ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೈ ನಾ ಹಿಂದೂ, ನಾ ಮುಸಲ್ಮಾನ್, ಮುಜೆ ಜೀನೆ ದೋ..

ಹಿಂದಿರುಗಿದಾಗ..

17 ವರ್ಷಗಳು ಅದಾಗಲೇ ಸರಿದು ಹೋದವು. ಪತ್ರಿಕೋದ್ಯಮಕ್ಕೆ ಅಚಾನಕ್ ಆಗಿ ಬಂದ ನನಗೆ ಭ್ರಮನಿರಸನವೂ ಆಗಿದೆ. ಹಾಗೆ ಭರವಸೆಯೂ ಇದೆ. ಪತ್ರಿಕೋದ್ಯಮ ಅಂದರೆ ನಮ್ಮಂತವರಿಗೆ ಉಸಿರು. ಸಮಾಜದಲ್ಲಿ ಪುಟ್ಟ ಬದಲಾವಣೆ ತರಬಲ್ಲ ಪ್ರಬಲ ಅಸ್ತ್ರ. ಸಾಮಾಜಿಕ ಜಾಗೃತಿ ಮೂಡಿಸುವ ಮಾಧ್ಯಮ. ನಮ್ಮ ಕೈಯಿಂದ ಏನಾದರು ಮಾಡಬಹುದಾದ ಭರವಸೆಯನ್ನು ಸದಾ ಮಡಿಲಲ್ಲಿ ಮೂಡಿಸುವ ಪ್ರಜಾಪ್ರಭುತ್ತ್ವದ ನಾಲ್ಕನೆಯ ಆಧಾರ ಸ್ತಂಭ.

ನಾನು ಪತ್ರಿಕೋದ್ಯಮಕ್ಕೆ ಬಂದಿದ್ದು ಈ ಕುರಿತಂತೆ ಕನಸ ಕಂಡಲ್ಲ. ಸಸ್ಯಶಾಸ್ತ್ರದಲ್ಲಿ ಎಂ. ಎಸ್ಸಿ ಮಾಡಿ ಸಂಶೋಧನೆ ಮಾಡಬೇಕೆಂಬ ಕನಸ ಹೊತ್ತಿದ್ದೆ. ಆದ್ರೆ ಅದನ್ನು ಓವರ್ ಟೇಕ್ ಮಾಡಿ ಬರವಣಿಗೆ, ಸಿನಿಮಾ, ಫೋಟೋಗ್ರಫಿ ಹೀಗೆ ಸೃಜನಶೀಲ ಪ್ರಪಂಚ ನನ್ನನ್ನು ಹೆಚ್ಚು ಆಕರ್ಷಿಸಿತ್ತು.

jyothi irvattur3ಸೀಟು ಸಿಗದಾಗ ಒಂದು ವರ್ಷ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಡಿಪ್ಲೋಮಾ ಇನ್ ಇಂಗ್ಲೀಷ್ ಮಾಡಿ ಮುಗಿಸಿದೆ. ಇದು ನನಗೆ ಖುಷಿಯನ್ನು ಕೊಟ್ಟಿತ್ತು ಕೂಡ.

ಆನಂತರ ಅಣ್ಣನ ಸಲಹೆಯಂತೆ ಪತ್ರಿಕೋದ್ಯಮಕ್ಕೆ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪ್ರವೇಶ ಪಡೆದೆ. ಆ ಸಂದರ್ಭದಲ್ಲಿ ಫೋಟೋಗ್ರಫಿ, ಡಾಕ್ಯುಮೆಂಟರಿ, ಉತ್ತಮ ಚಲನಚಿತ್ರಗಳನ್ನು ನೋಡುವ ಅವಕಾಶ. ಸಹಜವಾಗಿಯೇ ಇದು ಸಂತೋಷವನ್ನು ಕೊಟ್ಟಿತ್ತು. ಪತ್ರಿಕೋದ್ಯಮ ಓದುವ ಎರಡನೇ ವರ್ಷ ಸೂರ್ಯ ಮುಳುಗದ ನಾಡು ನಾರ್ವೇಗೂ ಭೇಟಿ ನೀಡೋ ಅವಕಾಶ ಒದಗಿಬಂತು. ಡಾಕ್ಯುಮೆಂಟರಿ ತಯಾರಿ ಮತ್ತು ಎಡಿಟಿಂಗ್ ಗೆ ಸಂಬಂಧಪಟ್ಟಂತೆ ಅಲ್ಲಿನ ವೋಲ್ಡಾ ಕಾಲೇಜ್ ಆಫ್ ಜರ್ನಲಿಸಮ್ ನಲ್ಲಿ ಕಳದ ದಿನಗಳು ಕಲಿಯುವಿಕೆ ಮತ್ತು ಅಲ್ಲಿನ ಸಂಸ್ಕೃತಿ ಜನರನ್ನು ತಿಳಿಯಲು ಉತ್ತಮ ಅವಕಾಶವನ್ನು ಕಲ್ಪಿಸಿತ್ತು.

ನೋಡ ನೋಡುತ್ತಿದ್ದಂತೆ ಎರಡು ವರ್ಷಗಳು ಕಳೆದುಹೋಗಿದ್ದವು. ಮುಂದೇನು ಅನ್ನೋ ಚಿಂತೆ. ಮಂಗಳೂರಿನಲ್ಲಿ ‘ಇಂಡಿಯನ್ ಎಕ್ಸ್ ಪ್ರೆಸ್’ ನಲ್ಲಿ ಟ್ರೈನಿ ರಿಪೋರ್ಟರ್ ಆಗಿ ಸೇರಿಕೊಂಡೆ. ನನ್ನ ವರದಿಗಳಿಗೆ ನಾನೆ ಫೋಟೋ ತೆಗೆಯುವ ಅವಕಾಶವು ಇತ್ತು. ಹಾಗಾಗಿ ಖುಷಿಯೇ ಖುಷಿ. ಮಳೆಗಾಲದಲ್ಲಿ ಗುಡ್ಡ ಕುಸಿದು ಮನೆಯವರು ಮೃತಪಟ್ಟ ಚಿತ್ರಗಳನ್ನು ತೆಗೆಯೋದು ಹಿಂಸೆಯ ವಿಷಯವಾಗಿತ್ತು.

ಜಿಲ್ಲಾ ಪಂಚಾಯತ್ ಗಳ ಮೀಟಿಂಗ್ ನಿಂದ ಹಿಡಿದು ದೇವೇಗೌಡರ ಭಾಷಣ ಕವರೇಜ್ ಮಾಡಿದ ನೆನಪುಗಳು ಹಾಗೇ ಇವೆ. ಜೆಡಿಎಸ್ ಪಕ್ಷ ಫೀನಿಕ್ಸ್ ಪಕ್ಷಿಯಂತೆ ಎದ್ದು ಬರುತ್ತದೆ ಅಂತ ಹೇಳುತ್ತಿದ್ದ ದೇವೇಗೌಡ್ರು ಇನ್ನು ಅದೇ ಡೈಲಾಗ್ ಹೇಳ್ತಾನೆ ಇದ್ದಾರೆ ಬಿಡಿ.

ಉಡುಪಿ ಜಿಲ್ಲೆ ಅಸ್ತಿತ್ತ್ವಕ್ಕೆ ಬಂದಾಗ ಜೆ. ಎಚ್. ಪಟೇಲ್ ಭಾಷಣ ಕೇಳೋ ಅವಕಾಶ. ತಮಗಿರುವ ದೌರ್ಬಲ್ಯವನ್ನು ಬಹಿರಂಗವಾಗಿ ಯಾವುದೇ ಮುಚ್ಚುಮರೆಯಿಲ್ಲದೆ ಅಂದಿನ ಮುಖ್ಯಮಂತ್ರಿ ಪಟೇಲರು ಹೇಳಿ ಮುಗಿಸಿದ್ರು.

ಕೆಲವು ತಿಂಗಳುಗಳ ಬಳಿಕ ‘ಜನವಾಹಿನಿ’ ಪತ್ರಿಕೆ ಸೇರಿದ್ದೆ. ಬಹುತೇಕ ಕಥೆ, ಕವನ, ರಿಪೋರ್ಟಿಂಗ್ ಎಲ್ಲ  ಪ್ರಯೋಗ ಮಾಡಲು ಸಾಧ್ಯವಾಗಿದ್ದು ಜನವಾಹಿನಿಯಲ್ಲಿ. ಸುರತ್ಕಲ್ ನಲ್ಲಿ ನಡೆದ ಗಲಭೆಯ ಸಂದರ್ಭದಲ್ಲಿನ ಪರಿಸ್ಥಿತಿ, ಇನ್ನು ಕೂಡ ಎದೆಯಲ್ಲೊಂದು ತಲ್ಲಣವನ್ನು ಹಾಗೆ ಉಳಿಸಿಬಿಟ್ಟಿದೆ.

ಮೈ ನಾ ಹಿಂದೂ ನಾ ಮುಸಲ್ಮಾನ್

ಮುಜೆ ಜೀನೆ ದೋ

ಈ ಸಾಲುಗಳನ್ನು ಉಲ್ಲೇಖಿಸಿ ಕೆಲವು ಸಾಲುಗಳನ್ನು ಗಲಭೆಯ ಬಗ್ಗೆ ಬರೆದ ನೆನಪುಗಳಿವೆ.

ಹಾಗೆ ದಿನಪತ್ರಿಕೆಯ ಮೇಲೆ ಕಣ್ಣಾಡಿಸಿದಾಗ ಕನ್ನಡ ಚಾನೆಲ್ ಆರಂಭವಾಗುವ ಮತ್ತು ವರದಿಗಾರರ ಅಗತ್ಯತೆಯ ಬಗ್ಗೆ ಉಲ್ಲೇಖಿಸಿ ಬಯೋಡಾಟ ಕಳಿಸಲು ಅದ್ರಲ್ಲಿ ವಿಳಾಸವನ್ನು ನೀಡಲಾಗಿತ್ತು. ಟ್ರೈ  ಮಾಡೋಣವೆಂದು ವಿವರವನ್ನು ಕಳಿಸಿಕೊಟ್ಟೆ. ಮತ್ತೆ ಸಂದರ್ಶನಕ್ಕೆ ಆಹ್ವಾನ ಬಂತು. ಹಾಗೆ ಆಯ್ಕೆಯಾದೆ. ಅಪ್ಪನ ಜೊತೆ ಒಂದಿಷ್ಟು ಓಡಾಡಿದ್ರು ಬೆಂಗಳೂರು ಇನ್ನು ಅಪರಿಚಿತವಾಗಿತ್ತು. ಹೊಸ ಸವಾಲುಗಳು, ಹೊಸ ಉದ್ಯೋಗ , ಹೊಸ ಮುಖಗಳು, ಸೂಕ್ಷ್ಮ ಮನಸ್ಸಿನ ನನಗೆ ಕಾಡುತ್ತಿದ್ದ ಮನೆಯ ನೆನಪುಗಳು…

voilence2ಬೆಂಗಳೂರು ಮೊದಲಿಗೆ ನನ್ನನ್ನು ಅಳಿಸಿತ್ತು. ಬರ ಬರುತ್ತಾ ಇಲ್ಲಿನ ರಸ್ತೆಗಳಿಗೆ ಪಾದ ಹೊಂದಿಕೊಂಡಿತ್ತು. ತುಂಬಿದ ಬಸ್ ಗಳಲ್ಲಿ ನಿಂತು ಹಳ್ಳಿಯ ನೆನಪುಗಳಲ್ಲಿ ಹೊರಳುವ ಮನಸ್ಸಿನ ಜೊತೆ ಜೀವನ ಸಾಗುತ್ತಲೇ ಇತ್ತು.

ಇಷ್ಟು ವರ್ಷಗಳ ನಂತರ ಒಂದಂತೂ ಸ್ಪಷ್ಟವಾಗಿದೆ. ಸ್ಟುಡಿಯೋ ಜರ್ನಲಿಸಂ ಗಿಂತ ನನ್ನನ್ನು ಹೆಚ್ಚು ಎಳಿತಿರೋದು ಫೀಲ್ಡ್  ಜರ್ನಲಿಸಮ್ ಅನ್ನೋದು . ಕೆಲವು ಬಾರಿ ಸ್ಟುಡಿಯೋ ಡಿಸ್ಕಷನ್ಸ್, ಇಂಟರ್ ವ್ಯೂಸ್ ಮಾಡಿದ್ದೇನೆ, ಆದ್ರೆ ರಾಜ್ಯ ಸುತ್ತಿ ನೆಲದಲ್ಲೇ ಮಲಗಿ,  ಹಸಿದ ಹೊಟ್ಟೆಯಲ್ಲಿ ಕಳೆದ ರಾತ್ರಿಗಳು ನೋವಿಗಿಂತ ಖುಶಿ ಕೊಟ್ಟಿವೆ.

ಯಾರನ್ನೂ ಅನುಕರಿಸಲು ಒಪ್ಪದ ಮನಸ್ಸು ಪಿ. ಸಾಯಿನಾಥ್ ಅವರ ‘ಎವರಿಬಡಿ ಲವ್ಸ್ ಎ ಗುಡ್ ಡ್ರಾಟ್’ ಎಂಬ ಪುಸ್ತಕದಿಂದ ಸಾಕಷ್ಟು ಪ್ರೇರಣೆಯನ್ನು ಪಡೆದಿದೆ. ಇದು ಕಳೆದ ಮೂರು ವರ್ಷಗಳ ಹಿಂದೆ ಸಿರಿಸಾಮಾನ್ಯನ ಬದುಕು ಬವಣೆ, ಸಾಧನೆ, ಹೀಗೆ ಹತ್ತು ಹಲವು ಮುಖಗಳ ಪರಿಚಯಿಸಿಕೊಳ್ಳುವ ಸಿರಿಸಾಮಾನ್ಯ ಎಂಬ 20 ಕಾರ್ಯಕ್ರಮಗಳನ್ನು ಮಾಡಲು ಮುಖ್ಯ ಪ್ರೇರಣೆಯೂ ಕೂಡ.

ಏನೋ ಹೇಳೋಕೆ ಹೊರಟು ವಿಷಯ ಎಲ್ಲೋ ಹೋದ ಹಾಗಿದೆ ಅಲ್ವಾ? ಸರಿ ಮತ್ತೆ ವಾಪಸು ಹೋಗ್ತೀನಿ. ನನ್ನ ವೃತ್ತಿ ಬದುಕಿನ ಮೊದಲ ಕವರೇಜ್ ಏನು ಅಂದ್ರೆ ನೆನಪಿಗೆ ಬರೋದು ಮಾಡೆಲ್ ಗಳು ಭಾಗವಹಿಸಿದ್ದ ಆ ಕಾರ್ಯಕ್ರಮ. ರಾತ್ರಿಯಲ್ಲಿ ಕಾರ್ಯಕ್ರಮ ಕವರೇಜ್ ಮಾಡೋದು ಸ್ವಲ್ಪ ಕಷ್ಟದ ಕೆಲಸ . ಹಳ್ಳಿಯಲ್ಲಿ ಬೆಳೆದ ನಂಗೆ ರಾತ್ರಿಯಾಗುತ್ತಿದ್ದಂತೆ ಮನೆ ಸೇರಬೇಕೆಂಬ ಕಲ್ಪನೆ. ತೀರಾ ಮಾಡ್ ಆಗಿದ್ದ ಮಾಡೆಲ್ ಗಳ ಕಾರ್ಯಕ್ರಮ ಕೌತುಕವನ್ನು ಹುಟ್ಟಿಸಿತ್ತು ಜೊತೆಗೆ ಸಣ್ಣದೊಂದು ಆತಂಕವನ್ನು ಕೂಡ.

ನನ್ನನ್ನು ಯಾರು ನೋಡೋರು ಇಲ್ಲಾಂದ್ರು  ರಾತ್ರಿಯಿದ್ದು ಕವರೇಜ್ ಮಾಡೋದು ಆತಂಕವನ್ನು ಹುಟ್ಟಿಸಿತ್ತು. ಬಿಪಾಷಾ ಬಸು, ಜಾನ್ ಅಬ್ರಹಾಂ ಅವರ ಪ್ರತಿಕ್ರಿಯೆಯನ್ನು ನನ್ನ ಸ್ಟೋರಿಗಾಗಿ ತಗೊಂಡೆ. ಮಾಡೆಲ್ ಗಳು ಸಿನಿಮಾದತ್ತ ಅನ್ನೋದು ನನ್ನ ಸ್ಟೋರಿಯಾಗಿತ್ತು.

ಅಬ್ಬಾ ಅಂತು ಇಂತು ಮನೆ ಸೇರಿದಾಗ ರಾತ್ರಿ ಒಂದು ದಾಟಿತ್ತು. ಪುಟ್ಟದೊಂದು ಆತಂಕದೊಂದಿಗೆ ಮನೆ ಸೇರಿ ಮಲಗಿದಾಗ ನಿದ್ದೆ ಅದ್ಹೇಗೆ ಆವರಿಸಿತ್ತೋ ತಿಳೀಲೇ ಇಲ್ಲ.

ಮತ್ತೊಂದು ನೆನಪಿನ ಗರಿಯೊಂದಿಗೆ ನೆಕ್ಸ್ಟ್ ವೀಕ್ ಸಿಗ್ತೀನಿ..

‘ಅವಧಿ’ಗಾಗಿ

ಇರ್ವತ್ತೂರಿನಿಂದ

ಜ್ಯೋತಿ 

 

‍ಲೇಖಕರು Admin

14 June, 2016

4 Comments

  1. shama nandibetta

    Soooooper

    waiting for next week

  2. chi.na. halli kirana

    Bahala dinagalinda entaha madyama mitrara spandanegalu haagu avara visistavada anubavagala bagge tilidukolluva hambalavittu ‘avadhi ‘ ya mulaka namma prabhutvada naalkane stambagalantiruva
    entaha ditta patrakartra kanasu galu mattu sadhanegalannu tilidu kolluva khushiyalli ,,,,,abhiinandanegalannu sallisutta mundina bararahada nireksheyondige….
    Chi na halĺi kirana

  3. ಆದಿವಾಲ ಗಂಗಮ್ಮ

    Wow….very interesting
    Waiting for next week

  4. ಚಲಂ

    ಪತ್ರಿಕೋದ್ಯಮದ ವಿವಿದ ಮಜಲುಗಳ ಸೂಕ್ಷ್ಮ ನಿರೂಪಣೆಯ ನಿರೀಕ್ಷೆಯಲ್ಲಿ…ಒಳ್ಳೆಯ ಪ್ರಾರಂಭ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading