ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೊದಲ ಬಾರಿ scribe ಆಗಿ ಹೋಗಿದ್ದೆ… – ಸುಮಾ ಬರೀತಾರೆ

ಸುಮಾ ಸುಧಾಕಿರಣ್

ಇದೇ ಮೊದಲಬಾರಿಗೆ SSC ಯವರು ನಡೆಸುವ ಕಾಂಪಿಟೇಟಿವ್ ಎಕ್ಸಾಮ್ ಗೆ ಅಂಧ ಪರೀಕ್ಷಾರ್ಥಿಗಳ ಬದಲಿ ಬರಹಗಾರರಾಗಿ(scribe) ನಾವೊಂದಿಷ್ಟು ಗೆಳತಿಯರು ಹೋಗಿದ್ದೆವು. ಬೆಳಗ್ಗೆ ಒಬ್ಬರಿಗೆ ಮತ್ತು ಮಧ್ಯಾಹ್ನ ಒಬ್ಬರಿಗೆ ಹೀಗೆ ಎರಡು ಬಾರಿ ಬರೆದೆವು.
ಅಂಧರ ಬಾಳು ಎಷ್ಟು ಕಷ್ಟವಿರುತ್ತದೆಂಬುದನ್ನು ಹತ್ತಿರದಿಂದ ನೋಡಿದಾಗ ಹೆಚ್ಚು ಅರಿವಾಯಿತು. ಅಂತಹ ಸ್ಥಿತಿಯಲ್ಲಿದ್ದರೂ ಅವರ ಉತ್ಸಾಹ , ಆತ್ಮವಿಶ್ವಾಸ ನಿಜಕ್ಕೂ ಸ್ಫೂರ್ತಿದಾಯಕವಾಗಿತ್ತು. ಏನೋ ನನ್ನ ಕೈಲಾದ ಸಹಾಯ ಮಾಡಿದೆನೆಂಬ ಸಮಾಧಾನ ದೊರಕಿತ್ತು.
ಆದರೆ ಪರೀಕ್ಷಾ ಕ್ರಮ ನೋಡಿದಾಗ ವ್ಯವಸ್ಥೆಯ ಬಗ್ಗೆ ದೊಡ್ಡ ನಿರಾಶೆಯಾಗಿದ್ದು ಸತ್ಯ. ಇದು ಮನದಲ್ಲಿ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿತ್ತು.
ಮೊದಲನೆಯದಾಗಿ ಸ್ರ್ಕೈಬ್ ಕೆಲಸ ಹೇಗೆಂದರೆ ಕೊಟ್ಟಿರುವ ಪ್ರಶ್ನೆಗಳನ್ನು ಮತ್ತು ಉತ್ತರಗಳನ್ನು ನಾವು ಪರೀಕ್ಷಾರ್ಥಿಗೆ ಓದಿ ಹೇಳಬೇಕು ಮತ್ತು ಅದಕ್ಕೆ ಅವರು ಸೂಚಿಸಿದ ಸರಿಯಾದ ಉತ್ತರವನ್ನು ಗುರುತಿಸಬೇಕು. ಇದನ್ನೆಲ್ಲ ಗಮನಿಸಲು ಪಕ್ಕದಲ್ಲಿ ಒಬ್ಬ ಇನ್ವಿಜಿಲೇಟರ್ ಇರುತ್ತಾರೆ.
ನನಗೆ ಬೆಳಗಿನ ಪರೀಕ್ಷೆಯಲ್ಲಿ ಸಿಕ್ಕಿದ ಪರೀಕ್ಷಾರ್ಥಿ ಮೂರನೆಯ ಬಾರಿ ಈ ಪರೀಕ್ಷೆಯನ್ನು ಎದುರಿಸುತ್ತಿರುವುದಾಗಿ ಹೇಳಿಕೊಂಡ. ಮೊದಲೆರಡರಲ್ಲೂ ಆಯ್ಕೆಯಾಗಲಿಲ್ಲವೆಂದೂ , ಕಷ್ಟಕರವಾದ ಗಣಿತದ ಪ್ರಶ್ನೆಗಳಿಂದಲೇ ಹಾಗಾಯಿತೆಂದೂ ಹೇಳಿದ. ನನ್ನ ಓದಿನ ಬಗ್ಗೆ ವಿಚಾರಿಸಿಕೊಂಡವ ನಾನೂ ಗಣಿತದ ವಿಧ್ಯಾರ್ಥಿ ಅಲ್ಲವೆಂದು ತಿಳಿದು ಛೆ ! ಎಂದು ಅಲವತ್ತುಕೊಂಡ. ನಂತರ ಪರೀಕ್ಷೆ ಪ್ರಾರಂಭವಾಯಿತು. ಪ್ರಶ್ನೆಗಳನ್ನು ಓದಿ ಹೇಳುತ್ತಿದ್ದಂತೆ ಉತ್ತರಿಸುತ್ತಿದ್ದ . ಸಾಮಾನ್ಯ ಜ್ಞಾನದ ಪ್ರಶ್ನೆಗಳನ್ನೆಲ್ಲ ಚೆನ್ನಾಗಿಯೆ ಉತ್ತರಿಸಿದ್ದ. ಗಣಿತದ ವಿಭಾಗ ಬಂದಾಗ ಮಾತ್ರ ನಿಧಾನವಾಗಿ “ನಿಮಗೆ ಗೊತ್ತಿರುವುದನ್ನು ಮಾಡಿಬಿಡಿ ” ಎಂದುಬಿಟ್ಟ. ಒಮ್ಮೆ ನನಗೆ ಗೊತ್ತಿರುವುದನ್ನೆ ಬರೆದುಬಿಡಲೇ ಎನ್ನಿಸಿದರೂ , ನಿಯಮ ಹಾಗಿಲ್ಲವೆಂದು ಜ್ಞಾಪಿಸಿದೆ . ಎಲ್ಲರೂ ಹಾಗೆ ಮಾಡುತ್ತಿದ್ದಾರೆ ಗಮನಿಸಿ ಎಂದ ಆತ. ಸುತ್ತಮುತ್ತ ನೋಡಿದರೆ ಅವನೆಂದದ್ದು ನಿಜವಾಗಿತ್ತು .ಪಕ್ಕದಲ್ಲಿದ್ದ ಇನ್ವಿಜಿಲೇಟರ್ ತನಗೂ ಇಲ್ಲಿ ನಡೆಯುತ್ತಿರುವುದಕ್ಕೂ ಸಂಭಂದವೇ ಇಲ್ಲದಂತೆ ಸುಮ್ಮನೇ ಕುಳಿತಿದ್ದ. ಕೊನೆಗೆ ಸಾಧ್ಯವಾದಷ್ಟು ಪ್ರಶ್ನೆಯನ್ನು ವಿವರಿಸಿ ಹೇಳಿ ಆತನಿಂದಲೇ ಉತ್ತರ ಪಡೆದು , ಬರೆದೆ.

“ಡಿ” ಗ್ರೂಪಿನ ಕೆಲಸಗಳ ಆಯ್ಕೆಗೆ ಅದರಲ್ಲೂ ಅಂಧರಿಗೆ ಅಷ್ಟೊಂದು ಕಠಿಣ ಗಣಿತದ , ಇಂಗ್ಲೀಷ್ ವ್ಯಾಕರಣದ ಪ್ರಶ್ನೆಗಳ ಅವಶ್ಯಕತೆ ಇದೆಯೆ ಎನ್ನಿಸಿತ್ತು ಆ ಪ್ರಶ್ನೆಗಳನ್ನು ನೋಡಿದಾಗ.
ಲಂಚ್ ಸಮಯದಲ್ಲಿ ಕೇಳಿದಾಗ ಹೆಚ್ಚಿನ ಗೆಳತಿಯರಿಗೆ ಇದೇ ಅನುಭವವಾಗಿತ್ತೆಂದರು.
ನಂತರ ಮಧ್ಯಾಹ್ನದ ಪರೀಕ್ಷೆಯಲ್ಲಿ ಇನ್ನೂ ವಿಚಿತ್ರ ಅನುಭವವಾಯಿತು. ಆ ಪರೀಕ್ಷಾರ್ಥಿಯು ಮೊದಲೇ ಸಂಗೀತವೊಂದನ್ನು ಬಿಟ್ಟು ತನಗೇನೂ ಬರುವುದಿಲ್ಲವೆಂದೂ , ಗೆಳಯರ ಒತ್ತಾಯಕ್ಕಾಗಿ ಈ ಪರೀಕ್ಷೆಗೆ ಬಂದಿರುವುದಾಗಿಯೂ ಹೇಳಿದ. ಹಾಗಾದರೆ ನಿಮಗೆ ಗೊತ್ತಿರುವ ಕ್ಷೇತ್ರದಲ್ಲೇ ಮುಂದುವರೆಯಬೇಕಿತ್ತಪ್ಪ ಎಂದಿದ್ದಕ್ಕೆ ಅದರಲ್ಲಿ ಎಲ್ಲಾ ಸಮಯದಲ್ಲೂ ಸಾಕಾಗುವಷ್ಟು ಕೆಲಸ ಸಿಕ್ಕುವುದಿಲ್ಲವೆಂದೂ , ಇಲ್ಲಿ ಜಾಬ್ ಸೆಕ್ಯುರಿಟಿ ಇರುತ್ತದೆಂದು ಎಲ್ಲಾ ಹೇಳಿದ್ದರಿಂದ ಬಂದೆನೆಂದ.
ಪರೀಕ್ಷೆ ಪ್ರಾರಂಭವಾಗುತ್ತಿದ್ದಂತೆ ಅವನು ಹೇಳಿದ್ದು ಅಕ್ಷರಶಃ ಸತ್ಯವೆಂದು ತಿಳಿಯುತು. ಯಾವ ಪ್ರಶ್ನೆಗೂ ಅವ ಉತ್ತರಿಸಲಿಲ್ಲ ನಾಲ್ಕಾರು ಓದಿ ಹೇಳುತ್ತಿದ್ದಂತೆ ದುಖಃದಿಂದ ತಾನು ಈ ಪರೀಕ್ಷೆ ಯಾಕಾದರೂ ಕಟ್ಟಿದೆನೋ ಎಂದು ಬೇಸರಿಸಿದ. ಏನೋ ನೋಡಿ ಬರೀರಿ ಎಂದೂ ಸೇರಿಸಿದ . ನನಗೋ ಅವನ ಸ್ಥಿತಿಗೆ ಕನಿಕರವಾದರೂ ನಾನು ಬರೆಯುವುದರಿಂದ ನಿಜವಾಗಲೂ ಅರ್ಹತೆಯಿರುವ ಇನ್ಯಾರಿಗೋ ಅನ್ಯಾಯವಾದಂತಾಗುತ್ತದಲ್ಲ ಎಂಬ ಸಂಕಟ . ಏನೂ ತೋಚದೆ ಸುಮ್ಮನೆ ಕುಳಿತೆ.
ಪಕ್ಕದಲ್ಲಿ ಕುಳಿತಿದ್ದ ಇನ್ವಿಜಿಲೇಟರ್ , ಪರೀಕ್ಷೆ ನಡೆಯುತ್ತಿದ್ದ ಕಾಲೇಜಿನ ಪಿಯುಸಿ ವಿದ್ಯಾರ್ಥಿನಿ. ಆಕೆಗೆ ತನ್ನ ಮತ್ತು ನನ್ನ ಕರ್ತವ್ಯಗಳ ಅರಿವೇ ಇಲ್ಲ. ಪ್ರಶ್ನೆ ಪತ್ರಿಕೆಯತ್ತ ಕುತೂಹಲದಿಂದ ನೋಡುತ್ತಾ ಉತ್ತರಗಳನ್ನು ಹೇಳಿ , ಬರೆಯುವಂತೆ ನನಗೆ ಒತ್ತಾಯಿಸತೊಡಗಿದಳು. ಹಾಗೆಲ್ಲಾ ನಾವು ಬರೆಯುವಂತಿಲ್ಲವೆಂದು ಹೇಳಿದರೆ ಆಶ್ಚರ್ಯದಿಂದ ” ಹೌದಾ? ಮತ್ತೆ ಬೆಳಿಗ್ಗೆ ಬಂದವರು ಅವರೇ ಬರೆಯುತ್ತಿದ್ದರು ” ಎಂದಳು!
” ನಾನೊಂದು ವೇಳೆ ಬರೆದು ನೀವು ಆಯ್ಕೆಯಾದರೆ ಏನೂ ಗೊತ್ತಿಲ್ಲದೆ ಕೆಲಸ ಹೇಗಪ್ಪ ಮಾಡುತ್ತೀರಿ” ಆತನನ್ನು ಕೇಳಿದೆ. ಅದೇನೂ ಕಷ್ಟವಾಗಲ್ಲ್ವಂತೆ ಮೇಡಂ ಬರೀ ಫೋನ್ ಅಟೆಂಡ್ ಮಾಡೋದು , ಇಂತಹ ಸುಲಭವಾದ ಕೆಲಸವಷ್ಟೆ ಅಂತೆ ಮೇಡಂ ಎಂದನಾತ !
ಇನ್ನೇನೂ ಮಾಡಲು ತೋಚದೆ ಗೊತ್ತಿರುವ ಸುಲಭದ ಪ್ರಶ್ನೆಗಳಿಗೆ ಉತ್ತರಿಸಿ …ಮುಗಿಸಿದೆ.
ಅತನನ್ನು ವಾಪಾಸ್ ಗೇಟ್ ಬಳಿ ಕರೆತಂದು ಬಿಡುವಾಗ ತನ್ನ ಜೇಬಿನಲ್ಲಿದ್ದ ಪೆನ್ನೊಂದನ್ನು ತೆಗೆದು ಕೊಡಲು ಬಂದ . ” ಬೇಡಪ್ಪ ನೀನೆ ಇಟ್ಟುಕೋ ” ಎಂದದ್ದಕ್ಕೆ ಆತ “ತಗೊಳ್ಳಿ ಮೇಡಂ ..ಇದನ್ನ ಇಟ್ಟುಕೊಂಡು ನಾನೇನು ಮಾಡಲಿ? ನನಗೇನೂ ಉಪಯೋಗವಿಲ್ಲ ಇದರಿಂದ ” ಎಂದ ನಿರ್ವಿಕಾರನಂತೆ . ಹೊಟ್ಟೆಯೊಳಗೆ ಸಂಕಟದ ಅನುಭವವಾಯ್ತು . ಕಣ್ಣಲ್ಲಿ ಎರಡು ಹನಿ …ಸುಮ್ಮನೆ ಪೆನ್ನು ತೆಗೆದುಕೊಂಡೆ.
ಈ ಪ್ರಕ್ರಿಯೆ ಏಕಿಷ್ಟು ಅಸಂಬದ್ಧವಾಗಿದೆ? ನಿಜವಾಗಿಯೂ ಆ ರೀತಿಯ ತೊಂದರೆಯಿರುವವರಿಗೆ ಅವಶ್ಯಕವಾದ ಸರಳ ಪರೀಕ್ಷೆಯನ್ನು , ಅವರೇ ಉತ್ತರಿಸಲು ಅನುಕೂಲವಾಗುವಂತೆ ನಡೆಸಬಾರದೆ? ಇಷ್ಟೊಂದು ಅಕ್ರಮವಾಗಿ ನಡೆಯುವ ಪರೀಕ್ಷೆಗಳಿಂದ ಸಾಧಿಸುವುದೇನು? ಕೊನೆಗೂ ಅಭ್ಯರ್ಥಿಗಳ ಅಯ್ಕೆಗೆ ಮಾನದಂಡವೇನು?
ಅವರಿಗೆ ಕರುಣೆ ತೋರುವುದರಿಂದಲೋ ಅಥವಾ ಮೀಸಲಾತಿ ನೀಡುವುದರಿಂದಲೋ ಸಮಸ್ಯೆ ಬಗೆಹರಿಯುವುದೆ? ಅವರನ್ನು ಅವರಿಷ್ಟದ ವಿಷಯದಲ್ಲಿ ತರಬೇತಿ ನೀಡಿ , ಸ್ವಾವಲಂಬಿಗಳಾಗಿ ಬದುಕಲು ಬೇಕಾದ ವ್ಯವಸ್ಥೆ ಮಾಡಬೇಕಾದದ್ದು ಸಮಾಜದ, ಸರ್ಕಾರದ ಹೊಣೆಯಲ್ಲವೆ ?
ಒಟ್ಟಿನಲ್ಲಿ ಒಂದು ಹೊಸ ಪ್ರಪಂಚವನ್ನು ಹೊಕ್ಕು ಹೊರಬಂದಂತಾಗಿ …ಒಂದಿಷ್ಟು ಸಮಾಧಾನ , ಬಹಳಷ್ಟು ಪ್ರಶ್ನೆಗಳು …..ಮನ ಗೊಂದಲದ ಗೂಡು ….
 
‍ಲೇಖಕರು G

6 March, 2014

10 Comments

  1. Srinivasamurthy BG

    ಮಾನ್ಯರೆ,
    ನೀವು ನನ್ನಂತಹ ಕುರುಡರಿಗೆ ಬರಹಗಾರರಾಗಿ ಹೋಗಿದ್ದು ಸಂತೋಶ ತಂದಿದೆ. ನಿಮಗೆ ತಿಳಿದಿಲ್ಲವೇನೋ ಅಂದುಕೊಂಡು ಒಂದು ವಿಶಯವನ್ನು ತಿಳಿಸುತ್ತೇನೆ. ನಮಗಾಗಿ ಇರುವ ಕನ್ನಡ ಶಾಲೆಗಳಲ್ಲಿ 1-7 ತರಗತಿಗಳ ತನಕವೇ ಗಣಿತವನ್ನು ಕಲಿಸಲಾಗುತ್ತದೆ. ತರುವಾಯದ ತರಗತಿಗಳಲ್ಲಿ ಗಣಿತದ ಬದಲಿಗೆ ಅರ್ತಶಾಸ್ತ್ರ ಇರುತ್ತದೆ. ಈ ವಿಶಯವೂ ಕೂಡ ಹೊಸತನ್ನು ಕಾಣದೆ ಹಳೆಯ ಅಂಕಿ ಅಂಶಗಳಿಂದಲೇ ಕೂಡಿವೆ. ಸಿಲಬಸ್ ಹೊಸತಾಗಿ ಮಾಡುವ ನಿಟ್ಟಿನಲ್ಲಿ ಸರ್ಕಾರ ಇನ್ನೂ ಯೋಚಿಸದಿರುವ ಕಾರಣ ಸಮಕಾಲೀನಕ್ಕೆ ಕಲಿತ ಅಂಶಗಳನ್ನು ಬಳಕೆ ಮಾಡಲು ತೊಡಕಾಗಿವೆ.
    english ಶಾಲೆಗಳಲ್ಲಿ 1-10 ತರಗತಿಗಳಲ್ಲಿ ಗಣಿತ ಇರೋದ್ರಿಂದ ಇಲ್ಲಿ ಕಲಿತವರು p.u.c ಯಲ್ಲಿ ಕಾಮರ್ಸ್ ಕಲಿಕೆಗೆ ಹೋಗುತ್ತಾರೆ.

  2. ಸುಮ ಸುಧಾಕಿರಣ್

    ನೀವು ಹೇಳಿದ ವಿಷಯ ನಿಜಕ್ಕೂ ತಿಳಿದಿರಲಿಲ್ಲ ಶ್ರೀನಿವಾಸ ಮೂರ್ತಿಯವರೆ. ನನಗೆ ನಿಜಕ್ಕೂ ಬೇಸರವೆನ್ನಿಸಿದ್ದು ಸಹ ಇಂತಹ ವ್ಯವಸ್ಥೆಯ ಮೇಲೆ. ದೃಷ್ಟಿವೈಕಲ್ಯ ಇರುವವರಿಗೆ ಅವರಿಷ್ಟದ ಯಾವುದಾದರೂ ವಿಷಯದಲ್ಲಿ ತರಬೇತಿ ನೀಡಿ ಸೂಕ್ತ ಕೆಲಸ ನೀಡಿ ಸ್ವಾವಲಂಬಿಗಳನ್ನಾಗಿ ಮಾಡಬೇಕಾದದ್ದು ನಿಜಕ್ಕೂ ಅತ್ಯಂತ ಅವಶ್ಯಕ.

  3. ಸುಮ ಸುಧಾಕಿರಣ್

    ನೀವು ಹೇಳಿದ ವಿಷಯ ತಿಳಿದಿರಲಿಲ್ಲ ಶ್ರೀನಿವಾಸ ಮೂರ್ತಿಯವರೆ. ನನಗೆ ಬೇಸರವೆನ್ನಿಸಿದ್ದು ಸಹ ಇಂತಹ ವ್ಯವಸ್ಥೆಯ ಮೇಲೆ. ದೃಷ್ಟಿವೈಕಲ್ಯ ಇರುವವರಿಗೆ ಅವರಿಷ್ಟದ ಯಾವುದಾದರೂ ವಿಷಯದಲ್ಲಿ ತರಬೇತಿ ನೀಡಿ ಸೂಕ್ತ ಕೆಲಸ ನೀಡಿ ಸ್ವಾವಲಂಬಿಗಳನ್ನಾಗಿ ಮಾಡಬೇಕಾದದ್ದು ನಿಜಕ್ಕೂ ಅತ್ಯಂತ ಅವಶ್ಯಕ.

    • Anonymous

      ಗೌರವಾನ್ವಿತ ಸುಮ ಸುಧಾಕಿರಣ್ರವರೆ ನಮಸ್ಕಾರ, ತಾವು ಅಂಧರಿಗೆ ಸಹಾಯಕ ಬರಹಗಾರರಾಗಿ ಹೋಗಿ ಅಲ್ಲಿ ತಮಗಾದ ಅನುಭವದ ಕುರಿತು ಅವಧಿಯಲ್ಲಿ ಹಂಚಿಕೊಂಡ ವಿಚಾರವನ್ನು ನನ್ನ ಪೂಜ್ಯನೀಯ ಗುರುವರ್ಯರಾದ ಪಂಡಿತಾರಾಧ್ಯರು ನಾನು ಮೈಸೂರಿಗೆ ಹೋಗಿದ್ದಾಗ ತಮ್ಮ ಬರವಣಿಗೆಯನ್ನು ಓದಿ ಹೇಳಿದರು. ಅದನ್ನು ಓದಿಸಿಕೊಂಡಾಗ ತಮ್ಮ ಮೇಲೆ ಅತೀವ ಗೌರವಯುತವಾದ ಭಾವನೆ ನನ್ನಲ್ಲಿ ಮೂಡಿದೆ, ಆ ಕಾರಣಕ್ಕಾಗಿ ತಮ್ಮನ್ನು ಗೌರವಾನ್ವಿತರೆಂದು ಸಂಭೋಧಿಸಿರುವೆ. ಹೀಗೆ ನಿಮ್ಮನ್ನು ಗೌರವಿಸಲು ಕಾರಣ ದೃಷ್ಟಿ ಚೇತನರ ಕುರಿತಾಗಿ ತಮಗಿರುವ ಕಾಳಜಿ ನಿಜಕ್ಕೂ ಸ್ತುತ್ಯಾರ್ಹ. ಬರೆಯುವ ಸಂದರ್ಭದಲ್ಲಿ ತಾವು ಎದುರಿಸಿದ ಸವಾಲುಗಳು, ಮಾನಸೀಕವೇಧನೆಯನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ನಾನು ತಮ್ಮ ಪ್ರಾಮಾಣಿಕತೆಯನ್ನು ತುಂಬು ಮನಸ್ಸಿನಿಂದ ಸ್ವಾಗತಿಸುತ್ತೇನೆ. ತಾವು ಓರ್ವ ಅಂಧನಿಗೆ ಸಹಾಯಕ ಬರಹಗಾರರಾಗಿ ಹೋಗುವುದು ಒಂದು ಸಾರ್ಥಕ ಕಾರ್ಯ ೆಂದು ಭಾವಿಸಿ ಹೋದರೆ ಅಲ್ಲಿ ತಮಗೆ ನಿರಾಶೆಯಾಗಿರುವುದಕ್ಕೆ ವಯಕ್ತಿಕವಾಗಿ ನಾನು ವಿಶಾಧಿಸುತ್ತೇನೆ. ತಮ್ಮ ಕಾರ್ಯಕ್ಕೆ ನ್ಯಾಯ ದೊರಕಿಸಿಕೊಡುವಲ್ಲಿ ವಿಫಲನಾದೆನಲ್ಲ ೆಂಬುವುದನ್ನು ಕೊನೆಗೆ ಕಣ್ಣೀರು ಹಾಕುವ ಮುಖೇನ ತಾವು ತೀವ್ರವಾದ ಭಾವುಕರೆಂದು ತಿಳಿಯಿತು.
      ತಮಗೆ ಶ್ರೀನಿವಾಸ್ರವರು ಅಂದರು ಎದುರಿಸುವ ಸಮಸ್ಯೆ ಹಾಗು ಸವಾಲುಗಳ ಬಗ್ಗೆ ಈಗಾಗಲೇ ಅವರ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ನನ್ನ ಗುರುಗಳಾದ ಪಂಡಿತಾರಾಧ್ಯರು ಸವಾಲುಗಳನ್ನು ಹೇಗೆ ಮೆಟ್ಟಿ ನಿಲ್ಲಬಹುದೆಂಬ ದೃಷ್ಟಾಂತವನ್ನು ವಿವರಿಸಿದ್ದಾರೆ.
      ಇಷ್ಟೆಲ್ಲ ತಿಳಿಸಿದರೂ ನಾನು ತಮ್ಮ ಮುಂದೆ ಕೆಲವು ವಿಚಾರಗಳನ್ನು ತಿಳಿಸಬಯಸುತ್ತೇನೆ.
      1. ಇಂದಿನ ತಾಂತ್ರಿಕ ಯುಗವು ಅಂಧರು ಹೆಚ್ಚಿನ ಪ್ರಮಾಣದಲ್ಲಿ ಸ್ವಾವಲಂಬಿಯಾಗುವಂತೆ ಮಾಡಿದೆ. ಅದನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ಅಂಧರು ಮುಂದಾಗಬೇಕು.
      2. ತೊಂದರೆ, ಸಮಸ್ಯೆ, ಹಾಗು ಸವಾಲುಗಳು ಯಾರನ್ನು ಬಿಟ್ಟಿವೆ. ಇವುಗಳಿಗೆ ಸಾಮಾನ್ಯರು ಹಾಗು ವಿಶೇಷ ಚೇತನರು ಎಂಬ ಭೇಧವಿಲ್ಲ. ನನಗೆ ಸಮಸ್ಯೆ ಇದೆ, ನಾನು ಅದನ್ನು ಎದುರಿಸಲಾರೆ ಎಂಬ ಅಸಹಾಯಕತೆಯನ್ನು ಬಿಟ್ಟು ಸಮಸ್ಯೆಯನ್ನು ಸವಾಲಾಗಿ ಸ್ವೀಕರಿಸಿ ಮೆಟ್ಟಿನಿಲ್ಲುವ ಧೈರ್ಯ ಮಾಡಬೇಕು.
      3. ನಮ್ಮ ಸಮಸ್ಯೆಗಳಿಗೆ ಕೊರಗುವುದಾಗಲಿ, ವ್ಯವಸ್ಥೆಯನ್ನು ದೂರುವುದಾಗಲಿ ಮಾಡದೆ ವ್ಯವಸ್ಥೆಯನ್ನು ಸರಿಪಡಿಸುವುದರತ್ತ ಗಮನಹರಿಸಬೇಕು.
      4. ಆ ಕಾರ್ಯವನ್ನು ನಿರ್ವಹಿಸಲು ನನಗೆ ಸಾಧ್ಯವಿಲ್ಲವೆಂದಮೇಲೆ ಅನವಷ್ಯಕವಾಗಿ ಆ ಕೆಲಸದತ್ತ ಪ್ರಯತ್ನ ಮಾಡುವುದರಲ್ಲಿ ಯಾವ ಅರ್ಥವಿದೆ. ಒಂದುವೇಳೆ ಅದೃಷ್ಟದಿಂದ ಅದು ಲಭಿಸಿದರೂ ಅದನ್ನು ನಾನು ಪ್ರಾಮಾಣಿಕವಾಗಿ ನಿರ್ವಹಿಸಲು ಸಾಧ್ಯವೇ?
      5. ಸಮಾಜ, ಶಾಲಾ ಕಾಲೇಜು ಹಾಗು ವಿವಿಯ ಶಿಕ್ಷಕರು, ನಿಮ್ಮಂಥ ಸಹೃದಯಿಗಳು ವಿಶೇಷ ಚೇತನರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂದು ಚಿಂತಿಸಿ ಸಹಾಯ ಹಸ್ತವನ್ನು ಚಾಚಿದಾಗ ಅದನ್ನು ಅತ್ಯಂತ ೆಶಸ್ವಿಯಾಗಿ ಬಳಸಿಕೊಳ್ಳುವ ಕೌಶಲವನ್ನು ಬೆಳೆಸಿಕೊಳ್ಳಬೇಕು.
      6. ನಾನು ತೆರದ ಮನಸ್ಸಿನಿಂದ ಹೇಳುವುದಾದರೆ ಸಾಮಾನ್ಯ ಮಕ್ಕಳಿಗಿಂತ ವಿಶೇಷ ಮಕ್ಕಳಿಗೆ ಹೆಚ್ಚಿನ ಸೌಲಭ್ಯ ಹಾಗು ಸಹಕಾರ ದೊರೆಯುತ್ತಿವೆ. ಆದರೆ ಅದನ್ನು ಅಂಧರು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ವಿಫಲರಾಗಿ ತಮ್ಮ ಅಸಹಾಯಕತೆಯೊಂದಿಗೆ ಉಡಾಫೆಯ ಸಬೂಬುಗಳನ್ನು ಕೊಟ್ಟು ನುಣಿಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.
      7. ಸುಮಾರವರೆ ತಾವು ನನ್ನ ಗುರುಗಳನ್ನು ಉದ್ದೇಶಿಸಿ ನಿಮ್ಮಂಥ ಗುರುಗಳಿದ್ದರೆ ಇವರ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದು ಎಂಬರ್ಥದಲ್ಲಿ ಹೇಳಿರುವಿರಿ. ಇಂತಹ ಗುರುಗಳಾಗಲಿ, ನಿಮ್ಮಂಥ ಸಹೃದಯಿಗಳಾಗಲಿ ಎಲ್ಲೆಡೆಯೂ ಸಿಗುತ್ತಾರೆ. ಅಂತವರ ನೆರವನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು. ಅದಕ್ಕೆ ನಾನೇ ಜ್ವಲಂತ ನಿದರ್ಶನ.
      8. ಿದು ನನ್ನ ುತ್ಪ್ರೇಕ್ಷೆಯ ಮಾತಲ್ಲ. ನಾನು K. P. S. C. ನಡೆಸಿದ S D A, F D A, ಹಾಗು K A S ನಂತಹ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ genral merit ನಲ್ಲಿ ಆಯ್ಕೆಯಾಗಲು ನನ್ನ ಗುರುಗಳ ಹಾಗು ವಸುಮಥಿ ಎಂಬ ನಿವೃತ್ತ ಬ್ಯಾಂಕ್ ಹುದ್ಯೋಗಿಯವರು ನಿರಂತರವಾಗಿ ನನಗೆ ಓದಿಕೊಟ್ಟು ಸದಾ ನನ್ನನ್ನು ಪ್ರೋತ್ಸಾಹಿಸಿ ನನ್ನ ಅಭಿವೃದ್ಧಿಗೆ ಕಾರಣವಾದರು. ಇವರ ನೆರವಿನಿಂದಲೇ ನಾನು U G C ನಡೆಸುವ N E T ಪರೀಕ್ಷೆಯಲ್ಲಿ J R F ನೊಂದಿಗೆ ಉತ್ತೀರ್ಣನಾದೆ.
      9. ನಾವು ಯಾವ ಕೆಲಸವನ್ನೇ ಮಾಡಲಿ ಮೊದಲು ಆಸಕ್ತಿ ಇರಬೇಕು, ಆ ನಿಟ್ಟಿನಲ್ಲಿ ಚಿಂತನೆ ಮಾಡಬೇಕು. ನನಗೆ ಶಿಕ್ಷಣ ರಂಗದಲ್ಲಿ ಆಸಕ್ತಿ ಇದ್ದರಿಂದ ಬರವಣಿಗೆಯನ್ನು ನಾನೇ ಬರೆಯುವಂತಾದರೆ ಹೇಗೆ ಎಂದು ಯೋಚಿಸಿ ಗಣಕದಲ್ಲಿ ಬರೆಯುವುದನ್ನು ರೂಢಿಸಿಕೊಂಡೆ.
      10. ಹಾಗೆಂದು ನಾನೇ ಶ್ರೇಷ್ಟ ೆಂಬ ಬಿಗುಮಾನವಲ್ಲ, ನಮ್ಮಿಂದಾಗುವ ಕೆಲಸದ ಕಡೆಗೆ ಹೆಚ್ಚು ಶ್ರಮವಹಿಸಿ ದುಡಿದರೆ ಖಂಡಿತವಾಗಿಯೂ ಎಶಸ್ಸು ಗಳಿಸಬಲ್ಲೆವು ಎಂಬ ಾತ್ಮವಿಶ್ವಾಸ.
      ಿದಕ್ಕೆ ತಮ್ಮ ಅಭಿಪ್ರಾಯ ತಿಳಿಸುವಿರ
      ಿಂತಿ ತಮ್ಮ ವಿಶ್ವಾಸಿ
      ನಾಗರಾಜ ಪಿ. ವಿ.

  4. Anil Talikoti

    ತುಂಬಾ ಧನ್ಯವಾದಗಳು – ನಿಮ್ಮ ಸ್ತುತ್ಯರ್ಹ ಕಾರ್ಯಕ್ಕೆ ಹಾಗೂ ಇ ಲೇಖನಕ್ಕೆ

  5. ಪಂಡಿತಾರಾಧ್ಯ ಮೈಸೂರು

    ನಿಮ್ಮ ಲೇಖನ ದೃಷ್ಟಿವಂಚಿತರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವಂತೆ ಮಾಡಿದೆ. ದೃಷ್ಟಿ ವಿಕಲರಿಗೆ ಲಿಪಿಕಾರರಾಗಿ ಬರುವವರು ಅವರಿಗಿಂತ ಕಡಿಮೆ ವಿದ್ಯಾವಂತರಾಗಿರಬೇಕು ಎಂಬ ನಿಯಮದಿಂದ ಪರೀಕ್ಷಾರ್ಥಿಗೆ ಅನನುಕೂಲವೇ ಅಗಬಹುದು.ಅವರು ಹೇಳಿದ್ದನ್ನು ಗ್ರಹಿಸದೆ ತಪ್ಪಾಗಿ ಬರೆದರೆ ಅದರ ಪರಿಣಾಮ ? ಇದಕ್ಕೆ ಪರಿಹಾರ ಅವರಿಗೆ ಬ್ರೈಲ್ ಲಿಪಿಯಲ್ಲಿ ಬರೆಯಲು ಅವಕಾಶ ನೀಡುವುದು, ಬ್ರೈಲ್ ಓದಬಲ್ಲ ಪರೀಕ್ಷಕರನ್ನು ಮೌಲ್ಯಮಾಪನ ಸಂದರ್ಭದಲ್ಲಿ ಒದಗಿಸುವುದು.
    ಮೈಸೂರು ವಿಶ್ವವಿದ್ಯಾನಿಲಯದಲ್ಲಿ ನಡೆಸಿದ ಪ್ರಯೋಗ ಇತರೆಡೆಗಳಲ್ಲಿಯೂ ಗಂಭೀರ ಪರಿಗಣನೆಗೆ ಆರ್ಹವಾಗಿದೆ. ಎರಡು ವರ್ಷಗಳ ಹಿಂದೆ ನಾನು ಮೈಸೂರಿನ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಅಧ್ಯಾಪಕನಾಗಿದ್ದಾಗ ಒಬ್ಬ ದೃಷ್ಟಿವಂಚಿತ ವಿದ್ಯಾರ್ಥಿ ಕನ್ನಡ ಎಂ.ಎ. ತರಗತಿಗೆ ಪ್ರವೇಶಪಡೆದರು. ಅವರು ಮಹಾರಾಜಾ ಕಾಲೇಜಿನಲ್ಲಿ ಬಿ.ಎ. ಪದವಿ ಓದಿದವರು. ಬ್ರೈಲ್ ಲಿಪಿಯಲ್ಲಿ ತರಗತಿಯಲ್ಲಿ ಟಿಪ್ಪಣಿಗಳನ್ನು ಬರೆದುಕೊಳ್ಳುತ್ತಿದ್ದರು. ಸಹಪಾಠಿಗಳಿಂದ ಪಾಠ, ಲೇಖನಗಳನ್ನು ಓದಿಸಿ ಧ್ವನಿಮುದ್ರಣ ಮಾಡಿಕೊಂಡು ಅಧ್ಯಯನ ಮಾಡುತ್ತಿದ್ದರು. ಅವರಿಗೆ ಬಿ.ಎ. ಹಂತದಲ್ಲಿ ಗಣಕಜ್ಞಾನದ ಪರಿಚಯದ ಒಂದು ಪತ್ರಿಕೆ ಇತ್ತು.ಆಲ್ಲಿ ಅವರಿಗೆ ಗಣಕದ ಬಗ್ಗೆ ಸಾಮಾನ್ಯ ಪರಿಚಯವಾಗಿತ್ತು. ಎಂ.ಎ. ಹಂತದಲ್ಲಿ ಮೂರನೇ ಚತುರ್ಮಾಸದಲ್ಲಿ ಸಂಶೋಧನ ವಿಧಾನಗಳು ಮತ್ತು ಗಣಕಜ್ಞಾನ ಎಂಬ ಪತ್ರಿಕೆ ಇತ್ತು.ಸಂಶೋಧನೆಗೆ ಗಣಕದ ಬಳಕೆಯ ಭಾಗವನ್ನು ನಾನು ಬೋಧಿಸುತ್ತಿದ್ದೆ. ಕನ್ನಡ ಎಂ.ಎ. ಅದ್ದರಿಂದ ಗಣಕದಲ್ಲಿ ಕನ್ನಡ ಬಳಕೆಯನ್ನು ಕಲಿಯುವಾಗ ನುಡಿಯ ಬಳಕೆಯನ್ನು ಕಲಿಯುತ್ತಾರೆ. ನುಡಿ ಕೀಲಿಮಣೆ ಧ್ವನ್ಯಾತ್ಮಕವಾದ್ದರಿಂದ ದೃಷ್ಟಿವಿಕಲರೂ ಅದನ್ನು ಸುಲಭವಾಗಿ ಕಲಿತು ಬಳಸುತ್ತಾರೆ.
    ಮೂರನೇ ಚತುರ್ಮಾಸದವರೆಗೆ ಲಿಪಿಕಾರರ ಸಹಾಯದಿಂದ ಪರೀಕ್ಷೆಗಳನ್ನು ಬರೆದು ಮೂರನೇ ಚತುರ್ಮಾಸದಲ್ಲಿ ಗಣಕದಲ್ಲಿ ಕನ್ನಡ ಬಳಕೆಯನ್ನೂ ಕಲಿತು ಲಿಪಿಕಾರರ ಸಹಾಯದಿಂದ ಪರೀಕ್ಷೆಯಲ್ಲಿ ಉತ್ತರ ಬರೆದರೂ ಲಿಪಿಕಾರ ಮಾಡುವ ತಪ್ಪುಗಳಿಗೆ ವಿದ್ಯಾರ್ಥಿ ಬೆಲೆ ತೆರಬೇಕಾಗುತ್ತಿತ್ತು. ಬ್ರೈಲ್ ಲಿಪಿಯಲ್ಲಿ ತರಗತಿಯಲ್ಲಿ ಬರೆದುಕೊಂಡ ಟಿಪ್ಪಣಿಗಳನ್ನು ತನ್ನ ಕೊಠಡಿಯಲ್ಲಿ ಗಣಕದಲ್ಲಿ ಬೆರಳಚ್ಚುಮಾಡುವ ಅಭ್ಯಾಸಮಾಡಿಕೊಂಡ ವಿದ್ಯಾರ್ಥಿ ಪರೀಕ್ಷೆಯನ್ನೂ ಲಿಪಿಕಾರರ ನೆರವಿಲ್ಲದೆ ಬರೆಯಬಹುದಲ್ಲ ಎನಿಸಿತು.
    ಈ ಹಂತದಲ್ಲಿ ನೆರೆವಿಗೆ ಬಂದುದು ಜಾಸ್ ನಂತೆ ಇಸ್ಪೀಕ್ ಎಂಬ ತಂತ್ರಾಂಶ. ಮೈಸೂರಿನ ಕಿವುಡು ಮೂಕ ಕುರುಡು ಮಕ್ಕಳ ಶಾಲೆಯಲ್ಲಿ ಜಾಸ್, ಇ ಸ್ಪೀಕ್ ತಂತ್ರಾಂಶಗಳನ್ನು ಬಳಸುತ್ತಿದ್ದರು. ಅವುಗಳನ್ನು ಕನ್ನಡ ಓದಲು ಬಳಸುವ ಅವಕಾಶ ಇನ್ನೂ ಇರಲಿಲ್ಲ. ಯೂನಿಕೋಡ್ ಶಿಷ್ಟತೆಯನ್ನು ಕನ್ನಡ ದಿನಪತ್ರಿಕೆಗಳು ಅಳವಡಿಸಿಕೊಂಡಮೇಲೆ ಇಸ್ಪೀಕ್ ನಿಂದ ಕನ್ನಡ ಪತ್ರಿಕೆಗಳನ್ನು ಓದಿಸಿ ಕೇಳಲು ಸಾಧ್ಯವಾಯಿತು.
    ಗಣಕದಲ್ಲಿ ಕನ್ನಡ ಯೂನಿಕೋಡ್ ಶಿಷ್ಟತೆಯಲ್ಲಿ ಬರೆಯುತ್ತದ್ದಂತೆ ಇಸ್ಪೀಕ್ ಅದನ್ನು ಓದಿ ಹೇಳುತ್ತದೆ. ಅದರ ನೆರವಿನಿಂದ ಬರೆಯುವಾಗ ತಪ್ಪಾಗಿದ್ದರೆ ಸರಿಪಡಿಸಬಹುದು. ಇದರಿಂದ ದೃಷ್ಟಿವಂಚಿತರು ಗಣಕದಲ್ಲಿ ಬೇರೊಬ್ಬರ ಸಹಾಯವಿಲ್ಲದೆ ಬರೆಯಲು ಸಾಧ್ಯವಾಗಿದೆ.
    ನಮ್ಮ ವಿದ್ಯಾರ್ಥಿಗೆ ಈ ಸೌಲಭ್ಯವನ್ನು ಬಳಸಿಕೊಳ್ಳುವಂತೆ ಪ್ರೋತ್ಸಾಹಿಸಿ, ಆತ ಬರೆದುದನ್ನು ನನಗೆ ವಿ ಅಂಚೆಯಲ್ಲಿ ಕಳುಹಿಸಲು ತಿಳಿಸಿದೆ. ಅದರಲ್ಲಿ ತಪ್ಪುಗಳಿದ್ದರೆ ಸರಿಪಡಿಸಿ ಹಿಂದಿರುಗಿಸುತ್ತಿದ್ದೆ. ನಾಲ್ಕನೆಯ ಚತುರ್ಮಾಸದಲ್ಲಿ ಎಲ್ಲ ತರಗತಿ ಬರವಣಿಗೆಗಳನ್ನು ಗಣಕದಲ್ಲಿಯೇ ಮಾಡುವಂತೆ ಮಾಡಿದೆ. ಇತರ ಅಧ್ಯಾಪಕರಿಗೆ ಸಲ್ಲಿಸುವ ವಿಚಾರಗೋಷ್ಠಿಯ ಪ್ರಬಂಧ, ಮನೆಬರಹ ಮೊದಲಾದವನ್ನೂ ಗಣಕದಲ್ಲಿಯೇ ಬರೆದು ಸಲ್ಲಿಸಿದರು. ಕೊನೆಗೆ ಅವುಗಳ ಮುದ್ರಿತ ಪ್ರತಿಗಳನ್ನು ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಿ ಪರೀಕ್ಷೆಯಲ್ಲಿ ತಾನೇ ಗಣಕದಲ್ಲಿ ಬರೆಯಲು ಅನುಮತಿ ಕೋರಿದರು.ವಿಶ್ವವಿದ್ಯಾನಿಲಯದ ಕುಲಪತಿಗಳು, ಪರೀಕ್ಷಾಂಗದ ಕುಲಸಚಿವರು ತುಂಬ ಸಂತೋಷಪಟ್ಟು ವಿಶೇಷ ಅನುಮತಿ ನೀಡಿದರು.
    ನಮ್ಮ ಸಂಸ್ಥೆಯ ಕಛೇರಿಯ ಗಣಕ ವಿಭಾಗದಲ್ಲಿ ಒಂದು ಗಣಕಯಂತ್ರದಲ್ಲಿ ಬರೆಯಲು ಅನುಕೂಲ ಮಾಡಿಕೊಡಲಾಯಿತು. ನಾನೇ ಮೇಲ್ವಿಚಾರಕನಾಗಿ ಪ್ರಶ್ನಪತ್ರಿಕೆಯನ್ನು ಓದಿ ಹೇಳಿದೆ. ವಿದ್ಯಾರ್ಥಿ ಅದನ್ನು ಗಣಕ ಯಂತ್ರದಲ್ಲಿ ಬೆರಳಚ್ಚು ಮಾಡಿಕೊಂಡರು. ಗಣಕಯಂತ್ರ ಓದಿ ಹೇಳುವುದನ್ನು ಕೇಳಿಸಿಕೊಳ್ಳಲು ಅವರ ಕಿವಿಗೆ ಗ್ರಾಹಕವನ್ನು ಒದಗಿಸಿದ್ದರಿಂದ ಬೇರೆಯವರಿಗೆ ಏನೂ ಕೇಳುತ್ತಿರಲಿಲ್ಲ. ಪರೀಕ್ಷಾರ್ಥಿ ಬರೆದ ಉತರವನ್ನು ಅಡಕತಟ್ಟೆಯಲ್ಲಿ ದಾಖಲಿಸಿ, ಅದನ್ನು ಮುದ್ರಿಸಿ ಅವನ್ನು ಇತರರ ಉತ್ತರ ಪತ್ರಿಕೆಗಳೊಂದಿಗೆ ವಿಶ್ದವಿದ್ಯಾನಿಲಯಕ್ಕೆ ಕಳುಹಿಸಲಾಯಿತು.
    ಫಲಿತಾಂಶ ಬಂದಾಗ ಎಲ್ಲರೂ ಸಂತೋಷಪಟ್ಟರು. ದೃಷ್ಟಿವಿಕಲತೆಯನ್ನು ಸಮರ್ಥವಾಗಿ ಎದುರಿಸಿ ನಮ್ಮ ವಿದ್ಯಾರ್ಥಿ ಪಿ.ವಿ. ನಾಗರಾಜ್ ವಿಶ್ವವಿದ್ಯಾನಿಲಯಕ್ಕೆ ಮೂರನೆಯ ಸ್ಥಾನ (ರಾ ್ಯಂಕ್ ) ಪಡೆದಿದ್ದರು.
    ಈಗ ಅವರು ಸಾಮಾನ್ಯ ಅರ್ಹತೆಯ ವಿಭಾಗದಲ್ಲಿ ಸರಕಾರದ ಪ್ರಥಮ ದರ್ಜೆ ಗುಮಾಸ್ತರಾಗಿ ತನ್ನ ಊರಾದ ಬಳ್ಳಾರಿ ಜಿಲ್ಲೆ ಸಿರಗುಪ್ಪದ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ದರ್ಜೆಯ ಸಹಾಯಕರಾಗಿ ಅಸ್ಪತ್ರೆಯ ಕಛೇರಿಯ ಗಣಕ ವಿಭಾಗವನ್ನು ನಿರ್ವಹಿಸುತ್ತಿದ್ದಾರೆ.
    ಇಂದು ಗಣಕಗಳು ನಮ್ಮ ಕಲಿಕೆಯ ಕ್ಷೇತ್ರದಲ್ಲಿ ಅತ್ಯಮೂಲ್ಯ ನೆರವನ್ನು ನೀಡುತ್ತಿವೆ.
    ಗಣಕ ಸಾಕ್ಷರತೆಯೇ ಸಾಮಾನ್ಯ ಸಾಕ್ಷರತೆಯಾದಾಗ ಬ್ರೈಲ್ ಅವಲಂಬನೆ ಕಡಿಮೆಯಾಗಲಿರ

    • ಸುಮ ಸುಧಾಕಿರಣ್

      ಪಂಡಿತಾರಾಧ್ಯರೆ , ನಿಮ್ಮಂತಹ ಗುರುಗಳು ಹಾಗೂ ನಿಮ್ಮ ನೆರವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಮೇಲೆ ಬಂದ ಪಿ.ವಿ.ನಾಗರಾಜ್ ಅವರಂತಹ ವಿಧ್ಯಾರ್ಥಿಗಳು ಎಲ್ಲರಿಗೂ ಮಾದರಿ. ನೀವೆಂದಂತೆ ಗಣಕ ಸಾಕ್ಷರತೆಯಿಂದ ಈ ಸಮಸ್ಯೆ ಪರಿಹಾರವಾಗಬಹುದೇನೋ. ಪ್ರತಿಯೊಬ್ಬ ಅಂಧ ವಿಧ್ಯಾರ್ಥಿಗೂ ಈ ವಿಧಾನವನ್ನು ತಲುಪಿಸಲು ಸರ್ಕಾರ ಮನಸ್ಸು ಮಾಡಬೇಕು.

  6. nagaraj P V

    hi friends please share your opinion about my views.

  7. nagaraj P V

    ಗೌರವಾನ್ವಿತ ಸುಮ ಸುಧಾಕಿರಣ್ರವರೆ ನಮಸ್ಕಾರ, ತಾವು ಅಂಧರಿಗೆ ಸಹಾಯಕ ಬರಹಗಾರರಾಗಿ ಹೋಗಿ ಅಲ್ಲಿ ತಮಗಾದ ಅನುಭವದ ಕುರಿತು ಅವಧಿಯಲ್ಲಿ ಹಂಚಿಕೊಂಡ ವಿಚಾರವನ್ನು ನನ್ನ ಪೂಜ್ಯನೀಯ ಗುರುವರ್ಯರಾದ ಪಂಡಿತಾರಾಧ್ಯರು ನಾನು ಮೈಸೂರಿಗೆ ಹೋಗಿದ್ದಾಗ ತಮ್ಮ ಬರವಣಿಗೆಯನ್ನು ಓದಿ ಹೇಳಿದರು. ಅದನ್ನು ಓದಿಸಿಕೊಂಡಾಗ ತಮ್ಮ ಮೇಲೆ ಅತೀವ ಗೌರವಯುತವಾದ ಭಾವನೆ ನನ್ನಲ್ಲಿ ಮೂಡಿದೆ, ಆ ಕಾರಣಕ್ಕಾಗಿ ತಮ್ಮನ್ನು ಗೌರವಾನ್ವಿತರೆಂದು ಸಂಭೋಧಿಸಿರುವೆ. ಹೀಗೆ ನಿಮ್ಮನ್ನು ಗೌರವಿಸಲು ಕಾರಣ ದೃಷ್ಟಿ ಚೇತನರ ಕುರಿತಾಗಿ ತಮಗಿರುವ ಕಾಳಜಿ ನಿಜಕ್ಕೂ ಸ್ತುತ್ಯಾರ್ಹ. ಬರೆಯುವ ಸಂದರ್ಭದಲ್ಲಿ ತಾವು ಎದುರಿಸಿದ ಸವಾಲುಗಳು, ಮಾನಸೀಕವೇಧನೆಯನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ನಾನು ತಮ್ಮ ಪ್ರಾಮಾಣಿಕತೆಯನ್ನು ತುಂಬು ಮನಸ್ಸಿನಿಂದ ಸ್ವಾಗತಿಸುತ್ತೇನೆ. ತಾವು ಓರ್ವ ಅಂಧನಿಗೆ ಸಹಾಯಕ ಬರಹಗಾರರಾಗಿ ಹೋಗುವುದು ಒಂದು ಸಾರ್ಥಕ ಕಾರ್ಯ ೆಂದು ಭಾವಿಸಿ ಹೋದರೆ ಅಲ್ಲಿ ತಮಗೆ ನಿರಾಶೆಯಾಗಿರುವುದಕ್ಕೆ ವಯಕ್ತಿಕವಾಗಿ ನಾನು ವಿಶಾಧಿಸುತ್ತೇನೆ. ತಮ್ಮ ಕಾರ್ಯಕ್ಕೆ ನ್ಯಾಯ ದೊರಕಿಸಿಕೊಡುವಲ್ಲಿ ವಿಫಲನಾದೆನಲ್ಲ ೆಂಬುವುದನ್ನು ಕೊನೆಗೆ ಕಣ್ಣೀರು ಹಾಕುವ ಮುಖೇನ ತಾವು ತೀವ್ರವಾದ ಭಾವುಕರೆಂದು ತಿಳಿಯಿತು.
    ತಮಗೆ ಶ್ರೀನಿವಾಸ್ರವರು ಅಂದರು ಎದುರಿಸುವ ಸಮಸ್ಯೆ ಹಾಗು ಸವಾಲುಗಳ ಬಗ್ಗೆ ಈಗಾಗಲೇ ಅವರ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ನನ್ನ ಗುರುಗಳಾದ ಪಂಡಿತಾರಾಧ್ಯರು ಸವಾಲುಗಳನ್ನು ಹೇಗೆ ಮೆಟ್ಟಿ ನಿಲ್ಲಬಹುದೆಂಬ ದೃಷ್ಟಾಂತವನ್ನು ವಿವರಿಸಿದ್ದಾರೆ.
    ಇಷ್ಟೆಲ್ಲ ತಿಳಿಸಿದರೂ ನಾನು ತಮ್ಮ ಮುಂದೆ ಕೆಲವು ವಿಚಾರಗಳನ್ನು ತಿಳಿಸಬಯಸುತ್ತೇನೆ.
    1. ಇಂದಿನ ತಾಂತ್ರಿಕ ಯುಗವು ಅಂಧರು ಹೆಚ್ಚಿನ ಪ್ರಮಾಣದಲ್ಲಿ ಸ್ವಾವಲಂಬಿಯಾಗುವಂತೆ ಮಾಡಿದೆ. ಅದನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ಅಂಧರು ಮುಂದಾಗಬೇಕು.
    2. ತೊಂದರೆ, ಸಮಸ್ಯೆ, ಹಾಗು ಸವಾಲುಗಳು ಯಾರನ್ನು ಬಿಟ್ಟಿವೆ. ಇವುಗಳಿಗೆ ಸಾಮಾನ್ಯರು ಹಾಗು ವಿಶೇಷ ಚೇತನರು ಎಂಬ ಭೇಧವಿಲ್ಲ. ನನಗೆ ಸಮಸ್ಯೆ ಇದೆ, ನಾನು ಅದನ್ನು ಎದುರಿಸಲಾರೆ ಎಂಬ ಅಸಹಾಯಕತೆಯನ್ನು ಬಿಟ್ಟು ಸಮಸ್ಯೆಯನ್ನು ಸವಾಲಾಗಿ ಸ್ವೀಕರಿಸಿ ಮೆಟ್ಟಿನಿಲ್ಲುವ ಧೈರ್ಯ ಮಾಡಬೇಕು.
    3. ನಮ್ಮ ಸಮಸ್ಯೆಗಳಿಗೆ ಕೊರಗುವುದಾಗಲಿ, ವ್ಯವಸ್ಥೆಯನ್ನು ದೂರುವುದಾಗಲಿ ಮಾಡದೆ ವ್ಯವಸ್ಥೆಯನ್ನು ಸರಿಪಡಿಸುವುದರತ್ತ ಗಮನಹರಿಸಬೇಕು.
    4. ಆ ಕಾರ್ಯವನ್ನು ನಿರ್ವಹಿಸಲು ನನಗೆ ಸಾಧ್ಯವಿಲ್ಲವೆಂದಮೇಲೆ ಅನವಷ್ಯಕವಾಗಿ ಆ ಕೆಲಸದತ್ತ ಪ್ರಯತ್ನ ಮಾಡುವುದರಲ್ಲಿ ಯಾವ ಅರ್ಥವಿದೆ. ಒಂದುವೇಳೆ ಅದೃಷ್ಟದಿಂದ ಅದು ಲಭಿಸಿದರೂ ಅದನ್ನು ನಾನು ಪ್ರಾಮಾಣಿಕವಾಗಿ ನಿರ್ವಹಿಸಲು ಸಾಧ್ಯವೇ?
    5. ಸಮಾಜ, ಶಾಲಾ ಕಾಲೇಜು ಹಾಗು ವಿವಿಯ ಶಿಕ್ಷಕರು, ನಿಮ್ಮಂಥ ಸಹೃದಯಿಗಳು ವಿಶೇಷ ಚೇತನರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂದು ಚಿಂತಿಸಿ ಸಹಾಯ ಹಸ್ತವನ್ನು ಚಾಚಿದಾಗ ಅದನ್ನು ಅತ್ಯಂತ ೆಶಸ್ವಿಯಾಗಿ ಬಳಸಿಕೊಳ್ಳುವ ಕೌಶಲವನ್ನು ಬೆಳೆಸಿಕೊಳ್ಳಬೇಕು.
    6. ನಾನು ತೆರದ ಮನಸ್ಸಿನಿಂದ ಹೇಳುವುದಾದರೆ ಸಾಮಾನ್ಯ ಮಕ್ಕಳಿಗಿಂತ ವಿಶೇಷ ಮಕ್ಕಳಿಗೆ ಹೆಚ್ಚಿನ ಸೌಲಭ್ಯ ಹಾಗು ಸಹಕಾರ ದೊರೆಯುತ್ತಿವೆ. ಆದರೆ ಅದನ್ನು ಅಂಧರು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ವಿಫಲರಾಗಿ ತಮ್ಮ ಅಸಹಾಯಕತೆಯೊಂದಿಗೆ ಉಡಾಫೆಯ ಸಬೂಬುಗಳನ್ನು ಕೊಟ್ಟು ನುಣಿಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.
    7. ಸುಮಾರವರೆ ತಾವು ನನ್ನ ಗುರುಗಳನ್ನು ಉದ್ದೇಶಿಸಿ ನಿಮ್ಮಂಥ ಗುರುಗಳಿದ್ದರೆ ಇವರ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದು ಎಂಬರ್ಥದಲ್ಲಿ ಹೇಳಿರುವಿರಿ. ಇಂತಹ ಗುರುಗಳಾಗಲಿ, ನಿಮ್ಮಂಥ ಸಹೃದಯಿಗಳಾಗಲಿ ಎಲ್ಲೆಡೆಯೂ ಸಿಗುತ್ತಾರೆ. ಅಂತವರ ನೆರವನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು. ಅದಕ್ಕೆ ನಾನೇ ಜ್ವಲಂತ ನಿದರ್ಶನ.
    8. ಿದು ನನ್ನ ುತ್ಪ್ರೇಕ್ಷೆಯ ಮಾತಲ್ಲ. ನಾನು K. P. S. C. ನಡೆಸಿದ S D A, F D A, ಹಾಗು K A S ನಂತಹ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ genral merit ನಲ್ಲಿ ಆಯ್ಕೆಯಾಗಲು ನನ್ನ ಗುರುಗಳ ಹಾಗು ವಸುಮಥಿ ಎಂಬ ನಿವೃತ್ತ ಬ್ಯಾಂಕ್ ಹುದ್ಯೋಗಿಯವರು ನಿರಂತರವಾಗಿ ನನಗೆ ಓದಿಕೊಟ್ಟು ಸದಾ ನನ್ನನ್ನು ಪ್ರೋತ್ಸಾಹಿಸಿ ನನ್ನ ಅಭಿವೃದ್ಧಿಗೆ ಕಾರಣವಾದರು. ಇವರ ನೆರವಿನಿಂದಲೇ ನಾನು U G C ನಡೆಸುವ N E T ಪರೀಕ್ಷೆಯಲ್ಲಿ J R F ನೊಂದಿಗೆ ಉತ್ತೀರ್ಣನಾದೆ.
    9. ನಾವು ಯಾವ ಕೆಲಸವನ್ನೇ ಮಾಡಲಿ ಮೊದಲು ಆಸಕ್ತಿ ಇರಬೇಕು, ಆ ನಿಟ್ಟಿನಲ್ಲಿ ಚಿಂತನೆ ಮಾಡಬೇಕು. ನನಗೆ ಶಿಕ್ಷಣ ರಂಗದಲ್ಲಿ ಆಸಕ್ತಿ ಇದ್ದರಿಂದ ಬರವಣಿಗೆಯನ್ನು ನಾನೇ ಬರೆಯುವಂತಾದರೆ ಹೇಗೆ ಎಂದು ಯೋಚಿಸಿ ಗಣಕದಲ್ಲಿ ಬರೆಯುವುದನ್ನು ರೂಢಿಸಿಕೊಂಡೆ.
    10. ಹಾಗೆಂದು ನಾನೇ ಶ್ರೇಷ್ಟ ೆಂಬ ಬಿಗುಮಾನವಲ್ಲ, ನಮ್ಮಿಂದಾಗುವ ಕೆಲಸದ ಕಡೆಗೆ ಹೆಚ್ಚು ಶ್ರಮವಹಿಸಿ ದುಡಿದರೆ ಖಂಡಿತವಾಗಿಯೂ ಎಶಸ್ಸು ಗಳಿಸಬಲ್ಲೆವು ಎಂಬ ಾತ್ಮವಿಶ್ವಾಸ.
    ಿದಕ್ಕೆ ತಮ್ಮ ಅಭಿಪ್ರಾಯ ತಿಳಿಸುವಿರ
    ಿಂತಿ ತಮ್ಮ ವಿಶ್ವಾಸಿ
    ನಾಗರಾಜ ಪಿ. ವಿ.

    • ಸುಮ ಸುಧಾಕಿರಣ್

      ನಮಸ್ಕಾರ ನಾಗರಾಜ ಅವರೆ. ತಮ್ಮ ಪ್ರತಿಕ್ರಿಯೆಯನ್ನು ಓದಿ ತುಂಬ ಸಂತೋಷವಾಯಿತು . ಇಂತಹ ಆತ್ಮವಿಶ್ವಾಸ , ಛಲ , ಸ್ವಾಭಿಮಾನ ನಿಜಕ್ಕೂ ಮಾದರಿಯಾದುದು . ನಿಜ ನೀವೆಂದಂತೆ ತೊಂದರೆಗಳು ಯಾರನ್ನೂ ಬಿಟ್ಟಿಲ್ಲ , ಅದನ್ನೆಲ್ಲ ಮೀರಿ ನಿಲ್ಲುವ ವಿಶ್ವಾಸ ಇದ್ದಾಗ ಜಯ ಖಂಡಿತ. ಇದಕ್ಕೆ ನೀವೆ ಸಾಕ್ಷಿ . ನಿಮ್ಮ ಈ ಸಾಧನೆ ಇಂತಹ ಅನೇಕರಿಗೆ ಸ್ಫೂರ್ತಿಯಾಗಬಲ್ಲದು .
      ಇನ್ನು ನೀವು ನನ್ನ ಬಗ್ಗೆ ಹೇಳಿರುವ ಒಳ್ಳೆಯ ನುಡಿಗಳಿಗೆ ಧನ್ಯವಾದ . ಏನೋ ನನ್ನ ಮಿತಿಯಲ್ಲಿ ಸಮಾಜದ ಋಣವನ್ನು ತೀರಿಸುವ ಪ್ರಯತ್ನವಷ್ಟೇ , ಆದರೆ ವ್ಯವಸ್ಥೆಯ ಲೋಪದೋಷಗಳನ್ನು ನೋಡಿ ಅಂದು ಒಂದು ರೀತಿಯಲ್ಲಿ ಭ್ರಮನಿರಸನವಾಗಿತ್ತು . ಆದರೆ ನಿಮ್ಮಂತವರ ಸಾಧನೆಯ ಬಗ್ಗೆ ತಿಳಿದಾಗ ಇನ್ನಷ್ಟು ಇಂತಹ ಕೆಲಸ ಮಾಡಲು ನನಗೂ ಸ್ಪೂರ್ತಿ ಸಿಕ್ಕಿದೆ . ಧನ್ಯವಾದಗಳು .

Trackbacks/Pingbacks

  1. ಸುಮಾ ಸುಧಾಕಿರಣ್ ಬರಹ ಓದಿದ ಮೇಲೆ… « ಅವಧಿ / Avadhi - [...] ಸುಮಾ ಸುಧಾಕಿರಣ್ ಬರಹ ಓದಿದ ಮೇಲೆ… March 14, 2014 by user2 ಅಂಧ ವಿದ್ಯಾರ್ಥಿಗಳಿಗೆ ಬದಲಿ ಬರಹಗಾರರಾಗಿ ಹೋದಾಗಿನ ತಮ್ಮ ಅನುಭವಗಳನ್ನು ಸುಧಾ ಸುಮಾಕಿರಣ್…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading