ತಿದ್ದ ಟ್ರಕ್ ಡ್ರೈವರ್ ಗಳು, ಎಲ್ಲವನ್ನೂ ನೋಡುತ್ತ  ಬಾನಲ್ಲಿ ಆರಾಮಾಗಿ settle ಆಗಿದ್ದ ದುಂಡು ಚಂದಿರ, ಮತ್ತೆ ಅದೆಂಥದೋ ಕಾಡುವ ಮೌನ!

ಭುಜೋಡಿ ತಲುಪಿದಾಗ ಆಗಲೇ ಕತ್ತಲು ಹೊಸ್ತಿಲು ದಾಟಿ ಹರಡುತ್ತಲಿತ್ತು. ನಂದನ್  ಮಲಗಿಬಿಟ್ಟಿದ್ದ! ಆಟೋ ಡ್ರೈವರ್ ನಮ್ಮ ಅಪ್ಪನ ವಯಸ್ಸಿನವರಿದ್ದಿರಬೇಕು, ನಂದನ್ ನನ್ನು ಅವರ ಸುಪರ್ದಿನಲ್ಲೇ ಇರಿಸಿ, ಇದ್ದ ಒಂದು ಶಾಲ್ ಅನ್ನು ಅವನಿಗೆ ಹೊದಿಸಿ, ಭುಜೋಡಿಯ ‘ಕ್ರಾಫ್ಟ್ಸ್ ಪಾರ್ಕ್’  ನ ಒಳಗಡೆ ಕಾಲಿಟ್ಟಾಗ ಮಬ್ಬುಗತ್ತಲೆಯಲ್ಲಿ ಮೊದಲು ಕಂಡಿದ್ದು ಕಲ್ಲಿನ ನವಿಲು. ಬಲಬದಿಯಲ್ಲಿದ್ದ ನವಿಲ ಕಂಬವನ್ನು ದಾಟಿಕೊಂಡು ಮುಂದೆ ಹೋದರೆ ಕೃತಕವಾಗಿ ನಿರ್ಮಿಸಿದ ಒಂದು ಕೊಳ, ಅದರ ಮೇಲೆ ಕಮಾನಿನಾಕಾರದಲ್ಲಿ ನಿರ್ಮಿತವಾದ ಸೇತುವೆ, ಹಿನ್ನೆಲೆಯಲ್ಲಿ ಹಾಲಿನ ಉಂಡೆಯಂತೆ ಬೆಳಗುತ್ತಿದ್ದ ಚಂದ್ರ, ದೂರದ ಲೈಟ್ ಕಂಬಗಳಿಂದ ನುಸುಳಿ ಬಂದು ಸೇತುವೆ ಮತ್ತು ಕೊಳದ ಮೇಲೆಲ್ಲ ಮೆಲುವಾಗಿ ಹರಡಿಕೊಂಡ ಮಂದ ಬೆಳಕು, ಮತ್ತು ಕೊರೆಯುವ ಚಳಿ… !  ಸಕತ್ romantic, ಸಕತ್ filmy 🙂 ಆ ಭಾವನೆಯೊಂದಿಗೇ ಒಂದು ಮಂದಹಾಸದೊಡನೆ ಸೇತುವೆ ದಾಟಿ ಕೆಳಗಿಳಿದರೆ ಪಕ್ಕದಲ್ಲಿ  ವಿವೇಕಾನಂದರ ಮೂರ್ತಿ! ನನ್ನ  ಆಗಿನ ಭಾವಲಹರಿಗೆ, ವಿವೇಕಾನಂದರ ಮೂರ್ತಿ attention ಎಂದಂತಿತ್ತು! ಉಫ್! 🙂 ನಂತರ ಅಲ್ಲಲ್ಲಿ ಹರಡಿಕೊಂಡಿದ್ದ ಅಂಗಡಿಗಳ ಮಿಣ-ಮಿಣ ಬೆಳಕು ಮಿಂಚುತ್ತಿತ್ತು

ಕ್ರಾಫ್ಟ್ ಪಾರ್ಕ್ ಕಚ್ ನ ಸ್ಥಳೀಯ ಕಲೆಯನ್ನು ಉಳಿಸುವ ಮತ್ತು ಪೋಷಿಸುವ ನಿಟ್ಟಿನಲ್ಲಿ ನಿರ್ಮಿತಗೊಂಡಿರುವ ಸ್ಥಳ.   ೧೦ ಎಕರೆಯಷ್ಟು ವಿಶಾಲವಾದ ಜಾಗದಲ್ಲಿ ಇದು ನಿರ್ಮಿತಗೊಂಡಿದೆ. ಟೈ ಅಂಡ್ ಡೈ ಬಾಂದನಿ ಬಟ್ಟೆ, ಎಂಬ್ರಾಯ್ಡರಿ, ಬ್ಲಾಕ್ ಪ್ರಿಂಟಿಂಗ್, ಬಾಟಿಕ್ ಪ್ರಿಂಟ್, ಲೋಹ ಕೌಶಲ, ಬಾನಂಗಡಿ, ಮಡ್ ವರ್ಕ್, ಕಟ್ಟಿಗೆಯ ಕೆತ್ತನೆ, ಪಟೋಲಾ ಹೆಣಿಕೆ ಹೀಗೆ ವಿಧ-ವಿಧ ಕಲಾ ಪ್ರಾಕಾರಗಳು ಇಲ್ಲಿ ನೋಡಲು ಮತ್ತು ಖರೀದಿಸಲು ಲಭ್ಯ.  ನಾನು ಸುಮ್ಮನೆ ಒಂದು ಅಂಗಡಿಯಿಂದ ಇನ್ನೊಂದು ಅಂಗಡಿಗೆ ಇಣುಕುತ್ತಾ ಮುಂದೆ ಸಾಗಿದ್ದೆ. ಸುಮಾರು ಅಂಗಡಿಗಳಲ್ಲಿ ಟೈ & ಡೈ ತರಹದ ಕಚ್ಚಿ ಶೈಲಿಯ ಬಟ್ಟೆಗಳು, ರಜಾಯಿ, ಶಾಲ್, ಚಪ್ಪಲಿ ಹೀಗೇ ಏನೇನೋ. ಒಂದು ಅಂಗಡಿಯಲ್ಲಿಯ ಕಚ್ಚಿ ಮಾದರಿಯ ಮಿರರ್ & ಮಡ್ ವರ್ಕ್ ಗೆ ಮಾತ್ರ ನಾನು ಮನ ಸೋತು ಬಿಟ್ಟೆ. ಅಲ್ಲೊಂದಿಷ್ಟು ಮಿರರ್ ವರ್ಕ್ ನ ಗೋಡೆಯಲಂಕಾರದ ಫಲಕಗಳನ್ನು ಖರೀದಿಸಿ ಮತ್ತೆ ಇಣುಕುವ ಕಾರ್ಯ ಮುಂದುವರೆಯಿತು. ಹತ್ತಿರದಲ್ಲೇ ‘ಶೃಜನ್’ ಎಂಬ ಕಚ್ಚಿ ಕರ-ಕೌಶಲವನ್ನು ಬೆಂಬಲಿಸುವ ಎನ್ ಜಿ ಓ ಸಹ ಇದೆ ಎಂದು ಕೇಳ್ಪಟ್ಟಿದ್ದೆ. ಆದರೆ ಅದನ್ನು ಸಂದರ್ಶಿಸಲು ಸಾಕಷ್ಟು ಸಮಯವಿರಲಿಲ್ಲ. ಹೀಗಾಗಿ ಮತ್ತೆ ಆಟೋಗೆ ಮರಳಿ ಹೋಟೆಲ್ ಗೆ ತೆರಳುವಂತೆ ಹೇಳಿದೆ.

ಆಟೋ ಓಡಲು ಶುರುವಿಟ್ಟಿತ್ತು, ನಂದನ್ ಇನ್ನೂ ಮಲಗೇ ಇದ್ದ. ‘ನಿರಾಳವಾಗಿ ತೊಡೆಯ ಮೇಲೆ ಮಲಗಿದ ಮಗು, ಕತ್ತಲು, ಕತ್ತಲಿನಲ್ಲಿ ಅರಳಿ ನಗುತಲಿದ್ದ ಬೆಳಕು, ಕಾಡುವ ಚಂದ್ರ, ಮೌನ; ರಾತ್ರಿಯಲ್ಲಿ, ಕೊರೆಯುವ ಚಳಿಯಲ್ಲಿ, ಆಟೋನಲ್ಲಿ ಗೊತ್ತಿರದ ಊರಿನಲ್ಲಿ ಮಗುವಿನೊಂದಿಗೆ ಸುತ್ತುತ್ತಿದ್ದ ನಾನು!’ ಹೌದು ನನ್ನ ಚಿತ್ರದಲ್ಲಿ ಆಗ ನಾನೇ ಹಿರೋಯಿನ್ ಆಗಿದ್ದೆ. ಒಮ್ಮೊಮ್ಮೆ ಹೀಗೆಲ್ಲ ಕಲ್ಪಿಸಿಕೊಂಡಾಗಲೆಲ್ಲ ನಗು ಬರುತ್ತದೆ. ಆ ನಗುವಿನ ಅರ್ಥ ಮಾತ್ರ ತಿಳಿಯುವುದಿಲ್ಲ!

ಮತ್ತೆ ಮರಳಿ ಹೋಟೆಲ್ ರೂಮ್ ತಲುಪಿದಾಗ ಅಲ್ಲಿನ ಬೆಚ್ಚನೆ ಭಾವ  ತಬ್ಬಿದಂತೆ ಅನಿಸಿ, ಕೊರೆಯುವ ಚಳಿ ದೂರವಾಗಿ ಒಂದೆರಡು ನಿಮಿಷ ಹಾಯೆನಿಸಿತು. ರಾತ್ರಿ ಎಂಟರಷ್ಟೊತ್ತಿಗೆಲ್ಲ ಊಟ ಮುಗಿಸಿ, ರೂಮ್ ನ ಏಸಿ ಯನ್ನು ೨೮-೨೯ ಡಿಗ್ರಿ ಗೆ ಇರಿಸಿ ಮಲಗಿದ ಮೇಲೆ, ಮತ್ತೆ ಕಣ್ಣು ಬಿಟ್ಟದ್ದು ಬೆಳಗಿನ ೫:೩೦ ರ ಅಲಾರಂ ಸದ್ದಿಗೆ. ರಣ್ ಉತ್ಸವ್ ಗೆ ಹೊರಡುವ ಸಂಭ್ರಮದ ದಿನದ ಬೆಳಕಾಗಿತ್ತು…

(ಮುಂದುವರಿಯುವುದು…)

‍ಲೇಖಕರು avadhi

28 March, 2014

ನಿಮಗೆ ಇವೂ ಇಷ್ಟವಾಗಬಹುದು…

ರಾಜಸ್ಥಾನವೆಂಬ ಸ್ವರ್ಗದ ತುಣುಕು : ಖ್ವಾಜಾ ಮೊಯಿನುದ್ದೀನ್ ಚಿಸ್ತಿ ಸನ್ನಿಧಿಯಲ್ಲಿ

ರಾಜಸ್ಥಾನವೆಂಬ ಸ್ವರ್ಗದ ತುಣುಕು : ಮತ್ತೆ ಮತ್ತೆ ಅದೇ ಜಾಗದಲ್ಲಿ ನಿಲ್ಲುತ್ತಿತ್ತು ಖಾಲಿ ಬೈಕ್

0 Comments

Trackbacks/Pingbacks

  1. ’ರಣ್ ಉತ್ಸವ ಮತ್ತು ನಾವಿಬ್ಬರು’ – ನಾ ಕಲಿತ ಗುಜರಾತಿ ’ವಾಂಧೋ ನಹಿ’! « ಅವಧಿ / Avadhi - [...] ’ರಣ್ ಉತ್ಸವ ಮತ್ತು ನಾವಿಬ್ಬರು’ – ನಾ ಕಲಿತ ಗುಜರಾತಿ ’ವಾಂಧೋ ನಹಿ’! March 29, 2014 by user2 (ಇಲ್ಲಿಯವರೆಗೆ) [...]

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading