ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಯಶೋದಕ್ಕ ನೆನಪಾದ್ರು..

-ಪ್ರವರ ಕೊಟ್ಟೂರು

ಹೊಸದುರ್ಗ ಕಾಲೇಜಿಗೆ ಸೇರಿಕೊಂಡ ಮೇಲೆ ಸಹೋದ್ಯೋಗಿ ಪ್ರವೀಣನೊಟ್ಟಿಗೆ ಇದ್ದದ್ದು ಹಾಸ್ಟೆಲ್ಲಿನಲ್ಲಿ. ಕ್ಲಾಸು ಮಾಡುವುದು ಒಂದಷ್ಟು ಹೊಸತನ್ನು ಕಲಿತು ಮಕ್ಕಳಿಗೆ ಹೇಳಿ ಕೊಡುವುದು. ಇಷ್ಟವಾದ ಸಿನಿಮಾಗಳ ಆಗಾಗ ತೋರಿಸುವುದು ಏನೇನೋ ಮಾಡುತ್ತಿದ್ದೆವು. ನಡು ನಡುವೆ ಓದು, ಮೂಡು ಬಂದಾಗ ಬರೆಯುವುದು ನಡೆದಿತ್ತು.

ಮನೆಗೆ ಕಾಲ್‌ ಮಾಡಿದಾಗ ಇವತ್ತು ಅಮಾವಾಸ್ಯೆ ಅದ್ಕೆ ದೋಸೆ ಮಾಡಿದ್ವಿ, ಅಪ್ಪ ಯಾಕೊ ಕೇಳಿದ್ರು ಅಂತ ಇಡ್ಲಿ ಮಾಡಿದ್ದೆ, ಬಾಯಿ ಕೆಟ್ಟಂಗಾಗಿತ್ತು ಅಂತ ಪಡ್ಡು ಮಾಡದ್ದೆ ನಿನ್ನ ತುಂಬಾ ನೆನಪಿಸಿಕೊಂಡೆ ಅಂತ ಅನ್ನಪೂರ್ಣಮ್ಮ ಹೇಳಿದಾಗ ಹಾಸ್ಟೆಲ್ಲಿನ ಪುಳಿಯೋಗರೆ ತಿನ್ನುತ್ತಾ ಕೊಟ್ಟೂರನ್ನು ಕಣ್ಣಲ್ಲಿ ತುಂಬಿಕೊಂಡು ಮನೆಯ ಅಡುಗೆಯಲ್ಲಿ ನಾಲಿಗೆಯ ಮೇಲೆ ಭಾವಿಸಿಕೊಳ್ಳದೇ ಬೇರೆ ವಿಧಿ ಇರಲಿಲ್ಲ.

ನಮ್ಮ ಕಾಲೇಜಿನಲ್ಲಿ ಹೊಸತಾಗಿ ಯಶೋದಕ್ಕ ಎಂಬುವರು ಕೆಲಸಕ್ಕೆ ಸೇರಿದ್ದರು. ಕ್ಲಾಸ್‌ ರೂಂಗಳನ್ನು ಸ್ವಚ್ಚವಾಗಿಡೋದು ಮಕ್ಕಳಿಗೆ ಊಟ ಬಡಿಸೋದು, ಕ್ಲಾಸಿಂದ ಕ್ಲಾಸಿಗೆ ಹಾಜರಾತಿ ಪುಸ್ತಕಗಳ ಕೊಡೋದು ಹೀಗೆ ಸಾಕಷ್ಟು ಶ್ರಮ ಬೇಡುವ ಕೆಲಸ ಅವರದ್ದು. ಬಾಯಿ ತುಂಬಾ ನಮ್ಮನ್ನು ಮಾತಾಡಿಸಿ ಕಷ್ಟ ಸುಖ ವಿಚಾರಿಸುತ್ತಲೇ ಕೆಲವೇ ದಿನಗಳಲ್ಲಿ ನಮ್ಮೆಲ್ಲರಿಗೂ ನೆಚ್ಚಿನ ಯಶೋದಕ್ಕ ಆಗಿಬಿಟ್ಟರು.

“ಸಾ ಏನೂ ಅನ್ಕಳಲ್ಲ ಅಂದ್ರೆ ಒಂದು ಕೇಳಲ”

“ಅಯ್ಯೋ ಕೇಳು ಯಶೋಧಕ್ಕ”

“ನಿಮ್‌ ಹೆಸ್ರು ಭಾಳ ವಿಚಿತ್ರವಾಗೈತೆ, ಮುಸ್ಲೀಂ ಹೆಸ್ರಾ ಸಾರ್”

“ಹೂ ಯಶೋದಕ್ಕ” ಅಂದೆ

ಒಂದು ಚೆಂದದ ನಗು ನಕ್ಕು ಅಲ್ಲಿಂದ ಹೊರಟರು. ತಿರುಗಾ ದಿನ ಬಂದವರೆ “ಹೇ ಸಾರ್‌ ಸುಳ್‌ ಹೇಳ್ತೀರಲ್ಲ ಸಾರ್‌, ಪ್ರವೀಣ್‌ ಸರ್‌ ನ ಕೇಳ್ದೆ ಅಲ್ಲ ಅಂತ ಹೇಳಿದ್ರು”

“ಹಾಗಾದ್ರೆ ಅಲ್ಲ ಬಿಡು ಯಶೋದಕ್ಕ” ಅಂತ ನಾನೂ ಸಣ್ಣ ನಗು ನಕ್ಕೆ.

ಕ್ಲಾಸು ಮುಗಿದು ಬಿಡುವಿನ ಸಮಯದಲ್ಲಿ ಲ್ಯಾಬಿನಲ್ಲಿ ಓದುತ್ತಾ ಕೂತಿರುತ್ತಿದ್ದ ನನ್ನನ್ನು ಕಂಡ ಕೂಡಲೇ ಮಾತನಾಡಿಸುವ ಸಲುವಾಗಿ ಅವಸರದಿಂದ ಓಡುತ್ತಿದ್ದ ಯಶೋದಕ್ಕ ಬಂದು ಕೂತುಬಿಡೋರು. ಮಾತಾಡುತ್ತ “ಯಶೋದಕ್ಕ ಅಮ್ಮ ಇವತ್ತು ದೋಸೆ ಮಾಡಿತ್ತಂತೆ” ಅಂತ ಮುಖ ಸಣ್ಣ ಮಾಡಿಕೊಂಡು ಹೇಳಿದರೆ, “ಹೇ ಅದೇನ್‌ ಬಿಡಪ ನಾಳೆ ಅನ್ನಪೂರ್ಣಮ್ಮಗಿಂತ ಚೆನ್ನಾಗ್‌ ಮಾಡ್ಕಂಡ್‌ ಬರ್ತೀನಿ” ಅಂದು ಬಿರುಗಾಳಿಯಂತೆ ಬಾಗಿಲು ದಾಟಿಬಿಡುತ್ತಿದ್ದರು.

ಬೆಳಿಗ್ಗೆಗಾಗಲೇ ಗುಡ್‌ ಮಾರ್ನಿಂಗ್‌ ಅಂತ ವಿಷ್‌ ಮಾಡಿದವರೆ ದೋಸೆ ಪಲ್ಯ ಚಟ್ನಿ ತಂದಿದ್ದೀನಿ ಮೊದ್ಲು ಊಟ ಮಾಡಪಾ ಅಂತ ಪ್ರೀತಿಯಿಂದ ಬಾಕ್ಸ್‌ ಕೈಗಿತ್ತು ತಮ್ಮ ಪಾಡಿಗೆ ತಾವು ಕೆಲಸದಲ್ಲಿ ನಿರತರಾಗಿಬಿಡುತ್ತಿದ್ದರು. ತನ್ನ ವ್ಯಾಪ್ತಿಯಲ್ಲಿ ಏನೆಲ್ಲಾ ಸಾಧ್ಯವೋ ಅದನ್ನು ಪ್ರೀತಿಯಿಂದ ಮಾಡಿಕೊಂಡು ಬಂದು ಥೇಟ್‌ ಅಕ್ಕನಂತೆಯೇ ಬಾಕ್ಸ್‌ ನ ಮೂಲಕ ಅಕ್ಕರೆ ತೋರಿಸುತ್ತಿದ್ದರು.

ಊರಿಗೆ ಹೋದವನೇ ಅಪ್ಪನ ಲೈಬ್ರರಿಯಿಂದ “ಮಲೆಗಳಲ್ಲಿ ಮದುಮಗಳು” ಕಾದಂಬರಿ ಕದ್ದು ತಂದಿದ್ದೆ. ಸಮಯ ಸಿಕ್ಕಾಗಲೆಲ್ಲಾ ಓದುತ್ತಾ ಕುಳಿತಿರುತ್ತಿದ್ದ ನನ್ನನ್ನು ಯಶೋದಕ್ಕ ಅನ್ಯಗ್ರಹ ಜೀವಿಯಂತೆ ಕೆಲವು ಬಾರಿ ನೋಡಿದ್ದುಂಟು. ಯಾಕ್‌ ಇಷ್ಟ್‌ ಓದ್ತೀರಿ? ಯಾವಾಗಿಂದ ಓದ್ತಿದ್ದೀರಿ? ಎಷ್ಟು ಓದೀರಿ? ಏನ್‌ ಓದಿರಿ ಇತ್ಯಾದಿ ಇತ್ಯಾದಿಗಳನ್ನು ಕೇಳಿ ನಮ್ಮ ಮೆದುಳಿನ ಮನಸ್ಸಿನ ಗಣಿಗಾರಿಕೆ ಮಾಡುತ್ತಿದ್ದರು.

ಇದ್ದಕ್ಕಿದ್ದ ಹಾಗೆ ಬೇರೊಂದು ಕಾಲೇಜಿನಲ್ಲಿ ಕೆಲಸ ಸಿಕ್ಕು ಹೊರಟುಬಿಟ್ಟಾಗ ಹಡೆದ ಮಗನನ್ನೇ ಕಳಿಸಿ ಕೊಡುತ್ತಿರುವಂತೆ ಕಣ್ಣೀರು ಹಾಕಿಬಿಟ್ಟರು. ಅಲ್ಲಿಂದ ಬಂದ ನಂತರ ಆಗಾಗ ಕಾಲ್‌ ಮಾಡಿ ಕುಶಲ ಕ್ಷೇಮವನ್ನು ಬಾಯ್ತುಂಬಾ ಕೇಳುತ್ತಿದ್ದರು. ಒಂದು ದಿನವಂತೂ ಮಾತನಾಡುತ್ತಾ “ಅಲ್ಲಪಾ ನೀನು ಕಂಪೂಟ್ರು ಲ್ಯಾಬಲ್ಲಿ ಬಿಟ್ಟೋಗಿದ್ಯಲ ಆ ಬುಕ್‌ ಓದಿ ಮುಗಿಸಿದೆ” ಅಂದುಬಿಟ್ಟರು.

ಅರ್ರೆ ನನಗೆ ತಿಳಿದಿರುವಂತೆ ಅಲ್ಲಾವ ಬುಕ್‌ ಬಿಟ್ಟಿರಲಿಲ್ಲವಲ್ಲಾ! ಕಂಪ್ಯೂಟರ್‌ ಟೆಕ್ಟ್‌ ಬುಕ್‌ ಯಶೋದಕ್ಕ ಯಾಕೆ ಓದಿಯಾರು. “ಯಾವ್‌ ಬುಕ್‌ ಬಿಟ್ಟಿದ್ದೆ ಯಶೋದಕ್ಕ ನೆನಪಾಗ್ತಿಲ್ಲ”

“ಅದೇ ಕಣಪಾ, ಕುವೆಂಪುದು ಮಲೆಗಳಲ್ಲಿ ಮದುಮಗಳು ಓದಿ ಮುಗಿಸಿದೆ ಕಣಪಾ”

“ಸುಳ್‌ ಹೇಳ್ಬೇಡ ಯಶೋದಕ್ಕ”

“ನಾ ಯಾಕ್‌ ಸುಳ್‌ ಹೇಳ್ಳಿ, ಬೇಕಾದ್ರೆ ಏನೇನಾಯ್ತು ಅಂತ ಹೇಳ್ನೇನಪ್ಪಾ” ಅಂದು ಬಿಟ್ಟಾಗ ಹೇಳ ತೀರದ ಖುಷಿ.

ರಾಜೇಂದ್ರನೊಟ್ಟಿಗೆ ಏನೋ ಮಾತಾಡುವಾಗ ಬೆಸಗರಳ್ಳಿ ರಾಮಣ್ಣ ಕಮ್ಮಟಕ್ಕೆ ಏನೆಲ್ಲಾ ಓದಿಕೊಂಡು ಬರಬೇಕು, ಹ್ಯಾಗೆಲ್ಲಾ ಓದಿಕೊಂಡು ಬರಬೇಕೆಂದು ಹೇಳುವಾಗ ಇದೆಲ್ಲವೂ ನೆನಪಾದವು.

‍ಲೇಖಕರು Admin

28 October, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading