ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಂಜನಿ ಪ್ರಭು ಹೊಸ ಕವಿತೆ – ಕವಿಗೊಂದು ಬಿನ್ನಹ…

ರಂಜನಿ ಪ್ರಭು

ಇತ್ತೀಚೆಗೆ ಕವಿ ಎಚ್.ಎಸ್.ವೆಂಕಟೇಶಮೂರ್ತಿಯವರು ಬರೆದ ಕವಿತೆ “ಮರಣ ಪತ್ರ” ಓದಿದಾಗ ನನ್ನೊಳಗೆ ಮೂಡಿದ ಭಾವ ಈ ಕವಿತೆ

ಮೊನ್ನೆ ತಾನೇ ದಕ್ಕಿತಲ್ಲ
ತಂಪು ಭೋಧಿವೃಕ್ಷದ
ಅತ್ಯಾಪ್ತ ನೆರಳು..
ನಲ್ಮೆಯ ಕವಿಗುರುವೇ
ನೀವು ಉಣಬಡಿಸಿದ
ಯಾವ ಪಕ್ವಾನ್ನದ ಪ್ರೀತಿಯ ಋಣ
ನಾವು ಸಂದಾಯ ಮಾಡಬಹುದು ಹೇಳಿ?
ಪುಟಾಣಿ ನೀಲಿಹಕ್ಕಿಗಳ ಚಿಲಿಪಿಲಿಯೋ
ಕಥೆಗಳ ಕಣಿವೆಯ ಹಾದಿಯೋ…
ಬಯಲಿನೊಳಗೆ ಯಾರೋ ಮರೆತ ವೀಣೆಯ ಶ್ರುತಿಯೋ..
ತಲೆಗೊಂದು ಕೋಗಿಲೆಯ ಕುಹುದನಿಯೋ..
ಹರೆಯ ಹಾಡುವ ಹುಚ್ಚುಖೋಡಿ ಮನಸೋ..
ಬೆಳಗಾಗ ನೀವೆದ್ದು ನೆನೆದ
ಅಮೃತ ಘಳಿಗೆಗಳೋ..
ಉತ್ತರಾಯಣದ ಶುಭಪರ್ವವೋ..
ಓ ಬಿಡಿ ಸಾವಿರ ಹೆಸರಿವೆ
ಯಾದಿಯಲಿ..
ಮರೆತೇನೆಂದರೆ
ಮರೆಯುವುದು ಹೇಗೆ ಇವುಗಳನ್ನು…
ಕುಮಾರವ್ಯಾಸನ ಪರ್ವಗಳಲ್ಲಿ
ಮುಳುಗೆದ್ದ ಮನಗಳು
ನಮ್ಮವು..
ಇತ್ತೀಚಿನ ಬುದ್ಧಚರಣವೋ
ಆತ್ಮವನ್ನಾವರಿಸಿದ
ಅನಾತ್ಮ ಕಥನ..
ಈ ಅಕ್ಷರ ಬಾಗಿನವನ್ನು
ಮಡಿಲ ತುಂಬಾ ಪಡೆದವರು
ನಾವೆಲ್ಲ..


ನಿಮ್ಮ ದನಿ ಕೇಳಲಿಕ್ಕೆಂದೆ
ಫೋನು ಮಾಡಿದ್ದುಂಟು
ನಿಮ್ಮ ದನಿಯ ಮಧುರ
ವಾತ್ಸಲ್ಯ “ಎದೆಯಾಳದಲ್ಲಿ
ಜುಳುಜುಳು ಏನೋ ಹರಿದಂತೆ..ಯಾವ ಜನ್ಮದ
ತಾಯಿಯೋ ಕಣ್ಣು ತೆರೆದಂತೆ”
ಅದೆಷ್ಟು ಮನಸುಗಳಿಗೆ
ಮಾತು ಕಲಿಸಿದ್ದೀರೋ..
ಅದೆಷ್ಟು ಕವಿತೆಗಳಿಗೆ
ಹಾದಿ ತೋರಿದ್ದೀರೋ
ರಾಮನಂತೆಯೇ ನೀವೂ
ಶ್ರೀ ಸಂಸಾರಿ
ಎಷ್ಟು ವಿಶಾಲ ವಿಸ್ತೃತ
ನಿಮ್ಮ ಸಂಸಾರ
ರಾಜಲಕ್ಷ್ಮಿಯೇ ವೈದೇಹಿ
ತನುಜರಲ್ಲಿಯೂ ಉಂಟು
ದಶರಥ ಪುತ್ರರಂತೆಯೇ
ಒಬ್ಬರಿಗೊಬ್ಬರು ಪ್ರಾಣವಾಗುವ
ಬಾಂಧವ್ಯದ ಬೆಸುಗೆ
ಅದು ನಿಮ್ಮದೇ ತನಿ
ನಿಮದೇ ರಾಗ
ನಿಮ್ಮ ಮನೆಗೆ ಬಂದವರೆಂದೂ
ಪ್ರೀತಿಯ ಉಡಿ ತುಂಬಿಸಿಕೊಳ್ಳದೆ
ಮರಳಿದವರಲ್ಲ.
“ಮುಟ್ಟುವ ಹಿಂದೆ
ಪ್ರೀತಿ ಮಡುಗಟ್ಟಿ
ಕಳವಳಿಸುತ್ತಾ ಇರುತ್ತದಲ್ಲ”
ಮೊನ್ನೆ ನಿಮ್ಮ ಮನೆಗೆ
ಬಂದಾಗ ಕಂಡಿದ್ದು
ಕವಿಯನ್ನು ಹಿರಿಯ ಗೆಳೆಯನನ್ನು
“ಇಲ್ಲವಾಗುವುದೊಂದೇ
ಇರಲು ಇರುವ ಉಪಾಯ” ಎಂದ ದಾರ್ಶನಿಕನನ್ನು ಸಮಾಧಾನದ ದೀಪ ಬೆಳಗುವ ನಿಮ್ಮ ಕಂಗಳನ್ನು..
ಮೊನ್ನೆ ಬಂದಾಗ
ಸಿಕ್ಕಿದ್ದು ಭೋಧಿವೃಕ್ಷದ
ನೆರಳ ತಂಪು..
ಇನ್ನೂ ಇನ್ನೂ ಇನ್ನೂ
ಬೇಕು ನಮಗೆ ಈ ತಂಪು
“ಗಾಳಿ ಆಡಬೇಕು ಎಲೆಮಾತ”
“ನಕ್ಷತ್ರ ಮೀಟಬೇಕು ತಂಬೂರಿ”

(ಉದ್ಧರಣಗಳೆಲ್ಲವೂ ‘ಬುದ್ಧಚರಣ’ ದಿಂದ ಆರಿಸಿದ್ದು).

‍ಲೇಖಕರು Admin

23 February, 2022

1 Comment

  1. T S SHRAVANA KUMARI

    ಚಂದದ ಕವಿತೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading