ವಾಸ್ತವ
ಶ್ರೀನಿ ಕೆ ಪಿ

ಎಲಾಸ್ಟಿಕ್ ಹರಿದ ಚಡ್ದಿಯಂತೆ ಜಾರಿ ಜಾರಿ ಬೀಳುತ್ತಿತ್ತು ಮನಸು.ಪ್ರತಿ ಬಾರಿ ಹಬ್ಬ,ರಜೆದಿನ ಮುಗಿಸಿ ಊರಿಂದ ಹೊರಟಾಗಲು ಹೀಗೆ ಖಿನ್ನತೆಗೆ ಒಳಗಾಗುವುದುಂಟು, ಆಗೆಲ್ಲ ಮನೆ ಇಂದ ಹೊರಟವನು ಮೋಡ ಕವಿದಿದ್ದರೆ ಜೋರಾಗಿ ಮಳೆ ಬರುಬಹುದೆಂದೋ,ಭಾನುವಾರವಾದರೆ ಟ್ರಾಫಿಕ್ ನೆಪವೋಡ್ದೋ ಮುಂದಿನ ದಿನ ಮುಂಜಾನೆಯೇ ಹೊರಡುತ್ತಿದ್ದನು .ಹಾಗೆ ಹೊರಡುವಾಗ ರಂಗನತಿಟ್ಟು ಬಳಿಯ ಸುಬ್ರಹ್ಮಣ್ಯ ಸ್ವಾಮಿಯ ದರ್ಶನ ಮಾಡದೆ ಹೋಗುತ್ತಿರಲಿಲ್ಲ.ಆದರೆ ಈ ಬಾರಿ car serviceಗೆ ಬಂದಿದ್ದರಿಂದ ಬಸ್ ನಲ್ಲೆ ಪ್ರಯಾಣ ಮಾಡಬೇಕಿತ್ತು ಆಟೋದವರನ್ನು ಮೋಸಗಾರರು,ರಾಜಕಾರಣಿಗಳಂತೆ ಸಮಯ ಸಾಧಕರು ಎಂದು ದೂಷಿಸುತ್ತ ಬಂದು ಬಸ್ ನಲ್ಲಿ ಕೂತನು ದಿಲೀಪ.
ಇತ್ತಿಚೀನ ವರ್ಷಗಳಲ್ಲಿ ಬಸ್ ನಲ್ಲಿ ಪ್ರಯಾಣಮಾಡೆ ಇರಲಿಲ್ಲವಾದರೂ ದಿಲೀಪನಿಗೆ ಬಸ್,ಟ್ರೈನ್ ಗಳ ಪ್ರಯಾಣ ತುಂಬಾ ಉಲ್ಲಾಸದಾಯಕ .ಹಾಗೆ ಹೋಗುವಾಗ ಅಕ್ಕ ಪಕ್ಕದ ಸೀಟ್ ಗಳಲ್ಲಿ ಕೂತ ಜನರ ಮಾತು ಅವನನ್ನು ಅವರಲ್ಲಿ ಒಬ್ಬನನ್ನಾಗಿಸುತಿತ್ತು . ಪ್ರತಿ ವರ್ಷದಂತೆ ಈ ಬಾರಿ ಮಳೆಯಾಗಿದೆಯೇ ಇಲ್ಲವೇ,ತೊಗರಿಗೆ ಈಗ ಬೆಳೆ ಎಷ್ಟು,ಕೊಬ್ಬರಿ ವ್ಯಾಪಾರದಲ್ಲಿ ಮದ್ಯವರ್ತಿಗಳು ಹೇಗೆ ವಂಚಿಸುತ್ತಾರೆ,ಯಾವ ಮಂತ್ರಿ ಯಾವ ನಟಿಯನ್ನು ಇಟ್ಟುಕೊಂಡಿದ್ದಾನೆ,ಮಕ್ಕಳಾಗದಿದ್ದ್ರೆ ಯಾವ ದೇವರಿಗೆ ಹರಕೆ ಹೊರಬೇಕು ಇಂಥ ವಿಚಾರಗಳೆಲ್ಲ ತಿಳಿಯುತ್ತಿದ್ದಿದ್ದೆ ಇಂತಹ ಪ್ರಯಾಣಗಳಲ್ಲಿ., ಎಷ್ಟೇ websites , TV channels ನೋಡಿದರೂ ಇಂತಹ ವಿಷಯ ತಿಳಿಯುವುದೇ ?ದೇವಸ್ಥಾನದಲ್ಲಿ ಕಳೆದು ಹೋದ ಚಪ್ಪಲಿ ಗೂಗಲ್ search ನಲ್ಲಿ ಸಿಗುತ್ತದೆಯೇ??ಕಾರ್ ಕೊಡುವ ಸುಖ ಇಂತಹ ಚಿಕ್ಕ ಚಿಕ್ಕ ಸಂತೋಷಗಳನ್ನು ದೂರ ಮಾಡುತ್ತದೆ.ಮನುಷ್ಯನನ್ನು ಸಮಾಜ ವಿಮುಖಿಯನ್ನಾಗಿ ಮಾಡುತ್ತದೆ ,ಭಾವನ ರಹಿತನನ್ನಾಗಿ ಮಾಡಿ ಒಂಟಿತನ ಅಭ್ಯಾಸ ಮಾಡಿಸುತ್ತದೆ ಎಂಬ ತನ್ನದೇ ಸಿದ್ಧಾಂತ ಅವನದು .ಹಸಿ ಕಡ್ಲೆ ಗಿಡವನ್ನು ತೆಗೆದುಕೊಳ್ಳಲು ಹೋದ ದಿಲೀಪ ಕಿಟಕಿಯಿಂದ ಪಕ್ಕದ ಬಸ್ ನಲ್ಲಿ ಆ ಅಸ್ಪಷ್ಟ ದೃಶ್ಯ ನೋಡಿ ಚಕಿತನಾದನು.ನೋಡುತ್ತಿರುವುದೋ ನಿಜವೋ ಸುಳ್ಳೋ ಎಂದು ತಿಳಿಯನು ಯತ್ನಿಸಿ ಸೋತನು.ಪಕ್ಕದ ಬಸ್ ಗೆ ಹೋಗುವ ಯೋಚನೆ ಬಂತಾದರೂ ಅಷ್ಟರಲ್ಲಿ ಆ ಬಸ್ ಮುಂದೆ ಹೋಯಿತು.ಒಳ್ಳೆಯದೇ ಆಯಿತು ಎಂದು ಕೂತ ಕೂಡಲೇ ಕಂಡಕ್ಟರ್ ರೈಟ್ ಹೇಳಿದನು ,ಬಸ್ ಮುಂದೆ ಚಲಿಸಲು ದಿಲೀಪನ ಮನಸು 20 ವರ್ಷ ಹಿಂದೆ ಚಲಿಸಿತು.
ದಿಲೀಪ ಆಗಿನ್ನೂ ನಂಜನಗೂಡಿನ ಸರ್ಕಾರಿ ಶಾಲೆಯಲ್ಲಿ 8ನೆ ಕ್ಲಾಸ್ ಓದುತ್ತಿದ್ದ.ಶಾಲೆಗೇ ಬಂದ ಹೊಸ ಹೆಡ್ ಮಾಸ್ಟರ್ ಅನ್ನು ಸ್ವಾಗತಿಸಲು ಕಾತರತೆಯಿಂದ ಎಲ್ಲ ಕಾಯುತ್ತಿದ್ದರು.ಹೊಸ ಮಾಸ್ಟರ್ ಜಯರಾಂ ಮುಗುಳ್ನಗೆ ಹೊತ್ತು ಬಂದು ತಮ್ಮ ಪರಿಚಯ ಮಾಡಿಕೊಳ್ಳುತ್ತ ಭಾಷಣ ಶುರು ಮಾಡಿದರು.ದಿಲೀಪನಿಗೆ ಅವರ ಮಾತು ಯಾವುದು ಕೇಳಿಸುತ್ತಿರಲಿಲ್ಲ ,ಕಣ್ಣು ಅವರ ಜೊತೆ ಇದ್ದ ಮಗಳನ್ನೇ ನೋಡುತ್ತಿತ್ತು.ಅವಳ ಕಣ್ಣುಗಳಲ್ಲಿ ಏನೋ ಕಾಂತಿಯಿತ್ತು ,ಇತರ ಹುಡುಗಿಯರಲ್ಲಿ ಇಲ್ಲದ ಆಕರ್ಷಣೆಯಿತ್ತು.ಅವಳು ನನಗಿಂತ ದೊಡ್ದವಲಾದರೆ ಅನ್ನೋ ಅಳುಕ ,ಜೊತೆಯವಳಾದರೆ ಅನ್ನೋ ಪುಳಕ.ಇವನ ಮನಸಿನ ಚಿಂತೆಯನ್ನು ದೂರ ಮಾಡಲೆಂಬಂತೆ ಆಕೆ ಇವನ ಕ್ಲಾಸಿಗೆ ಬಂದಳು .ಟೀಚರ್ ಅವಳ ಪರಿಚಯ ಮಾಡಿಸಿದರು ,ನಾಚಿಕೆಯಿಂದ ದಿಲೀಪ ನೋಟ್ ಬುಕ್ ನ ಕೊನೆಯಲ್ಲಿ “ಜಾಹ್ನವಿ” ಅಂತ ಹೆಸರು ಬರೆದ.
ಜಾಹ್ನವಿ ಮನೆ ,ದಿಲೀಪನ ಮನೆಯ ಹತ್ತಿರದಲ್ಲೇ ಇತ್ತು .ಕೆಲ ಸಮಯದಲ್ಲೇ ಜಾಹ್ನವಿ ದಿಲೀಪನ ತಾಯಿ ವಿಶಾಲಾಕ್ಷಿಗೆ ತುಂಬಾ ಇಷ್ಟವಾದಳು .ನವರಾತ್ರಿಯ ಸಮಯದಲ್ಲಿ , ಹಬ್ಬ – ಹರಿದಿನಗಳಲ್ಲಿ ಆರತಿ ಎತ್ತಲು ವಿಶಾಲಾಕ್ಷಿಗೆ ಜಾಹ್ನವಿಯೇ ಬೇಕಿತ್ತು. ಯಾವುದೇ ಸಿಹಿ ಮಾಡಿದರು ಜಾಹ್ನವಿ ಮನೆಗೂ ಅದು ಹೋಗುತಿತ್ತು ಮೊದಲಿಂದಲೂ ಕೊಂಚ ಕೊಪಿಷ್ಟನಾದ ದಿಲಿಪ ಸಮಾಧಾನದಿಂದ ಮಾತು ಅಡುತಿದ್ದಿದ್ದು ಜಾಹ್ನವಿಯಲ್ಲಿ ಮಾತ್ರ ಅವನದು ಯಾರ ಮಾತು ಸುಲಭಕ್ಕೆ ಕೇಳದ ಸ್ವಭಾವ ಎಲ್ಲದರ ಬಗ್ಗೆಯೂ ಉಡಾಫೆ, ಅವಳ ಮಾತನ್ನು ಮಾತ್ರ ಅಹಂಕಾರ ಬಿಟ್ಟು ಕೇಳಿಸಿಕೊಳ್ಳುತ್ತಿದ್ದನು school ಮುಗಿದು college ಸೇರುವ ವೇಳೆಗಾಗಲೇ ಅವರ ಸ್ನೇಹ ಹೆಮ್ಮರವಾಗಿ ಬೆಳೆದಿತ್ತ್ತು.
ಜಯರಾಂಗೆ ಮೈಸೂರ್ ಗೆ transfer ಆಯಿತು.ಕಾಲೇಜ್ ಸೇರಲು ಜಾಹ್ನವಿ ಮೈಸೂರ್ ಗೆ ಹೋದಳು.ದಿಲೀಪ ಬೆಂಗಳೂರಿಗೆ ಹೋದ.ಇವನನ್ನು ಕಂಡರೆ ಅಷ್ಟಾಗಿ ಆಗದ ಜಯರಾಂ ಫೋನ್ ಅನ್ನು ಜಾಹ್ನವಿಗೆ ಕೊಡುತ್ತಿರಲಿಲ್ಲ. ಮುಂದಿನ 2 ವರ್ಷ ಅವರಿಬ್ಬರ ನಡುವೆ ಒಡನಾಟ ಕಮ್ಮಿ ಆಗಿತ್ತು. ೨ ವರ್ಷದ ನಂತರ ಮೈಸೂರ್ ನಲ್ಲೆ ರೂಂ ಮಾಡಿ ಮಹಾರಾಜ ಕಾಲೇಜ್ ಸೇರಿದ ದಿಲೀಪ,ಒಮ್ಮೆ ಜಾಹ್ನವಿಯನ್ನು ಸರಸ್ವತಿಪುರಂನ fire brigade ಬಳಿ ನೋಡಿದ.
ಚಿನ್ನದ ಮೀನಿನ ಬಣ್ಣದ ಜಾಹ್ನವಿ ಆಗ ತುಂಬು ಸುಂದರಿ, ಯೌವ್ವನ ಅವಳ ತನು ಮನ ತುಂಬಿಕೊಂಡಿತ್ತು. ಮೀನು ಕಂಗಳ ಚೆಲುವೆಯ ಕಣ್ಣಲ್ಲಿ ಆರ್ದ್ರತೆಯಿತ್ತು , ತೇವ ಆರದ ಕೆನ್ನೆಗಳಲ್ಲಿ ಹೊಳಪಿತ್ತು ಕೊಂಚ ಚಪ್ಪಟೆ ಅನ್ನಬಹುದಾದ ಮೂಗಿನಲ್ಲಿ ಮೊಂಡುತನವಿತ್ತು .ಸಾಗರದ ಅಲೆಗಳನ್ನು ನೆನಪಿಸುವ ಮುಂಗುರುಳು ಹಣೆಯಿಂದ ಕೆನ್ನೆಗೆ ಮುತ್ತಿಡುತ್ತಿತ್ತು. ದುಂಡು ಮುಖದ ಚಂದವನ್ನು ಕಿವಿಯಿಂದ ಇಳಿ ಜಾರಿ ಬಿದ್ದ ಉದ್ದದ ಜುಮುಕಿಗಳು ಇಮ್ಮಡಿಗೊಳಿಸಿದ್ದವು.
ಹೌದು, ಪಕ್ಕದ ಬಸ್ ನಲ್ಲಿ ಕೂತಿದ್ದ ಆ ಹುಡುಗಿಯು ಉದ್ದದ ಜುಮುಕಿ ಹಾಕಿದ್ದಳು ,ಅಷ್ಟಾಗಿ ಚಿನ್ನ ಇಷ್ಟ ಪಡದ ಜಾಹ್ನವಿ ಕೃತಕವಾದ ಅಭರಣಗಳನ್ನೇ ಇಷ್ಟ ಪಡುತ್ತಿದ್ದಳು. ಮುಖ ಸರಿಯಾಗಿ ಕಾಣದೆ ಇದ್ದರು ಅದು ದುಂಡು ಮುಖವೇ .ಆದರೆ ಅವಳ ಗಂಡ ಬಾಂಬೆ ಯಲ್ಲಿ ದೊಡ್ಡ ವ್ಯಾಪಾರಿ,ಅಷ್ಟು ಸ್ಥಿಥಿವಂತೆ ಹೀಗೇಕೆ ಬಸ್ ನಲ್ಲಿ ಕೂತಿದ್ದಾಳೆ ಹಾಗಾದರೆ ಅದು ಅವಲ್ಲವೇ , ಸಾಕ್ಷಿ ಕಣ್ಣಿಗೆ ಬೇಕು ಮನಸಿಗಲ್ಲವಲ್ಲ .ಕಣ್ಣಿಗೆ ಕಾಣುವುದು ಲೌಕಿಕ ಮಾತ್ರ ,ಅಲೌಕಿಕವಾದ ಈ ಅನುಭವವೇ ಹೇಳುತ್ತದೆ ಅದು ಜಾಹ್ನವಿಯೆ ಎಂದು ಅವಳ ಪಕ್ಕ ಕಿಟಕಿಯ ಕಡೆಗೆ ಕೂತಿದ್ದ ಆ ಹುಡುಗ ಅವಳ ಮಗನೆ ಇರಬೇಕು.ಅವನ ಮಖದಲ್ಲೇ ಅವಳ ಛಾಯೆ ಇತ್ತಲ್ಲವೇ ಮಗುವಿನ ಹೆಸರು ದಿಲೀಪ ಎಂದಿರಬಹುದೇ ಎಂಬ ತುಂಟ ಯೋಚನೆಯು ಬಂತು .ಹಾಗಾದರೆ ಅವಳ ಗಂಡನು ಆ ಬಸ್ ನಲ್ಲೆ ಇರಬಹುದೇ ,ಬ್ಹಹುಶ: ಇಲ್ಲ . ಅವನಿದ್ದರೆ ಕಾರ್ ನಲ್ಲಿ ಬಂದಿರುತ್ತಿದ್ದರು.ಮದ್ದೂರ್ ನಲ್ಲಿ ತಿಂಡಿಗೆ ಬಿಟ್ಟಾಗ ಸಿಗಬಹುದು ,ಅಗಾ ಅನುಮಾನವನ್ನ ಬಗೆ ಹರಿಸಿಕೊಲ್ಲಲೇಬೇಕು,ಬಸ್ ನಂಬರ್ -3949 ಎಂದು ನೋಡಿದ ನೆನಪು ,non-stop ಬಸ್ ಅದ್ದರಿಂದ ಬೆಂಗಳೂರಿಗೆ ಹೋಗುತ್ತಿರುತ್ತಾಳೆ ಎಂದುಕೊಳ್ಳುತ್ತಿರುವಾಗಲೇ ರಿಂಗ್ ರೋಡ್ ,ಚಾಮುಂಡಿ ಬೆಟ್ಟ ದಾಟಿ bus ಮುಂದೆ ಹೋಗಿತ್ತು . ಹಿಂದೆ ತಿರುಗಿ ಚಾಮುಂಡಿ ಬೆಟ್ಟ ನೋಡುತ್ತಾ ನೆನಪಿನ ಗಡಿಯಾರ ಹಿಂದಕ್ಕೆ ತಿರುಗಿಸಿದ.
ಅವರ ನಡುವೆ 2 ವರ್ಷ ಅಂತಹ ಅಂತರವನ್ನೇನು ಹುಟ್ಟಿಸಿರಲಿಲ್ಲ ಆದರೆ ದಿಲೀಪನಿಗೆ ಅವಳಲ್ಲಿ ಕೇವಲ ಸ್ನೇಹವಲ್ಲದ ಮತ್ತೊಂದು ಭಾವನೆ ಸ್ಪುರಿಸಿತ್ತು ಅದನ್ನು ಪ್ರೇಮ ಅನ್ನಲಾಗದಿದ್ದರು ಸ್ನೇಹಕ್ಕು ಮೀರಿದ ಭಾವನೆ , ಅಕ್ಕರೆ –ಕುಕ್ಕುಳಥೆ ಅದರಲ್ಲ್ಲಿ ಬೆರೆತಿತ್ತು ಓದಿನಲ್ಲಿ ಆಸಕ್ತಿ ಕಳೆದುಕೊಂಡಿದ್ದರೂ ಜಾಹ್ನವಿಯನ್ನು ಪ್ರತಿದಿನ ಸಂಧಿಸಬಹುದೆಂದು ಇವನೂ ಆಕೆಯ tution ಗೆ ಸೇರಿಕೊಂಡನು .ಜಾಹ್ನವಿ ಎಲ್ಲರೊಡನೆ ಚೆನ್ನಾಗಿ ಬೇರೆಯುತ್ತಿದ್ದಳು , ಅವಳಲ್ಲಿ ಮಾತನಾಡಲು ಎಲ್ಲರು ಉತ್ಸಾಹ ತೋರುತ್ತಿದ್ದರು .ಅದೇ ಇವನನ್ನು ಕಂಗೆಡಿಸಿದ ಅಂಶ .ಬೇರೆ ಯಾರಾದರು ಜಾಹ್ನವಿ ಗೆ ಪ್ರೀತಿ ನಿವೇದನೆ ಮಾಡಿದರೆ , ಇವಳು ಒಪ್ಪಿಕೊಂಡರೆ ಎಂದು ಯೋಚನೆ ಬಂದರೆ ವಿಚಲಿತನಾಗುತ್ತಿದ್ದನು ಅದಕ್ಕೆ ಪೂರಕವೆಂಬಂತೆ ಜಾಹ್ನವಿಗೆ ಸಂತೋಷನೆಂಬುವನು ಆಪ್ತ ನಾಗುತ್ತಿದ್ದನು .ಅವಳ ಬಾಳಲ್ಲಿ ಬಂದ ಸಂತೋಷ ಇವನ ಸಂತೋಷವನ್ನು ಕಿತ್ತುಕೊಂಡನು .ನೋವಿಗಿಂತ ಅದರ ಕಲ್ಪನೆಯೇ ಭಯಾನಕ . ಅವರ ನಡುವೆ ಏನೂ ಇಲ್ಲದಿದ್ದರೂ , ಏನಾದರು ಪ್ರೀತಿ ಹುಟ್ಟಿದರೆ ಎಂಬ ಸಂದೇಹವೇ ಇವನನ್ನು ಹುಚ್ಚನನ್ನಾಗಿ ಮಾಡುತಿತ್ತು ಸುಖಾಸುಮ್ಮನೆ ಅವರ ನಡುವೆ ಕ್ಷುಲ್ಲಕ ಕಾರಣಗಳಿಗೆ ಜಗಳಗಳಗುತಿತ್ತು .ಅವರ ಸ್ನೇಹದ ನಡುವೆ ಬಿರುಕು ಬಿಡಲು ಆರಂಭವಾಗಿತ್ತು ,ಆ ಬಿರುಕಿನ ನಡುವಿನಲ್ಲಿ ಪ್ರೀತಿ ಇಣುಕಿತ್ತು .ಜಾಹ್ನವಿಯೇ ಇದನ್ನು ಮೊದಲು ಅರಿತಳು ,ಅವರ ನಡುವಿನ ಒಡನಾಟದಲ್ಲಿ ಚಿಕ್ಕಂದಿನಿಂದ ಬಂದ ಸ್ನೇಹದ ಸುವಾಸನೆ ಇತ್ತೇ ಹೊರತು ಪ್ರೇಮದ ಘಮ ಇದುವರೆಗೆ ಇರಲಿಲ್ಲ.ಇಬ್ಬರ ಜಗಳದಲ್ಲಿ ಪ್ರೇಮದ ಗಂಧ ಮೂಡಿತ್ತು.ಕೆರೆಯ ತಾವರೆಯಂತೆ ಅವರ ಮನದಲ್ಲಿ ಪ್ರೀತಿ ಹುಟ್ಟಿತ್ತು . ಹೆಣ್ಣಿನ ಮುಡಿಗೂ,ದೇವರ ಪೂಜೆಗೂ ಸಲ್ಲದ ಹೂವು ತಾವರೆ . ಅಂತೆಯೇ ಇವರ ಪ್ರೀತಿಯು ಇಬ್ಬರನ್ನು ಕುಶಿಯಾಗಿಡದೆ ಚಡಪಡಿಕೆ ಉಂಟುಮಾಡಿತ್ತು.

ಸಂಜೆ ಯಾದರೆ ಕಾಲೇಜ್ ಮುಗಿಸಿ ಸೇರುತ್ತಿದ್ದ ದಿಲೀಪ –ಜಾಹ್ನವಿ ರಾಜ್ಕಮಲ್ ಬಳಿಯ ಶೆಟ್ಟರ ಅಂಗಡಿಯ ಚುರುಮುರಿ ತಿನ್ನಲೋ ಮಂಡಿ ಮೋಹಲ್ಲದ ಸಮೊಸಗೋ,ಮೈಲಾರಿಯ ದೋಸೆ ತಿನ್ನಲೋ ಹೋಗುತ್ತಿದ್ದರು .ಅಷ್ಟು ನಿಕಟತೆ ಇದ್ದರೂ ಪ್ರೀತಿ ಹೇಳಲು ಏನೋ ಅನೂಹ್ಯ ಭಯ .ಇಂತಹ ಸಮಯದಲ್ಲೇ ಮುಂಜಾನೆ ಚಾಮುಂಡಿ ಬೆಟ್ಟ ಹತ್ತಲು ಹೋಗಿದ್ದು.
ಅದು ಮಾಘ ಮಾಸ. ಭಾನುವಾರವದರೆ ಬೆಟ್ಟ ಏರಲು ತುಂಬಾ ಜನ ಇರುತ್ತಾರೆ ಶುಕ್ರವಾರ, ಮಂಗಳವಾರ,ಹುಣ್ಣಿಮೆಯ ದಿನ ಕೂಡ ತುಸು ಹೆಚ್ಚೇ ಆದರೆ ಅಂದು ಭುಧವಾರ ,ಮಾಘಿಯ ಛಳಿಯ ಜೊತೆ ಮಳೆ ಬರುವ ವಾತಾವರಣ ಜನ ವಿರಳ ಅತಿ ವಿರಳ ನಂದಿ ತಲುಪುವ ವೇಳೆಗಾಗಲೇ ಇಬ್ಬರ ನಡುವೆ ಬಹುದಿನದಿಂದ ಹಿಡಿದಿಟ್ಟಿದ್ದ ಪ್ರೇಮದ ಅವ್ಯಕ್ತ ಭಾವನೆಗಳು ಪ್ರಕಟವಾಗಲು ತೊಡಗಿದ್ದವು ಕಣ್ಣುಗಳು ಬಾಯಿಯಲ್ಲಿ ಅಡಲಾಗದ ಮಾತುಗಳನ್ನು , ಆ ವೇದನೆಯನ್ನು ತೋರುತ್ತಿದ್ದವು ಸಣ್ಣಗೆ ಬೀಸಿದ ಗಾಳಿಗೆ ಸಂಪಿಗೆ ಮರದ ಎಲೆ ಅಲುಗಾಡಿತ್ತು ಅರಳಿದ ಸಂಪಿಗೆಯನ್ನು ಸೋಕಿ ಬಂದ ಪರಿಮಳದ ಗಾಳಿ ಅವರಿಬ್ಬರನ್ನು ಸೋಕಿತು ಅವಳೂ ಕೂಡ ನನ್ನನ್ನು ಹೀಗೆ ಸೋಕಬಾರದೆ ಎಂದುಕೊಂಡನು ಅದನ್ನು ಕೇಳಿಸಿಕೊಂಡಂತೆ ಮೋಡ ಗುಡುಗಿತ್ತು ಗುಡುಗಿಗೆ ಹೆದರಿ ಜಾಹ್ನವಿ ಪಕ್ಕನೆ ತಿರುಗಿ ದಿಲೀಪನ ಎದೆಯನ್ನು ಅವಚಿದ್ದಳು. ಒಂದು ಕಾಲಮಾನದ ಅವಧಿಯನ್ನು ದಾಟಿದ ಭಾವನೆ ದಿಲಿಪನಲ್ಲಿ . ಜೀವನದಲ್ಲಿ ಕೇವಲ ಒಮ್ಮೆ ಮಾತ್ರ ವ್ಯಕ್ತವಾಗುವ ಅನುಭವ ಅದು .ತನಗೆ ಇಂತಹ ಪರಮಾನುಭವ ಕರುನಿಸಿದಕ್ಕೆ ವಂದನೆ ಎಂಬಂತೆ ಅವಳ ಹಣೆಗೆ ಚುಂಬಿಸಿದ ಜೀವಮಾನದ ದಾಹ ತೀರಿಸಲೆಮ್ಬಂತೆ ಹಾತೊರೆದಾ ತುಟಿಗಳು ಒಂದಾದವು.ಬೆಟ್ಟದ ಬಂಡೆಯ ಮರೆಯ ಆ ಅರೆಗತ್ತಲಲ್ಲೂ ಅವಳ ಅವಯವಗಳು ದಂತದ ಹಾಗೆ ಹೊಳೆಯುತ್ತಿದ್ದವು ಆಗಷ್ಟೇ ಮೂಡಿದ ಸೂರ್ಯನ ಬೆಳಕಿನ ಕಿರಣ ಅವಳ ಆಳವಾದ ಹೊಕ್ಕುಳನ್ನು ಬೆಳಗಿತ್ತು ಮಳೆ ಹನಿಯು ಕೂದಲಿಂದ ತೊಟ್ಟಿಕ್ಕಿ,ಗೋದಿ ಬಣ್ಣದ ಬೆನ್ನನ್ನು ಸವರಿ ನೆಲಕ್ಕೆ ಮುತ್ತಿತಿತ್ತು. ಮಳೆ ನಿಲ್ಲುತಿದ್ದಂತೆ ದೇವಸ್ಥಾನದ ಗಂಟೆ ಭಾರಿಸಿತ್ತು.
ಮದ್ದೂರಿನಲ್ಲಿ ಇಳಿದು ಹುಡುಕಿದರೂ ಆ ಬಸ್ ಸಿಗಲಿಲ್ಲ .5 ನಿಮಿಷದ ಮುಂಚೆ ಹೊರಟಿತು ಎಂದು ವಿಚಾರಿಸಿದಾಗ ತಿಳಿಯಿತು ದಿಲಿಪನಿಗೆ .ಯಾಕಿಷ್ಟು ಕಾಡುತಿದ್ದಾಳೆ ಇಂದು , ಕಾಣದ ಮುಖಕ್ಕಿಂಥ ಜಾಸ್ತಿ ಕಾಣದ ಮುಖ ಕಾಡುತ್ತದೆ ಅವಳು ಸಿಕ್ಕಿದ್ದರೆ ಏನೆಂದು ಮಾತನಾಡುತ್ತಿದ್ದೆ, ಅವಳು ಜಾಹ್ನವಿಯೇ ಅಲ್ಲವೇ ಎಂದು ತಿಳಿಯುವ ಕುತೂಹಲಳವಷ್ಟೇ ನನ್ನದೇ, ಅದಾದರೂ ವ್ಯಾಲೆಂಟೈನ್ ಡೇ ಬಂದಾಗಲೆಲ್ಲ ಅವಳಿಗೆ ಹಾರೈಸಬೇಕು ಎಂದು ಯಾಕೆ ಅನಿಸುತ್ತದೆ ,ಅವಳಲ್ಲಿ ಇನ್ನು ನನಗೆ ಹಂಬಲವಿದಿಯೇ ? ಬಹುಷಃ ಇಲ್ಲ ,ಆದರು ಅವಳ ಗೋದಿ ಬಣ್ಣದ ದೇಹದ ನುಣುಪು ಇನ್ನು ಯಾಕೆ ಕಾಡುತ್ತಿದೆ.
ತಾನು ಮದುವೆ ಆಗದ ನಿರ್ಧಾರ ಮಾಡಿದ ಹಿನ್ನೆಲೆ ನೆನಪಿಗೆ ಬಂತು ,ಪ್ರೀತಿ ಹುಟ್ಟುವುದೇ ಹಾಗೆ ನದಿಯಂತೆ ಒಂದು ಸಣ್ಣ ಸೆಲೆಯಾಗಿ .ಕ್ರಮೇಣ ಅದಕ್ಕೆ ಉಪನಧಿ ಗಳಂತೆ ಹಲವು ವಿಚಾರಗಳು ಸೇರುತ್ತದೆ .ಗುಪ್ತಗಾಮಿನಿಯಾಗಿ ಮತ್ತಾವುದೋ ಕಾಮಕರ್ಷಣೆ ಬಂದು ಸೇರುತ್ತದೆ . ಒಮ್ಮೆ ಸಂಕೋಚ ಭಯದ ಆಣೆಕಟ್ಟು ಒಡೆದ ನಂತರ ಎಲ್ಲವನ್ನು ತೆಕ್ಕೆಗೆ ತೆಗೆದುಕೊಂಡು ಪ್ರೀತಿ ವಿಶಾಲವಾಗಿ ಹರಿಯುತ್ತದೆ,ನದಿಯ ಮೂಲ ಪ್ರೀತಿ ಮೂಲ ಅಗೋಚರ . ಮರುಕ್ಷಣದಿಂದಲೇ ದಿಲೀಪ ಅವಳಿಗೆ ಪ್ರೀತಿಯ ದಿಲ್ ಆದರೆ , ಜಾಹ್ನವಿ ಅವನ ಪ್ರಾಣ – ಜಾನ್ ಆದಳು. ಇಷ್ಟು ದಿನ ಆಡಿದ ಮಾತಿಗೆ ಹೊಸ ಹೊಳಪು ದೊರೆಯಿತು , ಆಡಲಾಗದೆ ಉಳಿದ ಮಾತುಗಳು ಸರಾಗವಾಗಿ ಹರಿದವು.
ದಿಲೀಪ ಜಾನುವಿನಲ್ಲಿ ಬಚ್ಚಿಟ್ಟಿದ್ದ ಹಲವಾರು ಭಾವನೆಗಳು ಮಾತನಾಡಲು ಪ್ರೀತಿ ಹೊಸ ಭಾಷೆ ಆಯಿತು.ಅವರ ನಡುವೆ ಇದ್ದ ಭಾವನೆಗಳಿಗೆ ಹೊಸದೊಂದು ಅರ್ಥ ದೊರಕಿತ್ತು.ಮುಂದಿನ 3 ವರುಷ ಮೈಸೂರ್ ನಲ್ಲಿ ಅವರು ಸುತ್ತದ ಜಾಗವಿಲ್ಲ , ಆಡದ ಮಾತುಗಲಿಲ್ಲ . ಮುಂಜಾನೆ ಕುಕ್ಕರಹಳ್ಳಿಯಲ್ಲಿ ಅರಳುವ ಹೂಗಲಾದರೆ , ಇಳಿ ಸಂಜೆ ಕಾರಂಜಿ ಕೆರೆಯ ಚಿಟ್ಟೆಗಳಾದರು.ಅರಮನೆಯನ್ನು ನೋಡುತ್ತಾ ತಮ್ಮದೇ ಒಂದು ಸುಂದರ ಮನೆ ಕಟ್ಟುವ ಯೋಚನೆ ಬಂದರೆ , release ಆದ ಫಿಲಂಗಳನ್ನೆಲ್ಲ ನೋಡುತ್ತಾ ದೇಶ ವಿದೇಶ ಸುತ್ತುವ ಕಂಡರು .ಒಳ್ಳೆಯ ಕಾದಂಬರಿಗೆ ಕೂಡ ಕೊನೆಯ ಹಾಳೆ ಇರುವಂತೆ ,ನೇರ ರಸ್ತೆಯಲ್ಲಿ ಕೂಡ ತಿರುವು ಇರುವಂತೆ , ಅವರ ಪ್ರೇಮ ಕಥೆಯು ತಿರುವು ತೆಗೆದು ಕೊಂಡಿತ್ತು .
ಆ ದಿನಕ್ಕೆ ಮುಂಚೆ ನಡೆದ ಕೆಲವು ಘಟನೆಗಳನ್ನು , ತನ್ನಿಂದಾದ ತಪ್ಪುಗಳನ್ನು ಮತ್ತೆ ನೆನಪಿಸಿಕೊಂಡು ಪಶ್ಚಾತಾಪ ಪಡಲು ಇಷ್ಟ ಪಡದ ದಿಲೀಪ ಬೇರೆ ಏನೋ ಚಿಂತಿಸಲು ಹೋದರು , ಮದುವೆ ಆಗದ ತೆಗೆದುಕೊಂಡ ಆ ದಿನ ಅವನಿಗೆ ಮರೆಯಲಾಗಲಿಲ್ಲ. ಎಂದಿನಂತೆ ಗಂಗೋತ್ರಿಯ ಬಯಲು ಮಂದಿರದಲ್ಲಿ ಸಂದಿಸಿದಾಗ ಜಾನುವಿನ ಕಾಡಿಗೆ ಹಚ್ಚಿದ ಕಣ್ಣಿನಲ್ಲಿ ಕಾಣದ ವೇದನೆಯಿತ್ತು , ಹೇಳಲಾಗಾದ ಮಾತುಗಳಿತ್ತು . ಅವಳ ದಿಲ್ ನನ್ನು ತಬ್ಬಿಕೊಂಡು ಸುಮಾರು ಹೊತ್ತ ಅತ್ತ ಜಾನು 1 ಚೀಟಿಯನ್ನು ಅವನಿಗೆ ಕೊಟ್ಟು ಹೊರಟು ಹೋದಳು .ಚೀಟಿಯನ್ನು ಓದುತ್ತ ಓದುತ್ತ ದಿಲೀಪ ಕುಸಿದು ಬಿದ್ದಿದ್ದ , ತುಂಬಾ ಪ್ರೀತಿಸುವ ಅಪ್ಪನ ಪ್ರೀತಿಯ ಒತ್ತಡಕ್ಕೆ ಬೆಲೆ ಕೊಟ್ಟು ಅವರು ನಿಶ್ಚಯಿಸಿದ ಹುಡುಗನ ಜೊತೆ ಮದುವೆಯಾಗಲು ಒಲ್ಲದ ಮನಸಿನಿಂದ ಒಪ್ಪಿರುವುದಾಗಿಯು ,ತನ್ನನ್ನು ಮರೆಯಬೇಕೆಂದು ,ಮತ್ತೆ ನೋಡಲು ಪ್ರಯತ್ನಿಸದಂತೆ ಚಾಮುಂಡಿಯ ಆಣೆಯಿಟ್ಟ ಸಾಲುಗಳನ್ನು ಓದುತ್ತಿದ್ದಂತೆ ಉರಿಯುವ ಕಣ್ಣುಗಳು ನೀರಾದವು .ಅರಳಿದ ಪ್ರೀತಿಗೆ ಸಾಕ್ಷಿಯಾದ ಚಾಮುಂಡಿ ,ಮುದುಡುವುದಕ್ಕೆ ಆಣೆಯಾದಳು .
ಆ ಚೀಟಿಯನ್ನು ಪ್ರತಿ ದಿನ ಓದುತ್ತ ಜಾನುವನ್ನು ದ್ವೇಷಿಸಲು ಪ್ರಯತ್ನ ಪಟ್ಟು ಸೋತ ದಿಲೀಪ , ಮದುವೆ ದಿನ ಜಾನು ಗಂಡನ ಜೊತೆ ಹೋಗುವುದನ್ನೇ ನೋಡುತ್ತಾ ತನ್ನಲ್ಲಿ ಪ್ರತಿಜ್ಞೆ ಮಾಡಿದನು – ನೀನು ನನ್ನ ಮರೆತು ಹೋಗಬಹುದು , ಹೊಸ ಅನುಭವಗಳ ಅಲೆಗೆ ಹಳೆ ನೆನಪು ಕೊಚ್ಚಿಹೊಗಬಹುದು .ಆದರೆ ನನ್ನಲ್ಲಿ ನೀನು ,ನಿನ್ನ ನೆನಪು , ಕಂಡ ಕನಸು ಶಾಶ್ವತ , ಈ ದಿಲ್ ನಲ್ಲಿ ಬೇರೆಯವರಿಗೆ ಜಾಗವಿಲ್ಲ ,.ನನ್ನ ಮನದೊಡತಿ ನೀನೆ – ಈ ಜನ್ಮದಲ್ಲಿ ನಾನು ಮದುವೆಯಾಗಲ್ಲ,ಮದುವೆಯಾಗಲ್ಲ ……
“ಅಪ್ಪ , ಊರು ಬಂತು , ಎದ್ದೇಳು” ಎಂದು ಪಕ್ಕದಲ್ಲಿ ಕೂತಿದ್ದ 5 ವರ್ಷದ ಮಗ ಎಚ್ಚರಿಸಿದಾಗಲೇ ದಿಲೀಪ ವಾಸ್ತವಕ್ಕೆ ಬಂದಿದ್ದು .
………
ಯಾವ ಕಥೆಯು ಹೀಗೆ ಮುಗಿಯುವುದಿಲ್ಲ , ಮುಗಿಯುವುದು ಕೇವಲ ಕಥೆ ಬರೆಯುವ-ಓದುವ ,ಹೇಳುವ-ಕೇಳುವ ಆಸಕ್ತಿಯಷ್ಟೇ. ಎಲ್ಲಿಗೆ ನಿಲ್ಲಿಸುತ್ತೆವೆಯೋ ಅಲ್ಲಿಗೆ ನಿಲ್ಲುವುದು ಕೇವಲ ಕಥೆಯಷ್ಟೇ -ಜೀವನವಲ್ಲ .
ಬಸ್ ನಿಂದ ಇಳಿದು ಹೋದ ದಿಲೀಪನನ್ನು ನೋಡುತ್ತಾ ಆಟೋಗಾಗಿ ಕಾಯುತ್ತಿದ್ದ ಜಾಹ್ನವಿಯ ಕಣ್ಣಂಚಿನ ನೀರು , ಹಚ್ಚಿದ್ದ ಕಾಡಿಗೆಯೊಂದಿಗೆ ಬೆರೆತಿತ್ತು .





0 Comments