ಶೃಂಗೇರಿಯ ಕಲ್ಕುಳಿ ವಿಠಲ್ ಹೆಗ್ಗಡೆ ಬರೆದಿರುವ ಮಲೆನಾಡ ಪರಿಸರ ಕಥನ ‘ಮಂಗನ ಬ್ಯಾಟೆ’ ಇದೇ ಶನಿವಾರ (ನವೆಂಬರ್ 10)ರಂದು ಬೆಂಗಳೂರಿನ ಚಾಮರಾಜ ಪೇಟೆಯಲ್ಲಿರುವ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಬಿಡುಗಡೆಯಾಗುತ್ತಿದೆ. ಅಂದು ಸಂಜೆ 5.30ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ಬಂಜಗೆರೆ ಜಯಪ್ರಕಾಶ್ ಪುಸ್ತಕ ಬಿಡುಗಡೆ ಮಾಡಲಿದ್ದು, ಬಿ.ಎಂ. ಬಷೀರ್ ಕೃತಿಯ ಕುರಿತು ಮಾತನಾಡಲಿದ್ದಾರೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಚಂದ್ರಶೇಖರ ಕಂಬಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ
‘ಮಂಗನ ಬ್ಯಾಟೆ’ ಕುರಿತು ಯು ಆರ್ ಅನಂತಮೂರ್ತಿ ಬರೆದ ಮಾತುಗಳು
ಕಲ್ಕುಳಿ ವಿಠಲ್ ಹೆಗ್ಗಡೆಯವರ ಮಲೆನಾಡನ್ನು ಕುರಿತ ಈ ಪುಸ್ತಕ ಈಚಿನ ದಿನಗಳಲ್ಲಿ ಪ್ರಕಟವಾಗುತ್ತಿರುವ ಪುಸ್ತಕಗಳ ನಡುವೆ ಮುಖ್ಯ ಪುಸ್ತಕ ಎಂದು ನಾನು ತಿಳಿದಿದ್ದೇನೆ. ಯಾಕೆಂದರೆ ನಾನೇ ಈ ಪುಸ್ತಕದಿಂದ ತುಂಬಾ ಕಲಿತಿದ್ದೇನೆ.
ಇವರ ಪುಸ್ತಕದ ನಡುವೆ ಒಂದು ಮಾತು ಬರುತ್ತದೆ. ಬ್ರಾಹ್ಮಣರಿಗೂ ಶೂದ್ರರಿಗೂ ನಡುವೆ ಇರುವ ವ್ಯತ್ಯಾಸದ ಬಗ್ಗೆ. ಅದು ಹೀಗಿದೆ: “ಒಟ್ಟಲ್ಲಿ ಸಾಬ್ರುಗು ನಮ್ಗು ವಿರುದ್ಧ ಅಂತಾರೆ. ಹಂಗೆ ಲೆಕ್ಕ ಹಾಕಿದರೆ ವೈದಿಕರಿಗೂ ಶೂದ್ರರಿಗೂ ಎಷ್ಟು ವೈರುಧ್ಯವಿದೆ ಗೊತ್ತೇ, ವೈದಿಕರಿಗೆ ಅಗ್ನಿ ಶ್ರೇಷ್ಠ ಆದರೆ ಶೂದ್ರರಿಗೆ ಗಂಗೆ (ನೀರು) ಶ್ರೇಷ್ಠ, ಅವರಿಗೆ ಹಗಲಾದರೆ ಇವರಿಗೆ ರಾತ್ರಿ, ಅವರಿಗೆ ಕೆಂಪಾದರೆ ಇವರಿಗೆ ಕಪ್ಪು ಶ್ರೇಷ್ಠ. ಅವರಿಗೆ ಗೋತ್ರ ಆದ್ರೆ ಇವರಿಗೆ ಬಳ್ಳಿ, ಅವರ ಕುಲದ ಮೂಲ ಅಪ್ಪಂದಾದ್ರೆ, ಇವ್ರ ಕುಲದ ಮೂಲ ಅಮ್ಮಂದು, ಅವರು ದಾನ ಪಡೆಯುವವರು, ಇವರು ದಾನ ಕೊಡುವವರು,ಅವರಿಗೆ ಪಶು ಶ್ರೇಷ್ಠವಾದರೆ ಇವರಿಗೆ ಕೃಷಿ…”
ನನ್ನ ಬಗ್ಗೆಯೇ ಹೇಳಿಕೊಳ್ಳುವುದಾದರೆ ನಾನು ಮಲೆನಾಡಿನಲ್ಲಿ ನನ್ನ ಬಾಲ್ಯವನ್ನು ಬ್ರಾಹ್ಮಣನಾಗಿ ಕಳೆದವನು. ವಿಠಲ್ ಹೆಗ್ಗಡೆಯವರು ಸೃಷ್ಟಿಸುವ ಲೋಕದ ಕೆಲವು ಸಂಗತಿಗಳು ನನಗೆ ಗೊತ್ತು ಆದರೆ ವಿವರಗಳು ನನಗೆ ಗೊತ್ತಿರಲಿಲ್ಲ. ಅಂದರೆ ಇದೊಂದು ಬೇರೆ ಲೋಕವೇ. ಇದು ಶೂದ್ರರ ಲೋಕ ಎಂದರೆ ಅಶಿಕ್ಷಿತ ದಡ್ಡರ ಲೋಕ ಎಂದು ನಾವು ಸುಲಭವಾಗಿ ತೀರ್ಮಾನಿಸಿಬಿಡುತ್ತೇವೆ. ಯಾಕೆಂದರೆ ಜ್ಞಾನ ನಮ್ಮ ಪಾಲಿಗೆ ಆಧುನಿಕ ಲೋಕದ ವ್ಯವಹಾರಕ್ಕೆ ಸೀಮಿತವಾದದ್ದು. ಕಲ್ಕುಳಿಯವರ ಲೋಕದಲ್ಲೂ ಬಹಳ ಜಾಣರಿದ್ದಾರೆ. ನಮಗಿಲ್ಲದ ಕಾಡಿನ ಜ್ಞಾನ ಅವರಿಗಿದೆ. ಕಾಡು ಎಂದರೆ ಇಲ್ಲಿ ಇಡೀ ನಿಸರ್ಗ ಪಶು, ಪಕ್ಷಿ, ಹುಳ, ಹುಪ್ಪಟೆ, ಹಾವು,ಮನುಷ್ಯ ಈ ಎಲ್ಲಕ್ಕೂ ಪರಸ್ಪರ ಸಂಬಂಧವಿರುವ ಲೋಕ.
ಕಲ್ಕುಳಿಯವರ ಲೋಕದಲ್ಲಿ ಒಬ್ಬ ಸಿದ್ದ ಎನ್ನುವವನು ಬರುತ್ತಾನೆ. ಅವನದೇ ಆದ ಲೋಕದ ದೃಷ್ಟಿಯಲ್ಲಿ ಈತ ದಡ್ಡನೇ. ಆದರೆ ಅರಣ್ಯ ಲೋಕದಲ್ಲಿ ತನಗೆ ಬೇಕಾದ್ದನ್ನು ಪಡೆಯಬಲ್ಲ ನಿಸ್ಸೀಮ ಈತ. ಅಂದರೆ ನಾವು ಸುಶಿಕ್ಷಿತ ಮಂದಿ ಸಿದ್ದನ ಜ್ಞಾನದ ಎದುರು ಪೆದ್ದರಾಗಿಬಿಡುತ್ತೇವೆ. ಅವನು ಹೊಕ್ಕ ಅರಣ್ಯವನ್ನು ನಾವು ಬರಿಗೈಯಲ್ಲಿ ಹೊಕ್ಕು ಹೊರಬರುವುದು ಸಾದ್ಯವಿಲ್ಲ. ಕಲ್ಕುಳಿಯವರ ಈ ಕಥನವನ್ನು ಓದುತ್ತಿದ್ದಂತೆ ನನಗೆ ತೇಜಸ್ವಿಯವರ ಕರ್ವಾಲೋ ನೆನಪಾಯಿತು. ಅದರಲ್ಲಿ ವಿಜ್ಞಾನಿಗಳಲ್ಲಿ ಅಪಾರ ಕುತೂಹಲ ಹುಟ್ಟಿಸುವ ಹಾರುವ ಓತಿ ಮಂದಣ್ಣನಿಗಾದರೋ ವಿಶೇಷವಲ್ಲ; ಅದು ಅವನ ಸಹ ಜೀವಿ. ಇಲ್ಲಿಯೂ ಸಿದ್ದ ತನ್ನ ಲೋಕವನ್ನು ವಿಜ್ಞಾನಿಗಳಂತೆ ಬರೀ ಮಿದುಳಿನಿಂದಲ್ಲದೆ ತನ್ನ ಇಡೀ ಇಂದ್ರಿಯಗಳ ಮೂಲಕ ಅರಿತಿರುತ್ತಾನೆ. ತೇಜಸ್ವಿಯವರ ಕಾದಂಬರಿಯಲ್ಲದೆ ಕುವೆಂಪುರವರ ಕಾದಂಬರಿಯ ನಾಯಿಗುತ್ತಿಯೂ ಈ ಕಥನ ಓದುತ್ತ ಇದ್ದಂತೆ ನೆನಪಾದ. ಆದರೆ ಕುವೆಂಪು ಮತ್ತು ತೇಜಸ್ವಿಯವರಲ್ಲಿ ಕಥೆಯ ಹಿನ್ನೆಲೆಯಾಗಿ ಮಲೆನಾಡ ನಿಸರ್ಗವೂ ಪಾತ್ರವಹಿಸುತ್ತದೆ. ಇಲ್ಲಿ ಕಾಡು ಮುನ್ನಲೆಯಾಗಿ ಮನುಷ್ಯ ಪಾತ್ರಗಳು ಪ್ರಾಣಿ ಪ್ರಪಂಚ ಕಾಡಿನ ಅಂಶಗಳಾಗಿ ಬರುತ್ತವೆ.
ವಿಠಲ್ ಹೆಗ್ಗಡೆಯವರ ಪುಸ್ತಕ ಹಲವು ವಿವರಗಳಿಂದ ಹಳೆಯ ಕಾಲ ಮತ್ತು ಹೊಸ ಕಾಲಗಳ ಜೋಡಣೆಯಿಂದಲೂ ಆಳವಾದ ಒಳನೋಟಗಳನ್ನು ಪಡೆದಿದೆ. ಇಲ್ಲೊಬ್ಬ ವೀರಭದ್ರಪ್ಪ ಮಾಸ್ಟ್ರು ಎಂಬ ಆಧುನಿಕ ಕಾಲದ ಶಾಲಾ ಉಪಾಧ್ಯಾಯರೊಬ್ಬರು ಬರುತ್ತಾರೆ. ಅವರು ಗೋದಿ ನಾಗರ ಒಂದನ್ನು ಕೊಂದು ಊರಿನವರ ಶಿಕ್ಷೆಗೆ ಗುರಿಯಾಗುತ್ತಾರೆ. ಈ ಪುಸ್ತಕದಲ್ಲಿ ಹಾವಿನ ಒಂದು ಪುರಾಣವೇ ಇದೆ. ಇಂಥ ಕಥೆಗಳನ್ನು ಹೇಳುತ್ತಿದ್ದಂತೆಯೇ ಲೇಖಕರು ವಸಾಹತುಶಾಹಿ ಕಥೆಗಳನ್ನು ಹೇಳಲು ಮರೆಯುವುದಿಲ್ಲ. ವಿಕ್ಟೋರಿಯ ರಾಣಿಯ ಕಾಲದಲ್ಲಿ ಕಾಡುಗಳೆಲ್ಲ ಸರ್ಕಾರದ ವಶವಾಗಿ ರೈಲ್ವೆ ಸ್ಲಿಪ್ಪರ್ ಗಳಿಗೆ ಮರಗಳನ್ನು ಕಡಿದು ಕ್ರಮೇಣ ಹಸಿರುಕ್ರಾಂತಿ ಶುರುವಾಗಿ ಹುಲಿಗಳ ಸಂತತಿ ನಾಶವಾದದ್ದನ್ನು ಹೇಳಲು ತಮ್ಮ ಕಥಾನಕದ ಮೋಡಿಯಲ್ಲಿ ಲೇಖಕರು ಮರೆಯುವುದಿಲ್ಲ. ಮಂಗನ ಶಿಕಾರಿಯ ಬಗ್ಗೆಯೂ ಇವರ ಕಥನ ಮೋಹಕವಾಗಿದೆ. ಇಲ್ಲಿ ಬರುವ ಸಿದ್ದನ ಕಲಾ ಕೌಶಲ್ಯವನ್ನು ಗಮನಿಸಿ. ಅವನು ದನಕಾಯುವ ಕೆಲಸಕ್ಕೆ ಸೇರಿದೊಡನೆ ಏನುಮಾಡುತ್ತಾನೆ ನೋಡಿ.
‘ಸಿದ್ದ ಎಲ್ಲ ದನಗಳಿಗೂ ಮುರುಗುಣಿ ಕಟ್ಟಿದ. ಮುರುಗುಣಿ ಅಂದರೆ ಬಿದಿರಿನ ಒಂದು ತಲೆಯನ್ನು ಗಣ್ಣಿಗೆ ಸರಿಯಾಗಿ ಕತ್ತರಿಸಿ, ೫-೬ ಇಂಚು ಉದ್ದಕ್ಕೆ ತುಂಡು ಮಾಡಿ (ಸೇರಿನಂತೆ), ಆಮೇಲೆ ಅದರ ಮಧ್ಯದಲ್ಲಿ ಸೀಳಿ ಎರಡು ನಾಲಿಗೆಗಳಂತೆ ಕೊರೆಯಬೇಕು. ಹೀಗೆ ಮಾಡಿ ಅದನ್ನು ಬಾರಿಸಿದರೆ ಒಳ್ಳೆಯ ಶಬ್ದ ಬರ್ತದೆ. ಸಿದ್ದ ಮುರುಗುಣಿ ಮಾಡುವುದರಲ್ಲಿ ಮಹಾ ನಿಪುಣ. ಒಂದೊಂದು ಮುರುಗುಣಿಗೂ ಒಂದೊಂದು ಸ್ವರ ಬರುವಂತೆ ಮಾಡುತ್ತಿದ್ದ. ಆ ಮುರುಗುಣಿಗಳಿಗೆ ಹುಳ್ ಚಪ್ಪು ಅಂತ ಕರೆಯುವ ಭಾರ ಮತ್ತು ಗಟ್ಟಿ ಮರದ ಜಾತಿಯ ಎರಡು ಸಣ್ಣ ತುಂಡುಗಳನ್ನು ಕಡ್ತಾಳಿ ದಾರದಿಂದ ಕಟ್ಟಿರುತ್ತಿದ್ದ. ತಲೆ ಅಲ್ಲಾಡಿಸಿದಾಗ ಅದರ ಕುಣಿಕೆ ಬಿದಿರಿಗೆ ತಾಗಿದರೆ ಸಾಕು ನಾದ ಹೊರಹೊಮ್ಮುತ್ತಿತ್ತು. ದನಕ್ಕೆ ಕಟ್ಟಿದಾಗ ಅವು ಮೇಯುವಾಗ ತಲೆಯನ್ನು ಆಚೆ ಈಚೆ ಅಲ್ಲಾಡಿಸಿದಂತೆಲ್ಲಾ ಒಂದು ರೀತಿಯ ನಿನಾದ ಕೇಳಿ ಬರುತ್ತಿತ್ತು’
ಯಾವ ತುಡುಗು ದನ ಎಲ್ಲಿ ಇದೆ ಎಂದು ತಿಳಿಯಲು ಸಿದ್ದ ಮಾಡಿಕೊಂಡ ಉಪಾಯ ಇದು. ನನಗೂ ತುಂಬ ಸ್ವಾರಸ್ಯಕರನೆನಿಸಿದ ಇನ್ನೊಂದು ವರ್ಣನೆ ಹೆಂಡವನ್ನು ಇಳಿಸುವ ಕಲೆಯ ಬಗ್ಗೆ ಇರುವ ಬರವಣಿಗೆ. ಹಾಗೆಯೇ ಮಿಡಿಮಾವನ್ನು ಕೊಯ್ಯುವುದರ ವರ್ಣನೆ. ನನಗೆ ಗೊತ್ತೇ ಇಲ್ಲದಿದ್ದ ಅತಿಶ್ರೇಷ್ಠ ಎಂದುಕೊಂಡಿದ್ದ ಒಂದು ಹಾವಿನ ಬಗ್ಗೆ ಈ ಲೇಖಕರು ಬರೆದಿದ್ದನ್ನು ನೋಡಿ ಅಚ್ಚರಿ ಪಟ್ಟೆ. ಅದು ಯಾರ ತಂಟೆಗೂ ತಾನಾಗಿ ಹೋಗದ ಕಾಳಿಂಗ ಸರ್ಪದಬಗ್ಗೆ.
ಕಾಡನ್ನೇ ದೇವರೆಂದು ಪೂಜಿಸುವ ಈ ಜನ ಅವರ ನಡುವಿನ ಎಲ್ಲ ವೈವಿಧ್ಯಗಳ ಜೊತೆಗೆ ಒಂದು ಸಮುದಾಯದ ಕಲ್ಪನೆಯನ್ನು ಇಟ್ಟುಕೊಂಡಿರುತ್ತಾರೆ. ಉದಾಹರಣೆಗೆ ಶಿಖಾರಿಯಾದ ನಂತರ ಅವರು ಮಾಂಸವನ್ನು ಹಂಚಿಕೊಳ್ಳುವ ಕ್ರಮ ನೋಡಿ:
` ಯಾವುದೇ ಶಿಕಾರಿ ಮಾಡಿದ ಪ್ರಾಣಿಯ ಮಾಂಸವನ್ನು ಮೂರು ರಾಶಿ ಮಾಡ್ತಾರೆ. ಆ ರಾಶಿ ಸಮವಾಗಿದೆಯೇ ಇಲ್ವೇ ಅಂತ ಬಾಳೆ ಎಲೆ ನಾರಿನಿಂದ ಅಳೆದು ಸಮವಾಗಿದೆ ಅಂತ ಆದಮೇಲೆ ಅದರಲ್ಲಿ ಒಂದು ಪಾಲು ಹೊಡೆದವನಿಗೆ . ಉಳಿದೆರಡು ರಾಶಿ ಒಟ್ಟುಮಾಡಿ ಶಿಕಾರಿಗೆ ಬಂದ ಎಲ್ಲರಿಗೂ ಹಂಚ್ತಾರೆ. ಅದರಲ್ಲಿ ಕೋವಿ ಪಾಲು, ನಾಯಿ ಪಾಲು, ಹಳುವಿನವರ ಪಾಲು, ಸೊಂಟ ಮುರ್ಕ್ ಪಾಲು, ತೋರ್ಡಡಿ ಪಾಲು,ನೆಲದ್ ಪಾಲು, ಅಂತ ತೆಗೆದಿಡ್ತಾರೆ. ಸೊಂಟ ಮುರ್ಕ್ ಪಾಲು ಅಂದ್ರೆ ಅಷ್ಟೂ ಮಾಂಸವನ್ನ ಎಲ್ಲರಿಗೂ ಪಾಲು ಹಂಚಿ ಸೊಂಟ ನೋಯಿಸಿಕೊಂಡವನಿಗೆ ಕೊಡುವುದು.
ತೋರ್ಡಡಿ ಪಾಲು ಅಂದ್ರೆ ಅವಮಾನದ ಪಾಲು. ಶಿಕಾರಿಗೆ ಬಾರದ ಮನೆಯವರಿಗೂ ಪಾಲು ಹಂಚಲಾಗುತ್ತದೆ. ಅದು ಶಿಕಾರಿಗೆ ಬಂದವರಿಗೆ ಕೊಡುವ ಪಾಲಿನ ಅರ್ದದಷ್ಟಾಗಿರುತ್ತದೆ. ಎಷ್ಟು ಕರೆದರೂ ಶಿಕಾರಿಗೆ ಬಾರದವರಿಗೆ, ಈಡಿನ ಶಬ್ದ ಕೇಳಿ ಆಮೇಲೆ ಬಂದವರಿಗೆ ಈ ಪಾಲು ಸೇರುತ್ತದೆ. ಇನ್ನು ಯಾರದ್ದಾದರೂ ಸ್ವಂತ ಜಾಗದಲ್ಲಿ ಬಿದ್ದಿದ್ದರೆ ಅವರಿಗೊಂದು ಪಾಲು ಕೊಡುತ್ತಾರೆ. ಇದನ್ನು ನೆಲ್ ಪಾಲು ಅಂತಾರೆ.”
ಯಾವ ಪಠ್ಯ ಪುಸ್ತಕದಲ್ಲೂ ಸಿಗದಂತಹ ಒಂದು ಶ್ರೀಮಂತ ಸಮುದಾಯ ಸಂಸ್ಕೃತಿಯನ್ನು ಪಡೆದ ಕಾಡಿನಲ್ಲಿ ಬದುಕುವ ಶೂದ್ರರ ಕಥೆ ಇದು.
ಹಲವು ಗಾದೆ ಮಾತುಗಳು ಪುಸ್ತಕದುದ್ದಕ್ಕೂ ಇವೆ. ಉದಾಹರಣೆಗೆ ಈ ವಾಕ್ಯಗಳನ್ನು ನೋಡಿ:
‘ಈ ಹತ್ತು ಮೀನಿಗೆ ಸಂಬಂಧಿಸಿದಂತೆ ಗಾದೆ ಮಾತೊಂದುಂಟು. ‘ಹತ್ತು ಮೀನಿಗೆ ನೆತ್ತಿ ಕಂಡಿ, ಇಳಿ ಮೀನಿಗೆ ಬುಡದ ಕಂಡಿ’ ಅಂತ. ಹತ್ತು ಮೀನುಗಳಲ್ಲಿ ಒಂದು ಹೆಣ್ಣು ಮೀನು ಮೇಲೆ ಹೋದರೆ ಹತ್ತಿಪ್ಪತ್ತು ಗಂಡು ಮೀನು ಜೀವದ ಹಂಗು ತೊರೆದು ಅದರ ಹಿಂದೆ ಜಡೆಗಟ್ಟಿ ಹೋಗ್ತವೆ. ಹತ್ತು ಮೀನು, ಬಾಳೆ ಮೀನು, ಮರಮೀನು, ಹಾಲು ಮೀನು, ಕೊಚ್ಚಲಿ ಮೀನು, ಹಂದಿಗೊಚ್ಚಲಿ, ಗೊಯ ಬೀಜ, ನೀಲಿಗೇರೆ ಸೋಸಲು, ಸೋಸಲು, ಬಣ್ಣಗರ್ಸೆ, ಸೂಜಿ ಮೀನು, ತೊಳ್ಳೆ ಮೀನು, ಮರುಗುಂಡ, ಚಾಪ್ಲು, ಕೊಳ್ಸು, ಕರ್ಸೆ, ಮಂಡಗರ್ಸೆ, ಸುರ್ಗಿ, ಕಡ್ಲೆ ಹೆಡೆ, ಸುಪ್ಪುಗರ್ಸೆ, ಕನ್ನರ್ಗಿ, ಹೊಳ್ಳು, ಕುಲ್ಡುನ್ ಮೀನು, ಮರಳು ಮೀನು, ಹಿಮಗಲ ಮೀನು, ಅರಗಲ ಬತ್ತಿ, ತೊಗಲಿ ಮೀನು, ವಾಂಟಕರ-ವಾಡ್ಮೆ, ಗೊಜಲೆ, ಗಿರ್ಲು, ಕಲ್ ಗಿರಿ, ಕಣ್ ಮೀನು, ಬಿಳ್ಚಿ, ಎಮ್ಮೆ ಚಾಪಲು ಹೀಗೆ ಮಲೆನಾಡಿನಲ್ಲಿ ಹತ್ತಾರು ಜಾತಿಯ ಮೀನುಗಳಿವೆ. ಈ ಮೀನುಗಳಲ್ಲಿ ಹಿಂಗಳೆ ಮೀನು ಚಂದದ ಮೀನು. ಸಂಘಜೀವಿಗಳು ಒಟ್ಟಗೆ ಗುಂಪಲ್ಲಿ ಇರ್ತಾವೆ’. ಬರೆಯುತ್ತ ಹೋದರೆ ಮುಗಿಯದ ಕಥೆ ಈ ಪುಸ್ತಕ. ಕನ್ನಡ ಬಾಷೆಗೆ ಹೊಸದಾಗಿ ಹಲವು ಶಬ್ದಗಳನ್ನು ಕಲ್ಕುಳಿಯವರು ತಮ್ಮ ವರ್ಣನೆಯಲ್ಲಿ ತರುತ್ತಾರೆ.
ಒಬ್ಬ ಸಮಾಜವಾದಿಯಾಗಿ ಬೆಳೆದ ನನಗೆ ರೈತರ ಸಮಸ್ಯೆಗಳು ಗೊತ್ತಿತ್ತು. ಆದರೆ ನನಗೆ ಟ್ರೈಬ್ಗಳ ಬಗ್ಗೆ- ಬುಡಕಟ್ಟು ಜನಾಂಗದ ಬಗ್ಗೆ ತಿಳುವಳಿಕೆ ಮಾತ್ರ ಇತ್ತು. ಆದರೆ ನನ್ನಲ್ಲಿ ಅವರ ನಾಶದಬಗ್ಗೆ ಗಾಢವಾದ ಚಿಂತನೆ ಇರಲಿಲ್ಲ. ಕುದುರೆಮುಖದಲ್ಲಿ ಅದಿರನ್ನು ತೆಗೆದು ಅದನ್ನು ಇರಾನಿಗೆ ರಪ್ತುಮಾಡುವ ಮೂಲಕ, ಕಾಡನ್ನೂ ಅದರಲ್ಲಿ ವಾಸಿಸುವವರನ್ನು ನಾಶಮಾಡುವ ಸರ್ಕಾರದ ನೀತಿಯ ವಿರುದ್ಧ ನನ್ನನ್ನು ಹೋರಾಟಕ್ಕೆ ಹಚ್ಚಿದವರಲ್ಲಿ ಕಲ್ಕುಳಿ ಮುಖ್ಯರು. ಇವರ ಸಂಪರ್ಕಕ್ಕೆ ನಾನು ಬರದಿದ್ದಲ್ಲಿ ನಮ್ಮ ಒಟ್ಟು ನಾಗರಿಕತೆಗೂ ಡೆವಲಪ್ ಮೆಂಟ್ ರಾಜಕೀಯಕ್ಕೂ ಜನರ ಕಷ್ಟ ಸುಖಗಳಿಗೂ ಇರುವ ಸಂಬಂಧಗಳನ್ನು ನಾನು ಆತ್ಮೀಯವಾಗಿ ತಿಳಿಯಲಾರದೆ ಹೋಗುತ್ತಿದ್ದೆ. ಈ ವರೆಗೂ ನಾನು ಕಲ್ಕುಳಿ ಒಬ್ಬ ಅಸಾಧಾರಣ ರಾಜಕೀಯ ಚಿಂತನೆಯನ್ನು ಮಾಡಬಲ್ಲ ವಿಶಿಷ್ಟ ವ್ಯಕ್ತಿಯೆಂದು ಮಾತ್ರ ತಿಳಿದಿದ್ದೆ. ಈ ಪುಸ್ತಕವನ್ನು ಓದಿದಾಗ ಕಲ್ಕುಳಿ ಕುವೆಂಪು ಮತ್ತು ತೇಜಸ್ವಿ ಸೃಷ್ಟಿಸುವ ಲೋಕವನ್ನು ರಾಜಕೀಯ ಪ್ರಜ್ಞೆಯಲ್ಲಿಯೂ ಬಲ್ಲವರು ಎಂಬುದನ್ನು ಮನಗಂಡೆ.
ಯು.ಆರ್.ಅನಂತಮೂರ್ತಿ
ದಿನಾಂಕ:೩೦/೧೦/೨೦೧೨
ಮಣಿಪಾಲ






0 Comments