ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೌಢ್ಯಾಚರಣೆ ವಿರೋಧಿಸುವ ಕಥಾವಸ್ತು ‘ಕೌಮುದಿ’

-ಗೋಪಾಲ ತ್ರಾಸಿ

ಒಂದು ಸಮಯ ಇತ್ತು, ಮುಂಬೈಯಲ್ಲಿ ನಡೆಯುವ ಪ್ರಸಿದ್ಧ MAMI (Mumbai Academy of Moving Image) ಫಿಲ್ಮ ಫೆಸ್ಟಿವಲ್ ನ್ನು ಕಾದು, ಹೇಗೆಹೇಗೋ ಸಮಯ ಹೊಂದಿಸಿಕೊಂಡು ಆದಷ್ಟು ಸಿನೇಮಾಗಳನ್ನು ನೋಡುತ್ತಿದ್ದೆ. ಹಿರಿಯರಾದ ಸದಾನಂದ ಸುವರ್ಣರ ಒಡನಾಟ ಭಾಗ್ಯದಿಂದಾಗಿ, ರಂಗಭೂಮಿಗೆ ಸಮೀಪ ಇರುವ ಹೊಸ ಅಲೆಯ ‘ಕಲಾತ್ಮಕ ಚಿತ್ರಗಳ’ ಕುರಿತು ಒಲವು ಬೆಳೆಯಲು ಕಾರಣವಾಯಿತು. ಈ ಪೀಠಿಕೆಗೆ ಕಾರಣ : ಇತ್ತೀಚೆಗೆ ಮುಂಬೈಯಲ್ಲಿ ನಡೆದ ಪ್ರತಿಷ್ಠಿತ ಜಾಗ್ರಣ ಫಿಲ್ಮ ಫೆಸ್ಟಿವಲ್ ನಲ್ಲಿ ‘ಕೌಮುದಿ’ ಕನ್ನಡ ಚಲನ ಚಿತ್ರ ವೀಕ್ಷಿಸುವ ಸದಾವಕಾಶ ದೊರೆಯಿತು. ಅದೂ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿರುವ ನಟಿ ಅಕ್ಷತಾ ಪಾಂಡವಪುರ ಅವರ ಸಮಕ್ಷಮದಲ್ಲಿ.

ಕೆಲವು ಬುಡಕಟ್ಟು ಸಮುದಾಯಗಳಲ್ಲಿ ಇಂದಿಗೂ ಚಲಾವಣೆಯಲ್ಲಿರುವ, ಶಿಕ್ಷಣ ಮತ್ತು ವೈಜ್ಞಾನಿಕ ತಿಳಿವಿನ ಕೊರತೆಯಿಂದಾಗಿ ಭಯಬೀತಿಯಿಂದಲೇ ಆಚರಣೆಯಲ್ಲಿರುವ ಮೊದಲ ಬಾರಿ ಮುಟ್ಟಾದ ಹೆಣ್ಮಕ್ಕಳನ್ನು ಮತ್ತು ಪ್ರತಿ ಬಾರಿ ಹೆರಿಗೆಯಾದಾಗ, ಹಸಿ ಬಾಣಂತಿ-ಮಗುವನ್ನು ಮೈಲಿಗೆಯ ನೆಪದಲ್ಲಿ ಊರ ಹೊರಗಿನ ‘ಟೆಂಪರರಿ ಟೆಂಟ್’ ನಲ್ಲಿಡುವ ಮೌಢ್ಯಾಚರಣೆಯನ್ನು ವಿರೋಧಿಸುವ ಕಥಾವಸ್ತುವುಳ್ಳ ಚಿತ್ರ “ಕೌಮುದಿ”.   

ಹೆಣ್ಣು ಮಕ್ಕಳ ಬದುಕು, ಸ್ವಾಸ್ಥ್ಯದ ಸಂದೇಶ ಕಾಳಜಿವುಳ್ಳ ಕೌಮುದಿ ಚಿತ್ರವನ್ನು ಅಷ್ಟೇ ಕಲಾತ್ಮಕವಾಗಿ ಶೃದ್ಧೆಯಿಂದ ನಿಭಾಯಿಸಿದವರು ನಿರ್ದೇಶಕಿ ಯಶೋದ ಪ್ರಕಾಶ್. ನಿರ್ಮಾಣದ ಹೊಣೆ ಹೊತ್ತವರು ಅವರ ಗಂಡ ಪ್ರಕಾಶ್ ಅವರು. ಕ್ಯಾಚಿ ಲೊಕೇಶನ್, ಅರ್ಥಪೂರ್ಣ ದ್ರಶ್ಯಾವಳಿ, ಪರಿಣಾಮಕಾರಿ ಸೌಂಡ್, ಹದವಾದ ಸಂಗೀತ, ಚಿತ್ರಕಥೆಗೆ ಪೂರಕವಾಗಿವೆ. 

ಚಿತ್ತವ್ವನ ಪಾತ್ರವನ್ನು ಅಕ್ಷರಶಃ ಉಸಿರಾಡಿ ಜೀವಿಸಿದವರು NSD ಕಲಾವಿದೆ ಅಕ್ಷತಾ ಪಾಂಡವಪುರ. ಬಾಣಂತಿಯಾಗಿ ಈಕೆಯ ಬಾಡಿ ಲಾಂಗ್ವೇಜ್ ಮತ್ತು ಹಾವಭಾವ, ರೋಷ, ಅಸಹಾಯಕತೆ, ಹತಾಶೆ…ಒಟ್ಟಾರೆ ನಟನೆಯ ಸೊಭಗನ್ನು ವೀಕ್ಷಿಸಿಯೇ ಸವಿಯಬೇಕು. (ಈಕೆಯ ನಟನೆಯ ಹೆಚ್ಚಿನ ಶಾಟ್, ಕ್ಲೋಸ್ ಅಪ್ ಗಳಲ್ಲಿ ಚಿತ್ರೀಕರಿಸಿದ್ದು ನಿರ್ದೇಶಕಿಯ ಸೃಜನಶೀಲ ಜಾಣ್ಮೆಯೆ ಹೌದು.)

ಹೆಂಡತಿ ಚಿತ್ತವ್ವ ಮತ್ತು ಮಗುವನ್ನು ಜೀವದಂತೆ ಪ್ರೀತಿಸುವ ಆದರೆ ಏನೂ ಮಾಡಲಾಗದ ‘ಬೇಚಾರ’ ಗಂಡನ ಪಾತ್ರದಾರಿ ನಟರಾಜ್ ಅವರ ಅಚ್ಚುಕಟ್ಟಾದ ಅಭಿನಯ ಗಮನಾರ್ಹ; ಬಾಣಂತಿ ಮಗುವಿನ ಆರೈಕೆ ಮಾಡುವಲ್ಲಿ ಕಕ್ಕುಲಾತಿ ತೋರುವ ಸೀಮಿತ ಪಾತ್ರವಾದ ಅತ್ತಿಗೆ ಪಾತ್ರ ವಹಿಸಿದ ಜಲಜ ; ನಂಬಿಕೆ, ಸಂಪ್ರದಾಯದ ಗುತ್ತಿಗೆ ಹೊತ್ತಂತೆ ದರ್ಪ ತೋರುವ ಸಮುದಾಯದ ‘ಕಡಕ್’ ಗೌಡನ ಪಾತ್ರದಾರಿ  ಶ್ರೀಧರ; ಇವರೆಲ್ಲ ಹಿತಮಿತವಾಗಿ ಅಭಿನಯಿಸಿ ಆಯಾ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಜೊತೆಗೆ, ತುಸುವೇ  ಜಾಗ್ರತೆಯ ಕಿರಣದಂತೆ ಕಾಣಬರುವ ಶಾಲೆಗೆ ಹೋಗುತ್ತಿರುವ ಗೌಡನ ಮಗಳ ಪಾತ್ರ- ಮೌಢ್ಯದ ಬಿಸಿಲಿನ ಝಳಪಲ್ಲಿ ಹಿತವಾಗಿ ಬೀಸುವ ತಂಗಾಳಿಯಂತೆ ಸುಳಿದಾಡುವ ಈ ಪಾತ್ರವನ್ನು ಸಹಜವಾಗಿ ನಿರ್ವಹಿಸಿದ ಬಾಲಕಿ ಅಂಕಿತಳ ಅಭಿನಯಕ್ಕೊಂದು ಸಲಾಮ್ ಸಲ್ಲಲೇಬೇಕು.  

“(ಅಪ್ಪನೆದುರು ಕತ್ತಿ ಬಿಸಾಕಿ) ತಗೋ ಕಡಿ ನನ್ನ ತಲಿ, ಜಾತಿ ಸಂಪ್ರದಾಯ ಉಳಿಸಿಕೊಳ್ಳಲು ಮಗಳ ತಲೆಯನ್ನೇ ಕಡಿದ ಗೌಡ ಅಂತ ಊರವರಿಗೆ ಒಳ್ಳೇ ಉದಾಹರಣೆ ಆಗ್ತೀ….” (ಗೌಡನ ಮಗಳು, ಗೌಡನೊಂದಿಗೆ)

“ನಮ್ಮ ಬದುಕಲ್ಲಿ ಎಂದಿಗೂ ಈ ಬೆಳದಿಂಗಳು ಬರೋದೇ ಇಲ್ಲ..” (ಹಸುಗೂಸಿನ ಜೊತೆ ಚಿತ್ತವ್ವ)

“ದೇವರು ಕೊಲ್ಲೋದಿಲ್ಲ, ಕಾಪಾಡ್ತಾನೆ…(ಚಿತ್ತವ್ವ)

“ಮಗು ಹುಟ್ಟು, ಹಬ್ಬ; ಸೂತ್ಕ ಅಲ್ಲ!“ (ಅಂಗನವಾಡಿ ದಾದಿ)

ಹೀಗೆ ಅನೇಕ ಕಾಡುವ ಸಂಭಾಷಣೆ –  ದ್ರಶ್ಯ –  ಸನ್ನಿವೇಶಗಳು  ಚಿತ್ರದ ಪ್ಲಸ್ ಪಾಯಿಂಟ್ಸ್. 

ಅಕ್ಷತಾ ಪಾಂಡವಪುರ ಅವರ ಚಿತ್ತವ್ವನ ಪಾತ್ರಕ್ಕೆ ವಿಶೇಷವಾಗಿ ತೀರ್ಪುಗಾರರ ಮೆಚ್ಚುಗೆಯ ‘ಅತ್ಯುತ್ತಮ ನಟಿ’ ಪ್ರಶಸ್ತಿಗೆ ಅರ್ಹವಾಗಿದ್ದಾರೆ. ಹಿಂದಿಯ ಯುವನಟ ವಿನೀತ್ ಕುಮಾರ್ ಸಿಂಗ್ ಅತ್ತ್ಯುತ್ತಮ ನಟ ಪ್ರಶಸ್ತಿಗೆ ಭಾಜನರಾದರು. ಪ್ರಶಸ್ತಿಯನ್ನು ಪ್ರಸಿದ್ಧ ನಟ ಯಶಪಾಲ ಶರ್ಮಾ ನೀಡಿ ಸಹಕರಿಸಿದರು.

‍ಲೇಖಕರು Admin

24 November, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading