ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೇಟಿ ಸಿ ಡಿ ಬೆನ್ನಲ್ಲಿ..

ಪ್ರಾಮಾಣಿಕತೆ ಉಸಿರ ನಿಲ್ಲಿಸದು

ವೃತ್ತಿ ಪ್ರೀತಿಸುವವರಿಗೆ ಅಪೇಕ್ಷೆ ಸಲ್ಲದು

………………………..

ಹಿರಿಯ ಪತ್ರಕರ್ತ ರಾಜ್ ದೀಪ್ ಸರ್ ದೇಸಾಯಿ ಬರೆದ ಸಾಲುಗಳು ಮತ್ತೆ ಪ್ರಸ್ತುತವೆನಿಸಿತು. ಭ್ರಷ್ಟ ಪತ್ರಕರ್ತರು ಕೂಡ ಜೈಲಿಗೆ ಹೋಗುವುದನ್ನು ನಾನು ಎದುರುನೋಡುತ್ತಿದ್ದೇನೆ ಅನ್ನೋದು ಆ ಸಾಲುಗಳು.

ಬಹಳಷ್ಟು ಸಾರಿ ಈ ರೀತಿಯ ಚಿಂತನೆ ನನ್ನನ್ನು ಕಾಡಿದ್ದಿದೆ. ಈ ಮೂಲಕ ನಾನೊಬ್ಬಳೇ ಸ್ವಚ್ಛ ಅನ್ನೋ ಅಹಂಕಾರದ ಚಿಂತನೆ ಖಂಡಿತಾ ನನ್ನದಲ್ಲ. ಪತ್ರಿಕೋದ್ಯಮ ಅನ್ನೋದು ಪವಿತ್ರ ಮಾಧ್ಯಮ. ಆದರೆ ಇದರ ಪಾವಿತ್ರ್ಯತೆಯೆಲ್ಲೋ ಕೆಲವರಿಂದಾಗಿ ಕಳೆದುಹೋಗುತ್ತಿದ್ದೆಯೋ ಅನ್ನೋ ಆತಂಕ ಈಗ ಶುರುವಾಗಿರುವಂತದ್ದು.

avadhi-jyotirgamaya-posterಭ್ರಷ್ಟಾಚಾರವೆನ್ನೋದು ಪತಿಕೋದ್ಯಮವನ್ನು ಬಿಟ್ಟಿಲ್ಲ ಅನ್ನೋದು ಕೂಡ ಈಗ ಪ್ರಮುಖ ವಿಷಯವಾಗಿರೋದ್ರಿಂದ ಮತ್ತು ಸಾಕಷ್ಟು ಪ್ರಮಾಣದಲ್ಲಿ ಚರ್ಚೆಯಾಗುತ್ತಿರೋದ್ರಿಂದ ಇಂತಹದ್ದೊಂದು ಅಭಿಪ್ರಾಯವನ್ನು ವ್ಯಕ್ತಪಡಿಸೋದು ಅನಿವಾರ್ಯವಾಯಿತು. ಇಷ್ಟೇ ಅಲ್ಲ ಇನ್ನೊಂದು ವಿಷಯವು ಇಂತಹದ್ದೊಂದು ಅಭಿಪ್ರಾಯವನ್ನು ವ್ಯಕ್ತಪಡಿಸಲು ಕಾರಣವಾಗಿದೆ.

ಮೊನ್ನೆ ಮೊನ್ನೆಯಷ್ಟೇ ಸಾಕಷ್ಟು ಸುದ್ದಿಯನ್ನು ಮಾಡಿರುವ ಮಾಜಿ ಸಚಿವ ಮೇಟಿ ಸಿಡಿ ಪ್ರಕರಣ ಯಾರೋ ಪತ್ರಕರ್ತರೊಬ್ಬರು ದುಡ್ಡು ತಿಂದಿದ್ದಾರೆ ಎಂಬ ವಿಷಯವೊಂದರ ಕುರಿತಂತೆ ಚರ್ಚೆಯನ್ನು ಮತ್ತೆ ಹುಟ್ಟು ಹಾಕಿದೆ. ಹಣ ಪಡೆದವರು ಯಾರಿರಬಹುದು ? ಅವರ? ಇವರ? ಇವರಿರಬಹುದು ಅವರಿರಬಹುದು ಎಂಬ ಊಹಾಪೋಹಗಳಿಗೆ ಕಾರಣವಾಗಿದೆ.ಇಂತಹ ಸಂದರ್ಭದಲ್ಲಿ ಯಾರೇ ಆಗಲಿ ಅಂತವರ ಹೆಸರು ಬಹಿರಂಗವಾಗಬೇಕು. ಆಗ ಪ್ರಾಮಾಣಿಕ ಪತ್ರಕರ್ತರಿಗೆ ಇನ್ನಷ್ಟು ಬೆಲೆ ಬಂದೀತು.ಪತ್ರಿಕೋದ್ಯಮದ ಪಾವಿತ್ರ್ಯತೆಯು ಉಳಿದೀತು.

ಪತ್ರಕರ್ತರು ಮತ್ತು ಪ್ರಶಸ್ತಿ

ಈ ವಿಷಯವನ್ನು ನಾನು ಹಂಚಿಕೊಳ್ಳಬೇಕೆನಿಸಿತು.ಎರಡು ವರುಷಗಳ ಹಿಂದಿನ ಮಾತು. ವಿಧಾನಸೌಧದಲ್ಲಿ ಯಾವುದೋ ಕವರೇಜ್ ಗೆ ತೆರಳುತ್ತಿರುವಾಗ ಸಿಕ್ಕವರೊಬ್ಬರು ಕೇಳಿದ್ರು. ಜ್ಯೋತಿ ನೀನು Visual media ಗೆ ಬಂದ ಹಳೇ ಮುಖ. ಇನ್ನು ಮಾಧ್ಯಮ ಪ್ರಶಸ್ತಿ ನಿನಗೆ ಸಿಗಲಿಲ್ವಾ ಎಂದು.

ಇಲ್ಲ, ನನಗೆ ಅದರ ನಿರೀಕ್ಷೆಯಿಲ್ಲ. ವೃತ್ತಿಯನ್ನು ನಾನು ಪ್ರೀತಿಸುತ್ತೇನೆ ಅಷ್ಟೆ ಎಂದು ಹೇಳಿದೆ. ಇದನ್ನು ಬರೆಯುವುದರ ಮೂಲಕ ನನಗೆ ಪ್ರಶಸ್ತಿ ಕುರಿತ ಅಸಹನೆಯಾಗಲಿ , ಅತೃಪ್ತಿಯನ್ನಾಗಲಿ ಖಂಡಿತ ವ್ಯಕ್ತಪಡಿಸುತ್ತಿಲ್ಲ. ಪ್ರಾಮಾಣಿಕವಾಗಿ ಹೇಳಬೇಕಂದರೆ ವೃತ್ತಿಯನ್ನು ನಿಜವಾಗಿ ಪ್ರೀತಿಸುವ ಯಾವೊಬ್ಬನು ಪ್ರಶಸ್ತಿಯನ್ನಾಗಲಿ,ಅಪೇಕ್ಷೆಯನ್ನಾಗಲಿ ಖಂಡಿತ ಬಯಸೋದಿಲ್ಲ. ನಮಗೆ ಸಿಕ್ಕಿರುವ ಮಾಧ್ಯಮದಿಂದ ನಾವೇನು ಮಾಡಲು ಸಾಧ್ಯವೆನ್ನುವುದರ ಬಗ್ಗೆ ಯೋಚಿಸುತ್ತೇವೆ ಅಷ್ಟೇ.  ಅಪೇಕ್ಷೆ ನಮ್ಮನ್ನು ಸ್ವಾರ್ಥಿಯನ್ನಾಗಿ ಮಾಡುತ್ತದೆ. ಅದನ್ನು ಮೀರಿ ಬೆಳೆಯಬೇಕಾಗಿದೆ. ವೃತ್ತಿಯನ್ನಷ್ಟೇ ಪ್ರೀತಿಸಬೇಕಾಗಿದೆ.

ವೃತ್ತಿಬದುಕಿನ ಇಷ್ಟು ವರ್ಷಗಳ ಹಿಂದೆ ನೋಟ ಬೀರಿದಾಗ ಮಾಡಿದ್ದು ಸ್ವಲ್ಪ ಇದೆ. ಮಾಡಬೇಕಾಗಿದ್ದು ಬೆಟ್ಟದಷ್ಟಿದೆ. ಪತ್ರಕರ್ತ ಅಥವಾ ಪತ್ರಕರ್ತಳಾದವಳಿಗೆ ಕನಸಿರುತ್ತದೆ. ಅಂತಹ ಕೆಲವು ಕನಸುಗಳು ಈಡೇರಿದ ಖುಷಿಯಿದೆ. ಇನ್ನು ಕೆಲ ಕನಸುಗಳು ಬಾಕಿಯಿದೆ. ಈಡೇರುವ ಭರವಸೆಯು ಇದೆ.

ಬಿಬಿಸಿ ನಿರ್ದೇಶಕರ ಜೊತೆ ಪರಿಸರ ಮಾಲಿನ್ಯ ಕುರಿತು ನಮ್ಮ ತಂಡ ಮಾಡಿದ ಡಾಕ್ಯುಮೆಂಟರಿ ವೃತ್ತಿಪರತೆಯನ್ನು ಒರೆಗೆ ಹಚ್ಚುವಂತೆ ಮಾಡಿತು. ರಾಜ್ಯವಿಡೀ ಸುತ್ತಾಡಿ ಮಾಡಿದ 20 ಸಮಾಜಮುಖಿ ಕಾರ್ಯಕ್ರಮಗಳು ಪತ್ರಕರ್ತಳೆಂಬುದಕ್ಕೆ ನಿಜವಾದ ಅರ್ಥವನ್ನು ಕೊಟ್ಟಿತು. ಬಳ್ಳಾರಿಯ ಕೆಂಧೂಳಿನಲ್ಲಿ ಮಿಂದಿದ್ದು, ಜೇನುಕುರುಬರ ಕುಟುಂಬದ ಜೊತೆ ಆಕಾಶದಡಿ ನೆಮ್ಮದಿಯಿಂದ ಮಲಗಿದ್ದು ಸಮಸ್ಯೆಯ ಆಳವನ್ನು ಪರಿಚಯಿಸಿತು. ಅವರ ಪ್ರೀತಿಯೆದುರು ಎಲ್ಲವು ಗೌಣವೆನ್ನೋದಕ್ಕೆ ಸಾಕ್ಷಿಯಾಯಿತು.

ಆಸಿಡ್ ಧಾಳಿಗೆ ತುತ್ತಾದ ಮಹಿಳೆಯ ನೋವು ಆಕೆಯ ಜಾಗದಲ್ಲಿ ನಿಂತುಕೊಂಡು ನನ್ನನ್ನು ನೋಡಿ ಆತ್ಮಾವಲೋಕನ ಮಾಡುವ ಅವಕಾಶ ಕಲ್ಪಿಸಿತು. ಮಂಗಳ ಮುಖಿಯರ ಮನೆಯಲ್ಲಿ ಕಳೆದ ರಾತ್ರಿ ನನ್ನೊಳಗಿನ ವಿಕಾರ ವ್ಯಕ್ತಿತ್ತ್ವವನ್ನು ಪರಿಚಯಿಸಿತು. ಕೊನೆಗೆ ಕಂಬನಿ , ನೋವು ಎಲ್ಲರಿಗು ಒಂದೆ ಎಂಬುದನ್ನು ಅರ್ಥಮಾಡಿಸಿತು. ಒಳ್ಳೆಯದ್ದು ಕೆಟ್ಟದ್ದು ಎಲ್ಲ ಕಡೆ ಇದೆ ಎಂಬುದನ್ನು ಮತ್ತೆ ಮತ್ತೆ ಪುಷ್ಟೀಕರಿಸಿತು.

ಇದಕ್ಕಿಂತಲು ಮುಂಚೆ ಜನವಾಹಿನಿಯಲ್ಲಿ ಕೆಲಸ ಮಾಡುವಾಗ ನಡೆದ ಸುರತ್ಕಲ್ ಗಲಭೆ ಮನಸ್ಸುಗಳನ್ನು ಜೋಡಿಸೋ ಕೆಲಸ ಪತ್ರಕರ್ತರದ್ದು ಎಂಬುದನ್ನು ಸಾದರಪಡಿಸಲು ಕಾರಣವಾಯಿತು. ಹಿಂಸೆ ದೊಂಬಿಯನ್ನು ವೈಭವೀಕರಿಸದೆ ಹೃದಯಗಳನ್ನು ಜೋಡಿಸುವ ಕೆಲಸ ನಮ್ಮದಾಗಬೇಕು ಎಂಬುದನ್ನು ಮತ್ತೆ ಮತ್ತೆ ನೆನಪಿಸಿತು.

ಮತ್ತೆ ನಾರ್ವೆ, ಅಮೆರಿಕಾ ಪ್ರವಾಸ ಹಳ್ಳಿಯಿಂದ ಬಂದ ಸಾಮಾವ್ಯ ಹುಡುಗಿಯೊಬ್ಬಳು ಯಾವುದೇ ಪ್ರಭಾವವಿಲ್ಲದೆ ಕೇವಲ ವೃತ್ತಿಯನ್ನು ಪ್ರೀತಿಸಿದಾಗ ಅವಕಾಶಗಳು ಸಿಗುತ್ತವೆ ಅನ್ನೋದನ್ನು ಮನವರಿಕೆ ಮಾಡಿಕೊಟ್ಟಿತು.

ಹೀಗೆ ವೃತ್ತಿಬದುಕಿನ ಮೆಲುಕು ಹಾಕುತ್ತಲೇ ನೆನಪಾಗುವುದು ಅನ್ನಿಸುವುದು. ಎಲ್ಲಾ ವೃತ್ತಿಯಂತೆ ಇಲ್ಲಿಯು ಗಾಢ್ ಫಾದರ್ ಇದ್ದವರು ಬೇಗನೇ ಮೇಲಕ್ಕೇರುತ್ತಾರೆ. ಇಲ್ಲದವರು ಬೇಜಾರು ಪಡುವ ಅಗತ್ಯವೇ ಇಲ್ಲ. ಯಾಕಂದ್ರೆ ತಾಳ್ಮೆಯಿದ್ರೆ ಸಿಗಬೇಕಾಗಿದ್ದು ಸಿಕ್ಕೇ ಸಿಗುತ್ತದೆ. ಮತ್ತು ನಮ್ಮ ಶ್ರಮದಿಂದ ಸಿಕ್ಕ ಪ್ರತಿಫಲ ಹೆಚ್ಚು ಖುಷಿಯನ್ನು ಕೊಡುತ್ತದೆ.

thght2251-journalismವೃತ್ತಿಬದುಕಿನಲ್ಲಿ ಹುದ್ದೆಯಿಲ್ಲದಿರುವಾಗ ಸಮಾಜ ಸ್ಪಂದಿಸುವ ರೀತಿ ನೋಡಿದ್ದೇನೆ. ಕೆಲವು ಕಾರಣದಿಂದ ಚಾನಲ್ ಒಂದನ್ನು ಬಿಟ್ಟು ಕೆಲ ತಿಂಗಳು ಮನೆಯಲ್ಲಿದ್ದೆ. ಸದಾ ಕ್ರಿಯಾಶೀಲಳಾಗಿರೋ ನನಗೆ ಇಡೀ ದಿನ ಮನೆಯಲ್ಲಿರೋದು ಕಷ್ಟವೆನಿಸಿತ್ತು. ಜೊತೆಗೆ ಸಾಲ ತೀರಿಸಲು ದುಡಿಯುವುದು ಅನಿವಾರ್ಯವಾಗಿತ್ತು.

ಪ್ರಾಮಾಣಿಕತೆ ಮಾತಾಡುವ ಕೆಲವರಿಗೆ ಕೆಲಸಕ್ಕೆಂದು ಮಾತಾಡಿದ್ರೆ ಸರಿಯಾದ ಸ್ಪಂದನೆ ಸಿಗಲಿಲ್ಲ. ಆಗ ವಾಸ್ತವ ಜಗತ್ತಿನ ಪರಿಚಯ ನನಗಾಗಿತ್ತು. ನಿಜವಾಗಿಯು ಜೊತೆಗೆ ನಿಲ್ಲೋರು ಯಾರೆಂದು ಸ್ಪಷ್ಟವಾಗಿ ತಿಳಿದಿತ್ತು. ಮನಸ್ಸಿನಲ್ಲೇ ಅಂದುಕೊಳ್ಳುತ್ತಿದ್ದೆ, ಇಂಗ್ಲೀಷ್ ಪೇಪರ್ ನಲ್ಲಿ ಕೆಲಸ ಮಾಡಿದ್ದೇನೆ. ಕನ್ನಡ ಪೇಪರ್, ಪ್ರತಿಷ್ಟಿತ ಚಾನೆಲ್ ನಲ್ಲಿ ಕೆಲಸ ಮಾಡಿದ್ದೇನೆ. ಮನೆ ಮಠ ಬಿಟ್ಟು ವಾರವಿಡೀ ರಾಜ್ಯ ಸುತ್ತಿದ್ದೇನೆ. ಏನೋ ಸಮಾಜಕ್ಕೆ ಮಾಡಬೇಕೆಂಬ ಕನಸ ಹೊತ್ತಿದ್ದೇನೆ. ನನಗೆ ಸಿಗಬೇಕಾದ ಅವಕಾಶಗಳನ್ನು ಕೆಲವರಿಗೆ ಬಿಟ್ಟುಕೊಟ್ಟಿದ್ದೇನೆ, ಪ್ರಾಮಾಣಿಕತೆಗೆ ಸಿಕ್ಕ ಅವಮಾನಗಳನ್ನು ನುಂಗಿ ಸವಾಲಾಗಿ ಸ್ವೀಕರಿಸಿದ್ದೇನೆ. ಬಿಬಿಸಿ ಜೊತೆ ಡಾಕ್ಯುಮೆಂಟರಿ ಮಾಡಿದ್ದೇನೆ. ಸಿನಿಮಾ, ಅಪರಾಧ, ರಾಜಕೀಯ , ಇನ್ನು ಏನೇನೋ ಎಲ್ಲ ಕವರೇಜ್ ಮಾಡಿದ್ದೇನೆ.

ಚಾನಲ್ ಒಂದು ನಿಲ್ಲಬಾರದೆಂದು ಮುಂಜಾನೆ ಮೂರು ಗಂಟೆಗೆ ಹೋಗಿ ಬೆಳಿಗ್ಗೆ ಆಂಕರಿಂಗು ಮಾಡಿದ್ದೇನೆ.

ಅರೆ ಇನ್ನು ಯಾವ ರೀತಿಯ ನಿಷ್ಟೆ ತೋರಿಸಬೇಕು? ಎಂದು ಹಲವಾರು ಬಾರಿ ನೋವ ನುಂಗಿದ್ದೇನೆ.

ಇವು ಮೂರು ವರ್ಷದ ಹಿಂದಿನ ನೆನಪುಗಳು. ಈಗ ಪರಿಸ್ಥಿತಿ ಬದಲಾಗಿದೆ. ನನ್ನನ್ನು ಪ್ರೀತಿಸುವ ಗೌರವಿಸುವ ತಂಡದ ಮಧ್ಯೆ ಕೆಲಸ ಮಾಡುತ್ತಿದ್ದೇನೆ. ನಿಜ ನಮ್ಮ ವೃತ್ತಿಯು ಏರಿಳಿತದ ಪಯಣ. ಯಾವಾಗ ಗುರಿ ಸ್ಪಷ್ಟ ಮತ್ತು ಜೀವನದ ಹಾದಿ ಹೇಗಿರಬೇಕು ಎಂಬ ಬಗ್ಗೆ ನಮಗೆ ಗಟ್ಟಿತನವಿರುತ್ತದೋ ಅಲ್ಲಿ ತನಕ ಯಾರು ಏನು ಮಾಡಲು ಸಾಧ್ಯವಿಲ್ಲ ಅನ್ನೋದಂತು ಸ್ಪಷ್ಟ.

Journalism should never be prostituted for selfish ends or for the sake  of merely  earning a livelihood or worse still for amassing money

-Mahatma Gandhi

ಗಾಂಧೀಜಿಯವರ ಈ ಸಾಲಿನೊಂದಿಗೆ ಈ ಬಾರಿ ಇಲ್ಲಿಗೆ ನಿಲ್ಲಿಸುತ್ತೇನೆ..

ಜ್ಯೋತಿ ಇರ್ವತ್ತೂರು

‍ಲೇಖಕರು Admin

19 December, 2016

ನಿಮಗೆ ಇವೂ ಇಷ್ಟವಾಗಬಹುದು…

2 Comments

  1. ಸುಧಾ ಚಿದಾನಂದಗೌಡ

    ತುಂಬ ನೊಂದುಕೊಂಡು ಬರೆದಿರುವಂತಿದೆ.
    ಚೆನ್ನಾಗಿದೆ ಎಂದು ಹೇಳುವುದೂ ಕಷ್ಟವೇ..
    ಒಂದೊಮ್ಮೆ ನಾನೂ ಮೀಡಿಯಾದೊಳಗೆ ಇರುವ ಕನಸು ಕಾಣುತ್ತಿದ್ದೆ.
    ಪ್ರಯಷಃ ನಿಮ್ಮ ಮಾತುಗಳು ನನ್ನ ಮಾತುಗಳು ಆಗಿರುತ್ತಿದ್ದವೇನೋ.
    ಪ್ರಾಮಾಣಿಕ ಬರವಣಿಗೆ ಜ್ಯೋತಿ, ಅಭಿನಂದನೆ

  2. ಶಮ, ನಂದಿಬೆಟ್ಟ

    ಜ್ಯೋತಿ,
    ಇಂಥದ್ದೇ ಹಲವು ಕಾರಣಗಳಿಂದ ಪತ್ರಿಕೋದ್ಯಮ ಬೇಡವೇ ಬೇಡ ಎಂದು ಎದ್ದು ಬಂದವಳು ನಾನು ಕೂಡ. ನಿಮ್ಮ ನೋವು ಅರ್ಥವಾಯಿತು. ಕಳಕಳಿ, ತಾಕತ್ತು, ಅಚಲ ಶ್ರದ್ಧೆ ಮತ್ತು ಪ್ರಾಮಾಣಿಕತೆಗೆ ಸಲಾಂ.

    ” ಯಾವಾಗ ಗುರಿ ಸ್ಪಷ್ಟ ಮತ್ತು ಜೀವನದ ಹಾದಿ ಹೇಗಿರಬೇಕು ಎಂಬ ಬಗ್ಗೆ ನಮಗೆ ಗಟ್ಟಿತನವಿರುತ್ತದೋ ಅಲ್ಲಿ ತನಕ ಯಾರು ಏನು ಮಾಡಲು ಸಾಧ್ಯವಿಲ್ಲ ಅನ್ನೋದಂತು ಸ್ಪಷ್ಟ.” ಕೆಲಸದ ಕ್ಷೇತ್ರ ಯಾವುದೇ ಇದ್ದರೂ ಇದು ನಿಜ, ಎರಡು ಮಾತಿಲ್ಲ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading