-ಶೈಲಾ ಕಟ್ಟೆ
ನಸುಗಪ್ಪು ವರ್ಣದ ಎತ್ತರ ನಿಲುವಿಗೊಪ್ಪುವ ಅಚ್ಚ ಬಿಳುಪಿನ ಅಂಗಿ ಪಂಚೆ, ಹಣೆಯ ಮೇಲೆ ಢಾಳ ವಿಭೂತಿ, ಕನ್ನಡಕದ ಹಿಂದಿನ ಚೂಪು ಕಣ್ಣುಗಳು, ಸದಾ ನಗುತ್ತಿರುವಂತೆ ಕಾಣುವ ಕೊಂಚ ಉಬ್ಬು ಹಲ್ಲಿನ, `ದೊಡ್ಡ ಮಲ್ಲಪ್ಪ ಮಾಸ್ಟರ್’ ಒಂದು ಕೈಯಲ್ಲಿ ಪುಸ್ತಕದ ಹೊರೆ, ಇನ್ನೊಂದು ಕೈಯಲ್ಲಿ ಪಂಚೆ ಚುಂಗು ಹಿಡಿದು ಜರಕಿ ಚಪ್ಪಲಿಯ ಸದ್ದಿನೊಂದಿಗೆ, ಶಾಲಾವರಣದಲ್ಲಿ ನಡೆದು ಬರುತ್ತಿದ್ದರೆ, ಎದುರಾಗುವ ಮಕ್ಕಳು ತಕ್ಷಣ ಪಕ್ಕಕ್ಕೆ ಸರಿದು ವಿನಯದಿಂದ ಕೈ ಜೋಡಿಸಿ ವಂದಿಸುತ್ತಿದ್ದ ರೀತಿಯೇ ಅವರ ವ್ಯಕ್ತಿತ್ವವನ್ನು ಅರ್ಥೈಸುತ್ತಿತ್ತು.
ಹಿಂದಿ ಶಿಕ್ಷಕರಾಗಿದ್ದರೂ ಎಲ್ಲ ವಿಷಯಗಳನ್ನು ಸೈ ಎನ್ನುವಂತೆ ಕಾಳಜಿಯಿಂದ ತಯಾರಾಗಿ ಬಂದು ಕಲಿಸುವ ಸರ್, ಬುದ್ಧಿವಂತರ ಪಾಲಿನ ಗೆಳೆಯ, ಆಲಸಿಗಳನ್ನು, ತರಲೆಗಳನ್ನು ಕಂಡರೆ ಕೆಂಡ ಕಾರುತ್ತಿದ್ದರು. ತಮ್ಮ ಹೊಡೆತ ತಾಳಲಾರದೆ, ಕೈ ಕಾಲುಜ್ಜಿಕೊಳ್ಳುತ್ತಾ ಕುಸು ಕುಸು ಮಾಡುತ್ತಿದ್ದ ಹುಡುಗರನ್ನು ಹೊಡೆದ ಕ್ಷಣ ಮಾತ್ರದಲ್ಲೆ ಹತ್ತಿರ ಕರೆದು ಯಾಕೋ ಅಪ್ಪ! ಹೊಟ್ಟೆ ಉರಿಸ್ತೀರಿ? ಕಲೀರ್ಯೋ. ಎನ್ನುವಾಗ ಅವರ ತುಂಬಿ ಬರುತ್ತಿದ್ದ ಕಣ್ಣಾಲಿಗಳು ಮತ್ತು ಗದ್ಗದಿಸುತ್ತಿದ್ದ ಧ್ವನಿ, ಇಡೀ ತರಗತಿಯನ್ನು ಅವರಿಗೆ ಶರಣಾಗಿಸಿಬಿಡುತ್ತಿತ್ತು. ಕಲಿಯಲೇಬೇಕೆಂಬ ಛಲ ಮೂಡಿಸುತ್ತಿತ್ತು.
ಇಂದೂ ಶಿಸ್ತು ,ಶ್ರದ್ಧೆ ಈ ಪದಗಳೊಂದಿಗೆ ತಕ್ಷಣ ತೇಲಿ ಬರುವ ನೆನಪು 60-70ರ ದಶಕದಲ್ಲಿ ತೀರ್ಥಹಳ್ಳಿ ತಾಲ್ಲೂಕಿನ ಪುಟ್ಟ ಹಳ್ಳಿ ಹಂಚದಕಟ್ಟೆಯಲ್ಲಿ ನನ್ನ ಗುರುಗಳಾಗಿದ್ದ `ದೊಡ್ಡ ಮಲ್ಲಪ್ಪ ಮಾಸ್ಟರ್’ ರವರದು.



0 Comments