ವಾಲ್ಮೀಕಿ ರಾಮಾಯಣ ಆಧಾರಿತ ಸರಣಿಯ ಎರಡನೇ ಭಾಗ ‘ಅರಣ್ಯಕಾಂಡ’ ನಾಟಕದ ಮರುಪ್ರದರ್ಶನ
ನವೋದಯ ಅರ್ಪಿಸುವ ವಾಲ್ಮೀಕಿ ರಾಮಾಯಣ ಆಧಾರಿತ ಸರಣಿಯ ಎರಡನೇ ಭಾಗ ‘ಅರಣ್ಯಕಾಂಡ’ ನಾಟಕದ ಮರುಪ್ರದರ್ಶನ ಏಪ್ರಿಲ್ 30ರ ಭಾನುವಾರ ಸಂಜೆ ೭ಕ್ಕೆ ಕಲಾಮಂದಿರ ಆವರಣದ ಕಿರುರಂಗಮದಿರದಲ್ಲಿ ಪ್ರದರ್ಶನಗೊಳ್ಳಲಿದೆ. ಹಿರಿಯ ರಂಗಕರ್ಮಿ ಪ್ರಸನ್ನ ಅವರು ಈ ನಾಟಕವನ್ನು ರಚಿಸಿದ್ದು, ಶೀಪಾದ್ ಭಟ್ ನಿರ್ದೇಶಿಸಿದ್ದಾರೆ. ಅನುಷ್ ಶೆಟ್ಟಿ ಸಂಗೀತ ನೀಡಿದ್ದಾರೆ.
ಸೀತಾರಾಮರು ತಮ್ಮ ವನವಾಸದ ಮೊದಲ ಹದಿಮೂರು ವರ್ಷ ದಂಪತಿಗಳಂತಲ್ಲ ಪ್ರೇಮಿಗಳಂತೆ ಕಳೆದರು. ಅರ್ಥಾತ್ ವನವಾಸದಲ್ಲಿ ಮಗು ಮಾಡುವುದು ಸಾಧುವಲ್ಲ ಎಂಬ ಅರಿವಿದ್ದ ಯುವಕರವರು. ಹಾಗಾಗಿ ಅರಣ್ಯ ಕಾಂಡವು ಒಂದು ಅಸಾಧಾರಣ ಪ್ರೇಮಕಥೆಯೂ ಹೌದು. ಎಲ್ಲ ನಾಟಕಗಳಲ್ಲಿ ನಾಟಕೀಯ ವೈರುಧ್ಯ ಅಗತ್ಯ. ಇಲ್ಲಿ ಪ್ರೇಮಕ್ಕೆ ಪ್ರತಿಯಾಗಿ ಮೋಹವನ್ನು ನಿಲ್ಲಿಸಲಾಗಿದೆ, ಸೀತೆಗೆ ಪ್ರತಿಯಾಗಿ ಶೂರ್ಪನಖಿಯನ್ನು ನಿಲ್ಲಿಸಲಾಗಿದೆ. ಶೂರ್ಪನಖಿ ಸುಂದರಿ. ಸೀತೆ ಗೋಧಿ ಬಣ್ಣದ ಸುಂದರಿಯಾದರೆ ಶೂರ್ಪನಖಿ ರಾಗಿ ಬಣ್ಣದ ಸುಂದರಿ. ಶೂರ್ಪನಖಿ ರಾಮನಲ್ಲಿ ಅನುರಕ್ತಳಾಗುತ್ತಾಳೆ. ಆದರೆ ಅವಳದ್ದು ಮೋಹ. ಸೀತೆಯದು ಕೊಡುವ ಪ್ರೀತಿಯಾದರೆ ಶೂರ್ಪನಖಿಯದು ಬೇಡುವ ಮೋಹ. ರಾಮ ಮರ್ಯಾದೆ ಕಾಪಿಟ್ಟುಕೊಂಡು ಬರುವ ಒಬ್ಬ ಸರಳ ಸಜ್ಜನ ಯುವಕ. ವಿಚಲಿತನಾಗದ ಧೀರ. ಅವನು ಆರ್ಯನೆನ್ನುವುದು ಅವನ ಹಿರಿಮೆಯಲ್ಲ, ಇವಳು ಅಸುರಳೆಂಬುದು ಇವಳ ಕೀಳರಿಮೆಯಲ್ಲ.
ನವೋದಯ ಎಂಬ ರಾಷ್ಟ್ರೀಯ ಮಟ್ಟದ ರೆಪರ್ಟರಿ ಸಂಸ್ಥೆ ಕಳೆದೊಂದು ವರ್ಷದಿಂದ, ವೃತ್ತಿಪರ ನಟರೊಂದಿಗೆ ಮೈಸೂರಿನಲ್ಲಿ ಕಾರ್ಯನಿರತವಾಗಿದೆ. ಎರಡು ನಾಟಕಗಳನ್ನು ಯಶಸ್ವಿಯಾಗಿ ಸಿದ್ಧಪಡಿಸಿ, ಈಗ ಅದನ್ನು ನಾಡಿನಾದ್ಯಂತ ಕೊಂಡೊಯ್ಯುವ ಕೆಲಸ ಮಾಡುತ್ತಿದೆ. ವಾಲ್ಮೀಕಿ ರಾಮಾಯಣ ಆಧಾರಿತ ಸರಣಿ ಸಂಗೀತ ನಾಟಕಗಳನ್ನು ಪ್ರಸ್ತುತಪಡಿಸುವ ಸಿದ್ಧತೆಯಲ್ಲಿ ತೊಡಗಿದೆ.









0 Comments