ನಾಗರಾಜ ಹರಪನಹಳ್ಳಿ
ಇತಿಹಾಸ
ಸರಿಯಾಗಿ 85 ವರ್ಷಗಳ ಹಿಂದೆ ಮಹಾತ್ಮಾ ಗಾಂಧಿಜೀ ಕಾರವಾರಕ್ಕೆ ಭೇಟಿ ನೀಡಿದ್ದರು. 1934 ಫೆ.27 ರಂದು ಕುಂದಾಪುರದಿಂದ ದಯಾವತಿ ಎಂಬ ಬೋಟ್ ಮೂಲಕ ಸಮುದ್ರ ಮಾರ್ಗವಾಗಿ ಕಾರವಾರಕ್ಕೆ ಬಂದಿಳಿದರು.
1934 ಫೆ.28 ರಂದು ಗೀತಾಂಜಲಿ ಟಾಕೀಸು ಹಿಂದಿನ ಬಯಲು ಜಾಗದಲ್ಲಿ ಅಸ್ಪೃಶ್ಯತೆಯ ವಿರುದ್ಧ ಭಾಷಣ ಮಾಡಿದ್ದರು. ನಗರಸಭೆಯ ಅಂದು ಗಾಂಧಿಗೆ ನೀಡಿದ್ದ ಬೆಳ್ಳಿಯ ಸನ್ಮಾನ ಪತ್ರವನ್ನು ಗಾಂಧೀ ಸ್ವೀಕರಿಸದೇ ಹೋದಾಗ ಅದನ್ನು ಅದೇ ಬಹಿರಂಗ ಸಮಾವೇಶದಲ್ಲಿ ಹರಾಜು ಹಾಕಲಾಗಿತ್ತು. ಕೃಷ್ಣರಾವ್ ಹಳದೀಪುರಕರ್ ಅವರು ಅದನ್ನು ಹರಾಜಿನಲ್ಲಿ ಕೊಂಡು, ಅದರ ಹಣವನ್ನು ಅಸ್ಪೃಶ್ಯತೆಯ ವಿರುದ್ಧ ಜಾಗೃತಿಯ ಸಂಚಾರದ ಖರ್ಚಿಗೆಂದು ಗಾಂಧೀಜಿಗೆ ನೀಡಿದ್ದರು. ಗಾಂಧೀಜಿಗೆ ನೀಡಿದ್ದ ಆ ಸನ್ಮಾನ ಪತ್ರ ಇಂದಿಗೂ ಕೃಷ್ಣರಾವ್ ಅವರ ಸಹೋದರ ಸುಬ್ಬರಾವ್ ಹಳದೀಪರಕರ್ ಅವರ ಮನೆಯಲ್ಲಿದೆ.
ಗಾಂಧೀಜಿ ಕಾರವಾರಕ್ಕೆ ಬಂದಾಗ ಒಂದು ರಾತ್ರಿ ಉಳಿದ ಮನೆಯನ್ನು ಸಹ ಸಂರಕ್ಷಿಸಲಾಗಿದೆ. ಗಾಂಧೀಜಿ ಉಸಿರಾಡಿ, ಮಾತಾಡಿ ಹೋದ ಹೋದ ನೆಲದಲ್ಲಿ ಮತ್ತೆ ಗಾಂಧೀಜಿ ಧ್ವನಿ ಮತ್ತು ಅವರ ಬದುಕಿನ ಉದ್ದೇಶ ಕಾರವಾರದಲ್ಲಿ ಮರು ಸಾದೃಶ್ಯವಾಗುವಂತೆ ಕಟ್ಟಿಕೊಟ್ಟದ್ದು ಒಂದು ರಂಗ ಪಯಣದ ತಂಡ.
ಇವತ್ತಿನ ಬೆಳಕು
ಮಹಾತ್ಮಾ ಗಾಂಧೀಜಿಗೆ 150 ವರ್ಷ ತುಂಬಿದ ನೆನಪಲ್ಲಿ ಒಂದು ರಂಗ ಪಯಣ ತಂಡ ಗಾಂಧೀಜಿಯನ್ನು ಮಕ್ಕಳಿಗೆ ತಲುಪಿಸುವ ಯತ್ನ ಮಾಡುತ್ತಿದ್ದು, ಕಾರವಾರದ ಬಾಲ ಮಂದಿರ ಶಾಲೆಯ ಸಭಾಭವನದಲ್ಲಿ ‘ಪಾಪು ಬಾಪು’ ನಾಟಕ ಪ್ರದರ್ಶನವಾಯಿತು.
ಪಾಪು ಬಾಪು ನಾಟಕದ ಮೂಲಕ ಮೋಹನದಾಸನ (ಗಾಂಧಿ) ಬಾಲ್ಯ, ಯೌವ್ವನ, ವಿದೇಶದಲ್ಲಿ ಕಲಿತದ್ದು, ವಕೀಲನಾಗಿ ದಕ್ಷಿಣ ಆಫ್ರಿಕಾದಲ್ಲಿನ ಅನುಭವ ಮತ್ತು ಕರಿಯನು ಎಂಬ ಕಾರಣಕ್ಕೆ ರೈಲಿನ ಪ್ರಥಮ ದರ್ಜೆ ಬೋಗಿಯಿಂದ ತಳ್ಳಲ್ಪಟ್ಟ ಕ್ಷಣದಲ್ಲಿ ಮೋಹನದಾಸನಿಗೆ ಆದ ಶೋಷಣೆ, ಅನ್ಯಾಯ, ದೌರ್ಜನ್ಯದ ಮುಖವನ್ನು ರಂಗ ಪಯಣದ ನಟರು ಸಮರ್ಥವಾಗಿ ಕಟ್ಟಿಕೊಟ್ಟರು. ಮೈಬಣ್ಣದ ಕಾರಣಕ್ಕಾಗಿ ಆಂಗ್ಲರಿಂದ ದಕ್ಷಿಣ ಆಫ್ರಿಕಾದಲ್ಲಿ ಅನ್ಯಾಯ, ಶೋಷಣೆಗೆ ತುತ್ತಾದದ್ದೆ ಮೋಹನದಾಸ ಕರಮಚಂದ `ಗಾಂಧಿ’ಯಾಗಿ ಜನ್ಮ ತಾಳಿದರು ಎಂದು ನಾಟಕದಲ್ಲಿ ಒತ್ತು ಕೊಟ್ಟು ಧ್ವನಿಸಲಾಗಿದೆ.
ಬಾಲ್ಯದಲ್ಲಿ ಸತ್ಯ ಹರಿಶ್ಚಂದ್ರ ನಾಟಕ ನೋಡಿದ್ದರಿಂದ ಬದಲಾಗಿದ್ದ ಮೋಹನದಾಸ ಅಂದೇ ಸತ್ಯದ ಹಾದಿ ಹಿಡಿದಿದ್ದರು. ಜಾನ್ ರಸ್ಕಿನ್ ಅವರ ಅನ್‍ಟು ದಿಸ್ ಲಾಸ್ಟ್ ಎಂಬ ಕೃತಿ ಓದಿನ ನಂತರ ಮತ್ತಷ್ಟು ಬದಲಾದರು ಗಾಂಧಿ. ದಕ್ಷಿಣ ಆಫ್ರಿಕಾದಲ್ಲಿ ಆಶ್ರಮ ತೆರೆದು ಅಲ್ಲಿನ ಭಾರತೀಯರ ಹಕ್ಕುಗಳಿಗಾಗಿ ಹೋರಾಡಿದರು. ಬ್ರಿಟಿಷರ ಕಾನೂನುಗಳು ಮಾನವ ಸಹಜ ನ್ಯಾಯದಿಂದ ದೂರವಿದ್ದ ಕಾರಣ, ಅವುಗಳ ಹೇರಿಕೆಯನ್ನು ಪ್ರತಿಭಟಿಸಿ, ಚಳುವಳಿ ರೂಪಿಸಿದರು. ಸಾಮಾನ್ಯನಿಗೂ , ಸಮಾಜದ ಕಟ್ಟಕಡೆಯ ಪ್ರಜೆಗೂ ನ್ಯಾಯ ಎಂಬ ದಾರಿಯಲ್ಲಿ ಪ್ರಾರಂಭವಾದ ಹೋರಾಟ,ಭಾರತಕ್ಕೆ ಬಂದ ಮೇಲೆ ಸ್ವಾತಂತ್ರ್ಯದ ಹೋರಾಟಕ್ಕೆ ಗಾಂಧಿ ಅಣಿಯಾದ ಕತೆಯನ್ನು ನಾಟಕದಲ್ಲಿ ಹೆಣೆಯಲಾಗಿದೆ.
ಅಸ್ಪೃಶ್ಯತೆಯ ವಿರುದ್ಧದ ಹೋರಾಟ, ಗಾಂಧಿಜೀ ತಂದ ಯಂಗ್ ಇಂಡಿಯಾ, ಹರಿಜನ ಪತ್ರಿಕೆಗಳು, ಉಪ್ಪಿನ ಸತ್ಯಾಗ್ರಹ, ದಂಡಿಯಾತ್ರೆ, ಅಸಹಕಾರ ಚಳುವಳಿಗಳನ್ನು ನಾಟಕದಲ್ಲಿ ದೃಶ್ಯಗಳ ಮೂಲಕ ಸೊಗಸಾಗಿ ಮಕ್ಕಳ ಮತ್ತು ಪ್ರಬುದ್ಧರ, ಯುವಕರ ಮನಮುಟ್ಟುವಂತೆ ನಿರೂಪಿಸಲಾಯಿತು. ಅಲ್ಲದೇ ಸ್ವಾತಂತ್ರ್ಯ ನಂತರ ಭಾರತ ವಿಭಜನೆಗೆ ಗಾಂಧೀಜಿಗೆ ಮನಸ್ಸಿರಲಿಲ್ಲ, ದೇಶ ವಿಭಜನೆಯ ನಂತರವೂ ಹಿಂದೂ ಮುಸ್ಲಿಮರು ಜಗಳ ಮಾಡಿಕೊಳ್ಳುವುದನ್ನು ನಿಲ್ಲಿಸಲು ಗಾಂಧಿ ಹೋರಾಡಿದ ದೃಶ್ಯಗಳು ನಾಟಕದಲ್ಲಿವೆ.
ಹಿಂಸೆಗೆ, ಕೋಮುವಾದಕ್ಕೆ ಪ್ರತಿ ಹಿಂಸೆ ಮತ್ತು ಕೋಮವಾದ ಉತ್ತರವಲ್ಲ ಎಂದು ಗಾಂಧಿ ಸ್ಪಷ್ಟವಾಗಿ ಹೇಳಿದ ಮಾತು ನಾಟಕದಲ್ಲಿದೆ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕೆಂಬ ವಾದಕ್ಕೆ ಗಾಂಧಿ ವಿರೋಧವಾಗಿದ್ದರು ಮತ್ತು ದೇಶ ವಿಭಜನೆಗೆ ಗಾಂಧಿ ಒಪ್ಪಿರಲಿಲ್ಲ ಎಂಬ ಸಂದೇಶ ಗಾಂಧಿ ಪಾತ್ರಧಾರಿ ನಟ ಉದಯ್ ಕುಮಾರ್ ಎಸ್.ಎನ್. ಬಾಯಿಂದಲೇ ನಾಟಕದಲ್ಲಿ ನಿರೂಪಿಸಲಾಗಿದೆ. ಆ ಪಾತ್ರಧಾರಿ ಅಭಿನಯ ಎಷ್ಟು ಸಮರ್ಥವಾಗಿದೆ ಎಂದರೆ ಸ್ವತಃ ಗಾಂಧಿಜೀ ನಮ್ಮೆದುರು ಮಾತಾಡಿದಂತೆ….
ಅಲ್ಲದೇ ಅಂದಿನ ನಾಯಕರು ಮುದುಕನ ಮಾತು ಕೇಳಲಿಲ್ಲ. ಅವರಿಗೆ ಅಧಿಕಾರವನ್ನು ಬೇಗನೇ ಅನುಭವಿಸುವ ತರಾತುರಿಯಲ್ಲಿದ್ದರು ಎಂಬ ಮಾತು ಸಹ ನಾಟಕದಲ್ಲಿ ಬಂದು ಹೋಗುತ್ತದೆ. ಕೊನೆಯಲ್ಲಿ ಗಾಂಧೀಜಿಯ ಕೊಲೆಯಾಗುವುದು ಹಾಗೂ ದೇಶದ ಜನರು ಅದಕ್ಕಾಗಿ ಪರಿತಪಿಸುವ ಸನ್ನಿವೇಶವನ್ನು ಧ್ವನಿಪೂರ್ಣವಾಗಿ ಹೇಳಲಾಗಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧೀಜಿ ಜೊತೆಗಿದ್ದ ಮುಸಲ್ಮಾನ ಶಾಹಿದ್. ಶಾಹಿದ್ ಪಾತ್ರ ಮಾಡಿದ್ದ ಗಣೇಶ್ ಎಂ.ಹೆಗ್ಗೋಡು ಅವರ ಅಭಿನಯ ಅತ್ಯಂತ ಭಾವಪೂರ್ಣವಾಗಿತ್ತು.
ದೇಶ ಮುಂದೆ ಹೇಗಿರಬಹುದು ಎಂಬುದನ್ನು ಗಾಂಧಿ ಮೊದಲೇ ಊಹಿಸಿದ್ದರು ಎಂಬ ಧ್ವನಿಯನ್ನು ನಾಟಕದಲ್ಲಿ ಧ್ವನಿಸಲಾಗಿದೆ. ಕಲಾವಿದರಾದ ಯಲ್ಲಾಪುರದ ಕೃಷ್ಣಮೂರ್ತಿ ಗಾಂವ್ಕರ್ ಗಾಂಧೀಜಿ ದಕ್ಷಿಣ ಆಫ್ರಿಕಾದಲ್ಲಿದ್ದಾಗಿನ ದಿನಗಳನ್ನು ಸಮರ್ಥವಾಗಿ ಕಟ್ಟಿಕೊಟ್ಟರು. ಹರಪನಹಳ್ಳಿಯ ಮಾಲಾಶ್ರೀ ಗಾಂವ್ಕರ್, ಕಸ್ತೂರಿಬಾ ಆಗಿ ಹಾಗೂ ಚಂದ್ರಮತಿ ಪಾತ್ರಗಳಿಗೆ ಜೀವ ತುಂಬಿ ಅಭಿನಯಿಸಿದರು.
ಅಭಾ ಪಾತ್ರವನ್ನು ಮಾಲಾಶ್ರೀ, ಮನು ಪಾತ್ರವನ್ನು ಸುಧಾ ಆರ್.ಮುತ್ತಾಳ ಅಭಿನಯಿಸಿದರು. ರಂಜಿತಾ ಜಾಧವ, ಸ್ವರೂ, ಸಂದೀಪ ರಾಜ್ ರೆಡ್ಡಿ, ನಂದೀಶ್, ಪ್ರದೀಪ ಕುಮಾರ್, ಮಿಲನ್ ಗೌಡ, ಸುನಿನ್ ಕುಮಾರ್, ಜಗದೀಶ್ ಕಟ್ಟಿಮನಿ, ರಂಜಿತ್ ಕುಮಾರ ಬಿ, ವೆಂಕಟೇಶ್ ಎ., ನಿಶಾಂತ ಬಿ.ಎಂ., ವಿಠ್ಠಲ ಎಂ,ಪರೀಟ್, ದೆಹಲಿಯ ಗುಲಷನ್ ಪಾಪು ಬಾಪು ನಾಟಕದಲ್ಲಿನ ಇತರೆ ಪಾತ್ರಗಳಿಗೆ ಜೀವ ತುಂಬಿದರು. ಗಾಂಧಿಜೀ ಕೊಲೆಯ ಸನ್ನಿವೇಶ ನೋಡುತ್ತಿದ್ದ ವಿದ್ಯಾರ್ಥಿಗಳು ಕಣ್ಣೀರಿಟ್ಟರು. ಚಂದ್ರು ಉಡುಪಿ ನಾಟಕ ಪ್ರದರ್ಶನದ ಉಸ್ತುವಾರಿ ವಹಿಸಿದ್ದರು.
ಬೊಳುವಾರರ ಕಾದಂಬರಿ ಆಧಾರಿತ :
ಬೊಳುವಾರು ಮಹಮ್ಮದ್ ಕುಂಞ ಅವರ ಪಾಪು ಬಾಪು ಕಾದಂಬರಿ ಆಧಾರಿತ ವಸ್ತುವನ್ನು ಎನ್ .ಆರ್.ವಿಶುಕುಮಾರ್ ಪರಿಕಲ್ಪನೆಯಲ್ಲಿ ನಾಟಕ ಹೆಣೆಯಲಾಗಿದೆ. ಶ್ರೀಪಾದ ಭಟ್ ನಾಟಕವನ್ನು ನಿರ್ದೇಶಿಸಿದ್ದರು.






0 Comments