ಮೋಟುಗೋಡೆಯಾಚೆ ಇಣುಕಿ. ಈ ಬ್ಲಾಗ್ ಹೆಸರು ಕೇಳಿಯೇ ಇರುತ್ತೀರಿ. ಈ ಬ್ಲಾಗ್ ಮೂಲಕ ಬ್ಲಾಗಮಂಡಲದ ಎಲ್ಲ ಜೀವಿಗಳಿಗೆ ಕಚಗುಳಿ ಇಡುತ್ತಿರುವವರು ಮಿತ್ರ ಸುಶ್ರುತ ದೊಡ್ಡೇರಿ ಮತ್ತವರ ತಂಡ. ಸುಶ್ರುತ ದೊಡ್ಡೇರಿ ಈಗ ಬ್ಲಾಗ್ ಲೋಕದಿಂದ ಪುಸ್ತಕ ಲೋಕಕ್ಕೆ ಜಿಗಿಯುತ್ತಿದ್ದಾರೆ. ತಮ್ಮ ಗೆಳೆಯರೊಂದಿಗೆ ಸೇರಿ ಒಂದು ಪುಸ್ತಕ ಬರೆದಿದ್ದಾರೆ. ಹೆಸರು “ಚಿತ್ರಚಾಪ”. ಭಾನುವಾರ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಲ್ಲಿ (ಬೆಳಗ್ಗೆ ೧೦ ಗಂಟೆಗೆ) ಇದರ ಬಿಡುಗಡೆ.
ಏನಿದೆ ಪುಸ್ತಕದಲ್ಲಿ? ಈ ಮಿತ್ರರೇ ಬರೆದುಕೊಂಡಿರುವುದು ಹೀಗಿದೆ:
ಪರಿಸರದ ಬಗ್ಗೆ ನಾನು, ಶ್ರೀನಿಧಿ, ಅರುಣ್, ಶ್ರೀನಿವಾಸ್ ಮತ್ತು ಅನ್ನಪೂರ್ಣ -ಹೀಗೆ ಐವರು ಸೇರಿ ಬರೆದಿರುವ ಕಥೆ, ಕವನ, ಲೇಖನ, ಚಾರಣಾನುಭವಗಳನ್ನೊಳಗೊಂಡಿರುವ ಪುಸ್ತಕ ‘ಚಿತ್ರಚಾಪ’, ನಾಡಿದ್ದು ಭಾನುವಾರ ಬಿಡುಗಡೆಯಾಗುತ್ತಿದೆ. ಪ್ರೊ. ಜಿ. ವೆಂಕಟಸುಬ್ಬಯ್ಯ ಪುಸ್ತಕದ ಬಗ್ಗೆ ಮಾತಾಡಲಿದ್ದಾರೆ. ಕಥೆಗಾರ ವಸುಧೇಂದ್ರರ ಮುನ್ನುಡಿಯಿರುವ ಈ ಪುಸ್ತಕವನ್ನು ‘ಪ್ರಣತಿ’ ಪ್ರಕಾಶನ ಹೊರತರುತ್ತಿದೆ.
ಇದು ನಮ್ಮೆಲ್ಲರ ಮೊದಲ ಪುಸ್ತಕ. ಇಷ್ಟು ದಿನವೂ ಈ ಬ್ಲಾಗ್ಗಳ ಮುಚ್ಚಟೆಯ ಲೋಕದಲ್ಲೇ ಇದ್ದವರು ನಾವು.. ಈ ಪುಸ್ತಕದ ಮೂಲಕ ‘ಪುಸ್ತಕ ಲೋಕ’ಕ್ಕೆ ಪಾದಾರ್ಪಣೆ ಮಾಡುತ್ತಿದ್ದೇವೆ. ಮೊದಲ ತೊದಲು… ಹೇಗೋ ಏನೋ ಅರಿಯೆವು… ನೀವೆಲ್ಲ ನಮ್ಮ ಬ್ಲಾಗ್ ಬರಹಗಳಿಗೆ ತೋರಿದ ಪ್ರೀತಿ, ಪ್ರೋತ್ಸಾಹಗಳಿಂದಲೇ ಅರಳಿದ್ದು ನಮ್ಮ ಈ ಪುಸ್ತಕ ಮಾಡುವ ಕನಸು.. ಅಂದುಕೊಳ್ಳುತ್ತಿದ್ದೇನೆ: ನೀವೆಲ್ಲ ಈ ಕಾರ್ಯಕ್ರಮಕ್ಕೆ ಬಂದು, ಈ ಖುಷಿಯ ಕ್ಷಣಗಳಲ್ಲಿ ನಮ್ಮೊಂದಿಗಿದ್ದರೆ ಅದೆಷ್ಟು ಚೆನ್ನ ಅಂತ…






0 Comments