ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಕ್ಷಣಾ ಸಚಿವರೇ ಜಾಮೀನು ಕೊಡಿಸಿದರು..

-ಶಿವಾನಂದ ತಗಡೂರು

1960 ರ ದಶಕದಲ್ಲಿ ಆಗಿನ ಬಿಹಾರದ ಮುಖ್ಯಮಂತ್ರಿಯಾದ ಕೃಷ್ಣ ಸಹಾಯ್ ಅವರ ವಿರುದ್ಧ ತೀಕ್ಷ್ಮವಾದ ಸಂಪಾದಕೀಯ ಬರೆದ ಕಾರಣಕ್ಕೆ ಪೊಲೀಸರಿಂದ ಬಂಧಿಸಲ್ಪಟ್ಟು ಜೈಲುವಾಸ ಅನುಭವಿಸುತ್ತಿದ್ದ ಟಿಜೆಎಸ್ ಜಾರ್ಜ್ ಅವರ ನೆರವಿಗೆ ಬಂದಿದ್ದು ಸಾಮಾನ್ಯ ವ್ಯಕ್ತಿಯಲ್ಲ ಆಗಿನ ನಮ್ಮ ದೇಶದ ರಕ್ಷಣಾ ಸಚಿವರಾಗಿದ್ದ ವಿ. ಕೃಷ್ಣ ಮೆನನ್ ಅವರು.

ಒಬ್ಬ ಮುಖ್ಯಮಂತ್ರಿಯ ವಿರುದ್ಧ ಬರೆಯುವ ಮೂಲಕ ಜಾರ್ಜ್ ಅವರು ಒಬ್ಬ ಪತ್ರಕರ್ತನ ಗುರುತುಗಳಾದ ಧೈರ್ಯ, ನಿಷ್ಠುರತೆ, ಸಾಮಾಜಿಕ ಕಾಳಜಿ ಮತ್ತು ಹೋರಾಟದ ಮನೋಭಾವಗಳನ್ನು ಜಗತ್ತಿಗೆ ಪರಿಚಯಿಸಿದರು. ‘ದಿ ಸರ್ಚ್‌ ಲೈಟ್’ ಪತ್ರಿಕೆಯ ಈ ಸಂಪಾದಕೀಯ ಲೇಖನ ಭಾರತೀಯ ಪತ್ರಿಕೋದ್ಯಮದ ಇತಿಹಾಸದಲ್ಲಿಯೇ ಮಹತ್ವದ ದಾಖಲೆಯಾಗಿ ಉಳಿದಿದೆ. ಯಾರನ್ನೋ ಮೆಚ್ಚಿಸುವ ಸಲುವಾಗಿ ಕಠೋರ ಸತ್ಯವನ್ನು ನಾವು ಯಾವ ಕಾರಣಕ್ಕೂ ಮುಚ್ಚಿಡಬಾರದೆಂದು ಇವರು ಯಾವಾಗಲೂ ಹೇಳುತ್ತಿದ್ದರು. ಮುಂಬೈನ ‘The Free Press Journal’ ಪತ್ರಿಕೆಯ ಮೂಲಕ ತಮ್ಮ ವೃತ್ತಿಯನ್ನು ಆರಂಭಿಸಿದ ಇವರು ಸದಾನಂದ ಎನ್ನುವ ಮಹತ್ವಾಕಾಂಕ್ಷಿ ಹಾಗೂ ಕ್ರಾಂತಿಕಾ ಚಿಂತನೆಗಳುಳ್ಳ ಸಂಪಾದಕರ ಮಾರ್ಗದರ್ಶನದಲ್ಲಿ ತಮ್ಮ ವೃತ್ತಿ ಜೀವನದ ಆರಂಭಿಕ ಪಾಠಗಳನ್ನು ಕಲಿಯುತ್ತಾರೆ.

ಯಾವುದೇ ಸಂದರ್ಭದಲ್ಲಿ ಯಾವುದೇ ಕ್ಷೇತ್ರದ ಮಾಹಿತಿಯನ್ನೂ ಕೇಳಿದರೂ ಇವರು ಥಟ್ಟನೇ ಹೇಳಬಲ್ಲವರಾಗಿದ್ದರು. ದಶಕಗಳ ಕಾಲದ ರಾಜಕೀಯ ಹಾಗೂ ಸಾಮಾಜಿಕ ಬೆಳವಣಿಗೆಗಳ ಮಾಹಿತಿಯನ್ನು ತಮ್ಮ ನಾಲಗೆಯ ತುದಿಯಲ್ಲಿ ಇಟ್ಟುಕೊಂಡವರಂತೆ ಕೇಳಿದವರಿಗೆ ನೀಡುತ್ತಿದ್ದರು. ಹೊಸ ಮ್ಯಾಗಜೀನ್ ಒಂದರ ರೂಪುರೇಷೆಗಳು ಮತ್ತು ವಿನ್ಯಾಸದ ಮಾದರಿ ತಯಾರು ಮಾಡಲೆಂದು ಕೆಲ ಪತ್ರಕರ್ತನ್ನು ಕಾರ್ಯಾಗಾರವೊಂದಕ್ಕೆ ನಿಯೋಜನೆ ಮಾಡಲಾಗಿರುತ್ತದೆ. ಅದರ ಉಸ್ತುವಾರಿಯನ್ನು ವಹಿಸಿಕೊಂಡವರೂ ಕೂಡ ಆಗಿನ ಕಾಲದ ಮಹತ್ವದ ಪತ್ರಕರ್ತರೇ ಆಗಿರುತ್ತಾರೆ. ಪತ್ರಿಕೆಯ ಚಿಂತನೆಗಳು ಅಪಡೇಟ್ ಆಗಿರಲಿ ಎನ್ನುವ ಕಾರಣಕ್ಕೆ ಉತ್ಸಾಹಿ ಯುವ ಪತ್ರಕರ್ತರನ್ನೇ ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿರುತ್ತದೆ. ಆದರೆ ಆ ತರುಣರು ಮತ್ತು ಪರಿಣತರು ತಯಾರಿಸದ ಯಾವ ರೂಪುರೇಷೆಗಳನ್ನೂ ಇವರು ಒಪ್ಪದೇ ಅತ್ಯಂತ ಕಟುವಾಗು ಖಂಡಿಸುತ್ತಾರೆ ಹಾಗೂ ತಮ್ಮ ತಾಜಾ ಮತ್ತು ಪರಿಣಾಮಕಾರಿ ಚಿಂತನೆಗಳ ಕುರಿತ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಾರೆ ಆಗ ಆ ತಂಡದಲ್ಲಿದ್ದ ಎಲ್ಲರೂ ಇವರ ಚಿಂತನೆಗಳಿಂದ ಪ್ರಭಾವಿತರಾಗಿ ಅಗತ್ಯ ಬದಲಾವಣೆಗನ್ನು ಮಾಡಿಕೊಳ್ಳುತ್ತಾರೆ ಮತ್ತೂ ಖುಷಿಯ ಸಂಗತಿ ಏನೆಂದರೆ ಆ ಪತ್ರಿಕೆ ಮುಂದೆ ಒಳ್ಳೆ ಹೆಸರು ಪಡೆದು ಯಶಸ್ವಿಯಾಗುತ್ತದೆ. ಆ ಸಂದರ್ಭದಲ್ಲಿ ಇವರು “ಪ್ರತಿಯೊಂದು ಅಕ್ಷರಕ್ಕೂ ಅದರದೇ ಆದ ಸೌಂದರ್ಯ ಮತ್ತು ಗುಣ ಸ್ವರೂಪವಿರುತ್ತದೆ ಆದ್ದರಿಂದ ನಾವು ಯಾವುದೇ ಅಕ್ಷರವನ್ನು ಬೇಕಾಬಿಟ್ಟಿಯಾಗಿ ಬರೆದು ಅದರ ಅಂದ ಕೆಡಿಸಬಾರದು. ‘A’ ಅಂತ ಬರೆದರೆ ಅದು ‘A’ ಥರಾನೆ ಕಾಣಬೇಕೇ ಹೊರತು ಬೇರೆ ಏನೋ ಅನಿಸಬಾರದು” ಅಂತ ಅಕ್ಷರಗಳ ವಿನ್ಯಾಸದ ಕುರಿತು ಹೇಳುತ್ತಾರೆ. ಈ ಬಗೆಗಿನ ಗ್ರಂಥಗಳನ್ನು ಇವರು ತಮ್ಮ ಗ್ರಂಥಾಲಯದಲ್ಲಿ ಇಟ್ಟುಕೊಂಡಿದ್ದಾರೆ.

ಆಗ ಪತ್ರಿಕೆಗಳ ಸಿಬ್ಬಂದಿಗಳು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವಾಗ ಪತ್ರಿಕಾ ಕಚೇರಿಯಲ್ಲೇ ಮಲಗುತ್ತಿದ್ದ ಕಾಲ. ಯಾರೂ ಕೂಡ ಕೆಲಸ ಮುಗಿಯಿತೆಂದು ಮಧ್ಯರಾತ್ರಿ ಅಲ್ಲಿಂದ ಮನೆಗೆ ಹೋಗುತ್ತಿರಲಿಲ್ಲ. ಒಂದು ದಿನ ಜಾರ್ಜ್ ಅವರು ರಾತ್ರಿ ಪಾಳಿಯಲ್ಲಿ ಕೆಲಸಕ್ಕೆ ಹೋದಾಗ ಜೋರು ಮಳೆಯಾಗುತ್ತದೆ ಇದರಿಂದ ಸಂಪಾದಕರು ಮತ್ತು ಕೆಲವು ಸಿಬ್ಬಂದಿ ಕಚೇರಿಗೆ ಹೋಗಲು ಸಾಧ್ಯವಾಗುವುದಿಲ್ಲ ಆಗ ಸಂಪಾದಕರಾಗಿದ್ದ ಸದಾನಂದರು “ಜಾರ್ಜ್ ಇವತ್ತು ನಾವು ಯಾರೂ ಬರೋದಕ್ಕೆ ಸಾಧ್ಯವಾಗುತ್ತಿಲ್ಲ ಆದ್ದರಿಂದ ನೀನೇ ಇವತ್ತು ಸಂಪಾದಕನ ಕೆಲಸ ಮಾಡು ಕಣಯ್ಯ” ಅಂತ ಹೇಳುತ್ತಾರೆ ಹೀಗೆ ಆಕಸ್ಮಿಕವಾಗಿ ಇವರು ಸಂಪಾದಕರಾಗಿ ಕೆಲಸ ಮಾಡುವ ಸಂದರ್ಭ ಬರುತ್ತದೆ.

‘South East Asia’ದ ರಾಜಕೀಯ ಮತ್ತು ಆರ್ಥಿಕ ವಿದ್ಯಮಾನಗಳ ವರದಿ ಮಾಡುವುದಕ್ಕಾಗಿ ವಿದೇಶಕ್ಕೆ ಹೋಗುವ ಇವರು ಅಲ್ಲಿಯೇ ತಮ್ಮ ಸ್ವಂತ ಪತ್ರಿಕೆಯೊಂದನ್ನು ಮಾಡಿ ಇತಿಹಾಸ ಸೃಷ್ಟಿಸುತ್ತಾರೆ. ಸಿಂಗಾಪೂರ್ ರಾಜಮನೆತನದ ಕುರಿತ ಪುಸ್ತಕ ಬರೆದು ಆ ದೇಶಕ್ಕೆ ಕಾಲಿಡದಂಥ ಪರಿಸ್ಥಿತಿ ನಿರ್ಮಾಣ ಮಾಡಿಕೊಳ್ಳುತ್ತಾರೆ ಎಂದರೆ ಅವರ ಪುಸ್ತಕ ಜಾಗತಿಕ ಮಟ್ಟದಲ್ಲಿ ಎಷ್ಟೊಂದು ಪ್ರಭಾವ ಬೀರಿರಬಹುದು ಎಂದು ಗೊತ್ತಾಗುತ್ತದೆ. ಆತ್ಮಕತೆಯನ್ನು ಹೊರಗೆ ನಿಂತು ಹೇಗೆ ಪರಿಣಾಮಕಾರಿಯಾಗಿ ಬರೆಯಬಹುದು ಎಂಬುದನ್ನು ಕಲಿಸಿಕೊಟ್ಟ ಮೊದಲಿಗರು ಇವರು. ಅದಕ್ಕೆ ಇವರು ಬರೆದ ಅನೇಕ ಖ್ಯಾತನಾಮರ ಆತ್ಮಕತೆಗಳೇ ಸಾಕ್ಷಿಯಾಗಿವೆ. ಸಾಮಾಜಿಕ ಅನ್ಯಾಯ, ಭ್ರಷ್ಟಾಚಾರ, ಧಾರ್ಮಿಕ ಅಸಹಿಷ್ಣುತೆ ಮತ್ತು ಇತರ ಸಮಾಜಘಾತುಕ ಶಕ್ತಿಗಳ ವಿರುದ್ಧ ಜಾರ್ಜ್ ಅವರು ನಿರಂತರವಾಗಿ ಹೋರಾಟ ಮಾಡುತ್ತಲೇ ಬಂದಿದ್ದಾರೆ.

“ಯುವ ಪತ್ರಕರ್ತರಿಗೆ ನೀವು ಯಾವ ಸಂದೇಶ ಕೊಡಲು ಬಯಸುತ್ತೀರಿ ಸರ್” ಅಂತ ನಾನು ಕೇಳಿದಾಗ “ಪತ್ರಕರ್ತ ಹುದ್ದೆ ಎಂಬುದು ಒಂದು ಘನವಾದ ಹುದ್ದೆ ಆ ಹುದ್ದೆಯ ಘನತೆಗೆ ಯಾವ ಧಕ್ಕೆಯೂ ಆಗದಂತೆ ಪತ್ರಕರ್ತರು ನೋಡಿಕೊಳ್ಳಬೇಕು. ಸಾಮಾಜಿಕ ಒಳಿತಿಗಾಗಿ ದುಡಿಯಬೇಕು. ಯಾವ ಆಮಿಷಗಳಿಗೂ ಬಲಿಯಾಗದೇ ಸತ್ಯದ ಪರ ಗಟ್ಟಿಯಾಗಿ ನಿಲ್ಲಬೇಕು. ಪುಸ್ತಕಗಳ ಒಡನಾಟ ನಿರಂತರವಾಗಿ ಇಟ್ಟುಕೊಳ್ಳಬೇಕು” ಎಂದರು.

‍ಲೇಖಕರು Admin

4 October, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading