‘ಯಸ್ ಬ್ಯಾಂಕ್’ ಹಿನ್ನೆಲೆಯಲ್ಲಿ ಆರ್ಥಿಕತೆಯ ಹಿಂದಣ ವ್ಯಥೆ!

ಡಿ ಎಸ್ ರಾಮಸ್ವಾಮಿ

ಕಳೆದ ವರ್ಷ ಪಿಎಂಸಿ ಬ್ಯಾಂಕಿನ ಗ್ರಾಹಕರಿಗೆ ಹಣ ಹಿಂಪಡಿತದ ಮಿತಿ ಹೇರಿದ್ದ ರಿಸರ್ವ್ ಬ್ಯಾಂಕ್ ಈಗೆರಡು ತಿಂಗಳ ಹಿಂದೆ ಬೆಂಗಳೂರಿನ ಸಹಕಾರಿ ಬ್ಯಾಂಕೊಂದರ ಹಣ ಹಿಂಪಡಿತಕ್ಕೂ ಮಿತಿ ಹೇರಿತ್ತು. ಈ ಎರಡೂ ಬ್ಯಾಂಕುಗಳೂ ಸಹಕಾರಿ ತತ್ವದ ಆಧಾರದ ಬ್ಯಾಂಕುಗಳು. ನಿನ್ನೆ ಯೆಸ್ ಬ್ಯಾಂಕ್ ಎಂಬ ವಾಣಿಜ್ಯ ಬ್ಯಾಂಕಿನ ವಹಿವಾಟನ್ನು ನಿಯಂತ್ರಿಸಲು ಅಧಿಕಾರಿಯನ್ನು ನೇಮಿಸಿರುವ ರಿಸರ್ವ್ ಬ್ಯಾಂಕ್ ಮುಂದಿನ ಮೂವತ್ತು ದಿನಗಳವರೆಗೆ ಬ್ಯಾಂಕಿಗೆ ಆರ್ಥಿಕ ನಿಯಂತ್ರಣ ಹೇರಿದೆ. ಅಂದರೆ ಆ ಬ್ಯಾಂಕು ಯಾವುದೇ ಹೊಸ ಸಾಲ ನೀಡುವಂತಿಲ್ಲ. ಗ್ರಾಹಕರ ಠೇವಣಿಗಳ ಹಣದ ₹೫ ಲಕ್ಷದವರೆಗೆ ಖಾತರಿ ಇರುತ್ತದೆಯಾದರೂ ಹಣ ಹಿಂಪಡೆಯುವಿಕೆಗೆ ದಿನವಹಿ ಮಿತಿ ಇದ್ದೇ ಇರುತ್ತದೆ.

ಈ ಸುದ್ದಿ ಹೊರಬಿದ್ದೊಡನೆಯೇ ಸದರಿ ಬ್ಯಾಂಕಿನ ಶೇರು ಮಾರುಕಟ್ಟೆಯ ಸೂಚ್ಯಂಕ ಭಾರೀ ಕುಸಿತ ಕಂಡು ₹೪೫-೫೦ ರ ನಡುವೆ ಇದ್ದ ಶೇರು ಬೆಲೆ ಸಂಜೆಯ ವೇಳೆಗೆ ₹ ೧೫ರ ಆಸುಪಾಸಿಗೆ ನಿಂತಿತು. ರಿಸರ್ವ್ ಬ್ಯಾಂಕು ಎಸ್.ಬಿ.ಐ ಮತ್ತು ಎಲ್.ಐ.ಸಿಗಳಿಗೆ ಸದರಿ ಬ್ಯಾಂಕಿನ ಶೇರು ಖರೀದಿಸುವ ಮೂಲಕ ಆ ಬ್ಯಾಂಕಿನ ಆರ್ಥಿಕ ನಿಯಂತ್ರಣಕ್ಕೆ ಮುಂದಾಗಬೇಕೆಂದು ಸೂಚಿಸಿದೆ. ಎಸ್.ಬಿ.ಐ ಕೂಡ ಸಮ್ಮತಿಸಿದ್ದು ಈ ಬಗ್ಗೆ ಚರ್ಚೆ ನಡೆದಿದೆ.

ಇಂಥ ಸಂಗತಿಗಳಿಂದಾಗಿ ಜನ ಸಾಮಾನ್ಯರು ತಮ್ಮ ವ್ಯವಹಾರಕ್ಕೆ ಬ್ಯಾಂಕಿಂಗ್ ವ್ಯವಸ್ಥೆಯನ್ನು ಆಶ್ರಯಿಸುವ ಬಗ್ಗೆಯೇ ಅನುಮಾನಗಳು ಪ್ರಬಲವಾಗುತ್ತಿವೆ. ಹೊಸ ಕಾಲಮಾನದ ಡಿಜಿಟಲ್ ಬ್ಯಾಂಕಿಂಗ್ ಸೌಲಭ್ಯ ಕೂಡ ಹಲವು ಸಮಸ್ಯೆ ಎದುರಿಸುತ್ತಿರುವಾಗ ಈ ಬೆಳವಣಿಗೆ ಆರ್ಥಿಕ ಕ್ಷೇತ್ರದ ಮೇಲೆ ಉಂಟು ಮಾಡುವ ಪರಿಣಾಮ ಘೋರವಾದದ್ದು.

ನೋಟ್ ಬ್ಯಾನ್ ಪ್ರಕರಣದ ಹಿಂದಣ ಕಾಳಜಿಯನ್ನು ಅರ್ಥ ಮಾಡಿಕೊಳ್ಳದ ಕೆಲವರು ಇವತ್ತಿಗೂ ಆ ಸಂಗತಿಯನ್ನು ಎಲ್ಲ ಆರ್ಥಿಕ ಸಂಕಟಗಳಿಗೂ ತಳುಕು ಹಾಕುತ್ತಿರುವುದೂ ವಿಚಿತ್ರವೇ. ಇಡೀ ಜಗತ್ತೇ ಆರ್ಥಿಕತೆಯ ಕುಸಿತಕ್ಕೆ ತತ್ತರಿಸಿದ್ದಾಗ ಕೂಡ ಭಾರತೀಯ ಆರ್ಥಿಕತೆ ಚೆನ್ನಾಗೇ ಇದ್ದುದು ಈಗ ಏಕಾಗಿ ಒಮ್ಮೆಲೇ ಪ್ರಪಾತಕ್ಕೆ ಬೀಳುತ್ತಿದೆ ಎಂದು ಯೋಚಿಸಿದರೆ ಮುಂದಣ ಹಾದಿ ಅಯೋಮಯವಾಗಿರುವುದು ಸ್ಪಷ್ಟವಾಗುತ್ತಿದೆ.

 

ಸಹಕಾರೀ ಬ್ಯಾಂಕುಗಳು ಮೂಲ ಬಂಡವಾಳವನ್ನು ತಮ್ಮ ಸದಸ್ಯರ ಶೇರು ಮೂಲಕ ಸಂಗ್ರಹಿಸುತ್ತವೆ. ಅವುಗಳ ವ್ಯವಹಾರ ತಮ್ಮ ಸದಸ್ಯರ ಮಟ್ಟಿಗೆ ಮಾತ್ರ ಮಿತಿ ಇರುತ್ತದೆ. ಸದಸ್ಯರು ಇಡುವ ಠೇವಣಿಗಳನ್ನು ಇತರ ಸದಸ್ಯರ ಆರ್ಥಿಕ ಅವಶ್ಯಕತೆಗೆ ಸಾಲದ ರೂಪದಲ್ಲಿ ವಿತರಿಸಲಾಗುತ್ತದೆ. ಇಲ್ಲಿ ಸಾಲ ಪಡೆದವರು ಸುಸ್ತಿಯಾಗದೇ ಇರುವುದು ಮತ್ತು ಸದಸ್ಯರ ಸಂಖ್ಯೆ ಮಿತಿಯಲ್ಲಿರುವವರೆಗೂ ಆ ಸಹಕಾರ ಸಂಘ ಯಶಸ್ಸಿನ ಹೆಜ್ಜೆ ಇಡುತ್ತಿರುತ್ತದೆ. ಯಾವಾಗ ಸಾಲ ಪಡೆದ ಸದಸ್ಯರು ವಾಪಸು ಕಟ್ಟದೇ ಇದ್ದಾಗ ಮತ್ತು ಠೇವಣಿಗಳು ಹೆಚ್ಚದೇ ಇದ್ದಾಗ ಸಂಘದ ವ್ಯವಹಾರವು ಕುಸಿತ ಕಾಣತೊಡಗುತ್ತದೆ. ಜೊತೆಗೇ ಈ ಸಹಕಾರೀ ಬ್ಯಾಂಕು/ಸಂಘಗಳಿಗೂ ಅಪೆಕ್ಸ್ ಬ್ಯಾಂಕು/ ರಿಸರ್ವ್ ಬ್ಯಾಂಕು ವಿಧಿಸುವ ಕಟ್ಟಳೆಗಳು ನಿಯಮಗಳು ಅನ್ವಯಿಸುವುದರಿಂದ ಈ ಬ್ಯಾಂಕುಗಳ ವ್ಯವಹಾರಕ್ಕಿಂತಲೂ ದಾಖಲೆಗಳ ಕ್ರೋಢೀಕರಣವೇ ಮುಖ್ಯವಾಗಿ ಅಸಮತೋಲನ ಉಂಟಾಗುತ್ತದೆ. ಬಹುತೇಕ ಸಹಕಾರಿ ಬ್ಯಾಂಕುಗಳು ತಮ್ಮ ನಿರ್ದೇಶಕರಿಗೋ ಅವರ ಕುಟುಂಬಸ್ಥರಿಗೋ ಹೆಚ್ಚಿನ ಸಾಲ ಕೊಡುವುದರಿಂದ ಅವು ವಸೂಲಾಗದ ಸಾಲವಾಗಿ ಮಾರ್ಪಟ್ಟು ಆ ಬ್ಯಾಂಕು ದಿವಾಳಿಯತ್ತ ಹೆಜ್ಜೆ ಹಾಕುತ್ತದೆ.

ಇನ್ನು ವಾಣಿಜ್ಯ ಬ್ಯಾಂಕುಗಳ ಪರಿಕಲ್ಪನೆ ಕೂಡ ಇದಕ್ಕಿಂತ ಹೆಚ್ಚಿನದೇನಲ್ಲ. ಆದರೆ ವಾಣಿಜ್ಯ ಬ್ಯಾಂಕುಗಳು ನೇರ ರಿಸರ್ವ್ ಬ್ಯಾಂಕಿನ ನಿರ್ದೇಶನದಂತೆ ಕೆಲಸ ಮಾಡುತ್ತವೆ. ಶೆಡ್ಯೂಲ್ ಬ್ಯಾಂಕ್ ಎಂದು ನಮೂದಿಸಲ್ಪಟ್ಟ ಆರ್ಥಿಕ ವ್ಯವಹಾರಗಳನ್ನು ನಡೆಸುವ ಮತ್ತು ರಿಸರ್ರ್ವ್ ಬ್ಯಾಂಕಿನಲ್ಲಿ ಸೂಚಿತ ಠೇವಣಿಯ ಮೊತ್ತ ಇಡುವ ಯಾರೂ ಕೂಡ ವಾಣಿಜ್ಯ ಬ್ಯಾಂಕು ನಡೆಸಬಹುದು. ಆದರೆ ಜಾಗತೀಕರಣ ಪೂರ್ವದ ಭಾರತೀಯ ಬ್ಯಾಂಕಿಂಗ್ ಕ್ಷೇತ್ರ ಇಂಥ ಉದಾರವಾದಿಯಾಗಿರದ ಕಾರಣ ಸಧೃಡವಾಗಿತ್ತು. ಆದರೆ ಯಾವಾಗ ಉದಾರೀಕರಣ ಎಗ್ಗಿಲ್ಲದ ಮತ್ತು ಉತ್ಪ್ರೇಕ್ಷಿತ ಅಂಕಿ ಸಂಖ್ಯೆಯನ್ನೇ ಮುಂದುಮಾಡತೊಡಗಿತೋ ಆವಾಗಿನಿಂದ ಆರ್ಥಿಕ ಕ್ಷೇತ್ರದ ಎಲ್ಲ ಮಗ್ಗುಲುಗಳೂ ಮುಗ್ಗರಿಸತೊಡಗಿದವು.

ಕಳೆದ ವರ್ಷ ಸ್ಟೇಟ್ ಬ್ಯಾಂಕ್ ಸಮೂಹದ ಬ್ಯಾಂಕುಗಳ ವಿಲೀನ ಅಂಥ ಪ್ರಯೋಜನವನ್ನೇನೂ ಮಾಡದಿದ್ದರೂ ವಿಜಯ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡಾ ವಿಲೀನಕ್ಕೆ ಮುಂದಾದ ಸರ್ಕಾರ ಕೊಟ್ಟ ಕಾರಣಗಳು ಅಷ್ಟೇನೂ ತೃಪ್ತಿಕಾರಕವಾಗಿರಲಿಲ್ಲ. ಬರುವ ಏಪ್ರಿಲ್ ೧ರಿಂದ ಕೆನರಾ ಬ್ಯಾಂಕ್ ಮತ್ತು ಸಿಂಡಿಕೇಟ್ ಬ್ಯಾಂಕ್ ವಿಲೀನಕ್ಕೆ ಆಯಾ ಬ್ಯಾಂಕುಗಳ ನೌಕರರ ವಿರೋಧವಿದ್ದರೂ ಲೆಕ್ಕಿಸದೇ ಈ ಪರಿಕ್ರಮಕ್ಕೆ ಕೊಡುವ ಕಾರಣ ಕೂಡ ಜನವಿರೋಧಿಯಾದದ್ದೇ ಆಗಿದೆ.

ಈ ಮಧ್ಯೆ ವಿಮಾ ವಲಯವನ್ನು ಖಾಸಗೀಕರಣ ಮಾಡಿದ ಉಪಕ್ರಮದ ಮುಂದಣ ಹೆಜ್ಜೆಯಾಗಿ ಎಲ್ಲೈಸಿಯನ್ನು ಲಿಸ್ಟಿಂಗ್ ಮಾಡಿ ಅದರ ಶೇರುಗಳನ್ನು ಮಾರುವ ಹುನ್ನಾರ ಕಳೆದ ಬಜೆಟ್ಟಿನಲ್ಲಿ ಹೇಳಲಾಗಿದೆ. ಇದು ಕೂಡ ಸರ್ಕಾರೀ ಸಂಸ್ಥೆಯೊಂದನ್ನು ದುರ್ಬಲ ಮಾಡುವ ಕ್ರಮವೇ ವಿನಾ ಮತ್ತೇನಲ್ಲ. ಶೇರುಗಳನ್ನು ಖಾಸಗೀ ವಹಿವಾಟುದಾರರು ಮತ್ತು ಕಾರ್ಪೊರೇಟ್ ಸಂಸ್ಥೆಗಳು ಕೊಳ್ಳಬಲ್ಲವೇ ಹೊರತು ಜನ ಸಾಮಾನ್ಯನಿಗೆ ಅದು ಎಟುಕದ ದ್ರಾಕ್ಷಿ.

ಬಹುತೇಕ ಎಲ್ಲರೂ ಆರ್ಥಿಕತೆ ಎಕ್ಕುಟ್ಟು ಹೋಗುತ್ತಿದೆ ಅಂತ ಬರೀತಾ ಇದ್ದಾರೆ. ಇಡೀ ಜಗತ್ತೇ ರಿಸೆಷನ್ ಅಂತ ತಲೆ ಮೇಲೆ ಕೈ ಹೊತ್ತು ಕೂತಾಗ ಕೂಡ ಗಟ್ಟಿಯಾಗಿ ನಿಂತಿದ್ದ ನಮ್ಮ ಅರ್ಥಿಕತೆಗೆ ಈಗ ಯಾವ ಲಕ್ವಾ ಹೊಡೀತು? ನೆಹರೂ ಪ್ರಣೀತ ಸಮಾಜವಾದೀ ಸಿದ್ಧಾಂತ ಯಾವಾಗ ಮನಮೋಹನ್ ಸಿಂಗ್ ಮತ್ತು ಚಿದಂಬರಂ ಆರ್ಥಿಕ ಸುಧಾರಣೆ ಹೆಸರಲ್ಲಿ ಜಾಗತೀಕರಣಕ್ಕೆ ಬಾಗಿಲು ತೆಗೆದರೋ ಆವಾಗಿನಿಂದಲೇ ಸ್ವಲ್ಪ ಸ್ವಲ್ಪವೇ ಅದುರತೊಡಗಿತ್ತು. ಇಷ್ಟೂ ದಿನ ಡೌನಲ್ಲಿ ಗಾಡಿ ಓಡುತ್ತಿತ್ತು, ಹಾಗಾಗಿ ಸ್ವಂತದ ಆಕ್ಸಿಲರೇಷನ್ ಬೇಕಿರಲಿಲ್ಲ. ಯಾವಾಗ ಒಂದು ಸಣ್ಣ ಏರು ಸಿಕ್ಕಿತೋ ಈ ಆರ್ಥಿಕತೆಯ ಗಾಡಿ ದಮ್ಮು ಹತ್ತಿ ಏದುಸಿರು ಬಿಡುತ್ತಿದೆ.

ನವರತ್ನಗಳನ್ನು ಬಿಕರಿಗಿಟ್ಟಾಗಲೇ ತಿಜೋರಿಯಲ್ಲಿಟ್ಟಿದ್ದ ಬೆಳ್ಳಿ ಬಂಗಾರಗಳಿಗೆ ಅನ್ಯರ ಕಣ್ಣು ಬಿತ್ತು. ಇನ್ನು ಸರ್ಕಾರದ್ದೇ ಆಗಿರಬೇಕಿದ್ದ ಸಾರಿಗೆ, ಶಾಲೆ, ಆಸ್ಪತ್ರೆಗಳು ಖಾಸಗಿಯವರ ಪಾಲಾದವೋ ಆವಾಗಿನಿಂದ ಸರ್ಕಾರ ಖಾಸಗಿಯವರ ತಾಳಕ್ಕೆ ಕುಣಿಯತೊಡಗಿತು. ಇನ್ನು ಗಣಿಗಳೆಲ್ಲ ಉಳ್ಳವರದ್ದೇ ಆದಾಗ ಲೈಸೆನ್ಸ್ ಇಲ್ಲದ ಜಾಗವೂ ಕೊರೆತಕ್ಕೆ ಕೆರತಕ್ಕೇ ಒಳಗಾಯಿತು. ಬಂಡವಾಳ ಬೇಕಲ್ಲವೆ ಅಂತ ಸಾರ್ವಜನಿಕ ಕ್ಷೇತ್ರದ ಬ್ಯಾಂಕಿಂಗ್ ವಿಮೆ ಮತ್ತಿತರ ಹಣಕಾಸು ಸಂಸ್ಥೆಗಳ ಷೇರುಗಳನ್ನು ಮಾರಲಾಯಿತು. ಇ‍ದೆಲ್ಲ ನಿನ್ನೆ ಮೊನ್ನೆ ನಡೆದದ್ದಲ್ಲ. ೨೦೦೦ ದಲ್ಲಿ ಆರಂಭಗೊಂಡ ಈ ಪ್ರಕ್ರಿಯೆ ೨೦೧೯ರಲ್ಲಿ ತನ್ನ ನಿಜದ ಮುಖ ತೋರತೊಡಗಿದೆ. ದೇಶೀಯ ಉತ್ಪನ್ನಗಳು ವಿದೇಶೀ ಮಾರುಕಟ್ಟೆಗೆ ಹೋಗಲು ದುಬಾರಿ ಸುಂಕ. ಜೊತೆಗೆ ಪೈಪೋಟಿ. ಇನ್ನು ದೇಶೀ ಮಾರುಕಟ್ಟೆಯಲ್ಲಿ ವಿದೇಶೀ ಉತ್ಪನ್ನಗಳು ಅತಿ ಕಡಿಮೆ ಬೆಲೆಗೆ ಸಿಗುವಾಗ ದೇಶೀ ಉತ್ಪನ್ನ ಕೊಳ್ಳುವವರಾರು? ಏನೆಲ್ಲ ಬದಲಾವಣೆ ಆಗಿದೆ ಅಂದರೂ ಲೈಸೆನ್ಸ್ ರಾಜ್ ಮತ್ತು ರೆಡ್ ಟ್ಯಾಪಿಸಂ ಇನ್ನೂ ಉದ್ದಿಮೆದಾರರ ಕತ್ತು ಹಿಸುಕುತ್ತಿದೆ. ಜೊತೆಗೆ ಈ ಗಬ್ಬರ ಸಿಂಗ್ ಟ್ಯಾಕ್ಸ್ GST ಬೇರೆ! ಗಾಯದ ಮೇಲೆ ಕುರು ಎದ್ದಿದೆ. ಉರಿಯ ಜೊತೆಗೆ ನೋವು! ಬ್ಯಾಂಕುಗಳನ್ನು ಯಾಮಾರಿಸಿ ಸಾಲ ತೆಗೆದವರು ವಿದೇಶಕ್ಕೆ ಓಡಿ ಬಚಾವಾಗುತ್ತಾರೆ. ಸಾಲ ಕೊಟ್ಟ ಬ್ಯಾಂಕು ಲಬೋ ಲಬೋ. ಸಾಲ ಮನ್ನಾ ಆಗುತ್ತೆ ಅಂತಲೇ ಸಾಲ ಕಟ್ಟದ ಮಂದಿ ದೇಶದ ತುಂಬ. ಜೊತೆಗೆ ಅಂಥವರಿಗೆ ಎಲ್ಲ ರಾಜಕೀಯ ಪಕ್ಷಗಳ ಒತ್ತಾಸೆ ಬೇರೆ. ಪ್ರತಿ ಚುನಾವಣೆಯಲ್ಲೂ ಸಾಲಮನ್ನಾದಂಥ ಅವಿವೇಕ ಆಶ್ವಾಸನೆಗಳು. ಇಡೀ ರಾಜ್ಯದ ಅರ್ಧ ಭಾಗ ಬಿರು‌ಮಳೆಗೆ ಸಿಲುಕಿ ನರಳುತ್ತಿದ್ದರೆ ಇನ್ನರ್ಧಕ್ಕೆ ಕುಡಿಯುವ ನೀರಿಗೂ ತತ್ವಾರ. ಸಣ್ಣದೊಂದು ಸಾಮಾನು ಕೊಂಡರೂ ರಾಜ್ಯ ಕೇಂದ್ರಗಳು CST SST ಹೆಸರಲ್ಲಿ ಅರ್ಧರ್ಧ ಸಮನಾಗಿ ಹಂಚಿಕೊಳ್ಳುತ್ತವೆ. ಆದರೆ ಖರ್ಚಿನ ಬಾಬತ್ತು ಬಂದರೆ ಅವರ ಮೇಲೆ ಇವರು ಇವರ ಮೇಲೆ ಅವರು ಜವಾಬ್ದಾರಿ ಎತ್ತಿಹಾಕುತ್ತಾರೆ.

ಉದ್ದಿಮೆ ನಡೆಸುವವರಿಗೆ ಬರಿಯ ಸಾಲ ಕೊಟ್ಟರೆ ಸಾಲದು, ಉತ್ಪನ್ನಗಳಿಗೆ ದೇಶೀಯ ಮಾರುಕಟ್ಟೆಯಲ್ಲಿ ಬೇಡಿಕೆ ಇರುವಂತೆ ಮಾಡಬೇಕು. ಅರ್ಥಾತ್ ವಿದೇಶೀ ಉತ್ಪನ್ನಗಳನ್ನು ಮುಲಾಜಿಲ್ಲದೇ ಒಳಗೆ ಬರದಂತೆ ತಡೆಯಬೇಕು. ದೇಶೀ ಉತ್ಪನ್ನಗಳು ರಫ್ತಾಗುತ್ತಿದ್ದರೆ ಅವುಗಳ ಮೇಲಣ ಸುಂಕ ಕಡಿಮೆ ಮಾಡಿ ರಫ್ತಿಗೆ ಬೆಂಬಲ ಕೊಡಬೇಕು. ಇನ್ನು ಅಗತ್ಯವೇ ಇಲ್ಲದ ಮತ್ತು ದೇಶೀ ಉತ್ಪನ್ನಗಳು ಲಭ್ಯವಿರುವಾಗ ಆಮದು ನೀತಿಯನ್ನು ಬಿಗಿಗೊಳಿಸಿ ಹೆಚ್ಚು ಸುಂಕ ವಿಧಿಸಬೇಕು. ವಿಶೇಷತಃ ಆಹಾರ ಉತ್ಪನ್ನಗಳನ್ನು ಆಮದು ಮಾಡಿಕೊಂಡಷ್ಟೂ ದೇಶೀ ಬೆಳೆಗಾರರು ತೊಂದರೆ ಅನುಭವಿಸುತ್ತಾರೆ.

ಜೊತೆಗೆ ನಮ್ಮ ಅರ್ಥ ಸಚಿವರು, ಬ್ಯಾಂಕಿಂಗ್ ವಲಯದ ಮುಖ್ಯಸ್ಥರು ಅರ್ಥಶಾಸ್ತ್ರದಲ್ಲಿ ವಿದ್ಯೆಯ ಜೊತೆಗೇ ಅನುಭವವನ್ನೂ ಹೊಂದಿರಬೇಕು. ಕೇವಲ ಒಂದು ಪಕ್ಷದ ಪರವಾಗಿ ಇದ್ದವರನ್ನೆಲ್ಲ ನಿರ್ಧಾರ ತೆಗೆದುಕೊಳ್ಳುವ ಸ್ಥಾನಗಳಿಗೆ ಕೂರಿಸಿದರೆ ಇನ್ನೇನಾದೀತು? ಬ್ಯಾಂಕುಗಳ ವಿಲೀನ ಎನ್ನುವ ಖಾಯಿಲೆ ತಗುಲಿ ಈ ನೆಲದ ಅತ್ಯುತ್ತಮ ಬ್ಯಾಂಕುಗಳು ಅಸು ನೀಗಿದವು. ಪೈಪೋಟಿಗೆ ಬಿದ್ದ ಹಣಕಾಸು ವಲಯ ಬಂಡವಾಳಕ್ಕೆ ತಕ್ಕ ರಿಟರ್ನ್ ಇಲ್ಲದೇ ಪರಿತಪಿಸಿದೆ. ಜೊತೆಗೆ ಸುಳ್ಳಿನ ಆಟವಾದ ಜೂಜು ಕೇಂದ್ರ ಶೇರು ಮಾರುಕಟ್ಟೆ ಇಲಿಯನ್ನು ಹುಲಿಯನ್ನಾಗಿಸಿ ಬೇಕೆಂತಲೇ ಹಲವು ಸಂಸ್ಥೆಗಳನ್ನು ವ್ಯವಸ್ಥಿತವಾಗಿ ಕೊಂದಿದೆ, ಕೊಲ್ಲುತ್ತಿದೆ.

ಎಲ್ಲಿಯವರೆಗೆ home savings ಇರುತ್ತದೋ ಅಲ್ಲಿಯವರೆಗೂ ಮನೆ ನಡೆಯಬಲ್ಲದು. ಸಾಲ ತಂದು ಊಟ ಮಾಡಿದರೆ ಸಾಲದ ಬಡ್ಡಿ ಬೆಳೆಯುತ್ತದೆ ಅಷ್ಟೆ. ಉತ್ಪಾದಕತೆಗೆ ಬಳಸದ ಬಂಡವಾಳ ಯಾವತ್ತಿಗೂ ಕುತ್ತಿಗೆ ಕುಯ್ಯುತ್ತದೆ. ಕೆಫೆ ಕಾಫಿಯದು  ಇದೇ ಕತೆ.

ಮಿಗುತೆ ಉಳಿತಾಯದ ಮೂಲ ಮಂತ್ರ. ಅದಿಲ್ಲದ ಆರ್ಥಿಕತೆ ಚೇತರಿಸುವುದಿಲ್ಲ. ಹಣ ಒಂದೆಡೆ ನಿಂತರೆ ದುಡಿಯುವುದಿಲ್ಲ. ಹಣ ಯಾವತ್ತೂ ಹರಿಯಬೇಕು. ಅದಕ್ಕೇ ಅದನ್ನ ಕರೆನ್ಸಿ ಅಂತೀವಿ. ಒಂದೆಡೆ ನಿಂತ ನೀರು ಕೊಳೆಯುವಂತೆ ಮುಚ್ಚಿಟ್ಟ ಹಣ ಕೂಡ ಆರ್ಥಿಕತೆಯ ಬೆನ್ನ ಮುರಿಯುತ್ತೆ.

ಈಗ ಆಗಿದ್ದು ಆಗುತ್ತಿರುವುದೂ ಇದೇ.ಯೆಸ್ ಬ್ಯಾಂಕ್ ಕೊಟ್ಟ ಸಾಲ ವಸೂಲಾಗದೇ ಹೊಸ ಸಾಲ ಕೊಡಲಾಗದೇ ಚೈತನ್ಯ ಕಳೆದುಕೊಂಡಿದೆ. ಇದುವರೆಗೂ ಸುಮ್ಮನಿದ್ದ ರಿಸರ್ವ್ ಬ್ಯಾಂಕ್ ಈಗ ಕ್ರಮದ ಮಾತಾಡಿ ತಾತ್ಕಾಲಿಕವಾಗಿ ಆ ಬ್ಯಾಂಕಿನ ವ್ಯವಹಾರಗಳಿಗೆ ತಡೆ ನೀಡಿದೆ. ಯೆಸ್ ಬ್ಯಾಂಕ್ ಮಧ್ಯವರ್ತಿಯಾಗಿದ್ದ ಹಲವು ಡಿಜಿಟಲ್ ಪೋರ್ಟಲ್ ಗಳು ಬಾಗಿಲು ಮುಚ್ಚಿವೆ.

ಆರ್ಥಿಕ ಸಂಸ್ಥೆಯೊಂದರ ಆರೋಗ್ಯ ಅದು ಸಂಗ್ರಹಿಸುವ ಠೇವಣಿ, ಕೊಡುವ ಸಾಲ ಮತ್ತು ಉತ್ಪಾದಕತೆಗೆ ಕೊಡುವ ಎಚ್ಚರದಿಂದಾಗಿ ಇರುತ್ತದೆ. ಯಾವಾಗ ವಶೀಲಿ, ಬಾಜಿ ಮತ್ತು ವಂಚನೆಯೇ ಮೊದಲಾಗುತ್ತದೋ ಆವಾಗ ಆ ಸಂಸ್ಥೆ ಕಣ್ಣು ಮುಚ್ಚುತ್ತದೆ. ನಾಳೆ ಏನಾಗುತ್ತೋ ಯಾರಿಗೆ ಗೊತ್ತು? ಉತ್ಪ್ರೇಕ್ಷಿತ ವರದಿ ಮತ್ತು ಅಂಕೆ ಸಂಖ್ಯೆಗಳು ವಾಸ್ತವವನ್ನು ಮುಚ್ಚಿಟ್ಟರೆ ಗೊತ್ತಾಗುವುದಾದರೂ ಹೇಗೆ?

‍ಲೇಖಕರು avadhi

March 8, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: