
ಎಲೆನಾ ಬೆಳಗ್ಗೆ ಬೆಳಗ್ಗೆ ಎದ್ದು ಹುಡುಗಿಯ ಕಿವಿಯ ಹತ್ತಿರ ಜಿಪ್ಸಿ ಮ್ಯೂಸಿಕ್ಕನ್ನು ಹಾಕಿದ್ದಳು. “ತಂದಾನಾನಾ ತಂದನಾನಾ” ಎಂಬ ಬೀಟ್ಸಿನ ಹಾಗೆ ಅವರ ರಿಧಮ್ ಇತ್ತು. “ಬೆಳಗ್ಗೆ ಬೆಳಗ್ಗೆ ಏನೇ ನಿಂದು” ಅಂದಾಗ , “ಇಲ್ಲ ನೀನು ಜಿಪ್ಸಿ ಎಂದು ಕುಣಿಯುತ್ತಿದ್ದೆಯೆಲ್ಲಾ ಅದಕ್ಕೆ ಒಂದು ಜಿಪ್ಸಿ ಆರ್ಟಿಸ್ಟನ್ನ ಹುಡುಕಿದ್ದೀನಿ ಅವಳನ್ನ ಭೇಟಿಯಾದರೆ ನಿನಗೇನೇನು ಮಾಹಿತಿ ಬೇಕೋ ಎಲ್ಲಾ ಅವಳು ಕೊಡುತ್ತಾಳೆ, ಗೆಟ್ ಅಪ್ ಗರ್ಲ್” ಎಂದು ಎಬ್ಬಿಸಿ ಹೋದಳು. “ಓಹ್ ಇವತ್ತು ಎಲೆನಾ ಬಹಳ ಒಳ್ಳೆ ಮೂಡಿನಲ್ಲಿದ್ದಾಳೆ ” ಎಂದು ಅಂದುಕೊಂಡು ಆ ಸಂಗೀತಗಾರ್ತಿಯ ಹತ್ತಿರ ಹೋಗಲು ರೆಡಿಯಾದಳು. ಅವಳು ೨ ತಾಸು ರೈಲು ಪ್ರಯಾಣದ ನಂತರ ಕೋಸ್ಟಾ ಬ್ರಾವದಲ್ಲಿ ಸಿಗುತ್ತಾಳೆ ಎಂದಿದ್ದಳು.
“ಎಲೆನಾ ಸರಿ ನಿಮ್ಮ ಚರಿತ್ರೆಯಲ್ಲಿ ಬರೀ ನೋವೇ ಇದೆಯಲ್ಲ ಸ್ವಲ್ಪವಾದರೂ ನೆಮ್ಮದಿ ಇದೆಯೋ ಇಲ್ಲವೋ, ಬರೀ ಹೋರಾಟ, ರಕ್ತ ಇದೇ ಇತ್ತಲ್ಲ ಸ್ವಲ್ಪವಾದರೂ ನೆಮ್ಮದಿ ಇತ್ತಾ, ನಿಮ್ಮ ಪ್ರಜಾತಂತ್ರ ನಿಮಗೆ ವಾಪಸ್ಸು ಬಂತಾ ಇಲ್ಲವಾ ? ” ಎಂದಾಗ ಎಲೆನಾ, “ಸ್ವಲ್ಪ ವರ್ಷ ಬಂದಿತ್ತು ಕಣೆ ಅದೇನಾಯ್ತು ಅಂದ್ರೆ ಫ್ರಾಂಕೋ ಸತ್ತ ನಂತರ ಸ್ಪಾನಿಷ್ ಸಂವಿಧಾನ ಸ್ವಲ್ಪ ಸ್ವಾತಂತ್ರ್ಯವನ್ನು ನಮಗೆ ನೀಡಿತು, ಅಂದರೆ ನಮ್ಮ ಭಾಷೆ, ನಮ್ಮ ಸ್ವಾಯತ್ತತೆಗೆ ಒತ್ತು ಕೊಟ್ಟು ಸ್ಪೇನಿನ ಭಾಗವಾಗಿ ಇದ್ದರೂ ಕತಲೂನ್ಯ ಒಂದು ಅರೆ ಸ್ವತಂತ್ರ ಪಂಗಡವಾಗಿ ಗುರುತಿಸಿಕೊಂಡಿತು. ಅದಾದ ಮೇಲೆ ಸ್ವಲ್ಪಸ್ವಲ್ಪವೇ ನಮ್ಮ ಭಾಷೆಯವಿಶ್ವವಿದ್ಯಾಲಯಗಳು ಆಮೇಲೆ ನಮ್ಮ ಭಾಷೆಯ ಮಾಧ್ಯಮದ ಶಿಕ್ಷಣಗಳು ಎಲ್ಲಾ ತಲೆ ಎತ್ತಿದ್ದವು. ಆದರೆ ದುರಂತವೇನಾಯಿತು ಅಂದರೆ ಒಂದು ಪೀಳಿಗೆಯನ್ನು ನಮ್ಮ ಭಾಷೆಯ ಮಾಧ್ಯಮದ ಶಾಲೆಗಳಿಂದ ವಂಚಿತ ಮಾಡಿ ಅವರು ದೊಡ್ಡವರಾದ ಮೇಲೆ ಅವರು ಪಡೆಯುವ ನಾಲೆಡ್ಜ್ ಎಲ್ಲವೂ ಸ್ಪಾನಿಷ್ ಮಯವಾಗಿತ್ತು. ಅಂದರೆ ಕತಲಾನ್ ನ ಒಂದು ಭಾಷೆಯಾಗಿ ಕಲಿಸುವುದಷ್ಟೆ ಅವರಿಗೆ ಬರುತ್ತಿತ್ತು. ಇಂಗ್ಲೀಷೂ ಅಷ್ಟಕಷ್ಟೆ. ಸ್ಪಾನಿಷ್ ಬಹಳ ಚೆನ್ನಾಗಿ ಜನರಿಗೆ ಬರುತ್ತಿತ್ತು, ತದನಂತರ ಇಂಗ್ಲೀಷ್ ಆಮೇಲೆ ಕತಲಾನ್. ಅಂದರೆ ತನ್ನ ಸ್ವಂತ ಭಾಷೆಯೇ ತನಗೆ ಮೂರನೇ ದರ್ಜೆಗೆ ಸರಕಾಗಿತ್ತು. ಕತಲಾನು ಭಾಷೆಯ ಪತ್ರಿಕೆಗಳು, ಪುಸ್ತಕಗಳು ಎಲ್ಲವೂ ಬೆಂಕಿಗೆ ಆಹುತಿಯಾಗಿ ಏನೋ ಉಳಿದಿರಲ್ಲಿಲ್ಲ.
ನಮ್ಮ ಭಾಷೆಯ ಯಾವ ಕುರುಹನ್ನೂ ಅವರು ಉಳಿಸಿರಲ್ಲಿಲ್ಲ, ಅನ್ನದ ಭಾಷೆಯಾಗಿ ಇಂಗ್ಲೀಷ್, ಸ್ಪಾನಿಷ್ ಓಡಾಡುತ್ತಿದ್ದವು. ಇನ್ನು ಕತಲಾನ್ ಅಡುಗೆ ಮನೆಯ ಭಾಷೆಯಾಗಿ ಮಾರ್ಪಟ್ಟಿತ್ತು. ಇನ್ನು ಸ್ವಾಯತ್ತತೆ ಬಂದಾಗಲಂತೂ ಇಂಗ್ಲೀಷ್ ಮುಂಬಾಗಿಲಿನಿಂದಲೇ ಒದ್ದುಕೊಂಡು ಬಂದಿತ್ತು. ಹಂಗಾಗಿಯೂ ನಮ್ಮ ಮೊದಲ ಪ್ರಜಾಪ್ರಭುತ್ವದ ಚುನಾವಣೆಯಾಗಿ ನಮಗೆ ಬೇಕಾದ ಹಾಗೆ ಸರ್ಕಾರಗಳು ಬಂದವು. ಕೌಂಟಿಗಳ ಹಾಗೆ ಕೊಮಾರ್ಕಲ್ ವ್ಯವಸ್ಥೆ ನಮ್ಮಲ್ಲಿ ಬಂತು. ನಮ್ಮದೇ ಉಚ್ಛ ನ್ಯಾಯಾಲಯ ಎಲ್ಲವೂ ಬಂತು. ಕನ್ವಾರ್ಜೆನ್ಸ್ ಐಯುನಿಯೋ ಎಂಬ ಪಾರ್ಟಿಯೊಂದು ರೈಟ್ ವಿಂಗ್ ಸಿದ್ಧಾಂತದೊಡನೆ ಅಧಿಕಾರಕ್ಕೇರಿ ಅವರ ಧರ್ಮ ಮತ್ತು ಕತಲಾನ್ ಭಾಷೆಯ ಉಗ್ರತ್ವವನ್ನು ಸಾರುತ್ತಿತ್ತು. ೧೯೮೩ ರಲ್ಲಿ ಟೆಲಿವಿಸಿಯೋ ದೆ ಕತಲೂನ್ಯ ಎಂಬ ಚಾನೆಲ್ಲನ್ನು ಪ್ರಾರಂಭಿಸಿತು. ಎಲ್ಲಾ ಭಾಷೆಯ ಸಿನೆಮಾಗಳನ್ನು ಕತಲಾನ್ ಭಾಷೆಗೆ ಡಬ್ ಅಥವಾ ಸಬ್ ಟೈಟಲ್ ಮಾಡಲು ಎಲ್ಲಾ ಸೌಕರ್ಯ ಮಾಡಿಕೊಡಲಾಗಿತ್ತು, ಕತಲಾನ್ ಭಾಷೆಯ ಸಿನಿಮಾಗಳು ಜಾಸ್ತಿ ಬಂದವು, ಒಟ್ಟಿನಲ್ಲಿ ನಮ್ಮ ಭಾಷೆ, ಸಂಸ್ಕೃತಿ ಬಹಳ ಚೆನ್ನಾಗಿ ಜನಗಳಿಗೆ ತಲುಪುವ ವ್ಯವಸ್ಥೆ ಆಯಿತು.

ಆದರೆ ಒಳಜಗಳಗಳು ನಿಲ್ಲಲ್ಲಿಲ್ಲ. ಎಡ ಬಲ ಜಗಳಗಳು ದೇಶವನ್ನು ಮುಳುಗಿಸುವ ಎಲ್ಲಾ ಲಕ್ಷಣಗಳು ಅಲ್ಲಿ ಕಾಣುತ್ತಿತ್ತು. ಸ್ಪೇನಿನ ಕೆಲವರು ಮತ್ತು ಕತಲೂನ್ಯಾದ ಕೆಲವರು ಹೇಗಾದರೂ ಮಾಡಿ ಬಲದವರನ್ನ ಕೆಳಗಿಳಿಸಲು ಪ್ರಯತ್ನಿಸುತ್ತಿದ್ದರು. ಪ್ರಜಾಪ್ರಭುತ್ವದಲ್ಲಿ ಸಮ್ಮಿಶ್ರ ಸರ್ಕಾರಕ್ಕೆ ಬೆಲೆಯಿರುವ ಕಾರಣ ಮುಂಚೆ ಗನ್ನು ಹಿಡಿದು ಹೋರಾಡಿದವರು, ಸಾಹಿತಿಗಳು ಮತ್ತು ಬುದ್ಧಿಜೀವಿಗಳೆಲ್ಲಾ ಸೇರಿಕೊಂಡು ರೈಟ್ ವಿಂಗ್ ಪಾರ್ಟಿಯನ್ನ ಬೀಳಿಸಿ ಅಧಿಕಾರಕ್ಕೆ ಬಂದರು. ಅದರಲ್ಲೂ ಒಂದು ನಾಲ್ಕೈದು ಸೀಟು ಗೆದ್ದ ಸಣ್ಣ ಪಾರ್ಟಿಯೇ ಎಲ್ಲಾ ವ್ಯವಹಾರವನ್ನೂ ಮಾಡುತ್ತಿದ್ದದ್ದು. ಆರು ಕೊಟ್ಟರೆ ಅತ್ತೆ ಕಡೆ, ಮೂರು ಕೊಟ್ಟರೆ ಸೊಸೆ ಕಡೆ ಎಂದು ಚೆನ್ನಾಗಿಯೇ ಆಟ ಆಡಿಕೊಂಡು ಸ್ವಾತಂತ್ರ್ಯ, ಸ್ವಾತಂತ್ರ್ಯ ಎಂದು ಬಡಿದುಕೊಂಡ ಜನರ್ರಿಗೆ ಫ್ರಾಂಕೋನ ಆಡಳಿತವೇ ಚೆನ್ನಾಗಿ ಕಾಣಿಸೋದಕ್ಕೆ ಶುರು ಮಾಡಿತ್ತು..” ಎಂದು ಎಲೆನಾ ನಿಟ್ಟುಸಿರು ಬಿಟ್ಟು, “ನಿನ್ನ ದೇಶದಲ್ಲಿ ಹೀಗೆಲ್ಲಾ ಆಗಿದ್ದೇಯಾ ಅಥವಾ ಇಲ್ಲವಾ, ನಂಗೊತ್ತು ಗುಲಾಮಗಿರಿ ಇತ್ತು ನಿಮ್ಮಲ್ಲಿ” ಎಂದಳು.
ಹುಡುಗಿ , “ನನ್ನ ಭಾಷೆಯ ಸ್ಥಿತಿ ನಿನ್ನ ಭಾಷೆಯ ಹಾಗೆ ಆಗಿತ್ತು ಆದರೆ ತೀರ ಒದ್ದುಕೊಂಡು ಹೋಗುವಷ್ಟು ಇಲ್ಲ, ನನ್ನ ಪೀಳಿಗೆಯೂ ಇನ್ನೂ ನನ್ನ ಭಾಷೆಯಲ್ಲಿಯೇ ಓದು ಬರಹ ಎಲ್ಲಾ ಮಾಡುತ್ತದೆ, ಒಂದಷ್ಟು ಟೆಕ್ನಾಲಜಿಯ ಜೊತೆ ಅಡಕವಾದರೆ ಕೊಂಚ ಮುಂದಿನ ಪೀಳಿಗೆಗೆ ತಲುಪಬಹುದು” ಎಂದು ಹೇಳುವಷ್ಟರಲ್ಲಿ ಸ್ಟಾಪ್ ಬಂದಿತ್ತು.
“ಮೀಟ್ ಗೆಬ್ರಿಯೆಲ್ಲಾ ” ಎಂದು ಎಲೆನಾ ಹಾಡುಗಾರ್ತಿಯನ್ನ ಪರಿಚಯ ಮಾಡಿಕೊಟ್ಟಳು. ಗೇಬ್ರಿಯೆಲ್ಲಾ ಮೈಮೇಲೆಲ್ಲಾ ಟ್ಯಾಟೋ ಹಾಕಿಸಿಕೊಂಡು, ಪಿಯರ್ಸಿಂಗ್ ಮಾಡಿಸಿಕೊಂಡು ಕೈಯಲ್ಲಿ ಒಂದು ಯೂಕಲೆಲೆ ಇಟ್ಟುಕೊಂಡು ಇದ್ದಳು. ಥೇಟ್ ಹಂಪಿ ಅಥವಾ ಗೋಕರ್ಣದಲ್ಲಿ ಹಿಪ್ಪಿಗಳು ಇದ್ದ ಹಾಗೆ ಇವಳೂ ಇದ್ದಳು. ಕೈಯಲ್ಲಿ ಒಂದು ಸಿಗಾರ್ ಹಿಡಿದು ಹೊಗೆ ಬಿಡುತ್ತಾ “ಓಹ್ ಇಂದೂ” ಎಂದಳು. ಹುಡುಗಿ, “ಸಿ” ಎಂದು ಪಕ್ಕದಲ್ಲಿ ಕೂತಳು.
“ನಿನ್ನ ಕಥೆ ಏನು” ಎಂದಾಗ, “ನನ್ನ ಪೂರ್ವಜರು ಉತ್ತರ ಭಾರತದಿಂದ ವಲಸೆ ಬಂದವರು, ಪೂರ್ತಿ ಉತ್ತರವೂ ಅಲ್ಲ, ಪಶ್ಚಿಮ ಭಾರತದಿಂದ ಬಂದವರು, ರಾಜಸ್ಥಾನ ಮತ್ತು ಗುಜರಾತ್ ನಮ್ಮ ಕಡೆಯವರದ್ದು, ಫ್ರಾನ್ಸ್ನಿಂದ ಇಲ್ಲಿಗೆ ಬಂದೆವು” ಎಂದಳು. ಹುಡುಗಿ, “ಯಾವಾಗ ಬಂದಿದ್ದು” ಎಂದಾಗ, “೧೪೧೫ರಲ್ಲಿ ಐಬೀರಿಯಾಕ್ಕೆ ಬಂದೆವು” ಅಂದಳು. ಹುಡುಗಿ ಗೊಳ್ಳೆಂದು ನಕ್ಕು, “ನಾನ್ ಸೆನ್ಸ್ ಇದು, ೧೪೧೫ಕ್ಕೆ ನಿಮಗೆ ಐ ಮೀನ್ ಭಾರತೀಯರಿಗೆ ಯುರೋಪಿಗೆ ಬರೋದು ಗೊತ್ತಿತ್ತಾದರೆ ನಾವು ಯಾಕೆ ಬೇರೆಯವರಿಂದ ಆಳಿಸಿಕೊಳ್ಳುತ್ತೇವೆ ಹಹಹ , ಇವಳು ಸೇದುತ್ತಿರುವುದಲ್ಲಿ ಏನೋ ಅಮಲಿದೆ, ಅದಕ್ಕೆ ಏನೇನೋ ಅಂತಿದ್ದಾಳೆ ನಮ್ಮ ದೇಶದ ಚರಿತ್ರೆಯನ್ನ ಬೇಕಾಬಿಟ್ಟಿ ತಿರುಗಿಸುತ್ತಿದ್ದಾಳೆ” ಎಂದು ಕೋಪಗೊಂಡು ಎದ್ದೇಳಲು ಪ್ರಯತ್ನ ಪಟ್ಟಳು.
ಗೇಬ್ರಿಯೆಲ್ಲಾ ಕೈಹಿಡಿದು ಕೂರಿಸಿ, ” ನೊ ಬೇಬಿ ಡೊಮಾ ಎಂಬ ಒಂದು ಬುಡಕಟ್ಟು ಜನಾಂಗವಿದೆ ಅವರನ್ನ ಈ ದುಬೈ ರಾಷ್ಟ್ರಗಳಿಗೆ ರಾಜ ಮಹಾರಾಜರ ಕಾಲದಲ್ಲೇ ಗುಲಾಮರನ್ನಾಗಿ ಬಿಡಲಾಗುತ್ತಿತ್ತು, ಬೇಟೆಯಾಡುವವರಲ್ಲವಾ ಒಂದು ಕಡೆ ಸುಮ್ಮನೆ ಇರೋದಕ್ಕೆ ಸಾಧ್ಯವಾಗಲ್ಲಿಲ್ಲ ಅದಕ್ಕೆ ಒಳ್ಳೆ ಬೇಟೆಯನ್ನೇ ಹುಡುಕಿಕೊಂಡು ಹೊರಟೆವು, ಆಮೇಲೆ ರೊಮಾನಿಯಾ ಮತ್ತು ಫ್ರಾನ್ಸಿನಲ್ಲಿ ನಮಗೆ ನಮ್ಮ ಸಂಗೀತಕ್ಕೆ ವಿಪರೀತ ಮರ್ಯಾದೆ ಕೊಡುತ್ತಿದ್ದರು. ನಿನಗೆ ಗೊತ್ತಾ ರೊಮಾನಿಯಾದ ಭಾಷೆ ನಿಮ್ಮ ಭಾಷೆಯನ್ನೇ ಹೋಲುತ್ತದೆ, ವರ್ಲ್ಡ್ ಇಸ್ ಅ ಹೋಮ್” ಎಂದು ಸಿಗಾರಿನಿಂದ ಮತ್ತೆ ಹೊಗೆ ಬಿಟ್ಟಳು.

ಹುಡುಗಿ ಮಾತ್ರ “ಯಾವುದು ನನ್ನ ಭಾಷೆ, ನಮ್ಮ ದೇಶದಲ್ಲಿ ೧೦೦೦ಕ್ಕೂ ಜಾಸ್ತಿ ಭಾಷೆ ಮಾತಾಡುತ್ತಾರೆ, ನೀನೇನಾದರೂ ಹಿಂದಿ ನಮ್ಮ ರಾಷ್ಟ್ರಭಾಷೆಯೆಂದರೆ ಅಷ್ಟೆ” ಎಂದಳು. ಗೇಬ್ರಿಯೆಲ್ಲಾ ಮಾತ್ರ ಕೂಲಾಗಿ , “ಹಿಂದಿಯಲ್ಲ ರೊಮೇನಿಯನ್ ಭಾಷೆ ಪಂಜಾಬಿ ಮತ್ತು ಮಾರ್ವಾರಿ ಭಾಷೆಗೆ ಹತ್ತಿರವಾಗಿದೆ. ಆದರೆ ವ್ಯಾಕರಣ ಮಾತ್ರ ಬೆಂಗಾಲಿಗೆ ಹತ್ತಿರವಾಗಿದೆ. ಕೆಲವರು ನಮ್ಮನ್ನ ಭಾರತದಿಂದ ಆಫ್ರಿಕಾಗೆ ಹೋಗಿ ಅಲ್ಲಿಂದ ಬಂದವರು ಅನ್ನುತ್ತಾರೆ, ಇನ್ನು ಕೆಲವರು ಗುಲಾಮಗಿರಿಯಿಂದ ಬಂದರೆನ್ನುತ್ತಾರೆ ಒಟ್ಟಿನಲ್ಲಿ ೩೦೦೦ ಜನ ಯಾವುದೋ ಕಾರಣಕ್ಕೆ ಗುಳೇ ಹೊರಟು ೮೦ – ೧೦೦ ಜನರ ಒಂದೊಂದು ಗುಂಪು ಮಾಡಿಕೊಂಡು ಇಡೀ ಯುರೋಪನ್ನ ಸುತ್ತಿದೆವು” ಎಂದು ಕೂಲಾಗಿ ಮಾತಾಡಿದಳು.
ಹುಡುಗಿ ಮಾತ್ರ, “ಈಗ ಏನಾದರೂ ಹೀಗೆಲ್ಲಾ ಆಗಿದ್ದರೆ ವೀಸಾ ಪಾಸ್ಪೋರ್ಟ್ ಎಂದು ಕ್ಯಾತೆ ತೆಗೆದು ೩೦೦೦ ಜನರನ್ನ ಮಣ್ಣುಪಾಲು ಮಾಡುತ್ತಿದ್ದರು.. ” ಎಂದು ಅಂದುಕೊಂಡು ಮುಂದೆ ಹೇಳು ಎಂದಳು.. “ನಮ್ಮನ್ನ ಕಂಡರೆ ಎಲೆನಾ ಕಡೆಯವರಿಗೂ ಮತ್ತು ಸ್ಪೇನಿನವರಿಗೂ ಇಬ್ಬರಿಗೂ ಆಗಲ್ಲಿಲ್ಲ, ಎರಡೂ ಕಡೆಯವರು ನಮ್ಮನ್ನ ಬೇಕು ಬೇಕಾದ ಹಾಗೆ ಬಳಸಿಕೊಂಡು ಸಾಯಿಸಿದರು, ನಮಗೆ ಇವರಿಬ್ಬರೂ ಬೇಡ ” ಎಂದಳು. ಇದು ಯಾಕೋ ನಮ್ಮ ದೇಶದ ಯಾವುದೋ ಕಥೆಯ ಗಾಳಿ ಆಡುತ್ತಿದೆ ಎಂದು “ನೀನ್ ಯಾರಜೊತೆ ಸೇರ್ಕೊತ್ಯೋ ನಂಗೇನು ಆಗಬೇಕು, ಅದು ನಿನ್ನಿಷ್ಟ” ಅಂದಳು.
“ನಾವು ಕಾಲಿಯೋ ಎಂಬ ಭಾಷೆ ಮಾತಾಡುತ್ತಿದ್ದೆವು, ಅದನ್ನ ಕೂಡ ಸಾಯಿಸೋದಕ್ಕೆ ಇಬ್ಬರೂ ನೋಡಿದರು. ನಮ್ಮ ಆಚರಣೆಗಳನ್ನು ಮಾಡೋದಕ್ಕೆ ಬಿಡಲ್ಲಿಲ್ಲ. ಒಟ್ಟಿನಲ್ಲಿ ನಮ್ಮ ಸರ್ವನಾಶವನ್ನೂ ಇಬ್ಬರೂ ಮಾಡಿದರು” ಎಂದು ಸಿಗಾರ್ ಬಿಸಾಕಿ ತುಳಿದು ತನ್ನ ಆಕ್ರೋಶ ವ್ಯಕ್ತ ಪಡಿಸಿದಳು.
ಎಲೆನಾ ಕಡೆಗೆ ಹುಡುಗಿ ತಿರುಗಿ, “ನೀವು ನಿಮ್ಮ ದುಃಖದಿಂದ ಪಾಠ ಕಲೀಲಿಲ್ಲ ನೋಡಿ, ನಿಮಗಿಂತ ಅಲ್ಪಸಂಖ್ಯಾತರಿಲ್ಲಿದ್ದಾರೆ” ಎಂದಾಗ ಎಲೆನಾ ಮಾತ್ರ, “ಎಲ್ಲರೂ ಅವರ ಉಳಿವಿಗಾಗಿ ಏನು ಬೇಕಾದರೂ ಮಾಡುತ್ತಾರೆ” ಎಂದು ನಕ್ಕಳು…
ಯಾರು ಹೀರೋ, ಯಾರು ವಿಲ್ಲನ್ ಎಂಬ ಪ್ರಶ್ನೆ ಹುಡುಗಿ ತಲೆಯಲ್ಲಿ ಕೊರೆಯುತ್ತಿತ್ತು…..
ಹಿನ್ನೆಲೆಯಲ್ಲಿ, “ನನ್ನ ಕಾಯೋ ದೇವನೇ ನೀನು ಎಲ್ಲೀದ್ದೀಯ” ಎಂದು ಗೆಬ್ರಿಯೆಲ್ಲಾ ಹಾಡುತ್ತಿದ್ದಳು…






0 Comments