ಮಹಿಪಾಲ ರೆಡ್ಡಿ ಮುನ್ನೂರ್

ಆವತ್ತು..
ಹೌದು..
ಅವರು ಬರೋವರೆಗೂ ಮನಸ್ಸು ಖೇದಗೊಂಡಿತ್ತು. ಬರುತ್ತಾರೋ.. ಇಲ್ಲವೋ.. ಎಂಬ ದುಗುಡವಿತ್ತು. ಅನಾರೋಗ್ಯ ಅವರನ್ನು ಕನ್ನಡ ಭವನದ ಅಂಗಳಕ್ಕೆ ಬರುವುದಕ್ಕೆ ಸಾಥ್ ನೀಡುತ್ತೋ.. ಇಲ್ಲವೋ.. ಎಂಬ ಆತಂಕವಿತ್ತು. ಸರಿ ಸುಮಾರು ನಾನೂರಕ್ಕೂ ಹೆಚ್ಚು ಜನ ಸಾಹಿತ್ಯಾಸಕ್ತರು, ಸಾಹಿತಿಗಳು, ಕವಿಗಳು, ಲೇಖಕಿಯರು.. ಮಾಧ್ಯಮ ಸ್ನೇಹಿತರು ಹೀಗೆ ಅನೇಕರು ಬಂದು ಸೇರಿದ್ದರು. ಅವರು ಬರೋದಕ್ಕೆ ಒಂದೂವರೆ ತಾಸು ಲೇಟಾಯಿತು. ಆದರೆ, ಬಂದವರ್ಯಾರು ಹೋಗಲಿಲ್ಲ. ಅದರ ಬದಲಿಗೆ, ಫೋನ್ ಮಾಡಿ, ಇನ್ನೂ ಅತಿಥಿಗಳು ಬಂದಿಲ್ಲ ಎಂಬುದನ್ನು ಖಾತರಿಪಡಿಸಿಕೊಂಡು ಮತ್ತಷ್ಟು ಜನ ಸೇರಿದರು.
ಹೇಗೆ ಸಾಹಿತ್ಯಾಸಕ್ತರು ಸೇರುತ್ತ.. ಜಮಾವಣೆ ಆಗುತ್ತಿತ್ತೋ.. ಹಾಗೆ ನನ್ನ ಮನಸಿನ ದುಗುಡ ಇಮ್ಮಡಿಯಾಗುತ್ತಿತ್ತು.. ಆತಂಕ ಹೆಚ್ಚುತ್ತಿತ್ತು. ಪ್ರತೀ ಕ್ಷಣಕ್ಕೂ ಮನಸ್ಸು ಒದ್ದಾಡುತ್ತಿತ್ತು.
ಈ ಒಂದೂವರೆ ತಾಸು ಅವಧಿಯಲ್ಲಿ ಎಷ್ಟು ಜನರಿಗೆ ಸುಳ್ಳು ಹೇಳಿದ್ದೀನೋ.. ಈಗ ಬರ್ತಾರೆ.. ಇನ್ನೊಂದೈದು ನಿಮಿಷ.. ಬಂದೇ ಬತರ್ಾರೆ.. ಅರ್ಧ ತಾಸು ಆಗಬಹುದು.. ಕಿಡ್ನಿ ಅಲ್ವಾ.. ಡಯಲಿಸಿಸ್ ಆಗಬೇಕಲ್ಲ.. ಮುಗಿಸಿಕೊಂಡು ಬರ್ತಾರೆ.. ಹೀಗೆ ಏನೇನೋ ಸಬೂಬು ಹೇಳುತ್ತಿದ್ದೆ.
ನನ್ನ ಜೊತೆ, ನಿರಗುಡಿ, ಬಡಿಗೇರ್ ಎಲ್ಲರೂ ಆತಂಕದಿಂದಲೇ ಇದ್ದರು. ಎಲ್ಲರಿಗೂ ಬರುತ್ತಾರೆ ಎಂದೇ ಇತ್ತು. ಆದರೆ ನನಗೊಬ್ಬನಿಗೆ ಮಾತ್ರ ಅವರು ಯಾವ ಸಂದರ್ಭದಲ್ಲಾದರೂ.. ಯಾವುದೇ ಕ್ಷಣದಲ್ಲಾದರೂ ಕಾರ್ಯಕ್ರಮವನ್ನು ಕ್ಯಾನ್ಸಲ್ ಮಾಡಬಹುದು ಎಂಬ ಆತಂಕವಿತ್ತು. ಅದಕ್ಕೊಂದು ಕಾರಣವೂ ಇತ್ತು. ಅಂದು ಮತ್ತು ಮರುದಿನ ಎರಡು ಕಾರ್ಯಕ್ರಮಗಳನ್ನು ಕ್ಯಾನ್ಸಲ್ ಮಾಡಿದ್ದರು.
ನಮಗೂ.. ಅವರಿಗೂ.. ನಡುವೆ ಕೊಂಡಿಯಾಗಿದ್ದ ಸನ್ಮಿತ್ರ ಡಾ.ವಿಕ್ರಮ ವಿಸಾಜಿ ನನ್ನ ಆತಂಕವನ್ನು ನಿರಾತಂಕವಾಗಿಸಿದರು. `ಸರಿಯಾಗಿ ಆರು ಗಂಟೆಗೆ ಕನ್ನಡ ಭವನಕ್ಕೆ ಹೋಗೋಣ ಅಂದಿದ್ದಾರೆ ಸರ್’ ಅಂತ ಫೋನಿನಲ್ಲಿ ಹೇಳಿದ್ದೇ ತಡ, ನಮ್ಮ ಮೈ-ಮನಗಳೆಲ್ಲ.. ರೋಮಾಂಚನಗೊಂಡವು. ಇನ್ನೇನು ಬಂದೇ ಬಿಡುತ್ತಾರೆ ಎಂಬ ಹುಮ್ಮಸ್ಸು ಬಂದಿತು. ಅವರು ಬರೋವರೆಗೂ ಏನಾದರೂ ಮಾಡಿ ಅಂತ ಸುರೇಶ ಬಡಿಗೇರ್ಗೆ ಹೇಳಿದೆ. ವೇದಿಕೆಯ ನಿರೂಪಣೆ ಹೊತ್ತಿದ್ದ ಬಡಿಗೇರ್.. ಜನರನ್ನು ಹಿಡಿದಿಡಲು ಕರಾಮತ್ತುಗಳನ್ನು ಮಾಡತೊಡಗಿದರು. ಕವಿಮಿತ್ರ ರಾಜಶೇಖರ ಮಾಂಗ್ ಹಾಡಿದ ನಾಡ ಪರ ಗೀತೆ, ಭಾವಗೀತೆ.. ವಚನ ಗಾಯನ, ಲಕ್ಷ್ಮೀ ಶಂಕರ ಜೋಶಿ ಅವರ ಹಾಡುಗಾರಿಕೆ, ರಂಗಗೀತೆ ನೆರೆದವರ ಮನ ತಣಿಸಿತು. ಇನ್ನೂ ಹದಿನೈದು ನಿಮಿಷ ಆಗುತ್ತದೆ. ವಿಶ್ವವಿದ್ಯಾಲಯದಿಂದ ಕನ್ನಡ ಭವನ ಅಂಗಳಕ್ಕೆ ಬರೋವರೆಗೂ ಸಮಯ ತೆಗೆದುಕೊಳ್ಳುತ್ತದೆ. ಆ ಸಮಯವನ್ನು, ಕಲಬುರ್ಗಿಯ ಹಾಸ್ಯ ಚಕ್ರವರ್ತಿ ಎಂದೇ ಬಿಂಬಿತವಾದ ಗುಂಡಣ್ಣ ಡಿಗ್ಗಿ ಅವರಿಂದ ನಗೆ ಚಟಾಕಿಗಳನ್ನು ಹಾರಿಸುವಂತೆ ರಿಕ್ವೆಸ್ಟ್ ಮಾಡಿಕೊಂಡೆವು. ಬುದ್ದಿಜೀವಿಗಳ ಸಮ್ಮುಖದಲ್ಲಿ, ಸಾಹಿತ್ಯಾಸಕ್ತರ ಎದುರಿನಲ್ಲಿ ನಗೆ ಕಾರ್ಯಕ್ರಮ ಮಾಡಲು ರೆಡಿಯಾದ ಡಿಗ್ಗಿ..ನಗೆಯ ಬುಗ್ಗಿ ಹಾರಿಸಿದ್ದೇ ಹಾರಿಸಿದ್ದು. ಬರೋಬ್ಬರಿ ಇಪ್ಪತ್ತು ನಿಮಿಷ ನಗೆ ಸಿಂಚನ ನಡೆಯಿತು.
ಅಷ್ಟೊತ್ತಿಗೆ ಇನ್ನೋವಾ ಕಾರು ಬಂತು..
ಎಂಬತ್ತು ದಾಟಿದ ಹಿರಿಯ ಜೀವ ಕಾರಿನಿಂದ ಇಳಿದರು. ಒಂದು ಕಡೆ ವಿಕ್ರಮ ವಿಸಾಜಿ.. ಇನ್ನೊಂದು ಕಡೆ ನಾನು.. ಅವರ ಕೈ ಹಿಡಿದುಕೊಂಡು ವೇದಿಕೆಯವರೆಗೆ ನಡೆದುಕೊಂಡು ಹೊರಟೆವು. ಮನಸ್ಸು ನಿಜಕ್ಕೂ ಪ್ರಫುಲ್ಲಗೊಂಡಿತು.
ಸೇರಿದ್ದ ಸಾಹಿತ್ಯಾಸಕ್ತರ ಕರತಾಡನ.. ಮನಸ್ಸಿಗೆ ಆನಂದವಾಗಿದ್ದಕ್ಕೆ. ಹಾಗೆ ಆನಂದ ನೀಡಿದವರು, ನಮ್ಮ ಆತಂಕವನ್ನು ದೂರವಾಗಿಸಿದವರು.. ಮನಸ್ಸು ಪ್ರಫುಲ್ಲವಾಗುವಂತೆ ಮಾಡಿದವರು.. ಯಾರು ಗೊತ್ತಾ ಮಿತ್ರಾ..?
ನಾಡಿನ ಹಿರಿಯ ಚೇತನ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಲೇಖಕ ಡಾ.ಯು.ಆರ್.ಅನಂತಮೂರ್ತಿ.

ಅಬ್ಬಾ.. !
ಅನಂತಮೂರ್ತಿ ಆಗಮನವು ನಿಜಕ್ಕೂ ಕನ್ನಡ ಭವನದ ಅಂಗಳ ಪುಳಕಗೊಳ್ಳುವಂತೆ ಮಾಡಿತು. ಅವರನ್ನು ಹಾಗೇ ಕೈ ಹಿಡಿದುಕೊಂಡು ವೇದಿಕೆ ಹತ್ತಿಸಿ, ಕೂಡಿಸಿದೆವು. ಅವರ ಹಿಂದಿದ್ದ ಎಸ್ತರ್ ಅನಂತಮೂರ್ತಿ ಅವರನ್ನು ಕೂಡ ಕೈ ಹಿಡಿದು ವೇದಿಕೆಗೆ ಕರೆತಂದೆ. ಅಷ್ಟೊತ್ತಿಗೆ ಇಳಿಹೊತ್ತು. ಮೆಲ್ಲಗೆ ಸೂರ್ಯ ಪಡುವಣದ ಬಾಗಿಲೊಳಗೆ ಸೇರಿಕೊಳ್ಳುತ್ತಿದ್ದ. ಇಲ್ಲಿ.. ಅನಂತಮೂರ್ತಿವೇದಿಕೆಯಲ್ಲಿ ಆಸೀನರಾಗುತ್ತಿದ್ದಂತೆ.. ಇಡೀ ಅಂಗಳ ಬೆಳಕಾಗಿತ್ತು.
ಒಬ್ಬ ಜ್ಞಾನಪೀಠ ಪುರಸ್ಕೃತ ಲೇಖಕರೊಬ್ಬರು ನಡೆದುಕೊಂಡು ಕನ್ನಡ ಭವನದ ಅಂಗಳಕ್ಕೆ ಬರುತ್ತಾರೆ ಎಂಬ ಸಂಗತಿಯೇ ಅಭಿಮಾನದ್ದು.
ಕನ್ನಡ ಭವನದ ಅಂಗಳದಲ್ಲಿ ದೀಪ ಪ್ರಜ್ವಲನೆ ಮಾಡಿದರು. ಕನ್ನಡದ ದೀವಿಗೆಯನ್ನು ಬೆಳಗಿದರು. ಮೊದಲ ಬಾರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಕಲಬುರ್ಗಿ ಜಿಲ್ಲಾ ಘಟಕದ ಕಚೇರಿಗೆ ಬಂದಿದ್ದ ಅನಂತಮೂರ್ತಿ ಅವರನ್ನು ಪ್ರೀತಿಯಿಂದ ಬರಮಾಡಿಕೊಂಡು, ಮೈಸೂರು ಪೇಟ ತೊಡಿಸಿ, ಸತ್ಕರಿಸಲಾಯಿತು. ಶರಣರ ನಾಡಿಗೆ ಬಂದ ಸವಿನೆನಹು ಆಗಿ ವಚನ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಬಸವಣ್ಣನವರ ಪ್ರತಿಮೆಯನ್ನು ಕಾಣಿಕೆಯಾಗಿ ನೀಡಿದೆವು. ಅವರನ್ನು ಸತ್ಕರಿಸುವ ಭಾಗ್ಯ ದೊರಕಿದ್ದು.. ಪರಿಷತ್ತಿನ ಪದಾಧಿಕಾರಿಗಳ ಸೌಭಾಗ್ಯ. ಎಲ್ಲ ಯುವ ಮನಸುಗಳಿಗೆ ಸಾಹಿತ್ಯ ಕ್ಷೇತ್ರದ ದಿಗ್ಗಜ, ಸೆಲೆಬ್ರಿಟಿ, ಪ್ರಖ್ಯಾತ ಲೇಖಕರನ್ನು ಅಭಿನಂದಿಸುವ ಕ್ಷಣ.. ಯಾವತ್ತೂ.. ಯಾವತ್ತೂ.. ನಮ್ಮ ನೆನಪುಗಳ ಮೆರವಣಿಗೆಯ ಸಾಲಿನಿಂದ ಮರೆಯಾಗುವುದೇ ಇಲ್ಲ. ಅಂತಹ ಕ್ಷಣಕ್ಕೆ ಇಡೀ ಕಲಬುಗರ್ಿಯ ಸಾಹಿತಿಗಳು, ಸಾಹಿತ್ಯಾಸಕ್ತರು ಸಾಕ್ಷಿಯಾದರಲ್ಲ.. ಎಂಬುದೇ ಪರಿಷತ್ತಿನ ಮೇಲಿಟ್ಟಿರುವ ಪ್ರೀತಿ.
ಪ್ರೀತಿಯನ್ನು, ಸತ್ಕಾರವನ್ನು ಸ್ವೀಕರಿಸಿದ ಅನಂತಮೂರ್ತಿ ಅವರೂ ಸಹ ಸಂತಸದಿಂದ ಇದ್ದರು. ಇತರೆ ಕಾರ್ಯಕ್ರಮಗಳನ್ನು ಕ್ಯಾನ್ಸಲ್ ಮಾಡಿ, ಕನ್ನಡ ಸಾಹಿತ್ಯ ಪರಿಷತ್ತಿನ ಆಹ್ವಾನದ ಮೇಲೆ ಬಂದು, ಇಡೀ ಕಾರ್ಯಕ್ರಮದ ವಾತಾವರಣವನ್ನು, ಅತ್ಯಂತ ಪ್ರೀತಿಯಿಂದ ಬರಮಾಡಿಕೊಂಡ ಸಹೃದಯರನ್ನು ಕಂಡು ಅನಂತಮೂರ್ತಿ ಒಂದು ಕ್ಷಣ ಸ್ನಿಗ್ದಗೊಂಡರು. ಮನಸ್ಸು ತುಂಬಿಕೊಂಡಿತು. ಮಾತನಾಡುವುದಕ್ಕೆ ಮುಂಚೆ, ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಕೈಯಲ್ಲಿಡಿದು ತುಟಿಯಂಚಿನಲ್ಲಿ ನಕ್ಕರು. ಆಮಂತ್ರಣ ಪತ್ರಿಕೆ ತುಸು ಭಿನ್ನವಾಗಿತ್ತು ಮತ್ತು ಆಕರ್ಷಕವಾಗಿತ್ತು. ಪಕ್ಕದಲ್ಲಿಯೇ ಇದ್ದ ನನಗೆ ಖುಷಿಕೊಟ್ಟಿತು. ಕಲಬುರ್ಗಿಯ ಆಮಂತ್ರಣವೊಂದು ಜ್ಞಾನಪೀಠ ಪುರಸ್ಕೃತರನ್ನು ಪಿಸು ನಗೆಗೆ ಕಾರಣವಾಗಿದ್ದಕ್ಕೆ ನಾವೆಲ್ಲರೂ ನಿರುಮ್ಮಳಗೊಂಡೆವು.
ದೇಸಿ ಕನ್ನಡ : ಜಾಗತಿಕ ಚಿಂತನೆ ಎಂಬ ವಿಷಯದ ಕುರಿತು ಅನಂತಮೂರ್ತಿ ಮಾತನಾಡಿದರು. ಕನ್ನಡ ಲೇಖಕ ಹೇಗೆ ಜಾಗತಿಕವಾಗಬೇಕು ಎನ್ನುವುದರ ಮೇಲೆ ವಿಚಾರ ಮಂಥನ ನಡೆಯಿತು. ಬಸವಣ್ಣನವರ ವಚನ, ಕುವೆಂಪು ಮಹಾಕಾವ್ಯ, ಬೇಂದ್ರೆ ಕಾವ್ಯ, ಗೋಕಾಕ್ರ ಲೇಖನ, ಮಾಸ್ತಿಯವರ ಕೃತಿಗಳು ಸೇರಿದಂತೆ ತಮ್ಮದೂ ಸೇರಿದಂತೆ ಅನೇಕರ ಕೃತಿಗಳು, ಶೇಕ್ಸ್ಪಿಯರ್ನ ಕಾವ್ಯದೊಂದಿಗೆ, ಬರ್ನಾರ್ಡ್ ಶಾ ನ ನಾಟಕದೊಂದಿಗೆ, ಬ್ರೇಕ್ಟ್ನ ಕೃತಿಗಳ ಜೊತೆ ಜೊತೆಗೆ ಸರಿದೂಗಿಸಬಲ್ಲವು ಎಂಬುದನ್ನು ಎಲ್ಲಾ ದೃಷ್ಟಿಕೋನಗಳಿಂದ ಮಾತನಾಡಿದರು.
ಬಸವಣ್ಣನವರ ವಚನಗಳಿಗೆ ಜಗತ್ತಿನ ಯಾವ ಭಾಷೆಯ ಸಾಹಿತ್ಯ ಸಮವಾಗಿ ನಿಲ್ಲುತ್ತದೆ..ಎಂದು ಪ್ರಶ್ನಿಸಿದ ಅನಂತಮೂರ್ತಿ, ಇಂಗ್ಲೀಷ ಭಾಷೆಯ ಸಾಹಿತ್ಯವು ಮೂರುನೂರು ವರ್ಷಗಳ ಈಚೆಗೆ ಬಂದಿದ್ದು, ಆದರೆ ಕನ್ನಡ ಎರಡು ಸಾವಿರ ವರ್ಷಗಳ ಹಳೆಯದು. ಕವಿರಾಜಮಾರ್ಗ ಎಂಬ ಲಾಕ್ಷಣಿಕ ಗ್ರಂಥ ಕೊಡ್ಡಿದ್ದು, ಇದೇ ನೆಲ. ಕನ್ನಡಿಗರು. ಬೇರೆ ಯಾರೋ ಅಲ್ಲ. ಕನ್ನಡವನ್ನು ಉಳಿಸುವ, ಪ್ರೀತಿಸುವ, ಅನ್ನದ ಭಾಷೆಯಾಗಿಸಿಕೊಳ್ಳುವ ಅಭಿಮಾನದ ಭಾಷೆಯಾಗಿ ನೋಡುವ ಎಲ್ಲ ರೀತಿಯ ಮಾತುಗಳು ಆಡಿದರು. ಜಗತ್ತಿನ ಸಾಹಿತ್ಯದೊಂದಿಗೆ ಕನ್ನಡವನ್ನು ಸರಿದೂಗಿಸಿ, ಭಾಗಿಸಿ, ಗುಣಿಸಿ, ಕೂಡಿಸಿ, ಕಳೆದು ಮಾತನಾಡಿದರು. ಜಾಗತಿಕ ಮಟ್ಟದಲ್ಲಿ ಕನ್ನಡವನ್ನು ಇಟ್ಟುಕೊಂಡು ಅದರ ಎಲ್ಲ ಇತಿಮಿತಿಗಳ ಕುರಿತು ವಿಚಾರಗಳನ್ನು ಹೇಳಿದರು. ಹೊಸ ಹೊಳಹುಗಳನ್ನು ನೀಡಿದ ಅನಂತಮೂರ್ತಿ ಸೇರಿದ್ದ ಜನರೆಲ್ಲರ ಮನಸ್ಸನ್ನು ಗೆದ್ದರು.
ಕಾರ್ಯಕ್ರಮ ಮುಗಿಯುತ್ತಿದ್ದಂತೆ ನಡೆದುಕೊಂಡು, ಕೈ ಹಿಡಿದುಕೊಂಡು ಇನ್ನೋವಾ ಕಾರಿನಲ್ಲಿ ಕೂಡಿಸಿದೆವು. ನಗು ನಗುತ್ತಲೇ ಹೊರಟು ಬಿಟ್ಟರು. ಅವರು ಹಾಗೆ ಹೋಗುವುದನ್ನು ನೋಡುತ್ತ ಕಣ್ತುಂಬಿಕೊಂಡೆವು. ಆವತ್ತಿನ ಇಡೀ ಕಾರ್ಯಕ್ರಮಕ್ಕೆ ನನ್ನೊಂದಿಗೆ ಸಹಕರಿಸಿದ್ದು, ಕಾರ್ಯದಶರ್ಿಗಳಾದ ಬಿ.ಎಚ್.ನಿರಗುಡಿ, ಸುರೇಶ ಬಡಿಗೇರ್. ಇಡೀ ಕಾರ್ಯಕ್ರಮವು ಒಂದು ಸಂಭ್ರಮದಂತೆ ನಡೆದುಹೋಯಿತು. ಆವತ್ತಿನ ಕಾರ್ಯಕ್ರಮಕ್ಕೆ ಬಂದ ಹಿರಿಯರು, ಲೇಖಕಿಯರು ಅನೇಕರು. ಯಾರ ಹೆಸರು ಹೇಳಬೇಕು.. ಯಾರ ಹೆಸರು ಬಿಡಬೇಕು.. ಹಾಗಾಗಿ ಎಲ್ಲರನ್ನೂ ನೆನೆಸಿಕೊಳ್ಳುತ್ತ.. ಅನಂತಮೂರ್ತಿ ಅವರ ಆಗಮನವು.. ನಮ್ಮ ಕ್ರಿಯಾಚಟುವಟಿಕೆಗೆ ಇನ್ನಷು ಇಂಬು ಕೊಟ್ಟಿದೆ. ಆ ಉತ್ಸಾಹ ಮತ್ತೆ ಮತ್ತೆ ಕಾರ್ಯಕ್ರಮಗಳನ್ನು ಆಯೋಜಿಸಲು ಪ್ರೇರೇಪಿಸುತ್ತಿದೆ.
ಇದಕ್ಕೆಲ್ಲಾ ಕಾರಣರಾದ ಅನಂತಮೂತರ್ಿ, ಅವರ ಮಾತು, ಅವರ ಕಣ್ಣೋಟ, ಪ್ರೀತಿ, ಆಹ್ಲಾದಕರ ಮನಸ್ಸು, ನೇವರಿಕೆಗೆ ಧನ್ಯವಾದಗಳು ಮತ್ತು ಸಾಕ್ಷಿಯಾಗಿಸಿದ ಆ ಕ್ಷಣಗಳಿಗೂ..
ಅದಾಗಿ ಮೂರ್ನಾಲ್ಕು ತಿಂಗಳ ನಂತರ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಭೇಟಿಯಾದರು. ಗುಲಬರ್ಗಾದ ಈ ಕಾರ್ಯಕ್ರಮದ ಮೂರು ಫೋಟೋಗಳನ್ನು ಅವರಿಗೆ ತೋರಿಸಿದಾಗ ಖುಷಿಗೊಂಡರು. ಕೈಯಲ್ಲಿ ಹಿಡಿದು ನನ್ನ ಮುಖ ನೋಡಿ ನಾನು ಇಟ್ಕೊಳ್ಳುತ್ತೇನೆ ಎಂದರು. ಸಂತೋಷದಿಂದ ಆಗಲಿ ಸರ್ ಎಂದೆ. ನೆನಪಿಗೆ ಇರಲಿ ಎಂದು ಹೇಳಿ ತಮ್ಮ ಪಕ್ಕದಲ್ಲಿದ್ದ ಎಸ್ತರ್ ಅವರಿಗೆ ಕೊಟ್ಟರು.
ಮನಸ್ಸು ಧನ್ಯತಾಭಾವದಿಂದ ತುಂಬಿಬಂತು. ಇವತ್ತು ಅನಂತಮೂರ್ತಿ ಇಲ್ಲ.. ಆದರೆ ಅವರು ಕೊಟ್ಟ ಶ್ರೀಮಂತ ನೆನಪುಗಳು ನಮ್ಮ ಜೊತೆಗಿವೆ.






tumba maarmikavaagi barediddeeri. Thanks!
ಹೌದು.ಅಕ್ಷರಶಃ ರೋಮಾಂಚನಗೊಂಡಿದ್ದೆ.ಪರಿಷತ್ ಗೆ ಋಣಿ.nice write up.
nenapugaLu ellavu shrimatavugaLe…!!!!!!!!!!!uttama baraha..
bhavanegalanna baraharupakke thandiddirri abhinadanegalu