ಯಾಕೀಗೆ??..

ಬಸವನಗೌಡ ಹೆಬ್ಬಳಗೆರೆ

ಅವ್ಯವಸ್ಥೆಯ ಹುಳುಕುಗಳಿಗೆ
ಮನದೊಳಗಣ ಹೋರಾಟಗಾರ
ಕುದ್ದು ಕಡುಕೋಪದಿ
ಕೋವಿಯ ಕೈಲಿಡಿದು
ಶೂಟ್ ಮಾಡಲು ಮನಸು ಮಾಡುತಾನೆ
ಮನದ ಮತ್ತೊಬ್ಬ
ಕೋವಿಯ ಕಿತ್ತು ಬಿಸಾಡುತ್ತಾನೆ
ಬೇಡ ನಿ‌ನಗೆ ಊರ ಉಸಾಬರಿ!

ಬಯ್ದು ರಚ್ಚು ತೀರಿಸೋಣವೆಂದರೆ
ಮನದ ಮತ್ತೊಬ್ಬ
ಬಾಯಿ ಬಿಡಲು ಬಿಡುವುದಿಲ್ಲ
ಹೇಳುತ್ತಾನೆ ಹೀಗೆ:
ಸುಮ್ಮನಿರು…
ಕೊಳೆತ ಕಡ್ಡಿಯಂತೆ ಪ್ರವಾಹದ
ದಿಕ್ಕಿನಲೇ ಸಾಗು!
ಬಡವನ‌ ಕೋಪ ದವಡೆಗೆ ಮೂಲ…

ಇಲ್ಲೇನಿದ್ದರೂ
ಬಹುಪರಾಕ್ ಸಂಸ್ಕೃತಿ
ವಂಧಿ ಮಾಗದನಾಗಿರಬೇಕು
ಆಳಿಸಿಕೊಂಡ ಮನಸ್ಸಿಗೆ
ಗೊತ್ತಿರುವುದು ಇದೊಂದೇ ತಾನೆ!

ಕ್ಯಾಕರಿಸಿ ಉಗಿದು
ಕೋಪ ತಣಿಸಿಕೊಳ್ಳೋಣವೆಂದರೆ
ಉಗಿದದ್ದು ನನ್ನ ಮೇಲೆಯೇ ಬಿತ್ತು
ಜನ ನನ್ನನೇ ನೋಡಿ ನಕ್ಕರು
ಕುಕೃತ್ಯಗಳಿಗೆ ಕಾರಣರಾದವರು
ಇದ್ದದ್ದು ಆಕಾಶದೆತ್ತರದ
ಭವ್ಯ ಬಂಗಲೆಯ ಕಟ್ಟಡದಲ್ಲಿ!

ಮೈಕ್ ಹಿಡಿದು ಅರಚಿದೆ
ಕಿರುಚಿದೆ ಬಾಯ್ಬಡಿದುಕೊಂಡೆ
ಏನು ಪ್ರಯೋಜನ?
ಅವರೇನು ಸಾಮಾನ್ಯರಾ?
ಉಳ್ಳವರು,ದಪ್ಪ ಚರ್ಮದವರು..
ಕಿವುಡರಂತೆ ನಟಿಸಿದರು
ನನ್ನ ಚೀರಾಟ ಕೂಗಾಟ
ಹಿಂಬಾಲಕರ ಜೈಕಾರದಲಿ
ಮರೆಯಾಯ್ತು!
ಅಷ್ಟಕ್ಕೂ ನಾನು ಕೂಗಾಡಿದ್ದು
ಜೈಕಾರ ಕೂಗುವವರ‌ ಪರವಾಗಿ
ಎಂದು ತಿಳಿಯದಿದ್ದುದು ವಿಪರ್ಯಾಸ!

ತಿಳಿಯುವಷ್ಟರಲಿ
ಜೈಕಾರ ಕೂಗುವವನ
ಸಂತತಿಯವ ಹಿಂಬಾಲಕನಾಗಿ
ಜೈಕಾರ ಕೂಗುತ್ತಿರುತ್ತಾನೆ
ಜೈಕಾರ ಕೂಗಿಸಿಕೊಳ್ಳುವವನ
ಸಂತತಿಯವ ನಾಯಕನಾಗಿರುತ್ತಾನೆ!!

‍ಲೇಖಕರು Admin

April 28, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: