ಯಕ್ಷ`ಗಾನ' ವಿದ್ವಾನರು

ಕನ್ನಡಕ್ಕೊಬ್ಬರೇ ಯಕ್ಷ`ಗಾನ’ ವಿದ್ವಾನರು
ರಾಘವೇಂದ್ರ ಬೆಟ್ಟಕೊಪ್ಪ
ಓದಿದ್ದು ಸಂಸ್ಕೃತ. ಸಾಧನೆ ಮಾಡಿದ್ದು ಯಕ್ಷಗಾನದಲ್ಲಿ. ಅವರು ಯಕ್ಷಗಾನದಲ್ಲಿ ಭಾಗವತರಾಗಿ ರಂಗಸ್ಥಳಕ್ಕೆ ಬಂದರೆ ರಂಗಸ್ಥಳಕ್ಕೂ ಸಂಚಲನ ಉಂಟು ಮಾಡುತ್ತದೆ. ಅಂಥ ಮಧುರ ಸ್ವರದ, ಯಕ್ಷಗಾನ ಭಾಗವತಿಕೆಯಲ್ಲಿ ವಿವಿಧ ರಾಗಗಳನ್ನು ವಿಶಿಷ್ಟವಾಗಿ ಬಳಸಿ ತಮ್ಮದೇ ಆದ ಛಾಪು ಉಳಿಸಿಕೊಂಡವರು. ಅನೇಕ ಕಥಾನಕಗಳಿಗೆ ವಿದ್ವಾನರಿದ್ದರೆ ಮಾತ್ರ ಅರ್ಥಪೂರ್ಣ ಎಂಬಷ್ಟು ಅಪ್ಯಾಯಮಾನವಾಗಿದೆ. ಅವರ ಎತ್ತರ ಸಾಮಾನ್ಯವಾಗಿ ನಿಲುಕದಷ್ಟಾಗಿದೆ. ಪ್ರೇಕ್ಷಕರ, ಅಭಿಮಾನಿಗಳ ಮನದಲ್ಲಿ ಸಾತ್ವಿಕ ಸ್ಥಾನ ಗಳಿಸಿದ್ದಾರೆ. ಅವರ ಸಾತ್ವಿಕ ಗುಣ ಅವರ ಕಲಾ ಪ್ರೌಢಿಮೆಗೆ ಇನ್ನಷ್ಟು ಹೊಳಪು ನೀಡಿದೆ, ನೀಡುತ್ತಿದೆ. ವಿದ್ವಾನ್ ಎಂಬ ಶಬ್ಧ ಅನ್ವರ್ಥವೂ ಆಗಿದೆ.
ಈ ಯಕ್ಷಗಾನಕ್ಕೆ ಒಬ್ಬರೇ ವಿದ್ವಾನರು. ಅಂಥ ವಿದ್ವಾನರಿಗೆ ಇಂದು ಉತ್ತರ ಕನ್ನಡದ ಯಲ್ಲಾಪುರದಲ್ಲಿ ಸನ್ಮಾನ. ಶಿಷ್ಯರು ಸೇರಿ ಅಭಿನಂದಿಸುವ ಅಮೃತ ಘಳಿಗೆ.
ವಿದ್ವಾನ್ 1961ರ ಏಪ್ರಿಲ್ 20ರಂದು ಯಲ್ಲಾಪುರ ತಾಲೂಕಿನ ಮಾಗೋಡು ಗ್ರಾಮದ ಮೊಟ್ಟೆಗದ್ದೆಯಲ್ಲಿ ಗಣಪತಿ ಎಂಬ ಬಾಲ ಇಂದು ಮೂರು ದಶಕಗಳಿಗೂ ಅಧಿಕ ಕಾಲದಿಂದ ರಂಗಸ್ಥಳದಲ್ಲಿ ವಿಶೇಷವಾಗಿ ಗಮನ ಸೆಳೆಯುವಂತಾದ ದಾರಿ ಸಣ್ಣದಲ್ಲ. ವಂಕಟ್ರಮಣ ಭಟ್ಟ ಹಾಗೂ ಸರಸ್ವತಿ ಭಟ್ಟ ಅವರ ಮಗ ಗಣಪತಿ ಭಟ್ಟ ಮೊಟ್ಟೇಗದ್ದೆ ಓದಿದ್ದು ವೇದಾದ್ಯಯನ. ಸಂಸ್ಕøತದ ಭಾಷೆಯಲ್ಲಿ ವಿದ್ವತ್ ಪದವಿ. ಕರ್ನಾಟಕ ಸಂಗೀತದಲ್ಲಿ ಸೀಯರ್ ಗ್ರೇಡ್ ಕೂಡ ಪಡೆದವರು. ಇದರ ಜೊತೆಗೇ ಯಕ್ಷಗಾನದ ಹಾಡುಗಾರಿಕೆಯಲ್ಲಿ ವಿಶೇಷ ಅಧ್ಯಯನ ಮಾಡಿ ಪ್ರೇಕ್ಷಕರ ಮುಂದೆ ವಿಶೇಷವಾಗಿ ನಿಲ್ಲುವಂತಾದರು.
ಉಡುಪಿಯ ಯಕ್ಷಗಾನ ಕೇಂದ್ರದ ಕೋಟ ಮಹಾಬಲ ಕಾರಂತ, ನೀಲಾವರ ರಾಮಕೃಷ್ಣಯ್ಯ ಅವರಲ್ಲಿ ಅಧ್ಯಯನ ನಡೆಸಿದವರು. ಗಂಗಾರಾಮ ಭಟ್ಟ, ಪರಮೇಶ್ವರ ಭಟ್ಟ, ಪ್ರೋ. ಎಂ.ರಾಜಗೋಪಾಲ ಆಚಾರ್ಯ ಅವರಲ್ಲಿ ಸಂಗೀತ ಅಭ್ಯಾಸ ಮಾಡಿದವರು. ಇದರ ಜೊತೆಗೇ ಉಡುಪಿ ಕೇಂದ್ರದಲ್ಲಿ, ಶ್ರೀಮಯ ಯಕ್ಷಗಾನ ಕೇಂದ್ರ ಗುಣವಂತೆಯಲ್ಲಿ ಪ್ರಾಧ್ಯಾಪಕರಾಗಿ ಕೂಡ ಕಾರ್ಯ ಮಾಡಿದರು. ಯಕ್ಷಗಾನ ಮೇಳಗಳಾದ ಪಂಚಲಿಂಗ, ಇಡಗುಂಜಿ ಮೇಳಗಳ ಜೊತೆ ಶಿವರಾಮ ಕಾರಂತ ಯಕ್ಷರಂಗದಲ್ಲಿ ಭಾಗವತರಾಗಿ ಕಾರ್ಯ ಮಾಡಿದವರು. ವೃತ್ತಿ, ಪ್ರವೃತ್ತಿಯ ಜೊತೆ ಯಕ್ಷಗಾನವನ್ನು ಉಸಿರಾಗಿಸಿಕೊಂಡರು. ರಷ್ಯಾ, ದುಬೈ, ಅಬುದಾಬಿ, ಅಮೇರಿಕಾ, ಪ್ರಾನ್ಸ ದೇಶಗಳಲ್ಲಿ ಯಕ್ಷಗಾನ ಹಾಡುಗಾರಿಕೆಗೆ ತೆರಳಿದವರು. ರಾಜ್ಯ, ಹೊರ ರಾಜ್ಯಗಳಲ್ಲಿ ಅವರ ಪ್ರದರ್ಶನ ಆದದ್ದು ಲೆಕ್ಕವಿಲ್ಲ.
ಇಷ್ಟಕ್ಕೂ ವಿದ್ವಾನರು ಯಾಕೆ ಇಷ್ಟ ಆಗುತ್ತಾರೆ ಎಂದರೆ ಅವರ ಕನ್ನಡದ ಉಚ್ಛಾರದಲ್ಲಿ ಸ್ಪಷ್ಟತೆ, ನಿಖರತೆ ಹಾಗೂ ಕ್ಲಿಷ್ಟ ಶಬ್ಧವೂ ಇವರಿಗೆ ಸುಲಲಿತ ಉಚ್ಛಾರ ಭಾಗವತಿಕೆಯ ಹೈಲೈಟ್‍ಗಳಲ್ಲಿ ಒಂದು. ಸಾಹಿತ್ಯದ ವಿಂಗಡನೆ, ಅವುಗಳನ್ನು ಯಾವ ರಾಗ ಹಾಕಿದರೆ ಪರಿಣಾಮಕಾರಿ ಎಂಬುದು ನೋಡಿ ಪ್ರಸ್ತುತಗೊಳಿಸುವ ಪರಿ ಹಾಗೂ ಭಾವನಾತ್ಮಕವಾಗಿ ದೃಶ್ಯ ಕಟ್ಟಿಕೊಡುವಲ್ಲಿ ಅವರು ನೀಡುವ ಧ್ವನಿ, ನವರಸ ಭಾವಗಳಿಗೆ ಒತ್ತು ನೀಡುವದೂ ಅವರ ವಿಶೇಷತೆಗಳಿಗೆ ಗರಿ. ಸುಮಾರು 70ಕ್ಕೂ ಅಧಿಕ ರಾಗಗಳನ್ನು ಯಕ್ಷಗಾನಕ್ಕೆ ಅಳವಡಿಸಿ ಹಾಡಿದ್ದು ಅವರಿಗೆ ಯಕ್ಷಗಾನದ ಮೇಲಿನ ಮಮತೆ, ಪ್ರೀತಿ ಅನಾವರಣಗೊಳಿಸುತ್ತದೆ.
ಇಂಥ ಅನರ್ಘ್ಯ ಪ್ರತಿಭೆಗೆ ಪೇಜಾವರ ಶ್ರೀಗಳಿಂದ ರಾಮ ವಿಠಲ ಪ್ರಶಸ್ತಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರಿಂದ ಗೌರವ ಪ್ರಶಸ್ತಿ, ಹೈದರಾಬಾದ್ ಕನ್ನಡ ಸಂಘದಿಂದ ಸಮ್ಮಾನ, ಗಣಪತಿ ಯಕ್ಷಗಾನ ಪ್ರಸಾದನ, ಉಡುಪಿ ಯಕ್ಷಗಾನ ಕೇಂದ್ರದಿಂದ, ಮಂಟಪರ ಏಕ ವ್ಯಕ್ತಿ ಯಕ್ಷಗಾನ ಪ್ರಯೋಗ ಸಾವಿರ ಸಂಭ್ರಮದಲ್ಲಿ ಸಮ್ಮಾನ, ಕೆರೆಮನೆ ಶಂಭು ಹೆಗಡೆ ನಾಟ್ಯೋತ್ಸವ ಪ್ರಶಸ್ತಿ, ಕುಂಭಾಶಿಯಲ್ಲಿ ಯಕ್ಷ ಗಂಧರ್ವ ಪ್ರಶಸ್ತಿ, ಸಾಲಿಗ್ರಾಮದಿಂದ ಅವರ ಅಭಿಮಾನಿಗಳಿಂದ ಸಮ್ಮಾನ ಹೀಗೆ ಗೌರವಾದರದ ಪಟ್ಟಿ ಬೆಳೆಯುತ್ತಲೇ ಇದೆ.
ಶಿವರಾಮ ಕಾರಂತರು, ಮಹಾಬಲ ಹೆಗಡೆ ಅವರಂಥಹ ದಿಗ್ಗಜರು ಮೆಚ್ಚಿದ ಭಾಗವತರಾದ ವಿದ್ವಾನರು ಮಂಟಪ ಪ್ರಭಾಕರರ ಉಪಾಧ್ಯಾಯರ ಏಕವ್ಯಕ್ತಿ ರೂಪಕಕ್ಕೆ ಧ್ವನಿಯಾದವರು. ಅನೇಕ ಹಿರಿಯರ ಗರಡಿಯಲ್ಲಿ ಪಳಗಿದ ಮಾಗಿದ ವಿದ್ವಾನರು ಎಂದೂ ಬೀಗಲಿಲ್ಲ. ಅಷ್ಟು ಸರಳರು. ಹೌದಾ ಎಂದು ಎಳೆಯರಲ್ಲಿ ಎಳೆಯರಾಗಿ, ದೊಡ್ಡವರ ಜತೆ ದೊಡ್ಡವರಾಗಿ ನಡೆದುಕೊಳ್ಳುವ ಪರಿ ಅನನ್ಯ, ಮಾದರಿ.

‍ಲೇಖಕರು avadhi

October 3, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: