ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೈಸೂರು ಅನಂತಸ್ವಾಮಿ and ಇನ್ನೂ ಇಬ್ಬರು ತರ್ಲೆಗಳು

“ನಾನು ಮಹಾರಾಜಾಸ್ ಕಾಲೇಜ್ ನಲ್ಲಿ BA ಓದ್ತಾ ಇದ್ದೆ ಅವನು ಯುವರಾಜಾಸ್ ಕಾಲೇಜ್ ನಲ್ಲಿ Intermediate ಓದ್ತಾ ಇದ್ದಾ. ಆಗೆಲ್ಲ ನಾವಿನ್ನೂ ಹಿಂದಿ ಚಲನಚಿತ್ರ ಗೀತೆಗಳನ್ನ ಹಾಡ್ತಿದ್ವಿ. ಒಂದಿನ ನಾನು ‘ಘನ ಶಾಮ ಸುಂದರ’ ಹಾಡನ್ನ ಸೀನಿಯರ್ BA Hall ನಲ್ಲಿ ಕುಳಿತು ಹಾಡ್ತಿದ್ದೆ. ಇವನು ಕೊಳಲು ಹಿಡಿದುಕೊಂಡು ಬಂದ. ಆಗಿನ್ನೂ ಮ್ಯಾಂಡೊಲಿನ್ ನುಡಿಸುತ್ತಿರಲಿಲ್ಲ. ಮತ್ತೆ ಹಾಡ್ತೀರಾ ಅಂತ ಕೇಳ್ದ, ನಾನು ಮತ್ತೆ ಹಾಡ್ದೆ, ಅವನು ಅದಕ್ಕೆ ಕೊಳಲು ನುಡಿಸ್ದ, ಮತ್ತೆ ಹಾಡಿ ಅಂದ, ಮತ್ತೆ ಹಾಡ್ದೆ, ಮತ್ತೆ ಕೊಳಲು ನುಡಿಸ್ದ, ಹೀಗೆ ನಮ್ಮ ಪರಿಚಯ ಆದದ್ದು”, ಅಂತ ಬಹಳ ಆತ್ಮೀಯವಾಗಿ ಜ್ಞಾಪಿಸಿಕೊಂಡರು, ನಾಡಿನ ಭಾವಗೀತೆ ಗಾಯನದ ಮೊದಲಿಗರಲ್ಲೊಬ್ಬರಾದ ಶ್ರೀಮತಿ ಎಚ್ ಆರ್ ಲೀಲಾವತಿ ಅವರು.

avadhi-column-mysore-ananthaswamy-poster-full“ನಮಗೆ ಬೇಕಾದ ಹುಡುಗ ಅವನು, ವಯಸ್ಸಿನಲ್ಲಿ ನನಗಿಂತ ಮೂರು ವರ್ಷ ಚಿಕ್ಕವನು. ನನಗೆ ನಿಮ್ಮಪ್ಪನ ಮೇಲೆ ಬಹಳ ಗೌರವ ಕಣೋ ಪುಟ್ಟ. ೧೯೮೧-೮೨ ನಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸದಸ್ಯನಾಗಿದ್ದಾಗ, ಹೋರಾಡಿ , ಸುಗಮ ಸಂಗೀತಕ್ಕೆ ಒಂದು ಸ್ಥಾನ ಕೊಟ್ಟು, ಅದಕ್ಕೆ ಪ್ರಶಸ್ತಿ ಕೊಡಬೇಕು ಎಂದು ಸ್ಥಾಪಿಸಿ, ನನಗೆ ಮೊಟ್ಟ ಮೊದಲ ಪ್ರಶಸ್ತಿ ಕೊಡಿಸಿದ. ಈ ಪಟ್ಟ ನನಗೆ ಅವನಿಂದಲೇ ಸಿಕ್ಕಿದ್ದು”.

“ಅನಂತಸ್ವಾಮಿ ಬಹಳ ಸ್ನೇಹ ಜೀವಿ. ಅವನದು ಎಷ್ಟು ದೊಡ್ಡ ಮನಸ್ಸು ಅಂದ್ರೆ ನಾನು ಕರೆದಾಗೆಲ್ಲ ನಮ್ಮ ಅಕಾಡೆಮಿಗೆ ಬೆಂಗಳೂರಿನಿಂದ ಸ್ವತಃ ತಾನೇ ಚಾರ್ಜ್ ಹಾಕೊಂಡು ಬರ್ತಿದ್ದ. ಸುಮಾರು ನಾಲ್ಕು ಸಲ ಬಂದಿದ್ದಾನೆ, ಒಂದು ಸಲವೂ ನಮ್ಮ ಅಕಾಡೆಮಿ ಇಂದ ದುಡ್ಡು ತಗೊಂಡೇ ಇಲ್ಲ. ಕೊಡಕ್ ಹೋದಾಗೆಲ್ಲ ಇವರಿಗೆ, “ಏಯ್, ನಿನ್ನ ಹತ್ತಿರ ಏನೋ, ನನಗೆ ಏನೂ ಬೇಡ, ಅದೆಲ್ಲ ನಿಮ್ಮ ಅಕಾಡೆಮಿಗೆ ಉಪಯೋಗಿಸಿ ಕೊಳ್ಳಿ” ಅಂತ ಹೇಳ್ತಿದ್ದ.

ಇನ್ನೊಮ್ಮೆ ನನ್ನ ಶಿಷ್ಯಂದಿರು ಅವನ ಕಾರ್ಯಕ್ರಮಕ್ಕೆ ಹೋಗಿ ನಿಮ್ಮ ಹಾಡುಗಳೆಲ್ಲ ನಮಗೆ ಗೊತ್ತಿದೆ, ಜೊತೆಗೆ ಹಾಡಬಹುದಾ ಅಂತ ಕೇಳಿದಾಗ, ಸಂತೋಷವಾಗಿ, ಚಿಕ್ಕವರು ಅಂತ ಲೆಕ್ಕಿಸದೇ, ಅವರನ್ನ ಸ್ಟೇಜ್ ಮೇಲೆ ಕೂರಿಸಿ ಜೊತೆಗೆ ಹಾಡಿಸಿದ್ದಾನೆ. ಎಂಥಾ ದೊಡ್ಡ ಕಲಾವಿದ ಆಗಿದ್ರೂ ಎಲ್ಲರ ಮೇಲೆ ಎಷ್ಟು ಗೌರವ ಇರುತ್ತಿತ್ತು. ಅನಂತಸ್ವಾಮಿ ‘ಹೃದಯ ಕಮಲದಿ’ ಮಧುರ ಹಾಡನ್ನ ರಾಗ ಸಂಯೋಜನೆ ಮಾಡಿ ಕೇಳಿಸಿದ್ದು ನನಗೆ ಇನ್ನೂ ನೆನಪಿದೆ. ಅದು ನನಗೆ ಬಹಳ ಅಚ್ಚುಮೆಚ್ಚಿನ ಭಾವಗೀತೆ”.

“ಅನಂತಸ್ವಾಮಿ ರಾಗ ಸಂಯೋಜಿಸಿರುವ ‘ಜಯ ಭಾರತ ಜನನಿಯ ತನುಜಾತೆ’ ಕೂಡ ನನಗೆ ಬಹಳ ಇಷ್ಟವಾದದ್ದು. ನಾನು ಕೂಡ ಇದನ್ನ ಮೊದಲು ಬೇರೆ ರಾಗದಲ್ಲಿ ಹಾಡಿದ್ದರೂ ನನಗೆ ಅನಂತಸ್ವಾಮಿ ಸಂಯೋಜಿಸಿರುವ ಧಾಟಿ ಬೇರೆಲ್ಲಾ ಧಾಟಿಗಳಿಗಿಂತ ಹೆಚ್ಚು ಇಷ್ಟವಾದದ್ದು ಹಾಗು ವೃಂದ ಗಾಯನಕ್ಕೆ ಬಹಳ ತಕ್ಕಾಗಿದೆ ಅನ್ನಿಸುತ್ತೆ”.

“ನಾನು, ಕಾಳಿಂಗ ರಾವ್ ಮತ್ತೆ ಅನಂತಸ್ವಾಮಿ, ಆಗಿನ ಕಾಲದಲ್ಲಿ, ಒಬ್ಬರೇ ಕೂತು, ಮೂರು – ಮೂರುವರೆ ಗಂಟೆಗಳ ಕಾಲ ಬರೀ ಭಾವಗೀತೆಗಳ ಕಾರ್ಯಕ್ರಮಗಳನ್ನು ಕೊಡ್ತಿದ್ವಿ. ನನಗೆ ಪಕ್ಕವಾದ್ಯ ಬರೀ ಒಂದು ಪಿಟೀಲು, ಒಂದು ತಬಲ. ಇವೆರಡೇ ಇಟ್ಕೊಂಡು ಗಂಟೆಗಟ್ಲೆ ಹಾಡ್ತಿದ್ದೆ.”

ನಾನು ಶ್ರೀಮತಿ ಎಚ್ ಆರ್ ಲೀಲಾವತಿ ಅವರಿಗೆ ಫೋನ್ ಮಾಡಿ, “aunty ನೀವು ಅಣ್ಣನ್ನ ಯಾವಾಗ ಫಸ್ಟ್ ಮೀಟ್ ಮಾಡಿದ್ದು? ನಿಮ್ಮ ಕಾಲೇಜು ದಿನಗಳ ನೆನಪುಗಳನ್ನ ದಯವಿಟ್ಟು ಹಂಚಿಕೊಳ್ತೀರಾ” ಅಂತ ಕೇಳ್ಡಾಗ, ಅವರು ಏನ್ ಮಾಡ್ತಿದ್ರೋ ಏನೋ, ಎಷ್ಟ್ busy ಆಗಿದ್ರೋ ಏನೋ, ಒಂದು ಕ್ಷಣವು ಯೋಚಿಸದೆ ಬಹಳ ಆತ್ಮೀಯವಾಗಿ ಮಾತನಾಡಿದರು. ನನ್ನ ಖುಷಿ ಅಷ್ಟಿಷ್ಟ್ ಅಲ್ಲ!! ಹೃದಯ ತುಂಬಿ ಬಂತು, ಥಾಂಕ್ ಯು aunty!!

ಮೂರು ತರ್ಲೆಗಳು: ದೊರೆ, ಸೋಮು, ಗುಣ

ಅಣ್ಣ ಮತ್ತೆ ಸೋಮು ಅಂಕಲ್ ಇವರಿಬ್ಬರನ್ನ ಜೊತೆಗೆ ನೋಡಿದಾಗೆಲ್ಲ, ಅದ್ಯೇನೋ ಜೋಕ್ಸು , ಅವರಿಗೆ ಮಾತ್ರ ಅರ್ಥವಾಗುವಂಥ inside jokes ಮಾಡ್ಕೊಂಡು ಕಿಸಿಯೋರು. ಒಮ್ಮೆ ಸೋಮು ಅಂಕಲ್ ಮನೆಗೆ ಬಂದಿದ್ದರು. ಬರ್ತಿದ್ದ ಹಾಗೆ “ಛಂದನೆ” ಅಂದ್ರು, ಅಣ್ಣ ಜೋರಾಗಿ ನಗಕ್ಕೆ ಶುರು ಮಾಡಿದ್ರು, ಅವತ್ತು ಅವರು ಹೋಗೋ ತನಕ “ಛಂದನೆ” ಅನ್ನೋದು, ನಗೋದು, ನಡೀತಾನೇ ಇತ್ತು. ಅವರು ಹೋದ್ಮೇಲೆ ಕೇಳಿದಕ್ಕೆ ಅಣ್ಣ ಹೇಳಿದ್ರು, “ಒಮ್ಮೆ ನಾವು ಮೈಸೂರಿಂದ ವಾಪಸ್ಸು ಬರ್ತಿದ್ವಿ, ಒಂದು ಬೋರ್ಡ್ ಮೇಲೆ “ವಂದನೆ” ಅಂತ ಇತ್ತು. ಅದರಲ್ಲಿ ‘ವ’ ಅಕ್ಷರನ ಯಾರೋ ‘ಛ’ ಮಾಡಿಟ್ಟಿದ್ದರು. ನಾವು ದಾರಿ ಉದ್ದಕ್ಕೂ ಅವತ್ತು ಸಿಕ್ ಸಿಕ್ ದೋರ್ಗೆಲ್ಲ ‘ಛಂದನೆ’ ! ‘ಛಂದನೆ’! ಅಂದ್ಕೊಂಡ್ ಬರ್ತಿದ್ವೀ ” ಅಂತ ಹೇಳಿದ್ರು.

h-r-leelavathiಮೊನ್ನೆ ಸೋಮು ಅಂಕಲ್ ಗೆ ಫೋನ್ ಮಾಡಿದ್ದಾಗ “ಎಲ್ ಇದೀ ?” ಅಂತ ಕೇಳಿದ್ರು. “ಮಿಚಿಗನ್ ನಲ್ಲಿ” ಅಂತ ಹೇಳ್ದೆ. ಅದಕ್ಕೆ ಅವರು “ಹೌದ? ಇಲ್ಲೇ ಎಲ್ಲೊ ಪಕ್ಕದ್ ಮನೆಯಿಂದ ಮಾತಾಡ್ತಿರೋ ಹಾಗಿದ್ಯಲ್ಲೇ” ಅಂದ್ರು. ಅವರು ಅಣ್ಣನ್ನ ಮೊದಲು ಮೀಟ್ ಮಾಡಿದ್ದು, ಮಹಾರಾಜಾಸ್ ಕಾಲೇಜಿನ quadrangle ನಲ್ಲಿ. ಅಲ್ಲಿ ಅಂದು ನಡೆಯುತ್ತಿದ್ದ ಎ. ಎನ್. ಮೂರ್ತಿ ರಾವ್ ಅವರ ‘ಆಷಾಢಭೂತಿ’ ನಾಟಕವನ್ನು ಇವರು ಪ್ರದರ್ಶಿಸುತ್ತಿದ್ದರು. “scene ಗಳ ಮಧ್ಯ ನಿಮ್ಮಪ್ಪನ ಹಾಡು. ಅಂದು ಸುಮಾರು ೧,೫೦೦ ರರಷ್ಟು ಜನ ಸೇರಿದ್ರು. ಅವತ್ತು ಅವನು ಮ್ಯಾಂಡೊಲಿನ್ ಇಟ್ಕೊಂಡು ‘ಇಳಿದು ಬಾ ತಾಯಿ’ ಹಾಡ್ದ .” ಅಂತ ಜ್ಞಾಪಿಸಿಕೊಳ್ತಾ ಹೋದರು.

“ನಾನು ಆಗ MA ವಿದ್ಯಾರ್ಥಿ, ಬಲ್ಲಾಳ್ ಹೋಟೆಲ್ ಮಹಡಿಯಲ್ಲಿ ಒಂದು ರೂಮ್ ನಲ್ಲಿ ಇರ್ತಾ ಇದ್ದೆ. ಅಲ್ಲಿ ಬಹಳ ಗದ್ದಲ ಆಗ್ತಿತ್ತು, ಸರಿಯಾಗಿ ಓದಕ್ಕಾಗ್ತಾ ಇರಲಿಲ್ಲ , ಅದಕ್ಕೆ ದೊರೆ ನನ್ನ ಜೊತೆ ಬಂದಿರು, ನಮ್ಮಪ್ಪ ಅಮ್ಮ ತರೀಕೆರೆನಲ್ಲಿ ಇದ್ದಾರೆ, ನನ್ನ ರೂಮ್ ಇದೆ, ನೀನು ಅಲ್ಲೇ ಬಂದು ಇರಬಹುದು ಅಂತ ಹೇಳ್ದ. ಹೀಗಾಗಿ ನಾನೂ ಅವನು ಸುಮಾರು ಆರು ವರ್ಷಗಳ ಕಾಲ ಜೊತೆಗೆ ಇದ್ವಿ.” ಎಂದು ಹೇಳಿದ್ರು .

ಇವರ ಜೊತೆ ಪ್ರಸಿದ್ಧ ಕೊಳಲುವಾದಕರು ಹಾಗು Music arranger ಆದ ಶ್ರೀ ಗುಣಸಿಂಗ್ ಕೂಡ ಇದ್ದರು. ಅಣ್ಣ ಹಾಗು ಇವರು ಸುಮಾರು ಒಂದೇ ಸಲ ಮದರಾಸಿಗೆ ಹೋಗಿದ್ದು. ಗುಣಸಿಂಗ್ ಅವರು ಅಲ್ಲೇ ಉಳಿದು ಕೊಂಡರು, ಆದ್ರೆ ಅಣ್ಣ ಕರ್ನಾಟಕಕ್ಕೇ ವಾಪಸ್ ಬಂದ್ಬಿಟ್ರು. ಗುಣಸಿಂಗ್ ಅವರು ಹಲವಾರು ಕನ್ನಡ ಹಾಗು ತಮಿಳು ಚಲನಚಿತ್ರಗಳಿಗೆ assistant music director ಆಗಿ ಕೆಲಸ ಮಾಡಿದ್ದಾರೆ. ಎಷ್ಟೋ ಜನಕ್ಕೆ ಅವರು ಯಾರು ಅಂತ ಗೊತ್ತಿಲ್ಲದಿದ್ದರೂ ಅವರ ಇಂಪಾದ ಕೊಳಲನ್ನು ಖಂಡಿತ, ಯಾವುದಾದರೂ ಚಲನಚಿತ್ರದಲ್ಲಿ ಕೇಳೇ ಇರ್ತಾರೆ.

ಈ ಮೂವರು ತಮ್ಮ ತಮ್ಮ ವೃತ್ತಿಯ ಬೇರೆ ಬೇರೆ ದಾರಿಗಳನ್ನ ಹಿಡಿದು ಅಗಲುವ ತನಕ ಸುಮಾರು ೬ ವರ್ಷಗಳ ಕಾಲ ಜೊತೆಗಿದ್ದು ತಮ್ಮ ಕಷ್ಟ ಸುಖಗಳನ್ನು ಹಂಚಿಕೊಂಡವರು.

ಒಂದು ಪ್ರಸಂಗವನ್ನು ಅಣ್ಣ ಯಾವಾಗ್ಲೂ ಹೇಳೋರು:
ಒಮ್ಮೆ ಈ ಮೂರು ತರ್ಲೆಗಳು, ಬಲ್ಲಾಳ್ ಹೋಟೆಲ್ ಮುಂದೆ ಕಲ್ ಬೆಂಚಿನ ಮೇಲೆ ಕೂತಿದ್ರಂತೆ. ಹಾಗೆ ಹೋಗುತ್ತಿದ್ದ ಯಾರೋ ಒಬ್ಬ ವ್ಯಕ್ತಿ ಇವರ ಕಣ್ಣಿಗೆ ಬಿದ್ರಂತೆ. ಸ್ವಲ್ಪ ಮಜಾ ತೊಗೊಳೋಣ ಅಂತ, ಸೋಮು ಅಂಕಲ್ ಅವರನ್ನ ಮಾತಾಡಿಸಿಕೊಂಡು ಹೋದರಂತೆ. ಸ್ವಲ್ಪ ದೂರ ಹೋಗ್ತಿದ್ ಕೂಡ್ಲೇ, ಇದ್ದಕಿದ್ದಂತೆ, ಸೋಮು ಅಂಕಲ್ ಜೋರಾಗಿ ಓಡ್ಕೊಂಡು ವಾಪಸ್ ಬಂದ್ ಬಿಟ್ರಂತೆ.

ಅಲ್ಲೇ ಬೆಂಚ್ ಮೇಲೆ ಕೂತಿದ್ದ ಅಣ್ಣ ಮತ್ತೆ ಗುಣಸಿಂಗ್ ಅವರು ಆಗ್ಲೇ ನಗಕ್ಕೆ ಶುರು ಮಾಡಿದ್ರಂತೆ, ಆಗಿದ್ದೇನು ಅಂತ ಗೊತ್ತಾದ ಮೇಲೆ ಇನ್ನೂ ಬಿದ್ದೂ ಬಿದ್ದೂ ನಗಕ್ಕೆ ಶುರು ಮಾಡಿದ್ರಂತೆ.

r-k-narayan-postage-stampಮೊನ್ನೆ ಸೋಮು ಅಂಕಲ್ ನನಗೆ ಆ ಸಂಭಾಷಣೆ ಫೋನ್ ನಲ್ಲಿ ವಿವರಿಸಿದರು:

ಸೋಮು ಅಂಕಲ್ ಆ ವ್ಯಕ್ತಿಯನ್ನು ಹಾಗೆ ಮಾತಾಡಿಸ್ತಾ ‘ವಾಟ್ ಡು ಯು ಡು ‘ ಅಂತ ಕೇಳಿದಾರೆ. ಅದಕ್ಕೆ ಅವರು ‘ಐ ಆಮ್ ಎ ರೈಟರ್’ ಅಂತ ಉತ್ತರಿಸಿದ್ದಕ್ಕೆ ಇವರು ‘ಯಾವ ಆಫೀಸ್ ನಲ್ಲಿ ಕೆಲಸ ಮಾಡ್ತೀರಾ’ ಅಂತ ಕೇಳಿದಾರೆ. ಯಾಕೆಂದ್ರೆ ಆಗಿನ ಕಾಲದಲ್ಲಿ ಕ್ಲರ್ಕ್ ಗಳನ್ನ ರೈಟರ್ ಅಂತ ಕರೀತಿದ್ರು. ಅದಕ್ಕೆ ಆ ವ್ಯಕ್ತಿ ‘ಐ ರೈಟ್ ಬುಕ್ಸ್’ ಅಂತ ಹೇಳಿದಕ್ಕೆ ಇವರು ಮತ್ತೆ ‘ಏನ್ ಬರೀತೀರ ನೀವು? ಯುವರ್ ನೇಮ್’ ಅಂತ ಕೇಳಿದಕ್ಕೆ ಅವರು, ‘ಐ ಆಮ್ R K Narayan ‘ ಅಂದ್ರಂತೆ. ಆ ಹೆಸರು ಕೇಳಿದ್ದೇ ತಡ ಸೋಮು ಅಂಕಲ್ ಶಾಕ್ ಆಗಿ, ಮುಂದೆ ಏನ್ ಹೇಳ್ಬೇಕು ಅಂತ ಗೊತ್ತಾಗದೇ ಅಲ್ಲಿಂದ ವಾಪಸ್ಸು ಓಡ್ಕೊಂಡು ಕಲ್ ಬೆಂಚ್ ಹತ್ತಿರ ಬಂದ್ರು.

ಸೋಮು ಅಂಕಲ್, ಉರ್ಫ್ ಎಚ್ ಜಿ ಸೋಮಶೇಖರ ರಾವ್ ಅವರು ಬರೆದಿರುವ ‘ಸೋಮಣ್ಣನ ಸ್ಟಾಕ್ ನಿಂದ ‘ ಎಂಬ ಪುಸ್ತಕದಲ್ಲಿ ಈ ಮೇಲಿನ ಪ್ರಸಂಗ ಹಾಗು ಅವರ ಜೀವನದ ಮತ್ತಿತ್ತರ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಅಣ್ಣನಿಗೆ ಗ್ರೇಟ್ ಸೆನ್ಸ್ ಆಫ್ ಹ್ಯೂಮರ್ ಇತ್ತು. situation ತುಂಬಾ ಸೀರಿಯಸ್ ಆಗಿ ಕಡೆಗೆ ಎಲ್ಲಾರೂ ಬೇಜಾರ್ ಮಾಡ್ಕೊಂಡಿದ್ದ ಮೇಲೆ ಹೇಗೋ ಅದರಲ್ಲಿನ ಹ್ಯೂಮರ್ ಅನ್ನು ಕಾಣುತ್ತಿದ್ದರು.

ಒಮ್ಮೆ ಮೈಸೂರಿಗೆ ಕಾರ್ಯಕ್ರಮಕ್ಕಾಗಿ ಹೋದೆವು. ಟ್ರೈನ್ ನಲ್ಲಿ ಹೋಗುವಾಗ, ನಮ್ಮ ತಂಡದಲ್ಲಿದ್ದ ಒಬ್ಬರ ಸೂಟ್ ಕೇಸ್ ಯಾರೋ ಕದ್ದುಬಿಟ್ಟರು. ಅದನ್ನು ಹುಡುಕಿ, ರೈಲ್ವೆ ಸ್ಟೇಷನ್ ನಲ್ಲಿ ಕಂಪ್ಲೇಂಟ್ ಕೊಟ್ಟು ಕಾರ್ಯಕ್ರಮಕ್ಕೆ ಹೋದೆವು. ಅಂದು ನಮ್ಮ ತಂಡದ ಆ ಕಲಾವಿದರಿಗೆ ಬದಲಾಯಿಸಲು ಬೇರೆ ಬಟ್ಟೆ ಕೂಡ ಇರಲಿಲ್ಲ, ಹಾಗೆ ಬೆಂಗಳೂರಿನಿಂದ ಹಾಕಿಕೊಂಡು ಬಂದಿದ್ದ ಪ್ಯಾಂಟ್ ಶರ್ಟ್ ನಲ್ಲೇ ಕಾರ್ಯಕ್ರಮ ಮಾಡಿದರು. ಕಾರ್ಯಕ್ರಮ ಮುಗಿಯುತ್ತ ಬಂತು. ಅಣ್ಣ ಸ್ವಾಮೀಜಿ ಹಾಡು, ನಮ್ಮೂರಿನ ವೈಭವ ಹಾಡಾದ್ರು. ಹಾಡಿನ ಮುಕ್ತಾಯದಲ್ಲಿ ‘ಹರೆ ರಾಮಕೃಷ್ಣ ಗೋವಿಂದ – ನಾರಾಯಣ’ ಅಂತ ಮೂರ್ ನಾಕ್ ಸಲ ಹಾಡಿ ಮುಗಿಸುವುದು. ಆದ್ರೆ ಅವತ್ತು ಅಣ್ಣ ಮಧ್ಯದಲ್ಲಿ ರಾಮಕೃಷ್ಣ ಬದಲು ‘ಸೂಟ್ ಕೇಸು ಗೋವಿಂದ – ನಾರಾಯಣ ‘ ಅಂತ ಮೂರ್ ಸಲ ಹೇಳಿ ನಮ್ಮೆಲ್ಲರನ್ನು ನಗಿಸಿದರು!!

‍ಲೇಖಕರು Admin

16 December, 2016

ನಿಮಗೆ ಇವೂ ಇಷ್ಟವಾಗಬಹುದು…

1 Comment

  1. Anonymous

    Oh what a great.memory..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading