ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಂಗಾಯಣದ ಬಗ್ಗೆ ಮತ್ತಷ್ಟು…

ರಂಗಾಯಣದ ಪ್ರಸ್ತುತ ಬಿಕ್ಕಟ್ಟಿನ ಬಗ್ಗೆ ನಿನ್ನೆ ಅವಧಿಯಲ್ಲಿ ರಂಗ ಸಮಾಜದ ಸದಸ್ಯರ ವಿವರಣೆ ಪ್ರಕಟವಾಗಿತ್ತು. (ಲೇಖನಕ್ಕಾಗಿ ಇಲ್ಲಿ ಕ್ಲಿಕ್ಕಿಸಿ).

ಲೇಖನ ಓದಿ ಬಂದ ಪ್ರತಿಕ್ರಿಯೆಗಳು ಇಲ್ಲಿವೆ.

ಇದರ ಬಗ್ಗೆ ಚರ್ಚೆ ಆಗಲಿ ಎನ್ನುವ ಉದ್ದೇಶದಿಂದ ಅವನ್ನು ಇಲ್ಲಿ ಪ್ರಕಟಿಸುತ್ತಿದ್ದೇವೆ.  ನಿಮ್ಮ ಅಭಿಪ್ರಾಯಗಳಿಗೆ ಸ್ವಾಗತ :

ಧನಂಜಯ ಕುಲಕರ್ಣಿ

ರಂಗಾಯಣ…..ಸಾಕುಮಾಡಿ ರಾಮಾಯಣ!

ರಂಗಾಯಣದಲ್ಲಿ ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿ ನಾನು ಇದನ್ನು ಬರೆಯುತ್ತಿದ್ದೇನೆ. ನಾನೂ ಸಹ ರಂಗಭೂಮಿಯಲ್ಲಿ ಕಳೆದ ೨೫ ವರ್ಷಗಳಿಂದ ಕೆಲಸ ಮಾಡುತ್ತಿದ್ದು, ಅನೇಕ ಹಿರಿಯ ರಂಗ ಕರ್ಮಿಗಳೊಂದಿಗೆ ಹಾಗೂ ರಂಗತಂಡಗಳೊಂದಿಗೆ ಕಾರ್ಯ ನಿರ್ವಹಿಸಿರುವ ಸ್ವಲ್ಪ ಮಟ್ಟಿನ ಅನುಭವ ನನಗೂ ಇದೆ. ಆದ್ದರಿಂದ ಈ ಬೆಳವಣಿಗೆ ಕುರಿತು ಬರೆಯಲು ನಾನು ಅರ್ಹನೆಂದು ಭಾವಿಸಿದ್ದೇನೆ.
ನನ್ನ ಅಭಿಪ್ರಾಯದಲ್ಲಿ ಹೇಳುವುದಾದರೆ ರಂಗಾಯಣದ ಕಲಾವಿದರನ್ನು ಸರಕಾರಿ ಕೃಪಾಪೋಷಿತ ಕಲಾವಿದರೆಂದು ಪಾಲನೆ ಮಾಡಿದ್ದೇ ಈ ಎಲ್ಲ ಆವಾಂತರಗಳ ಸೃಷ್ಟಿಗೆ ಕಾರಣ. ಯಾವುದೇ ವಿಶ್ವವಿದ್ಯಾಲಯವಾಗಲಿ ಅಥವಾ ಶೈಕ್ಷಣಿಕ ಸಂಸ್ಥೆಯಾಗಲಿ ತಮ್ಮಲ್ಲಿ ಬಂದ ಯಾವ ವಿದ್ಯಾರ್ಥಿಗೂ ಸಹ ಉದ್ಯೋಗ ಖಾತ್ರಿಯ ಭರವಸೆಯನ್ನು ನೀಡುವುದಿಲ್ಲ. ಒಂದು ವೇಳೆ ಹಾಗೆ ನೀಡಿದ್ದು ನಿಜವೇ ಆಗಿದ್ದಲ್ಲಿ ನಮ್ಮ ದೇಶದಲ್ಲಿ ನಿರೊದ್ಯೂಗ ಸಮಸ್ಯೆಗೆ ಎಂದೋ ಪರಿಹಾರ ಸಿಕ್ಕಿರುತ್ತಿತ್ತು. ಈಗ ರಂಗಾಯಣದ ಕಲಾವಿದರಿಗೆ ಸರಕಾರದ ಆಶ್ರಯ ಸಿಕ್ಕಿದೆ. ಸರಕಾರದ ಎಲ್ಲ ಸೌಲಭ್ಯಗಳನ್ನು ಅವರು ಅನುಭವಿಸುತ್ತಿದ್ದಾರೆ. ಕಲಾವಿದರಿಗೆ ಯಾವುದೇ ರೀತಿಯ ಕಟ್ಟಳೆ ಇರಬಾರದು, ಅವರು ತುಂಬಾ ಕ್ರಿಯಾಶೀಲರು, ಅವರನ್ನು ಯಾವುದೇ ರೀತಿಯ ಆಡಳಿತ ಚೌಕಟ್ಟಿನಲ್ಲಿ ಇಡಬಾರದು ಎಂಬ ರಂಗಾಯಣ ಕಲಾವಿದರ ವಾದ. ಹಾಗಿದ್ದಲ್ಲಿ, ಸರಕಾರದ ಎಲ್ಲ ಸೌಲಭ್ಯಗಳು ಇವರಿಗೆ ಬೇಕು ಆದರೆ, ಸರಕಾರಕ್ಕಿರುವ ನೀತಿ-ನಿಯಮಗಳನ್ನು ಪಾಲಿಸಲು, ಅಲ್ಲಿನ ಕನಿಷ್ಠ ಮಟ್ಟದ ಶಿಸ್ತನ್ನು ಪಾಲಿಸಲು ಇವರಿಂದ ಸಾಧ್ಯವಿಲ್ಲವೇ? ನಿಜವಾದ ಕಲಾವಿದನಾದವನು ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿಸುವುದು, ಗೌರವದಿಂದ ಕಾಣುವುದು, ನಾವು ಶಿಸ್ತಿನಿಂದ ವರ್ತಿಸಿ ಉಳಿದವರಿಗೆ ಮಾದರಿಯಾಗುವಂತೆ ಇರುವುದು…… ಇವು ಒಬ್ಬ ಕಲಾವಿದನಿಗೆ ಇರಬೇಕಾದ ಕನಿಷ್ಠ ಮಟ್ಟದ ಗುಣಧರ್ಮಗಳು. ಅದನ್ನೇ ಮರೆತು ಸಾರ್ವಭೌಮರಂತೆ ವರ್ತಿಸುವುದು ಅವರು ಇಡೀ ರಂಗಭೂಮಿಯ ಶಿಸ್ತಿಗೆ ಮಾಡುತ್ತಿರುವ ಅವಮಾನ.
ಶ್ರೀಮತಿ ಜಯಶ್ರೀ ಅವರು ರಂಗಾಯಣ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಈ ಎಲ್ಲ ರಂಪಾಟಗಳು ಬಯಲಿಗೆ ಬಂದಿವೆ ಅಷ್ಟೇ. ಕಾರಂತರು ನಿರ್ದೇಶಕರಾಗಿದ್ದಾಗಿನಿಂದ ಹಿಡಿದು, ಬಸವಲಿಂಗಯ್ಯ, ಪ್ರಸನ್ನ, ಜಂಬೆ ಇವರೆಲ್ಲರ ಅವಧಿಯಲ್ಲಿ ಸಹ ಅಲ್ಲಿನ ಕಲಾವಿದರು ತಮ್ಮ ಮನಸ್ಸಿಗೆ ಬಂದಂತೆ ವರ್ತಿಸಿ, ಈ ಎಲ್ಲ ಹೆಸರಾಂತ ರಂಗಕರ್ಮಿಗಳಿಗೆ ಇರುಸು-ಮುರುಸು ಉಂಟುಮಾಡಿದ್ದು ಬಹಿರಂಗ ಗುಟ್ಟು. ಕೇವಲ ಇವರಲ್ಲದೇ, ಬೇರೆ ಬೇರೆ ದೇಶಗಳಿಂದ ನಾಟಕಗಳನ್ನು ನಿರ್ದೇಶಿಸಲು ಬಂದ ನಿರ್ದೇಶಕರು ಸಹ ಈ ರಂಗಾಯಣ ಕಲಾವಿದರ ಗೂಂಡಾಗಿರಿಯ ಪ್ರಸಾದವನ್ನು ಸ್ವೀಕರಿಸಿರುವುದು ಮೈಸೂರಿನ ಎಲ್ಲ ರಂಗ ಕರ್ಮಿಗಳಿಗೆ ತಿಳಿಯದ ವಿಷಯವೇನಲ್ಲ. ರಂಗಾಯಣದ ಕಲಾವಿದರು ಕಳೆದ ೨೧ ವರ್ಷಗಳಲ್ಲಿ ತಮ್ಮಲ್ಲಿರುವ ಕ್ರಿಯಾತ್ಮಕತೆಯನ್ನು ತೋರಿಸುವುದು ಒತ್ತಟ್ಟಿಗಿರಲಿ, ಬೇರೆಯವರು ನಿರ್ದೇಶಿಸಿದ ನಾಟಕಗಳನ್ನು ನೋಡುವ ಸೌಜನ್ಯ ಸಹ ಇವರಲ್ಲಿಲ್ಲ. ಕೇವಲ ಗೂಂಡಾ ಪ್ರವೃತ್ತಿಯನ್ನು ಬೆಳೆಸಿಕೊಂಡು, ಇಡೀ ಕನ್ನಡ ರಂಗಭೂಮಿಗೆ ಕಳಂಕ ತರುವ ಕಾಯಕದಲ್ಲಿ ತೊಡಗಿದ್ದಾರೆ.
ಈ ಕಲಾವಿದರೆಲ್ಲ ಸರಕಾರಿ ಸಂಬಳ ಪಡೆಯುತ್ತಿರುವುದರಿಂದ, ಸರಕಾರದ ಎಲ್ಲ ಸೌಲಭ್ಯಗಳನ್ನು ಪಡೆಯುತ್ತಿರುವುದರಿಂದ, ಅವರಿಗೂ ಸಹ ಇತರ ಸರಕಾರಿ ನೌಕರರಿಗೆ ಅನ್ವಯವಗುವ ಎಲ್ಲ ಕಾಯಿದೆ ಕಾನೂನುಗಳು ಅನ್ವಯವಾಗುತ್ತವೆ. ಇವರಾರೂ ಇದರಿಂದ ಹೊರತಲ್ಲ.
ರಂಗಾಯಣ ಕೇವಲ ಮೈಸೂರಿಗೆ ಮಾತ್ರ ಸೀಮಿತವಾಗಬಾರದು. ಇದನ್ನು ನನ್ನಂತಹ ಅನೇಕ ಜನ ರಂಗಭೂಮಿಯಲ್ಲಿ ಆಸಕ್ತಿಯುಳ್ಳವರು ಮೊದಲಿನಿಂದಲೂ ಹೇಳುತ್ತ ಬಂದಿದ್ದಾರೆ. ಈಗ ನಾನೂ ಸಹ ಅದನ್ನು ಮತ್ತೊಮ್ಮೆ ಉಚ್ಛರಿಸುತ್ತೇನೆ.
ಸಧ್ಯಕ್ಕೆ ರಂಗಾಯಣದಲ್ಲಿರುವ ೧೮ ಜನ ಕಲಾವಿದರನ್ನು ಆರು ಗುಂಪುಗಳನ್ನಾಗಿ ವಿಂಗಡಿಸಿ, ಅವರನ್ನು ಕರ್ನಾಟಕದ ಆರು ಪ್ರಮುಖ ನಗರಗಳಿಗೆ ವರ್ಗಮಾಡಿ ಅಲ್ಲಿ ರಂಗ ಭೂಮಿಗೆ ಸಂಬಂಧಿಸಿದ ಕೆಲಸ ಮಾಡಲು ಹೇಳಬೇಕು. ಹೊಸ ಪ್ರತಿಭೆಗಳನ್ನು ಗುರುತಿಸುವುದು, ರಂಗ ತರಬೇತಿ ಶಿಬಿರಗಳನ್ನು ನಡೆಸುವುದು, ಹೊಸ ನಾಟಕಗಳನ್ನು ತಯಾರಿಸುವುದು…ಹೀಗೆ ಅನೇಕ ಕೆಲಸಗಳನ್ನು ಮಾಡಲು ಅವರಿಗೆ ಜವಾಬ್ದಾರಿಯನ್ನು ನೀಡಬೇಕು.
ಸಧ್ಯದ ಪಾರಿಸ್ಥಿತಿಯಲ್ಲಿ ರಂಗಾಯಣಕ್ಕೆ ಯಾವ ನಿರ್ದೇಶಕರನ್ನು ನೇಮಿಸುವ ಅಗತ್ಯವಿಲ್ಲ. ಸಧ್ಯ ಚಾಲ್ತಿಯಲ್ಲಿರುವಂತೆ ರಂಗಾಯಣವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಧೀನದಲ್ಲಿಯೇ ಇರಲಿ. ಇಲಾಖೆಯ ನಿರ್ದೇಶಕರು ರಂಗಾಯಣದ ಸಂಪೂರ್ಣ ಉಸ್ತುವಾರಿಯನ್ನು ನೋಡಿಕೊಂಡರೆ, ರಾಜ್ಯದ ಆರು ಪ್ರಮುಖ ನಗರ/ಪ್ರದೇಶಗಳಿಗೆ ತೆರಳುವ ತಂಡದ ಕಾರ್ಯ ಚಟುವಟಿಕೆಗಳನ್ನು ಆಯಾ ಪ್ರದೇಶದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕರ ಮೇಲ್ವಿಚಾರಣೆಯಲ್ಲಿ ನಡೆಸಬಹುದು. ಅದರ ಜೊತೆಗೆ ಪ್ರತಿ ಪ್ರದೇಶದಲ್ಲಿರುವ ರಂಗತಂಡಗಳಿಂದ ಒಬ್ಬ ಪ್ರತಿನಿಧಿಯಂತೆ ೫-೬ ಜನರ ಘಟಕವಾರು ರಂಗ ಸಮಾಜವನ್ನು ನಿರ್ಮಿಸಿ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ರಂಗಾಯಣದ ಕಲಾವಿದರು ಮತ್ತು ಆಯಾ ಘಟಕಗಳ ರಂಗ ಸಮಾಜದ ಸದಸ್ಯರು ಜೊತೆಗೂಡಿ ಸಮಾಲೋಚಿಸಿ ತಮ್ಮ ತಮ್ಮ ಪ್ರದೇಶಗಳಲ್ಲಿ ರಂಗಚಟುವಟಿಕೆಗಳನ್ನು ಮಾಡುವುದು.
ಹೀಗೆ ಆರು ತಂಡಗಳನ್ನಾಗಿ ವಿಂಗಡಿಸಿ, ಬೇರೆ ಬೇರೆ ಪ್ರದೇಶಗಳಿಗೆ ರಂಗಾಯಣದ ಕಲಾವಿದರನ್ನು ಕಳುಹಿಸಿದ ನಂತರ ಸರಕಾರದಿಂದ ರಂಗಾಯಣದ ಕಲಾವಿದರ ಸಂಬಳವನ್ನು ಹೊರತು ಪಡಿಸಿ ಸಿಗುವ ಹಣವನ್ನು ಎಲ್ಲ ಆರು ಘಟಕಗಳಿಗೆ ವಿಂಗಡಿಸಿ, ಅದನ್ನು ಮೂಲಧನವನ್ನಾಗಿರಿಸಿಕೊಂಡು, ತಮ್ಮ ತಮ್ಮ ಪ್ರದೇಶಗಳಲ್ಲಿ ಸಿಗುವ ಸಂಪನ್ಮೂಲಗಳಿಂದ ರಂಗ ಚಟುವಟಿಕೆಗಳನ್ನು ಮಾಡಬೇಕು.
ಆಯಾ ಪ್ರದೇಶದ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಉಪನಿರ್ದೇಶಕರು, ರಂಗ ಸಮಾಜದ ಸದಸ್ಯರು ಸೇರಿ, ತಮ್ಮ ತಮ್ಮ ಪ್ರದೇಶದಲ್ಲಿ ರಂಗಾಯಣದ ಕಲಾವಿದರು ಮಾಡಿದ ಕಾರ್ಯಚಟುವಟಿಕೆಗಳ ಕುರಿತು ಪ್ರತಿ ಆರು ತಿಂಗಳಿಗೊಮ್ಮೆ ಕಾರ್ಯ ಪರಿಶೀಲನೆ ನಡೆಸಿ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಕ್ಕೆ ವರದಿ ಕಳುಹಿಸಿಕೊಡುವುದು. ಅದನ್ನು ಇಲಾಖೆಯ ನಿರ್ದೇಶಕರು ವಿವರವಾಗಿ ಪರಿಶೀಲನೆ ನಡೆಸಿ, ಮುಂದಿನ ಮಾರ್ಗೋಪಾಯಗಳನ್ನು ಸೂಚಿಸುವುದು ಮತ್ತು ಅದರ ನಿರ್ದೇಶನದಂತೆ ರಂಗಾಯಣದ ಕಲಾವಿದರು ಕಾರ್ಯ ನಿರ್ವಹಿಸಬೇಕು.
ಆರೂ ಘಟಕಗಳಿಂದ ವರ್ಷಕ್ಕೊಂದು ಹೊಸ ನಾಟಕ ತಯರಾಗಬೇಕು ಮತ್ತು ಎಲ್ಲ ಆರು ನಾಟಕಗಳನ್ನು ಒಂದು ಕೇಂದ್ರೀಕೃತ ಪ್ರದೇಶದಲ್ಲಿ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿ, ನಾಟಕೋತ್ಸವ, ವಿಚಾರ ಸಂಕಿರಣ ಮುಂತಾದ ರಂಗಭೂಮಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು.
ಒಂದು ಬಾರಿ ಅಸ್ತಿತ್ವಕ್ಕೆ ಬಂದ ರಂಗ ಸಮಾಜದ ಅವಧಿ ಎರಡು ವರ್ಷಗಳ ವರೆಗೆ ನಿಗದಿ ಪಡಿಸಿ, ಎರಡು ವರ್ಷದ ಅವಧಿಯ ನಂತರ ಮತ್ತೆ ಹೊಸ ರಂಗ ಸಮಾಜವನ್ನು ನಿರ್ಮಿಸಬಹುದು.
ರಂಗಾಯಣದ ಕಲಾವಿದರೆಲ್ಲ ಸರಕಾರದ ಸೌಲಭ್ಯಗಳನ್ನು ಅನುಭವಿಸುತ್ತಿರುವುದರಿಂದ, ಈ ಸಲಹೆಗಳಿಗೆ ಒಪ್ಪಿ ಕಾರ್ಯ ನಿರ್ವಹಿಸಬೇಕು. ಇಲ್ಲವಾದಲ್ಲಿ ಸರಕಾರ ಅವರ ಮೇಲೆ ಅಗತ್ಯ ಕ್ರಮ ಜರುಗಿಸಬೇಕು. ಏಕೆಂದರೆ ರಂಗಾಯಣದ ಈಗಿನ ಪರಿಸ್ಥಿತಿಯನ್ನು ನೋಡಿದಲ್ಲಿ ಅಲ್ಲಿನ ಕಲಾವಿದರಲ್ಲಿ ಎಂತಹ ಮೊಂಡುತನ ಬೆಳೆದಿದೆ ಎಂದರೆ ಅವರು ಯಾರ ಮಾತನ್ನೂ ಕೇಳುವ ಹಂತದಲ್ಲಿಲ್ಲ. ಎಲ್ಲವನ್ನೂ ಮೀರಿ ತಮ್ಮದೇ ಸಾರ್ವಭೌಮತ್ವವನ್ನು ಸಾಧಿಸಬೇಕೆಂಬ ಹಟದಲ್ಲಿದ್ದಂತೆ ತೋರುತ್ತದೆ. ಇತರ ಸರಕಾರಿ ನೌಕರರಿಗೆ ಅನ್ವಯವಾಗುವಂತೆ ಇವರಿಗೂ ಸಹ ಕಟ್ಟು ನಿಟ್ಟಿನ ಕಾಯಿದೆಗಳು ಜಾರಿಗೆ ಬರಲಿ. ಅದರ ಚೌಕಟ್ಟಿನಲ್ಲಿ ಅವರು ಅನಿವಾರ್ಯವಾಗಿ ಕೆಲಸ ಮಾಡಲಿ.

ಪ್ರಸಾದ್ ರಕ್ಷಿದಿ

ರಂಗಾಯಣದ ಪ್ರಾರಂಭದಿಂದಲೂ ಅದನ್ನು ಗಮನಿಸುತ್ತ ನಾಟಕಗಳನ್ನು ನೋಡುತ್ತ ಅವರೊಂದಿಗೆ ಜಗಳ ಕಾಯತ್ತ ಬಂದ ಸಲಿಗೆ ಮತ್ತು ಕಾಳಜಿಗಳಿಂದ ಈಮಾತುಗಳನ್ನು ಬರೆಯುತ್ತಿದ್ದೇನೆ. ಈ ಮೇಲಿನ ಪ್ರತಿಕ್ರಿಯೆಗಳು ಸ್ವಲ್ಪ ತಪ್ಪು ತಿಳುವಳಿಕೆಯಿಂದ ಕೂಡಿದೆಯೆನಿಸುತ್ತದೆ.
ರಂಗಾಯಣ ಪ್ರಾರಂಭವಾದಾಗ ಅಲ್ಲಿಗೆ ನೇಮಿಸಿಕೊಂಡ ಕಲಾವಿದರನ್ನು ಖಾಯಂ ಉದ್ಯೋಗಿಗಳೆಂದೇ ತಿಳಿಸಿ ನೇಮಿಸಿಕೊಳ್ಳಲಾಗಿತ್ತು. ಅವರನ್ನು ಕೆಲಕಾಲದ ನಂತರ ಬೇರೆ ಬೇರೆ ಕಡೆಗಳಿಗೆ ಅಂದರೆ ಕೇವಲ ನಾಲ್ಕು ರಂಗಾಯಣವಲ್ಲ ಪ್ರತಿ ಜಿಲ್ಲೆಗೂ ಇಬ್ಬರಂತೆ ಕಳುಹಿಸಿ ಅವರ ಅನುಭವವನ್ನು ನಾಡಿಗೆ ಒದಗಿಸುವ ಮಾತನ್ನು ಕಾರಂತರಾದಿಯಾಗಿ ಎಲ್ಲ ನಿರ್ದೇಶಕರೂ ಆಡಿದ್ದರು. ಆದೆರೆ ಇದುವರೆಗೂ ಕಲಾವಿದರಿಗೆ ಉದ್ಯೋಗ ನಿಯಮಾಳಿಯನ್ನು ಸಹ ರೂಪಿಸದೆ, ಕಾಲಹರಣ ಮಾಡುತ್ತ ಬಂದ ಸರ್ಕಾರಗಳು ಹಾಗೂ ಕಲಾವಿದರು ಕೋರ್ಟು ಮೆಟ್ಟಿಲೇರಿ ಅವರ ಪರವಾಗಿ ಆದೇಶ ಪಡೆದ ಮೇಲೂ ಅದನ್ನು ಜಾರಿಗೊಳಿಸದೆ ನ್ಯಾಯಾಂಗ ನಿಂದನೆ ಮಾಡುತ್ತಿರುವ ಸರ್ಕಾರಕ್ಕೆ ಬುದ್ದಿ ಹೇಳದೆ ಈಗ ಇದ್ದಕ್ಕಿದ್ದಂತೆ ಜ್ಙಾನೋದಯವಾದಂತೆ ವರ್ತಿಸುತ್ತಿರುವ ರಂಗಸಮಾಜ ಇಷ್ಟುದಿನ ಏನು ಮಾಡುತ್ತಿತ್ತು.
ಕಲಾವಿದರಿರರಲಿ ಕನ್ನಡದ ಅತ್ಯುತ್ತಮ ಪ್ರತಿಭೆಗಳಿರುವ ರಂಗಾಯಣದ ಪ್ರಶಿಕ್ಷರಿಗೆ ಕೊಡುತ್ತಿರುವ ಸಂಬಳ ಸವಲತ್ತುಗಳೇನು ಎಂದು ನೋಡಿದರೆ ಅವರು ಯಾವುದಾದರೂ ಸಿನಿಮಾ ತೇಟರ್ ನಲ್ಲಿ ಗೇಟ್ ಕೀಪರುಗಳಾಗಿ ಕೆಲಸ ಮಾಡುತ್ತಿದ್ದರೆ ಸುಖವಾಗಿರುತ್ತಿದ್ದರು ಎನಿಸುತ್ತದೆ. ರಂಗ ಸಮಾಜದ ಗೆಳೆಯರೆ ಅತ್ತವೂ ಸ್ವಲ್ಪ ಕಣ್ಣು ಹಾಯಿಸಿಸ್ವಾಮಿ. ಕಾರಂತರು ಸಾಂಧರ್ಭಿಕವಾಗಿ ಅವರ ಆತ್ಮ ಚರಿತ್ರೆಯಲ್ಲಿ ಹೇಳಿಕೊಂಡು ಮಾತುಗಳನ್ನು ಗುರಾಣಿಯಂತೆ ಬಳಸಿಕೊಂಡು ಅವರನ್ನು ಹಣಿಯಲು ಪ್ರಯತ್ನಿಸುವ ನೀವು, ಇದೇಕಾರಂತರ ಆಡಳಿತದ ಬಗ್ಗೆ ಪೂರ್ಣಚಂದ್ರತೇಜಸ್ವಿಯವರು ಹೊಂದಿದ್ದೆ ಅಭಿಪ್ರಾಯವನ್ನೂ ಸ್ವಲ್ಪ ಗಮನಿಸಿ. (ಅವಧಿಯಲ್ಲೇ ಬಂದಿರುವ ನನ್ನ ಅಂಕಣ “ನಮ್ಮ ನಡುವಿನ ತೇಜಸ್ವಿ ನೋಡಿ)
ಕಲಾವಿದರ ಅನುಭವವನ್ನು ಬೇರೆಕಡೆಗಳಲ್ಲಿ ಬಳಸಬಾರದೆಂದು ಕಲಾವಿದರೂ ಸೇರಿದಂತೆ ನಮ್ಮೆಲ್ಲರ ವಾದವಲ್ಲ, ಇಷ್ಟು ವರ್ಷದುಡಿದಿರುವ ಕಲಾವಿದ- ಶಿಕ್ಷಕರ ಬೇಡಿಕೆಗಳನ್ನು ಈಡೇರಿಸಿ ಅವರೇನು ಆಕಾಶವನ್ನು ತಂದು ಕೊಡಲು ಕೇಳುತ್ತಿಲ್ಲ. ರಂಗಾಯಣದ ನಿರ್ದೇಶಕ ಸ್ವಾತಂತ್ರ್ಯವನ್ನು ಕಿತ್ತುಕೊಂಡು ಗುಮಾಸ್ತರನ್ನಗಿಸಬೇಡಿ. ಕೊನೆಯದಾಗಿ– ರಂಗಾಯಣ ಕನ್ನಡದ ಕರ್ನಾಟಕದ ಹೆಮ್ಮಯಾಗಿ ಉಳಿಯಲಿ. ರಂಗಸಮಾಜದ -ಅಥವಾ ಇನ್ನರದೋ ಪ್ರತಿಷ್ಟೆಗಾಗಿ ರಂಗಾಯಣವನ್ನು ನಾಶಮಾಡುವ ಪ್ರಯತ್ನಮಾಡಬೇಡಿ.

ಅಶೋಕವರ್ಧನ

ರಕ್ಷಿದಿಯವರು ಎತ್ತಿದ ಸಮಸ್ಯೆ ನನಗೆ ತಿಳಿದಿರಲಿಲ್ಲ. ಆಡಳಿತ ಕಲಾವಿದರು ಆರ್ಥಿಕ ಭದ್ರತೆಗೆ ಎರವಾಗಿ ಹೊಸ ಜವಾಬ್ದಾರಿಯನ್ನು ನಿರ್ವಹಿಸಬೇಕೆನ್ನುವುದನ್ನೇ ಲಕ್ಷ್ಯವಾಗಿಟ್ಟುಕೊಂಡಿರುವುದಾದರೆ ಖಂಡಿತವಾಗಿಯೂ ಅದು ತಿರಸ್ಕಾರಯೋಗ್ಯ. ನನ್ನ ಬೆಂಬಲ ಕಲಾವಿದರಿಗೇ.
 

ಲಿಂಗರಾಜು ಬಿ.ಎಸ್.

ಮೈಸೂರು ರಂಗಾಯಣದ ಇಂದಿನ ಸ್ಥಿತಿಗೆ ಕೆಲಸ ಮರೆತು ರಾಜಕೀಯ ಮಾಡಿದ್ದೇ ಕಾರಣ. ಇದು ರಂಗಸಮಾಜ ಹಾಗೂ ಮೈಸೂರು ರಂಗಾಯಣದಲ್ಲಿರುವ ಕಲಾವಿದರಿಗೂ ಅನ್ವಯಿಸುತ್ತದೆ. ನಾನು ಮೈಸೂರಲ್ಲಿ ಓದುತ್ತಿದ್ದಾಗಿನಿಂದಲೂ ನೋಡುತ್ತಿರುವಂತೆ ಅಲ್ಲಿ ರಂಗಸಂಬಂಧಿ ಕೆಲಸಗಳಿಗಿಂತಲೂ ಹೆಚ್ಚಾಗಿ ನಡೆದಿದ್ದು ರಾಜಕೀಯ. ಇದು ಮೈಸೂರಿನ ಎಲ್ಲಾ ರಂಗಪ್ರೇಮಿಗಳಿಗೂ ತಿಳಿದಿರುವ ವಿಷಯವೇ.
ನನ್ನ ಅಭಿಪ್ರಾಯದಲ್ಲಿ ರಂಗಾಯಣದ ಇಂದಿನ ಸ್ಥಿತಿಗೆ ಮೊದಲ ಕಾರಣ ಎಂದರೆ ಕೇಂದ್ರೀಕರಣಗೊಂಡಿದ್ದು. ಕಾರಂತರು ಕಲಾವಿದರು ನಿಂತ ನೀರಾಗದಿರಲಿ ಎಂದೇ ತರಬೇತಿ ಮುಗಿದ ಮೇಲೆ ಎಲ್ಲಾ ಕಲಾವಿದರು ತಿರುಗಾಟ ನಡೆಸಿ ತಮ್ಮ ವ್ಯಾಪ್ತಿಯನ್ನು ಇತರ ಕಡೆಗೆ ವಿಸ್ತರಿಸಿ ಎಂದು ಸಲಹೆ ನೀಡಿದ್ದರು. ಆದರೆ ಇದನ್ನು ಕಲಾವಿದರು ಮರೆತರು ಎನ್ನುವುದಕ್ಕಿಂತ ರಂಗಸಮಾಜ ಮರೆಯಿತು ಎಂದು ಹೇಳುವುದೇ ಸೂಕ್ತ.
ಎರಡನೇ ಕಾರಣ ಅಲ್ಲಿನ ಕಲಾವಿದರಿಗೆ ಇರುವ ಅಭದ್ರತೆ ಹಾಗೂ ಅದರಿಂದ ಅವರಲ್ಲಿ ಹುಟ್ಟಿಕೊಂಡಿರುವ ಕೀಳರಿಮೆ. ನಾವು ಮೈಸೂರಿನ ಕಲಾವಿದರು ಎಂದು ಹೇಳಿಕೊಳ್ಳುವ ಸ್ಥಿತಿಯಲ್ಲಿ ಅಲ್ಲಿನ ಯಾವ ಕಲಾವಿದರೂ ಇಲ್ಲ. ಅದಕ್ಕೆ ಸಕರ್ಾರ ಹಾಗೂ ಕಲಾವಿದರ ನಡುವೆ ಸಂಪರ್ಕ ಸೇತುವಾಗಿರುವ ರಂಗಸಮಾಜ ಎನ್ನದೆ ಬೇರೆ ಯಾರನ್ನೂ ಹೊಣೆಯಾಗಿಸಲು ಸಾಧ್ಯ. ತಮ್ಮ ಆಭದ್ರತೆ ಕಾರಣದಿಂದ ಕಲಾವಿದರಿಗೆ ಯಾರೂ ಏನೇ ಹೇಳಿದರೂ ಆವರು ಮೊದಲು ಪ್ರತಿಕ್ರಿಯಿಸುವುದೇ ನಕಾರಾತ್ಮಕವಾಗಿ. ಇಂದಿನ ಸ್ಥಿತಿಗೆ ಹಾಗೂ ಹಿಂದಿನ ನಿದರ್ೇಶಕರೊಂದಿಗೆ ಈ ಕಲಾವಿದರು ಒರಟಾಗಿ ನಡೆದುಕೊಂಡಿದ್ದರೆ ಅದಕ್ಕೆ ಈ ಭಾವನೆಯೇ ಕಾರಣ.
ಮೂರನೇಯದು ಸಕರ್ಾರ ಇವರು ಕಲಾವಿದರು, ನಾಡಿನ ಸಂಸ್ಕೃತಿಯನ್ನು ಹರಡುವವರು ಎಂದು ಭಾವಿಸದೆ ಮನರಂಜನೆ ನೀಡುವ ತಾವುನೀಡುವ ಭತ್ಯೆಗೆ ಇರುವವರು ಎಂದು ಭಾವಿಸಿದ್ದು. ಈ ಭಾವನೆ ಈಗ ಅಧಿಕಾರ ನಡೆಸುತ್ತಿರುವ ಆಯುಕ್ತರ ಮಾತುಗಳನ್ನು ನೋಡಿದರೂ ತಿಳಿಯುತ್ತದೆ. ಬಹುಶಃ ಹಿಂದಿನ ಕೆಲ ನಿದರ್ೇಶಕರೂ ಕೂಡ ಹೀಗೆ ನಡೆದುಕೊಂಡಿರಬಹುದು. ಇದರಿಂದ ಮೈಸೂರು ರಂಗಾಯಣ ಎಂಬುದು ಗೊಂದಲದ ಗೂಡಾಯಿತು.
ಸಮಸ್ಯೆಯನ್ನು ಮಾತುಕತೆ ಹಾಗೂ ಒಂದು ಸ್ನೇಹಮಯಿ ವಾತಾವರಣ ರೂಪಿಸುವ ಮೂಲಕ ಸರಿಪಡಿಸಬಹುದು. ಕಲಾವಿದರೂ ಕೂಡ ತಮ್ಮ ಮೊಂಡಾಟ ಬಿಟ್ಟು ಸಹಕರಿಸಬೇಕು. ಸಂಸ್ಕೃತಿ ಬಗ್ಗೆ ಏಕಮುಖಿ ಚಿಂತನೆ ಬೆಳೆಯುತ್ತಿರು ಈ ಹೊತ್ತಿನಲ್ಲಿ ಸಾಂಸ್ಕೃತಿಕ ಲೋಕದ ಸಾಕ್ಷಿಪ್ರಜ್ಣೆಯಾಗಿ ಬೆಳೆಯಬೇಕಾಗಿದ್ದ ರಂಗಾಯಣದ ಇಂದಿನ ಸ್ಥಿತಿ ತುಂಬಾ ದುಃಖಕರವಾದುದು.

‍ಲೇಖಕರು avadhi

2 April, 2013

ನಿಮಗೆ ಇವೂ ಇಷ್ಟವಾಗಬಹುದು…

4 Comments

  1. ವಸ್ತುನಿಷ್ಠ

    ಪ್ರಸಾದ್ ರಕ್ಷೀದಿಯವರು, ಮತ್ತು ಹಾಗೆ ಯೋಚಿಸುವ ಅನೇಕರಿಗೆ ಅಪ್ಪಟ ವಾಸ್ತವ ಗೊತ್ತಿರಲಿಕ್ಕಿಲ್ಲ ಎಂದೇ ಅನಿಸುತ್ತದೆ. 38,000 ರೂಪಾಯಿಗಳ ಸಂಬಳ ಪ್ರತೀ ತಿಂಗಳು ತಪ್ಪದೆ ತೆಗೆದುಕೊಳ್ಳುವ ಕಲಾವಿದರು ಅದೆಷ್ಟು ಮಂದಿ ಇದ್ದಾರೆ ಹೇಳಿ.? ರಂಗಾಯಣಕ್ಕೆ ಕಳೆದ ವರ್ಷ ಸರ್ಕಾರ ಕೊಟ್ಟದ್ದು ಒಂದು ಕೋಟಿ ಎಪ್ಪತ್ತು ಲಕ್ಷ ಆಸುಪಾಸು. ಎಷ್ಟು ಹೊಸ ನಾಟಕಗಳಾಗಿದ್ದಾವೆ ಹೇಳಿ.? ಎಷ್ಟು ಜನ ಹೊಸ ಕಲಾವಿದರನ್ನು ಸೃಷ್ಟಿಸಿದ್ದಾರೆ ಹೇಳಿ.? ಮಹಾಪ್ರತಿಭಾವಂತರೆಲ್ಲರೂ ಎದುರಿನ ಮಂದಿಯನ್ನು ಕತ್ತಿನ ಪಟ್ಟಿ ಹಿಡಿದೇ ಮಾತನಾಡಿಸಬೇಕೆ..? ಸೌಜನ್ಯಗಳು ಬೇಕೋ ಬೇಡವೋ…? ಧೃತರಾಷ್ಟ್ರ ಪ್ರೇಮ ಕುರುಕ್ಷೇತ್ರಕ್ಕೆ ನಾಂದಿಯಾಯಿತೇನೋ……? ಈ ಎಲ್ಲಾ ಎಡವಟ್ಟುಗಳಿಗೆ ಅಹಂಕಾರ ಮತ್ತು ಸತ್ಯ ಮುಚ್ಚಿಟ್ಟು ನಿಮ್ಮಂತಹ ರಂಗಕರ್ಮಿಗಳನ್ನು ಅವರು ಯಾಮಾರಿಸಿದ್ದು ಕಾರಣವಾಯಿತೇನೊ……

  2. prasad raxidi

    ಸುಮಾರು ಮೂವತ್ತೈದು ವರ್ಷಗಲಿಂದ ರಂಗಬೂಮಿಯಲ್ಲಿ ಹಾಗೇ ಹಲವು ಸಾಮಾಜಿಕ ಸಂಘಟನೆಗಳಲ್ಲಿ ಕೆಲಸ ಮಾಡುತ್ತಿರುವ ನನ್ನಂತಹವರನ್ನು ಯಾರೂ ಏಮಾರಿಸಲು ಸಾಧ್ಯವಿಲ್ಲ ಹಾಗೇ ರಂಗಾಯಣವನ್ನು ಪ್ರಾರಂಭದ ದಿನಗಳಿಂದಲೂ ಬಲ್ಲವನಾಗಿ ನನ್ನಮಾತುಗಳನ್ನು ಹೇಳಿದ್ದೇನೆ. ರಂಗಾಯಣದ ಪ್ರಾರಂಭದ ದಿನಗಳಲ್ಲೇ ನಾವು ಕೆಲವರು ಗೆಳೆಯರು “ನೀವೆಲ್ಲರೂ ಒಂದು ದಿನ ವಿಧಾನಸೌದದ ಮುಂದೆ ನೌಕರಿಗಾಗಿ- ಸಂಬಳಕ್ಕಾಗಿ ಧರಣಿ ಕೂರುವುದನ್ನು ನಾವು ನೋಡುತ್ತೇವೆ” ಎಂದು ತಮಾಷೆ ಮಾಡಿದ್ದೆವು ಅದೀಗ ನಿಜವಾದಂತೆ ಕಾಣುತ್ತಿದೆ ಅಷ್ಟೆ. ಅಷ್ಟೂ ಜನ ಕಲಾವಿದರಿಗೆ ಪ್ರಾರಂಭದ ಹತ್ತು ವರ್ಷ ದೊರಕುತ್ತಿದ್ದ ಸಂಬಳ ತಿಂಗಳಿಗೆ 800 (ಎಂಟು ಸಾವಿರವಲ್ಲ ಎಂಟು ನೂರು..!) ನಂತರ ಸಾವಿರದ ಆರುನೂರಾಯಿತು. ನಂತರ ಸಿದ್ಧರಾಮಯ್ಯನವರು ಉಪಮುಖ್ಯಮಂತ್ರಿಗಳಾಗಿದ್ದಾಗ ಇವರನ್ನು ಅರೆ ಖಾಯಂಗೊಳಿಸಿ ನಾಲ್ಕು ಸಾವಿರ ಸಂಬಳನಿಗದಿಮಾಡಿದರು. ಕಳೆದ ವರ್ಷ ಅಂದರೆ 6ನೇ ಪೇ ಕಮಿಷನ್ ಜಾರಿಯಾದಮೇಲೆ ಈಗ ಎಲ್ಲ ಸೇರಿ ಸುಮಾರು 32 ರಿಂದ 34 ಸಾವಿರ ಕೊಡುತ್ತಿದ್ದಾರೆ. ಅಂದರೆ 26 ವರ್ಷಗಳ ದುಡಿಮೆಯ ನಂತರ ಇಂದಿಗೂ ಕಲಾವಿದರಿಗೆ ವೈದ್ಯಕೀಯ ಸೌಲಭ್ಯ ಇಲ್ಲ ಎಲ್ಲ ಕಡೆ ಕೂಲಿಕಾರ್ಮಿಕರಿಗೂ ಪಿ.ಎಫ್ ಕೊಡಬೇಕೆಂದು ಸರ್ಕಾರವೆ ಮಾಡಿರುವ ಕಾನೂನು ಇವರಿಗೆ ಅನ್ವಯವಾಗಿಲ್ಲ. ಪಿಂಚಣಿ ಇನ್ನೂ ಇವರ ಬೇಡಿಕೆಯಾಗಿ ಉಳಿದಿದೆ. ಇಷ್ಟು ವರ್ಷರಂಗಾಯಣ ಏನು ಮಾಡಿದೆ ಅಥವಾ ಮಾಡಿಲ್ಲ ಎನ್ನುವುದಕ್ಕೆ ಕಲಾವಿದರಷ್ಟೇ ರಂಗಸಮಾಜವೂ ಜವಾಬ್ದಾರಿ, ಅದೆಲ್ಲ ದಾಖಲೆಗಳಲ್ಲಿವೆ “ವಸ್ತು ನಿಷ್ಟ”ವಾಗಿ ನೋಡಬಹುದು.. ಕಲಾವಿದರನ್ನು ಸರ್ಕಾರಿ ನೌಕರರೆಂದು ಪರಿಗಣಿಸಲು ಯಾರ ಅಡ್ಡಿಯೂ ಇಲ್ಲ ಆದರೆ ಅವರು ದೈನೇಸಿಯಾಗಿ ಬೇಡುತ್ತ ಇರಬೇಕೆಂಬ ಅಹಂಕಾರ ಯಾರಿಗೂ ಒಳ್ಳೆಯದಲ್ಲ ಅಲ್ಲವೇ. ಕೊನೆಗೂ ಅವರು ಶಿಸ್ತು ಮೀರಿದರೆ ಶಿಕ್ಷಿಸುವ ಅಧಿಕಾರ ಸರ್ಕಾರಕ್ಕೆ ಇದ್ದೇಇದೆ. ಆದರೆ ಅವರ ನ್ಯಾಯಬದ್ಧ ಬೇಡಿಕೆಗಖಳನ್ನು ಹತ್ತಿಕ್ಕುವ ಪ್ರಯತ್ನವಾಗಿ ರಂಗಾಯಣವನ್ನು ಒಡೆಯುವ ಹುನ್ನಾರವನ್ನಷ್ಟೇ ನಮ್ಮಂತವರು ವಿರೋಧಿಸುತ್ತಿರುವುದು

  3. shashiraj rao kavoor

    ippathaidu varshada hinde nanna anna shaale maastru ainuuru ruupaai sabaladalli ibbaru makkala samsaara saagisiddaru. summane kathe helabedi raxidi avre.

  4. prasad raxidi

    ಇಪ್ಪತ್ತೆಂಟು ವರ್ಷಗಳಿಂದ ನಾವೇ ಕಟ್ಟಿ ಬೆಳೆಸಿದ ಸರ್ಕಾರಿಹಿರಿಯ ಪ್ರಾಥಮಿಕ ಶಾಲೆ ನಮ್ಮೂರಲ್ಲಿದೆ. ಇಂದಿಗೂ
    ಅತ್ಯತ್ತಮಶಾಲೆಯೆಂದು ಹೆಸರುಗಳಿಸಿ ತಾಲ್ಲೂಕಿಗೇ ಪ್ರಥಮ ಸ್ಥಾನದಲ್ಲಿದೆ. ನಮ್ಮ ರಂಗತಂಡದಲ್ಲೇ ಮೂವರು ಉಪಾದ್ಯಾಯರಿದ್ದಾರೆ(ಒಬ್ಬರು ಮೂವತ್ತು ವರ್ಷಗಳಿಂದ ಸೇವೆಯಲ್ಲಿದ್ದಾರೆ) ಅವರ ಸಂಬಳ ಸಾರಿಗೆ ಪಿಂಚಣಿ ಸವಲತ್ತು ವೈದ್ಯಕೀಯ ವೆಚ್ಚ ಎಲ್ಲದರ ಅರಿವೂ ನನಗಿದೆ.ಒಂದು ಕಾಲದಲ್ಲಿ ಶಾಲಾ ಉಪಾದ್ಯಾಯರೂ ಕಡಿಮೆ ಸಂಬಳದಲ್ಲಿದ್ದರು ಹೌದು ಈಗ ಪರಿಸ್ಥಿತಿ ಹಾಗಿಲ್ಲ. ಅವರು ಅಂದಿನಂತೆಯೇ ಇರಬೇಕೆನ್ನುವದು ಅಮಾನವೀಯ, ಿನ್ನು ರಂಗಾಯಣದ ಕಲಾವಿದರು ಹೆಚ್ಚಿನವರು ಡಿಗ್ರಿಗಿಂತಲೂ ಹೆಚ್ಚಿಗೆ ಓದಿದವರು, ಕೆಲವರು ಸರ್ಕಾರಿ ನೌಕರಿಯನ್ನು ಬಿಟ್ಟು ಬಂದವರು, ಅನೇಕರಿಗೆ ನೀನಾಸಂ ಡಿಪ್ಲೊಮಾ ಕೂಡಾ ಆಗಿದೆ. ಅವರಿಗೆ ಇಲ್ಲದ ಆಶ್ವಾಸನೆಗಳನ್ನು ನೀಡಿ ದುಡಿಸಿಕೊಂಡು, ಇಷ್ಟು ವರ್ಷಗಳನಂತರ, ಈಗ ನ್ಯಾಯಬದ್ಧ ಹಕ್ಕಿಗಾಗಿ ಹೋರಾಡುತ್ತಿರುವಾಗ ಅವರನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿರುವದನ್ನು ಮಾತ್ರ ನಮ್ಮಂತವರು ವಿರೋಧಿಸುತ್ತಿರುವುದು. ಬರೀ ಕಲಾವಿದರಿಗಾಗಿ ಮಾತ್ರವಲ್ಲ ನಮ್ಮಂತಹ ಗೆಳೆಯರು ಕೂಲಿಕಾರ್ಮಿಕರ -ಹಾಗೇ ಶಾಲಾ ಉಪಾದ್ಯಯರ ಹಕ್ಕುಗಳಿಗಾಗಿಯೂ ನಿರಂತರ ಹೋರಾಟ ಮಾಡಿದ್ದೇವೆ ಮಾಡುತ್ತಿದ್ದೇವೆ. ಸುಮ್ಮನೆ “ಕಥೆ ಹೇಳುವ ” ಅಗತ್ಯ ಬರುವುದು ಪ್ರಚಾರಕ್ಕಾಗಿ ವಾದ ಮಾಡುವವರಿಗೆ,ದಂತ ಗೋಪುರದಲ್ಲಿರುವವರಿಗೆ ಇಲ್ಲವೇ ಎಲ್ಲ ಗೊತ್ತಿದ್ದೂ ಗೊತ್ತಿಲ್ಲದಂತೆ ನಟಿಸುವವರಿಗೆ ಮಾತ್ರ…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading