ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೇಘನಾ ಸುಧೀಂದ್ರ ಕಾಲಂ: ನಿನ್ನ ಪಾಸ್ಪೋರ್ಟಿಗೆ ಏನೂ ಬೆಲೆ ಇಲ್ಲ, ತಿಳಿದುಕೋ..

ಓಲಾ ಬಾರ್ಸಿಲೋನಾ !

ಬಾರ್ಸಿಲೋನಾ ತಲುಪಿದಾಗ ಬೆಳಗ್ಗೆ. ೩ ಭಾಷೆಯ ಬೋರ್ಡುಗಳು, ಸಗ್ರಾದ ಫೆಮಿಲಿಯಾ ಚರ್ಚಿನ ಚಿತ್ರಗಳು, ಗೌಡಿಯ ಬಿಲ್ಡಿಂಗಿನ ಚಿತ್ರಗಳು ಹುಡುಗಿಯನ್ನ ಸ್ವಾಗತಿಸಿತ್ತು. ಈಗ ಅವಳನ್ನ ಮನೆಗೆ ಕರೆದುಕೊಂಡು ಹೋಗಲು ಅವಳ ಯೂನಿವರ್ಸಿಟಿ ಕೊಟ್ಟ  ಮನೆಯ ಒಡತಿ ಬಂದಿದ್ದಳು. ಅವಳು ಬ್ರೆಝಿಲಿನ್ನವಳು, ಸ್ಪ್ಯಾನಿಷ್ ಮಾತ್ರ ಮಾತಾಡುತ್ತಿದ್ದಳು. ಅಪ್ಪಿ ತಪ್ಪಿ ಈ ಕತಲಾನಿನ ಬಗ್ಗೆ ಅವಳ ಬಗ್ಗೆ ಕೇಳಿದಳು ನೋಡಿ, ಹುಡುಗಿಗೆ ದೊಡ್ಡ ಲೆಕ್ಚರ್ ಶುರುವಾಯಿತು. “ಅಯ್ಯೋ ಇವೆಲ್ಲ ಸುಮ್ನೆ ಈಗಿನ ಮಕ್ಕಳ ಫ್ಯಾಷನ್. ಸಮಸ್ಯೆ ಇಲ್ಲದ ಕಡೆ ಸಮಸ್ಯೆ ಇದೆ ಎಂದು ಕಿರುಚಾಡಿ ತಮ್ಮ ಫೇಸ್ಬುಕ್ ಲೈಕುಗಳನ್ನ ಜಾಸ್ತಿ ಮಾಡಿಕೊಳ್ಳುವುದು” ಎಂದು ಬೈದುಕೊಂಡು ಬಂದಳು. ಮತ್ತೆ ನನ್ನ ಕಡೆ ತಿರುಗಿ “ನೀನು ಈ ತಲೆಹರಟೆಗಳಿಗೆಲ್ಲಾ ಹೋದರೆ ಅಷ್ಟೆ ದೇಶ ಬಿಟ್ಟು ಓಡಿಸುತ್ತಾರೆ. ನಿನ್ನ ಪಾಸ್ಪೋರ್ಟಿಗೆ ಏನೂ ಬೆಲೆ ಇಲ್ಲ, ತಿಳಿದುಕೋ” ಎಂದು ಹೇಳುವಷ್ಟರಲ್ಲಿ ಅವಳ ಮನೆಯ ಮುಂದೆ ಕೆರೀರ್ ದಿ ಪದಿಯಾ ರಸ್ತೆಯ ಮೇಲೆ ಹಳದಿ ಮತ್ತು ಕೆಂಪಿನ ಧ್ವಜ ಹಾಕಿ ದೊಡ್ಡ ಗಲಾಟೆಯನ್ನೇ ಎಬ್ಬಿಸಿದ್ದರು.

ಈ ತಲೆಹರಟೆಯನ್ನ ಒಡತಿ ಹೇಗೆ ಸರಿಮಾಡುತ್ತಾಳೆ ನೋಡೋಣ ಎಂದು ಹುಡುಗಿ ನೋಡಿದಳು. ಆದರೆ ಒಡತಿ ಸುಮ್ಮನೆ ತಲೆ ಬಗ್ಗಿಸಿಕೊಂಡು ಮನೆಯೊಳಗೆ ಹೋದಳು. ಎಲೆನಾ ಹುಡುಗಿಗೆ ಅಷ್ಟರಲ್ಲಿ ಮೆಸೇಜ್ ಕಳಿಸಿದ್ದಳು “ನಮ್ಮ ಕತಲೂನ್ಯಾಗ ಸ್ವಾಗತ, ಲೈಬ್ರರಿಯಲ್ಲಿ ಭೇಟಿಯಾಗೋಣ” ಎಂದು ಹೇಳಿದ್ದಳು. ಹುಡುಗಿ ತಯಾರಾಗಿ ಅಲ್ಲಿ ಹೊರಟಳು. ಒಂದು ದೊಡ್ಡ ಚಿತ್ರ ತೋರಿಸಿ ಹೇಳಿದಳು. ಸೂಟು ಬೂಟು ಹಾಕಿಕೊಂಡು ಕೈಯಲ್ಲಿ ಸಿಗಾರ್ ಹಿಡಿದುಕೊಂಡು ಕೂತ ಒಬ್ಬ ಮನುಷ್ಯನ ಫೋಟೋ ಲೈಬ್ರರಿಯಲ್ಲಿ ಇತ್ತು. ಯಾರೋ ಈ ಕಾಲೇಜಿನ ಫೌಂಡರ್ ಅಂದುಕೊಂಡು ಹುಡುಗಿ ಅಸಡ್ಡೆ ಮಾಡಿ ಹೋದಳು. ಎಲೆನಾ ತಡೆದು ನಿಲ್ಲಿಸಿ “ಇವನು ಕಂಪಾನಿಸ್ , ನಮ್ಮ ಹೀರೋ” ಎಂದಳು. ಹುಡುಗಿ ಮನಸ್ಸಲ್ಲಿ ಮಾತ್ರ “ದೇಶದ ಹೀರೋಗಳಾಗಬೇಕಾದವರು ಗಾಂಧಿಯ ಹಾಗೆ ಎಲ್ಲವನ್ನು ತ್ಯಜಿಸಿ ಕಡೆಗೆ ಮೈಮೇಲಿನ ಬಟ್ಟೆಯನ್ನೂ ಕಡಿಮೆ ಮಾಡಿ ರಸ್ತೆಯಲ್ಲಿ ಪ್ರತಿಮೆಯಾಗಬೇಕಾಲ್ಲವಾ” ಎಂದು ನಕ್ಕೊಂಡು ಕಂಪಾನಿಸ್ಸಿಗೆ ಒಂದು ನಮಸ್ಕಾರ ಮಾಡಿ ಒಳಗೆ ಹೊರಟಳು. ನಿಶ್ಯಬ್ಧ ಲೈಬ್ರರಿಯಲ್ಲಿ ಹುಡುಗಿ ಎಲೆನಾ ಕೊಟ್ಟ ಕತಲೂನ್ಯಾ ಹೋರಾಟದ ಪುಸ್ತಕವನ್ನ ಓದುತ್ತಾ ಕುಳಿತಳು.

ಲೈಬ್ರರಿಯ ಹೊರಗಡೆ ಸ್ವಾತಂತ್ರ್ಯದ ಕೂಗು ಒಳಗಡೆ ೨೦೦೦ ವರ್ಷಗಳ ಹೋರಾಟದ ಇತಿಹಾಸವಿರುವ ಬರ್ಕಾನೋ ಜನರ ಹೋರಾಟದ ಬಿಸಿ ಹುಡುಗಿಯ ದೇಹದ ತಾಪಮಾನ ಜಾಸ್ತಿ ಮಾಡುತ್ತಿತ್ತು. ಕೊಲ್ಲಾಸೆರೋ ರಿಡ್ಜ್ ಮತ್ತು ಮೆಡಿಟರೆನೇನಿಯನ್ ಸಮುದ್ರದ ನಡುವೆ ಪ್ರಶಾಂತವಾಗಿದ್ದ ಐಬಿರಿಯಾ ಪೆನಿನ್ಸುಲಾದಲ್ಲಿ ಇದ್ದ ಜನರ ಕಥೆ ಒಂದು ಮುತ್ತಿನ ಕಥೆಗಿಂತ ಭೀಕರವಾಗಿತ್ತು.

ಇವರ ಕಥೆ ಎರಡು ಪುರಾಣಗಳಿಂದ ಶುರುವಾಗುತ್ತದೆ, ಒಂದು ಹಾಮಿಲಿಕನ್ ಬಾರ್ಕಾ ಎಂಬ ಕರ್ತಾಗಾನಿನ ಜೆನರಲ್ ಐಬಿರಿಯಾ ಭಾಷೆಯಲ್ಲಿ ಈ ಜಾಗವನ್ನ ಬಾರಕೆನೋನ್ ಎಂದು ಕರೆಯುತ್ತಿದ್ದ ಎಂದು ಹೇಳುತ್ತಾರೆ. ಮತ್ತೊಂದು ಹರ್ಕ್ಯೂಲಸ್ ರೋಮ್ ನ್ನನ್ನು ಹುಡುಕಿಕೊಂಡು ಹೊರಡುವ ಮೊದಲು ಕತಲಾನಿನ ಕಡಲ ತೀರದಲ್ಲಿ ತನ್ನ ಹಡಗೊಂದು ಸಿಲುಕಿಕೊಂಡು ಒಂದು ಬೆಟ್ಟದ  ಹತ್ತಿರ ಸಣ್ಣ ನಗರದಲ್ಲಿ ಹಡಗಲ್ಲಿದ್ದ ಜನ ಬದುಕಿದ್ದರು, ಆ ಊರಿನ ಹೆಸರು ಬಾರ್ಸಾ ನೋನಾ ಎಂದಿತ್ತು ಎಂಬ ಕಥೆಯಿತ್ತು. ಇದೆಲ್ಲಾ ಓದಿದ ಹುಡುಗಿ “ಪರ್ವಾಗಿಲ್ಲ ಇವರೆಲ್ಲಾ ನಮ್ಮಷ್ಟೆ ಹಳಬರು ಎಂದು” ನಗುತ್ತಾ ಮುಂದೆ ಓದಿದಳು.

ಅಲ್ಲಿ ಒಂದೊಂದು ಉಪಕಥೆಗೂ ಒಂದು ೧೦೦ ಪುಟಗಳಷ್ಟು ಸಾಮಾಗ್ರಿ. ರೋಮನ್ನರ ಬಾರ್ಸಿನೋ , ಪೆಲೋಕ್ರಿಸ್ಛಿಯನ್ನರ ಬಾರ್ಸಿನೋ, ವಿಸಿಗಾಥಿಕ್ಕರ ಬಾರ್ಸಿನೋ, ಜ್ಯೂಗಳ ಬಾರ್ಸಿನೋ, ಮುಸ್ಲಿಮರ ಬಾರ್ಸಿನೋ, ಸ್ಪೇನಿನವರಬಾರ್ಸಿನೋ, ಆರಗನ್ನರ  ಬಾರ್ಸಿನೋ ಹೀಗೆ ಎಲ್ಲದರ ಬಗ್ಗೆಯೂ ಸಮಗ್ರವಾಗಿ ಬರೆದ್ದಿದ್ದ ದೊಡ್ಡ ಗ್ರಂಥವನ್ನ ನನಗೆ ಓದೋದಕ್ಕೆ ಮನಸ್ಸಾಗಲಿಲ್ಲ. ಚರಿತ್ರೆ ಅಂದರೆ ಯಾವನೋ ರಾಜ ಇನ್ನ್ಯಾವನ್ನನ್ನೋ ಕೊಂದು ಆ ಕೊಂದ ರಾಜನ ಹೆಂಡತಿಯನ್ನ ವಿವಾಹವಾಗಿ ರಾಜ್ಯವಾಳೋದು ಎಂಬ ಕ್ಷುಲಕ ಕಲ್ಪನೆ ನಮ್ಮ ಚರಿತ್ರೆ ಪುಸ್ತಕಗಳು ಕೊಟ್ಟಿದ್ದವು. ಹುಡುಗಿಯ ಬೆಂಗಳೂರಿನ ಇತಿಹಾಸ ಅವಳಿಗೆ ಗೊತ್ತೇ ಇರಲಿಲ್ಲ, ಆದರೆ ಅವಳಿಗಿಂತ ೨ ವರ್ಷ ಚಿಕ್ಕವಳಾದ ಎಲೆನಾ ಎಲ್ಲವನ್ನೂ ತಿಳಿದುಕೊಂಡಿದ್ದಳು.

ಪುಸ್ತಕವನ್ನ ಮುಚ್ಚಿ ಹುಡುಗಿ ಎಲೆನಾಗೆ, “ನಿಮ್ಮೂರಿನ ಕಥೆಯನ್ನ ನೀನೇ ಹೇಳು” ಎಂದಳು…

ಎಲೆನಾ ಕಂಪಾಸಿನ ಪ್ರತಿಮೆಯ ಮುಂದೆ ಕೂತು ಒಂದೊಂದೆ ಕಥೆಯ ಎಳೆಯನ್ನ ಬಿಚ್ಚೋದಕ್ಕೆ ಶುರುಮಾಡಿದಳು…

ಕತಲೂನ್ಯ ಅರಗನ್ನರು ಮತ್ತು ಬಾರ್ಸಾ ರಾಜಮನೆತನದ ಮದುವೆಯ ಬಳುವಳಿ. ಇದು ವರದಕ್ಷಿಣೆ ರೂಪದಲ್ಲಿ ಬಾರ್ಸಾ ರಾಜಮನೆತನದವರಿಗೆ ಅರಗನ್ನರು ಕೊಟ್ಟ ಕಾಣಿಕೆ, ೧೧೩೭ ರಲ್ಲಿ ನೇಪಲ್ಸ್, ಸಿಸಿಲಿ, ಅಥೆನ್ಸ್, ವಲೆನ್ಚಿಯಾ ಎಲ್ಲಾ ಸೇರಿ ಕತಲೂನ್ಯಾವಾಯಿತು. ನಮ್ಮ ರಾಜ್ಯ ಭಾಷೆ ಕತಲಾನ್ ಎಲ್ಲರ ನಾಲಿಗೆ ಮೇಲೆ ನಲಿದಾಡುತ್ತಿತ್ತು. ೧೪ನೆ ಶತಮಾನದವರೆಗೂ ನಮ್ಮ ರಾಜ್ಯ ಸುಭಿಕ್ಷವಾಗಿತ್ತು ಎಂದು ಎಲೆನಾ ಹೇಳುತ್ತಾ ಹೀಗುತ್ತಿದ್ದಂತೆ ಹುಡುಗಿಗೆ “ಓಹ್ ಇದು ಕೃಷ್ಣ ದೇವರಾಯರ ಕಾಲದ ಕಥೆ, ಇನ್ನು ಇಲ್ಲಿನ ಅಳಿಯ ರಾಮರಾಯ ಯಾರು ?”  ಎಂದು ಯೋಚಿಸುತ್ತಿರುವಾಗಲೇ ಚುರ್ ಎಂಬ ಚುರೋಸ್ ಕೈಗೆ ಬಿತ್ತು…

ಮುಂದೆ..

ಮುಂದಿನ ವಾರ….

‍ಲೇಖಕರು avadhi

23 November, 2019

ನಿಮಗೆ ಇವೂ ಇಷ್ಟವಾಗಬಹುದು…

1 Comment

  1. T S SHRAVANA KUMARI

    ಚೆನ್ನಾಗಿದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading