ರಂಗಾಯಣದ ಸ್ವಾಯತ್ತತೆ ಎಂಬ ಮರೀಚಿಕೆ

ಜಿ.ಪಿ.ಬಸವರಾಜು

ಹೆಸರಿರದ ಸುನಾಮಿಯೊಂದು ಅಪ್ಪಳಿಸಿದಂತೆ ರಾಜ್ಯ ರಾಜಕೀಯದಲ್ಲಾದ ಬದಲಾವಣೆಯಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯ ಕುರ್ಚಿ ಹಿಡಿದು ಕುಳಿತಿದ್ದಾರೆ; ಅವರ ಜೊತೆಯಲ್ಲಿ ಮೂವರು ಉಪ ಮುಖ್ಯಮಂತ್ರಿಗಳಿಗೂ ಕುರ್ಚಿಗಳು ಸಿಕ್ಕಿವೆ. ಬಿಜೆಪಿ ಸರ್ಕಾರ ಮತ್ತೆ ಕರ್ನಾಟಕದ ರಾಜಕೀಯದಲ್ಲಿ ‘ವಿಕಟಾಟ್ಟಹಾಸ’ ಎನ್ನಬಹುದಾದ ನಗೆಯನ್ನು ಬೀರುತ್ತಿದೆ.

ಕೇಂದ್ರದಲ್ಲಿಯೂ ಬಿಜೆಪಿ ಸರ್ಕಾರ ಇದೇ ನಗೆಯಲ್ಲಿ ಮೈಮರೆತಿದೆ. ತಾವೇ ಮತನೀಡಿ ಬಿಜೆಪಿ ಸರ್ಕಾರವನ್ನು ಆಯ್ಕೆ ಮಾಡಿದ ಜನ ಈ ವಿಕಟಾಟ್ಟಹಾಸಕ್ಕೆ ಬೆಚ್ಚಿಬಿದ್ದು ಕುಳಿತಿದ್ದಾರೆ. ಜಮ್ಮು ಮತ್ತು ಕಾಶ್ಮಿರವಂತೂ ಸ್ಮಶಾನ ಮೌನದಲ್ಲಿ ಜಗತ್ತಿನ ಕಣ್ಣು ಕುಕ್ಕುತ್ತಿದೆ. ಈ ಮಧ್ಯೆ ಪ್ರಜಾತಂತ್ರವನ್ನು ಗಾಳಿಗೆ ತೂರಿರುವ ಹಲವು ವಿದ್ಯಮಾನಗಳು ‘ವಿಕಾಸದ ಹಾದಿ’ಯಲ್ಲಿ ಸದ್ದಿಲ್ಲದೆ ಸಾಗಿವೆ.
ನಮ್ಮಲ್ಲನೇಕರು ಗಾಜಿನ ಮನೆಗಳೆಂದು ಭಾವಿಸಿರುವ ಸಾಂಸ್ಕೃತಿಕ ಲೋಕದ ಹಲವು ‘ಸ್ವಾಯತ್ತ ಸಂಸ್ಥೆಗಳ’ಲ್ಲೂ ದೊಡ್ಡ ಸದ್ದುಗಳೇ ಕೇಳಿಬಂದಿವೆ.

ನಮ್ಮ ವಿವಿಧ ಅಕಾಡಮಿಗಳ (ಒಟ್ಟು ಒಂಭತ್ತು ಅಕಾಡಮಿಗಳು-ಕರ್ನಾಟಕ ಸಾಹಿತ್ಯ ಅಕಾಡಮಿ, ಕರ್ನಾಟಕ ತುಳು ಸಾಹಿತ್ಯ ಅಕಾಡಮಿ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ, ಕರ್ನಾಟಕ ಜಾನಪದ ಅಕಾಡಮಿ, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡಮಿ, ಕರ್ನಾಟಕ ಸಂಗೀತ ನೃತ್ಯ ಅಕಾಡಮಿ, ಕರ್ನಾಟಕ ಶಿಲ್ಪಕಲಾ ಅಕಾಡಮಿ, ಕರ್ನಾಟಕ ಲಲಿತ ಕಲಾ ಅಕಾಡಮಿ) ಅಧ್ಯಕ್ಷರು ಮತ್ತು ಸದಸ್ಯರು ರಾಜೀನಾಮೆ ನೀಡಿದ್ದಾರೆ. (ಕನ್ನಡ ಸಂಸ್ಕೃತಿ ಇಲಾಖೆ ಅಂದರೆ ಸರ್ಕಾರವೇ ಇವರೆಲ್ಲ ರಾಜೀನಾಮೆಗಳನ್ನು ಕೇಳಿ ಪಡೆದಿದೆ) ಹಾಗೆಯೇ ರಾಜ್ಯದ ರಂಗಾಯಣಗಳ (ಮೈಸೂರು, ಶಿವಮೊಗ್ಗ, ಧಾರವಾಡ ಮತ್ತು ಕಲಬುರ್ಗಿ ರಂಗಾಯಣಗಳ) ನಿರ್ದೇಶಕರನ್ನು ವಜಾ ಮಾಡಲಾಗಿದೆ.

ಇವೆಲ್ಲ ಸ್ವಾಯತ್ತ ಸಂಸ್ಥೆಗಳು. ಈ ಎಲ್ಲ ಸಂಸ್ಥೆಗಳ ಕಾರ್ಯಚಟುವಟಿಕೆಗಳಿಗೆ ಸರ್ಕಾರವೇ ನೇರವಾಗಿ ಹಣಕಾಸು ನೀಡುತ್ತಿದೆ. ಇದರಿಂದಾಗಿಯೇ ಸರ್ಕಾರಗಳು ಈ ಸ್ವಾಯತ್ತತೆಯನ್ನು ಅಷ್ಟಾಗಿ ಗಂಭೀರವಾಗಿ ತೆಗೆದುಕೊಂಡಿಲ್ಲ. ಈ ಸಂಸ್ಥೆಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ನೇಮಿಸುವ ಹಕ್ಕನ್ನು ಸರ್ಕಾರವೇ ಇಟ್ಟುಕೊಂಡಿರುವುದರಿಂದ ಈ ಎಲ್ಲ ಸಂಸ್ಥೆಗಳೂ ತನ್ನ ಕೈಯಲ್ಲಿಯೇ ಇರುವ ಸೂತ್ರದ ಬೊಂಬೆಗಳು ಎನ್ನುವ ಭಾವನೆಯೂ ಸರ್ಕಾರಗಳಲ್ಲಿ ಉಳಿದುಬಿಟ್ಟಿದೆ.

ರಂಗಾಯಣಗಳ ಮೇಲೊಂದು ರಂಗಸಮಾಜ ಇರುವುದು ನಿಜವಾದರೂ, ಈ ರಂಗಸಮಾಜ ಸೂಚಿಸುವ ಹೆಸರುಗಳಲ್ಲಿಯೇ ಒಂದನ್ನು ಆಯ್ಕೆಮಾಡುವ ಮತ್ತು ಅವರನ್ನು ರಂಗಾಯಣದ ನಿರ್ದೇಶಕರೆಂದು ನೇಮಿಸುವ ಹಕ್ಕನ್ನು ಸರ್ಕಾರವೇ ಇಟ್ಟುಕೊಂಡಿದೆ. ಇದೂ ರಂಗಾಯಣಗಳ ಮೇಲೆ ಸರ್ಕಾರದ ಅಧಿಕಾರವನ್ನು ಸ್ಥಾಪಿಸುವ ಕ್ರಮವಾಗಿಯೂ ತೋರುತ್ತದೆ.

ಈ ರಂಗಾಯಣಗಳೂ ಸರ್ಕಾರದ ಹಣಕಾಸು ನೆರವಿನಿಂದಲೇ ನಡೆಯುತ್ತಿರುವುದೂ ಸರ್ಕಾರದ ನಿಯಂತ್ರಣವನ್ನು ಹೆಚ್ಚಿಸುವಂತೆ ಕಾಣುತ್ತದೆ. ಸರ್ಕಾರದ ಹಣ ಎಂದರೆ ಅದು ಸಾರ್ವಜನಿಕರ ಹಣ ಎನ್ನುವ ದಟ್ಟ ಅರಿವು ಇದ್ದರೆ ಸರ್ಕಾರಗಳು ಹೀಗೆ ನಡೆದುಕೊಳ್ಳುವುದು ಸಾಧ್ಯವಾಗಲಾರದು.

ಸ್ವಾಯತ್ತ ಸಂಸ್ಥೆಗಳ ಗತಿ ಇಡೀ ದೇಶದಲ್ಲಿಯೇ ಹೀಗಾಗಿದೆ. ಕೆಲವು ರಾಜ್ಯಗಳು ಇದಕ್ಕೆ ಅಪವಾದವಾಗಿರಬಹುದು. ಕೇಂದ್ರದಲ್ಲಿ ಈ ಹಿಂದೆ ಅಧಿಕಾರ ಹಿಡಿದಿದ್ದ (ಮತ್ತು ಈಗಲೂ ಅಧಿಕಾರ ಹಿಡಿದಿರುವ) ಬಿಜೆಪಿ ಸರ್ಕಾರ ಈ ಸ್ವಾಯತ್ತ ಸಂಸ್ಥೆಗಳ ಮೇಲೆ ತನ್ನ ಹಿಡಿತವನ್ನು ತರುವ ಮತ್ತು ಸ್ವಾಯತ್ತತೆ ಎಂಬ ಶಬ್ಧಕ್ಕೆ ಯಾವ ಅರ್ಥವೂ ಇಲ್ಲದಂತೆ ಮಾಡುವ ಪ್ರಯತ್ನವನ್ನು ಮುಚ್ಚುಮರೆ ಇಲ್ಲದಂತೆ ನಡೆಸಿತ್ತು. ಬಿಜೆಪಿಯ ಬೆಂಬಲಿಗರು, ಅಥವಾ ಬಿಜೆಪಿ/ಆರ್‌ಎಸ್‌ಎಸ್ ಸಿದ್ಧಾಂತಕ್ಕೆ ಬದ್ಧರಾದವರನ್ನು ತಂದು ಈ ಸಂಸ್ಥೆಗಳ ಆಯಕಟ್ಟಿನ ಜಾಗಗಳಲ್ಲಿ ಕೂರಿಸುವ ಪರಿಪಾಠವನ್ನು ಯಾವ ಮುಜುಗರವೂ ಇಲ್ಲದೆ ನಡೆಸಿಕೊಂಡು ಬಂದಿದೆ.

ಇದಕ್ಕೆ ಹಲವು ಉದಾಹರಣೆಗಳನ್ನು ನೀಡಬಹುದು. ಸರ್ಕಾರದ ಇಂಥ ಕ್ರಮಕ್ಕೆ ಸಾಂಸ್ಕೃತಿಕ ಲೋಕದ ಗಣ್ಯರನೇಕರು ಪ್ರತಿಭಟನೆಯನ್ನೂ ತೋರಿಸಿದ್ದಾರೆ. ಕೇಂದ್ರ ಸಂಗೀತ ನಾಟಕ ಅಕಾಡಮಿ, ಸಾಹಿತ್ಯ ಅಕಾಡಮಿ, ಲಲಿತಕಲಾ ಅಕಾಡಮಿ, ರಾಷ್ಟ್ರೀಯ ನಾಟಕ ಶಾಲೆ ಇವೇ ಮೊದಲಾದ ಸಂಸ್ಥೆಗಳು ಕೇಂದ್ರ ಸರ್ಕಾರದ ಉಸ್ತುವಾರಿಗೆ ಬರುವ ಸ್ವಾಯತ್ತ ಸಂಸ್ಥೆಗಳು. ೨೦೧೫ರಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ಲಲಿತಕಲಾ ಅಕಾಡಮಿಯನ್ನು ತನ್ನ ವಶಕ್ಕೆ ತೆಗೆದುಕೊಂಡಾಗ ನೀಡಿದ ಕಾರಣ, ಹಣಕಾಸು ಅವ್ಯವಹಾರ, ಆಡಳಿತಾತ್ಮಕ ಸಮಸ್ಯೆಗಳು ಇತ್ಯಾದಿ.

ಇಂಥ ಸಮಸ್ಯೆಗಳನ್ನು ಪರಿಹರಿಸಲು ಹಲವಾರು ದಾರಿಗಳಿವೆ. ಸಮಸ್ಯೆ ತುಂಬ ಗಂಭೀರವಾಗಿದ್ದರೆ, ಸರ್ಕಾರ ಪ್ರಕರಣವನ್ನು ಸಿಬಿಐ ತನಿಖೆಗೂ ಕೊಡಬಹುದು. ಅದೆಲ್ಲವನ್ನು ಬಿಟ್ಟು ನೇರವಾಗಿ ಸ್ವಾಯತ್ತ ಸಂಸ್ಥೆಯನ್ನೆ ಸ್ವಾಹಾ ಮಾಡುವುದು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಒಪ್ಪುವ ವಿಚಾರವಾಗುವುದಿಲ್ಲ.

ಪ್ರಜಾತಂತ್ರದ ಮೂಲ ತತ್ವಗಳನ್ನು ಗಾಳಿಗೆ ತೂರುತ್ತ, ಸ್ವಾಯತ್ತತೆ, ಸ್ವಾತಂತ್ರ್ಯ, ಒಕ್ಕೂಟ ವ್ಯವಸ್ಥೆ, ವಿರೋಧ ಪಕ್ಷಗಳ ಅರ್ಥ ಇವು ಯಾವುದನ್ನೂ ಲೆಕ್ಕಿಸದೆ ಇಡೀ ರಾಷ್ಟ್ರವನ್ನೇ ತಲ್ಲಣದ ಸ್ಥಿತಿಯಲ್ಲಿಟ್ಟಿರುವ ಬಿಜೆಪಿ ಸರ್ಕಾರಕ್ಕೆ ಅಕಾಡಮಿಗಳಾಗಲಿ, ಸ್ವಾಯತ್ತ ಸಂಸ್ಥೆಗಳಾಗಲಿ ಹೇಗೆ ದೊಡ್ಡ ಸಂಗತಿಗಳಾಗಲು ಸಾಧ್ಯ?.

ಇದು ಬಿಜೆಪಿ ಸರ್ಕಾರಕ್ಕೆ ಮಾತ್ರ ಅನ್ವಯಿಸುವ ಮಾತೇ? ಹಿಂದಿನ ಸರ್ಕಾರಗಳು ಬಂದಾಗಲೂ ಇದೇ ನೀತಿಯನ್ನು ಅನುಸರಿಸಿಲ್ಲವೇ? ಎನ್ನುವ ಪ್ರಶ್ನೆಯೂ ಇದೆ. ಬಹುಪಾಲು ಸರ್ಕಾರಗಳು, ಕೇಂದ್ರ ಮತ್ತು ರಾಜ್ಯ ಎರಡರಲ್ಲೂ, ಈ ಸ್ವಾಯತ್ತತೆಯನ್ನು ಬೇಕಾಬಿಟ್ಟಿ ಅರ್ಥಮಾಡಿಕೊಂಡಿವೆ. ಅಕಾಡಮಿಗಳನ್ನು ಹೀಗೆಯೇ ನಡೆಸಿಕೊಂಡಿವೆ ಎನ್ನುವುದು ನಿಜ. ಹಾಗೆಯೇ ಇಲ್ಲಿ ನಮ್ಮ ಜನತೆಯ ಮತ್ತು ರಾಜಕಾರಣದ ದೌರ್ಬಲ್ಯ ಮತ್ತು ಕುರೂಪಗಳೂ ಕಾಣಿಸುತ್ತವೆ.

ಇಷ್ಟಾದರೂ, ಹಿಂದಿನ ಯಾವ ಸರ್ಕಾರಗಳೂ ಈ ಹಂತಕ್ಕೆ ಹೋಗಿರಲಿಲ್ಲ ಎಂಬುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನುದಾನ ಪಡೆಯುತ್ತಿರುವ ಸಂಸ್ಥೆಗಳನ್ನು ಗತಿ ನಿಯತಿಯನ್ನು ಗಮನಿಸಿದರೆ ಗೊತ್ತಾಗುತ್ತದೆ. ಇಂಥ ಕ್ರಮಗಳನ್ನು ತೀವ್ರವಾಗಿ ಪ್ರತಿಭಟಿಸಿದಾಗಲೇ ಸರ್ಕಾರಗಳು ಎಚ್ಚರಗೊಳ್ಳುವುದು ಸಾಧ್ಯ. ಆದರೆ ಪ್ರತಿಭಟನೆ ಎಂಬುದು ತನ್ನ ತೀವ್ರತೆಯನ್ನು ಈ ದಿನಗಳಲ್ಲಿ ಕಳೆದುಕೊಂಡಿದೆ. ಸಾಂಕೇತಿಕ ಪ್ರತಿಭಟನೆಗಳೂ ನಡೆಯದಷ್ಟು ದುರ್ಬಲಗೊಂಡಿರುವ ಸಮಾಜ ‘ವಿಕಾಸ’ಗೊಳ್ಳುತ್ತಲೇ ಇದೆ.

ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡುವ ಹೊತ್ತಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಡಾ. ಅರವಿಂದ ಮಾಲಗತ್ತಿ ಒಂದು ಸಂದರ್ಶನದಲ್ಲಿ ಹೇಳಿದ್ದರು: ”ಯಡಿಯೂರಪ್ಪನವರು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಿದ ನಂತರ ಒಂದು ಗಳಿಗೆಯೂ ತಡಮಾಡದೆ ರಾಜೀನಾಮೆ ಕೊಡುತ್ತೇನೆ”.

ಸರ್ಕಾರಕ್ಕೂ, ಅಕಾಡಮಿಯ ಅಧ್ಯಕ್ಷ ಸ್ಥಾನಕ್ಕೂ ಸಂಬಂಧವಿದೆ ಎಂಬುದನ್ನು ಒಪ್ಪಿಕೊಳ್ಳುವ ಇಂಥ ಮನಃಸ್ಥಿತಿ ಹೇಗೆ ಹುಟ್ಟಿಕೊಂಡಿತು? ಅಕಾಡಮಿಗಳು ಸ್ವಾಯತ್ತ ಸಂಸ್ಥೆಗಳು ಎಂದು ಹೇಳುವ ನಾವೇ ಹೊಸ ಸರ್ಕಾರ ಬಂದ ಕೂಡಲೇ ರಾಜೀನಾಮೆ ಕೊಡಲು ಯಾಕೆ ಮುಂದಾಗಬೇಕು? ಸ್ವಾಯತ್ತ ಸಂಸ್ಥೆಗಳನ್ನು ಗೌರವಿಸದ ಸರ್ಕಾರ ಬೇಕಾದರೆ ವಜಾ ಮಾಡಲಿ. ಅಧ್ಯಕ್ಷರೇ ಮುಂದಾಗಿ ರಾಜೀನಾಮೆಯನ್ನು ಕೊಡುವುದು ಎಂಥ ನಿಲುವು?

ಇದೆಲ್ಲ ನಾವು ಚಿಂತಿಸಬೇಕಾದ, ಚರ್ಚಿಸಬೇಕಾದ ಜರೂರು ಸಂಗತಿಗಳು. ಹಾಗೆಯೇ ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ಕ್ರಮವನ್ನು ತೀವ್ರವಾಗಿ ಪ್ರತಿಭಟಿಸಬೇಕಾದ ಮಹತ್ವದ ಹೆಜ್ಜೆಗಳು.

‍ಲೇಖಕರು avadhi

September 24, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. panditaputa

    ಸ್ವಾಯತ್ತತೆ ಎನ್ನುವುದು ಸತ್ವತಃ ಆಚರಣೆಯಲ್ಲಿರಬೇಕು. ಕ್ರಮಬದ್ಧವಾಗಿ ಅಯ್ಕೆಯಾದ ಒಂದು ಸಂಸ್ಥೆಗೆ ಹೊಣೆಗಾರಿಕೆಯನ್ನು ವಹಿಸಿಕೊಟ್ಟಮೇಲೆ ಅಲ್ಲಿ ಎದ್ದು ಕಾಣುವಂತೆ ಅವ್ಯವಹಾರಗಳು ಕಂಡುಬಂದರೆ ವಿಚಾರಣೆ ನಡೆಸಿ ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಆ ಸಮಿತಿ ತನ್ನ ಪೂರ್ಣಾವಧಿಗೆಂದು ಹಮ್ಮಿಕೊಂಡಿರುವ ಕಾರ್ಯಗಳನ್ನು ಪೂರೈಸಲು ಅವಕಾಶಕೊಡಲೇಬೇಕು. ಅಕಾಡೆಮಿ, ರಂಗಾಯಣ ಮತ್ತಿತರ ಸಾಂಸ್ಕೃತಿಕ ಸಂಸ್ಥೆಗಳನ್ನು ಅಧಿಕಾರಾಕಾಂಕ್ಷಿ ಶಾಸಕರನ್ನು ತೃಪ್ತಿಪಡಿಸಲು ಬಳಸಕೂಡದು. ಹಾಗೆ ನೇಮಕವಾದವರು ಮಾತ್ರ ಸರಕಾರ ಬದಲಾದಾಗ ರಾಜಿನಾಮೆ ಕೊಡಲು ಬಾಧ್ಯರು. ಉಳಿದವರು ರಾಜಿನಾಮೆ ಕೊಡಬಾರದು; ಕೊಡಲು ಮುಂದಾಗಬಾರದು.
    ಪಂಡಿತಾರಾಧ್ಯ ಮೈಸೂರು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: