ಯಾವ ಭಾಷೆ ನಮ್ಮದಾಗಬೇಕು..?

ಯಾವ ಭಾಷೆ ನಮ್ಮದಾಗಬೇಕು.

ಸಂದೀಪ್ ಈಶಾನ್ಯ 

ಮೊದಲಿಗೆ ಮೂರು ಉದಾಹರಣೆಗಳನ್ನು ಇಲ್ಲಿ ಹೇಳಿಬಿಡುತ್ತೇನೆ.

೧. 
೧೯೭೫ರ ಜೂನ್ ೨೫ರಂದು ತುರ್ತು ಪರಿಸ್ಥಿತಿ ಜಾರಿಯಾದಾಗ ಅಂದಿನ ಪ್ರಧಾನಿ ಇಂದಿರಾಗಾಂಧಿ ವಿರುದ್ಧ ಇಡಿ ದೇಶವೇ ಬಂಡೆದ್ದು ನಿಂತಿತ್ತು. ಕಾಂಗ್ರೆಸ್ ಪರ ಒಲವು ಹೊಂದಿದ್ದ ಎಡಪಂಥೀಯ ಚಿಂತಕರು, ಸಾಹಿತಿಗಳು, ರಂಗಕರ್ಮಿಗಳು, ಕಮ್ಯುನಿಸ್ಟ್ ಸಿದ್ದಾಂತದವರೂ ಕೂಡ ಇಂದಿರಾ ವಿರೋಧಿಗಳ ಸಾಲಿನಲ್ಲಿದ್ದರು.

ಸೈದ್ದಾಂತಿಕವಾಗಿ ಭಿನ್ನವಾಗಿರುವ ಆರ್ ಎಸ್ ಎಸ್ ಇದಕ್ಕೆ ಸಾಮಾನ್ಯವಾಗೇ ವ್ಯಾಪಕ ವಿರೋಧವನ್ನು ವ್ಯಕ್ತಪಡಿಸಿತ್ತು. ಇದೇ ಕಾರಣದಿಂದ ಆವತ್ತಿನ ಆರ್ ಎಸ್ ಎಸ್ ನ ಹಿರಿಯರೆಲ್ಲಾ ಇಂದಿರಾಗಾಂಧಿ ವಿರುದ್ಧ ಜನಾಂದೋಲನ ರೂಪಿಸುವ ಸಲುವಾಗಿ ಬಿಳಿ ಹಾಳೆಯೊಂದರಲ್ಲಿ “ಜವಾಬ್ ದೋ ಇಂದಿರಾ” ಎನ್ನುವ ತಲೆ ಬರಹದ ಅಡಿಯಲ್ಲಿ ಇಪ್ಪತ್ತು ಪ್ರಶ್ನೆಗಳನ್ನು ದಾಖಲಿಸಿ ಇದನ್ನ ದೇಶದ ಪ್ರತಿಯೊಬ್ಬರಿಗೂ ತಲುಪುವಂತೆ ಮಾಡಬೇಕು ಇದಕ್ಕೆ ನಿಮ್ಮ ಸಹಕಾರ ಬೇಕೆಂದು ಅಟಲ್ ಬಿಹಾರಿ ವಾಜಪೇಯಿ ಎದುರಿಟ್ಟರು.

ಎಲ್ಲವನ್ನೂ ಓದಿದ ವಾಜಪೇಯಿ ಅವರು ಪತ್ರದಲ್ಲಿನ ಪ್ರಶ್ನೆಗಳು ನಿಜಕ್ಕೂ ನೈತಿಕವಾಗಿ ಗಾಂಭೀರ್ಯವುಳ್ಳವು ಎಂದು ಹೇಳುತ್ತಲೇ ” ಜವಾಬ್ ದೋ ಇಂದಿರಾ” ಎನ್ನುವ ತಲೆ‌ಬರಹವನ್ನು ಒಡೆದುಹಾಕಿ ” ಜವಾಬ್ ದೀಜಿಯೇ ಇಂದಿರಾ ಜೀ” ಎಂದು ತಿದ್ದಿದ್ದರು.

೨. 
ಮಹಾತ್ಮ ಗಾಂಧಿ ತಮ್ಮ ‘ಹರಿಜನ’ ಪತ್ರಿಕೆಯಲ್ಲಿ ದಲಿತರು ದೇವಸ್ಥಾನ ಪ್ರವೇಶ ಮಾಡುವುದರ ಮೂಲಕ ಸಾಧ್ಯವಾಗುವ ಸಾಮಾಜಿಕ ಸಾಂಸ್ಕೃತಿಕ ಸಾಧ್ಯತೆಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಿದ್ದಕ್ಕೆ ಪ್ರತಿಯಾಗಿ ವೈದಿಕ ಚಿಂತಕರೊಬ್ಬರು ಗಾಂಧಿಗೆ ನೇರವಾಗಿಯೇ ಸಿಟ್ಟಿನಲ್ಲಿ ಪತ್ರವೊಂದನ್ನು ಬರೆದಿದ್ದರು.

ಇದಕ್ಕೆ ಉತ್ತರವಾಗಿ ಗಾಂಧಿ ಪತ್ರ ಬರೆಯುವಾಗ ಅದೇ ವೈದಿಕ ಚಿಂತಕರಿಗೆ “ಯುವರ್ ಎಕ್ಸಲೆನ್ಸಿ” ಎಂದು ಸಂಭೋದಿಸುವ ಮೂಲಕ ಪತ್ರ ಆರಂಭಿದ್ದರು.

೩. 
ಮತ್ತೊಂದು ಪಾಕಿಸ್ತಾನಕ್ಕೆ ಸಂಬಂಧಿಸಿದ್ದು. ೧೯೭೯ರ ಎಪ್ರಿಲ್ ೪ರಂದು ಪಾಕಿಸ್ತಾನ ಮಾಜಿ ಪ್ರಧಾನಿ ಜುಲ್ಫಿಕರ್ ಆಲಿ ಭುಟ್ಟೋರನ್ನ ರಾವಲ್ಪಿಂಡಿಯ ಸೆಂಟ್ರಲ್ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು. ಆವತ್ತಿಗೆ ಕಡೆ ಬಾರಿಗೆ ತಂದೆಯನ್ನು ಕಾಣಲು ಹೊರಟಿದ್ದ ಬೆನಜಿರ್ ಭುಟ್ಟೋಗೆ ಅದು ಸಾಧ್ಯವಾಗಲಿಲ್ಲ. ಬೆಳಗಿನ ಜಾವ ನಾಲ್ಕರ ಸುಮಾರಿಗೆ ಜುಲ್ಫಿಕರ್ ರನ್ನ ಗಲ್ಲಿಗೇರಿಸಿಸಲಾಗಿಹೋಗಿತ್ತು.

ದೇಶದ ರಾಜಕಾರಣವನ್ನು ಆಗಷ್ಟೇ ತೆರೆದ ಕಣ್ಣುಗಳಿಂದ ನೋಡಲು ಆರಂಭಿಸಿದ ಬೆನಜಿರ್ ಗೆ ತಂದೆಯ ಸಾವು ಅಪರಿಮಿತ ಸಿಟ್ಟೂ ತಂದಿತ್ತು. ಅದು ಒಬ್ಬ ಮಗಳ ಸಾತ್ವಿಕ ಸಿಟ್ಟೂ ಎನ್ನಬಹುದು. ಗಲ್ಲಿಗೇರಿಸಿದ ಎರಡು ತಾಸಿನ ನಂತರ ರಾವಲ್ಪಿಂಡಿ ಜೈಲಿನಲ್ಲಿ ಯಾರೋ ಸಣ್ಣ ದರ್ಜೆಯ ಅಧಿಕಾರಿಯೊಬ್ಬ ಯಾವುದೋ ಕಾರಣಕ್ಕೆ ಬೆನಜಿರ್ ಮೇಲೆ ದನಿ ಎತ್ತರಿಸಿಬಿಟ್ಟನಂತೆ.

ಸಣ್ಣ ಪ್ರಾಯದ ಬೆನಜಿರ್ ಅಂತಹ ಗಂಭೀರ ಸ್ಥಿತಿಯಲ್ಲೂ Understood. And I won’t stay longer here ಎಂದು ಸ್ಥಿತಪ್ರಜ್ಞೆಯಿಂದ ಹೇಳಿ ಜೈಲಿನಿಂದ ಹೊರಗೆ ಹೊರಟಿದ್ದರು. ಸಾವಿನ ಆ ಕ್ಷಣದಲ್ಲೂ ಬೆನಜಿರ್ ಭಾಷೆಯನ್ನು ಸೌಜನ್ಯಯುತವಾಗೇ ಬಳಸಿದ್ದರು.

(Reference: Daughter of the east.
An Autobiography:
Benazir Bhutto : Hamish Hamilton London Publishers)

ತುರ್ತು ಪರಿಸ್ಥಿತಿಯ ಸಂದರ್ಭದಲ್ಲೂ ಏಕವಚನದಲ್ಲಿ ಸಂಭೋದಿಸಿದ್ದ ಇಂದಿರಾಗಾಂಧಿ ಹೆಸರನ್ನು ಗೌರವಯುತವಾಗಿ ಬಹುವಚನಕ್ಕೆ ತಿರುಗಿಸಿದ್ದು ಅಟಲ್ ಜೀ ಯ ಸಾಚಾತನ ಎನಿಸುತ್ತದೆ.

ಈ ಸೃಷ್ಠಿಯಲ್ಲಿ ಬಹುಶಃ ಗಾಂಧಿಯಷ್ಟು ಪ್ರಶ್ನೆ, ಚರ್ಚೆ ಹಾಗೂ ವಾದಗಳಿಗೆ ಸಾಕ್ಷಿಯಾಗಿದಷ್ಟು ಮತ್ತಾರೂ ಸಾಕ್ಷಿಯಾಗಿಲ್ಲ. ಇಂತಹ ಗಾಂಧಿ ತನ್ನನ್ನು ವಿರೋಧಿಸಿದವರಿಗೂ “ಯುವರ್ ಎಕ್ಸಲೆನ್ಸಿ” ಎಂದಿದ್ದು ವಿರೋಧಿ ವ್ಯಕ್ತಿತ್ವವನ್ನೂ ಗೌರವಿಸಬೇಕು ಎನ್ನುವ ಮನಸ್ಥಿತಿಯ ರೂಪಕದಂತೆ ಕಾಣಿಸುತ್ತದೆ.

ಪ್ರಧಾನಿಯಾಗಿದ್ದ ತಂದೆ ರಾಜಕೀಯ ಪಿತೂರಿಗೆ ಒಳಪಟ್ಟು ಗಲ್ಲಿಗೇರಬೇಕಾಯ್ತು ಎನ್ನುವ ಬೌದ್ದಿಕ ಸಿಟ್ಟಿದ್ದರು, ಅಪ್ಪನ ಕಿರುಬೆರಳು ಹಿಡಿದು ನೂರಾರು ನೆನಪುಗಳನ್ನು ಕಣ್ಮುಂದೆ ತಂದುಕೊಳ್ಳುವ ಮಗಳಾಗಿಯೂ ಬೆನಜಿರ್ ಗೆ ಆ ಕ್ಷಣದ ಸಂಕಟ ದೈತ್ಯವಾದ್ದದ್ದು. ಬೆನಜಿರ್ ರಾಜಕೀಯವಾಗಿ ಅತಿಯಾದ ಆಸಕ್ತಿಯುಳ್ಳವರಾಗಿದ್ದರು. ಆಗಷ್ಟೇ ರಾಜಕೀಯ ಅಸ್ತಿತ್ವಕ್ಕೆ ಹಾತೊರೆದ ದೇಶವೊಂದರ ಪ್ರಮುಖ ರಾಜಕಾರಣಿಯ ಮಗಳೂ ಹೌದು. ಇಷ್ಟಿದ್ದು‌ ತೃತೀಯ ದರ್ಜೆಯ ಸರ್ಕಾರಿ ಅಧಿಕಾರಿಯ ಸಿಟ್ಟಿಗೂ ಬೆನಜಿರ್ ಸಮ್ಮುತ್ತಿಸುತ್ತಾರೆ. ಅದು ನಿಜಕ್ಕೂ ದೊಡ್ಡದು.

ಪತ್ರಿಕೆ ಎನ್ನುವುದು ಈ ಸಮಾಜದ ಎಲ್ಲಾ ಸ್ಥರಗಳ ಜನರಿಗೂ ದೊರೆಯಬಹುದಾದ ಪರ್ಯಾಯ ಶಿಕ್ಷಣ ವ್ಯವಸ್ಥೆ ಎನ್ನುವುದು ನನ್ನ ನಂಬಿಕೆ.‌ ಇದೇ ನಂಬಿಕೆಯಿಂದಲೇ ನಾನು ಬಿಸಿನೆಸ್ ಮ್ಯಾನೇಜ್ಮೆಂಟ್ ವಿಧ್ಯಾರ್ಥಿಯಾದರೂ ಪತ್ರಿಕೋದ್ಯಮ ಆರಿಸಿಕೊಂಡಿದ್ದು.

ಇಂತಹ ಪತ್ರಿಕೋದ್ಯಮದ ಮುಖವಾಣಿಯಾಗಬೇಕಾದ ಪತ್ರಿಕೆಯೊಂದರಲ್ಲಿ ಅಂಕಣಕಾರ ಎನ್ನುತ್ತ ಬರೀ ವಿಷವನ್ನೇ ಕಾರುವ ಮಹಾನ್ ಲೇಖಕರೊಬ್ಬರು ಗಂಜಿಕೇಂದ್ರ, ಎಡಬಿಡಂಗಿ, ಗಂಜಿಗಿರಾಕಿ, ಕಮ್ಮಿನಿಷ್ಟ ಎನ್ನುವಂತ ತೃತೀಯ ದರ್ಜೆಯ ಭಾಷೆ‌ ಬಳಸುವುದನ್ನು ನೋಡಿದಾಗ ನಿಜಕ್ಕೂ ಬೇಸರವಾಗುತ್ತದೆ. ಅರ್ಧಪುಟದಷ್ಟು ಖಾಲಿ ಹಾಳೆಯಲ್ಲಿ ಏನೆಲ್ಲಾ‌ ಬರೆಯಬಹುದು. ಅದರ ಸಾಧ್ಯತೆಗಳನ್ನೇ ಇವರು ಮರೆತಿರಬಹುದು ಅಥವಾ ತಿಳಿದುಕೊಳ್ಳದೇ ಇರಬಹುದು ಎನಿಸಿಬಿಡುತ್ತದೆ.

ಬರವಣಿಗೆಯನ್ನು ಚಟದ ಮಟ್ಟಕ್ಕಿಳಿಸಿರುವ ಇವರಿಗೂ ಅಟಲ್ ಜೀ, ಗಾಂಧಿ, ಬೆನಜಿರ್ ರ ಈ ಮುಖಗಳೂ ಪರಿಚಯ ಮಾಡಿಕೊಡಬೇಕು ಎನಿಸುತ್ತದೆ.‌

‍ಲೇಖಕರು avadhi

April 16, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. nutana doshetty

    Dear Eashanya ,,

    Neevu hekki tegediruva mooru prasangagalu nijakkoo deevigegalu.

    Adare Ivarannu neevu prastapisadiruva patrakartarige holisuvudu aparadha. !

    Avarelli.. Ivarelli..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: