ಪ್ರಸನ್ನ ಅವರ ಇತ್ತೀಚಿನ ನಾಟಕ ‘ಆಚಾರ್ಯ ಪ್ರಹಸನ’ ನಾಟಕ ಪ್ರದರ್ಶನ, ಅದಕ್ಕೂ ಮುನ್ನ ಅವರೊಡನೆ ರಂಗ ಸಂವಾದ ಏರ್ಪಡಿಸಲಾಗಿತ್ತು. ನಾಟಕ ನೋಡಲು ಬಂದ ಬೆಂಗಳೂರಿನ ರಂಗಕರ್ಮಿಗಳು ಹಾಗು ಇನ್ನಿತರ ಪ್ರೇಕ್ಷರೊಡನೆ ಪ್ರಸನ್ನ ಅವರು ಮುಕ್ತವಾಗಿ ಮಾತನಾಡಿದರು. ತಾವು ರಂಗಭೂಮಿಯಲ್ಲಿ ಕೆಲಸ ಮಾಡದೇ ಬಿಟ್ಟು ಕೆಲಕಾಲ ಪಕ್ಕಕ್ಕೆ ಸರಿದಿದ್ದು ಒಂದು ಬಗೆಯ ಹೆದರಿಕೆಯಿಂದ ಎಂಬುದಾಗಿ ಪ್ರಾರಂಭಿಸಿ ನಾವುಗಳು ಪರಸ್ಪರರ ನಾಟಕಗಳ ಬಗ್ಗೆ ನಿರಂತರವಾಗಿ ಸಂವಾದಿಸುವ ಆರೋಗ್ಯಕರ ಸಂಬಂಧ ಏರ್ಪಡಬೇಕಾಗಿದೆ ಎಂದರು.
ತಮ್ಮ ಹೊಸನಾಟಕದ ಬಗೆಗೆ ಹೇಳುತ್ತಾ – ಧರ್ಮವನ್ನು ಎದುರಿಟ್ಟು ಮೋಸಮಾಡುವ ಎಲ್ಲ ಕಳ್ಳರಬಗ್ಗೆ ಒಂದು ಎಚ್ಚರದ ಸೂಚನೆ ಕೊಡುವ ಕಾರಣದಿಂದಲೇ ಈ ನಾಟಕ ಹುಟ್ಟಿಕೊಂಡಿದೆ ಎಂದರು. ಸನ್ಯಾಸಿಗಳೆಂದು ಹೇಳಿಕೊಳ್ಳುವವರು ಹೆಚ್ಚಿಸಿಕೊಳ್ಳುವ ಆಸ್ತಿಗಳ ಬಗ್ಗೆ ಕಿಡಿಕಾರಿದರು. ನಾಟಕ ವಿಮರ್ಶೆ ಹಾಗು ಪತ್ರಿಕಾ ಪ್ರಕಟಣೆಗಳತ್ತ ಗಮನ ಸೆಳೆದಾಗ ನಮ್ಮ ನಾಟಕದ ಬಗ್ಗೆ ಯಾವ ಪತ್ರಿಕೆಗಳೂ ಬರೆಯಲಿಲ್ಲವಲ್ಲ ಎಂದು ಕಾಯುತ್ತಾ ಕೂರುವ ಬದಲಾಗಿ ನಾವುಗಳೇ ನಮ್ಮ ನಾಟಕಗಳ ಬಗ್ಗೆ ಮಾತನಾಡಿಕೊಳ್ಳುತ್ತಾ ನಾಟಕದ ಆಶಯ ಹಾಗು ಪ್ರದರ್ಶನದ ವಿಶೇಷಗಳನ್ನು ಇನ್ನಿತರರಿಗೆ ತಲುಪಿಸುತ್ತಾ ಹೋಗಬೇಕು. ಭಾರತದಲ್ಲಿ ಬೇರೆ ಯಾವ ಭಾಷೆಯಲ್ಲೂ ಆಗದೇ ಇರುವಂತಹ ಸಂಗತಿ ಕನ್ನಡ ರಂಗಭೂಮಿಯಲ್ಲಿ ಮಾತ್ರವೇ ಆಗುತ್ತಿರುವುದು ಎಂದರೆ -ನಾಟಕ ಪ್ರದರ್ಶನಗಳು ಹೆಚ್ಚಾಗುತ್ತಿರುವುದು, ರಂಗಸಂವಾದದಂತಹ ಆರೋಗ್ಯಪೂರ್ಣ ಕಾರ್ಯಕ್ರಮಗಳು ನಡೆಯುತ್ತಿರುವುದು ಆಗಿದೆ.
ಆದರೆ ದುರಂತವೆಂದರೆ ಯಾವ ಭಾಷೆಯಲ್ಲೂ ಉತ್ತಮ ನಾಟಕ ಸಾಹಿತ್ಯ ಹೊರಬರುತ್ತಿಲ್ಲ. ಹಿಂದಿಯಲ್ಲಿ ಮೋಹನ್ ರಾಕೇಶ್ ಕೊನೆಯ ನಾಟಕಕಾರರಾದರೆ, ಕನ್ನಡದಲ್ಲಿ ಗಿರೀಶ್ ಕಾರ್ನಾಡ್ ಕೊನೆಯ ನಾಟಕಕಾರರಾಗಿಬಿಡುತ್ತಾರೆ. 40-50 ವರ್ಷಗಳ ಹಿಂದೆಯೇ ನಾಟಕರಚನೆ ನಿಂತುಹೋಗಿಬಿಟ್ಟಿದೆ. ಈ ಅಂತರದಲ್ಲಿ ಶುದ್ಧ ನಾಟಕ ಸಾಹಿತ್ಯವನ್ನು ಬರೆದವರೇ ಇಲ್ಲ, ಸಣ್ಣಕತೆಗಳು ಕಾದಂಬರಿಗಳು ಮುಂತಾಗಿ ವಿವಿಧ ಪ್ರಾಕಾರಗಳ ವಸ್ತುಗಳನ್ನು ಎತ್ತಿಕೊಂಡು ಪ್ರಯೋಗ ಮಾಡಲು ಹೋಗುತ್ತಿದ್ದೇವೆ. ಇದರಿಂದ ನಾಟಕ ಪ್ರಾಕಾರದಲ್ಲಿ ಪ್ರಯೋಗಗಳು ಆಗುವುದಿಲ್ಲ. ಹಾಗಾಗಿ ಈಗ ನಾಟಕಕಾರರ ಅಗತ್ಯ ಇದೆ ಎಂದರು. ಇತ್ತೀಚಿನ ಕನ್ನಡ ರಂಗಭೂಮಿಯ ಅನೇಕ ಸಂಕಷ್ಟಗಳಬಗೆಗೆ ಅಭಿಪ್ರಾಯಗಳು ವ್ಯಕ್ತವಾದಂತೆ ಆ ಎಲ್ಲವುಗಳಿಗೂ ನಾಟಕ ಪ್ರದರ್ಶನ ಮಾಡುವುದು ಮತ್ತು ನೋಡಲು ಬರುವುದೊಂದೇ ಉತ್ತಮ ಉಪಾಯ ಎಂದರು.
ನಂತರ ‘ಆಚಾರ್ಯ ಪ್ರಹಸನ’ ನಾಟಕ ಪ್ರದರ್ಶನ ಇತ್ತು. ಮೊಲಿಯರ್ ನ ‘ತಾರ್ತುಫ್’ ನಾಟಕವನ್ನು ಕನ್ನಡದಲ್ಲಿ ಈಗಾಗಲೇ ಎ.ಎನ್.ಮೂರ್ತಿರಾಯರು ಆಷಾಢಭೂತಿ ಎಂಬ ಹೆಸರಿನಲ್ಲಿ ರೂಪಾಂತರ ಮಾಡಿದ್ದಾರೆ. ಅದನ್ನೇ ಪ್ರಸನ್ನ ಅವರು ಕಳೆದ ವರ್ಷ ಹಿಂದಿಯಲ್ಲಿ ಎನ್.ಎಸ್.ಡಿ ವಿದ್ಯಾರ್ಥಿಗಳಿಗಾಗಿ ‘ಆಚಾರ್ಯ ತಾರ್ತುಫ್’ ಎಂಬುದಾಗಿ ಮಾಡಿಸಿದ ನಾಟಕವನ್ನು ಕನ್ನಡದಲ್ಲಿ ಬರೆದು ನಿರ್ದೇಶಿಸಿದ್ದಾರೆ. ಎಲ್ಲ ಕಾಲಘಟ್ಟಗಳಲ್ಲಿಯೂ ಇರಬಹುದಾದ ವಿದ್ಯಾವಂತ ಕಳ್ಳರ ಬಗ್ಗೆ, ಗೋಮುಖ ವ್ಯಾಘ್ರಗಳ ಬಗ್ಗೆ ಈ ನಾಟಕ ಕಟಕಿಯಾಡುತ್ತದೆ. ಇಲ್ಲಿ ಹೇಳಲಾಗಿರುವ ವಿಷಯವು ಸಮಾಜದ ಸ್ವಾಸ್ಥ್ಯದ ವಿಷಯದಲ್ಲಿ ಅತ್ಯಂತ ಗಂಭೀರವಾಗಿರುವುದಾದರೂ ಹಾಸ್ಯ ಆ ಸ್ವಾಸ್ಥ್ಯವನ್ನು ಕಾಪಾಡುವ ಹೊಣೆಗಾರಿಕೆಯನ್ನು ಹೊತ್ತಿದೆ. ಮೊಲಿಯೇರ್ ನೂ ಸಹ ಇಂಥದೇ ಸಿಹಿಗುಳಿಗೆಯೊಳಗೆ ಕಹಿಯನ್ನು ಕೊಟ್ಟಿದ್ದನು. ಪ್ರಸನ್ನ ಅವರು ಸಹ ಈ ನಾಟಕವನ್ನು ಅದರೊಳಗಿರುವ ಸಮಸ್ಯೆಯಷ್ಟೇ ಗಂಭೀರವಾಗಿ ನಿರೂಪಿಸಿದ್ದಾರೆ. ಪಾತ್ರಗಳ ವರ್ತನೆಗಳು ಹಾಸ್ಯವನ್ನು ಹುಟ್ಟುಹಾಕುತ್ತವೆ.
ನಾಟಕದ ಮುಖ್ಯ ಪಾತ್ರವಾದ ಸಾಹುಕಾರ್ ವೆಂಕಟಗಿರಿಯಪ್ಪನ ಬೀಗನಾದ ಸುಬ್ಬಣ್ಣನ ಪಾತ್ರದಮೂಲಕ ಕಂಡುಬರುವ ಗಂಭೀರ ಚರ್ಯೆಯು ನಾಟಕದಲ್ಲಿ ಸ್ಥಾಯಿಯಾಗಿ ಕಾಣಿಸಿಕೊಳ್ಳುತ್ತದೆ. ಸಾಹುಕಾರ್ ವೆಂಕಟಗಿರಿಯಪ್ಪ ಹಾಗು ಆಚಾರ್ಯರ ಪಾತ್ರ ಮಾಡಿದವರುಗಳು ತಮ್ಮ ನಟನಾ ಸಾಮರ್ಥ್ಯದಿಂದ ನಗೆ ಉಕ್ಕಿಸುತ್ತಾರೆ. ಉಳಿದಂತೆ ಪಾತ್ರಧಾರಿಗಳ ಪ್ರಯತ್ನ ಸಮಸ್ಯೆಯ ಗಂಭೀರತೆಯನ್ನು ಆಧಾನಮಾಡಿಕೊಂಡವರಂತೆ ಕಾಣುತ್ತದೆ. ಆಧುನಿಕ ಜಗತ್ತಿನಲ್ಲಿ ಕಂಡುಬರುವ ಧಾರ್ಮಿಕಕ ಸೋಗು ಮತ್ತು ಅದರ ವಿರುದ್ಧದ ವೈಯಕ್ತಿಕ ಸ್ತರದಲ್ಲಿನ ಬಂಡಾಯ ಮಾತ್ರ ಪ್ರಸನ್ನ ಅವರ ಈ ನಾಟಕದಲ್ಲಿ ಕಂಡುಬರುತ್ತದೆ.
ಆದರೆ ಈ ಸೋಗಿನ ಸ್ವಾಮಿಗಳ ವಿಜೃಂಭಣೆಗೆ ಕಾರಣಕರ್ತರಾಗುವ ಭಕ್ತಾದಿಗಳ ವೈಪರೀತ್ಯದ ಬಗೆಗೂ ಕಟಕಿಯಾಡಿದ್ದರೆ ನಾಟಕಕ್ಕೆ ದೊಡ್ಡ ಹರವು ದಕ್ಕುತ್ತಿತ್ತು. ನಾಟಕದಲ್ಲಿ ಪೋಲೀಸ್ ಪ್ರವೇಶ ಚಿಕ್ಕ ಗೊಂದಲವನ್ನು ಸೃಷ್ಟಿಸುತ್ತದೆ. ಧೂರ್ತ ಪೀಡಿತ ಅಮಾಯಕ ಪಾತ್ರಗಳ ವಿರುದ್ಧದ ಕಾರ್ಯಾಚರಣೆಗೆ ಬಂದ ಪೋಲೀಸರು ಇದ್ದಕ್ಕಿದ್ದಂತೇ ತಮ್ಮ ನಿಲುವನ್ನು ಬದಲಿಸಿ ತಮ್ಮನ್ನು ಕರೆತಂದವನೇ ಧೂರ್ತನೆಂದು ಗುರುತಿಸಿ ಬಂಧಿಸುತ್ತಾರೆ. ಕ್ಷಿಪ್ರಗತಿಯಲ್ಲಿ ಮುಗಿಯುವ ಈ ದೃಶ್ಯಕ್ಕೆ ಅಗತ್ಯ ದೃಶ್ಯರೂಪೀ ತರ್ಕ ದೊರೆಯುವುದಿಲ್ಲ. ನಾಟಕದಲ್ಲಿ ಬಳಸಿರುವ ಸಂಸ್ಕೃತ ಪದ್ಯಗಳು ಸಮಯೋಚಿತವಾಗಿ ವಸ್ತುವನ್ನು ಸಶಕ್ತಗೊಳಿಸುತ್ತವೆ. ಅತ್ಯಂತ ಸರಳ ರಂಗ ಸಜ್ಜಿಕೆ ಮತ್ತು ರಂಗಪರಿಕರ ಪರಿಣಾಮಕಾರೀ ಸಂಗೀತಸಂಯೋಜನೆ ಹೊಂದಿರುವ ಈ ನಾಟಕ ಉದ್ದೇಶಿತ ಪರಿಣಾಮ ಬೀರುವುದರಲ್ಲಿ ಯಶಸ್ವಿಯಾಗುತ್ತದೆ.-








namagella nodalu aaguvudillavalla.–raju hegde